Total Pageviews

Saturday, October 8, 2011

ಕಥಾಮಾಲಾ..

ಕೆಲವು ದಿನಗಳ ಹಿಂದೆ ಯಕ್ಷಗಾನ ಕಾರ್ಯಕ್ರಮವೊಂದನ್ನು ನೋಡಿದ್ದೆ. 'ಭುವನ ಭಾಗ್ಯ'  ಎಂಬ ಕಥಾಭಾಗವನ್ನು ಕಲಾವಿದರು ಪ್ರಸ್ತುತಪಡಿಸಿದ್ದರು. ೩ ಗಂಟೆಗಳ ಕಾಲದ  ಕಾರ್ಯಕ್ರಮವಾಗಿತ್ತು. ನಾವು ಬಾಲ್ಯದಲ್ಲಿ ರಾತ್ರಿ ನಿದ್ದೆಗೆಟ್ಟು ಯಕ್ಷಗಾನ ನೋಡಿದ್ದಿದೆ.  ಈಗ  ಅಂತಹ  ಕಾರ್ಯಕ್ರಮಗಳು ಬಲು ವಿರಳ. ಇದ್ದರೂ ನೋಡುವಷ್ಟು ಸಮಯ -ತಾಳ್ಮೆ ಯಾರಿಗೂ ಇಲ್ಲ. 

ಪ್ರತಿ ಸೋಮವಾರ ಸಹೋದ್ಯೋಗಿಗಳನ್ನು ಭೇಟಿಯಾದಾಗ  ಭಾನುವಾರದ ವಿಶೇಷ ಏನು ಎಂದು ಕೇಳುವ ಪದ್ಧತಿ.ನಾನು ಭಾನುವಾರ ನೋಡಿದ್ದ ಯಕ್ಷ ಗಾನದ ಬಗ್ಗೆ ಹಾಗೂ ಕಥಾಭಾಗವನ್ನು ನನಗೆ ತೋಚಿದಂತೆ  ಹೇಳಿದ್ದೆ. ಗೆಳತಿ ರೇಖಾ, ೫ ವರುಷದ  ಮಗನಿಗೆ ಆ ಕಥೆಯನ್ನು   ವಿವರಿಸಿದ್ದಳು. ಆ ಹುಡುಗನಿಗೆ  'ರಾಕ್ಷಸರ'  ಕಥೆ ತುಂಬಾ ಇಷ್ಟವಾಯಿತಂತೆ, ದಿನಾ ಬೇರೆ ರಾಕ್ಷ್ಣಸನ ಕಥೆ ಹೇಳು ಎಂದು ದುಂಬಾಲು ಬೀಳುತ್ತಾನಂತೆ, ಹೀಗಾಗಿ ನಾನು ಇದ್ದಕಿದ್ದಂತೆ 'ಕಥೆ ಹೇಳುವ ಆಂಟಿ'  ಆಗಿಬಿಟ್ಟೆ!

ಈಗಿನ ಚಿಣ್ಣರು ಪೌರಾಣಿಕ ಕಥೆಗಳ ಬಗ್ಗೆ  ಆಸಕ್ತಿ ತೋರುವುದು ಬಲು ವಿರಳ. ಹಾಗಾಗಿ, ಅಪರೂಪಕ್ಕೆ ಒಂದು ಮಗು ಆಸಕ್ತಿ ತೋರಿಸುತ್ತಿರುವಾಗ ಖುಷಿಯಾಯಿತು. ಆ ನೆಪದಲ್ಲಿ ನನಗೂ ಮರೆತು ಹೋದ ಪೌರಾಣಿಕ ಕಥೆಗಳನ್ನು ಪುನ: ಓದುವ ಆಸಕ್ತಿ ಬಂತು.

ಓದಿದ್ದನ್ನು , ನೆನಪಿಸಿದ್ದನ್ನು ಬರೆಯೋಣ ಅನಿಸಿತು. ಹೀಗೆ ಬರೆಯಲು  'ಕಥಾಮಾಲಾ'  ಎಂಬ ಹೆಸರಿನ ಇನ್ನೊಂದು ಬ್ಲಾಗ್ ಪುಟ ಆರಂಭಿಸಿದ್ದೇನೆ.  ಇದಕ್ಕೆ ಸ್ಪೂರ್ತಿ ಸಿದ್ಧಾಂತ್  ಎಂಬ ಒಂದನೆಯ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ. 

ಥ್ಯಾಂಕ್ಸ್ ಸಿದ್ಧಾಂತ್ !