Total Pageviews

Friday, February 11, 2011

ಗೆಂಟಿಂಗ್ ಹೈಲಾಂಡ್' ನಲ್ಲಿ 'ಕೇಬಲ್ ಕಾರ್' '

ಮಲೇಶ್ಯಾದ 'ಲಾಸ್ ವೆಗಾಸ್' ಎಂದು ಕರೆಯಲ್ಪಡುವ 'ಗೆಂಟಿಂಗ್ ಹೈಲಾಂಡ್' ಎಲ್ಲಾ ವಯೋಮಾನದ ಪ್ರವಾಸಿಗಳಿಗೆ ಹೇಳಿ ಮಾಡಿಸಿದಂತೆ ಇದೆ.  ಸಮುದ್ರ ಮಟ್ಟದಿಂದ ಸುಮಾರು  ೨೦೦೦ ಮೀ. ಎತ್ತರದಲ್ಲಿರುವ ಈ ಗಿರಿಧಾಮವು, ಮಲೇಶ್ಯಾದ ರಾಜಧಾನಿ ಕೌಲಾಲಂಪುರ್ ನಿಂದ  ಸುಮಾರು ೫೦ ಕಿ.ಮಿ. ದೂರದ 'ತಿತಿವಾಂಗ್ಸ್' ಬೆಟ್ಟಗಳ ಶ್ರೇಣಿಯ ನಡುವೆ ಇದೆ. 

ಕೌಲಾಲಂಪುರ್ ನಿಂದ ಸುಮಾರು ೪೫ ನಿಮಿಷಗಳ ಕಾಲ ಬಸ್ಸಿನಲ್ಲಿ ಪ್ರಯಣಿಸಿದರೆ, 'ಗೆಂಟಿಂಗ್ ಹೈಲಾಂಡ್'  ತಲಪುತ್ತೇವೆ. ಹಚ್ಚ ಹಸುರಿನ ಕಾಡಿನ ಮಧ್ಯ ಸಾಗುವ ಈ ಬಸ್ ಪ್ರಯಾಣ, 'ಮಳೆ ಕಾಡು'ಗಳ ಸಾಂದ್ರತೆಯನ್ನು ತೋರಿಸುತ್ತವೆ. ಕೆಲವೊಮ್ಮೆ ಮಾರ್ಗಮಧ್ಯದಲ್ಲಿ ವನ್ಯ ಪ್ರಾಣಿಗಳು ಕಾಣಸಿಗುತ್ತವಂತೆ. 

'ಗೆಂಟಿಂಗ್ ಹೈಲಾಂಡ್'ನಲ್ಲಿ  ಏನಿದೆ, ಏನಿಲ್ಲ ಎನ್ನುವುದು ಕಷ್ಟ. ನಾನು ಅಲ್ಲಿದ್ದ ಅರ್ಧ ದಿನದ  ಅವಧಿಯಲ್ಲಿ ನೋಡಿದ ಕೆಲವು ವಿಚಾರಗಳು ಇವು. ಸುಮಾರಾಗಿ ಎಲ್ಲಾ ಫಿಲ್ಮ್ ಸಿಟಿ, ಮನೋರಂಜನಾ ಪಾರ್ಕ್ ಗಳಲ್ಲಿ ಇರುವ  ಒಳಾಂಗಣ, ಹೊರಾಂಗಣ ಕ್ರೀಡೆಗಳು, ವಿವಿಧ ನಮೂನೆಯ ಹೊಟೆಲ್ ಗಳು, ಶಾಪಿಂಗ್ ಮಾಲ್ ಗಳು, ವಿಸ್ಮಯಗಳು,  ಪ್ರದರ್ಶನಗಳು...ಇತ್ತ್ಯಾದಿ . ಪ್ರಮುಖವಾದ ಆಕರ್ಷಣೆಯಾಗಿ, ಅದೃಷ್ಟ ಪರೀಕ್ಶೆ ಮಾಡಿಕೊಳ್ಳಲು, ಜೂಜಾಡಲು ಬೇಕಾದಷ್ಟು 'ಕಸಿನೊ' ಗಳಿವೆ.

ಈ ಎಲ್ಲಾ ಮಾನವನಿರ್ಮಿತ ವೈಭವಗಳಿಗಿಂತಲೂ ನನಗೆ ಹೆಚ್ಚ್ಚು ಖುಷಿ ಕೊಟ್ಟಿದ್ದು ಇಲ್ಲಿನ 'ಕೇಬಲ್ ಕಾರ್' ವ್ಯವಸ್ಥೆ. ಬೆಟ್ಟದ ತಪ್ಪಲಿನ 'ಗೊಹ್ ತಾಂಗ್'   ಎಂಬಲ್ಲಿಂದ ಹೈಲಾಂಡ್ ಹೊಟೆಲ್ ವರೆಗೆ ೩.೪ ಕಿ.ಮಿ. ಉದ್ದದ ಕೇಬಲ್ ಕಾರ್' ಪ್ರಯಾಣದ ವ್ಯವಸ್ಥೆಯು ದಕ್ಷಿಣ ಏಶ್ಯಾದಲ್ಲಿ ಅತಿ ದೊಡ್ಡದಂತೆ. 


ಸುಮಾರು  ೫೦ ಮಿ. ಎತ್ತರದಲ್ಲಿ 'ರೋಪ್ ವೇ'ಗೆ ಪೋಣಿಸಿದ  'ಕೇಬಲ್ ಕಾರ್' ನಲ್ಲಿ  ಪ್ರಯಾಣ ತುಂಬಾ ಇಷ್ಟವಾಯಿತು.
ಎತ್ತರದಲ್ಲಿ ನಾವು, ಕೆಳಗೆ ಪ್ರಪಾತದಲ್ಲಿ  ಹಚ್ಚ ಹಸುರಿನ ಕಾಡು. ದೂರದಲ್ಲಿ ಸಾಲು ಸಾಲಾಗಿ ಬರುತ್ತಿರುವ- ಹೋಗುತ್ತಿರುವ 'ಕೇಬಲ್ ಕಾರ್' ಗಳು.  ಆ ದಿನ ಸ್ವಲ್ಪ ಮಳೆ ಬಂದಿತ್ತು, ಮಂಜು ಕೂಡ ಮುಸುಕಿತ್ತು,.... ವಾಹ್ ಅಧ್ಭುತ ಪ್ರಾಕೃತಿಕ ಸೌಂದರ್ಯ.


ಈ 'ರೋಪ್ ವೇ'  ತುಂಡಾದರೆ, 'ಕೇಬಲ್ ಕಾರ್' ನ ಬಾಗಿಲು ಇದ್ದಕ್ಕಿದ್ದಂತೆ ತೆರೆದರೆ, ಕೆಳಗಿನ ಪ್ರಪಾತಕ್ಕೆ ಬಿದ್ದರೆ...ಇತ್ಯ್ಯಾದಿ  'ರೆ' ಗಳು ಆರಂಭದಲ್ಲಿ, ಸ್ವಲ್ಪ ಸಮಯ ಭಯ ಹುಟ್ಟಿಸಿದ್ದು ನಿಜವಾದರೂ, ಸುಮಾರು ೨೦  ನಿಮಿಷದ ಪ್ರಯಾಣ ಮುಗಿಯುವಷ್ಟರಲ್ಲಿ, 'ರೋಪ್ ವೇ' ಇನ್ನಷ್ಟು ಉದ್ದವಿರಬಾರದಿತ್ತೇ ಅನಿಸಿತು.

No comments:

Post a Comment