ಬೇಸಗೆಯ ರಜಾದಿನಗಳಲ್ಲಿ ಮಕ್ಕಳಿಗೆ ಸಮಯ ಕಳೆಯಲು ನೂರಾರು ದಾರಿ. ಸಣ್ಣ ಪುಟ್ಟ ಪ್ರವಾಸ ಹೋಗುವುದೂ ಅವುಗಳಲ್ಲೊಂದು. ೧೫ ವಯಸ್ಸಿನ ನಮ್ಮ ಮಗನೊಂದಿಗೆ ನಿನ್ನೆ ಬೆಂಗಳೂರಿನ ಸಮೀಪದ ಬಿಡದಿ ಎಂಬಲ್ಲಿರುವ 'ಇನೋವೇಟಿವ್ ಫಿಲ್ಮ್ ಸಿಟಿ’ ನೋಡಲು ಹೋಗಿದ್ದೆವು.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬಿಡದಿಯ ಪಕ್ಕದಲ್ಲಿಯ ರಸ್ತೆ ತಿರುವಿನಲ್ಲಿ ಚಲಿಸಿ, ಅಲ್ಲಿನ ಕೈಗಾರಿಕಾ ವಲಯದಲ್ಲಿ ಸುಮಾರು ೫-೬ ಕಿ.ಮೀ. ಪ್ರಯಾಣಿಸಿದಾಗ ’ಇನೋವೇಟಿವ್ ಫಿಲ್ಮ್ ಸಿಟಿ’ಯ ಭವ್ಯ ಕಮಾನು ಸ್ವಾಗತಿಸುತ್ತದೆ. ನಿಜಕ್ಕೂ ಈ ಸ್ವಾಗತ ಕಮಾನು ಹಾಗೂ ಸುತ್ತುಮುತ್ತಲಿನ ತೆಂಗಿನಮರಗಳ ತೋಪು ಆಕರ್ಷಕವಾಗಿದೆ.
ಹೊರಗಡೆಯಿಂದ ಆಹಾರ ಪದಾರ್ಥಗಳನ್ನು ಒಯ್ಯಲು ಅನುಮತಿಯಿಲ್ಲ ಎಂಬ ಬೋರ್ಡ್ ಪ್ರವೇಶ ದ್ವಾರದಲ್ಲಿಯೇ ಎಚ್ಚರಿಸುತ್ತದೆ. ಒಳಗೆ ಊಟ-ತಿಂಡಿ ಬೇಕಾದರೆ, ಉಡುಪಿ ಆನಂದ ಭವನ ದಿಂದ ಹಿಡಿದು ಮಾಕ್ ಡೊನಾಲ್ಡ್ಸ್ ವರೆಗೆ ವೈವಿಧ್ಯತೆ ಇದೆ. ಆದರೆ ಸ್ವಲ್ಪ ದುಬಾರಿ.
ಟಿಕೆಟ್ ಒಪ್ಪಿಸಿ, ಒಳ ಹೊಕ್ಕಾಗ ಹೀಗೊಂದು ಮುದ್ರಿತ ವಾಣಿ ತೇಲಿ ಬಂತು "ತುಂಬಾ ಹಣ ಖರ್ಚು ಮಾಡಿ ವಿದೇಶಕ್ಕೆ ಯಾಕೆ ಹೋಗಬೇಕು, ಇನೋವೇಷನ್ ಫಿಲ್ಮ್ ಸಿಟಿ ಯಲ್ಲಿ ಫಾರಿನ್ ನ ಅನುಭವ ಪಡೆಯಿರಿ".
ಈ ಮಾತಿಗೆ ಪೂರಕವಾಗಿ ಅಲ್ಲಿಯೇ ಕಾಣಿಸುತ್ತಿದ್ದ ಪ್ರತಿಮೆಗಳು ಸುಮಾರಾಗಿ ವಿದೇಶಿ ಶಿಲ್ಪವನ್ನು ಹೋಲುತ್ತಿದ್ದುವು.
ಇವುಗಳ ಮುಂದೆ ನಿಂತು ಫೊಟೊ ಕ್ಲಿಕ್ಕಿಸಿ ಇದು ರೋಮ್ ನಲ್ಲೋ, ಇಂಗ್ಲೇಂಡ್ ನಲ್ಲೋ ಹೋಗಿದ್ದಾಗ ತೆಗೆದವು ಎಂದು, ಗೊತ್ತಿಲ್ಲದವರ ಮುಂದೆ ಬುರುಡೆ ಬಿಡಬಹುದು!
ಗುಡ್ ಮಾರ್ಕೆಟಿಂಗ್!
ಸುಮಾರು ೬ ಗಂಟೆಗಳ ಅವಧಿಯಲ್ಲಿ , ನಾವು ನೋಡಿದ ಕೆಲವು ಪ್ರದರ್ಶನಗಳು ಚೆನ್ನಾಗಿದ್ದುವು. ಉದಾಹರಣೆಗೆ, ಪುಟಾಣಿಗಳಿಗಾಗಿ ವಿವಿಧ ನಮೂನೆಯ ಟೆಡ್ಡಿಬೇರ್ ಗಳ ಪ್ರದರ್ಶನ, ಒಂದೇ ಕಟ್ಟಡದಲ್ಲಿ ವಿಮಾನ ನಿಲ್ದಾಣ, ಟಿ.ವಿ. ಸ್ಟೇಶನ್ ಇತ್ಯಾದಿ ಇವೆ. . ೪ ಡಿ ಶೊ, ಅಂಫಿಥೆಯೆಟರ್, ಟಾಕಿಸ್, ಎಲ್ಲ ವಯೋಮಾನದವರಿಗೆ ತರಾವರಿ ಆಟಗಳು ಇವೆ. ರೋಲರ್ ಸ್ಕೇಟಿಂಗ್, ಕರೊಸಲ್, ಡಾಶಿಂಗ್ ಕಾರ್ ಇತ್ತ್ಯಾದಿ.
ವಾಕ್ಸ್ ಮ್ಯೂಸಿಯಂ ನಲ್ಲಿ ದಲೈ ಲಾಮ, ಮದರ್ ತೆರೆಸಾ, ಪೋಪ್ ಜಾನ್ ಪೌಲ್, ಮಹಾತ್ಮಾ ಗಾಂಧಿ ಮೊದಲಾದವರ ಪ್ರತಿಕೃತಿಗಳು ಸೊಗಸಾಗಿವೆ.
ರೆಪ್ಲೆ’ಸ್ 'ಬಿಲೀವ್ ಇಟ್ ಅರ್ ನಾಟ್ ' ಮ್ಯೂಸಿಯಂ ನಲ್ಲಿ ಪ್ರ ಪಂಚದ ವಿಸ್ಮಯ, ಅದ್ಭುತ ವಿಚಾರಗಳ ಸಂಗಮ ಇದೆ. ವಿಷಯ ಸಂಗ್ರಹದಲ್ಲಿ ಆಸಕ್ತಿ ಇರುವವರಿಗೆ, ಇಲ್ಲಿ ಕನಿಷ್ಟ ೩ ಗಂಟೆ ಬೇಕಾಗಬಹುದು.
ಮಿರರ್ ಮೇಜ್ ಎಂಬ ಕನ್ನಡಿಗಳ ಲೋಕದಲ್ಲಿ, ಪ್ರತಿಫಲನದ ಸಮ್ಮಿಳನದಿಂದಾಗಿ ದಾರಿ ತಪ್ಪಿ ಹೊರಬರಲು ಗೊತ್ತಾಗದೆ ತಬ್ಬಿಬ್ಬಾಗಬಹುದು.
ಪಳೆಯುಳಿಕೆಗಳ ಸಂಗ್ರಹ ಹಾಗೂ ಡೈನೊಸಾರಸ್ ಗಳ ಲೋಕ ಪ್ರವೇಶಿಸುತ್ತಿದ್ದಂತೆ, ಜುರಾಸಿಕ್ ಪಾರ್ಕ್ ಸಿನೆಮಾದಲ್ಲಿ ಕಾಣಿಸಿರುವ ಪ್ರಾಣಿಗಳು ಜೀವ ತಳೆದು ನಮ್ಮ ಕಣ್ಮುಂದೆ ಹೂಂಕರಿಸುತ್ತವೆ.
ಸಾಹಸ ಪ್ರಿಯರಿಗೆ ಪಕ್ಕದಲ್ಲಿ ಒಂದು ದೆವ್ವದ ಮನೆಯೂ ಇದೆ. ಜನರು ಒಳ ಹೊಕ್ಕಾಗ, ಕೆಲವು ಆಕೃತಿಗಳಿಗೆ/ವಸ್ತುಗಳಿಗೆ ಇದ್ದಕ್ಕಿದ್ದಂತೆ ದೆವ್ವ ಹಿಡಿದು, ಅವು ಅಲುಗಾಡುತ್ತವೆ ಅಥವಾ ವಿಚಿತ್ರವಾದ ಸದ್ದು ಮಾಡುತ್ತವೆ, ಯಾಕೆಂದರೆ ಅವಕ್ಕೆ ಸೆನ್ಸರ್ ನ್ನು ಅಳವಡಿಸಿಲಾಗಿದೆ! ಚಿಕ್ಕ ಮಕ್ಕಳು ಹಾಗೂ ಅಂಜುವ ಸ್ವಭಾವದವರು ಇಲ್ಲಿಗೆ ಭೇಟಿ ಕೊಡದಿದ್ದರೆ ಉತ್ತಮ.
ಇನ್ನೂ ಹಲವಾರು ಪ್ರದರ್ಶನಗಳು ಇದ್ದುವು. ಸಮಯದ ಅಭಾವದಿಂದ ಹಾಗೂ ನಡೆದು ಸುಸ್ತಾದ ಕಾರಣ ನಾವು ಎಲ್ಲವನ್ನೂ ನೋಡಲಾಗಲಿಲ್ಲ. ವಾರದ ರಜಾದಿನಗಳಲ್ಲಿ ಎಷ್ಟು ನೂಕು-ನುಗ್ಗಲು ಇರುತ್ತೋ ಗೊತ್ತಿಲ್ಲ, ನಾವು ಹೋದ ದಿನ ಸೋಮವಾರ, ಅಷ್ಟೇನೂ ಜನರಿರಲಿಲ್ಲ. ನಮಗೆ ಆರಾಮವಾಗಿ ಸುತ್ತಾಡಲು ಸಾಧ್ಯವಾಯಿತು.
ವಿನ್ಯಾಸ, ವಿಸ್ತಾರ ಹಾಗೂ ವೈವಿಧ್ಯತೆಯಲ್ಲಿ, ನಾನು ಈ ಮೊದಲು ನೊಡಿದ್ದ ವಿದೇಶದ ಫಿಲ್ಮ್ ಸಿಟಿ ಗಳಿಗೆ ಇದನ್ನು ಹೋಲಿಸಲು ಸಾಧ್ಯವೇ ಇಲ್ಲ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ ಗೆ ಹೋಲಿಸಿದರೆ ಇದು ತುಂಬಾ ಸಣ್ಣದು. ಆದರೆ ಅಚ್ಚುಕಟ್ಟಾಗಿದೆ. ಒಟ್ಟಿನಲ್ಲಿ, ಮನೆಯ ಎಲ್ಲ ಸದಸ್ಯರಿಗೂ ಇಷ್ಟವಾಗಬಲ್ಲ ಕನಿಷ್ಟ ೩-೪ ಪ್ರದರ್ಶನ ಗಳು ಇದ್ದೇ ಇವೆ. ಎಲ್ಲದಕ್ಕಿಂತ ಹೆಚ್ಚು ನಮಗೆ ಹತ್ತಿರದಲ್ಲಿದೆ.
ಆರಂಭದಲ್ಲಿ ಹೇಳಿದಂತೆ, ನಿಮ್ಮ ಪುಟಾಣಿಗಳಿಗೆ. ಅತಿ ಕಡಿಮೆ ಖರ್ಚಿನಲ್ಲಿ ಒಂದು ವಿದೇಶಿ ನಗರಿಯ ಅನುಭವ ಕೊಡಲು, ಒಂದು ರಜಾದಿನವನ್ನು ಖುಷಿಯಿಂದ ಕಳೆಯಲು ’ದಿಸ್ ಇಸ್ ಫರ್ಫೆಕ್ಟ್’!