Total Pageviews

Wednesday, April 6, 2011

ಜರ್ಮನಿಯ ತರಕಾರಿ ಅಂಗಡಿಯಲ್ಲಿ 'ಅಟಿಚೋಕ್'


ಕಳೆದ ವಾರ, ಜರ್ಮನಿಯ ಮೂನಿಕ್ ನಗರದಲ್ಲಿರುವ ನಮ್ಮ ಸಂಸ್ಥೆಯ ಕೇಂದ್ರ ಕಛೇರಿಗೆ ಹೋಗಿದ್ದೆ. 
ನಾನು ಅಲ್ಲಿ ಇದ್ದ ಮೂರೂ  ದಿನಗಳಲ್ಲೂ, ಆಯಾಯ ದಿನದ ಅಫೀಸಿನ  ಕಾರ್ಯಕ್ರಮಗಳು ಮುಗಿದ ನಂತರ ಊರಲ್ಲಿ ಸುತ್ತಾಡಲು ಸ್ವಲ್ಪ ಸಮಯ ಸಿಗುತಿತ್ತು.

ಅಲ್ಲಿ ಇದೀಗ ಚಳಿಗಾಲ ಕಳೆದು ವಸಂತ ಕಾಲ ಶುರುವಾಗುತ್ತಿದೆ. ಎಲೆ ಉದುರಿಸಿಕೊಂಡ ಮರಗಿಡಗಳು  ಇನ್ನು ಕೆಲವು ದಿನಗಳಲ್ಲಿ ಚಿಗುರುವಂತೆ ಕಾಣಿಸುತಿದ್ದುವು. ಸಂಜೆ ಸುಮಾರು ೧೨-೧೩ ಡಿಗ್ರಿ ಉಷ್ಣತೆ ಇದ್ದಿರಬಹುದು, ೭.೩೦ ಗಂಟೆಯಾದರೂ, ಇನ್ನೂ ಸೂರ್ಯನ ಬೆಳಕಿತ್ತು. 

ಮೂನಿಕ್ ಸಿಟಿಯ ರಸ್ತೆಯೊಂದರಲ್ಲಿ ನಡೆಯುತಿದ್ದಾಗ ತರಕಾರಿ ಅಂಗಡಿಯೊಂದರಲ್ಲಿ ಬುಟ್ಟಿಯಲ್ಲಿ ಜೊಡಿಸಿಟ್ಟಿದ್ದ, ಹೂವಿನಂತೆ ಕಾಣುವ ತರಕಾರಿ ಗಮನ ಸೆಳೆಯಿತು. ಸಾಮಾನ್ಯವಾಗಿ ಹೂವು ತರಕಾರಿಗಳಲ್ಲಿ ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೋಲಿ ಗೊತ್ತು. ಸಾಂಪ್ರದಾಯಿಕ ಅಡುಗೆಗೆ ಬಳಸುವ ಹಿತ್ತಲಿನ  ನುಗ್ಗೆ ಹೂ, ಬಾಳೆ ಹೂ, ಕುಂಬಳಕಾಯಿ ಹೂ ಇತ್ಯಾದಿಗಳೂ ಗೊತ್ತು.ಇವುಗಳಲ್ಲಿ ಹಲವು ಬಣ್ಣದವುಗಳು ಹಾಗು ವಿವಿಧ ಗಾತ್ರ ದವುಗಳನ್ನು ನೋಡಿದ್ದೆ.

.



ಆದರೆ ಗುಲಾಬಿ ಹೂವಿನಂತೆ ಕಾಣುವ, ತುಸು ಒರಟಾದ ಈ ತರಕಾರಿ ಏನೆಂದು ಗೊತ್ತಾಗಲಿಲ್ಲ
    


ಅಂಗಡಿಯಾತನನ್ನು ಇದೇನೆಂದು ಇಂಗ್ಲಿಷ್ ನಲ್ಲಿ ಕೇಳಿದೆ. ಅವನಿಗೆ  ಇಂಗ್ಲಿಷ್ ನಲ್ಲಿ ಮಾತನಾಡಲು ಕಷ್ಟವಾಗುತಿತ್ತು. ನನಗೆ ಜರ್ಮನ್ ಭಾಷೆಯ ೪-೫ ವ್ಯಾವಹಾರಿಕ  ಪದಗಳು ಮಾತ್ರ ಗೊತ್ತು.  ಒಟ್ಟಿನಲ್ಲಿ ಅವನು ಹೇಳಿದುದರಲ್ಲಿ ನನಗೆ ಅರ್ಥವಾದ ದ್ದು ಇಷ್ಟು:


ಇದು 'ಅಟಿಚೋಕ್'ಎಂಬ  ತರಕಾರಿ. ಹಸಿ  ಸಲಾಡಿನಂತೆಯೂ ಬಳಸಬಹುದು, ಒಲಿವ್ ಎಣ್ಣೆಯ ಜತೆ ಸೇರಿಸಿ ಹುರಿದು ತಿನ್ನಬಹುದು.  ಅಥವಾ ಬೇಯಿಸಿ  ತಿನ್ನಬಹುದು. ಬೆಂದಾಗ  ಹೂವಿನ ದಳಗಳ ಹೊರಭಾಗ ಗಟ್ಟಿಯಾಗುತ್ತದೆ. ಬೆಂದ ಅಟಿಚೋಕ್ ಅನ್ನು ಮೂಳೆ ತಿನ್ನುವಂತೆ ಸಾಸ್ ನಲ್ಲಿ ಅದ್ದಿ  ತಿನ್ನಬಹುದು ಅಂದ!

ಸಸ್ಯಾಹಾರಿಗಳು ಇದನ್ನು 'ನುಗ್ಗೆಕಾಯಿ ದಂಟು ತಿಂದಂತೆ' ಎಂದು ಹೋಲಿಕೆ ಕೊಡಬಹುದು!       



2 comments: