ಇತ್ತೀಚೆಗೆ ಯೂತ್ ಹಾಸ್ಟೆಲ್ ಸದಸ್ಯೆಯಾದೆ. ಹಾಗಾಗಿ, ಕೆಲವೊಮ್ಮೆ, ಅವರು ಆಯೋಜಿಸುವ ಸಣ್ಣ ಪುಟ್ಟ ಚಾರಣಕ್ಕೆ ಹೋಗುವ ಹುಮ್ಮಸ್ಸು ಬಂದಿದೆ. ಇದು ನನ್ನ ಮೂರನೆಯ ಚಾರಣ ಅನುಭವ.
ಕಳೆದ ಭಾನುವಾರ , ಮೈಸೂರಿನಿಂದ ಸುಮಾರು ೩೦ ಮಂದಿ ಸದಸ್ಯರು, ಒಂದು ಟೆಂಪೊ ಹಾಗೂ ಇನ್ನೊಂದು ಟಾಟಾ ಸುಮೋ ದಲ್ಲಿ ಚೆನ್ನಪಟ್ಟಣ ಕಡೆಗೆ ಹೊರಟೆವು. ದಾರಿಯಲ್ಲಿ ಮದ್ದೂರಿನಲ್ಲಿ ಕಾಫಿ-ತಿಂಡಿ ಸೇವನೆಯಾಯಿತು.
ಚೆನ್ನಪಟ್ಟಣದ ಸಮೀಪದ 'ಮುದಗೆರೆ' ಎಂಬಲ್ಲಿ ತಿರುಗಿ ಸ್ವಲ್ಪ ಮುಂದೆ ಬಂದು, ಟೆಂಪೊ ನಿಂತಿತು. ಎದುರುಗಡೆ ಪುಟ್ಟ ಬೆಟ್ಟ ಇತ್ತು. ನಿಧಾನವಾಗಿ ಹತ್ತಿ ಬೆಟ್ಟದ ತುದಿ ತಲಪಿದೆವು.
ಸುತ್ತ ಬೆಳೆದಿದ್ದ ಹಸಿರು ಗಿಡಗಳು, ಕಾಡು ಹೂಗಳ ಫೊಟೊ ತೆಗೆಯುತ್ತಾ ಮೇಲೇರಿದೆವು. ಬೆಟ್ಟದ ತುದಿಯಲ್ಲಿ, 'ಕಂಭದ ನರಸಿಂಹಸ್ವಾಮಿಯ' ಮಂದಿರವಿದೆ. ಅಲ್ಲಿ ಪ್ರಸಾದ ಸ್ವೀಕರಿಸಿ ಕೆಳಗೆ ಬಂದಾಯಿತು.
ಅಲ್ಲಿಂದ ಮುಂದೆ ಬಂದು 'ಹೆರಿಟೇಜ್ ಗ್ರೇಪ್ ವೈನರಿ'ಗೆ ಭೇಟಿಯ ವ್ಯವಸ್ಥೆ ಮಾಡಿದ್ದರು. ವೈನ್ ಉತ್ಪಾದನೆಯ ಪ್ರಾತ್ಯಕ್ಷಿಕೆಯ ಜೊತೆಗೆ, ರುಚಿ ನೊಡಲೆಂದು ಸ್ವಲ್ಪ ವೈನ್ ಸಾಂಪಲ್ ಕೊಟ್ಟರು. ಪುರಾಣಗಳಲ್ಲಿ ಬರುವ ದ್ರಾಕ್ಷಾರಸ, ಸೋಮರಸ ಇತ್ಯಾದಿಗಳ ವ್ಯಾಖ್ಯಾನದೊಂದಿಗೆ, ಆಯುರ್ವೇದದ ಅಮೃತಾರಿಷ್ಟ, ದ್ರಾಕ್ಷಾರಿಷ್ಟಗಳ ಬಗ್ಗೆ ಮಾತು ಹೊರ್‍ಅಳಿತು. ಕೆಲವರಿಗೆ, ವೈನ್ ಗ್ಲಾಸ್ ಹಿಡಿದುಕೊಂಡು ಫೊಟೊ ತೆಗೆಯುವ ಸಡಗರ.
ಅಲ್ಲಿದ್ದ ಆಲಂಕಾರಿಕ ವೈನ್ ಜಾರ್ ನನಗೆ ಇಷ್ಟವಾಯಿತು. ಬಾಲ್ಯದಲ್ಲಿ ಕೇಳಿದ್ದ 'ಆಲಿ ಬಾಬಾ ಮತ್ತು ೪೦ ಕಳ್ಳರು' ಕಥೆಯಲ್ಲಿ ಬರುವ ಪೀಪಾಯಿ ಇದೇ ರೀತಿ ಇದ್ದಿರಬಹುದೇನೋ ಅನಿಸಿತು.
.
ಅಲ್ಲಿಂದ ಮುಂದೆ ನಮ್ಮ ಪಯಣ ಸಾಗಿದ್ದು ಬೆಂಗಳೂರು ರಸ್ತೆಯಲ್ಲಿಯಲ್ಲಿರುವ 'ಜಾನಪದ ಲೋಕ'ದ ಕಡೆಗೆ. ಅಲ್ಲಿ ಆಗ ಕರಗ ನೃತ್ಯದ ಪ್ರದರ್ಶಿಸಲ್ಪಡುತ್ತಿತ್ತು. ಜಾನಪದ ವಸ್ತುಸಂಗ್ರಹಾಲಯ, ಕರಕುಶಲ ಕಲೆಗಳ ಪ್ರಾತ್ಯಕ್ಷಿಕೆ ಇತ್ಯಾದಿ ನೋಡಿ ಮೈಸೂರಿಗೆ ವಾಪಸ್ಸಾದೆವು.
ಒಟ್ಟಾರೆಯಾಗಿ ಇದು ಒಂದು ಪುಟ್ಟ ಚಾರಣ. ಸಮಾನ ಅಭಿರುಚಿಯ , ವಿವಿಧ ಕ್ಶೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಪರಿಚಯವಾಗುತ್ತದೆ. ಎಲ್ಲರೂ ಪರಸ್ಪರ ಸ್ನೇಹದಿಂದ ವರ್ತಿಸುತ್ತಾರೆ. ಇನ್ನೊಂದು ಗಮನಾರ್ಹ ವಿಚಾರವೇನೆಂದರೆ,ಇಲ್ಲಿ ಯಾವುದೇ ಆಡಂಬರ, ಒಣ ಪ್ರತಿಷ್ಟೆ ಇಲ್ಲ. ಸಾಧ್ಯಾದಷ್ಟು ಸರಳವಾಗಿ, ಕಡಿಮೆ ಖರ್ಚಿನಲ್ಲಿ ,ವ್ಯವಸ್ಥೆ ಮಾಡುತ್ತಾರೆ. ಎಲ್ಲರಿಗೂ ಸಮಾನ ಆವಕಾಶ. ನಾನಂತೂ ಇನ್ನು ಮುಂದೆ, ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದುಕೊಂಡಿದ್ದೇನೆ.
ಇದರಿಂದ ನನಗೆ ಅನುಭವವೇದ್ಯವಾದ ವಿಚಾರವೇನೆಂದರೆ, ಸಾಮಾನ್ಯವಾಗಿ ದೈಹಿಕ ಶ್ರಮದ ಯಾವುದೇ ಕೆಲಸ ಮಾಡದೆ, ಮನೆಯಲ್ಲಿ ಸ್ವಲ್ಪ ಅಡಿಗೆ ಕೆಲಸ ಮಾತ್ರ ಮಾಡಿ,ಆಫೀಸಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ನನಗೆ,ಬೆಟ್ಟ ಹತ್ತಲು ಸುಲಭವಾಗುವುದಿಲ್ಲ, ನನಗಿಂತ ಹೆಚ್ಚು ವಯಸ್ಸಾದವರು ಕೂಡ ಆರಾಮವಾಗಿ ಬೆಟ್ಟ ಹತ್ತುವಾಗ, ಏದುಸಿರು ಬಿಡುತ್ತಾ ಅಲ್ಲಲ್ಲಿ ನಿಂತು ಸಾವರಿಕೊಳ್ಳುತಿದ್ದ ನನ್ನ ಬಗ್ಗೆ ನಾಚಿಕೆಯೆನಿಸಿತು.
ತಂಡದ ಮುಖ್ಯಸ್ಥೆ ಗೋಪಮ್ಮ ಅವರು ತುಂಬಾ ಸಹನೆ , ತಾಳ್ಮೆಯಿಂದ ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಅವರಿಂದ ನಾವು ಕಲಿಯಬೇಕು, ಸ್ಫೂರ್ತಿ ಪಡೆಯಬೇಕು ಅನಿಸಿತು. ನಿವೃತ್ತರಾದ ಅವರು, ಇದುವರೆಗೆ ಹಲವಾರು ಬಾರಿ ಹಿಮಾಲಯ ಚಾರಣ ಕೈಗೊಂಡಿದ್ದಾರೆ. ಸಮಾಜ ಸೇವೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಜೈ ಯೂತ್ ಹಾಸ್ಟೆಲ್!
ನಾನೂ ಯೂತ್ ಹಾಸ್ಟೆಲ್ ಸೇರಬೇಕೆಂದಿದ್ದೇನೆ
ReplyDelete