೨೦೧೧ ರ ಡಿಸೆಂಬರ್ ೧೯-೨೩ ರ ವರೆಗೆ ನಮ್ಮ ವಾರ್ಷಿಕ ಸಭೆ ನೇಪಾಳದ ಕಟ್ಮಂಡುವಿನಲ್ಲಿ ಜರಗಿತು. ಹಿಮಾಲಯದ ಮಡಿಲಿನಲ್ಲಿರುವ ನೇಪಾಳ ನಿಸರ್ಗ ಸಿರಿಯನ್ನು ಹೊಂದಿದೆ. ಡಿಸೆಂಬರ್ ನ ಚಳಿ ನಡುಕ ಹುಟ್ಟಿಸುತ್ತಿದ್ದರೂ, ಸಂಜೆ ನಗರ ಸುತ್ತಲು ನಮ್ಮ ತಂಡ ಅಣಿಯಾಗುತ್ತಿತ್ತು.
ಕಟ್ಮಂಡುವಿನ ಪಶುಪತಿನಾಥ ದೇವಸ್ಥಾನವು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳ. ಬಾಗ್ಮತಿ ನದಿ ದಂಡೆಯ ಮೇಲೆ ಇರುವ ಈ ದೇವಸ್ಥಾನವು ಸುಮಾರು ಕ್ರಿ.ಶ. ೪೦೦ ಆಸುಪಾಸಿನಲ್ಲಿ ಕಟ್ಟಲ್ಪಟ್ಟಿತು ಎಂಬ ನಂಬಿಕೆ. ನೇಪಾಳದ 'ಲಿಂಚ್ಚಾವಿ' ಮನೆತನದ ದೊರೆಯಾದ 'ಸುಪಾಸ್ ಪಡೆವ’ ನ ಕಾಲದಲ್ಲಿ ಇದನ್ನು ಕಟ್ಟಲಾಯಿತು.
ದಂತಕಥೆಗಳ ಪ್ರಕಾರ ಒಮ್ಮೆ ಶಿವನು ಕೃಷ್ಣ ಮೃಗದ ರೂಪ ತಾಳಿ ಬಾಗ್ಮತಿ ನದೀ ತೀರದಲ್ಲಿ ವಿಹರಿಸುತ್ತಿದ್ದನು. ಅವನು ತನ್ನ ದೈವರೂಪಕ್ಕೆ ಮರಳಿ ತಮ್ಮನ್ನು ಕಾಪಾಡಾಬೇಕೆಂಬ ಹಂಬಲದಿಂದ ದೇವತೆಗಳು ಬೆಂಬೆತ್ತಿದರು. ದೇವತೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೃಷ್ಣ ಮೃಗ ರೂಪಿಯಾದ ಶಿವನು ಓಡಿದಾಗ ಮೃಗದ ಒಂದು ಕೋಡು ಮುರಿದು ಬಿತ್ತು. ಅದು ಪಶುಪತಿನಾಥ ಶಿವಲಿಂಗವಾಯಿತು. ಕಾಲಾನಂತರದಲ್ಲಿ ದನಗಾಹಿಯೊಬ್ಬ ತನ್ನ ಹಸುವೊಂದು, ಭೂಮಿಗೆ ಹಾಲು ಸುರಿಸುವುದನ್ನು ನೋಡಿ ಅಚ್ಚರಿಗೊಂಡು ಭೂಮಿಯನ್ನು ಅಗೆದಾಗ ಅಲ್ಲಿ ಶಿವಲಿಂಗ ದೊರಕಿತು. ಈ ಜಾಗದಲ್ಲಿ, ಇಂದಿನ ಪಶುಪತಿನಾಥ ದೇವಾಲಯವಿದೆ.
ನಾವು ಅಲ್ಲಿಗೆ ತಲಪಿದಾಗ ತಾಪಮಾನ ೨-೩ ಡಿಗ್ರಿ ಇದ್ದಿರಬಹುದು. ಅಂಥಹ ಚಳಿಯಲ್ಲಿ ಬರಿಗಾಲಿನಲ್ಲಿ ದೇವಸ್ಥಾನದ ಒಳ ಹೊಕ್ಕೆವು. ಅಲ್ಲಿ ಛಾಯಾಗ್ರಹಣ ನಿಷಿದ್ಧವಾಗಿತ್ತು. ಅಷ್ಟಾಗಿ ಜನ-ಜಂಗುಳಿಯಿದ್ದಿರಲಿಲ್ಲ, ಹಾಗಾಗಿ ನಮಗೆ ಅನುಕೂಲವಾಯಿತು.
ಸುತ್ತಲೂ ಮರದ ಶಿಲ್ಪದಿಂದ ಕೂಡಿದ ಪ್ರಾಂಗಣ. ಗರ್ಭಗುಡಿಗೆ ನಾಲ್ಕು ಬಾಗಿಲುಗಳು. ಇಲ್ಲಿ ಶಿವಲಿಂಗಕ್ಕೆ ನಾಲ್ಕು ಮುಖಗಳು. ಪ್ರದಕ್ಷಿಣಾಕಾರವಾಗಿ ಸಾಗುವಾಗ, ನಾಲ್ಕೂ ಬಾಗಿಲುಗಳಿಂದ, ತೀರಾ ಸನಿಹದಿಂದ ಶಿವಲಿಂಗವನ್ನು ನೋಡಲು ಸಾಧ್ಯವಾಗುತ್ತದೆ.
ಬಹುಶ: ಅಲ್ಲಿ ಅರ್ಚನೆ ಚೀಟಿ ಮಾಡಿಸುವ ಪದ್ಧತಿ ಇಲ್ಲ , ಅಥವಾ ಇದ್ದರೂ ನಮಗೆ ಗೊತ್ತಾಗಲಿಲ್ಲ . ನಮ್ಮ ತಂಡ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿದ ಅರ್ಚಕರು ಕನ್ನಡದಲ್ಲಿ ಪ್ರತಿಕ್ರಿಯಿಸಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಯವೆಂದು ಗೊತ್ತಾಯಿತು. ಪಶುಪತಿನಾಥನ ಸನ್ನಿಧಿಯಲ್ಲಿ ಪೂಜೆ ಮಾಡುವ ಅಧಿಕಾರ ಅವರಿಗೆ ತಲೆತಲಾಂತರದಿಂದ, ಬಂದುದಂತೆ.
ಅವರ ವೇಷ-ಭೂಷಣವೂ ವಿಭಿನ್ನವಾಗಿತ್ತು. ಅರಶಿನ ಬಣ್ಣದ ಪಂಚೆಯುಟ್ಟು, ಅದೇ ಬಣ್ಣದ ಉತ್ತರೀಯವನ್ನು ತಲೆಗೂ ಹೊದ್ದು, ರುದ್ರಾಕ್ಷಿ ಮಾಲೆಯನ್ನು ತಲೆಗೆ ’ರಿಂಗ್’ ನಂತೆ ಸುತ್ತಿದ್ದರು. ಕತ್ತಿಗೆ ರುದ್ರಾಕ್ಷಿ ಹಾರ. ಕೈಗಳಿಗೂ ರುದ್ಕ್ರಾಕ್ಷಿ ಹಾರದ ’ಬ್ರೇಸ್ ಲೆಟ್’. ಶಂಕರಾಚಾರ್ಯನ್ನೂ, ಬೌದ್ಧರ ಲಾಮಾರನ್ನೂ ಏಕಕಾಲಕ್ಕೆ ನೆನಪಾಯಿತು.
ಪೂಜೆಯ ಆಚರಣೆಯೂ ವಿಭಿನ್ನವಾಗಿತ್ತು. ಹಾಲು ತುಂಬಿಸಿದ್ದ ಒಂದು ಬೆಳ್ಳಿಯ ಚೊಂಬನ್ನು ನಮಗೆ ಸ್ಪರ್ಶಿಸಲು ಹೇಳಿದರು. ನಮ್ಮ ಹೆಸರು-ಗೋತ್ರವನ್ನೂ ಕೇಳಿ , ತಾವು ಉಚ್ಛರಿಸಿದರು. ಆಮೇಲೆ ಹಾಲನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಿ, ನಮಗೆ ಗಂಧ ಪ್ರಸಾದ, ಕಲ್ಲು ಸಕ್ಕರೆ ಕೊಟ್ಟರು. ಜತೆಗೆ, ಶಿವಲಿಂಗದ ಮೇಲೆ ಶೋಭಿಸುತ್ತಿದ್ದ ಒಂದು ರುದ್ರಾಕ್ಷಿ ಹಾರವನ್ನು ನಮ್ಮ ಕೊರಳಿಗೆ ಆಶೀರ್ವಾದಪೂರ್ವಕವಾಗಿ ಹಾಕಿದರು. ಅನಿರೀಕ್ಷಿತವಾಗಿ, ಪಶುಪತಿನಾಥನ ವಿಗ್ರಹದಲ್ಲಿ ರಾರಾಜಿಸುತ್ತಿದ್ದ ರುದ್ರಾಕ್ಷಿ ಹಾರ ನನ್ನ ಕೊರಳಿಗೆ ಬಿದ್ದಾಗ ಧನ್ಯತಾ ಭಾವ ಮೂಡಿತು.
ಪಶುಪತಿನಾಥ ದೇವಾಲಯದ ಇನ್ನೊಂದು ಆಕರ್ಷಣೆ ೫೦೧ ಶಿವಲಿಂಗಗಳಿಗೆ ಪ್ರದಕ್ಷಿಣೆ ಬರುವುದು. ಒಂದು ಆವರಣದಲ್ಲಿ, ೫೦೧ ಶಿವಲಿಂಗಗಳನ್ನು ಸಾಲಾಗಿ ಜೋಡಿಸಿದ್ದಾರೆ. ಭಕ್ತರು ’ಓಂ ನಮ: ಶಿವಾಯ’ ಎಂದು ಸ್ತುತಿಸುತ್ತಾ, ಪ್ರತಿಯೊಂದು ಶಿವಲಿಂಗವನ್ನೂ ಸ್ಪರ್ಶಿಸುತ್ತಾ, ಸಾಲಾಗಿ ಹೋಗುವರು. ಅಲ್ಲಿ ಕೆಲವು ಸಾಧುಗಳು ಕುಳಿತಿದ್ದರು. ಭಕ್ತರ ಹಣೆಗೆ ಅರಶಿನ ಅಥವಾ ಕುಂಕುಮದ ಬೊಟ್ಟು ಇಡುವವರು ಇಬ್ಬರಿದ್ದರು. ರುದ್ರಾಕ್ಷಿಯನ್ನು ಹಂಚಿದವರೊಬ್ಬರು. ಅರಶಿನ- ಕುಂಕುಮದ ದಾರವನ್ನು ಕೈಗೆ ಕಟ್ಟಿದವರು ಇನ್ನೊಬ್ಬರು.
ಈ ಸಾಧುಗಳು ತಮ್ಮ ಮುಂದೆ ಇರಿಸಲಾದ ತಟ್ಟೆ ಗೆ ದಕ್ಷಿಣೆ ಹಾಕಲು ಅಕಸ್ಮಾತ್ತಾಗಿ ನಾವು ಮರೆತರೆ, ಗದರುವ ಧ್ವನಿಯಲ್ಲಿ ನಮ್ಮ ಗಮನ ಸೆಳೆಯುತ್ತಿದ್ದರು!
ದೇವಸ್ಥಾನದ ಸನಿಹದಲ್ಲಿ ಹರಿಯುವ ಬಾಗ್ಮತಿ ನದಿ ತೀರದಲ್ಲಿ, ಹಿಂದುಗಳು ಅಂತ್ಯಕ್ರಿಯೆಯನ್ನು ನಡೆಸುತ್ತಾರೆ ಹಾಗೂ ನದಿ ಕಲುಷಿತಗೊಂಡಿದೆ.