ಹೊಸ ವರುಷದ ಸ್ವಾಗತಕ್ಕೆ ಹಲವಾರು ಸಿದ್ಧತೆಗಳು, ವಿನೂತನ ಆಯಾಮಗಳು... ಒಟ್ಟಾರೆ ಸಂಭ್ರಮ.
ಈ ಬಾರಿ ಜನವರಿ ಒಂದರಂದು, ಮೈಸೂರಿನ ವಿಜಯನಗರದಲ್ಲಿರುವ ಯೋಗನರಸಿಂಹ ಸ್ವಾಮಿಯ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಲಾಡು ಪ್ರಸಾದ ಹಂಚಿದ್ದರು.ತಲಾ ೧೦೦ ಗ್ರಾಂ ಮತ್ತು ೪೦೦ ಗ್ರಾಂ ತೂಕದ ಲಾಡುಗಳನ್ನು ಸಾಮಾನ್ಯರಿಗೂ, ಒಂದುವರೆ ಕಿಲೋ ತೂಕದ ಲಾಡನ್ನು ಗಣ್ಯರಿಗೂ ವ್ಯವಸ್ಥೆ ಮಾಡಿದ್ದರು.
ಸ್ಥಳೀಯ ಪತ್ರಿಕೆಯ ವರದಿ ಪ್ರಕಾರ ಹೊಸವರುಷದಂದು ದೇವಸ್ಥಾನದ ವತಿಯಿಂದ ಒಂದು ಲಕ್ಷ ಲಾಡು ತಯಾರಿಸಿದ್ದರು! ಹಾಗೂ ಪ್ರಸಾದವನ್ನು ಪಡೆಯಲು ದೇವಸ್ಥಾನದಿಂದ ಸುಮಾರು ಒಂದು ಕಿ.ಮೀ. ದೂರದವರೆಗೂ ಜನರ ಸಾಲು, ಮಧ್ಯರಾತ್ರಿ ವರೆಗೂ ಕರಗಿರಲಿಲ್ಲ.
ನಮ್ಮ ಮನೆಯಿಂದ ಆದಿನ ದೇವಸ್ಥಾನಕ್ಕೆ ಯಾರೂ ಹೋಗಿರದಿದ್ದರೂ, ನಾವು ಯಾರೂ ಗಣ್ಯವ್ಯಕ್ತಿಯಲ್ಲದಿದ್ದರೂ, ಅನಿರೀಕ್ಷಿತವಾಗಿ, ಹಿತೈಷಿಯೊಬ್ಬರ ಮೂಲಕ ಮರುದಿನ ಪ್ರಸಾದ ಲಭಿಸಿತು. ಇದು ನಿಜವಾಗಲೂ ನಮ್ಮ ಯೋಗ ಹಾಗೂ ಯೋಗನರಸಿಂಹನ ಆಶೀರ್ವಾದ!
ಪುಟ್ಟದಾದ ಬುಟ್ಟಿಯಲ್ಲಿ, ಮುತ್ತುಗದ ಎಲೆಯ ಹಾಸಿನ ಮೇಲೆ ಮಹಾ ಲಾಡು ಕಂಗೊಳಿಸುತಿತ್ತು. ಸುಮಾರು ’ಶೋಟ್ ಪುಟ್ ಗೇಮ್’ನ ಭಾರವಾದ ಚೆಂಡನ್ನು ಹೋಲುವ ಈ ಲಾಡು, ರುಚಿಯಲ್ಲೂ ಅದ್ಭುತವಾಗಿತ್ತು. ದ್ರಾಕ್ಷಿ, ಗೋಡಂಬಿ, ಲವಂಗ, ಏಲಕ್ಕಿ, ಪಚ್ಚ ಕರ್ಪೂರ ಹಾಕಿ ತಯಾರಿಸಲಾಗಿದ್ದ ಲಾಡು ತಿರುಪತಿಯ ಪ್ರಸಾದವನ್ನೂ ಮೀರಿಸುವಂತಿತ್ತು.
No comments:
Post a Comment