ಪರಿಸರ ಪ್ರೇಮಿಗಳಿಗೆ ಮೈಸೂರು -ಊಟಿ ರಸ್ತೆಯಲ್ಲಿರುವ ಬಂಡಿಪುರದ ರಕ್ಷಿತಾರಣ್ಯ ಅಚ್ಚುಮೆಚ್ಚಿನ ತಾಣ. ಹಿಂದೊಮ್ಮೆ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದಾಗ ಅಲ್ಲಿ ಎತ್ತ ನೋಡಿದರೂ ಹಸಿರಾಗಿತ್ತು. ಹಾಗಾಗಿ,ಅರಣ್ಯ ಇಲಾಖೆಯ ಸಫಾರಿ ವ್ಯಾನ್ ನಲ್ಲಿ ಕಾಡೊಳಗೆ ಸುತ್ತು ಹಾಕಿದಾಗ ಬಹಳ ಸಂತಸವಾಗಿತ್ತು.
ಆದರೆ ಈ ಬಾರಿ, ಫೆಬ್ರವರಿ ತಿಂಗಳಿನಲ್ಲಿಯೇ, ಇನ್ನೂ ಕಡು ಬೇಸಗೆ ಆರಂಭವಾಗವ ಮೊದಲೇ ಭಣಗುಟ್ಟುವ ಅರಣ್ಯ ನಮ್ಮನ್ನು ಸ್ವಾಗತಿಸಿತು. ಒಣ ಹುಲ್ಲನ್ನು ಮೇಯುತ್ತಾ ವಿಶ್ರಮಿಸುತ್ತಿದ್ದ ಹಲವಾರು ಜಿಂಕೆಗಳೂ ಕಡವೆಗಳೂ ಎದುರಾದುವು. ಒಂದು ಕಾಡೆಮ್ಮೆ, ಒಂದು ಕಾಡುಕುರಿ, ಕೆಲವು ಕಾಡುಕೋಳಿಗಳು, ಕಾಡುಹಂದಿಗಳು ಹಾಗೂ ಕಾಡಾನೆ ಕೂಡ ಕಾಣಿಸಿದುವು.
ಹಸಿರೇ ಇಲ್ಲದ ಈ ಕಾಡಲ್ಲಿ, ಬತ್ತಿ ಹೋಗಿರುವ ಕೆರೆಗಳು ಬರದ ತೀವ್ರತೆಯನ್ನು ಅನಾವರಣಗೊಳಿಸಿದುವು. ಈ ಪ್ರಾಣಿಗಳಿಗೆ ಅಹಾರ-ನೀರು ಎಲ್ಲಿಂದ ಸಿಗಬೇಕು ಎಂದು ನೆನೆದು ಖೇದವೆನಿಸಿತು.
ಅರಣ್ಯ ಇಲಾಖೆಯವರು ಅಲ್ಲಲ್ಲಿ ಕೆಲವು ಪುಟ್ಟ ತಾತ್ಕಾಲಿಕ ಕೊಳಗಳನ್ನು ನಿರ್ಮಿಸಿ ಪ್ರಾಣಿಗಳಿಗೆ ನೀರುಣಿಸುವ ಮಹತ್ಕಾರ್ಯ ಮಾಡಿದ್ದಾರೆ. ಸಿಮೆಂಟ್ ರಿಂಗ್ ನಿಂದ ನಿರ್ಮಿಸಿದ ಪುಟ್ಟಕೊಳಗಳು ಹಾಗೂ ಪ್ಲಾಸ್ಟಿಕ್ ಶೀಟ್ ಅನ್ನು ಹಾಕಿ ನಿರ್ಮಿಸಿದ ಸಣ್ಣ ಕೊಳಗಳು ಕೆಲವು ಕಾಣಿಸಿತು. ಈ ಕಟ್ಟೆಗಳಿಗೆ ಟ್ರ್ಯಾಕ್ಟರ್ ನಲ್ಲಿ ನೀರು ತಂದು ಸುರಿಯುವ ವ್ಯವಸ್ಥೆ ಮಾಡಿದ್ದಾರೆ. ನಾವು ನೋಡುತ್ತಿದ್ದಂತೆಯೇ ದೂರದಿಂದ ಹಾರಿ ಬಂದ ಒಂದು ಹದ್ದು ಹಾರಿಬಂದು ಸಿಮೆಂಟ್ ರಿಂಗ್ ಮೇಲೆ ಕುಳಿತು ನೀರು ಕುಡಿದು ಹಾರಿ ಹೋಯಿತು.
ಪ್ರಕೃತಿಯ ಒಡ್ಡುವ ಸವಾಲುಗಳ ಮುಂದೆ ಮನುಷ್ಯ ಪ್ರಯತ್ನ ಗೌಣ ಎಂಬುದು ಸತ್ಯ. ಆದರೂ ಪ್ರಕೃತಿ ಮುನಿಸಿಕೊಂಡಾಗ ಪ್ರಾಣಿ-ಪಕ್ಷಿಗಳ ದಾಹವನ್ನು ತಣಿಸಲು ತಮ್ಮಿಂದಾಗುವ ಪ್ರಯತ್ನ ಮಾಡಬೇಕಲ್ಲವೆ? ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಪ್ರಯತ್ನ ಶ್ಲಾಘನೀಯ.
ನಿಜವಾಗಲೂ ಅಲ್ಲಿನ ಅರಣ್ಯಾಧಿಕಾರಿಗಳ ಶ್ರಮ ನಾನೂ ಕಣ್ಣಾರೆ ಕಂಡಿದ್ದೇನೆ. ಪ್ರಕೃತಿ ಮುನಿದರೆ ಮನುಜ ಎಷ್ಟರವನು?
ReplyDeletewww.badari-poems.blogspot.com