Total Pageviews

Sunday, December 21, 2014

ದೂರ ತಪ್ಪಿಸುವ ಮೈಲಿಗಲ್ಲು..ಹೀಗೂ ಉಂಟು!


ಚಂದಮಾಮದ ಕತೆಗಳಲ್ಲಿ ಬರುವ ರಾಜಕುಮಾರನಿಗೆ, ಕಾಡು ಮೇಡುಗಳಲ್ಲಿ ಅಲೆದಾಡುವ ಸಂದರ್ಭ  ಬರುತ್ತದೆ, ಆಗ ಯಾವುದೋ ದೆವ್ವವೋ, ಮೋಹಿನಿಯೋ ಅವನ ದಾರಿ ತಪ್ಪಿಸುತ್ತದೆ.  ಆದರೆ, ನವೆಂಬರ್ 8, 2014 ರಂದು, ಮೈಸೂರಿನ  ಯೈ.ಎಚ್.ಎ.ಐ ತಂಡದ ಕೆಲವು ಚಾರಣಿಗರನ್ನು, ಹಾಡುಹಗಲೇ, ಆಗುಂಬೆ ಘಾಟಿಯ ಮೈಲಿಗಲ್ಲು ದೂರ/ದಾರಿ ತಪ್ಪಿಸಿದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ….ಹೀಗೂ ಉಂಟು!
ಆ ದಿನ ಬೆಳಗ್ಗೆ ನಿಗದಿತ ಕಾರ್ಯಕ್ರಮದ ಪ್ರಕಾರ ನಮ್ಮ ತಂಡವು, ಕುಂದಾದ್ರಿ ಬೆಟ್ಟವಿಳಿದು, ಆಗುಂಬೆ ತಲಪಿದೆವು. ಅಲ್ಲಿಂದ ಬೆಳಗಿನ ಉಪಾಹಾರಕ್ಕಾಗಿ ಸೋಮೇಶ್ವರಕ್ಕೆ ಹೋಗಿ, ತಿಂಡಿ ತಿಂದು, ಕಾಡುದಾರಿಯ ರಸ್ತೆಮಾರ್ಗದಲ್ಲಿ ನಡೆದು ಆಗುಂಬೆಯ ಸೂರ್ಯಾಸ್ತಮಾನ ವ್ಯೂ ಪಾಯಿಂಟ್ ತಲಪಬೇಕಿತ್ತು. ಅನಂತರ ಬೇರೆಡೆಗೆ ಹೋಗುವುದಿತ್ತು. ಸೋಮೇಶ್ವರದಲ್ಲಿ ಉಪಾಹಾರವಾದ ಮೇಲೆ ರಸ್ತೆಯಲ್ಲಿ ಆಗುಂಬೆ ಕಡೆಗೆ ನಡೆಯತೊಡಗಿದೆವು. ಹಿಂದಿನ ದಿನ ಕುಂದಾದ್ರಿಯಲ್ಲಿ ನಡೆದಿದ್ದ ನಮಗೆ ತಿಂಡಿ ತಿಂದಾದ ಮೇಲೆ ಹೊಟ್ಟೆಯೂ ಭಾರವಾಗಿ,  ಕೆಲವರಿಗೆ ರಸ್ತೆಯಲ್ಲಿ ನಡೆಯುವುದು ‘ಬೇಕಿಲ್ಲ′ ಎಂಬ ಮನೋಭಾವ ಹುಟ್ಟಿತ್ತು. ಇಷ್ಟರೆ  ಮೇಲೆ ಪಕ್ಕದಲ್ಲಿಯೇ ಲಾರಿ-ಬಸ್ಸುಗಳು ಧಾರಾಳವಾಗಿ ಓಡಾಡುತ್ತಿರುವಾಗ, ಕೆಲವರಿಗಾದರೂ   ‘ಈ ಮಾರ್ಗದಲ್ಲಿ ನಡಿಗೆ ಬೇಕಿತ್ತಾ….ಬಸ್ಸೋ ಲಾರಿಯೋ ಹತ್ತಿದರಾಯಿತು’ಎಂಬ ಆಲೋಚನೆ ಬಂದಿದ್ದಂತೂ ನಿಜ. ಸೋಮೇಶ್ವರದಿಂದ ಆಗುಂಬೆಗೆ ಕೇವಲ 6 ಕಿ.ಮೀ ಅಂದಿದ್ದರು ಆಯೋಜಕರು. ಇರಲಿ, ಬಂದಿದ್ದೇ ಚಾರಣಕ್ಕೆ..ನಡೆಯೋಣ ಎಂದು ನಡೆಯಲಾರಂಭಿಸಿದೆವು.
ಸುಮಾರು ಒಂದು ಘಂಟೆ ನಿಧಾನವಾಗಿ ನಡೆದಾಗ ನಮಗೆ ಎದುರಾದುದು ಆಗುಂಬೆ  8 ಕಿ.ಮೀ ಎಂಬ ಮೈಲಿಗಲ್ಲು! ಆಗಲೇ ಮಧ್ಯಾಹ್ನ 1230 ಗಂಟೆ  ಆಗಿತ್ತು. ಆಗುಂಬೆಗೆ ಇನ್ನೂ 8 ಕಿ.ಮೀ ಇದೆಯೇ? ಹಾಗಾದರೆ ನಾವು ಇದುವರೆಗೆ ನಡೆದುದು ಎಷ್ಟಾಗಿರಬಹುದು ? ರಸ್ತೆಯಲ್ಲಿ ನಡೆಯುವುದು ಬೋರು….ಇತ್ಯಾದಿ ಅಸಹನೆಯ ಮಾತುಗಳು, ದಣಿವಿನ ಸಂಕೇತಗಳು ವ್ಯಕ್ತವಾದುವು.
“ಇಲ್ಲ, ಇನ್ನು ಸ್ವಲ್ಪ ಅಷ್ಟೆ….ಒಂದೂವರೆ ಘಂಟೆಗೆ ಆಗುಂಬೆ ತಲಪಿರುತ್ತೇವೆ” ಎಂದು ಹಿರಿಯ ಚಾರಣಿಗರಾದ ಗೋಪಮ್ಮ ಆಶ್ವಾಸನೆ ಕೊಟ್ಟರೂ ಮನಸ್ಸು ಹಿಂಜರಿಯಿತು. ನಮ್ಮ ಅದೃಷ್ಟಕ್ಕೆ ಮುಂದಿನ ಮೈಲಿಗಲ್ಲು ‘ಆಗುಂಬೆ 10  ಕಿ.ಮೀ’ ಎಂದು ತೋರಿಸಬೇಕೆ? ಯಾವ ಲೆಕ್ಕಾಚಾರದಲ್ಲಿಯಾದರೂ ಅದು ಹಿಂದಿನ  ದೂರಕ್ಕಿಂತ ಕಡಿಮೆ ಇರಬೇಕು, ಜಾಸ್ತಿಯಿರಲು ಸಾಧ್ಯವಿಲ್ಲ! ಇನ್ನು 5, 6, 7 ಕಿ.ಮೀ ಮೈಲಿಗಲ್ಲುಗಳು  ಯಾಕೋ ನಮಗೆ  ಕಾಣಿಸಲೇ ಇಲ್ಲ. ಇನ್ನು ನಡೆಯಲು  ಸಾಧ್ಯವಿಲ್ಲ, ಬಹಳಷ್ಟು ದಣಿವಾಗಬಹುದು ಎಂದು ಮುಖ್ಯವಾಗಿ  ನನಗೆ ಅನಿಸಿತು. ತಂಡದ ಇನ್ನಿಬ್ಬರು ಮಹಿಳೆಯರೂ ನನ್ನ ಅಭಿಪ್ರಾಯವನ್ನು ಅನುಮೋದಿಸಿದರು. ಆದರೆ ಗೋಪಮ್ಮ ಮಾತ್ರ, ತಾನು ನಡೆದೇ ಬರುತ್ತೇನೆ ಎಂದು ಘೋಷಿಸಿದರು. ಇನ್ನು ಕೆಲವರು ಹಿಂದಿನಿಂದ ಬರುತ್ತಿದ್ದರು.
agumbe viewpoint
ಸರಿ, ಹಿಂದಿನಿಂದ ಬಂದ ಲಾರಿ, ಬಸ್ಸುಗಳಿಗೆ ಕೈ ತೋರಿಸಲಾರಂಭಿದೆವು. ಒಬ್ಬರು ಲಾರಿಯವರು ನಿಲ್ಲಿಸಿದರು. ಲಾರಿ ಹತ್ತಿ ಕುಳಿತ್ತಿದ್ದಾಯಿತು. ಸ್ವಲ್ಪ ಮುಂದೆ ಹೋದಾಗ ತಂಡದ ಇನ್ನು ಕೆಲವರು ಲಾರಿಯಲ್ಲಿದ್ದ ನಮ್ಮನ್ನು ನೋಡಿ ತಾವೂ ಹತ್ತಿದರು. ಹೀಗೆ 3-4  ಬಾರಿ ಲಾರಿ ನಿಲ್ಲ್ಲಿಸಿ, ತಂಡದ 10-12 ಮಂದಿ ಜತೆಯಾಗಿ,ಹೆಚ್ಚೆಂದರೆ 2  ಕಿ.ಮೀ  ಪ್ರಯಾಣಿಸಿರಬಹುದು. ಆಗುಂಬೆ ಬಂದೇ ಬಿಟ್ಟಿತು! ಲಾರಿಯವರಿಗೆ ಧನ್ಯವಾದ ತಿಳಿಸಿ ಇಳಿದಿದ್ದಾಯಿತು. ನೋಡ ನೋಡುತ್ತಿರುವಷ್ಟರಲ್ಲಿ, ಲಾರಿ ಹತ್ತದ ಧೀರರು, ನಡೆದು ಬಂದೇ ಬಿಟ್ಟರು.
ಕೆಲವರು ನಮ್ಮನ್ನು ಉದ್ದೇಶಿಸಿ “ ಚಾರಣಕ್ಕೆಂದು  ಬಂದ ಮೇಲೆ ಲಾರಿ ಹತ್ತುವುದು ಎಷ್ಟು ಸರಿ……” ಎಂದು ಕಾಲೆಳೆದರು. “ಆ ಮೈಲಿಗಲ್ಲು ತಪ್ಪು ದೂರ ತೋರಿಸುತ್ತಿತ್ತು….ಕೆಲವು ಮೈಲಿಗಲ್ಲುಗಳು ಇರಲೇ ಇಲ್ಲ..ತುಂಬಾ ಲೇಟ್ ಆಗುತ್ತೆ ಅಂದ್ಕೊಂಡ್ವಿ….” ಇತ್ಯಾದಿ ಸಮರ್ಥನೆಗಳನ್ನು ಕೊಟ್ಟುದಾಯಿತು.
Lorry
ಸಾಮಾನ್ಯವಾಗಿ ನಿಧಾನವಾಗಿ ನಡೆಯುವ ‘ಸುಸ್ತಮ್ಮ ಬ್ರ್ಯಾಂಡ್’ ಪಡೆದಿದ್ದ ನನಗೆ ಇದರಿಂದಾಗಿ ಏನೂ ಅವಮಾನವೂ, ತುಂಬಲಾರದ ನಷ್ಟವೂ ಆಗಲಿಲ್ಲ.  ಆದರೆ, ಬಹಳ ಕ್ಲಿಷ್ಟಕರವಾದ ಹಲವಾರು ಚಾರಣಗಳನ್ನು ಪ್ರತಿಕೂಲ ಹವೆಯಲ್ಲಿಯೂ ಯಶಸ್ವಿಯಾಗಿ ಪೂರೈಸಿ, ತಾರಾಮೌಲ್ಯ ಗಿಟ್ಟಿಸಿಕೊಂಡಿದ್ದ  ನಮ್ಮ ತಂಡದ ಕೆಲವು ಹೆಮ್ಮೆಯ  ಕಣ್ಮಣಿಗಳೂ  ಈ  ಗುಂಪಿನಲ್ಲಿ ಗೋವಿಂದ ಎಂಬಂತೆ ಲಾರಿ ಹತ್ತಿದ್ದು ಅವರಿಗೆ ಇರುಸು ಮುರಿಸಾಯಿತು.
ಎಂತೆಂತಹ ಚಾರಣವನ್ನು ಮಾಡಿದ ತಮಗೆ ಈ ಆಗುಂಬೆ ಘಾಟಿಯಲ್ಲಿ, ಅದೂ 2 ಕಿ.ಮೀ ಗೋಸ್ಕರ   ಲಾರಿ ಹತ್ತಿ,  ‘ಅಡಿಕೆಗೆ’  ಹೋದ ಮಾನವನ್ನು ಮರಳಿ ಪಡೆಯಲು ಎಷ್ಟು ‘ಆನೆಗಳನ್ನು’ ತೆರಬೇಕೋ ಎಂದು ಚಿಂತಾಕ್ರಾಂತರಾಗಿ, ದಾರಿ/ದೂರ ತಪ್ಪಿಸಿದ ಮೈಲಿಗಲ್ಲನ್ನೂ, ಸಂಬಂಧಿತ ವ್ಯವಸ್ಥೆಯನ್ನೂ, ಅದರಿಂದಾಗಿ  ಲಾರಿ ಹತ್ತಲು ಕಾರಣರಾದ ನಮ್ಮನ್ನೂ ಮನದಲ್ಲಿಯೇ ಬೈದರು.

-ಹೇಮಮಾಲಾ.ಬಿ
  

ಮಾಲ್ಗುಡಿ ಡೇಸ್ ನ ದೊಡ್ಡಮನೆ

 
ಧಾನ್ ಧಾನ್ ಮೇ ಲಿಖಾ ಹೆ ಖಾನೇವಾಲಾ ಕಾ ನಾಮ್ ಎನ್ನುತ್ತದೆ ಹಿಂದಿ ಗಾದೆಯೊಂದು. ನವೆಂಬರ್ 8, 2014 ರಂದು ನಮಗೆ ಮಧ್ಯಾಹ್ನದ ಊಟ  ‘ಆಗುಂಬೆಯ ದೊಡ್ಡಮನೆ’ ಯ ಧಾನ್ಯಗಳಲ್ಲಿ ಬರೆದಿತ್ತು!
Agumbe doddamane lunch 08112014
ಇದು ಆಗುಂಬೆಯಲ್ಲಿರುವ ದೊಡ್ಡಮನೆ. 1986 ರಲ್ಲಿ,  ಶಂಕರನಾಗ್ ಅವರ ನಿರ್ದೇಶನದಲ್ಲಿ ನಿರ್ಮಾಣವಾದ  ಪ್ರಸಿದ್ಧ ‘ಮಾಲ್ಗುಡಿ ಡೇಸ್‘ ಧಾರಾವಾಹಿಯ ಕೆಲವು ಭಾಗಗಳನ್ನು ಇಲ್ಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು 150  ವರ್ಷ ಹಿಂದೆ ಕಟ್ಟಲ್ಪಟ್ಟ ಬಹಳ ವಿಶಾಲವಾದ ತೊಟ್ಟಿಮನೆಯು ಈಗಲೂ ದೃಢವಾಗಿದೆ.  ಕುಸುರಿ ಕೆಲಸವುಳ್ಳ ಬಾಗಿಲುಗಳು, ಕಂಭಗಳು, ಪಾತ್ರೆಪರಡಿಗಳು, ದೇವರ ಮನೆಯ ಮುಂದಿ ಬಿಡಿಸಿದ ರಂಗೋಲಿ ಇವಲ್ಲಾ ಮಲೆನಾಡಿನ ಸಂಪ್ರದಾಯಗಳನ್ನು ಸೂಚಿಸುತ್ತವೆ.

Agumbe doddamane devrakoneAgumbe doddamane YH team 08 nov 14








ಇನ್ನು ಮನೆಮಂದಿಯೆಲ್ಲಾ ಸೇರಿ, ಮಲೆನಾಡಿನ ವಿಶೇಷ ಅಡಿಗೆ ತಯಾರಿಸಿ,  ಆದರದಿಂದ ಬಡಿಸುವ ಪರಿ…ವಾವ್.. ವರ್ಣಿಸಲಸಾಧ್ಯ! ಅನ್ನದಾತ ಸುಖೀಭವ!
ಮೈಸೂರಿನ ಯೈ.ಚ್.ಎ.ಐ. ತಂಡದ ಶ್ರೀ ಅನಂತ ದೇಶಪಾಂಡೆ ಮತ್ತು ಶ್ರೀ ಗಣಪಯ್ಯ ಅವರು ಆಯೋಜಿಸಿದ್ದ  ‘ಕವಲೇದುರ್ಗ ಮತ್ತು ಕುಂದಾದ್ರಿ’ ಬೆಟ್ಟಗಳ ಚಾರಣ ಕಾರ್ಯಕ್ರಮದ ಅಂಗವಾಗಿ, ದಾರಿಯಲ್ಲಿ ಸಿಗುವ ಆಗುಂಬೆಯ ಈ ‘ದೊಡ್ಡಮನೆಯ ಊಟ’ ನಮಗೆ ಬೋನಸ್ ಆಗಿ ಲಭಿಸಿತ್ತು.

– ಹೇಮಮಾಲಾ.ಬಿ


  

ಕುಪ್ಪಳಿ-ಕವಿಮನೆ-ಕವಿಶೈಲ

ನವೆಂಬರ್ 07-08, 2014 ರಂದು, ಮೈಸೂರಿನ ಯೈ. ಎಚ್.ಎ.ಐ ತಂಡದವರು , ಶಿವಮೊಗ್ಗ ಜಿಲ್ಲೆಯಲ್ಲಿರುವ ಕವಲೇದುರ್ಗ ಮತ್ತು ಕುಂದಾದ್ರಿ ಬೆಟ್ಟಕ್ಕೆ ಚಾರಣ ಕಾರ್ಯಕ್ರಮವನ್ನು ಅಯೋಜಿಸಿದ್ದರು. ತಂಡದ ಎಲ್ಲರೂ ಅತ್ಯಂತ ಯಶಸ್ವಿಯಾಗಿ ಚಾರಣವನ್ನು ಪೂರೈಸಿದ ಬಳಿಕ, ನಮ್ಮ ಕಾರ್ಯಕ್ರಮದ ಆಯೋಜಕರು, ಚಾರಣದ ಜತೆಗೆ ಸಿಹಿಹೂರಣವಾಗಿ,  ಅನಿರೀಕ್ಷಿತವಾಗಿ “ಊಟದ  ನಂತರ ನಾವು ‘ಕುಪ್ಪಳಿ’ಗೆ ಹೋಗಲಿರುವೆವು..ನಿಮಗೆ ಇದು ಬೋನಸ್ “ ಅಂದಾಗ ನಮಗೆ   ಕುಪ್ಪಳಿಸುವಷ್ಟು ಸಡಗರವಾಯಿತು.
ಕುಪ್ಪಳಿಯು ಶಿವಮೊಗ್ಗದಿಂದ 80 ಕಿ.ಮೀ ದೂರದಲ್ಲಿದೆ ಹಾಗೂ ತೀರ್ಥಹಳ್ಳಿಯಿಂದ 10 ಕಿ.ಮೀ ದೂರದಲ್ಲಿದೆ.
Kupplai house
ಕುಪ್ಪಳಿಯಲ್ಲಿ  ರಾಷ್ಟ್ರಕವಿ ಕುವೆಂಪುರವರ ಮನೆಯ ಮೂಲ ಸ್ವರೂಪವನ್ನು ಕಾಯ್ದುಕೊಂಡು ನವೀಕರಿಸಿ ಮ್ಯೂಸಿಯಮ್ ಆಗಿ ಪರಿವರ್ತಿಸಿಲಾಗಿದೆ. ವಿಶಾಲವಾದ ಅಂಗಳದ ಮಧ್ಯೆ ಕಂಗೊಳಿಸುವ ‘ಕವಿಮನೆ’ ಅದೆಷ್ಟು ಸೊಗಸು! ‘ಬಾಗಿಲೊಳು ಕೈಮುಗಿದು ಒಳಹೊಕ್ಕೊಡನೆ ಯಾತ್ರಿಕನಿಗೆ ಕಾಣಿಸುವ ದೊಡ್ಡದಾದ ಎರಡು ಮಹಡಿಯುಳ್ಳ ತೊಟ್ಟಿ ಮನೆ, ಕುಸುರಿ ಕೆಲಸದ ಕಂಭಗಳು,  ಕಲಾತ್ಮಕ ಬಾಗಿಲುಗಳು, ಆಗಿನ ಕಾಲದಲ್ಲಿ ಬಳಸುತ್ತಿದ್ದ ಅಡುಗೆ ಪರಿಕರಗಳು, ಕುವೆಂಪು ಅವರ ಜೀವನದ ಪ್ರಮುಖ ಘಟ್ಟಗಳನ್ನು ಬಿಂಬಿಸುವ ಹಲವಾರು ವಸ್ತುಗಳು, ಛಾಯಾಚಿತ್ರಗಳು,  ಕುವೆಂಪು ಅವರ ನೂರಾರು ಕೃತಿಗಳು, ಅವರಿಗೆ ಲಭಿಸಿದ ಪ್ರಶಸ್ತಿ -ಪುರಸ್ಕಾರಗಳು …..ಇತ್ಯಾದಿ.
Kupplai- Nanna mane poem

‘ಕವಿಮನೆ’ಯಿಂದ ಅನತಿ ದೂರದಲ್ಲಿ, ಕುವೆಂಪುರವರಿಗೆ  ಸ್ಫೂರ್ತಿಸೆಲೆಯಾಗಿದ್ದ  ಕವಿಶೈಲವಿದೆ.  ಕಲ್ಲುಗಳನ್ನು ನಿರ್ಧಿಷ್ಟ ವಿನ್ಯಾಸದಲ್ಲಿ  ಜೋಡಿಸಿ  ಇಲ್ಲಿ ಶಿಲಾಸ್ಮಾರಕವನ್ನು ನಿರ್ಮಿಸಿದ್ದಾರೆ. ಪಕ್ಕದಲ್ಲಿ ಕುವೆಂಪುರವರ ಸಮಾಧಿಯೂ ಇದೆ.  ನಮ್ಮ ತಂಡದ ಶ್ರೀ ವೈದ್ಯನಾಥನ್  ಮತ್ತು ಶ್ರೀ ದಾಮೋದರ ಕಿಣಿ ಅವರ ನೇತೃತ್ವದಲ್ಲಿ ಕುವೆಂಪುರವರು ರಚಿಸಿದ ಹಲವು ಗೀತೆಗಳನ್ನು ಹಾಡಿದೆವು. ಕುವೆಂಪುರವರ ಪುತ್ರರಾದ ಮೇರುಪ್ರತಿಭೆಯ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರನ್ನೂ ಸ್ಮರಿಸಿದೆವು.   ಇವರೀರ್ವರಿಗೂ ನುಡಿನಮನ-ರಾಗನಮನ-ಭಾವನಮನ ಸಲ್ಲಿಸಿ ಅಲ್ಲಿಂದ ಹೊರಟೆವು.

Kavishaila1
ಕವಿಶೈಲ





Our Team at Kavishaila- Kuppali
ಕವಿಶೈಲದಲ್ಲಿ ಯೈ.ಎಚ್.ಎ.ಐ ತಂಡ







 ಕವಿಶೈಲದಿಂದ ಸ್ವಲ್ಪ ದೂರದಲ್ಲಿಯೇ,  ಪೂರ್ಣಚಂದ್ರ ತೇಜಸ್ವಿಯವರ ಸಮಾಧಿ ಇದೆ. ಅಲ್ಲಿಗೂ ಭೇಟಿ ಕೊಟ್ಟು ಧನ್ಯತಾ ಭಾವದಿಂದ ಕುಪ್ಪಳಿಯಿಂದ ಮೈಸೂರಿಗೆ ಮರಳಿದೆವು.

– ಹೇಮಮಾಲಾ.ಬಿ
  

 in ಪಯಣ. Tags: 

Sunday, December 7, 2014

ಯಾಗಂಟಿ-ಅಹೋಬಲ-ಬೆಲಂ ಕೇವ್ಸ್-ಭಾಗ 3

ನವನಾರಸಿಂಹರ ದರ್ಶನ ಮಾಡಿ ಛತ್ರಕ್ಕೆ ವಾಪಸ್ಸಾಗಿ ಊಟ ಮುಗಿಸಿ, ಅಲ್ಲಿನ ಅತಿಥೇಯರಿಗೆ ವಂದಿಸಿ ಬೆಲಂ ಕೇವ್ಸ್ ಕಡೆಗೆ ಹೊರಡಲು ಜೀಪನ್ನು ಏರಿದೆವು. ಅದು ಉತ್ತಮವಾದ ಮಾರ್ಗವಾಗಿತ್ತು. ದಾರಿಯಲ್ಲಿ ಕರ್ನೂಲ್ ನವಾಬರ ಅರಮನೆ ಮುಂದೆ ಫೋಟೊ ಕ್ಲಿಕ್ಕಿಸಿದೆವು. ಅಲ್ಲಿ ಈಗ ಯಾರೂ ವಾಸವಿಲ್ಲ.
Team Balam Caves

ಸುಮಾರು ಎರಡು ಗಂಟೆ ಪ್ರಯಾಣಿಸಿ, ಬೆಲಂ ಕೇವ್ಸ್ ತಲಪಿದೆವು. ‘ಬೆಲಂ ಕೇವ್ಸ್’ ಎಂಬ ನೈಸರ್ಗಿಕ ಗುಹೆಗಳು, ಅಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿವೆ. ಗುಹೆಗಳು ಸುಮಾರು 3.5 ಕಿ.ಮೀ ಉದ್ದವಿದ್ದು, ಭಾರತದಲ್ಲಿ ಎರಡನೆಯ ಸ್ಥಾನದಲ್ಲಿದೆ. ನೀರು ಮತ್ತು ಸುಣ್ಣದಕಲ್ಲಿನ ರಾಸಾಯನಿಕ ಪ್ರಕ್ರಿಯೆಯಿಂದ ನೈಸರ್ಗಿಕವಾಗಿ ಉಂಟಾಗುವ stalactite ಮತ್ತು stalagmite ಎಂಬ ಶಿಲಾರಚನೆಗಳನ್ನು ಹೊಂದಿದ ಈ ಗುಹೆಯನ್ನು ಉತ್ತಮ ಪ್ರವಾಸಿತಾಣವಾಗಿ ಆಧುನಿಕೀಕರಿಸಿದ್ದಾರೆ.
Buddha belam caves‘ಬೆಲಂ ಕೇವ್ಸ್’ ನ ಮುಖ್ಯದ್ವಾರದ ಶಾಂತಮೂರ್ತಿಯಾದ ಬುದ್ಧನ ಈ ಸುಂದರ ಪ್ರತಿಮೆ ಇದೆ. ಸಹಸ್ರಾರು ವರ್ಷಗಳ ಹಿಂದೆ ನೈಸರ್ಗಿಕವಾಗಿ ನಿರ್ಮಾಣಗೊಂಡ ಈ ಗುಹೆಯಲ್ಲಿ ಬೌದ್ಧ ಸನ್ಯಾಸಿಗಳು ವಾಸಿಸುತ್ತಿದ್ದರಂತೆ.ಹಾಗಾಗಿ ಗುಹೆಯ ಮುಖ್ಯದ್ವಾರದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಈ ಗುಹೆಯು ಕೆಲವು ಕಡೆ ಸಬ್ ವೇ ಯಂತೆ ಅಗಲವಾಗಿದ್ದರೆ, ಇನ್ನು ಕೆಲವು ಕಡೆ ತೆವಳಿಕೊಂಡು ಹೋಗುವಷ್ಟು ಕಿರಿದಾಗಿದೆ. ಭೀಮನ ಗಧೆ. ಮೊಸಳೆ, ಆನೆ, ಶಿವಲಿಂಗ, ಶಿರಡಿ ಬಾಬಾ , ಆಲದ ಮರ ಇತ್ಯಾದಿ ನಮ್ಮ ಕಲ್ಪನೆಯ ವಸ್ತು/ವ್ಯಕ್ತಿಗಳನ್ನು ಹೋಲುವ ಆಕಾರಗಳಿವೆ.  ಗುಹೆಯಲ್ಲಿ ಗಾಳಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಮಾಡಿರುವುದರಿಂದ ಕ್ಷೇಮವಾಗಿ ಹೋಗಿ ಬರಬಹುದು. ಗುಹೆಯು ಕೆಲವು ಕಡೆ 120 ಅಡಿಯಷ್ಟು ಭೂಗರ್ಭದಲ್ಲಿದೆ.
ನಮ್ಮ ಗೈಡ್ ಹೇಳಿದ ಪ್ರಕಾರ ಬಹಳ ಹಿಂದೆ ಇಲ್ಲಿ ಚಿತ್ರಾವತಿ ಎಂಬ ನದಿ ಹರಿಯುತ್ತಿತ್ತಂತೆ. ಈಗ ನದಿ ಬತ್ತಿ ಹೋಗಿ ಇಲ್ಲಿ ಕೃಷಿಭೂಮಿ ಸೃಷ್ಟಿಯಾಗಿದೆ. ಹನಿಯಾಗಿ ಭೂಮಿಗಿಳಿದ ಅಂತರ್ಜಲವು ಇಲ್ಲಿನ ಸುಣ್ಣಕಲ್ಲಿನೊಂದಿಗೆ ರಾಸಾಯನಿಕವಾಗಿ ವರ್ತಿಸಿ, ಮಿಲಿಯಾಂತರ ವರ್ಷಗಳಲ್ಲಿ ಈಗ ನಮಗೆ ಕಾಣಿಸುವ ಗುಹೆಯಾಗಿ ರೂಪುಗೊಂಡಿದೆ.

Belam caves 1




Belam caves2






DSC05592







ಬೆಲಂ ಕೇವ್ಸ್ ಅನ್ನು ನೋಡಿ, ಹೊರಗಡೆ ಬಂದು, ಐಸ್ ಕ್ರೀಮ್ ತಿಂದು, ಗುತ್ತಿ ರೈಲ್ವೇಸ್ಟೇಷನ್ ಗೆ   ಹೋಗಲೆಂದು ಪುನ: ಜೀಪ್ ಏರಿದೆವು. ದಾರಿಯಲ್ಲಿ ಎದುರಾದ ‘ತಾಡಪತ್ರಿ’ ಊರಲ್ಲಿ  ‘ಬುಗ್ಗ ರಾಮಲಿಂಗೇಶ್ವರ ದೇವಾಲಯ’ಕ್ಕೂ ಭೇಟಿ ಕೊಟ್ಟೆವು.  ಇಲ್ಲಿನ ಸ್ಥಳಪುರಾಣದ ಪ್ರಕಾರ,  ಲಕ್ಷ್ಮಣನು ತಾಟಕಿಯನ್ನು ಕೊಂದ ಮೇಲೆ ಸ್ತ್ರೀಹತ್ಯಾ ಪರಿಹಾರಾರ್ಥವಾಗಿ ಈಶ್ವರನನ್ನು ಪೂಜಿಸಿದನು. ಅವನಿಗೆ ಪೂಜಿಸಲೆಂದು ಸ್ವತ: ಶ್ರೀರಾಮನೇ ಈ ಸ್ಥಳದಲ್ಲಿ ಶಿವಲಿಂಗವನ್ನು ಪ್ರತಿಸ್ಠಾಪಿಸಿದನು. ಆ ಸಂದರ್ಭದಲ್ಲಿ, ಶಿವಲಿಂಗದ ಸಮೀಪ ನೀರಿನ ಬುಗ್ಗೆಯೊಂದು ಹುಟ್ಟಿ ಬಂತು. ಹಾಗಾಗಿ ಈ ಕ್ಷೇತ್ರಕ್ಕೆ ಬುಗ್ಗರಾಮಲಿಂಗೇಶ್ವರ ಎಂದು ಹೆಸರು. ಗರ್ಭಗುಡಿಯಲ್ಲಿ ಶಿವಲಿಂಗದ ಪಕ್ಕ ನೀರಿನ ಸೆಲೆಯನ್ನು ಈಗಲೂ ಇದೆ.
Varaaha lanchanaಬಹಳ ಸುಂದರವಾದ ವಾಸ್ತುಶಿಲ್ಪಗಳಿಂದ ಕೂಡಿದ ಈ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ಕಟ್ಟಲಾಯಿತು. ವಿಜಯನಗರದ ವೈಭವದ ಕಾಲದಲ್ಲಿ, ಅವರು ಕಟ್ಟಿಸಿದ ಎಲ್ಲಾ ದೇವಾಲಯಗಳಲ್ಲಿಯೂ ರಾಜಲಾಂಛನವಾದ ‘ವರಾಹ′ ವನ್ನು ಕೆತ್ತುತ್ತಿದ್ದರಂತೆ. ಈ ಲಾಂಛನದಲ್ಲಿ ವರಾಹವು ಖಡ್ಗ, ಸೂರ್ಯ ಮತ್ತು ಚಂದ್ರರನ್ನು ನೋಡುತ್ತಿರುವಂತೆ ಕೆತ್ತಲಾಗಿದೆ,. ತಾಡಪತ್ರಿ  ‘ಬುಗ್ಗ ರಾಮಲಿಂಗೇಶ್ವರ ದೇವಾಲಯ’ದ ಮುಖ್ಯದ್ವಾರದ ಗೋಡೆಯಲ್ಲಿ ವರಾಹ ಲಾಂಛನವಿದೆ.


ಅಲ್ಲಿಂದ ಮುಂದುವರಿದು, ಹೋಟೆಲ್ ಒಂದರಲ್ಲಿ ಊಟ ಮುಗಿಸಿ, ಗುತ್ತಿ ರೈಲ್ವೇ ಸ್ಟೇಷನ್ ತಲಪಿದೆವು. ರಾತ್ರಿ 1130 ಗಂಟೆಗೆ ಬಂದ ರೈಲು ನಮ್ಮನ್ನು ಮರುದಿನ, ಸೆಪ್ಟೆಂಬರ್ 21 ರಂದು ಬೆಳಗ್ಗೆ ಮೈಸೂರು ಸೇರಿಸಿತು. ಹೀಗೆ ಒಟ್ಟಾರೆಯಾಗಿ ಎರಡು ದಿನದ ಈ ಕಾರ್ಯಕ್ರಮದಲ್ಲಿ, ಯಾಗಂಟಿ, ಅಹೋಬಲ ಮತ್ತು ಬೆಲಂ ಕೇವ್ಸ್ ಗಳಿಗೆ ಭೇಟಿ ಕೊಟ್ಟು 12 ಕ್ಕೂ ಹೆಚ್ಚು ದೇವಾಲಯಗಳನ್ನು ಸಂದರ್ಶಿಸಿದೆವು. ಕಾಡು ದಾರಿಯಲ್ಲಿ ಚಾರಣವನ್ನೂ ಮಾಡಿ, ಐತಿಹಾಸಿಕ ತಾಣಗಳನ್ನೂ ನೋಡಿ ಭೂಗರ್ಭದೊಳಗೂ ಫ್ಲಾಷ್ ವಿಸಿಟ್ ಕೊಟ್ಟು ಬಂದೆವು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅಯೋಜಿಸಿದ ಮೈಸೂರಿನ ಯೈ.ಎಚ್.ಎ.ಐ ತಂಡದ ಶ್ರೀ ನಾಗೆಂದ್ರಪ್ರಸಾದ್ ಹಾಗೂ ಶ್ರೀ ವೈದ್ಯನಾಥನ್ ಅವರಿಗೆ ಅನಂತ ಧನ್ಯವಾದಗಳು.
ಹಿಂದಿನ ಭಾಗಗಳನ್ನು ಓದಲು ಕೊಂಡಿಯನ್ನು ಕ್ಲಿಕ್ಕಿಸಿ:


– ಹೇಮಮಾಲಾ.ಬಿ. ಮೈಸೂರು


  

ಯಾಗಂಟಿ-ಅಹೋಬಲ-ಬೆಲಂ ಕೇವ್ಸ್-ಭಾಗ 2

ನವನಾರಸಿಂಹರಿಗೆ ನಮೋ ನಮ:

ಯಾಗಂಟಿಯಿಂದ ಹೊರಟ ನಾವು ಅಹೋಬಲ ತಲಪುವಾಗ ಮಧ್ಯಾಹ್ನ ಊಟದ ಸಮಯವಾಗಿತ್ತು. ಅಲ್ಲಿನ ಛತ್ರವೊಂದರಲ್ಲಿ ನಮ್ಮ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಛತ್ರ ತಲಪಿ ಊಟ ಮುಗಿಸಿ, ಸ್ವಲ್ಪ ವಿರಮಿಸಿ ಮುಂದಿನ ಪಯಣಕ್ಕೆ ಸಿದ್ಧರಾದೆವು.ಅಹೋಬಲ ಕ್ಷೇತ್ರವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಇಲ್ಲಿ ಕೆಳಗಿನ ಅಹೋಬಲ ( ದಿಗುವ ಅಹೋಬಿಲಂ) ಮತ್ತು ಮೇಲಿನ ಅಹೋಬಲ (ಎಗುವ ಅಹೋಬಿಲಂ) ಎಂಬ ಎರಡು ಪ್ರಸಿದ್ಧ ದೇವಾಲಯಗಳಿವೆ. ಕೆಳಗಿನ ಅಹೋಬಲದಲ್ಲಿ ಮೂಲ ವಿಗ್ರಹವನ್ನು ಚಾಲುಕ್ಯ ದೊರೆಯಾದ ವಿಕ್ರಮಾದಿತ್ಯನು ಪೂಜಿಸಿದ್ದನಂತೆ. ವಿಸ್ತಾರವಾದ ಈ ದೇವಾಲಯಗಳು ಅದ್ಭುತವಾದ ಶಿಲ್ಪಕಲೆಯನ್ನೂ ಹೊಂದಿದೆ.

Upper Ahobala
ಮೇಲಿನ ಅಹೋಬಲ
Lower Ahobalam.jpg
ಕೆಳಗಿನ ಅಹೋಬಲ








ಇವಲ್ಲದೆ ನವಗ್ರಹಗಳಿಂದಲೇ ಆರಾಧಿಸಲ್ಪಟ್ಟ ನವನಾರಸಿಂಹ ಮೂರ್ತಿಗಳ ದೇವಾಲಯಗಳು ಹೀಗಿವೆ:
  1. Malaola Narasimha
    ಮಾಲೋಲ ನರಸಿಂಹನ ಗುಡಿ
    ಯೋಗಮುದ್ರೆಯಲ್ಲಿದ್ದು ಅಸುರನ ಸಂಹಾರಕ್ಕಾಗಿ ಸಮಯ ಕಾಯುತ್ತಿದ್ದ ಯೋಗಾನಂದ ನರಸಿಂಹ – ಶನಿ ಗ್ರಹದ ಅಧಿದೇವತೆ
  2. ಭಕ್ತ ಪ್ರಹ್ಲಾದನ ರಕ್ಷಣೆಗಾಗಿ ಜ್ವಾಲಾಮುಖಿಯಂತೆ ಸ್ಫೋಟಿಸಿ ಪ್ರತ್ಯಕ್ಷನಾದ ಜ್ವಾಲಾ ನರಸಿಂಹ -ಮಂಗಳಗ್ರಹದ ಅಧಿದೇವತೆ
  3. ರಕ್ಕಸನ ಒಡಲನ್ನು ಬಗೆದರೂ ಆರದ ಕೋಪದ ಮೂರ್ತಿ ಅಹೋಬಲ ನರಸಿಂಹ- ಗುರುವಿನ ಅಧಿದೇವತೆ.
  4. ಲಕ್ಷ್ಮಿಯೊಂದಿಗೆ ಕಂಗೊಳಿಸುವ ಮಾಲೋಲ ನರಸಿಂಹ- ಶುಕ್ರ ಗ್ರಹದ ಅಧಿದೇವತೆ.
  5. ವೇದಗಳನ್ನು ಉದ್ಧರಿಸಿದ ವರಾಹ ನರಸಿಂಹ -ರಾಹುಗ್ರಹದ ಅಧಿದೇವತೆ.
  6. ಆಂಜನೇಯನಿಗೆ ರಾಮನಾಗಿ ಕಂಡ ಕಾರಂಜ ನರಸಿಂಹ-ಚಂದ್ರಗ್ರಹದ ಅಧಿದೇವತೆ
  7. ವಟವೃಕ್ಷದ ಕೆಳಗೆ ಸಂಗೀತವನ್ನು ಆಲಿಸುತ್ತಾ ಕುಳಿತ ಛತ್ರವಟ ನರಸಿಂಹ- ಕೇತುಗ್ರಹದ ಅಧಿದೇವತೆ
  8. ಭಾರ್ಗವ ರಾಮ ಕಂಡ ಭಾರ್ಗವ ನರಸಿಂಹ- ಸೂರ್ಯನ ಅಧಿದೇವತೆ
  9. ಭಾರದ್ವಾಜರಿಂದ ಪಾಪನಿವಾರಣೆಗಾಗಿ ಪೂಜಿಸಲ್ಪಟ್ಟ ಪಾವನ ನರಸಿಂಹ- ಬುಧನ ಅಧಿದೇವತೆ

Ugra stambham at Jvala Ahobala
ಹಿರಣ್ಯಕಶಿಪುವಿನ ಅರಮನೆಯ ಉಗ್ರಸ್ತಂಭ
ಸ್ಥಳಪುರಾಣದ ಪ್ರಕಾರ ಮಹಾವಿಷ್ಣುವು ಹಿರಣ್ಯಕಶಿಪುವನ್ನು ಕೊಂದು ಬಾಲಕ ಪ್ರಹ್ಲಾದನನ್ನು ಹರಸಿದ ಕ್ಷೇತ್ರವಿದು. ಹಿರಣ್ಯಕಶಿಪುವಿಗೆ ಹರಿಯ ಹೆಸರು ಕೇಳಿದರಾಗದು. ಆತನ ಮಗನಾದ ಪ್ರಹ್ಲಾದನು‘ಅಣುರೇಣು ತೃಣಕಾಷ್ಠಗಳಲ್ಲಿಯೂ ಶ್ರೀಹರಿ ಇದ್ದಾನೆ ಎಂದು ಹೇಳಲು ಕೋಪಾವಿಷ್ಟನಾದ ಹಿರಣ್ಯಕಶಿಪುವು ‘ನಿನ್ನ ಹರಿ ನಿಜವಾಗಿಯೂ ಎಲ್ಲೆಲ್ಲೂ ಇದ್ದರೆ ಈ ಕಂಬದಲ್ಲೂ ಇರಬೇಕು, ಅವನೇ ಬಂದು ನಿನ್ನನ್ನು ಕಾಪಾಡಲಿ ಎಂದು ಕೋಪದಿಂದ ಆರ್ಭಟಿಸಿದ. ಭಕ್ತ ಪ್ರಹ್ಲಾದನ ರಕ್ಷಣೆಗಾಗಿ ಜ್ವಾಲಾಮುಖಿಯಂತೆ ಕಂಬದಿಂದ ಹೊರಬಂದ ಉಗ್ರನರಸಿಂಹನೇ ‘ಜ್ವಾಲಾನರಸಿಂಹ ಸ್ವಾಮಿ’. ಇಲ್ಲಿ ಹಿಂದೆ ಹಿರಣ್ಯಕಶಿಪುವಿನ ಅರಮನೆ ಇತ್ತಂತೆ. ಅವನ ಅರಮನೆಯ ಕಂಬವನ್ನು ನರಸಿಂಹಸ್ವಾಮಿಯು ಸೀಳಿ ಬಂದುದಕ್ಕೆ ಪುರಾವೆಯೋ ಎಂಬಂತೆ ಈಗಲೂ ಅಲ್ಲಿ ದೈತ್ಯಾಕಾರದ ಕಂಬವೊಂದಿದೆ. ಇದನ್ನು ಉಗ್ರಸ್ತಂಭವೆಂದು ಕರೆಯಲಾಗುತ್ತದೆ.
ಕೆಳಗಿನ ಅಹೋಬಲದಿಂದ ಸುಮಾರು 8  ಕಿ.ಮೀ ದೂರದಲ್ಲಿ ಮೇಲಿನ ಅಹೋಬಲ ದೇವಸ್ಥಾನವಿದೆ. ಇಲ್ಲಿಗೆ ತಲಪಲು ವಾಹನ ಸೌಕರ್ಯವಿದೆ. ಈ ದೇವಸ್ಥಾನವೂ ಬಹಳ ಸೊಗಸಾಗಿದೆ. ಆದರೆ ನವನಾರಸಿಂಹ ದೇವಾಲಯಗಳಲ್ಲಿ ಕೆಲವು ರಸ್ತೆ ಸಂಪರ್ಕ ಹೊಂದಿವೆ. ಇನ್ನು ಕೆಲವನ್ನು ತಲಪಲು ಕಾಡಿನದಾರಿಯಲ್ಲಿ ಚಾರಣ ಮಾಡಬೇಕು. ಇನ್ನು ನಾವು ಜೀಪಿನಲ್ಲಿ ಅತ್ಯಂತ ಕಡಿದಾದ ದಾರಿಯಲ್ಲಿ ಪ್ರಯಾಣಿಸಬೇಕು. ಬೆನ್ನುನೋವು, ಮಂಡಿನೋವು ಇರುವವರು ಹುಷಾರಾಗಿರಿ’ ಅಂದಿದ್ದರು ಅಯೋಜಕರು. ಜೀಪಿನಲ್ಲಿ ಹೊರಟ ನಮಗೆ ಅದರ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅಹೋಬಲದಿಂದ ಸುಮಾರು 3  ಕಿ.ಮೀ ಮುಂದೆ ನಲ್ಲಮಲ ಅರಣ್ಯ ವ್ಯಾಪ್ತಿಯಲ್ಲಿ ಹೋಗುತ್ತಿರುವಾಗ ಅದೇಕೋ ನಮ್ಮ ಜೀಪು ಕೆಟ್ಟು ಕೂತಿತು. ಇನ್ನೊಂದು ಜೀಪನ್ನು ಕರೆತಂದು ಹೊರಟಿದ್ದಾಯಿತು.
Jeepdriveಅದು ಕಾಡಿನ ಮಧ್ಯೆ ಇದ್ದ ಕಚ್ಚಾ ರಸ್ತೆ. ಅಲ್ಲಲ್ಲಿ ಮೇಯುತ್ತಿರುವ ಕೆಲವು ಹಸುಗಳನ್ನು ಕಂಡೆವು. ಜನವಸತಿ ಇಲ್ಲವೇ ಇಲ್ಲ ಅನ್ನುವಂತಿತ್ತು. ರಸ್ತೆಯ ಏರು ತಗ್ಗುಗಳಲ್ಲಿ ಮಳೆಯ ನೀರು ಸೇರಿ ರಸ್ತೆ ಕಂಬಳದ ಗದ್ದೆಯಂತಾಗಿತ್ತು. ಎಡಕ್ಕೂ ಬಲಕ್ಕೂ ವಾಲುತ್ತಾ ಸಾಗಿತು ನಮ್ಮ ಜೀಪು. ಅಲ್ಲಲ್ಲಿ ತಿರುವುಗಳು, ಕಲ್ಲು ಕೊಟರೆಗಳು, ಅಡ್ಡವಾಗುವ ಮರದ ದೊಡ್ಡ ಬೇರುಗಳು. ಎದುರುಗಡೆಯಿಂದ ಇನ್ನೊಂದು ಜೀಪು ಬಂದಾಗ  ದಾರಿ ಬಿಟ್ಟು ಕೊಡಲು ನಮ್ಮ ಜೀಪು ಪಡಬೇಕಿತ್ತು. ಒಟ್ಟಾರೆಯಾಗಿ, ಈ ಪಯಣಕ್ಕೆ ಜೀಪೇ ಸರಿ. ಸೋರುವ ಮಾಳಿಗೆ ಇದ್ದರೂ, ತುಕ್ಕು ಹಿಡಿದ ಜೀಪು ಆದರೂ ಅದರ ಕಾರ್ಯಕ್ಷಮತೆ ಮುಂದೆ ನವನವೀನ ಕಾರುಗಳು ಶಿರಬಾಗಲೇ ಬೇಕು!
ನಮ್ಮ ಮುಂದೆ ಹೋಗುತ್ತಿದ್ದ ಜೀಪು ಇದ್ದಕ್ಕಿದ್ದಂತೆ ಮಳೆನೀರಿನ ಹೊಂಡದಲ್ಲಿ ಜಾರುತ್ತಾ ಒಂದು ಬದಿಗೆ ವಾಲುವುದನ್ನು ಕಂಡಾಗ ರಸ್ತೆಯಲ್ಲಿಯೇ ” ಅಂಬಿಗಾ ನಾ ನಿನ್ನ ನಂಬಿದೆ” ಹಾಡು ಗುನುಗಿದೆ. ಒಂದು ಹಂತದಲ್ಲಿ ನಮ್ಮ ಜೀಪಿನ ಹಿಂದಿನ ಚಕ್ರ ಕೆಸರಿನಲ್ಲಿ ಹೂತು ಕರ್ಣನ ರಥವಾಯಿತು. ಹಿಂದಕ್ಕೂ ಮುಂದಕ್ಕೂ ಹೋಗಲಾರದ ಸ್ಥಿತಿಯಲ್ಲಿ ಜೀಪಿನ ಚಕ್ರ ಕೆಸರಿನಲ್ಲಿ ಹೂತು ಹೋಗಿತ್ತು. ನಮ್ಮ ಜೀಪನ್ನು ತಳ್ಳಲು ಇನ್ನೊಂದು ಜೀಪಿನಲ್ಲಿ ಬಂದ ಪ್ರಯಾಣಿಕರು ಸಹಾಯ ಮಾಡಿದರು. ನಮ್ಮ ಜೀಪಿನ ಸಾರಥಿಯ ಚಾಕಚಕ್ಯತೆಯನ್ನು ಇಲ್ಲಿ ಕೊಂಡಾಡಲೇ ಬೇಕು. ಚಿಕ್ಕ ವಯಸ್ಸಿನ ಆ ಡ್ರೈವರ್ ನ ಒಂದು ಕೈಗೆ ಏನೋ ಏಟಾಗಿತ್ತು. ಆದರೂ ಸಾವರಿಸಿಕೊಂಡು ನಮ್ಮನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸಿದ್ದರು. ಹೀಗೆಲ್ಲಾ ಹರಸಾಹಸಗಳ ನಡುವೆ ಅಂದು ಸುಮಾರು 50 ಕಿ.ಮೀ ಕಾಡುದಾರಿಯ ಕೆಸರು ರಸ್ತೆಯ ಪ್ರಯಾಣ ಮಾಡಿ, ಆಮೇಲೆ ಸ್ವಲ್ಪ ಕಾಲುದಾರಿ ಮತ್ತು ಸುಮಾರು 100 ಮೆಟ್ಟಿಲುಗಳನ್ನು ಹತ್ತಿ ಪಾವನ ಮತ್ತು ಭಾರ್ಗವ ನಾರಸಿಂಹರ ದೇವಾಲಯಗಳಿಗೆ ಹೋಗಿ ಬಂದೆವು.
Trekingಸೆಪ್ಟೆಂಬರ್ 21 ರಂದು ಬೆಳಗ್ಗೆ ಬೇಗನೇ ಎದ್ದು ಸಿದ್ಧರಾದೆವು. ಹತ್ತಿರದ ಹೋಟೆಲ್ ಒಂದರಲ್ಲಿ ಬೆಳಗ್ಗಿನ ತಿಂಡಿಗಾಗಿ ಇಡ್ಲಿ-ವಡೆ ಕಟ್ಟಿಸಿಕೊಂಡು ನಮ್ಮ ಪ್ರಯಾಣ ಮುಂದುವರೆಯಿತು. ಸುಮಾರು 8 ಕಿ.ಮೀ ಪ್ರಯಾಣಿಸಿ ಮೇಲಿನ ಅಹೋಬಲ ತಲಪಿದೆವು. ಅಲ್ಲಿ ನಮಗೆ ಒಬ್ಬರು ಗೈಡ್ ಇದ್ದರು. ಮುಂದಿನ ಕಾಡು ದಾರಿಯಲ್ಲಿ ಕೆಲವು ಕಡೆ ತೀರಾ ಕಡಿದಾದುದರಿಂದ ಕೈಲೊಂದು ಕೋಲು ಇದ್ದರೆ ಅನುಕೂಲ ಎಂದು ಗೈಡ್ ಹೇಳಿದರು. ಎಲ್ಲರೂ ಕೈಲೊಂದು ಕೋಲು ಹಿಡಿದೇ ಹೊರತೆವು. ಸುಂದರವಾದ ಪರಿಸರದಲ್ಲಿ ತಂಪಾದ ಹವೆಯಲ್ಲಿ ಚಾರಣ ಮಾಡುವುದು ಹಿತವಾಗಿತ್ತು. ಕಾಲುದಾರಿ, ಮೆಟ್ಟಿಲು, ಸೇತುವೆಗಳು ಇವನ್ನೆಲ್ಲಾ ದಾಟಿ ಸುಮಾರು 2 ಗಂಟೆಯ ಚಾರಣ ಮುಗಿಸಿ, ಕೊನೆಯದಾಗಿ ಜ್ವಾಲಾ ನರಸಿಂಹ ದೇವಾಲಯ ತಲಪಿದೆವು. ಅಲ್ಲಿ ‘ಭವನಾಶಿನಿ’ ಜಲಧಾರೆಯು ನಮಗೆ ತಂಪನ್ನೆರೆಯಿತು. ಜ್ವಾಲಾ ನರಸಿಂಹನನ್ನು ನೋಡಿ, ನಾವು ಕಟ್ಟಿಕೊಂಡು ಹೋಗಿದ್ದ ತಿಂಡಿಯನ್ನು ತಿಂದು ವಾಪಸಾದೆವು. ಹಿಂತಿರುಗಿ ಬರುವ ದಾರಿಯಲ್ಲಿ ಮಾಲೋಲ, ವರಾಹ ಮತ್ತು ಯೋಗಾನಂದ ದೇವಾಲಯಗಳಿಗೂ ಭೇಟಿ ಕೊಟ್ಟೆವು.
ಅಹೋಬಲ ತಲಪಿದ ಮೇಲೆ  ಪುನ: ಜೀಪಿನಲ್ಲಿ ಪ್ರಯಾಣಿಸಿ ಕಾರಂಜ ಮತ್ತು ಛತ್ರವಟಕ್ಕೂ ಭೇಟಿಯಿತ್ತೆವು. ಹೀಗೆ ನವನಾರಸಿಂಹರನ್ನು ದರ್ಶನ ಮಾಡಿದ ಸಂತೃಪ್ತಿಯಿಂದ ನಾವು ಉಳಕೊಂಡಿದ್ದ ಛತ್ರಕ್ಕೆ ಬರುವಷ್ಟರಲ್ಲಿ ಮಧ್ಯಾಹ್ನ 2 ಗಂಟೆ ಸಮಯ. ಅಲ್ಲಿ ಊಟ ಮುಗಿಸಿ, ಬೆಲಮ್ ಕೇವ್ಸ್ ಕಡೆಗೆ ಹೊರಟೆವು.
…………………..ಮುಂದಿನ ಭಾಗದಲ್ಲಿ ಬೆಲಮ್ ಕೇವ್ಸ್ ನಲ್ಲಿ..

– ಹೇಮಮಾಲಾ.ಬಿ

ಯಾಗಂಟಿ-ಅಹೋಬಲ-ಬೆಲಂ ಕೇವ್ಸ್-ಭಾಗ 1

ಒಂದು ಕೈಚೀಲ ಮತ್ತು ಇನ್ನೊಂದು ಬೆನ್ನುಚೀಲ ಹಿಡಿದುಕೊಂದು ಒಬ್ಬೊಬ್ಬರಾಗಿ ಮೈಸೂರಿನ ರೈಲ್ವೇ ಸ್ಟೇಷನ್ ಪ್ಲಾಟ್ ಫ಼ಾರ್ಮ್ ಗೆ ಬರತೊಡಗಿದರು. ಪರಸ್ಪರ ಕುಶಲೋಪರಿ ಮಾತನಾಡುತ್ತಾ ಇರುವಷ್ಟರಲ್ಲಿ ಯೈ. ಎಚ್. ಎ. ಐ ಬಳಗದ 24 ಮಂದಿಯ ಜತೆಯಾದೆವು. ಅಂದು ಸೆಪ್ಟೆಂಬರ್ 19, ಸಂಜೆ 0630 ಘಂಟೆ ಸಮಯ. ನಾವೆಲ್ಲಾ ಕಾಯುತ್ತಿದ್ದುದು ಮೈಸೂರಿನಿಂದ ಹೊರಡುವ ‘ಹಂಪಿ ಎಕ್ಸ್ ಪ್ರೆಸ್ಸ್’ಗಾಗಿ. ಈ ಕಾರ್ಯಕ್ರಮದ ರೂವಾರಿಯಾಗಿದ್ದ ಶ್ರ್‍ಈ ನಾಗೇಂದ್ರ ಪ್ರಸಾದ್ ಮತ್ತು ಶ್ರೀ ವೈದ್ಯನಾಥನ್ ಅವರ ನೇತೃತ್ವದಲ್ಲಿ, ನಾವೆಲ್ಲರೂ ಆಂಧ್ರಪ್ರದೇಶದ ‘ಯಾಗಂಟಿ, ಅಹೋಬಲೊಅ ಮತ್ತು ಬೆಲಂ ಕೇವ್ಸ್’ ಗಳನ್ನು ನೋಡಿ ಬರಲು ಉತ್ಸುಕರಾಗಿದ್ದೆವು.


ಸ್ವಲ್ಪ ತಡವಾಗಿಯೇ ಬಂದ ರೈಲು ಹೊರಟಿತು. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದುದರಿಂದ ಬೋಗಿ ತುಂಬಾ ನಮ್ಮ ಬಳಗವೇ ಇದ್ದಂತಿತ್ತಿತ್ತು. ರೈಲು ಅದರ ಪಾಡಿಗೆ ಹಳಿಯ ಮೇಲೆ ಓಡುತ್ತಿದ್ದರೆ, ನಮ್ಮ ತಂಡದ ಕೆಲವು ಹಾಸ್ಯಪ್ರಿಯರಿಂದಾಗಿ ಬೋಗಿಯೊಳಗೂ ಅವಿರತವಾಗಿ ‘ರೈಲು’ ಓಡುತ್ತಿತ್ತು! ರಾತ್ರಿಯೂಟವಾಗಿ ಚಪಾತಿ-ದಾಲ್ ಸೇವಿಸಿ, ವಿರಮಿಸಿದೆವು. ನಿಗದಿತ ಸಮಯದ ಪ್ರಕಾರ ಮುಂಜಾನೆ ನಾಲ್ಕು ಘಂಟೆಗೆ ನಾವು ಇಳಿಯಬೇಕಾದ ‘ಗುತ್ತಿ’ ಸ್ಟೇಷನ್ ತಲಪಬೇಕಾಗಿತ್ತು, ಆದರೆ ಅ ಘಂಟೆಗೆ ತಲಪಿದೆವು.
ಗುತ್ತಿಯಲ್ಲಿ ಇಳಿದು, ಅಲ್ಲಿಂದ ಜೀಪ್ ನಲ್ಲಿ ಸುಮಾರು ಒಂದುವರೆ ಗಂಟೆ ಪ್ರಯಾಣಿಸಿ, ಯಾಗಂಟಿ ತಲಪಿದೆವು. ಯಾಗಂಟಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಪುಟ್ಟ ಊರು. ಅಲ್ಲಿ ಹೋಟೆಲ್ ಒಂದರಲ್ಲಿ ಉಪಾಹಾರ ಸೇವಿಸಿ ಅಲ್ಲಿನ ದೇವಾಲಯಗಳಿಗೆ ಭೇಟಿ ಕೊಟ್ಟೆವು.
ಯಾಗಂಟಿಯಲ್ಲಿ ಪ್ರಸಿದ್ಧವಾದ ಉಮಾ ಮಹೇಶ್ವರ ದೇವಾಲಯವಿದೆ. ಸ್ಥಳ ಪುರಾಣದ ಪ್ರಕಾರ ಅಗಸ್ತ್ಯ ಋಷಿಗಳು ತಮ್ಮ ದಕ್ಷಿಣ ದೇಶದ ಪ್ರಯಾಣದ ಸಂದರ್ಭದಲ್ಲಿ ಯಾಗಂಟಿಯಲ್ಲಿ ಒಂದು ವಿಷ್ಣುವಿನ ಮಂದಿರವನ್ನು ಕಟ್ಟಿಸಲು ಬಯಸಿದರು. ಅವರಿಗೆ ಇಲ್ಲಿನ ಗುಹೆಯಲ್ಲಿ ವೆಂಕಟೇಶ್ವರ ಸ್ವಾಮಿಯ ವಿಗ್ರಹವೊಂದು ದೊರೆಯಿತು. ಅದೇ ವಿಗ್ರಹವನ್ನು ಪೂಜಿಸಿ ಪ್ರತಿಸ್ಠಾಪಿಸಬೇಕೆಂಸು ಸಂಕಲ್ಪ ಮಾಡಿದರು. ಆದ್ರೆ ಆ ಮೂರ್ತಿಯ ಕಾಲಿನ ಬೆರಳು ಮುರಿದಿದ್ದುರಿಂದ ಬೇಸರಗೊಂಡ ಅಗಸ್ತ್ಯರು ಶಿವನನ್ನು ಕುರಿತು ತಪಸ್ಸನ್ನಾಚರಿಸಿದರು.
Yaganti Cave stepsಅಗಸ್ತ್ಯರ ತಪಸ್ಸಿಗೆ ಶಿವ ಪ್ರತ್ಯಕ್ಶನಾಗಿ, ಈ ಸ್ಥಳವು ಕೈಲಾಸವನ್ನು ಹೋಲುವುದರಿಂದ ಇಲ್ಲಿ ಶಿವಪೂಜೆಯೇ ಸೂಕ್ತವೆಂದನಂತೆ. ಆಗ ಅಗಸ್ತ್ಯರು ಶಿವನು ಪಾರ್ವತಿಯೊಂದಿಗೆ ಇಲ್ಲಿ ನೆಲೆಸಬೇಕೆಂದು ಬೇಡಿಕೊಂಡರು. ಶಿವನು ಒಪ್ಪಿ ಉಮಾ-ಮಹೇಶ್ವರನಾಗಿ ನೆಲೆಗೊಂಡ. ಶಿವನೊಟ್ಟಿಗೆ ನಂದಿಯೂ ಬಂತು. ಹಾಗಾಗಿ, ಯಾಗಂಟಿಯಲ್ಲಿ ಶಿವ, ಪಾರ್ವತಿ ಮತ್ತು ನಂದಿಯು ಮುಖ್ಯವಾಗಿ ಪೂಜಿಸಲ್ಪಡುತ್ತಾರೆ.
ಇನ್ನೊಂದು ಕತೆಯ ಪ್ರಕಾರ ಇಲ್ಲಿ ಚಿಟ್ಟೆಪ್ಪ ಎಮ್ಬ ಭಕ್ತರೊಬ್ಬರು ಶಿವನನ್ನು ಆರಾಧಿಸುತ್ತಿದ್ದರಂತೆ. ಆಗ ಶಿವನು ಹುಲಿಯ ರೂಪದಲ್ಲಿ ಪ್ರತ್ಯಕ್ಷನಾದನು. ಶಿವನೆ ಹುಲಿಯ ರೂದಲ್ಲಿದ್ದನೆಂದು ಗೊತ್ತಾದ ಚಿಟ್ಟೆಪ್ಪ  ಸಂತೋಷಾತಿರೇಕದಿಂದ ‘ನೇಕಂಟಿ ಶಿವನು’, ನಾ ಕಂಡೆ ಶಿವನನ್ನು ಎಂದು ಉದ್ಗರಿಸಿದನಂತೆ. ನೇಕಂಟಿ ಎಂಬ ಪದವು ಕಾಲಾನಂತರದಲ್ಲಿ ‘ಯಾಗಂಟಿ’ ಯಾಗಿ ಈ ಸ್ಥಳದ ಹೆಸರಿಗೆ ಕಾರಣವಾಯಿತು.
ಯಾಗಂಟಿ ದೇವಾಲಯವನ್ನು 15 ನೆಯ ಶತಮಾನದಲ್ಲಿ ವಿಜಯನಗರ ದೊರೆಯಾದ ಹರಿಹರ ಬುಕ್ಕರಾಯಲು ಕಾಲದಲ್ಲಿ ಕಟ್ಟಲಾದುದೆಂದು ಇತಿಹಾಸವಿದೆ. ಇಲ್ಲಿ ಒಂದು ಸುಂದರವಾದ ಪುಷ್ಕರಿಣಿ ಇದೆ. ದೇವಾಲಯದ ಪಕ್ಕದಲ್ಲಿ ಪರ್ವತಗಳ ಮಧ್ಯೆ ಗುಹಾದೇವಾಲಯಗಳಿವೆ. ಹಚ್ಚ ಹಸಿರಿನ ಕಾಡಿನ ನಡುವೆ ಕೆಂಬಣ್ಣದ ಕಲ್ಲಿನಲ್ಲಿ ನೈಸರ್ಗಿರ್ಕವಾಗಿ ಮೂಡಿ ಬಂದ ಈ ಗುಹೆಗಳು ಮನೋಹರವಾಗಿವೆ. ಸುಮಾರು 100 ಮೆಟ್ಟಿಲುಗಳನ್ನು ಹತ್ತಿ ಮೇಲೇರಿದಾಗ ಅಗಸ್ತ್ಯ ಗುಹೆ ಸಿಗುತ್ತದೆ, ಇಲ್ಲಿ ಅಗಸ್ತ್ಯರು ಶಿವನನ್ನು ಕುರಿತು ತಪಸ್ಸು ಮಾಡಿದರೆಂದು ಹೇಳಲಾಗುತ್ತದೆ. ಅವರು ಪೂಜಿಸಿದ ಶಿವಲಿಂಗಕ್ಕೆ ನಾನೂ ಹಾಲೆರೆದೆ.
Yaganti pushakrini
ಎರಡನೆಯ ಗುಹೆಗೆ ವೆಂಕಟೇಶ್ವರ ಗುಹೆ ಎಂಬ ಹೆಸರು. ಬಹಳ ಸೊಗಸಾಗಿದೆ. ಪಕ್ಕದಲ್ಲಿಯೇ  ವೀರಬ್ರಹ್ಮ ಗುಹೆಯಿದೆ. ಇದು ಎತ್ತರ ಕಡಿಮೆಯಿರುವದರಿಂದ ನಾವು ತಲೆ-ಬೆನ್ನು ಬಾಗಿಸಿಯೇ ಗುಹೆಒಳಗೆ ಹೋಗಬೇಕು. ಸಂತ ವೀರಬ್ರಹ್ಮೇಂದ್ರ ಸ್ಮಾಮಿಯು ಇಲ್ಲಿ ಕಾಲಜ್ಞಾನವನ್ನು ಬರೆದರೆಂದು ನಂಬಿಕೆ.
Nandiಯಾಗಂಟಿ ಕ್ಷೇತ್ರದಲ್ಲಿರುವ ನಂದಿಯ ವಿಗ್ರಹವು ಬೆಳೆಯುತ್ತದೆಯಂತೆ. ನಂಬಿಕೆಯ ಪ್ರಕಾರ ಕಲಿಯುಗದ ಅಂತ್ಯದಲ್ಲಿ ಆ ಕಲ್ಲಿನ ನಂದಿಗೆ ಜೀವ ಬಂದು ಕೂಗಿಕೊಳ್ಳುತ್ತದೆ. ಅಧ್ಯಯನದ ಪ್ರಕಾರ ಆಅ ನಂದಿಯ ವಿಗ್ರಹವನ್ನು ಕೆತ್ತಿದ ಕಲ್ಲಿಗೆ ಹಿಗ್ಗುವ ಗುಣವಿದ್ದು, ಇದು 20 ವರ್ಷಗಳಲ್ಲಿ ಒಂದು ಇಂಚಿನಷ್ಟು ಬೆಳೆದಿದೆಯಂತೆ.
ಇಲ್ಲಿನ ಇನ್ನೊಂದು ವೈಶಿಷ್ಟ್ಯವೇನೆಂದರೆ ಈ ಉರಲ್ಲಿ ಕಾಗೆಗಳು ಇಲ್ಲದಿರುವುದು. ಇದಕ್ಕೆ ಹಿನ್ನೆಲೆಯಾಗಿ ಪ್ರಚಲಿತವಿರುವ ಕಥೆಯೇನೆಂದರೆ, ಇಲ್ಲಿ ಅಗಸ್ತ್ಯರು ತಪಸನ್ನಾಚರಿಸುತ್ತಿದ್ದಾಗ ಕಾಗೆಗಳು ಕಾಟ ಕೊಡುತ್ತಿದ್ದವಂತೆ. ಇದರಿಂದ ಸಿಟ್ಟಾದ ಅವರು ಕಾಗೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ ಶಾಪವಿತ್ತರಂತೆ.
ಒಟ್ಟಾರೆಯಾಗಿ ಬಹಳ ಸರಳ ಸುಂದರವಾದ, ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಯಾಗಂಟಿಯು ಆಸ್ತಿಕರಿಗೆ ತೀರ್ಥಕ್ಷೇತ್ರವಾದರೆ, ಆಸಕ್ತರಿಗೆ ಸಣ್ಣ ಚಾರಣವನ್ನೂ ಒದಗಿಸುತ್ತದೆ. ಪ್ರವಾಸಿಗರಾಗಿ ಹೋಗುವವರಿಗೆ ನಿಸರ್ಗ ಸಿರಿಯ ಜತೆಗೆ ಜೀವನದಲ್ಲಿ ಒಮ್ಮೆಯಾದರು ನೊಡಲೇಬೇಕು ಎಂಬ ಅನುಭೂತಿಯನ್ನು ಮೊಗೆದು ಕೊಡುವ ಸ್ಥಳ ‘ಯಾಗಂಟಿ’. ಸುಮಾರು 2 ಗಂಟೆಗಳ ಕಾಲ ಯಾಗಂಟಿಯಲ್ಲಿ ಕಲೆದು, ನಮ್ಮ ಮುಂದಿನ ಗಮ್ಯ ಸ್ಥಾನವಾಗಿದ್ದ ಅಹೋಬಲದ ಕಡೆಗೆ ಪ್ರಯಾಣಿಸಿದೆವು.


…..ಮುಂದಿನ ಭಾಗದಲ್ಲಿ ‘ನವನಾರಸಿಂಹರಿಗೆ ನಮೋ ನಮ:’
- ಹೇಮಮಾಲಾ.ಬಿ
  



ದೂರ ತಪ್ಪಿಸುವ ಮೈಲಿಗಲ್ಲು..ಹೀಗೂ ಉಂಟು!

Hema trek Aug2014
ಹೇಮಮಾಲಾ.ಬಿ
ಚಂದಮಾಮದ ಕತೆಗಳಲ್ಲಿ ಬರುವ ರಾಜಕುಮಾರನಿಗೆ, ಕಾಡು ಮೇಡುಗಳಲ್ಲಿ ಅಲೆದಾಡುವ ಸಂದರ್ಭ  ಬರುತ್ತದೆ, ಆಗ ಯಾವುದೋ ದೆವ್ವವೋ, ಮೋಹಿನಿಯೋ ಅವನ ದಾರಿ ತಪ್ಪಿಸುತ್ತದೆ.  ಆದರೆ, ನವೆಂಬರ್ 8, 2014 ರಂದು, ಮೈಸೂರಿನ  ಯೈ.ಎಚ್.ಎ.ಐ ತಂಡದ ಕೆಲವು ಚಾರಣಿಗರನ್ನು, ಹಾಡುಹಗಲೇ, ಆಗುಂಬೆ ಘಾಟಿಯ ಮೈಲಿಗಲ್ಲು ದೂರ/ದಾರಿ ತಪ್ಪಿಸಿದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ….ಹೀಗೂ ಉಂಟು!
ಆ ದಿನ ಬೆಳಗ್ಗೆ ನಿಗದಿತ ಕಾರ್ಯಕ್ರಮದ ಪ್ರಕಾರ ನಮ್ಮ ತಂಡವು, ಕುಂದಾದ್ರಿ ಬೆಟ್ಟವಿಳಿದು, ಆಗುಂಬೆ ತಲಪಿದೆವು. ಅಲ್ಲಿಂದ ಬೆಳಗಿನ ಉಪಾಹಾರಕ್ಕಾಗಿ ಸೋಮೇಶ್ವರಕ್ಕೆ ಹೋಗಿ, ತಿಂಡಿ ತಿಂದು, ಕಾಡುದಾರಿಯ ರಸ್ತೆಮಾರ್ಗದಲ್ಲಿ ನಡೆದು ಆಗುಂಬೆಯ ಸೂರ್ಯಾಸ್ತಮಾನ ವ್ಯೂ ಪಾಯಿಂಟ್ ತಲಪಬೇಕಿತ್ತು. ಅನಂತರ ಬೇರೆಡೆಗೆ ಹೋಗುವುದಿತ್ತು. ಸೋಮೇಶ್ವರದಲ್ಲಿ ಉಪಾಹಾರವಾದ ಮೇಲೆ ರಸ್ತೆಯಲ್ಲಿ ಆಗುಂಬೆ ಕಡೆಗೆ ನಡೆಯತೊಡಗಿದೆವು. ಹಿಂದಿನ ದಿನ ಕುಂದಾದ್ರಿಯಲ್ಲಿ ನಡೆದಿದ್ದ ನಮಗೆ ತಿಂಡಿ ತಿಂದಾದ ಮೇಲೆ ಹೊಟ್ಟೆಯೂ ಭಾರವಾಗಿ,  ಕೆಲವರಿಗೆ ರಸ್ತೆಯಲ್ಲಿ ನಡೆಯುವುದು ‘ಬೇಕಿಲ್ಲ′ ಎಂಬ ಮನೋಭಾವ ಹುಟ್ಟಿತ್ತು. ಇಷ್ಟರೆ  ಮೇಲೆ ಪಕ್ಕದಲ್ಲಿಯೇ ಲಾರಿ-ಬಸ್ಸುಗಳು ಧಾರಾಳವಾಗಿ ಓಡಾಡುತ್ತಿರುವಾಗ, ಕೆಲವರಿಗಾದರೂ   ‘ಈ ಮಾರ್ಗದಲ್ಲಿ ನಡಿಗೆ ಬೇಕಿತ್ತಾ….ಬಸ್ಸೋ ಲಾರಿಯೋ ಹತ್ತಿದರಾಯಿತು’ಎಂಬ ಆಲೋಚನೆ ಬಂದಿದ್ದಂತೂ ನಿಜ. ಸೋಮೇಶ್ವರದಿಂದ ಆಗುಂಬೆಗೆ ಕೇವಲ 6 ಕಿ.ಮೀ ಅಂದಿದ್ದರು ಆಯೋಜಕರು. ಇರಲಿ, ಬಂದಿದ್ದೇ ಚಾರಣಕ್ಕೆ..ನಡೆಯೋಣ ಎಂದು ನಡೆಯಲಾರಂಭಿಸಿದೆವು.
ಸುಮಾರು ಒಂದು ಘಂಟೆ ನಿಧಾನವಾಗಿ ನಡೆದಾಗ ನಮಗೆ ಎದುರಾದುದು ಆಗುಂಬೆ  8 ಕಿ.ಮೀ ಎಂಬ ಮೈಲಿಗಲ್ಲು! ಆಗಲೇ ಮಧ್ಯಾಹ್ನ 1230 ಗಂಟೆ  ಆಗಿತ್ತು. ಆಗುಂಬೆಗೆ ಇನ್ನೂ 8 ಕಿ.ಮೀ ಇದೆಯೇ? ಹಾಗಾದರೆ ನಾವು ಇದುವರೆಗೆ ನಡೆದುದು ಎಷ್ಟಾಗಿರಬಹುದು ? ರಸ್ತೆಯಲ್ಲಿ ನಡೆಯುವುದು ಬೋರು….ಇತ್ಯಾದಿ ಅಸಹನೆಯ ಮಾತುಗಳು, ದಣಿವಿನ ಸಂಕೇತಗಳು ವ್ಯಕ್ತವಾದುವು.
“ಇಲ್ಲ, ಇನ್ನು ಸ್ವಲ್ಪ ಅಷ್ಟೆ….ಒಂದೂವರೆ ಘಂಟೆಗೆ ಆಗುಂಬೆ ತಲಪಿರುತ್ತೇವೆ” ಎಂದು ಹಿರಿಯ ಚಾರಣಿಗರಾದ ಗೋಪಮ್ಮ ಆಶ್ವಾಸನೆ ಕೊಟ್ಟರೂ ಮನಸ್ಸು ಹಿಂಜರಿಯಿತು. ನಮ್ಮ ಅದೃಷ್ಟಕ್ಕೆ ಮುಂದಿನ ಮೈಲಿಗಲ್ಲು ‘ಆಗುಂಬೆ 10  ಕಿ.ಮೀ’ ಎಂದು ತೋರಿಸಬೇಕೆ? ಯಾವ ಲೆಕ್ಕಾಚಾರದಲ್ಲಿಯಾದರೂ ಅದು ಹಿಂದಿನ  ದೂರಕ್ಕಿಂತ ಕಡಿಮೆ ಇರಬೇಕು, ಜಾಸ್ತಿಯಿರಲು ಸಾಧ್ಯವಿಲ್ಲ! ಇನ್ನು 5, 6, 7 ಕಿ.ಮೀ ಮೈಲಿಗಲ್ಲುಗಳು  ಯಾಕೋ ನಮಗೆ  ಕಾಣಿಸಲೇ ಇಲ್ಲ. ಇನ್ನು ನಡೆಯಲು  ಸಾಧ್ಯವಿಲ್ಲ, ಬಹಳಷ್ಟು ದಣಿವಾಗಬಹುದು ಎಂದು ಮುಖ್ಯವಾಗಿ  ನನಗೆ ಅನಿಸಿತು. ತಂಡದ ಇನ್ನಿಬ್ಬರು ಮಹಿಳೆಯರೂ ನನ್ನ ಅಭಿಪ್ರಾಯವನ್ನು ಅನುಮೋದಿಸಿದರು. ಆದರೆ ಗೋಪಮ್ಮ ಮಾತ್ರ, ತಾನು ನಡೆದೇ ಬರುತ್ತೇನೆ ಎಂದು ಘೋಷಿಸಿದರು. ಇನ್ನು ಕೆಲವರು ಹಿಂದಿನಿಂದ ಬರುತ್ತಿದ್ದರು.
agumbe viewpoint
ಸರಿ, ಹಿಂದಿನಿಂದ ಬಂದ ಲಾರಿ, ಬಸ್ಸುಗಳಿಗೆ ಕೈ ತೋರಿಸಲಾರಂಭಿದೆವು. ಒಬ್ಬರು ಲಾರಿಯವರು ನಿಲ್ಲಿಸಿದರು. ಲಾರಿ ಹತ್ತಿ ಕುಳಿತ್ತಿದ್ದಾಯಿತು. ಸ್ವಲ್ಪ ಮುಂದೆ ಹೋದಾಗ ತಂಡದ ಇನ್ನು ಕೆಲವರು ಲಾರಿಯಲ್ಲಿದ್ದ ನಮ್ಮನ್ನು ನೋಡಿ ತಾವೂ ಹತ್ತಿದರು. ಹೀಗೆ 3-4  ಬಾರಿ ಲಾರಿ ನಿಲ್ಲ್ಲಿಸಿ, ತಂಡದ 10-12 ಮಂದಿ ಜತೆಯಾಗಿ,ಹೆಚ್ಚೆಂದರೆ 2  ಕಿ.ಮೀ  ಪ್ರಯಾಣಿಸಿರಬಹುದು. ಆಗುಂಬೆ ಬಂದೇ ಬಿಟ್ಟಿತು! ಲಾರಿಯವರಿಗೆ ಧನ್ಯವಾದ ತಿಳಿಸಿ ಇಳಿದಿದ್ದಾಯಿತು. ನೋಡ ನೋಡುತ್ತಿರುವಷ್ಟರಲ್ಲಿ, ಲಾರಿ ಹತ್ತದ ಧೀರರು, ನಡೆದು ಬಂದೇ ಬಿಟ್ಟರು.
ಕೆಲವರು ನಮ್ಮನ್ನು ಉದ್ದೇಶಿಸಿ “ ಚಾರಣಕ್ಕೆಂದು  ಬಂದ ಮೇಲೆ ಲಾರಿ ಹತ್ತುವುದು ಎಷ್ಟು ಸರಿ……” ಎಂದು ಕಾಲೆಳೆದರು. “ಆ ಮೈಲಿಗಲ್ಲು ತಪ್ಪು ದೂರ ತೋರಿಸುತ್ತಿತ್ತು….ಕೆಲವು ಮೈಲಿಗಲ್ಲುಗಳು ಇರಲೇ ಇಲ್ಲ..ತುಂಬಾ ಲೇಟ್ ಆಗುತ್ತೆ ಅಂದ್ಕೊಂಡ್ವಿ….” ಇತ್ಯಾದಿ ಸಮರ್ಥನೆಗಳನ್ನು ಕೊಟ್ಟುದಾಯಿತು.
Lorry
ಸಾಮಾನ್ಯವಾಗಿ ನಿಧಾನವಾಗಿ ನಡೆಯುವ ‘ಸುಸ್ತಮ್ಮ ಬ್ರ್ಯಾಂಡ್’ ಪಡೆದಿದ್ದ ನನಗೆ ಇದರಿಂದಾಗಿ ಏನೂ ಅವಮಾನವೂ, ತುಂಬಲಾರದ ನಷ್ಟವೂ ಆಗಲಿಲ್ಲ.  ಆದರೆ, ಬಹಳ ಕ್ಲಿಷ್ಟಕರವಾದ ಹಲವಾರು ಚಾರಣಗಳನ್ನು ಪ್ರತಿಕೂಲ ಹವೆಯಲ್ಲಿಯೂ ಯಶಸ್ವಿಯಾಗಿ ಪೂರೈಸಿ, ತಾರಾಮೌಲ್ಯ ಗಿಟ್ಟಿಸಿಕೊಂಡಿದ್ದ  ನಮ್ಮ ತಂಡದ ಕೆಲವು ಹೆಮ್ಮೆಯ  ಕಣ್ಮಣಿಗಳೂ  ಈ  ಗುಂಪಿನಲ್ಲಿ ಗೋವಿಂದ ಎಂಬಂತೆ ಲಾರಿ ಹತ್ತಿದ್ದು ಅವರಿಗೆ ಇರುಸು ಮುರಿಸಾಯಿತು.
ಎಂತೆಂತಹ ಚಾರಣವನ್ನು ಮಾಡಿದ ತಮಗೆ ಈ ಆಗುಂಬೆ ಘಾಟಿಯಲ್ಲಿ, ಅದೂ 2 ಕಿ.ಮೀ ಗೋಸ್ಕರ   ಲಾರಿ ಹತ್ತಿ,  ‘ಅಡಿಕೆಗೆ’  ಹೋದ ಮಾನವನ್ನು ಮರಳಿ ಪಡೆಯಲು ಎಷ್ಟು ‘ಆನೆಗಳನ್ನು’ ತೆರಬೇಕೋ ಎಂದು ಚಿಂತಾಕ್ರಾಂತರಾಗಿ, ದಾರಿ/ದೂರ ತಪ್ಪಿಸಿದ ಮೈಲಿಗಲ್ಲನ್ನೂ, ಸಂಬಂಧಿತ ವ್ಯವಸ್ಥೆಯನ್ನೂ, ಅದರಿಂದಾಗಿ  ಲಾರಿ ಹತ್ತಲು ಕಾರಣರಾದ ನಮ್ಮನ್ನೂ ಮನದಲ್ಲಿಯೇ ಬೈದರು.

-ಹೇಮಮಾಲಾ.ಬಿ