Total Pageviews

Sunday, December 7, 2014

ಕುಪ್ಪಳಿ-ಕವಿಮನೆ-ಕವಿಶೈಲ


ನವೆಂಬರ್ 07-08, 2014 ರಂದು, ಮೈಸೂರಿನ ಯೈ. ಎಚ್.ಎ.ಐ ತಂಡದವರು , ಶಿವಮೊಗ್ಗ ಜಿಲ್ಲೆಯಲ್ಲಿರುವ ಕವಲೇದುರ್ಗ ಮತ್ತು ಕುಂದಾದ್ರಿ ಬೆಟ್ಟಕ್ಕೆ  ಚಾರಣ ಕಾರ್ಯಕ್ರಮವನ್ನು ಅಯೋಜಿಸಿದ್ದರು. ತಂಡದ ಎಲ್ಲರೂ ಅತ್ಯಂತ ಯಶಸ್ವಿಯಾಗಿ ಚಾರಣವನ್ನು ಪೂರೈಸಿದ ಬಳಿಕ, ನಮ್ಮ ಕಾರ್ಯಕ್ರಮದ ಆಯೋಜಕರು, ಚಾರಣದ ಜತೆಗೆ ಸಿಹಿಹೂರಣವಾಗಿ,  ಅನಿರೀಕ್ಷಿತವಾಗಿ “ಊಟದ  ನಂತರ ನಾವು ‘ಕುಪ್ಪಳಿ’ಗೆ ಹೋಗಲಿರುವೆವು..ನಿಮಗೆ ಇದು ಬೋನಸ್ “ ಅಂದಾಗ ನಮಗೆ   ಕುಪ್ಪಳಿಸುವಷ್ಟು ಸಡಗರವಾಯಿತು.
ಕುಪ್ಪಳಿಯು ಶಿವಮೊಗ್ಗದಿಂದ 80 ಕಿ.ಮೀ ದೂರದಲ್ಲಿದೆ ಹಾಗೂ ತೀರ್ಥಹಳ್ಳಿಯಿಂದ 10 ಕಿ.ಮೀ ದೂರದಲ್ಲಿದೆ.
Kupplai house
ಕುಪ್ಪಳಿಯಲ್ಲಿ  ರಾಷ್ಟ್ರಕವಿ ಕುವೆಂಪುರವರ ಮನೆಯ ಮೂಲ ಸ್ವರೂಪವನ್ನು ಕಾಯ್ದುಕೊಂಡು ನವೀಕರಿಸಿ ಮ್ಯೂಸಿಯಮ್ ಆಗಿ ಪರಿವರ್ತಿಸಿಲಾಗಿದೆ. ವಿಶಾಲವಾದ ಅಂಗಳದ ಮಧ್ಯೆ ಕಂಗೊಳಿಸುವ ‘ಕವಿಮನೆ’ ಅದೆಷ್ಟು ಸೊಗಸು! ‘ಬಾಗಿಲೊಳು ಕೈಮುಗಿದು ಒಳಹೊಕ್ಕೊಡನೆ ಯಾತ್ರಿಕನಿಗೆ ಕಾಣಿಸುವ ದೊಡ್ಡದಾದ ಎರಡು ಮಹಡಿಯುಳ್ಳ ತೊಟ್ಟಿ ಮನೆ, ಕುಸುರಿ ಕೆಲಸದ ಕಂಭಗಳು,  ಕಲಾತ್ಮಕ ಬಾಗಿಲುಗಳು, ಆಗಿನ ಕಾಲದಲ್ಲಿ ಬಳಸುತ್ತಿದ್ದ ಅಡುಗೆ ಪರಿಕರಗಳು, ಕುವೆಂಪು ಅವರ ಜೀವನದ ಪ್ರಮುಖ ಘಟ್ಟಗಳನ್ನು ಬಿಂಬಿಸುವ ಹಲವಾರು ವಸ್ತುಗಳು, ಛಾಯಾಚಿತ್ರಗಳು,  ಕುವೆಂಪು ಅವರ ನೂರಾರು ಕೃತಿಗಳು, ಅವರಿಗೆ ಲಭಿಸಿದ ಪ್ರಶಸ್ತಿ -ಪುರಸ್ಕಾರಗಳು …..ಇತ್ಯಾದಿ.
Kupplai- Nanna mane poem

‘ಕವಿಮನೆ’ಯಿಂದ ಅನತಿ ದೂರದಲ್ಲಿ, ಕುವೆಂಪುರವರಿಗೆ  ಸ್ಫೂರ್ತಿಸೆಲೆಯಾಗಿದ್ದ  ಕವಿಶೈಲವಿದೆ.  ಕಲ್ಲುಗಳನ್ನು ನಿರ್ಧಿಷ್ಟ ವಿನ್ಯಾಸದಲ್ಲಿ  ಜೋಡಿಸಿ  ಇಲ್ಲಿ ಶಿಲಾಸ್ಮಾರಕವನ್ನು ನಿರ್ಮಿಸಿದ್ದಾರೆ. ಪಕ್ಕದಲ್ಲಿ ಕುವೆಂಪುರವರ ಸಮಾಧಿಯೂ ಇದೆ.  ನಮ್ಮ ತಂಡದ ಶ್ರೀ ವೈದ್ಯನಾಥನ್  ಮತ್ತು ಶ್ರೀ ದಾಮೋದರ ಕಿಣಿ ಅವರ ನೇತೃತ್ವದಲ್ಲಿ ಕುವೆಂಪುರವರು ರಚಿಸಿದ ಹಲವು ಗೀತೆಗಳನ್ನು ಹಾಡಿದೆವು. ಕುವೆಂಪುರವರ ಪುತ್ರರಾದ ಮೇರುಪ್ರತಿಭೆಯ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರನ್ನೂ ಸ್ಮರಿಸಿದೆವು.   ಇವರೀರ್ವರಿಗೂ ನುಡಿನಮನ-ರಾಗನಮನ-ಭಾವನಮನ ಸಲ್ಲಿಸಿ ಅಲ್ಲಿಂದ ಹೊರಟೆವು. 
Kavishaila1
ಕವಿಶೈಲ





Our Team at Kavishaila- Kuppali
ಕವಿಶೈಲದಲ್ಲಿ ಯೈ.ಎಚ್.ಎ.ಐ ತಂಡ









ಕವಿಶೈಲದಿಂದ ಸ್ವಲ್ಪ ದೂರದಲ್ಲಿಯೇ,  ಪೂರ್ಣಚಂದ್ರ ತೇಜಸ್ವಿಯವರ ಸಮಾಧಿ ಇದೆ. ಅಲ್ಲಿಗೂ ಭೇಟಿ ಕೊಟ್ಟು ಧನ್ಯತಾ ಭಾವದಿಂದ ಕುಪ್ಪಳಿಯಿಂದ ಮೈಸೂರಿಗೆ ಮರಳಿದೆವು.

– ಹೇಮಮಾಲಾ.ಬಿ

No comments:

Post a Comment