ಹೇಮಮಾಲಾ. ಬಿ.
ಸುತ್ತಲೂ ಅಲೆ ಅಲೆಯಾಗಿ ಕಾಣಿಸುವ ಮಲೆಗಳು, ಕೆಲವು ಕಿರಿದಾದ ಕಾಲುದಾರಿಗಳು, ಕತ್ತೆಗಳ ಬೆನ್ನ ಮೇಲೆ ಹೊರೆ ಹೊರಿಸಿ ವಸ್ತುಗಳ ಸಾಗಾಣಿಕೆ, ಬೆರಳೆಣಿಕೆಯ ಮನೆಗಳು, ಆ ಮನೆಗಳಲ್ಲಿ ಸೆಗಣಿ ಸಾರಿಸುತ್ತಿರುವ, ಮೊಸರು ಕಡೆಯುತ್ತಿರುವ, ಒರಳಲ್ಲಿ ಮಸಾಲೆ ರುಬ್ಬುತ್ತಿರುವ , ಬಾವಿಯಿಂದ ನೀರು ಸೇದುತ್ತಿರುವ ಜನರು… ಒಟ್ಟಾರೆಯಾಗಿ ಈಗಿನ ಸೂಪರ್ ಸೋನಿಕ್ ಯುಗದಲ್ಲೂ ಕನಿಷ್ಟ ಸೌಲಭ್ಯದಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆಯುಳ್ಳ ಹಳ್ಳಿಗಳು. ಇದು ಯಾವುದೋ ಪುರಾತನ ನಗರಿಯ ವರ್ಣನೆಯಲ್ಲ. ಜೂನ್ 22 ಭಾನುವಾರ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಿಂದ 14 ಕಿ.ಮಿ ದೂರವಿರುವ ‘ನಾಗಮಲೆ’ ಗೆ ಚಾರಣ ಮಾಡುವಾಗ ಕಂಡ ದೃಶ್ಯಗಳು.
ಮೈಸೂರಿನ ಯೂಥ್ ಹಾಸ್ಟೆಲ್ ಅಸೋಸಿಯೇಷನ್ ನ ವತಿಯಿಂದ ಜೂನ್ 22 ರಂದು ನಾಗಮಲೆಗೆ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ಜೂನ್ 21 ರಂದು ರಾತ್ರಿ 1030 ಗಂಟೆಗೆ ನಮ್ಮ ತಂಡವನ್ನು ಹೊತ್ತಿದ್ದ ಮಿನಿಬಸ್ ಚಾಮರಾಜ ನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಹೊರಟಿತು. ಅಲ್ಲಿಗೆ ಬೆಳಗಿನ ಜಾವ ತಲಪಿದೆವು. ವಸತಿಗೃಹವೊಂದರಲ್ಲಿ ತಾತ್ಕಾಲಿಕವಾಗಿ ವಿಶ್ರಮಿಸಿ ಬೆಳಗ್ಗೆ 0530 ಗಂಟೆಗೆ ಚಾರಣಕ್ಕೆ ಹೊರಡಲು ಸಜ್ಜಾದೆವು. ಅಲ್ಲಿನ ಉಪಾಹಾರ ಗೃಹದಿಂದ ನಮ್ಮ ಟಿಫಿನ್ ಬಾಕ್ಸ್ ಗೆ ಇಡ್ಲಿ-ವಡೆ ತುಂಬಿಸಿ ನಡೆಯಲು ಆರಂಭಿಸಿದೆವು.
ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗಲು ಸ್ವಲ್ಪ ದೂರ ರಸ್ತೆಯಲ್ಲಿ ನಡೆದೆವು. ಆಮೇಲೆ ಸುಮಾರಾದ ಮಣ್ಣಿನ ರಸ್ತೆ ಎದುರಾಯಿತು. ಈ ಕಚ್ಚಾ ದಾರಿಯಲ್ಲಿ ಜೀಪ್ ಗಳು ಮಾತ್ರ ಅನಿವಾರ್ಯವಾದ ವೈಯಾರದಿಂದ ಬಳಕುತ್ತಾ, ಕುಲುಕುತ್ತಾ ಹೋಗುತ್ತವೆ. ಇಲ್ಲೂ ಕೆಲವು ‘ಸಿಟಿ ಹುಡುಗರು’ ತಮ್ಮ ಮೋಟರ್ ಬೈಕ್ ನಲ್ಲಿ ಪ್ರಯಾಣಿಸಿ ನಮಗೆ ಪುಕ್ಕಟೆ ‘ಸ್ಟಂಟ್ ಶೋ’ ಒದಗಿಸಿದರು. ಬಹುಶ: ಅವರಿಗೆಲ್ಲ ಮಾದಪ್ಪನ ದಯವಿದ್ದಿರಬೇಕು, ಯಾಕೆಂದರೆ, ಯಾರೂ ಬಿದ್ದು ತಮ್ಮ ಕೈ-ಕಾಲು ಮುರಿದುಕೊಳ್ಳಲಿಲ್ಲ.
ಆಗ ಇನ್ನೂ ಬೆಳಗಿನ ಹೊತ್ತು. ನಿಸರ್ಗದ ಸಿರಿಯನ್ನು ಸವಿಯುತ್ತ ನಡೆದೆವು. ಸುಮಾರು ೩ ಗಂಟೆ ನಡೆದಾದ ಮೇಲೆ ಕಾಡಲ್ಲಿ ಒಂದು ಕಡೆ ಕುಳಿತು ನಾವು ತಂದ ಉಪಾಹಾರವನ್ನು ಮುಗಿಸಿ ಮುಂದಿನ ಪಯಣಕ್ಕೆ ಸಜ್ಜಾದೆವು. ಇನ್ನೂ ಒಂದು ಗಂಟೆ ನಡೆದಾದ ಮೇಲೆ ‘ಇಂಡಿಗನತ್ತ’ ಎಂಬ ಪುಟ್ಟ ಹಳ್ಳಿಯನ್ನು ತಲಪಿದೆವು. ಇಲ್ಲಿ ನಾಡಹೆಂಚಿನ ಕೆಲವು ಮನೆಗಳು ಮಾತ್ತು ಸೋಗೆ ಹೊದಿಸಿದ ಪುಟ್ಟ ಅಂಗಡಿಗಳು ಸಿಕ್ಕಿದುವು. ಅಂಗಡಿಗಳ ಮುಂದೆ ಅವರೇ ನಿರ್ಮಿಸಿದ ‘ಬಳ್ಳಿ ಮಂಚ’ಗಳಿದ್ದುವು. ನಡೆದು ಬಸವಳಿದ ನಮಗೆ ಟೀ/ಜ್ಯೂಸ್ ಕುಡಿಯಲು ಇಲ್ಲಿ ಅನುಕೂಲವಾಯಿತು. ಇನ್ನೂ ಮುಂದೆ ಹೋದಾಗ ಒಂದೆರಡು ಬಾವಿಗಳು ಸಿಕ್ಕಿದುವು. ಮನೆಯೊಂದರಲ್ಲಿ ಕಡೆಗೋಲಿನಿಂದ ಮೊಸರನ್ನು ಕಡೆಯುವ ದೃಶ್ಯ ಕಾಣಸಿಕ್ಕಿತು. ಅಲ್ಲಲ್ಲಿ ಕೆಲವರು ಮಜ್ಜಿಗೆ, ನಿಂಬೆ ಹಣ್ಣಿನ ಪಾನಕ , ಹಲಸಿನಹಣ್ಣು ಇತ್ಯಾದಿ ಮಾರುತ್ತಿದ್ದರು. ಒಟ್ಟಾರೆಯಾಗಿ ಇವನ್ನೆಲ್ಲ ನೋಡಿದಾಗ
ಇಲ್ಲಿ ಕಾಲವೇ ಸ್ತಬ್ಧವಾಗಿದೆಯೇಅನಿಸಿತು.
ಎರಡು ಬೆಟ್ಟ ಹತ್ತಿದೆವು, ಎರಡು ಬೆಟ್ಟ ಇಳಿದೆವು. ದಾರಿಯಲ್ಲಿ ಸ್ವಲ್ಪ ದಣಿವಾರಿಸಲೆಂದು ಅಂಗಡಿಯೊಂದರಲ್ಲಿ ತಂಪಾದ ಪಾನಕ ಕುಡಿದೆವು. ಅಂಗಡಿಯಾತನೊಂದಿಗೆ ಮಾತನಾಡಿದಾಗ ಗೊತ್ತಾದುದೇನೆಂದರೆ ಅಲ್ಲಿಗೆ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ಕತ್ತೆಗಳ ಮೂಲಕ ಸಾಮಾನು ಸರಂಜಾಮುಗಳನ್ನು ತರಿಸಿಕೊಳ್ಳುತ್ತಾರೆ. ಇನ್ನೂ ನಡೆದು ‘ನಾಗಮಲೆ’ ತಲಪಿದೆವು. ಅಲ್ಲಿ ಬಂಡೆಯೊಂದನ್ನು ಕೊರೆದು ಮೂರ್ತಿಯನ್ನು ಕೂರಿಸಿದ್ದಾರೆ. ಬಂಡೆಯೊಂದರಲ್ಲಿ ನಾಗದೇವರ ಹೆಡೆಯೂ ಇದೆ. ಸುತ್ತಲಿನ ನಿಸರ್ಗ ಸಿರಿ ಮತ್ತು ತಂಪಾದ ಗಾಳಿ ನಮ್ಮ ಶ್ರಮವನ್ನು ಸಾರ್ಥಕಗೊಳಿಸಿತು.
ಎಲ್ಲರೂ ಸುಮಾರು 12 ಗಂಟೆಗೆ ಬೆಟ್ಟ ಇಳಿಯಲಾರಂಭಿಸಿದರು. ವೇಗವಾಗಿ ನಡೆಯುತ್ತಿದ್ದ ಹೆಚ್ಚಿನವರು 0130 ಗಂಟೆಗೆ ‘ಇಂಡಿಗನತ್ತ’ ತಲಪಿದರು. ನನ್ನ ಮಟ್ಟಿಗೆ ಹೇಳುವುದಾದರೆ, ನಿಧಾನ ಗತಿಯ ಚಾರಣಿಗಳಾದ ನಾನು ಹೋಗುವಾಗಲೂ ಬರುವಾಗಲೂ ತಂಡದ ಇತರರಿಂದ ಬಹಳಷ್ಟು ಹಿಂದೆ ಇದ್ದೆ. ದಾರಿಯಲ್ಲಿ ಎದುರಾದ ಒಂದಿಬ್ಬರು “ ಅಕ್ಕಾ ನೀವು ಇಷ್ಟು ನಿಧಾನ ನಡೆದರೆ ಬೆಟ್ಟ ತಲಪುವಾಗ ಸಂಜೆಯಾಗುತ್ತದೆ, ಉಘೇ ಮಾದಪ್ಪಾ ಅನ್ನಿ…ಆರಾಮವಾಗಿ ಹತ್ತಬಹುದು” ಇತ್ಯಾದಿ ಪುಕ್ಕಟೆ ಸಲಹೆ ಕೊಟ್ಟರು! ಆದರೆ ಆಯೋಜಕರಾದ ಶ್ರೀ ನಾಗೇಂದ್ರ ಪ್ರಸಾದ್ ಅವರು ನನಗೆ ಧೈರ್ಯ ತುಂಬುತ್ತಾ ನನ್ನ ಜತಗೆ ತಾವೂ ನಿಧಾನವಾಗಿ ನಡೆದು ನಾನು ಈ ‘ರಿಯಾಲಿಟಿ ಟಾಸ್ಕ್’ ಅನ್ನು ಯಶಸ್ವಿಯಾಗಿ ಪೂರೈಸಲು ಕಾರಣರಾದರು! ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
‘ಇಂಡಿಗನತ್ತ’ ದಿಂದ ನಮ್ಮ ಗಮ್ಯ ಸ್ಥಾನವಾಗಿದ್ದ ಮಲೆ ಮಹದೇಶ್ವರ ಬೆಟ್ಟಕ್ಕೆ ಜೀಪ್ ನಲ್ಲಿ ಬಂದೆವು. ಈ ದಾರಿಯೋ ಮಾದಪ್ಪನಿಗೇ ಪ್ರೀತಿ ಅನ್ನುವಂತಿತ್ತು. ಆ ಜೀಪ್ ಪ್ರಯಾಣವು ದಸರಾ ವಸ್ತುಪ್ರದರ್ಶನದ ‘ಟೊರಟೊರ’ದಲ್ಲಿ ಕುಳಿತಂತೆ ಆಯಿತು. ಆಮೇಲೆ ಕೆಲವರು ಕ್ಯೂನಲ್ಲಿ ನಿಂತು ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು. ಇನ್ನು ಕೆಲವರು ವಿಶ್ರಮಿಸಿದರು. ಸಂಜೆ 5 ಗಂಟೆಗೆ ಪುನ: ವ್ಯಾನ್ ಹತ್ತಿದೆವು. ದಾರಿಯಲ್ಲಿ ಹೋಟೆಲ್ ಒಂದರಲ್ಲಿ ತಿಂಡಿ ತಿಂದು, ಮೈಸೂರು ತಲಪಿದಾಗ ರಾತ್ರಿ 0930 ಗಂಟೆ ಆಗಿತ್ತು. ಇಲ್ಲಿಗೆ ನಾಗಮಲೆ ಚಾರಣ ಯಶಸ್ವಿಯಾಗಿ ಕೊನೆಗೊಂಡಿತು.
ಒಟ್ಟಿನಲ್ಲಿ ಇದು ಒಂದು ಉತ್ತಮ ಚಾರಣವಾಗಿತ್ತು. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಎಲ್ಲರೂ ಸಮಯಪಾಲನೆಯೂ ಮಾಡಿದುದರಿಂದ ಭಾಗವಹಿಸಿದವರೆಲ್ಲರಿಗೂ ಗುರಿ ಮುಟ್ಟಿದ ಸಂತಸ ಲಭ್ಯವಾಯಿತು. ಈ ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀ ವೈದ್ಯನಾಥನ್ ಮತ್ತು ಶ್ರೀ ನಾಗೇಂದ್ರ ಪ್ರಸಾದ್ ಅವರಿಗೆ ಧನ್ಯವಾದಗಳು.
– ಹೇಮಮಾಲಾ. ಬಿ.