Total Pageviews

Tuesday, January 27, 2015

ಸಾಹಿತ್ಯ-ಸಂಭ್ರಮ-ಸಂಗೀತಗಳ ಸಂಗಮ


ಇತ್ತೀಚೆಗೆ ನನಗೆ ಅಂಟಿಕೊಂಡ ಗೀಳು ಕನ್ನಡದಲ್ಲಿ ತೋಚಿದಂತೆ ಗೀಚುವುದು. ಇದರ ಅಭಿವ್ಯಕ್ತಿಗೆ ವೇದಿಕೆಯಾಗಿ 'ಸುರಹೊನ್ನೆ' ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದ್ದಾಯಿತು. ಸಮಾನಾಸಕ್ತರೂ,  ಫೇಸ್ ಬುಕ್ ಗೆಳೆಯ/ಗೆಳತಿಯರೂ  ಈ ಹವ್ಯಾಸಕ್ಕೆ ತಾವೂ  ಕೈಜೋಡಿಸಿ, ನೀರೆರೆದು ಪೋಷಿಸಿದರು ಎಂದು ಹೇಳಿಕೊಳ್ಳಲು ಸಡಗರವಾಗುತ್ತಿದೆ. ಇದರ ಮುಂದುವರಿದ ಭಾಗವೋ ಎಂಬಂತೆ, ಹುಬ್ಬಳ್ಳಿಯಲ್ಲಿರುವ ಶ್ರೀ ರಂಗಣ್ಣ  ನಾಡಗೀರ ಅವರು, "ನೀವು ಧಾರವಾಡದಲ್ಲಿ  2015 ಜನವರಿ 16-18 ರ ವರೆಗೆ ಜರಗಲಿರುವ ಸಾಹಿತ್ಯ-ಸಂಭ್ರಮಕ್ಕೆ ಬನ್ನಿ, ಕಾರ್ಯಕ್ರಮಗಳು ಬಹಳ ಸೊಗಸಾಗಿರುತ್ತವೆ" ಎಂದಾಗ,  ಶ್ರುತಿಶರ್ಮಾ ಮತ್ತು ನಾನು ಖುಷಿಯಿಂದ ಹೊರಟೆವು.  ಮೈಸೂರಿನವರಾದ ಶ್ರೀ ಕೆ.ನಂಜುಂಡಸ್ವಾಮಿ ಮತ್ತು ಬೆಂಗಳೂರಿನ ಶ್ರೀ ಎಚ್.ಎಮ್.ಚಂದ್ರಶೇಖರಯ್ಯನವರನ್ನು ಅಲ್ಲಿ ಪರಿಚಯವಾಗಿ ನಾವೆಲ್ಲರೂ ಒಂದು ತಂಡವಾಗಿ ಇದ್ದೆವು. 


ಜನವರಿ 15 ರಂದು ಮೈಸೂರಿನಿಂದ ಹೊರಟ ನಾವು ಮರುದಿನ ಧಾರವಾಡ ತಲಪಿ, ಅಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣ ಸೇರಿ, ನೋಂದಣಿ ಪ್ರಕ್ರಿಯೆ ಮುಗಿಸಿದೆವು.  ಕಾರ್ಯಕ್ರಮಗಳ ವೇಳಾಪಟ್ಟಿ, ಊಟ-ತಿಂಡಿಯ ಕೂಪನ್ ಗಳು ಮತ್ತು ಕೆಲವು ಪುಸ್ತಕಗಳನ್ನೊಳಗೊಂಡ ಕಿಟ್ ಒಂದನ್ನು ಎಲ್ಲಾ ಪ್ರತಿನಿಧಿಗಳಿಗೂ ಕೊಟ್ಟಿದ್ದರು.  ಅಲ್ಲಿದ್ದ ಮೂರು ದಿನಗಳಲ್ಲೂ ನಮಗೆ ಸಭಾಭವನದಲ್ಲಿ ಸಾಹಿತ್ಯ, ಸಂಗೀತ, ಸಂಭ್ರಮಗಳ ರಸದೌತಣವಾದರೆ, ಊಟದ ಹಾಲ್ ನಲ್ಲಿ ಉತ್ತರ ಕರ್ನಾಟಕ ಶೈಲಿಯ ರಸಗವಳ ಲಭಿಸಿತ್ತು. ಧಾರವಾಡದ  ಜೋಳದ ರೊಟ್ಟಿ, ಬದನೆಕಾಯಿಯ ಎಣ್ಣೆಗಾಯಿ,  ಗೋಧಿಯ  ಹುಗ್ಗಿ, ಮಾದಲಿ, ..... ಇತ್ಯಾದಿಗಳೊಡನೆ   ಬಿಸಿಬೇಳೆ ಬಾತ್, ಮೊಸರನ್ನಗಳೂ ಇದ್ದ ಊಟ ಬಹಳ ಚೆನ್ನಾಗಿತ್ತು.   ಕಾರ್ಯಕ್ರಮಗಳಲ್ಲಿ ವೈವಿಧ್ಯತೆ ಇದ್ದು, ನಮಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ.  ಗೌಜು ಗದ್ದಲಗಳಿಲ್ಲದೆ ಪ್ರಶಾಂತವಾಗಿದ್ದ ಮತ್ತು ಸುಂದರವಾಗಿದ್ದ  ಯೂನಿವರ್ಸಿಟಿಯ ಆವರಣದಲ್ಲಿ, ಹಿತವಾದ ಹವಾಮಾನದಲ್ಲಿ ಸುಮ್ಮನೆ ನಡೆದಾಡುವುದು  ಕೂಡಾ ಬಹಳ ಸಂತೋಷ ಕೊಟ್ಟಿತು.



16 ಜನವರಿ 2015 ರಂದು ಸಚಿವೆ ಶ್ರೀಮತಿ ಉಮಾಶ್ರೀ ಅವರಿಂದ ಉದ್ಘಾಟನೆಗೊಂಡ ಸಾಹಿತ್ಯ-ಸಂಭ್ರಮವು  " ಈಗ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ" ಎಂದು ಪತ್ತೆ ಮಾಡುವ ಜಾಡಿನಲ್ಲಿ ಸಾಗಿತು. ಪ್ರತಿ ಗೋಷ್ಠಿಯಲ್ಲೂ ಸಂಪನ್ಮೂಲ ವ್ಯಕ್ತಿಗಳೊಡನೆ ಒಬ್ಬರು ನಿರ್ದೇಶಕರಿದ್ದರು. ಇಲ್ಲಿ ಏಕಮುಖವಾದ ಉದ್ದುದ್ದ ಭಾಷಣಗಳಿರಲಿಲ್ಲ. ಬದಲಾಗಿ ಅರ್ಥಪೂರ್ಣ ಸಂವಾದಗಳಿದ್ದುವು. ಸಭಿಕರಿಗೂ ಸಮಯದ ಪರಿಮಿತಿಯೊಳಗೆ ಪ್ರಶ್ನೆಗಳನ್ನು ಕೇಳುವ ಅವಕಾಶವಿತ್ತು. ಗೋಷ್ಠಿಯ ವಿಷಯಾಂತರವಾಗದಂತೆ  ನಿಗಾ ಇಟ್ಟಿದ್ದರು ಹಾಗೂ ಸಮಯಪಾಲನೆಯನ್ನು ಕಾಯ್ದುಕೊಂಡಿದ್ದರು.  ಇಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರಸ್ತುತ ವಿದ್ಯಮಾನಗಳನ್ನು ಚರ್ಚಿಸಲಾಯಿತು.  ಮುಂದಿನ ಭಾಗದಲ್ಲಿ  ಲಲಿತ ಪ್ರಬಂಧಗಳ ಓದು ಸುಲಲಿತವಾಗಿ ರಸಮಯವಾಗಿತ್ತು. ಮಲೆಮಹದೇಶ್ವರ, ಮಂಟೇಸ್ವಾಮಿ ಮತ್ತು ಬಿಳಿಗಿರಿರಂಗ ದೇವರ ಬಗ್ಗೆ ಜಾನಪದ ಶೈಲಿಯಲ್ಲಿ ರಚಿತವಾದ ಕಂಸಾಳೆ ಪದಗಳನ್ನು ಮೈಸೂರಿನ ಗುರುರಾಜ್ ಮತ್ತು ತಂಡ ಬಹಳ ಸೊಗಸಾಗಿ ಪ್ರಸ್ತುತ ಪಡಿಸಿದರು. ಕನ್ನಡದಲ್ಲಿ ಅನುವಾದಗಳ ಸಮಸ್ಯೆಗಳು, ಇತಿಹಾಸಕಾರರೊಂದಿಗೆ ಇತಿಹಾಸಕಾರ....ಹೀಗೆ ಗೋಷ್ಠಿಗಳು ಸಾಗಿದುವು. ಸಂಜೆ ಪಂ.ಎಂ. ವೆಂಕಟೇಶಕುಮಾರ ಅವರ ಶಾಸ್ತ್ರೀಯ ಸಂಗೀತವು  ಕೇಳುಗರನ್ನು ತನ್ಮಯಗೊಳಿಸಿತು.  



ಎರಡನೆಯ ದಿನವಾದ 17  ಜನವರಿಯಂದು, 'ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣಪತ್ರಿಕೆಗಳ ಪಾತ್ರ'ದ ಬಗ್ಗೆ ಬೆಳಕು ಚೆಲ್ಲಲಾಯಿತು. ಗೋಷ್ಠಿ ಮುಂದುವರಿದು 'ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ/ ಮಹಿಳಾ/ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ' ಎಂದು ಚರ್ಚಿಸಲಾಯಿತು.   ಲೇ.ಜ.ಎಸ್.ಸಿ.ದೇಶಪಾಂಡೆ ಅವರು ಬರೆದ ' ರಾಷ್ಟ್ರೀಯ ಸುರಕ್ಷೆಯ ಜಗ್ಗಾಟ' ಮತ್ತು  ಶ್ರೀ ಕೆದಂಬಾಡಿ ಜತ್ತಪ್ಪ ರೈ ಅವರ ' ಬೇಟೆಯ ಉರುಳು' ಪುಸ್ತಕಗಳ ಬಿಡುಗಡೆಯಾಯಿತು.  ಕನ್ನಡದ ದಿಗ್ಗಜರಾದ ಪು.ತಿ.ನರಸಿಂಹಾಚಾರ್ ಮತ್ತು ವಿ.ಕೃ.ಗೋಕಾಕ್ ಅವರ ಕವಿತೆಗಳನ್ನು ಓದಲಾಯಿತು. ಊಟದ ವಿರಾಮದ ನಂತರ  ಕನ್ನಡ ಮಾಧ್ಯಮ ಮುಂದೇನು? ಎಂದು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದುಹೋಗುತ್ತಿರುವ ಕನ್ನಡದ ಬಗ್ಗೆ ಚರ್ಚಿಸಿದರು.  ಆಮೇಲೆ, ಮಹಾಭಾರತ ಪರಂಪರೆಯ ಓದಿಗೆ ವಿದ್ವಾಂಸರು ದನಿಯಾದರು. ವೈದೇಹಿ ಕಥಾ ಪ್ರಸ್ತುತಿ, ನಾಟಕಕಾರರೊಂದಿಗೆ ನಾಟಕಕಾರ ಇತ್ಯಾದಿ ವಿಷಯಗಳ  ಗೋಷ್ಠಿಯಿಂದ ಸಂಪನ್ನಗೊಂಡ ಎರಡನೆಯ ದಿನವು  ಆನಂದಕಂದರ ಕಾವ್ಯಗಾಯನದಿಂದ ಮುಕ್ತಾಯಗೊಂಡಿತು.

18 ಜನವರಿ ಯಂದು,  ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದ ಸ್ಥಾನ, ಕನ್ನಡ ಪುಸ್ತಕಗಳ ಓದುಗರ ಒಲವುಗಳು ಮಾತು ಈಗಿನ ಮಾಹಿತಿ ತಂತ್ರ ಜ್ಞಾನದಿಂದ ಆಗಿರುವ ಒಳಿತು-ಕೆಡುಕುಗಳ ಬಗ್ಗೆಯೂ ವಿಚಾರ ವಿನಿಮಯವಾಯಿತು.  ಶ್ರೀ ಟಿ.ಪಿ. ಅಶೋಕ ಅವರ 'ಕಥನ ಕಾರಣ' ಮತ್ತು  ಶ್ರೀ ಸಿ.ಎನ್. ರಾಮಚಂದ್ರನ್ ಅವರ ' ಸೈದ್ಧಾಂತಿಕ ಹಾಗೂ ಅನ್ವಯಿಕ ನೆಲೆಗಳು' ಪುಸ್ತಕಗಳು ಬಿಡುಗಡೆಗೊಂಡುವು. 'ಸಾಹಿತಿಗಳೊಂದಿಗೆ ನಾವು - ಪ್ರಸಂಗಗಳು'  ಕಾರ್ಯಕ್ರಮದಲ್ಲಿ ಕೆಲವು ಖ್ಯಾತ ಸಾಹಿತಿಗಳೊಡನೆ ತಮಗಾದ ಅನುಭವಗಳನ್ನು ರಸವತ್ತಾಗಿ ಚಿತ್ರಿಸಿ ಸಭೆಯಲ್ಲಿ ನಗೆಗಡಲು ಸೃಷ್ಟಿಸಿದರು.  ಊಟದ ವಿರಾಮದ ನಂತರ 'ರಂಗಪ್ರದರ್ಶನ'ವನ್ನು ನೋಡಿ, 'ಭಾಷೆ ಮತ್ತು ಅಭಿನಯದ' ಒಳಹೊಕ್ಕು ಈ ಮೌಲ್ಯಯುತವಾದ ಸಾಹಿತ್ಯ-ಸಂಭ್ರಮಕ್ಕೆ ತೆರೆ ಬಿದ್ದಿತು. ಕೊನೆಯದಾಗಿ ಶ್ರೀ ಪ್ರಕಾಶ್ ರೈ ಅವರ 'ಒಗ್ಗರಣೆ' ಚಲನಚಿತ್ರ ಪ್ರದರ್ಶನವಿತ್ತು.

ಅಲ್ಲಿದ್ದ ಪುಸ್ತಕ ಮಳಿಗೆಗಳಲ್ಲಿ  ರಿಯಾಯಿತಿ ದರದಲ್ಲಿ  ಹಳೆಯ-ಹೊಸ , ಹಿರಿಯ-ಕಿರಿಯ ಬರಹಗಾರರ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದ್ದುವು. ಇದೇ ಸ್ಥಳದಲ್ಲಿ ದೊಡ್ಡದಾದ ಟಿ.ವಿ ಪರದೆಯನ್ನು ಅಳವಡಿಸಿದ್ದರು. ಸಭಾಂಗಣದಲ್ಲಿ ಸ್ಥಳಾವಕಾಶ ಸಿಗದಿದ್ದವರಿಗೆ ಇಲ್ಲಿ ಕುಳಿತು ಕಾರ್ಯಕ್ರಮಗಳನ್ನು ನೋಡುವ ವ್ಯವಸ್ಥೆ ಇದಾಗಿತ್ತು.



ಒಟ್ಟಿನಲ್ಲಿ ನಮಗೆ ಇದೊಂದು ಸಾಹಿತ್ಯ, ಸಂಗೀತ ಮತ್ತು ಸಂಭ್ರಮಗಳ ಸಂಗಮ. ಇದಕ್ಕೆ ಮೂಲ ಕಾರಣ  ಫೇಸ್ ಬುಕ್ ಗೆಳೆಯರಾದ ಹುಬ್ಬಳ್ಳಿಯ  ಶ್ರೀ ರಂಗಣ್ಣ ನಾಡಗೀರ ಅವರು. ಅವರ ಸಂದೇಶವು ನಮ್ಮನ್ನು ಮೈಸೂರಿನಿಂದ ಹೊರಡಿಸಿ ಧಾರವಾಡ ತಲಪಿಸಿತು. ಸಾಹಿತ್ಯ-ಸಂಭ್ರಮದಲ್ಲಿ ನಾವಿಬ್ಬರು  ಭಾಗವಹಿಸಲು ಬೇಕಾದ ವ್ಯವಸ್ಥೆ ಮಾಡುವುದರ ಜೊತೆಗೆ, ತಮ್ಮ ಸಮಯವನ್ನು ಹೊಂದಿಸಿಕೊಂಡು, ನಮಗೆ  ಸಾಧನಕೇರಿಯಲ್ಲಿರುವ  ದ.ರಾ.ಬೇಂದ್ರೆಯವರ  ನಿವಾಸ, ಮಲಪ್ರಭಾ ಅಣೆಕಟ್ಟು, ಸವದತ್ತಿಯಲ್ಲಿರುವ ಎಲ್ಲಮ್ಮ ದೇವಾಲಯ, ಮರುಘಾ ಮಠ ಮತ್ತು ಸಿದ್ಧಾರೂಢ ಮಠಗಳನ್ನೂ ತೋರಿಸಿ, ತಮ್ಮ ನಿವಾಸಕ್ಕೂ ಕರೆದೊಯ್ದಿದ್ದರು. ಹಿತೈಷಿಯಾದ ಅವರನ್ನೂ, ಅವರ  ಮನೆಯವರೆಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ.

ದ.ರಾ.ಬೇಂದ್ರೆಯವರ ನಿವಾಸ 'ಶ್ರೀಮಾತಾ'

ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ 'ಶ್ರೀಮಾತಾ'ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು.



ಮಲಪ್ರಭಾ ಅಣೆಕಟ್ಟು

ಇದು ನವಿಲುತೀರ್ಥ ಅಣೆಕಟ್ಟು. ಮಲಪ್ರಭಾ ನದಿಗೆ ಕಟ್ಟಲಾದ ಈ ಅಣೆಕಟ್ಟು ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ಮುನವಳ್ಳಿಯ ಮಧ್ಯೆ ಇದೆ. ಈ ಅಣೆಕಟ್ಟಿನಿಂದಾಗಿ 'ರೇಣುಕಾಸಾಗರ' ಎಂಬ ಜಲಾಶಯ ನಿರ್ಮಾಣವಾಗಿದ್ದು, ಇದು ಸುಮಾರು 2000 ಚದರ ಕಿ.ಮೀ ಯಷ್ಟು ಕೃಷಿಭೂಮಿಗೆ ನೀರಾವರಿ ಒದಗಿಸುತ್ತದೆ.
ನಿನ್ನೆ ನವಿಲುತೀರ್ಥ ಅಣೆಕಟ್ಟಿಗೆ ನಮ್ಮನ್ನು ಕರೆದುಕೊಂಡು ಹೋಗಿದ್ದ ಶ್ರೀ ರಂಗಣ್ಣ ನಾಡಗೀರ ಅವರು ಈ ಅಣೆಕಟ್ಟಿನ ನಿರ್ಮಾಣದ ಆರಂಭದ ಹಂತದಲ್ಲಿ ಅಲ್ಲಿ ಸೇವೆಯಲ್ಲಿದ್ದರು.(ಚಿತ್ರದಲ್ಲಿ ಬಲದಿಂದ ಎರಡನೆಯವರು). ಧಾರವಾಡದ ಸಾಹಿತ್ಯ-ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ನಮ್ಮನ್ನು ಬಹಳ ಅತ್ಮೀಯತೆಯಿಂದ ತಮ್ಮೂರಿಗೆ ಸ್ವಾಗತಿಸಿ, ಕಾಳಜಿಯಿಂದ ಆದರಿಸುವ ಅವರಿಗೆ ಅನಂತ ನಮನಗಳು.
 — with Ranganna Nadgir and Shruthi Sharma.
Like ·  · 

Sunday, January 4, 2015

ಚಂದ್ರಮಾನ – ನಾಗತಿಹಳ್ಳಿ ಚಂದ್ರಶೇಖರ



ನವೆಂಬರ್ ತಿಂಗಳಲ್ಲಿ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ನುಡಿಸಿರಿ’ ಕಾರ್ಯಕ್ರಮದ ಅಂಗವಾಗಿ, ಕಾಲೇಜಿನ ಕಟ್ಟಡವೊಂದರ ನಾಲ್ಕೂ ಮಹಡಿಗಳಲ್ಲಿ ವಿವಿಧ ಮಳಿಗೆಗಳಿದ್ದುವು.


ನಿರ್ಧಿಷ್ಟ ಉದ್ದೇಶ-ಗುರಿ ಇಲ್ಲದೆ, ಯಾವುದನ್ನು ಕೊಳ್ಳಬೇಕೆಂಬ ಇರಾದೆಯೂ ಇಲ್ಲದೆ, ಎಲ್ಲಾ ಮಳಿಗೆಗಳಿಗೂ ಎಡತಾಕುತ್ತಾ ಬಂದಾಗ  ಒಂದು ಕಡೆ “ನಾಗತಿಹಳ್ಳಿ ಚಂದ್ರಶೇಖರ” ಅವರ ಪುಸ್ತಕಗಳ ಪ್ರದರ್ಶನ ಎಂಬ ಗುರುತು ಕಾಣಿಸಿತು.ಒಳ ಹೊಕ್ಕಾಗ ಅಲ್ಲಿ ಖುದ್ದಾಗಿ  ಶ್ರೀ ನಾಗತಿಹಳ್ಳಿ ಚಂದ್ರಶೇಖರವರೇ ಇದ್ದರು! ಆಸಕ್ತರಲ್ಲಿ   ಕುಶಲೋಪರಿ ಮಾತನಾಡುವುದರ ಜತೆಗೆ ಪುಸ್ತಕಕ್ಕೆ  ಹಸ್ತಾಕ್ಷರವನ್ನೂ ಹಾಕುತ್ತಿದ್ದರು.  
Chandramaana Nagatihalliಕೆಲವು ವರ್ಷಗಳ ಹಿಂದೆ ನನಗೆ ಉದ್ಯೋಗ ನಿಮಿತ್ತ, ಪರದೇಶಗಳಿಗೆ ಹೋಗಬೇಕಾದ ಸಂದರ್ಭಗಳು ಬಂದಿದ್ದುವು. ಯಾವುದೇ ಪರದೇಶಗಳಿಗೆ ಹೊರಡುವ ಮೊದಲು ಆ ದೇಶಗಳ ರೀತಿ-ರಿವಾಜು, ಶಿಷ್ಟಾಚಾರಗಳ ಬಗ್ಗೆ ಸ್ವಲ್ಪವಾದರೂ ಮುಂಚಿತವಾಗಿ ತಿಳಿದಿದ್ದರೆ ಅನುಕೂಲ ಮತ್ತು ನಾವು ಅಲ್ಲಿ ಬೆಪ್ಪುತಕ್ಕಡಿಯಂತಾಗುವ ಸನ್ನಿವೇಶಗಳನ್ನು ತಡೆಯಬಹುದು. ಈ ಉದ್ದೇಶದಿಂದ ಮೈಸೂರಿನ ಪುಸ್ತಕ ಮಳಿಗೆಗಳಲ್ಲಿ ಪ್ರವಾಸ ಕಥನಗಳಿಗಾಗಿ ಹುಡುಕಿದಾಗ  ನಾಗತಿಹಳ್ಳಿಯವರ ಪ್ರವಾಸ ಕಥನವಾದ ‘ಅಯನ’  ಲಭಿಸಿತ್ತು, ಅದನ್ನು ಕೊಂಡು ಓದಿದ್ದೆ. ಅವರ ಹಾಸ್ಯಭರಿತ ಶೈಲಿಯ ನಿರೂಪಣೆ ಬಹಳ ಇಷ್ಟವಾಯಿತು. ಆಮೇಲೆ, ಅವರ ಅಮೇರಿಕಾ! ಅಮೇರಿಕಾ!’ ಮತ್ತು ‘ನನ್ನ ಗ್ರಹಿಕೆಯ ನೇಪಾಳ′ ಪುಸ್ತಕಗಳನ್ನೂ ಓದಿದ್ದೇನೆ.  ಒಟ್ಟಾರೆಯಾಗಿ ನನಗೆ ಪ್ರವಾಸಕಥನಗಳ ಬಗ್ಗೆ ಆಸಕ್ತಿ ಬರಲು ಈ ಓದು ಪ್ರೇರೇಪಿಸಿತು ಅನಿಸುತ್ತದೆ.
ವಿಭಿನ್ನ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆಗೈದ ಇವರ ಬದುಕು-ಬರಹ-ಆಸಕ್ತಿ-ಸಾಧನೆಗಳ ಕುರಿತ ವಿಮರ್ಶಾ ಬರಹಗಳ ಸಂಕಲನವಾದ  ‘ಚಂದ್ರಮಾನ’ ಪುಸ್ತಕವು ತನ್ನ  ವಿಶಿಷ್ಟವಾದ, ಕಿತ್ತು ಹೋದ ಛಾಯಾಚಿತ್ರದ ಚೌಕಟ್ಟಿನ ಮುಖಪುಟದಿಂದಲೇ ಆಕರ್ಷಿಸಿತು. ಅದನ್ನು ಕೊಂಡು, ನಾಗತಿಹಳ್ಳಿಯವರ ಹಸ್ತಾಕ್ಷರವನ್ನೂ ಪಡೆದು ಬಂದಿದ್ದಾಯಿತು. ತೀರಾ ಸರಳವಾಗಿ, ಅತ್ಮೀಯವಾಗಿ ಮಾತನಾಡಿಸಿದರು.
ಈ ಪುಸ್ತಕದಲ್ಲಿ ನಾಗತಿಹಳ್ಳಿಯವರನ್ನು ಹತ್ತಿರದಿಂದ ಬಲ್ಲ ಹಲವಾರು ಹಿತೈಷಿಗಳು  ಅವರ ವ್ಯಕ್ತಿತ್ವ-ಸಾಧನೆಗಳನ್ನು ಪರಿಚಯಿಸಿದ್ದಾರೆ. ಅವುಗಳಲ್ಲಿ ಕೆಲವು ವಾಕ್ಯಗಳು ಬಹಳ ಆಪ್ತವೆನಿಸಿದುದುವು. ಉದಾ:
  • ಒಟ್ಟಾರೆಯಾಗಿ ಹೇಳಬೇಕಾದರೆ ನಾಗತಿಹಳ್ಳಿಯವರಿಗೆ ಬೇರುಗಳೂ ಬೇಕು, ರೆಕ್ಕೆಗಳೂ ಬೇಕು” ಪುಟ 78  -ಡಾ.ಸಿ.ಎನ್. ರಾಮಚಂದ್ರನ್ 
  • “ಚಂದ್ರು ಬಡತನವನ್ನು ಬಹಳ ಸೃಷ್ಟಿಶೀಲ ಗುಣವೆಂದು ಭಾವಿಸಿಕೊಂಡವರು. ಹಣ ಬಂದಾಗ ತಾನು ಬಡವನಾಗಿದ್ದೆ ಎಂದುಬನ್ನು ಮರೆತಿಲ್ಲ. ಬಡವನಾದಾಗ ತಾನು ಶ್ರೀಮಂತನಾಗುತ್ತೀನಿ ಅನ್ನುವ ಕನಸು ಬಿಟ್ಟಿಲ್ಲ″  ಪುಟ 82 –  ಪ್ರೊ.ಎಂ.ಕೃಷ್ಣೇಗೌಡ 
  • ಬಹಳ ಜನ ಅವರನ್ನು ಮೇಷ್ಟ್ರು ಎಂದು ಕರೆಯುತ್ತಾರೆ. ನನಗೆ ಅವರೇ ವಿಶ್ವವಿದ್ಯಾಲಯ”  ಪುಟ 85 – ಶ್ರೀ ವಿಶ್ವೇಶ್ವರ ಭಟ್.  

Hema- Nagatihalli - Copy
ನನಗೆ ಅನಿಸಿದುದೇನೆಂದರೆ ಸಾಮಾನ್ಯರೂ ಅಸಾಮಾನ್ಯ ಕೆಲಸವನ್ನು  ಮಾಡಲು ಸಾಧ್ಯ ಎಂದು ತಮ್ಮ ಕೃತಿ ಮತ್ತು ಕೆಲಸಗಳ ಮೂಲಕ ನಾಗತಿಹಳ್ಳಿ ಚಂದ್ರಶೇಖರ ಅವರು ನಿರೂಪಿಸಿದ್ದಾರೆ. ಅವರಿಂದ ಕಾರ್ಯವೈಖರಿಯಿಂದ ನಾವು  ಕಲಿತುಕೊಳ್ಳಬೇಕಾದ ವಿಚಾರಗಳು ಸಾಕಷ್ಟಿವೆ.

– ಹೇಮಮಾಲಾ.ಬಿ

ರೈಲುಹಳಿಗಳ ಮೇಲೆ ಲಾರಿಗಳು….RORO.!

ಡಿಸೆಂಬರ್ 13, 2014  ರಂದು, ಕುಮಟಾ ರೈಲ್ವೇ ಸ್ಟೇಶನ್ ನಲ್ಲಿ  ಮೈಸೂರಿಗೆ ಹೋಗಲೆಂದು ರೈಲ್ ನ ಆಗಮನದ   ನಿರೀಕ್ಷೆಯಲ್ಲಿದ್ದೆವು. ತೂಕಡಿಸಿಕೊಂಡು ಕುಳಿತಿದ್ದಾಗ  ಇದ್ದಕ್ಕಿದ್ದಂತೆ ರೈಲುಹಳಿಗಳ ಮೇಲೆ ಹಲವಾರು ಲಾರಿಗಳು ವ್ಯಾಗನ್ ಮೇಲೆ! ನಿದ್ದೆಯಿಂದೆದ್ದು  ಕ್ಯಾಮೆರಾ ತೆಗೆಯುವಷ್ಟರಲ್ಲಿ ವ್ಯಾಗನ್ ಹೊರಟುಹೋಗಿತ್ತು. ಹಳಿಗಳ ಮೇಲೆ ಹಲವಾರು ಲಾರಿಗಳು.…ಏನಿದರ  ಹಿನ್ನೆಲೆ  ಎಂದು ತಿಳಿಯಲು ಅಂತರ್ಜಾಲದ ಮೊರೆ ಹೊಕ್ಕೆ.  
ವಿಕಿಪಿಡಿಯಾದ ಪ್ರಕಾರ ಇದು  ಕೊಂಕಣ ರೈಲ್ವೇ ವಿಭಾಗವು ಕಲ್ಪಿಸಿರುವ ವಿಶಿಷ್ಟ ಸಾರಿಗೆ ವ್ಯವಸ್ಥೆ   ರೊರೊ ( RORO: Roll On Roll Off) 

konkan-roll-on-roll-off
ಈ  ವ್ಯವಸ್ಥೆಯಲ್ಲಿ, ಸರಕು ತುಂಬಿದ ಲಾರಿಗಳನ್ನು ರೈಲ್ವೇ  ವ್ಯಾಗನ್ ಗಳ ಮೇಲೇರಿಸಿ, ನಿಗದಿತ ಸ್ಥಳಕ್ಕೆ ಒಯ್ಯಲಾಗುತ್ತದೆ. ಕೊಂಕಣ ರೈಲ್ವೇಮಾರ್ಗಕ್ಕೆ ಸಮಾನಾಂತರವಾಗಿ  ರಾಷ್ಟ್ರೀಯ ಹೆದ್ದಾ ರಿ 17 ಕೂಡ ಸಾಗುತ್ತದೆ.   ಪಶ್ಛಿಮ ಘಟ್ಟಗಳ ಮಧ್ಯೆ ಹಾದುಹೋಗುವ ಈ ರಸ್ತೆಯು ಸದಾ ವಾಹನಗಳಿಂದ ಕೂಡಿರುತ್ತವೆ. ಕೆಲವೆಡೆ ಕಿರಿದಾದ ಮಾರ್ಗ, ಹವಾಮಾನ ವೈಪರೀತ್ಯಗಳು ಮತ್ತು ದೂರದ ಪ್ರಯಾಣದಿಂದಾಗಿ ಲಾರಿ ಚಾಲಕರಿಗೆ ಉಂಟಾಗುವ ದೇಹಾಲಸ್ಯ- ಎಲ್ಲವೂ ಸೇರಿ ರಸ್ತೆ ಅಫಘಾತಗಳು ಆಗುವ ಸಾಧ್ಯತ ಹೆಚ್ಚಿರುತ್ತವೆ.
ಆದರೆ, ಕೊಂಕಣ ರೈಲ್ವೇಯು ಸೃಷ್ಟಿಸಿದ ರೋರೋ ವ್ಯವಸ್ಥೆಯಿಂದಾಗಿ ಈ ಮಾರ್ಗದಲ್ಲಿ ಲಾರಿಗಳನ್ನು ರೈಲ್ವೇವ್ಯಾಗನ್ ನಲ್ಲಿ  ನಿಗದಿತ ದರ ಕೊಟ್ಟು ಸಾಗಿಸಬಹುದು. ಇದರಿಂದಾಗಿ  ಲಾರಿಯವರಿಗೆ ಹಣ ಮತ್ತು ಇಂಧನದ ಉಳಿಕೆ ಆಗುತ್ತದೆ. ಲಾರಿ ಚಾಲಕರಿಗೆ ಮೈಯೆಲ್ಲಾ ಕಣ್ಣಾಗಿ ನಿದ್ದೆಗೆಟ್ಟು ರಸ್ತೆಯಲ್ಲಿ ಲಾರಿ ಓಡಿಸಬೇಕಾದ ಶ್ರಮವಿಲ್ಲ. ರಸ್ತೆಯಲ್ಲಿ ಲಾರಿಗಳ ಸಂಖ್ಯೆ ಕಡಿಮೆಯಾದಾಗ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ರಸ್ತೆಯ ಸ್ವಾಸ್ತ್ಯವೂ ಚೆನ್ನಗಿರುತ್ತದೆ. ಒಟ್ಟಿನ ಮೇಲೆ ಲಾರಿ ಮಾಲಿಕರಿಗೆ, ಚಾಲಕರಿಗೆ ಅನುಕೂಲ ಮತ್ತು ಕೊಂಕಣ ರೈಲ್ವೇಗೂ ಆದಾಯ ತರುವ  ವ್ಯವಸ್ಥೆ ಈ ರೋರೋ. 
(ಚಿತ್ರ ಮತ್ತು ಮಾಹಿತಿ :ಅಂತರ್ಜಾಲ)

– ಹೇಮಮಾಲಾ.ಬಿ,ಮೈಸೂರು

“ತ್ರಾಣ ಇದ್ದರೆ ಯಾಣ ಹತ್ತು”

“ತ್ರಾಣ ಇದ್ದರೆ ಯಾಣ ಹತ್ತು” ಎಂಬ ಮಾತು ಕೇಳಿದ್ದೆ. ಡಿಸೆಂಬರ್ 2014 ರ ಮೊದಲ ನನಗೂ ತ್ರಾಣ ಪರೀಕ್ಷೆ ಎದುರಾಯಿತು. ಅಬ್ಬಬ್ಬಾ ಎನ್ನುತ್ತಾ ನಾನೂ ಜಸ್ಟ್ ಪಾಸಾಗಿದ್ದೇನೆ!

Yana- 13122014
                                                                 
WEstern Ghats trek 08-13 Dec 2014

ಡಿಸೆಂಬರ್ 09 ರಿಂದ 13, 2014 ರ ವರೆಗೆ, ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ದಿನಕ್ಕೆ ಸುಮಾರು 16 ಕಿ.ಮೀ ಗಳಷ್ಟು ದೂರವನ್ನು ಕ್ರಮಿಸುತ್ತಾ, ಹಂತಹಂತವಾಗಿ ಚಾರಣ ಮಾಡಿ, ಕೊನೆಯ ಗಮ್ಯ ಸ್ಥಾನವಾಗಿದ್ದ ‘ಯಾಣ’ (Yana) ತಲಪಿದ್ದೆವು.
 ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಮೈಸೂರಿನ ಯೈ.ಎಚ್.ಎ.ಐ ಬಳಗಕ್ಕೂ, ನನಗೆ ಬಹಳ ಸಹಕಾರ ನೀಡಿದ ಸಹಚಾರಣಿಗರಿಗೂ ಧನ್ಯವಾದಗಳು.