ಡಿಸೆಂಬರ್ 13, 2014 ರಂದು, ಕುಮಟಾ ರೈಲ್ವೇ ಸ್ಟೇಶನ್ ನಲ್ಲಿ ಮೈಸೂರಿಗೆ ಹೋಗಲೆಂದು ರೈಲ್ ನ ಆಗಮನದ ನಿರೀಕ್ಷೆಯಲ್ಲಿದ್ದೆವು. ತೂಕಡಿಸಿಕೊಂಡು ಕುಳಿತಿದ್ದಾಗ ಇದ್ದಕ್ಕಿದ್ದಂತೆ ರೈಲುಹಳಿಗಳ ಮೇಲೆ ಹಲವಾರು ಲಾರಿಗಳು ವ್ಯಾಗನ್ ಮೇಲೆ! ನಿದ್ದೆಯಿಂದೆದ್ದು ಕ್ಯಾಮೆರಾ ತೆಗೆಯುವಷ್ಟರಲ್ಲಿ ವ್ಯಾಗನ್ ಹೊರಟುಹೋಗಿತ್ತು. ಹಳಿಗಳ ಮೇಲೆ ಹಲವಾರು ಲಾರಿಗಳು.…ಏನಿದರ ಹಿನ್ನೆಲೆ ಎಂದು ತಿಳಿಯಲು ಅಂತರ್ಜಾಲದ ಮೊರೆ ಹೊಕ್ಕೆ.
ವಿಕಿಪಿಡಿಯಾದ ಪ್ರಕಾರ ಇದು ಕೊಂಕಣ ರೈಲ್ವೇ ವಿಭಾಗವು ಕಲ್ಪಿಸಿರುವ ವಿಶಿಷ್ಟ ಸಾರಿಗೆ ವ್ಯವಸ್ಥೆ ರೊರೊ ( RORO: Roll On Roll Off)
ಈ ವ್ಯವಸ್ಥೆಯಲ್ಲಿ, ಸರಕು ತುಂಬಿದ ಲಾರಿಗಳನ್ನು ರೈಲ್ವೇ ವ್ಯಾಗನ್ ಗಳ ಮೇಲೇರಿಸಿ, ನಿಗದಿತ ಸ್ಥಳಕ್ಕೆ ಒಯ್ಯಲಾಗುತ್ತದೆ. ಕೊಂಕಣ ರೈಲ್ವೇಮಾರ್ಗಕ್ಕೆ ಸಮಾನಾಂತರವಾಗಿ ರಾಷ್ಟ್ರೀಯ ಹೆದ್ದಾ ರಿ 17 ಕೂಡ ಸಾಗುತ್ತದೆ. ಪಶ್ಛಿಮ ಘಟ್ಟಗಳ ಮಧ್ಯೆ ಹಾದುಹೋಗುವ ಈ ರಸ್ತೆಯು ಸದಾ ವಾಹನಗಳಿಂದ ಕೂಡಿರುತ್ತವೆ. ಕೆಲವೆಡೆ ಕಿರಿದಾದ ಮಾರ್ಗ, ಹವಾಮಾನ ವೈಪರೀತ್ಯಗಳು ಮತ್ತು ದೂರದ ಪ್ರಯಾಣದಿಂದಾಗಿ ಲಾರಿ ಚಾಲಕರಿಗೆ ಉಂಟಾಗುವ ದೇಹಾಲಸ್ಯ- ಎಲ್ಲವೂ ಸೇರಿ ರಸ್ತೆ ಅಫಘಾತಗಳು ಆಗುವ ಸಾಧ್ಯತ ಹೆಚ್ಚಿರುತ್ತವೆ.
ಆದರೆ, ಕೊಂಕಣ ರೈಲ್ವೇಯು ಸೃಷ್ಟಿಸಿದ ರೋರೋ ವ್ಯವಸ್ಥೆಯಿಂದಾಗಿ ಈ ಮಾರ್ಗದಲ್ಲಿ ಲಾರಿಗಳನ್ನು ರೈಲ್ವೇವ್ಯಾಗನ್ ನಲ್ಲಿ ನಿಗದಿತ ದರ ಕೊಟ್ಟು ಸಾಗಿಸಬಹುದು. ಇದರಿಂದಾಗಿ ಲಾರಿಯವರಿಗೆ ಹಣ ಮತ್ತು ಇಂಧನದ ಉಳಿಕೆ ಆಗುತ್ತದೆ. ಲಾರಿ ಚಾಲಕರಿಗೆ ಮೈಯೆಲ್ಲಾ ಕಣ್ಣಾಗಿ ನಿದ್ದೆಗೆಟ್ಟು ರಸ್ತೆಯಲ್ಲಿ ಲಾರಿ ಓಡಿಸಬೇಕಾದ ಶ್ರಮವಿಲ್ಲ. ರಸ್ತೆಯಲ್ಲಿ ಲಾರಿಗಳ ಸಂಖ್ಯೆ ಕಡಿಮೆಯಾದಾಗ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ರಸ್ತೆಯ ಸ್ವಾಸ್ತ್ಯವೂ ಚೆನ್ನಗಿರುತ್ತದೆ. ಒಟ್ಟಿನ ಮೇಲೆ ಲಾರಿ ಮಾಲಿಕರಿಗೆ, ಚಾಲಕರಿಗೆ ಅನುಕೂಲ ಮತ್ತು ಕೊಂಕಣ ರೈಲ್ವೇಗೂ ಆದಾಯ ತರುವ ವ್ಯವಸ್ಥೆ ಈ ರೋರೋ.
(ಚಿತ್ರ ಮತ್ತು ಮಾಹಿತಿ :ಅಂತರ್ಜಾಲ)
– ಹೇಮಮಾಲಾ.ಬಿ,ಮೈಸೂರು
No comments:
Post a Comment