Total Pageviews

Tuesday, March 24, 2015

ಮೊಳುದುದ್ದ ಹೂವು…..ಮಾರುದ್ದದ ವಿಶ್ವಾಸ..

ದಿನಾ ಕೆಲಸಕ್ಕೆ ಹೋಗುವಾಗ ರಸ್ತೆಯ  ಟ್ರಾಫಿಕ್  ಸಿಗ್ನಲ್ ಒಂದರಲ್ಲಿ ಕಾಯಬೇಕಾಗುತ್ತದೆ. ಅಲ್ಲೊಬ್ಬ  ಮಲ್ಲಿಗೆ ಹೂವು ಮಾರುವವನು  ನಿಂತ ವಾಹನಗಳ ಹತ್ತಿರ ಬಂದು ‘ಹೂವು ಬೇಕೆ’ ಎನ್ನುವನು. ಕೆಲವರು ಬೇಡ ಅನ್ನುವುದು, ಕೆಲವರು ಹೂ ಕೊಳ್ಳುವುದು ನಡೆಯುತ್ತಿರುತ್ತದೆ. ಅರಳುವ ಮೊಗ್ಗುಗಳನ್ನು ಪೋಣಿಸಿರುವ ಮಾಲೆಗಳನ್ನು ಮಾರುತ್ತಿರುವ ಇವರ ಭವಿಷ್ಯ ಅರಳುವುದು ಯಾವಾಗಲೋ ಎನಿಸುತ್ತದೆ. ಅಷ್ಟರಲ್ಲಿ ಹಸಿರು ಸಿಗ್ನಲ್ ಬಂದು ನಿಂತ ಗಾಡಿಗಳೆಲ್ಲಾ ಹೋಗಿ ಇನ್ನಷ್ಟು ಕೆಲವು ಬಂದು ಸೇರುತ್ತವೆ. 
ಕೆಲವು ದಿನಗಳ ಹಿಂದೆ, ಸಿಗ್ನಲ್ ಬಳಿ ನಿಂತಿದ್ದಾಗ ಮಲ್ಲಿಗೆಹೂ ಮಾರುವಾತ ‘ಹೂ ಬೇಕೆ’ ಎಂದು ಕೇಳುತ್ತಾ ಬಂದ. ‘ಬೇಡ’ ಎಂದಿದ್ದಾಯಿತು. ಯಾಕೆಂದರೆ, ನಾನು ಹೂ ಮುಡಿಯುವುದು ಸಮಾರಂಭಗಳಿಗೆ ಹೋಗುವುದಿದ್ದರೆ ಮಾತ್ರ. ಇನ್ನು ಮನೆಯ ದೇವರ ಫೊಟೋಗಳಿಗೆ , ಎಮ್ಮ ಮನೆಯಂಗಳದ ಹೂಗಳೇ ಸಾಕಷ್ಟಿವೆ. ಮೇಲಾಗಿ,  ದೇವರ ಮನೆಗೆ ನಮ್ಮೆಜಮಾನ್ರು ಉಸ್ತುವಾರಿ ಸಚಿವರು. ಹಾಗಾಗಿ ನಾನು ಮಲ್ಲಿಗೆ ಹೂ ಕೊಳ್ಳುವ ಸಂದರ್ಭ ಅಪರೂಪ. ಈತ ಕೇಳಿದ್ದಾಗ ಮಾತ್ರ ಕೆಲವೊಮ್ಮೆ  ಹೂವನ್ನು ಖರೀದಿಸುತ್ತಿದ್ದೆ.
ಕಳೆದ ತಿಂಗಳು ಅದೊಂದು ದಿನ,  ಅದೇ ಸಿಗ್ನಲ್ ನಲ್ಲಿ, ನಾನು ಕಾರು ನಿಲ್ಲಿಸಿದ್ದೆ.  ಇನ್ನೇನು ಹಸಿರು ಸಿಗ್ನಲ್ ಬರಬೇಕು, ಅಷ್ಟರಲ್ಲಿ  ಆತ ಅದೆಲ್ಲಿದ್ದನೋ  ಒಂದು ಮೊಳದಷ್ಟು ಹೂವನ್ನು ನನಗೆ ಕೊಟ್ಟ. ನಾನು ಗಡಿಬಿಡಿಯಲ್ಲಿ   10  ರೂ ಚಿಲ್ಲರೆ ಇಲ್ಲ ಎನ್ನುತ್ತಾ, 100  ರೂ ಕೊಡಲು ಹೊರಟೆ.  ಅದು  ಹೇಗೋ ಕೈತಪ್ಪಿ ರಸ್ತೆಗೆ ಬಿತ್ತು.  ಹಸಿರು ಸಿಗ್ನಲ್ ಬಂದೇ ಬಿಟ್ಟಿತು, ಹಿಂದಿನ ವಾಹನಗಳ ಹಾರ್ನ್ ಶುರುವಾಗಿ   ಆ ಚಾಲಕರ ಕೋಪಕ್ಕೆ ತುತ್ತಾಗುವ  ನಾನು ಹೊರಡಲೇ ಬೇಕಲ್ಲಾ ಎಂದು ಕಾರು ಚಲಾಯಿಸುತ್ತಿದ್ದಂತೆ, ಹೂ ಮಾರುವಾತ ಓಡೋಡಿ ಬಂದು ರಸ್ತೆಗೆ ಬಿದ್ದಿದ್ದ ನೂರರ ನೋಟನ್ನು ಕಾರಿನ ಒಳಕ್ಕೆ ಹಾಕಿ ‘ದುಡ್ಡು ನಾಳೆ ಕೊಡಿ’ಎಂಬಂತೆ ಕೈಸನ್ನೆ ಮಾಡಿದ. ಅಂತೂ ಆವತ್ತು ನಾನು ದುಡ್ಡು ಕೊಡದೇ ಹೂ ಪಡೆದಂತಾಯಿತು.
ಸಿಗ್ನಲ್ ನಲ್ಲಿ ವಾಹನಗಳ ದೊಂಬಿಯಲ್ಲಿ, ಕೈತಪ್ಪಿ ಹೋದ ಆ ನೂರರ ನೋಟು ಯಾವುದಾದರೂ  ವಾಹನದ ಚಕ್ರಕ್ಕೆ ಸಿಕ್ಕಿ ಕೊಳೆಯಾಗುವ ಅಥವಾ ಹರಿಯುವ  ಸಾಧ್ಯತೆ ಇತ್ತು.  ಯಾರಾದರೂ ಹೆಕ್ಕಿದ್ದರೂ ನಾನು ಗಮನಿಸಲು ಸಾಧ್ಯವಿಲ್ಲವಾಗಿತ್ತು. ಆತ ತಾನೇ ಇಟ್ಟುಕೊಂಡಿದ್ದರೂ ನನಗೇನೂ ಗೊತ್ತಾಗುತ್ತಿರಲಿಲ್ಲ.  ಒಟ್ಟಿನಲ್ಲಿ ಆತನ ಪ್ರಾಮಾಣಿಕತೆ ಮೆಚ್ಚಿಗೆಯಾಯಿತು.
ನಾಳೆ ಆತನಿಗೆ ಮರೆಯದೆ  ಹಣ  ಕೊಡಬೇಕು ಎಂದು ಬೆಳಗ್ಗೆ ಹೊರಡುವಾಗ ದುಡ್ಡನ್ನು ಪಕ್ಕದ ಸೀಟ್ ನಲ್ಲಿ ಕಾಣಿಸುವಂತೆ ಎತ್ತಿಟ್ಟಿದ್ದೆ. ಸಿಗ್ನಲ್ ನಲ್ಲಿ ಕಾರಿನ  ಪಕ್ಕ ಬಂದ ಅವನಿಗೆ 5  ರೂ. ಜಾಸ್ತಿ ಸೇರಿಸಿ ಕೊಟ್ಟೆ. ನೋಡಿದ ತಕ್ಷಣ ಆತ “5 ರೂ. ಜಾಸ್ತಿ ಇದೆ… ನಂಗೆ ಫ್ರೀ ಏನೂ ಬೇಡಾ…..ವ್ಯಾಪಾರ ಮಾಡಿ….  ವಿಶ್ವಾಸವಿದ್ದರೆ ಥ್ಯಾಂಕ್ಸ್  ಅಂತೀನೀ… ”  ಅಂದ. ಸರಿ, ಆತನ ಸ್ವಾಭಿಮಾನಕ್ಕೆ ನಾನೇಕೆ ಭಂಗ ತರಲಿ ಎಂದು ‘ಹಾಗಿದ್ದರೆ ಈ ಗಣಪತಿ ಮೂರ್ತಿಗೆ ಮುಡಿಸುವಷ್ಟು ಸಣ್ಣ  ಮಾಲೆ ಕೊಡಿ’ ಎಂದೆ. ಆತ ಹೂಮಾಲೆಯನ್ನು ಕತ್ತರಿಸಿ ಕೊಟ್ಟ.  ಅದು ನಿನ್ನೆ 10. ರೂ ಗೆ ಕೊಟ್ಟಷ್ಟೇ ಉದ್ದವಿತ್ತು.

Jasmine
ಇದೇನ್ರಿ, ನಿನ್ನೆ ಕೊಟ್ಟಷ್ಟೇ ಇದೆಯಲ್ಲ….5 ರೂ.ಗೆ  ಸಣ್ಣ ತುಂಡು ಸಾಕಿತ್ತು ‘ ಅಂದೆ.  ‘ಈವತ್ತು ಮಲ್ಲಿಗೆಗೆ ಕಡಿಮೆ ರೇಟ್  ಇದೆ’ ಅಂದ. ಹಾಗಿದ್ದರೆ, ಇನ್ನೊಂದು 10  ರೂ. ಗೆ ಕೊಡಿ ಅಂದೆ. ಇನ್ನೊಂದು ಮೊಳ ಹೂ ಕೊಂಡಿದ್ದಾಯಿತು.   ನಗುಮುಖದಿಂದ “ಥ್ಯಾಂಕ್ಸ್ ಮೇಡಂ”  ಅಂದ. ಮನೆ ತಲಪಿದ ಮೇಲೆ ಕುತೂಹಲಕ್ಕೆಂದು ಹೋಲಿಸಿ ನೋಡಿದಾಗ  ಎರಡೂ ಮಲ್ಲಿಗೆ ಮಾಲೆಗಳು  ಒಂದೇ ಅಳತೆಯವಾಗಿದ್ದುವು !!  ಮೊಳುದುದ್ದ ಹೂವು ಅದಾದರೂ ಮಾರುದ್ದದ ವಿಶ್ವಾಸ ಅದರಲ್ಲಿತ್ತು.
ಈ ಘಟನೆಯ ನಂತರ ನಾನು ಒಂದು ಅಭ್ಯಾಸ ರೂಢಿಸಿಕೊಂಡಿದ್ದೇನೆ. ಅದೇನೆಂದರೆ, ಸಿಗ್ನಲ್ ನಲ್ಲಿ ವ್ಯಾಪಾರಕ್ಕೆ ಕೆಲವೇ ಸೆಕೆಂಡ್ಸ್ ಸಮಯ ಸಿಗುವುದರಿಂದ, ಮೊದಲಾಗಿಯೇ 10 ರೂ. ಅನ್ನು ಪಕ್ಕದ ಸೀಟ್ ನಲ್ಲಿ ಸುಲಭವಾಗಿ ಸಿಗುವಂತೆ  ಎತ್ತಿಟ್ಟು, ಹೊರಡುವುದು.  ಆತ ಕಾರಿನ ಬಳಿ ಬಂದರೆ , ನನಗೆ ಹೂ ಬೇಕಾಗಿದ್ದರೂ-ಬೇಡದಿದ್ದರೂ, ತಪ್ಪದೆ ಹೂ ಕೊಳ್ಳುವುದು.

 ವೃತ್ತಿ ಯಾವುದೇ  ಇರಲಿ, ಅದರ ಬಗ್ಗೆ ಗೌರವ ಮತ್ತು ಪ್ರಾಮಾಣಿಕತೆ , ಪರಸ್ಪರ ವಿಶ್ವಾಸವನ್ನು ಗಳಿಸಿಕೊಡುತ್ತದೆ.   


ಚಂದಿರನೇತಕೆ ಓಡುವನಮ್ಮ…ಪುಷ್ಪಾ ನಾಗತಿಹಳ್ಳಿ

ಈ ವಾರಾಂತ್ಯದಂದು, ಶ್ರೀಮತಿ ಪುಷ್ಪಾ ನಾಗತಿಹಳ್ಳಿಯವರು ಬರೆದ ಚಂದಿರನೇತಕೆ ಓಡುವನಮ್ಮ ಎಂಬ ಬಾಲ್ಯಕಾಲದ ಕಥನವನ್ನು ಓದಲೆಂದು ಕೈಗೆತ್ತಿಕೊಂಡಿದ್ದೆ. ಈಗ ಒಂದು ಬಾರಿ ಓದಿ ಮುಗಿಸಿದೆ. ಈ ಪುಸ್ತಕವು  ಓದಿಸಿಕೊಂಡು ಹೋಯಿತು  ಎನ್ನುವ ಬದಲು ನಾನೂ ಪುಸ್ತಕದೊಂದಿಗೆ ‘ಓಡಿಕೊಂಡು ಹೋದೆ’ ಎಂದರೆ ಹೆಚ್ಚು ಸೂಕ್ತ ಎನಿಸುತ್ತದೆ.
ನಾಗತಿಹಳ್ಳಿಯ ಹಳೆಮನೆ, ಹೊಸಮನೆ, ತೊಟ್ಟಿಮನೆ, ದಬಾನು ಗುಡಿ, ಮಾರಮ್ಮನ ಗುಡಿ, ತುಳಸಮ್ಮ ಗುಡಿ ಸುತ್ತಿ, ತೋಟ-ಹೊಲ-ಶಾಲೆಗೆ ಹೋಗಿ, ಹಳ್ಳಿ-ಕೇರಿ ಸುತ್ತಿ, ಟೆಂಟ್ ಸಿನೆಮಾ ನೋಡಿ, ತಮ್ಮಂದಿರ ಬಗ್ಗೆ ಆಕ್ಕರೆ ತೋರಿಸಿ, ಚಾಡಿ ಹೇಳಿ, ಬಾಲ್ಯದ ತುಂಟಾಟಗಳಲ್ಲಿ ಭಾಗಿಯಾಗಿ, ಕೂಡು ಕುಟುಂಬದ ಸಿಹಿ-ಕಹಿಗಳನ್ನುಂಡು…ಬಡತನದಲ್ಲೂ ಸಂತೋಷದಿಂದಿದ್ದ ಪುಷ್ಪಾ ಅವರ ಬಾಲ್ಯ ಕಾಲದ ನಿರೂಪಣೆ ಬಹಳ ಸೊಗಸಾಗಿದೆ.
ಅವರನ್ನೂ ಸೇರಿಸಿ  ಒಟ್ಟು ಆರು ಜನ ಸಹೋದರ-ಸಹೋದರಿಯರಿದ್ದರೂ ಅವರಲ್ಲಿ ಹೆಚ್ಚು ನಿಕಟವರ್ತಿಯಾಗಿದ್ದ ತಮ್ಮ ‘ಚಂದ್ರು’ (ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರು) . ಪುಸ್ತಕದುದ್ದಕ್ಕೂ ಈ ತಮ್ಮನ ಬಾಲ್ಯಲೀಲೆಗಳು ರಾರಾಜಿಸಿವೆ.  ಮುಂದಿನ ವೈವಾಹಿಕ ಜೀವನ, ಆಮೇಲೆ ಎದುರಾದ ಸಿಹಿ-ಕಹಿ ಘಟನೆಗಳು, ಪ್ರತಿ ಹಂತದಲ್ಲೂ ತನಗೆ ಬೆಂಬಲ ನೀಡಿದ/ನೀಡುತ್ತಿರುವ ತಮ್ಮನೊಂದಿಗೆ ಒಡನಾಟ.. ಹೀಗೆ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ.  ತನ್ನ  ಜೀವನ ಪಯಣದಲ್ಲಿ ಒದಗಿಬಂದ ಆಸ್ಟ್ರೇಲಿಯಾ ಮತ್ತು ಲಂಡನ್ ಪ್ರಯಾಣಗಳು ಮತ್ತು ಅಲ್ಲಿನ ವಿಶೇಷತೆಗಳ ಬಗ್ಗೆಯೂ ಲೇಖಕಿ ಸೊಗಸಾದ ವಿವರಣೆ ಕೊಟ್ಟಿದ್ದಾರೆ.
Chandiranetake Oduvanamma- Pushpa Nagatihalli
ಅತ್ಯಂತ ಸರಳವಾಗಿ ಮತ್ತು ಬಹಳ ಆಪ್ತವಾಗಿರುವ ಶೈಲಿಯಲ್ಲಿ ಬರೆದ ಈ ಬಾಲ್ಯಕಥನವನ್ನು  ಓದುವಾಗ ಇಲ್ಲಿ ಬರುವ ಕೆಲವು ಪಾತ್ರಗಳು ‘ನಮಗೂ ಚಿರಪರಿಚಿತ…ಆದರೆ ನಮ್ಮೂರಲ್ಲಿ ಅವರ ಹೆಸರು ಮಾತ್ರಬೇರೆಯಾಗಿತ್ತು‘ ಎನಿಸುತ್ತವೆ!  ಪುಷ್ಪಾ ಅವರು ಬರೆದಂತೆ ‘ಕಾಲದೊಳಗೆ ಬದುಕೂ, ಬದುಕಿನೊಳಗೆ ಕಾಲವೂ ನುಸುಳುತ್ತಾ‘ ಸಾಗುವುದು ಎಷ್ಟು ನಿಜ! (ಪುಟ 86)
ಕನಸುಗಳಿಗೆ ಅದೆಷ್ಟು ಶಕ್ತಿ ಇದೆ! ಬಾಲ್ಯದಲ್ಲಿ ಕಂಡ ಕನಸುಗಳನ್ನೆಲ್ಲಾ ನನಸು ಮಾಡಿದ ಖ್ಯಾತಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರದು. ಜತೆಗೆ  ತಮ್ಮೂರಿನ ಬೇರನ್ನು ಮರೆಯದೆ ಅದನ್ನು ವಿವಿಧ ರೂಪದಲ್ಲಿ ಪೋಷಿಸುತ್ತಿದ್ದಾರೆ. ಸಹಜವಾಗಿಯೇ ಅಕ್ಕರೆಯ ಅಕ್ಕನಿಗೆ  “ಕುಟ್ನುದಯ್ಯನ ಹಿಂದೆ ಸುತ್ತುತ್ತಾ  ‘ನನಗೊಂದು ಪುಸ್ತಕ ಕೊಡಯ್ಯಾ’ ಎಂದು ಹಲುಬುತ್ತಿದ್ದ್ದ ಹುಡುಗ ಇಂದು ಅವನೇ ಕಟ್ಟಿಸಿದ ಲೈಬ್ರೆರಿಯ ಕೋಣೆಯಲ್ಲಿದ್ದ ಸಾವಿರಾರು ಪುಸ್ತಕಗಳ ಮಧ್ಯದಲ್ಲಿ  ಕುಳಿತು ಸಾಹಿತ್ಯ, ಕಥೆ , ನಾಟಕ, ಪ್ರವಾಸಗಳ ಬಗ್ಗೆ ಮಾತನಾಡುವಾಗ ಹೆಮ್ಮೆಯಾಗುತ್ತದೆ. (ಪುಟ 134)
ಪುಷ್ಪಾ ನಾಗತಿಹಳ್ಳಿ ಅವರು ತಮ್ಮ ಕುಟುಂಬದ  ಕೆಲವು ಚಿತ್ರಗಳನ್ನು  ಹಾಗೂ  ಮನೆಯ ಇತರ  ಸದಸ್ಯರ ಬಗ್ಗೆಯೂ ಸ್ವಲ್ಪ ವಿವರಣೆ ಕೊಟ್ಟಿದ್ದರೆ ಓದುಗರಿಗೆ  ಇನ್ನೂ ಸ್ಪಷ್ಟಚಿತ್ರಣ ಸಿಗುತಿತ್ತು ಎಂದು ನನ್ನ ಭಾವನೆ.  ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಮೂಡಿಬರಲಿ ಎಂದು ನಮ್ಮ ಆಶಯ.

ಎಲ್ಲಿ ಹೋದಿರಿ ತಳ್ಳು ಗಾಡಿಗಳೆ.. ?

ಎರಡು ದಶಕಗಳ ಹಿಂದೆ,  ಮೈಸೂರಿಗೆ ಬಂದ ಹೊಸದರಲ್ಲಿ ವಾಸವಿದ್ದ ಗೋಕುಲಂ ಬಡಾವಣೆಯಲ್ಲಿ ವಾಸವಾಗಿದ್ದೆವು. ಅದುವರೆಗೆ ದೂರದೂರದಲ್ಲಿ ಅಡಿಕೆ ತೋಟಗಳ ಮಧ್ಯೆ ಇರುತ್ತಿದ್ದ ಹೆಂಚಿನ ಒಂಟಿ ಮನೆಗಳನ್ನು ಮಾತ್ರ ನೋಡಿ ಗೊತ್ತಿದ್ದ ನನಗೆ ಬಡಾವಣೆ ಬದುಕು ಹೊಸ ಅನುಭವಗಳನ್ನು ಮೊಗೆಮೊಗೆದು ಕೊಟ್ಟಿತ್ತು.
ಶಾಂತವಾಗಿದ್ದು ಲವಲವಿಕೆಯಿಂದಿದ್ದ ಬಡಾವಣೆಯಲ್ಲಿ ಸಹೃದಯ  ನೆರೆಹೊರೆಯವರೂ ಇದ್ದು ಆರಾಮವಾಗಿದ್ದೆವು. ಬೆಳಗಾಗುತ್ತಿದ್ದಂತೆ ಹಿಂದಿನ ಮನೆ ಬೀದಿಯಲ್ಲಿ ಸೈಕಲ್ ಟ್ರಿಣ್ ಗುಟ್ಟಿದರೆ ಹಾಲಿನವನು ಬಂದ ಎಂದು ಅರ್ಥ. ಪಾತ್ರೆ ರೆಡಿ ಮಾಡಿಕೊಳ್ಳುವಷ್ಟರಲ್ಲಿ ಮನೆ ಮುಂದೆ ಆತ ಬರುತ್ತಿದ್ದ. ಇನ್ನು ಸ್ವಲ್ಪ ಹೊತ್ತಿನಲ್ಲಿ ‘ಮೊಲ್ಲೆ …ಮರ್ಲೇ…ಜಾಜಿ ಹೂವೇ…‘ ಎಂದು ಕೂಗುತ್ತಾ ತನ್ನ ತಲೆಯಲ್ಲಿ ಬಿದಿರಿನ ದೊಡ್ಡ ತಟ್ಟೆಯನ್ನು ಇರಿಸಿಕೊಂಡು ಹೂ ಮಾರುವ ಅಜ್ಜಿಯ ಸರದಿ. ಸೈಕಲ್ ನಲ್ಲಿ ಬರುವ ಪೇಪರ್ ಹಾಕುವ ಹುಡುಗನು  ಪೇಪರ್ ಅನ್ನು ಸುರುಟಿ ಕೊಳವೆಯಂತೆ ಮಾಡಿ, ಕೆಳಗಡೆಯಿಂದಲೇ ನಮ್ಮ ಬಾಲ್ಕನಿಗೆ ಎಸೆಯುತ್ತಿದ್ದ.
Green veg soppu cartಇನ್ನೂ7 ಗಂಟೆ ಆಗುವಷ್ಟರಲ್ಲಿ ‘ ದಂಟೀನ್ ಸೊಪ್ಪ್….ಪಾಲಾಕ್ ಸೊಪ್ಪ್…ಮೆಂತ್ಯ ಸೊಪ್ಪ್ … ” ಎಂದು ರಾಗವಾಗಿ ಹಾಡುತ್ತ ತರಕಾರಿ ಗಾಡಿಯನ್ನು ತಳ್ಳುತ್ತಾ ಬರುವ ಹೆಂಗಸೊಬ್ಬರು. ಹಿಂದಿನ ಬೀದಿಯಲ್ಲಿ ಅವರ ದನಿ ಕೇಳಿಸಿದೊಡನೆ, ನಮ್ಮ ಎರಡು ವರ್ಷದ ಮಗ ಅದನ್ನು ಅನುಕರಿಸಿ ತಾನೂ ‘ಸೊಪ್ಪಿನ  ಹಾಡು’ ಹಾಡುತ್ತಿದ್ದ. ಇದಾದ ಮೇಲೆ ‘ಹಳೆ ಪಾತ್ರೇ….ಹಳೇ ಪೇಪರ್….’ ಎನ್ನುವ ವ್ಯಾಪಾರಿ, ರಂಗೋಲಿ ಪುಡಿ ಮಾರುವವಳು,, ಆಯಾ ಸೀಸನ್ ನಲ್ಲಿ ಕರಬೂಜ, ಸೀಬೆ ಹಣ್ಣು, ಮಾವಿನಹಣ್ಣು, ಕಡಲೇಕಾಯಿ ಮಾರುವವರು  …. ಇವರೂ ತಮ್ಮ ತಳ್ಳು ಗಾಡಿಗಳ ಸಮೇತ  ಪ್ರತ್ಯಕ್ಷವಾಗುತ್ತಿದ್ದರು.  ..
ಆಮೇಲೆ ಬರುವ ತರಕಾರಿಯಣ್ಣ (ಅವರ  ಹೆಸರು ನೆನಪಿಲ್ಲ) ವಿವಿಧ  ತರಕಾರಿಗಳನ್ನು ಹೇರಿದ ತಳ್ಳುಗಾಡಿಯನ್ನು  ರಸ್ತೆಯ ಇಳಿಜಾರಿನಲ್ಲಿ ಜಾರದಂತೆ, ಚಕ್ರಕ್ಕೆ ಕಲ್ಲು ಕೊಟ್ಟು ನಿಲ್ಲಿಸಿ  ‘ ಬದನೇಕಾಯ್ . ..ಬೆಂಡೇಕಾಯ್  ..  ಹೀರೇಕಾಯ್ .. ಅವರೇಕಾಯ್… ಸೌತೆಕಾಯ್…”  ಎನ್ನುವಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಚಿಕ್ಕ ಬುಟ್ಟಿಯನ್ನೋ, ಚೀಲವನ್ನೋ  ಕುಕ್ಕರ್ ಪಾತ್ರೆಯನ್ನೋ ಹಿಡಿದು ಗಾಡಿಯ ಸುತ್ತ ಮುತ್ತ ಜಮಾಯಿಸುತ್ತಿದ್ದರು.
“ಏನಣ್ಣ ನಿನ್ನೆ ಬಂದಿಲ್ಲ… ಮೊನ್ನೆ ಕೊಟ್ಟಿದ್ದ ಅವರೇಕಾಯಿ ಬರೀ ಹುಳ…ಮೂಲಂಗಿ ಚೆನ್ನಾಗಿದೆ…ಸೌತೆಕಾಯಿ ಕಹಿ ಇತ್ತಪ್ಪಾ…ಮಗಳ ಸೀಮಂತ ಆಯ್ತಾ… “ಇತ್ಯಾದಿ ಪ್ರಶಂಸೆ, ನಿಂದನೆ, ಕುಶಲೋಪರಿಗಳ ಜತೆಗೆ ವ್ಯಾಪಾರ ನಡೆಯುತ್ತಿತ್ತು. ಬಾಲ್ಕನಿ  ಮೇಲೆ ಬಟ್ಟೆ ಹರವುತ್ತಿದ್ದ ನನ್ನನ್ನು ನೋಡಿ ‘ಆಂಟಿ ತರಕಾರಿ ಬೇಡ್ವಾ… ಕಾಫಿ ಆಯ್ತಾ….ಪಾಪು ಉಷಾರಾ…..’ಎಂದು ಮಾತಿಗೆಳೆಯುತಿದ್ದ. ನನಗಿಂತ ವಯಸ್ಸಿನಲ್ಲಿ ಬಹಳಷ್ಟು ದೊಡ್ಡವರಾದರಾದ ಆತನಿಗೆ ನಾನು ಹೇಗೆ ‘ಆಂಟಿ’ ಆಗಬಲ್ಲೆ ಅನಿಸುತಿತ್ತು.
VEgetable vendorಈತನಿಗೆ ಊರ ಸಮಾಚಾರ ಎಲ್ಲಾ ಬೇಕು. ಯೋಗಕ್ಷೇಮ ವಿಚಾರಿಸುತ್ತಾ, ನಗುತ್ತಾ ತರಕಾರಿ ವ್ಯಾಪಾರ ನಡೆಯುತಿತ್ತು. “ಬೀನ್ಸ್ ತುಂಬಾ  ಬೆಲೆ……ಟೊಮಾಟೊ ಚೆನ್ನಾಗಿಲ್ಲ… ”  ಅಂತ ಯಾರಾದರೂ ಅಕ್ಷೇಪಿಸಿದರೆ  ಇದು ನಾಟಿ ಬೀನ್ಸ್ ಚೆನಾಗಿರುತ್ತೆ ಅಕ್ಕಾ… ಇದು ನಮ್ ತ್ವಾಟದ್ದೇಯಾ ….ನಾ  ಊಟಿ ಬೀನ್ಸ್ ತರಲ್ಲಾ ಬೇರೆಯವರ ತರಾ…… ಹುಳಿ ಟೊಮಾಟೊ ಬೇರೆ ಇದೆ, ಇದು ಜಾಮೂನ್ ಟೊಮೆಟೊ ..ನಿಮಗ್ಯಾವುದು ಬೇಕು ….ಈರೆಂಗೆರೆ ಬದನೆಕಾಯ್ ನೋಡಿ..ಭಾತ್ ಮಾಡಿದ್ರೆ ಏನು ಚೆನ್ನಾಗಿರ್ತೆ ಅಂತೀರಾ… “ ಎಂದು  ಮಾರುತ್ತರಿಸುತ್ತಿದ್ದ. ತಮಾಷೆ ಏನೆಂದರೆ , ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ವ್ಯಾಪಾರಕ್ಕೆ  ವಿಪರೀತ ಚೌಕಾಶಿ ಮಾಡಿ ನಾಲ್ಕಾಣೆ ಉಳಿಸಿದ ಅಜ್ಜಿಯೊಬ್ಬರು, ಒಳಗಿನಿಂದ ಲೋಟದಲ್ಲಿ ಕಾಫಿ ತಂದು ತರಕಾರಿಯಣ್ಣನಿಗೆ ಕೊಟ್ಟು ‘ಕಾಫಿ ಕುಡಿಯಪ್ಪ…ಬಿಸಿ ಆರೋಗುತ್ತೆ’  ಅಂದು ಧಾರಾಳತನ ಪ್ರದರ್ಶಿಸುತ್ತಾರೆ!
‘ಗಡ್ಡೆ ಕೋಸು ಇದ್ಯಾ’ ಎಂದು ವಿಚಾರಿಸುತ್ತಾರೆ ಇನ್ನೊಬ್ಬರು. ‘ನಿನ್ನೆ ಇತ್ತು ಅಕ್ಕ…….ಈವತ್ತಿಲ್ಲ, ನಾಳೆ ತರ್ತೇನೆ……ಈ ನಡುವೆ ನೀವು ತರಕಾರಿಗೆ ಬರೋದೇ ಇಲ್ಲ್ಲಾ……ಬೀಟ್ ರೂಟ್ ತೊಗೊತೀರಾ…..ಈವತ್ತೇ ಕಿತ್ತಿದ್ದು……ತ್ವಾಟದಿಂದ್ಲೇ ಬಂದೆ……ಹೂಕೋಸು ಹಾಕಿವ್ನಿ…….ಮುಂದಿನ್ವಾರ ತರ್ತೀನಿ..” ಇತ್ಯಾದಿ ಮಾತು ಸಾಗುತ್ತದೆ. ಗಡ್ಡೆ ಕೋಸು  ಕೇಳಿದವರು, ಬೀಟ್ ರೂಟ್ ಕೊಂಡು ವಾಪಸ್ಸಾಗುತ್ತಾರೆ. ಅವರು ತಂದಿರೋ ದುಡ್ಡು  ಸ್ವಲ್ಪ  ಕಡಿಮೆಯಿರುತ್ತದೆ. ‘ಅಯ್ಯೊ ನಾಳೆ ಕೊಡುವಿರಂತೆ……’ ಎಂದು ಇವನೇ ಸಮಜಾಯಿಶಿ ಹೇಳುತ್ತಾನೆ.
ನಮ್ಮ ಮಗ ಚಿಕ್ಕವನಿದ್ದಾಗ ಅವನಿಗೆ ಬೇಯಿಸಿದ ನೇಂದ್ರಬಾಳೆ ಹಣ್ಣನ್ನು ಹೆಚ್ಚಿ ಕೊಟ್ಟರೆ ಇಷ್ಟಪಟ್ಟು ತಿನ್ನುತಿದ್ದ. ಮೈಸೂರಿನಲ್ಲಿ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ ಕೇರಳದ ‘ನೇಂದ್ರ ಬಾಳೆ’ ಹಣ್ಣು ಸಿಗುತ್ತಿರಲಿಲ್ಲವಾದುದರಿಂದ  ಬೀದಿಯಲ್ಲಿ  ಬಾಳೆ ಹಣ್ಣು ಮಾರುತ್ತಿದ್ದ ಅಜ್ಜ ಒಬ್ಬರನ್ನು ಪರಿಚಯಿಸಿಕೊಂಡು ನಮಗೆ ವಾರಕ್ಕೆ ಒಂದು ಚಿಪ್ಪು ‘ನೇಂದ್ರ ಬಾಳೆ’ ಹಣ್ಣು ತಂದುಕೊಡಬೇಕೆಂದು ಒಪ್ಪಂದ ಮಾಡಿಕೊಂಡಿದ್ದೆವು. ಆ ಅಜ್ಜ ತಪ್ಪದೇ ಹಣ್ಣು ತರುತಿದ್ದರು. ಇವನೂ ತನಗೆ ಅ ತಾತ ಬಹಳ ಪರಿಚಯದವರೇನೋ ಎಂಬಂತೆ ಅವರ ಬಳಿ  ನಗುನಗುತ್ತಾ  ತೊದಲು ಮಾತನಾಡುತ್ತಿದ್ದ. ಅಷ್ಟರಲ್ಲಿ ನಾನು ಚಹಾ ಕೊಡುತ್ತಿದ್ದೆ. ಅದನ್ನು ಕುಡಿದು  ‘ಟೀ ಚನ್ನಾಗೈತೆ…ಮೊಗಾ..’ ಎಂದು ಹೇಳಿ ಅಜ್ಜ ಹೊರಡುತ್ತಿದ್ದರು.
veg cart
ಮೈಸೂರಿನ ಕೆಲವು ಬಡಾವಣೆಗಳಲ್ಲಿ ಈ ರೀತಿಯ ವ್ಯಾಪಾರ-ಸಂಸ್ಕೃತಿ ಈಗಲೂ ಇದೆ. ಆದರೆ ಮಾಲ್ ಗಳಲ್ಲಿ, ಗ್ರಾಹಕರಾದ ನಾವೇ ‘ಗಾಡಿ’ಯನ್ನು ತಳ್ಳುತ್ತಾ ನಮಗೆ ಬೇಕಾದುದನ್ನು ಗಾಡಿಗೆ ಹಾಕಿಕೊಳ್ಳುತ್ತೇವೆ.  ಗೃಹಿಣಿಯರ ಶ್ರಮ ಕಡಿಮೆ ಮಾಡಲು ಕತ್ತರಿಸಿದ ಬೀನ್ಸ್, ಸುಲಿದ ಬೆಳ್ಳುಳ್ಳಿ, ಹೆಚ್ಚಿದ ಕ್ಯಾಬೇಜ್ …ಕೂಡಾ ಸಿಗುತ್ತವೆ. ಬೇಕಿದ್ದನ್ನು ಕೊಂಡು ಮಾತಿಲ್ಲದೆ ನಿಗದಿತ ದುಡ್ಡನ್ನು  ಕಾರ್ಡ್ ಸ್ವೈಪ್ ಮಾಡಿ ಅಥವಾ ಕ್ಯಾಷ್ ಕೊಟ್ಟು  ಬಂದರೆ ಕೌಂಟರ್ ನಲ್ಲಿ ಕುಳಿತವನು/ಳು ನಿರ್ಭಾವುಕತೆಯಿಂದ ಥ್ಯಾಂಕ್ಸ್ ಅನ್ನುತ್ತಾರೆ. ಅಲ್ಲಿಗೆ ಮುಗಿಯಿತು ಶಾಪಿಂಗ್.
ಹೊಸ ಪದ್ಧತಿಗಳಿಗೆ ಕೆಲವು ಅನುಕೂಲತೆಗಳು ಇವೆ.   ಆದರೂ ಮನುಷ್ಯ ಮನುಷ್ಯನೇ, ಯಂತ್ರ ಯಂತ್ರವೇ ಅಲ್ಲವೇ? ಎಲ್ಲಿ ಹೋದುವು ತಳ್ಳು ಗಾಡಿಗಳು , ಅವುಗಳ ಒಡೆಯರು, ಅವರ ಮಾತುಗಳು ಮತ್ತು ಗಾರ್ಡನ್ ಫ್ರೆಷ್ ತರಕಾರಿಗಳು ??