ಈ ವಾರಾಂತ್ಯದಂದು, ಶ್ರೀಮತಿ ಪುಷ್ಪಾ ನಾಗತಿಹಳ್ಳಿಯವರು ಬರೆದ ಚಂದಿರನೇತಕೆ ಓಡುವನಮ್ಮ ಎಂಬ ಬಾಲ್ಯಕಾಲದ ಕಥನವನ್ನು ಓದಲೆಂದು ಕೈಗೆತ್ತಿಕೊಂಡಿದ್ದೆ. ಈಗ ಒಂದು ಬಾರಿ ಓದಿ ಮುಗಿಸಿದೆ. ಈ ಪುಸ್ತಕವು ಓದಿಸಿಕೊಂಡು ಹೋಯಿತು ಎನ್ನುವ ಬದಲು ನಾನೂ ಪುಸ್ತಕದೊಂದಿಗೆ ‘ಓಡಿಕೊಂಡು ಹೋದೆ’ ಎಂದರೆ ಹೆಚ್ಚು ಸೂಕ್ತ ಎನಿಸುತ್ತದೆ.
ನಾಗತಿಹಳ್ಳಿಯ ಹಳೆಮನೆ, ಹೊಸಮನೆ, ತೊಟ್ಟಿಮನೆ, ದಬಾನು ಗುಡಿ, ಮಾರಮ್ಮನ ಗುಡಿ, ತುಳಸಮ್ಮ ಗುಡಿ ಸುತ್ತಿ, ತೋಟ-ಹೊಲ-ಶಾಲೆಗೆ ಹೋಗಿ, ಹಳ್ಳಿ-ಕೇರಿ ಸುತ್ತಿ, ಟೆಂಟ್ ಸಿನೆಮಾ ನೋಡಿ, ತಮ್ಮಂದಿರ ಬಗ್ಗೆ ಆಕ್ಕರೆ ತೋರಿಸಿ, ಚಾಡಿ ಹೇಳಿ, ಬಾಲ್ಯದ ತುಂಟಾಟಗಳಲ್ಲಿ ಭಾಗಿಯಾಗಿ, ಕೂಡು ಕುಟುಂಬದ ಸಿಹಿ-ಕಹಿಗಳನ್ನುಂಡು…ಬಡತನದಲ್ಲೂ ಸಂತೋಷದಿಂದಿದ್ದ ಪುಷ್ಪಾ ಅವರ ಬಾಲ್ಯ ಕಾಲದ ನಿರೂಪಣೆ ಬಹಳ ಸೊಗಸಾಗಿದೆ.
ಅವರನ್ನೂ ಸೇರಿಸಿ ಒಟ್ಟು ಆರು ಜನ ಸಹೋದರ-ಸಹೋದರಿಯರಿದ್ದರೂ ಅವರಲ್ಲಿ ಹೆಚ್ಚು ನಿಕಟವರ್ತಿಯಾಗಿದ್ದ ತಮ್ಮ ‘ಚಂದ್ರು’ (ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರು) . ಪುಸ್ತಕದುದ್ದಕ್ಕೂ ಈ ತಮ್ಮನ ಬಾಲ್ಯಲೀಲೆಗಳು ರಾರಾಜಿಸಿವೆ. ಮುಂದಿನ ವೈವಾಹಿಕ ಜೀವನ, ಆಮೇಲೆ ಎದುರಾದ ಸಿಹಿ-ಕಹಿ ಘಟನೆಗಳು, ಪ್ರತಿ ಹಂತದಲ್ಲೂ ತನಗೆ ಬೆಂಬಲ ನೀಡಿದ/ನೀಡುತ್ತಿರುವ ತಮ್ಮನೊಂದಿಗೆ ಒಡನಾಟ.. ಹೀಗೆ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ. ತನ್ನ ಜೀವನ ಪಯಣದಲ್ಲಿ ಒದಗಿಬಂದ ಆಸ್ಟ್ರೇಲಿಯಾ ಮತ್ತು ಲಂಡನ್ ಪ್ರಯಾಣಗಳು ಮತ್ತು ಅಲ್ಲಿನ ವಿಶೇಷತೆಗಳ ಬಗ್ಗೆಯೂ ಲೇಖಕಿ ಸೊಗಸಾದ ವಿವರಣೆ ಕೊಟ್ಟಿದ್ದಾರೆ.
ಅತ್ಯಂತ ಸರಳವಾಗಿ ಮತ್ತು ಬಹಳ ಆಪ್ತವಾಗಿರುವ ಶೈಲಿಯಲ್ಲಿ ಬರೆದ ಈ ಬಾಲ್ಯಕಥನವನ್ನು ಓದುವಾಗ ಇಲ್ಲಿ ಬರುವ ಕೆಲವು ಪಾತ್ರಗಳು ‘ನಮಗೂ ಚಿರಪರಿಚಿತ…ಆದರೆ ನಮ್ಮೂರಲ್ಲಿ ಅವರ ಹೆಸರು ಮಾತ್ರಬೇರೆಯಾಗಿತ್ತು‘ ಎನಿಸುತ್ತವೆ! ಪುಷ್ಪಾ ಅವರು ಬರೆದಂತೆ ‘ಕಾಲದೊಳಗೆ ಬದುಕೂ, ಬದುಕಿನೊಳಗೆ ಕಾಲವೂ ನುಸುಳುತ್ತಾ‘ ಸಾಗುವುದು ಎಷ್ಟು ನಿಜ! (ಪುಟ 86)
ಕನಸುಗಳಿಗೆ ಅದೆಷ್ಟು ಶಕ್ತಿ ಇದೆ! ಬಾಲ್ಯದಲ್ಲಿ ಕಂಡ ಕನಸುಗಳನ್ನೆಲ್ಲಾ ನನಸು ಮಾಡಿದ ಖ್ಯಾತಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರದು. ಜತೆಗೆ ತಮ್ಮೂರಿನ ಬೇರನ್ನು ಮರೆಯದೆ ಅದನ್ನು ವಿವಿಧ ರೂಪದಲ್ಲಿ ಪೋಷಿಸುತ್ತಿದ್ದಾರೆ. ಸಹಜವಾಗಿಯೇ ಅಕ್ಕರೆಯ ಅಕ್ಕನಿಗೆ “ಕುಟ್ನುದಯ್ಯನ ಹಿಂದೆ ಸುತ್ತುತ್ತಾ ‘ನನಗೊಂದು ಪುಸ್ತಕ ಕೊಡಯ್ಯಾ’ ಎಂದು ಹಲುಬುತ್ತಿದ್ದ್ದ ಹುಡುಗ ಇಂದು ಅವನೇ ಕಟ್ಟಿಸಿದ ಲೈಬ್ರೆರಿಯ ಕೋಣೆಯಲ್ಲಿದ್ದ ಸಾವಿರಾರು ಪುಸ್ತಕಗಳ ಮಧ್ಯದಲ್ಲಿ ಕುಳಿತು ಸಾಹಿತ್ಯ, ಕಥೆ , ನಾಟಕ, ಪ್ರವಾಸಗಳ ಬಗ್ಗೆ ಮಾತನಾಡುವಾಗ“ ಹೆಮ್ಮೆಯಾಗುತ್ತದೆ. (ಪುಟ 134)
ಪುಷ್ಪಾ ನಾಗತಿಹಳ್ಳಿ ಅವರು ತಮ್ಮ ಕುಟುಂಬದ ಕೆಲವು ಚಿತ್ರಗಳನ್ನು ಹಾಗೂ ಮನೆಯ ಇತರ ಸದಸ್ಯರ ಬಗ್ಗೆಯೂ ಸ್ವಲ್ಪ ವಿವರಣೆ ಕೊಟ್ಟಿದ್ದರೆ ಓದುಗರಿಗೆ ಇನ್ನೂ ಸ್ಪಷ್ಟಚಿತ್ರಣ ಸಿಗುತಿತ್ತು ಎಂದು ನನ್ನ ಭಾವನೆ. ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಮೂಡಿಬರಲಿ ಎಂದು ನಮ್ಮ ಆಶಯ.
ಪುಷ್ಪರ ಈ ಪುಸ್ತಕವನನ್ನು ನಾನು ಹುಡುಕಿ ಓದುತ್ತೇನೆ.
ReplyDeleteನಿಮ್ಮ ವಿವರಣೆಯಲ್ಲೇ ಇರುವಂತೆ ಸರಳ ಭಾಷೆಯೇ ಅವರ ಬರವಣಿಗೆಯ ನಿಜ ಶಕ್ತಿ.
ಮುಖ ಪುಟ ಮನಸೆಳೆಯಿತು.
ನನ್ನ ಬ್ಲಾಗ್ ಅನ್ನು ಓದಿ ಪ್ರೋತ್ಸಾಹಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು.
Delete