ನಮ್ಮ ಕೈ ಬೆರಳುಗಳ ಹೆಸರೇನು? ಅಂಗುಷ್ಟ, ತರ್ಜಿನಿ, ಮಧ್ಯಮ,ಅನಾಮಿಕಾ ಮತ್ತು ಕನಿಷ್ಟ.
ಜಗತ್ತಿಗೇ ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ತಿಳಿಸಿಕೊಟ್ಟ ಖ್ಯಾತಿ ಭಾರತೀಯರದು. ಆದರೆ ಯಾಕೋ ನಮ್ಮಲ್ಲಿ ಹೆಚ್ಚಿನವರಿಗೆ ಇದರ ಬಗ್ಗೆ ಅಸಡ್ಡೆ. ಇದಕ್ಕೆ ನಾನೇ ಉತ್ತಮ ಉದಾಹರಣೆ. ಮೈಸೂರಿಗೆ ಹಲವಾರು ವಿದೇಶೀಯರು ಯೋಗಾಭ್ಯಾಸದ ತರಬೇತಿಗೆಂದು ಸಾಕಷ್ಟು ಖರ್ಚು ಮಾಡಿ ಬರುತ್ತಾರೆ. ಯೋಗ-ಪ್ರಾಣಾಯಾಮ-ಧ್ಯಾನ-ಮುದ್ರೆ ಇತ್ಯಾದಿ ವಿದ್ಯೆ ಕಲಿತು ಮರಳುತ್ತಾರೆ. ಆದರೆ ಸ್ಥಳೀಯರಾದ ನಾವು, ಯಾರಾದರೂ ಉಚಿತ ತರಬೇತಿ ಕಾರ್ಯಕ್ರಮ ಏರ್ಪಡಿಸಿದ್ದಾಗಲೂ ಕೂಡ "ಸಮಯದ ಅಭಾವ...ಮಕ್ಕಳ ಶಾಲಾಸಮಯಕ್ಕೆ ತೊಂದರೆ...ಆಫೀಸಿನ ಕೆಲಸ" ಇತ್ಯಾದಿ ನಾನಾ ಕಾರಣಗಳಿಂದ ಯೋಗಾಭ್ಯಾಸ ಮಾಡಲು ಮನಸ್ಸು ಮಾಡುವುದಿಲ್ಲ!
ಎಲ್ಲಿಯವರೆಗೆ ನಮ್ಮ ಶರೀರದ Nuts and Bolts ಗಳು ಸುಸ್ಥಿತಿಯಲ್ಲಿರುತ್ತವೆಯೇ ಅಲ್ಲಿಯ ವರೆಗೆ ಈ ರೀತಿಯ ನೆಪಗಳು ಧಾರಾಳವಾಗಿ ಸಿಗುತ್ತವೆ. ಆದರೆ, ನಲವತ್ತು ದಾಟಿದ ಮೇಲೆ, ಚಾಳೀಸ್ ಕನ್ನಡಕ ಮೂಗಿನ ಮೇಲೆ ಕಂಗೊಳಿಸುವಾಗ, ಮಂಡಿಯ ಮೂಳೆಗಳು ಅಸಹಕಾರ ಚಳುವಳಿ ಹೂಡಲಾರಂಭಿಸಿದಾಗ ಯೋಗಾಭ್ಯಾಸದ ಕಡೆಗೆ ಅನಿವಾರ್ಯವಾಗಿ ಗಮನ ಹರಿಸುತ್ತೇವೆ. ಹಾಗಾಗಿ ಈಗ ನಾನು ಭಾಗವಹಿಸುತ್ತಿರುವ ಯೋಗ ಮತ್ತು ಪ್ರಾಣಾಯಾಮ ತರಗತಿಗಳಲ್ಲಿ ನಿವೃತ್ತಿ ಆದವರು ಮತ್ತು ಮಧ್ಯ ವಯಸ್ಸಿನವರೇ ಜಾಸ್ತಿ. ಅಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ!
ಈವತ್ತು ನಮ್ಮ ತರಬೇತುದಾರರಾದ ಯೋಗ ಶಿಕ್ಷಕರು ಕೇಳಿದ ಒಂದು ಸರಳ ಪ್ರಶ್ನೆ ಹೀಗಿತ್ತು. " ನಮ್ಮ ಕೈ ಬೆರಳುಗಳ ಹೆಸರೇನು? " ಇದ್ಯಾವ ಮಹಾಪ್ರಶ್ನೆ ಎಂದು ನಾವು "ಹೆಬ್ಬೆರಳು, ತೋರುಬೆರಳು, ಮಧ್ಯಬೆರಳು, ಉಂಗುರಬೆರಳು, ಕಿರುಬೆರಳು" ಎಂದು ಕೋರಸ್ ನಲ್ಲಿ ಉತ್ತರಿಸಿದೆವು.
ನಮ್ಮ ಯೋಗ ಶಿಕ್ಷಕರು ಇದನ್ನೊಪ್ಪದೆ, "ನಾವು ಯಾರನ್ನೋ ಉದ್ದೇಶಿಸಿ, ಹಸ್ತವನ್ನೇ ತೋರಿಸಿದಾಗ, ಎಲ್ಲಾ ಬೆರಳುಗಳು 'ತೋರು ಬೆರಳು'ಗಳಾಗುವುದಿಲ್ಲವೇ ? ಹತ್ತೂ ಬೆರಳುಗಳಿಗೆ ಉಂಗುರವನ್ನು ಹಾಕುವವರು ಇಲ್ಲವೆ?" ಎಂದಾಗ ಪೆಚ್ಚಾದೆವು. ಅಂತೂ ಈ ಪ್ರಶ್ನೆಗೆ ಸರಿಯಾದ ಉತ್ತರ "ಅಂಗುಷ್ಟ, ತರ್ಜಿನಿ, ಮಧ್ಯಮ,ಅನಾಮಿಕಾ ಮತ್ತು ಕನಿಷ್ಟ' ಬೆರಳುಗಳು.
No comments:
Post a Comment