Total Pageviews

Sunday, May 31, 2015

ನಮ್ಮ ಕೈ ಬೆರಳುಗಳ ಹೆಸರೇನು?

ನಮ್ಮ ಕೈ ಬೆರಳುಗಳ ಹೆಸರೇನು? ಅಂಗುಷ್ಟ, ತರ್ಜಿನಿ, ಮಧ್ಯಮ,ಅನಾಮಿಕಾ ಮತ್ತು ಕನಿಷ್ಟ.
ಜಗತ್ತಿಗೇ ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ತಿಳಿಸಿಕೊಟ್ಟ ಖ್ಯಾತಿ ಭಾರತೀಯರದು. ಆದರೆ ಯಾಕೋ ನಮ್ಮಲ್ಲಿ ಹೆಚ್ಚಿನವರಿಗೆ ಇದರ ಬಗ್ಗೆ ಅಸಡ್ಡೆ. ಇದಕ್ಕೆ ನಾನೇ ಉತ್ತಮ ಉದಾಹರಣೆ. ಮೈಸೂರಿಗೆ ಹಲವಾರು ವಿದೇಶೀಯರು ಯೋಗಾಭ್ಯಾಸದ ತರಬೇತಿಗೆಂದು ಸಾಕಷ್ಟು ಖರ್ಚು ಮಾಡಿ ಬರುತ್ತಾರೆ. ಯೋಗ-ಪ್ರಾಣಾಯಾಮ-ಧ್ಯಾನ-ಮುದ್ರೆ ಇತ್ಯಾದಿ ವಿದ್ಯೆ ಕಲಿತು ಮರಳುತ್ತಾರೆ. ಆದರೆ ಸ್ಥಳೀಯರಾದ ನಾವು, ಯಾರಾದರೂ ಉಚಿತ ತರಬೇತಿ ಕಾರ್ಯಕ್ರಮ ಏರ್ಪಡಿಸಿದ್ದಾಗಲೂ ಕೂಡ "ಸಮಯದ ಅಭಾವ...ಮಕ್ಕಳ ಶಾಲಾಸಮಯಕ್ಕೆ ತೊಂದರೆ...ಆಫೀಸಿನ ಕೆಲಸ" ಇತ್ಯಾದಿ ನಾನಾ ಕಾರಣಗಳಿಂದ ಯೋಗಾಭ್ಯಾಸ ಮಾಡಲು ಮನಸ್ಸು ಮಾಡುವುದಿಲ್ಲ!
ಎಲ್ಲಿಯವರೆಗೆ ನಮ್ಮ ಶರೀರದ Nuts and Bolts ಗಳು ಸುಸ್ಥಿತಿಯಲ್ಲಿರುತ್ತವೆಯೇ ಅಲ್ಲಿಯ ವರೆಗೆ ಈ ರೀತಿಯ ನೆಪಗಳು ಧಾರಾಳವಾಗಿ ಸಿಗುತ್ತವೆ. ಆದರೆ, ನಲವತ್ತು ದಾಟಿದ ಮೇಲೆ, ಚಾಳೀಸ್ ಕನ್ನಡಕ ಮೂಗಿನ ಮೇಲೆ ಕಂಗೊಳಿಸುವಾಗ, ಮಂಡಿಯ ಮೂಳೆಗಳು ಅಸಹಕಾರ ಚಳುವಳಿ ಹೂಡಲಾರಂಭಿಸಿದಾಗ ಯೋಗಾಭ್ಯಾಸದ ಕಡೆಗೆ ಅನಿವಾರ್ಯವಾಗಿ ಗಮನ ಹರಿಸುತ್ತೇವೆ. ಹಾಗಾಗಿ ಈಗ ನಾನು ಭಾಗವಹಿಸುತ್ತಿರುವ ಯೋಗ ಮತ್ತು ಪ್ರಾಣಾಯಾಮ ತರಗತಿಗಳಲ್ಲಿ ನಿವೃತ್ತಿ ಆದವರು ಮತ್ತು ಮಧ್ಯ ವಯಸ್ಸಿನವರೇ ಜಾಸ್ತಿ. ಅಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ!
ಈವತ್ತು ನಮ್ಮ ತರಬೇತುದಾರರಾದ ಯೋಗ ಶಿಕ್ಷಕರು ಕೇಳಿದ ಒಂದು ಸರಳ ಪ್ರಶ್ನೆ ಹೀಗಿತ್ತು. " ನಮ್ಮ ಕೈ ಬೆರಳುಗಳ ಹೆಸರೇನು? " ಇದ್ಯಾವ ಮಹಾಪ್ರಶ್ನೆ ಎಂದು ನಾವು "ಹೆಬ್ಬೆರಳು, ತೋರುಬೆರಳು, ಮಧ್ಯಬೆರಳು, ಉಂಗುರಬೆರಳು, ಕಿರುಬೆರಳು" ಎಂದು ಕೋರಸ್ ನಲ್ಲಿ ಉತ್ತರಿಸಿದೆವು.
ನಮ್ಮ ಯೋಗ ಶಿಕ್ಷಕರು ಇದನ್ನೊಪ್ಪದೆ, "ನಾವು ಯಾರನ್ನೋ ಉದ್ದೇಶಿಸಿ, ಹಸ್ತವನ್ನೇ ತೋರಿಸಿದಾಗ, ಎಲ್ಲಾ ಬೆರಳುಗಳು 'ತೋರು ಬೆರಳು'ಗಳಾಗುವುದಿಲ್ಲವೇ ? ಹತ್ತೂ ಬೆರಳುಗಳಿಗೆ ಉಂಗುರವನ್ನು ಹಾಕುವವರು ಇಲ್ಲವೆ?" ಎಂದಾಗ ಪೆಚ್ಚಾದೆವು. ಅಂತೂ ಈ ಪ್ರಶ್ನೆಗೆ ಸರಿಯಾದ ಉತ್ತರ "ಅಂಗುಷ್ಟ, ತರ್ಜಿನಿ, ಮಧ್ಯಮ,ಅನಾಮಿಕಾ ಮತ್ತು ಕನಿಷ್ಟ' ಬೆರಳುಗಳು.

ಅಬ್ಬಾ ಸಬ್ಬಕ್ಕಿಯ ಮಹಿಮೆ!

ಹೆಚ್ಚಾಗಿ ಪಾಯಸ ತಯಾರಿಕೆಯಲ್ಲಿ ಬಳಕೆಯಾಗುವ ಬಿಳಿ ಬಣ್ಣದ ಮುತ್ತುಗಳಂತಿರುವ ಸಾಗು ಅಥವಾ Sago  ಎಲ್ಲರಿಗೂ ಪರಿಚಿತ. ಇದನ್ನು ಸಬ್ಬಕ್ಕಿ, ಸೀಮೆ ಅಕ್ಕಿ, ಸಾಗಕ್ಕಿ, ಸಾಬುದಾನಿ, ಸಾಬಕ್ಕಿ, ಜವ್ವರಿಶಿ ಇತ್ಯಾದಿ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಬಿಳಿಬಣ್ಣದ ಕಾಳಿನಂತೆ ಇದ್ದರೂ ಬೆಂದ ಮೇಲೆ ಪಾರದರ್ಶಕವಾದ ಗೋಳಗಳಂತೆ ಕಾಣುವುದು ಸಬ್ಬಕ್ಕಿಯ ವಿಶೇಷತೆ.
ಸಬ್ಬಕ್ಕಿಯು ಸುಲಭವಾಗಿ ಜೀರ್ಣವಾಗುವ ಪಿಷ್ಟವನ್ನೊಳಗೊಂಡಿದೆ. ಹಾಗಾಗಿ ಇದನ್ನು ಅಶಕ್ತರಿಗೆ ಗಂಜಿಯ ರೂಪದಲ್ಲಿ ಆಹಾರವಾಗಿ  ಕೊಡುತ್ತಾರೆ. ಶಿಶು ಆಹಾರವಾಗಿಯೂ ಬಳಸುತ್ತಾರೆ. ಇನ್ನು  ರುಚಿ ಹೆಚ್ಚಿಸಿ ವಡೆ, ದೋಸೆ, ಉಪ್ಪಿಟ್ಟು ಮಾಡಿಯೂ ತಿನ್ನಬಹುದು. ಕೆಲವೆಡೆ ವ್ರತ-ಉಪವಾಸದ  ಆಹಾರವಾಗಿಯೂ ಸಬ್ಬಕ್ಕಿಯನ್ನು ಬಳಸುವ ಪದ್ಧತಿಯಿದೆ. ಪಾಯಸ, ಉಪ್ಪಿಟ್ಟು ಇತ್ಯಾದಿಗಳಿಗೆ  ಸಬ್ಬಕ್ಕಿಯನ್ನು ಉಪಯೋಗಿಸುವ ಮೊದಲು 4 ಗಂಟೆಗಳ ನೀರಿನಲ್ಲಿ ನೆನೆಸಿದರೆ ಉತ್ತಮ. ಹದವಾಗಿ ಬೇಯುತ್ತದೆ ಮತ್ತು ಬೇಗನೆ ತಳ ಹಿಡಿದು  ಸೀದು ಹೋಗುವುದನ್ನು ತಪ್ಪಿಸಬಹುದು.
Sabbakki
ಭಾರತದಲ್ಲಿ ಮರಗೆಣಸಿನ ಹಿಟ್ಟಿನಿಂದ ಸಬ್ಬಕ್ಕಿಯನ್ನು ತಯಾರಿಸುತ್ತಾರೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕೆಲವೆಡೆ ಮರಗೆಣಸಿನ ಬೆಳೆ ಕಂಡುಬರುತ್ತದೆಯಾದರೂ ಸಬ್ಬಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಹಿರಿಮೆ ತಮಿಳುನಾಡಿಗೆ ಸಲ್ಲುತ್ತದೆ.
Tapiocaಬಲಿತ ಮರಗೆಣಸನ್ನು ಚೆನ್ನಾಗಿ ತೊಳೆದು, ಸಿಪ್ಪೆಯನ್ನು ಬೇರ್ಪಡಿಸುತ್ತಾರೆ. ಶುಚಿಗೊಳಿಸಿದ ಮರಗೆಣಸಿನ ಹೋಳುಗಳನ್ನು ನೀರು ಹಾಕಿ  ರುಬ್ಬಿ ಅಥವಾ ಕ್ರಷ್ ಮಾಡಿ ಹಾಲನ್ನು ತೆಗೆಯುತ್ತಾರೆ. ಈ ಹಾಲನ್ನು ಕಡಾಯಿಯಲ್ಲಿ 4 ತಾಸು ಇರಿಸಿದಾದ ಪಿಷ್ಟದ ಅಂಶವು ಪಾತ್ರೆಯ ತಳದಲ್ಲಿ ಸಂಗ್ರಹವಾಗಿ ನೀರು ಮೇಲೆ ನಿಂತಿರುತ್ತದೆ. ನೀರನ್ನು ಬೇರ್ಪಡಿಸಿ, ಶೋಧಿಸಿದಾಗ ಮರಗೆಣಸಿನ ಹಿಟ್ಟು ಸಿಗುತ್ತದೆ. ಇದನ್ನು ತಕ್ಕುದಾದ ಸಬ್ಬಕ್ಕಿ ತಯಾರಿಕೆಯ ಯಂತ್ರದ ಮೂಲಕ ಹಾಯಿಸಿ ಕಾಳುಗಳನ್ನಾಗಿ ಮಾಡಿ ಒಣಗಿಸಿದಾಗ ‘ಸಬ್ಬಕ್ಕಿ’ ಸಿದ್ಧವಾಗುತ್ತದೆ.
ಕೆಲವು ಪೌರ್ವಾತ್ಯ ದೇಶಗಳಲ್ಲಿ, ತಾಳೆಯ ವರ್ಗಕ್ಕೆ ಸೆರಿದ Metroxylon Sagu ಎಂಬ ಮರದ ಕಾಂಡವನ್ನು ಸೀಳಿ ಅದರಿಂದ ಪಿಷ್ಟವನ್ನು ಸಂಗ್ರಹಿಸಿ, ಶುದ್ಧೀಕರಿಸಿ, ಸಬ್ಬಕ್ಕಿಯನ್ನು ತಯಾರಿಸುತ್ತಾರೆ. ಇದಕ್ಕೆ Palm Sago ಅಂತ  ಹೆಸರು.
ಸಬ್ಬಕ್ಕಿಯ ಮುಖ್ಯ ಉಪಯೋಗ ಆಹಾರ ಪದಾರ್ಥವಾಗಿ. ಏಷ್ಯಾದ ಕೆಲವು ದೇಶಗಳಲ್ಲಿ ಅಕ್ಕಿಗೆ ಪರ್ಯಾಯವಾಗಿ ಸಬ್ಬಕ್ಕಿಯನ್ನು ದೈನಂದಿನ ಅಡುಗೆಯಲ್ಲಿ ಬಳಸುವವರೂ ಇದ್ದಾರೆ. ಆದರೆ, ಅದೇಕೊ, ನಮ್ಮಲ್ಲಿ ಸಬ್ಬಕ್ಕಿಯ ಪಾಯಸ ಮಾತ್ರ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಇತರ ಅಡುಗೆಗಳು ಅಷ್ಟಾಗಿ ಬಳಕೆಯಲ್ಲಿ ಇಲ್ಲ.

(ಮಾಹಿತಿ, ಚಿತ್ರ : ಅಂತರ್ಜಾಲ)

– ಹೇಮಮಾಲಾ.ಬಿ

Monday, May 4, 2015

ನೆಗ್ಗಿದ ತಟ್ಟೆ..ರಂಗಾಯಣ..ಚಿಣ್ಣರ ಮೇಳ

ಶಾಲಾ ಮಕ್ಕಳಿಗೆ ಬೇಸಗೆ ರಜೆ ಸಿಕ್ಕಿದೆ.  ಪಕ್ಕದ ಖಾಲಿ ಸೈಟಿ ನಲ್ಲಿ ಬಡಾವಣೆಯ ಮಕ್ಕಳ ಸಡಗರದ ಆಟ ನೋಡುತ್ತಿರುವಾಗ 'ರಂಗಾಯಣದ ಚಿಣ್ಣರ ಮೇಳ' ನೆನಪಾಗುತ್ತಿದೆ.  ಮೈಸೂರಿನವರಿಗೆ 'ರಂಗಾಯಣ' ಚಿರಪರಿಚಿತ. ಬೇಸಗೆಯಲ್ಲಿ  ಇವರು ಹಮ್ಮಿಕೊಳ್ಳುವ  ಬೇಸಗೆ ಶಿಬಿರವಾದ 'ಚಿಣ್ಣರ ಮೇಳ' ಬಹಳ ಸೊಗಸಾಗಿರುತ್ತದೆ. ನಮ್ಮ ಮಗ 8-10 ವರ್ಷದ ಬಾಲಕನಾಗಿದ್ದಾಗ ಅವನನ್ನು   'ಚಿಣ್ಣರ ಮೇಳ'ಕ್ಕೆ ದಾಖಲಿಸಿದ್ದೆವು. ಈ ಬೇಸಗೆ ಶಿಬಿರ ಎಷ್ಟು ಪ್ರಖ್ಯಾತ ಎಂದರೆ  ಅವರು ಅಪ್ಲಿಕೇಶನ್ ಫಾರ್ಮ್ ಕೊಡುತ್ತಾರೆಂದು ನಿಗದಿಪಡಿಸಿದ ದಿನದಂದು ಬೆಳಗ್ಗೆ 10 ಗಂಟೆಯೊಳಗೇ ಸುಮಾರು 400  ಅಪ್ಲಿಕೇಶನ್ ಫಾರ್ಮ್ ವಿತರಣೆಯಾಗಿ ಆಮೇಲೆ ಬಂದವರಿಗೆ ಅವಕಾಶವಿಲ್ಲದಾಗುತ್ತದೆ!

ಚಿಣ್ಣರ ಮೇಳದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಸುವುದರ ಜತೆಗೆ, ದೇಸೀ ಆಟಗಳನ್ನು, ಪರಿಸರವನ್ನು ಪರಿಚಯಿಸುತ್ತಾರೆ.  'ಮಕ್ಕಳನ್ನು ಮುಕ್ತವಾಗಿ ಪ್ರಕೃತಿಯಲ್ಲಿ ಬೆಳೆಯಲು ಬಿಡಿ' ಎಂದು ಪ್ರಥಮ ದಿನ ಪಾಲಕರ ಭೇಟಿಯಲ್ಲಿಯೇ  ತಿಳಿಸಿದ್ದರು. ನನಗೆ ಈಗ ನೆನಪಿರುವಂತೆ,  2005/2006 ನೇ ಇಸವಿಯಲ್ಲಿ  ನಮ್ಮ ಮಗ ಭಾಗವಹಿಸಿದ್ದ,  ಸುಮಾರು ಒಂದು ತಿಂಗಳ  ಅವಧಿಯ ಚಿಣ್ಣರ ಮೇಳದಲ್ಲಿ,  ಈ ಕೆಳಗಿನ ಕಾರ್ಯಕ್ರಮಗಳಿದ್ದುವು: 
  • ಖ್ಯಾತ ಚಲನಚಿತ್ರ ಕಲಾವಿದರಾದ  ದಿ.ಅಶ್ವಥ್  ಅವರು ಕೊಳಲೂದುವ ಮೂಲಕ ಉದ್ಘಾಟನೆ . ಆವರು ಕೊಳಲು ಊದುತ್ತಿದ್ದಂತೆ, ವೇದಿಕೆಯ ಇಕ್ಕೆಲದಿಂದ, ಪೀ-ಪೀ ಎಂದು ತೋಚಿದಂತೆ ಕೊಳಲೂದುತ್ತಾ ಬಂದ ನೂರಾರು  ಪುಟಾಣಿಗಳ ದಂಡು.
  • ದೇಸಿ ಆಟಗಳಾದ ಕಬಡ್ಡಿ, ಲಗೋರಿಗಳ ಪರಿಚಯ. ಅಲ್ಲಿ ಕಲಿತು ಬಂದ ಲಗೋರಿ ಆಟವನ್ನು ನಮ್ಮ  ಬೀದಿಯ ಮಕ್ಕಳು,  'ಕಮೆಂಟ್ರಿ' ಸಮೇತವಾಗಿ ಬಹಳ ದಿನಗಳ ನಂತರವೂ ಆಡುತ್ತಿದ್ದರು.
  • ಕುಕ್ಕರಹಳ್ಳಿ ಕೆರೆಯ ಏರಿ ಮೇಲೆ ವಾಕಿಂಗ್ ಮತ್ತು ಪಕ್ಷಿವೀಕ್ಷಣೆ. ಇದರಿಂದ ಪ್ರಭಾವಿತನಾದ ನಮ್ಮ ಮಗ , ಕೆಲವು ದಿನ ನಮ್ಮ ಬಡಾವಣೆಯಲ್ಲಿಯೇ ಗೆಳೆಯರನ್ನು ಸೇರಿಸಿಕೊಂಡು, ಪುಟ್ಟ ನೋಟ್ಸ್ ಬುಕ್ ಹಿಡಿದುಕೊಂಡು ಕಾಗೆ, ಗುಬ್ಬಚ್ಚಿ, ಪಾರಿವಾಳಗಳ ಲೆಕ್ಕ ಬರೆದ.  
  • ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತುವುದು ಜತೆಗೆ ಸಸ್ಯಸಿರಿಯ ಪರಿಚಯ.
  • ಬೊಂಬೆ ರಥ : ಎಲ್ಲಿ ಹೋದರಪ್ಪ ಇವರೆಲ್ಲಾ ಎಂದು ನೋಡುವಷ್ಟರಲ್ಲಿ   ಮಕ್ಕಳೆಲ್ಲಾ ಸೇರಿ ಒಂದು ಸಣ್ಣ ರಥವನ್ನು ಹಗ್ಗದ ಮೂಲಕ ಎಳೆದುಕೊಂಡು  ಬಂದರು. ಮಕ್ಕಳೇ ತಯಾರಿಸಿದ ವಿವಿಧ ಬೊಂಬೆಗಳನ್ನು,  ಆ ರಥಕ್ಕೆ ಕಟ್ಟಿ ಸಿಂಗರಿಸಿದ್ದರು. 
  • ಮಕ್ಕಳಿಗೆ ತರಬೇತಿ ನೀಡಿ  'ಟಿಪ್ಪು ಸುಲ್ತಾನ್' ನಾಟಕ ಆಡಿಸಿದ್ದರು. ಹಾಗಾಗಿ ನಮ್ಮ  ಮನೆಯಲ್ಲಿ, ಮಗನ 'ಮೀರ್ ಸಾಧಿಕ್' ಪಾತ್ರದ ತಾಲೀಮ್ ನಡೆಯುತ್ತಾ ಇತ್ತು!
  • ರಂಗಿನ ಓಕುಳಿ :  ಒಂದು ದಿನ  ಚಿಣ್ಣರ ಮೇಳದಲ್ಲಿ ಮಕ್ಕಳು  ಪರಸ್ಪರ ಬಣ್ಣದ ನೀರಿನ  ಓಕುಳಿ ಎರಚಿಕೊಂಡು ಸಂಭ್ರಮ ಪಡಲು ವ್ಯವಸ್ಥೆ ಕಲ್ಪಿಸಿದ್ದರು. 
ಸಾಂಸ್ಕೃತಿಕ ಮೇಳ: ಕೆಲವು ಮಕ್ಕಳಿಗೆ  ಮನೆಯಿಂದ ಒಂದು ತಟ್ಟೆ ಮತ್ತು ಚಮಚ  ಇನ್ನು ಕೆಲವರಿಗೆ ಲೋಟ-ಚಮಚ   ತರಲು ಹೇಳಿದ್ದರು. ಕೆಲವರಿಗೆ ಹಾಡು ಕಲಿಸಿದ್ದರು. ಒಟ್ಟಾರೆಯಾಗಿ ಎಲ್ಲಾ ಮಕ್ಕಳನ್ನೂ ಒಂದಲ್ಲ ಒಂದು ರೀತಿ ತೊಡಗಿಸಿದ್ದರು, ತನಗೆ  ಅವಕಾಶ ಸಿಗಲಿಲ್ಲ ಎಂದು ಯಾವ ಮಗುವೂ ಬೇಜಾರು ಮಾಡಿಕೊಂಡಿಲ್ಲ.  ಹೀಗೆ ಹಾಡುವ ಮೇಳಕ್ಕೆ ತಟ್ಟೆ, ಲೋಟ, ಚಮಚ, ಕುಟ್ಟಣಗಳ ಹಿಮ್ಮೇಳ.  ನಮ್ಮ ಮಗ ತಟ್ಟೆಯನ್ನು ಚಮಚದಿಂದ ಎಷ್ಟು ಜೋರಾಗಿ ಕುಟ್ಟುತ್ತಿದ್ದ ಎಂಬುದಕ್ಕೆ ಸಾಕ್ಷಿಯಾಗಿ, ಅವನು ಬಳಸಿ ನೆಗ್ಗಿದ ತಟ್ಟೆಯನ್ನು ಈಗಲೂ ಇಟ್ಟುಕೊಂಡಿದ್ದೇವೆ. 

ಚಿಣ್ಣರ ಸಂತೆ : ಎಲ್ಲಾ ಮಕ್ಕಳು ತಮ್ಮ ಮನೆಯಿಂದ ಏನಾದರೂ ಸಾಮಾಗ್ರಿ ತಂದು 'ಸಂತೆಯಲ್ಲಿ ಅಂಗಡಿ ' ಇಡಬೇಕೆಂದು ಹೇಳಿದ್ದರು . ಆಗಿನ ದೂರದರ್ಶನದ ಜಾಹೀರಾತಿನಲ್ಲಿ " ಐ ಲವ್ ಯೂ ರಸ್ನಾ.." ಅಂತ ಪುಟಾಣಿಯೊಬ್ಬಳು ಉಲಿಯುತ್ತಿದ್ದಳು. ಸರಿ, ನಮ್ಮ ಮಗ, ತಾನು 'ರಸ್ನಾ' ಮಾರುತ್ತೇನೆಂದ. ಸಂತೆಯ  ದಿನ ಎರಡು ದೊಡ್ಡ ಬಾಟಲುಗಳಲ್ಲಿ ರಸ್ನಾ ಮಾಡಿ  ತುಂಬಿಸಿ ಆಯಿತು. ಒಂದು ಬೆಡ್ ಶೀಟ್ ಮತ್ತು ಕೆಲವು  ಕಾಗದದ ಕಪ್ ಗಳನ್ನು ತೆಗೆದುಕೊಂಡು  ರಂಗಾಯಣಕ್ಕೆಹೋಗಿದ್ದ. ಆ ದಿನ  ಸಂಜೆ ಪಾಲಕರಿಗೂ ಬರಲು ಅವಕಾಶವಿತ್ತು. ಸಂಜೆ 'ರಂಗಾಯಣ'ದ ಆವರಣದಲ್ಲಿ ನಾವು ಹೋಗುತ್ತಿದ್ದಂತೆ, ಮಕ್ಕಳ ಸಂತೆಯಲ್ಲಿ ವ್ಯಾಪಾರ, ಚೌಕಾಸಿ ತಾರಕಕ್ಕೇರಿತ್ತು. ಬಂದಿದ್ದ ಪಾಲಕರೇ ಗ್ರಾಹಕರು.  

ಕೆಲವು ಮಕ್ಕಳು ಚಾಪೆ ಹಾಸಿ ಕುಳಿತು ತಾವು ತಂದಿದ್ದ ಕಲ್ಲಂಗಡಿ ಹಣ್ಣು, ಜ್ಯೂಸ್, ಮಜ್ಜಿಗೆ, ಚಾಕಲೇಟ್ ಇತ್ಯಾದಿ ಮಾರುತ್ತಿದ್ದರೆ, ಇನ್ನು ಕೆಲವರು ತಲೆ ಮೇಲೆ ಬುಟ್ಟಿಯಲ್ಲಿ ಹೊತ್ತು ಸಂತೆಯಲ್ಲಿ ಓಡಾಡುತ್ತಾ ಮಾರುತ್ತಿದ್ದರು!  ಪಾಲಕರು/ಗ್ರಾಹಕರು ಬೇಕೆಂದೇ ಚೌಕಾಸಿ ಮಾಡುತ್ತಿದ್ದರೆ, ಪುಟಾಣಿಗಳು ನಿಷ್ಣಾತ ವ್ಯಾಪಾರಿಗಳಂತೆ ತಿರುಗೇಟು ಕೊಡುತ್ತಾ ವ್ಯವಹಾರ ಮಾಡಿ  ಸಂಪಾದಿಸುತ್ತಿದ್ದರು!    ರಂಗಾಯಣದ ಕಲಾವಿದರು  ಮೈಗೆಲ್ಲಾ ಬಣ್ಣ ಬಳಿದು  ಅಂಗಡಿ 'ಮಾಲೀಕರ' ಮುಂದೆ ಸಾಕಷ್ಟು ತಕರಾರು ಮಾಡುತ್ತಿದ್ದರು!  ಕೋಲೆಬಸವನೂ ಬಂದಿದ್ದ. ಒಬ್ಬರು ಕತ್ತಿನವರೆಗೂ ಮರಳಿನ ರಾಶಿಯಲ್ಲಿ ಹುದುಗಿ ಆಕರ್ಷಿಸುತ್ತಿದ್ದರು, ಬಲೂನ್ ವ್ಯಾಪಾರವಿತ್ತು. ಅಂತೂ ರಂಗಾಯಣದ ಆವರಣದಲ್ಲಿ 'ಅಪ್ಪಟ ಸಂತೆ' ಸೃಷ್ಟಿಯಾಗಿತ್ತು.

ತಮ್ಮ ಪಾಲಕರನ್ನು ಕಂಡ ತತ್ಕ್ಷಣ  ಮಕ್ಕಳು ಅದುವರೆಗೆ ನಡೆಸುತ್ತಿದ್ದ ಅಂಗಡಿಯನ್ನು ಅಲ್ಲಿಗೇ ಬಿಟ್ಟು,  ಬೇರೆ ಅಂಗಡಿಗೆ ವ್ಯಾಪಾರಕ್ಕೆ ಹೊರಡಲು ಅನುವಾದರು. ನಮ್ಮ ಮಗ ರಸ್ನಾ ಮಾರುತ್ತಿದ್ದನು ಅದುವರೆಗೆ 12 ರೂ ಗಳಿಸಿದ್ದನ್ನು  ಹೆಮ್ಮೆಯಿಂದ ತೋರಿಸಿದ.   ನನ್ನನ್ನು ಕಂಡೊಡನೆ, ಜಿಗ್ಗನೆ ಎದ್ದು, ಸ್ವಲ್ಪ ದುಡ್ಡು ಪಡಕೊಂಡು 'ಪರ್ಚೇಸ್ ಮಾಡ್ಬೇಕು'  ಅಂದು  ಛಂಗನೆ ಓಡಿದ.  ಏನಪ್ಪಾ ಮಾಡಲಿ ಅನ್ನುತ್ತಾ ಕೊನೆಗೆ ನಾನು ಅವನ ಜಾಗದಲ್ಲಿ  ಕುಳಿತುಕೊಂಡೆ. ನೋಡನೋಡುತ್ತಿರುವಷ್ಟರಲ್ಲಿ, ಎಲ್ಲಾ ಅಂಗಡಿಗಳಲ್ಲಿ ಮಾಲೀಕರು ನಾಪತ್ತೆ.  ಅವರ ಜಾಗದಲ್ಲಿ ಅಪ್ಪಂದಿರು/ಅಮ್ಮಂದಿರು/ಅಜ್ಜಿಯಂದಿರು ಸಂತೆಯಲ್ಲಿ  ನಗುತ್ತಾ  ಕುಳಿತಿದ್ದರು.  'ಪರ್ಚೇಸ್ ಮಾಡಲೆಂದು'  ಕೆಲವರು ಚುರುಮುರಿ ತಿನ್ನಲು ಹೋದರೆ ಇನ್ನು ಕೆಲವರು ಐಸ್ ಕ್ಯಾಂಡಿ ಗಾಡಿಯ ಮುಂದೆ ಇದ್ದರು. ಕೊನೆಗೆ ನಾವು  ಅಕ್ಕ-ಪಕ್ಕದ ಅಂಗಡಿಯಲ್ಲಿದ್ದ ಪಾಲಕರು  ಪರಸ್ಪರ ಪರಿಚಯ ಮಾಡಿಕೊಂಡು  ಸಂತೆಗೆಂದು  ಕಳುಹಿಸಿದ್ದ ತಿಂಡಿ/ಪಾನೀಯವನ್ನು ಹಂಚಿ ಮುಗಿಸಿ ಅಂಗಡಿ ಕ್ಲೋಸ್ ಮಾಡಿದೆವು!  


ಒಟ್ಟಾರೆಯಾಗಿ, ಚಿಣ್ಣರಮೇಳದಲ್ಲಿ ಭಾಗವಹಿಸಿ ನಮ್ಮ ಮಗನಿಗೂ ನಮಗೂ ಬಹಳ ಸಂತಸವಾಯಿತು. ಆ ದಿನಗಳಲ್ಲಿ   ಡಿಜಿಟಲ್ ಕ್ಯಾಮೆರಾ/ ಸ್ಮಾರ್ಟ್ ಫೋನ್  ಈಗಿನಷ್ಟು ವ್ಯಾಪಕವಾಗಿ ಲಭ್ಯವಿದ್ದಿದ್ದರೆ , ಎಷ್ಟೊಂದು ಫೊಟೊ ತೆಗೆದಿಡಬಹುದಾಗಿತ್ತು ಅನಿಸುತ್ತದೆ. ಕಾಲ ಮಿಂಚಿ ಹೋಗಿದೆ!  ಹಾಗಾಗಿ ಈಗ ಚಿಣ್ಣರ ಮೇಳದ  'ನೆಗ್ಗಿದ ತಟ್ಟೆ'ಯಲ್ಲಿಯೇ ಆ ಚಿತ್ರಗಳನ್ನು ನಾವು ಕಾಣಬೇಕು.

'ಮೇಲಾರಕ್ಕೆ ಕೊರವದು'-ತರಕಾರಿ ಹೆಚ್ಚುವ ಕಾರ್ಯಕ್ರಮ

ಎಪ್ರಿಲ್-ಮೇ ಆರಂಭವಾಯಿತೆಂದರೆ ಶುಭಕಾರ್ಯಕ್ರಮಗಳ ಸೀಸನ್ ಆರಂಭವಾಗುತ್ತದೆ.  ನಾನು ಹೇಳುತ್ತಿರುವುದು ನನ್ನ ಅನುಭವದ ವ್ಯಾಪ್ತಿಯಲ್ಲಿ ಬಂದ,  ಸಾಂಪ್ರದಾಯಿಕವಾಗಿ ಮನೆಯಲ್ಲಿಯೇ   ನಡೆಯುವ ಸಮಾರಂಭಗಳು ಮತ್ತು ಅವಕ್ಕೆ ಪೂರ್ವತಯಾರಿಯ ಅಂಗವಾದ  'ಮೇಲಾರಕ್ಕೆ ಕೊರವದು ಅಂದರೆ ತರಕಾರಿ ಹೆಚ್ಚುವ ಕಾರ್ಯಕ್ರಮದ' ಬಗ್ಗೆ.


'ಮೇಲಾರಕ್ಕೆ ಕೊರವದು ' ಕಾರ್ಯಕ್ರಮಕ್ಕೆ ವಿಶಿಷ್ಟ ಸೊಗಸಿದೆ.  ಸಮಾರಂಭದ ಹಿಂದಿನ ದಿನ ರಾತ್ರಿ ಗಣಪತಿ ಪೂಜೆ ಮಾಡಿ ಶುಭಾರಂಭವಾಗುತ್ತದೆ. ರಾತ್ರಿಯ ಸಿಹಿಯೂಟದ ನಂತರ ಮನೆಯ ಸದಸ್ಯರು ಮತ್ತು ಅಕ್ಕಪಕ್ಕದ ಮನೆಯವರು ಒಟ್ಟು ಸೇರಿ, ಮನೆ ಮುಂದೆ ಹಾಕಿರುವ ಚಪ್ಪರದ ಆಡಿಯಲ್ಲಿ, ಅಡುಗೆ ಭಟ್ಟರ ಮೇಲ್ವಿಚಾರಣೆಯಲ್ಲಿ, ಮರುದಿನದ ಅಡುಗೆಗೆ ಬೇಕಾಗುವ ತರಕಾರಿಗಳನ್ನು ಹೆಚ್ಚಲು ಆರಂಭಿಸುತ್ತಾರೆ. ಈ ಕಾರ್ಯಕ್ರಮಕ್ಕೆ ನಮ್ಮ ಸಮುದಾಯದ  ಆಡುಭಾಷೆಯಲ್ಲಿ 'ಮೇಲಾರಕ್ಕೆ ಕೊರವದು' ಅನ್ನುತ್ತಾರೆ. ಮೇಲಾರ ಎಂದರೆ ಮಜ್ಜಿಗೆಹುಳಿ, ಕೊರವದು ಎಂದರೆ ಹೆಚ್ಚುವುದು. ಅಸಲಿಗೆ ಮಜ್ಜಿಗೆಹುಳಿಗೆ ಬೇಕಾಗುವ ತರಕಾರಿಗಳಿಗಿಂತ ಇತರ ಅಡುಗೆಗಳಿಗೆ ಹೆಚ್ಚು ತರಕಾರಿ ಬೇಕಾಗುವುದಾದರೂ 'ಮೇಲಾರಕ್ಕೆ ಕೊರವದು' ಎಂಬ ಮಾತು ಯಾಕೆ ಬಳಕೆಗೆ ಬಂತೋ ಗೊತ್ತಿಲ್ಲ. 

ರಾತ್ರಿ ಊಟವಾದ ಮೇಲೆ ಶುರುವಾಗುವ ಈ ತರಕಾರಿ ಹೆಚ್ಚುವ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಮನೆಯವರು ಮತ್ತು ಬಂದಿದ್ದ ನೆಂಟರು ಉತ್ಸಾಹದಿಂದ ಭಾಗವಹಿಸುತ್ತಾರೆ. ತರಕಾರಿ ಹೆಚ್ಚುವವರ ಮಾತಿನ ಲಹರಿ ಬಲು ವಿಸ್ತಾರವಾದದ್ದು.  ಅಲ್ಲಿ ಚರ್ಚಿತವಾಗದ ವಿಷಯಗಳೇ ಇಲ್ಲ.  ಪ್ರಸ್ತುತ ಅಧಿಕಾರದಲ್ಲಿರುವ/ಇಲ್ಲದಿರುವ  ರಾಜಕಾರಣಿಗಳು, ಚಲಾವಣೆಯಲ್ಲಿ ಇರುವ/ಇಲ್ಲದಿರುವ ಸಿನೆಮಾ ನಟಿಯರು  ಇಲ್ಲಿ ವಿಮರ್ಶೆಗೆ ಗುರಿಯಾಗುತ್ತಾರೆ. ಊರಿನ ಭಜನಾ ಮಂಡಳಿಯಿಂದ ತೊಡಗಿದ ಮಾತು  ಅಮೇರಿಕಾದ ಶ್ವೇತಭವನಕ್ಕೆ ತಲಪಿ ಒಬಾಮಾ, ಮಿಶಲ್ ವಿಷಯ ಬರುತ್ತದೆ. ಇನ್ನು ನಮ್ಮ ದೇಶದವರೇ ಅದ್ದ ಅಜ್ಜ-ಮಗಳು-ಮೊಮ್ಮಗ-ಮರಿಮೊಮ್ಮಗರನ್ನು (ನೆಹರೂ ಕುಟುಂಬ) ನೆನಪಿಸದಿದ್ದರಾಗುತ್ತದೆಯೇ ?  ಆಡಳಿತ ಪಕ್ಷಕ್ಕೂ ವಿರೋಧ ಪಕ್ಷಕ್ಕೂ ಸಮಾನ ಮನ್ನಣೆಯ ಪೀಠಿಕೆ/ಗೌರವ  ಸಿಗುವುದು 'ಮೇಲಾರಕ್ಕೆ ಕೊರೆವಗ' ಮಾತ್ರ ಎಂದು ನಮ್ಮ ಅಂಬೋಣ!

ಮಕ್ಕಳು-ಮೊಮ್ಮಕ್ಕಳು, ಉದ್ಯೋಗದ ವಿಚಾರಣೆ ಇದ್ದೇ ಇರುತ್ತದೆ. ಪಕ್ಕದ ತೋಡಿಗೆ ಅಡಿಕೆ ಮರದ ಸಂಕ ಹಾಕುವ ಕೆಲಸದಿಂದ ಹಿಡಿದು  ಇಸ್ರೋದ ಉಪಗ್ರಹ  ಉಡಾವಣೆಯ  ವರೆಗೆ ಸಂವಾದವಿರುತ್ತದೆ . ಇನ್ನು ಆಡಿಕೆ  ಧಾರಣೆಯ ಏರಿಳಿತ, ಕಾರ್ಮಿಕರ ಅಲಭ್ಯತೆ, ಹೊಸದಾಗಿ ಖರೀದಿಸಿದ ಕೃಷಿ ಉಪಕರಣದ ಪಾಸಿಟಿವ್ ಮತ್ತು ನೆಗಟಿವ್ ಅಂಶಗಳು, ಯಾವುದೋ  ಅಪರಾಧದ ಸುದ್ದಿಯ  ಪೋಸ್ಟ್ ಮಾರ್ಟಂ ವರದಿ, ಹವಾಮಾನ ಮುನ್ಸೂಚನೆ..... ಹೀಗೆ ಮಾತು ಮತ್ತು ತರಕಾರಿ ಹೆಚ್ಚುವ ಕೆಲಸ ಸಾಂಘಿಕವಾಗಿ ನಡೆಯುತ್ತಿರುವಾಗ  ಯಾರಾದರೂ ಒಬ್ಬರು "ಒಂದು ಸ್ಟ್ರಾಂಗ್   ಚಾ ಬರ್ಲಿ ನೋಡೋಣಾ " ಎಂದು ಅವಾಜ್ ಹಾಕುತ್ತಾರೆ. ಈ ಬೇಡಿಕೆಯನ್ನು ಮೊದಲೇ ತಿಳಿದಿರುತ್ತಿದ್ದ ಮನೆಯೊಡತಿ,  ದೊಡ್ಡ ತಪ್ಪಲೆ ಚಹಾವನ್ನು ಮತ್ತು ಕೆಲವು ಸ್ಟೀಲ್ ಲೋಟಗಳನ್ನು ತಂದಿಟ್ಟು ತಾನೂ ಮಾತಿಗೆ ಜತೆಯಾಗುತ್ತಾಳೆ. ಕೆಲವರು 3-4 ಲೋಟ ಚಾ ಕುಡಿದರೆ, ಇನ್ನು ಕೆಲವರು ಒಂದು  ಲೋಟ ಸಾಕು ಎನ್ನುತ್ತಾರೆ.  ಇನ್ನು ಕೆಲವು ನಾಜೂಕಿನವರು, ರಾತ್ರಿ ಚಾ ಕುಡುದರೆ ನಿದ್ರೆ ಬರುವುದಿಲ್ಲ ಎನ್ನುವರು. ಒಂದಿಬ್ಬರು ಬಾಯಲ್ಲಿ 'ಎಲೆ-ಅಡಿಕೆ' ಜಗಿಯುತ್ತಿರುವುದರಿಂದ ಬೇಡ ಎನ್ನುವರು. 



ಚಂದ್ರಣ್ಣ ರಾಜಕೀಯ ಮಾತನಾಡಲು ಆರಂಭಿಸಿದರೆ, ಕೇಶವಣ್ಣ ಅಡಕೆ ಧಾರಣೆ ಬಗ್ಗೆ ಚರ್ಚೆ ಮಂಡಿಸುತ್ತಾರೆ. ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಐಟಿ ಉದ್ಯೋಗಿ ವರ್ಕ್ ಲೋಡ್, ಸ್ಟ್ರೆಸ್, ಟ್ರಾಫಿಕ್ ಜಾಮ್ , ಫಾರಿನ್ ಟ್ರಾವೆಲ್  ಅಂತ  ತನ್ನ ಕೆಲಸದ ಕಷ್ಟ-ಸುಖ ಹೇಳಿಕೊಂಡರೆ, ಆಚೆಮನೆಯ ಉಪಾಧ್ಯಾಯರು "ಇನ್ನು ಮುಂದೆ ಮೇಷ್ಟ್ರು ಕೆಲಸ ಮಾಡಲೆ ಎಡಿಯಪ್ಪ..ಶಾಲೆ ಕೆಲಸಂದ ಹೆಚ್ಚು ಬೇರೆ ಕೆಲಸವೇ ಜಾಸ್ತಿ ಆತು. ಜಾನುವಾರು ಗಣತಿಯನ್ನೂ ಎಂಗ ಮಾಡೆಕ್ಕು   ..ಎಂಗೊ ಮಕ್ಕೊಗೆ ಪಾಠ ಮಾಡೆಕ್ಕೋ, ಅವರ ಮನೆಲಿ ದನ, ನಾಯಿ ಎಷ್ಟಿದ್ದು ಹೇಳಿ ಲೆಕ್ಕ ಹಾಕೆಕ್ಕಾ.." ಎಂದು  ಉದಾಹರಣೆ ಸಮೇತ ವಿಮರ್ಶಿಸುವರು.  

ಆಗಾಗ ಅಡುಗೆ ಭಟ್ಟರು " .. ಕ್ಯಾಬೇಜ್ ಇಷ್ಟು ಸಾಕು....ಬೀನ್ಸ್  ಇನ್ನೂ ಇರಲಿ...." ಎಂಬ ಸಲಹೆ ಕೊಡುವರು.  

ಜಲಜಕ್ಕ ಮೊನ್ನೆ ತಾನೇ  ಕೊಂಡ ಹೊಸ ಸೀರೆಯನ್ನುಟ್ಟರೆ ದಪ್ಪ ಕಾಣಿಸುತ್ತೇನೆಂದರೆ, ಉಪ್ಪಿನಕಾಯಿಗೆ ಈ ಬಾರಿ ಮಾವಿನಮಿಡಿ  ಇನ್ನೂ ಕೊಯಿದಾಗಿಲ್ಲ ಎಂದು ಸರೋಜತ್ತೆ ಹೇಳುತ್ತಾರೆ. ಒಬ್ಬರ ಮನೆಯ ಹಲಸಿನಮರದಲ್ಲಿ ಈಗಲೇ ಹಲಸಿನ ಕಾಯಿ ಹಣ್ಣಾಗಿ ಅದನ್ನು ಪಾಯಸ ಮಾಡಿ ತಿಂದಾಗಿದ್ದರೆ, ಇನ್ನೊಬ್ಬರ ಮನೆಯ ಹಲಸಿನ ಮರದಲ್ಲಿ ಇನ್ನೂ ಎಳೆಗುಜ್ಜೆ ಬಿಟ್ಟಿರುತ್ತದೆ. ಸಾವಿತ್ರಿಯ ದೊಡ್ಡ ಮಗಳಿಗೆ ಗಂಡು ಮಗುವಾಗಿ ಆಕೆ ಅಮೇರಿಕಾಕ್ಕೆ ಬಾಣಂತನಕ್ಕೆ ಹೋಗಿದ್ದ ಕಾರಣ ಈವತ್ತು ಬಂದಿಲ್ಲ. ಗೀತಕ್ಕನಿಗೆ ತೋಟದಲ್ಲಿ  ಮೆಟ್ಟಲಿಳಿಯುವಾಗ ಕಾಲು ಉಳುಕಿತ್ತಂತೆ. ಹೀಗೆ  ಇಲ್ಲಿ ಸರ್ವರಿಗೂ ವಾಕ್ ಸ್ವಾತಂತ್ರ್ಯ! ಎಲ್ಲಿವರೆಗೆ ಕೊನೆಯ ತರಕಾರಿ ಹೆಚ್ಚಲಿದೆಯೋ ಅಲ್ಲಿವರೆಗೆ ಮಾತು ಮುಂದುವರಿಯುತ್ತದೆ. ಮಾತಿನ ಲಹರಿ  ಅಷ್ಟದಿಕ್ಕುಗಳಲ್ಲಿಯೂ ಹರಿಯುತ್ತದೆ, ಖಂಡಾಂತರಗಳನ್ನು ಕ್ಷಣಾರ್ಧದಲ್ಲಿ ಕ್ರಮಿಸಿ ಬರುತ್ತದೆ. ಆದರೆ, ಕೈಗಳು ಚಾಕು ಹಿಡಿದು ನಿಗದಿತವಾದ ತರಕಾರಿಗಳನ್ನು ಅಚ್ಚುಕಟ್ಟಾಗಿ ಹೆಚ್ಚುತ್ತಿರುತ್ತವೆ.

 ಈ ಸಂದರ್ಭದಲ್ಲಿ, ಮನೆ ಮಟ್ಟಿಗೆ ಗಾಯಕ/ಗಾಯಕಿ ಹೆಸರಾಂತರು ಯಾರಾದರೂ ಅಲ್ಲಿದ್ದರೆ ಅವರನ್ನು ಒಂದೆರಡು ಹಾಡು ಹೇಳಲು ವಿನಂತಿಸಲಾಗುತ್ತದೆ. ಅವರು ಚಿಕ್ಕ ಮಕ್ಕಳಾದರೆ ಅವಕಾಶಕ್ಕೆ ಕಾಯುತ್ತಿದ್ದವರಂತೆ ಪುಂಖಾನುಪುಂಖವಾಗಿ ಹಾಡುತ್ತಾರೆ. ಇನ್ನು ಹದಿವಯಸ್ಸಿನವರಾದರೆ, 'ಇನ್ನೂ ಸ್ವಲ್ಪ ಒತ್ತಾಯಿಸಲಿ' ಎಂಬಂತೆ ನಾಚಿಕೆ ವ್ಯಕ್ತಪಡಿಸುವಾಗ, ಅವರ ಅಮ್ಮನೋ, ಅತ್ತೆಯೋ ಅವಳಿಗೆ ಇತ್ತೀಚೆಗೆ  ಹಾಡುಗಾರಿಕೆಗೆ ಸಿಕ್ಕಿದ ಬಹುಮಾನದ ಬಗ್ಗೆ ಪ್ರಸ್ತಾಪಿಸಿ,  ಅತ್ಮವಿಶ್ವಾಸ ಹೆಚ್ಚಿಸುತ್ತಾರೆ. ಕೊನೆಗೂ ಆಕೆ ಒಂದೆರಡು ಕೀರ್ತನೆಗಳನ್ನು ಹಾಡಿ ಸಭೆಗೆ ಸಂಗೀತದ ರಂಗು ತುಂಬುತ್ತಾಳೆ.  ಇಷ್ಟಾದ ಮೇಲೆ  ಸ್ಥಳೀಯ ಪ್ರಸಿದ್ಧ ಕಲೆಯಾದ ಯಕ್ಷಗಾನದ ಭಾಗವತಿಕೆಯ ಶೈಲಿಯಲ್ಲಿ ಒಂದೆರಡು ಸಾಲುಗಳನ್ನು  ಕೇಳಬೇಡವೇ?  ಸರಿ, ತರಕಾರಿ ಹೆಚ್ಚುತ್ತಿದ್ದ ಶಂಭಣ್ಣ  " ಬಂದಳು ಬಂದಳು...ಭಾನುಮತಿ....." ಎಂದು ಎಂದು ಯಕ್ಷಗಾನ ಶೈಲಿಯಲ್ಲಿ ಹಾಡಿ ಸಭೆಗೆ ಇನ್ನಷ್ಟು ಮೆರುಗು ಕೊಡುತ್ತಾರೆ. 

ಹೀಗೆ ಉತ್ತಮ ಮಾತುಗಾರಿಕೆ, ಹಾಸ್ಯ ಮೇಳೈಸಿದ, ಬಾಂಧವ್ಯ ಬೆಸೆವ  'ಮೇಲಾರಕ್ಕೆ ಕೊರವ' ಕಾರ್ಯಕ್ರಮ ಮುಗಿಯುವಾಗ ರಾತ್ರಿ 11-12  ಗಂಟೆ ಆಗುತ್ತದೆ. ಹೆಚ್ಚಿದ ತರಕಾರಿಗಳನ್ನು ಮುಚ್ಚಿಟ್ಟು, ಅಕ್ಕಪಕ್ಕದ ಮನೆಯವರು "ನಾಳೆ ಕಾಂಬ" ಎಂದು  ತಮ್ಮ ಮನೆಗೆ ಹೊರಟರೆ, ನೆಂಟರು, ಮನೆಯವರು ಸಣ್ಣ ನಿದ್ದೆ ತೆಗೆಯುತ್ತಾರೆ. ಮರುದಿನ ಬೇಗನೇ ಎದ್ದು ಸಮಾರಂಭದ ಸಿದ್ಧತೆಗೆ ಅಣಿಯಾಗುತ್ತಾರೆ. 

ಈಗ ಹೆಚ್ಚಿನ ಸಮಾರಂಭಗಳು ಹಾಲ್ ಗಳಲ್ಲಿ ಜರಗುತ್ತವೆ. ಹಿಂದಿನ ದಿನವೇ ಬಂದು ಮನೆಮಂದಿಯೊಡನೆ ಮಾತನಾಡುತ್ತಾ, ಕೆಲಸ-ಜವಾಬ್ದಾರಿಗಳಿಗೂ  ಹೆಗಲು ಕೊಡಲು ಯಾರಿಗೂ ಸಮಯ, ವ್ಯವಧಾನವಿಲ್ಲ. ಕೆಲಸ-ಜವಾಬ್ದಾರಿಗಳನ್ನು ಏಜಂಟ್ ಗಳಿಗೆ ವಹಿಸಿ, ಅವರ ಸೇವೆಗೆ ದುಡ್ಡು ಕೊಟ್ಟರಾಯಿತು. ಹೆಚ್ಚಿನವರ ಬಳಿಯೂ ಸ್ವಂತ ಕಾರು/ಬೈಕು ಗಳಿರುತ್ತವೆ. ಜುಮ್ಮೆಂದು ಬಂದು ಒಮ್ಮೆ ಮುಖ ತೋರಿಸಿ, ಬಫೆಯಲ್ಲಿ ಉಂಡು , ಕೈತೊಳೆದ ತತ್ಕ್ಷಣವೇ ಹೊರಡುವುದು  ಸಾಮಾನ್ಯ ಆಗಿಬಿಟ್ಟಿದೆ. 

ನನಗಂತೂ ಮರುದಿನದ ಅದ್ದೂರಿ   ಸಮಾರಂಭಕ್ಕಿಂತ, ಹಿಂದಿನ ದಿನದ ಈ ಕಾರ್ಯಕ್ರಮವೇ ಹೆಚ್ಚು ಆಪ್ತವೆನಿಸುತ್ತದೆ .  'ಮೇಲಾರಕ್ಕೆ ಕೊರವದು' ಕಾರ್ಯಕ್ರಮ ಈಗಲೂ ಪ್ರಚಲಿತವಿದೆ ಎಂಬುದು ಖುಷಿಯ ಸಂಗತಿ. 

ದೆವ್ವಗಳ ಅಸ್ತಿತ್ವ…ಈ ಕಾರ್ಯಕ್ರಮ ಬೇಕೆ?

ಚಾನೆಲ್ ಒಂದರಲ್ಲಿ ‘ದೆವ್ವಗಳ ಅಸ್ತಿತ್ವ’ವನ್ನು ಸಾಬೀತುಪಡಿಸುವಂತೆ ನಿರ್ಮಿಸಲಾದ ಕಾರ್ಯಕ್ರಮವೊಂದು ಬಿತ್ತರಗೊಳ್ಳುತಿತ್ತು. ದೆವ್ವಗಳ ಉಪಟಳಕ್ಕೆ ಸಾಕ್ಷಿಯಾಗಿ, ಆಟವಾಡುತ್ತಿದ್ದ ಪುಟ್ಟ ಮಕ್ಕಳ ಹಿಂದೆ ಧೂಳಿನ ಆಕೃತಿ ಬರುವುದು, ನಾಲ್ಕು ಮಕ್ಕಳು ಪರಸ್ಪರ ಕೈಹಿಡಿದುಕೊಂಡು ಆಡುತ್ತಿರುವಾಗ ಒಬ್ಬಳು ಮಾತ್ರ ಭಿನ್ನವಾಗಿ ವರ್ತಿಸುವುದು, ಬೈಕ್ ಸವಾರನ ಹಿಂದೆ ಆತನ ಅರಿವಿಗೇ ಬಾರದಂತೆ ಬಿಳಿ ಆಕೃತಿಯೊಂದು ಕೂತಿರುವುದು, ಬಾಲಕಿಯೊಬ್ಬಳು ನಿದ್ದೆಯಲ್ಲಿ ಎದ್ದು ನಿಂತು ನಡುಗುತ್ತಾ ಇರುವುದು, ಬಿಳಿ ಬಟ್ಟೆ ಧರಿಸಿದ ಮನುಷ್ಯಾಕಾರವೊಂದು ನಡುರಾತ್ರಿಯಲ್ಲಿ ಜೀಪು ಡ್ರೈವ್ ಮಾಡುವವನನ್ನು ಹಿಂಬಾಲಿಸುವುದು, ಆಫೀಸಿನಲ್ಲಿ ಮಧ್ಯರಾತ್ರಿ ಖಾಲಿಕುರ್ಚಿಗಳು ಅತ್ತಿತ್ತ ಓಡಾಡುವುದು, ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ಯಾರೋ ಅಡ್ಡಬಂದ ಹಾಗೆ ಅನಿಸಿ, ಕಾರು ನಿಲ್ಲಿಸಿದಾಗ ಆತ/ಆಕೆ ಅದೃಶ್ಯವಾಗುವುದು …..ಇತ್ಯಾದಿ.
ಕಾರ್ಯಕ್ರಮದ ಪ್ರಕಾರ ಇವೆಲ್ಲಾ ನಿಜ ಘಟನೆಗಳು, ಸಿ.ಸಿ.ಟಿ.ವಿ ಯಲ್ಲಿ ಸೆರೆಯಾದುವುಗಳು. ಇವುಗಳನ್ನೆಲ್ಲಾ ನಾನು ನಂಬಲಾರೆ. ಯಾಕೆಂದರೆ, ಈಗಿನ ತಾಂತ್ರಿಕತೆಯನ್ನು ಬಳಸಿ ನಮಗೆ ಬೇಕಾದ ಆಕಾರದ ದೆವ್ವಗಳನ್ನು ಸೃಷ್ಟಿಸುವುದು ಸುಲಭ.
ghostದೆವ್ವಗಳಿಗೆ ಕ್ಷಣಮಾತ್ರದಲ್ಲಿ ಬೇಕಾದ ಕಡೆ ಪ್ರತ್ಯಕ್ಷವಾಗುವ ‘ತಾಕತ್ತು ಇರುವುದಾದರೆ’ ಅವುಗಳಿಗೆ ತಮಗೆ ಬೇಕಾದ ಕಡೆ ರೊಯ್ಯನೆ ಬಂದಿಳಿದು Gracious Presence ಕೊಡಬಹುದಲ್ಲವೇ? ಅದರ ಬದಲು ಸಾಮಾನ್ಯ ಮನುಷ್ಯ ಚಾಲನೆ ಮಾಡುವ ಕಾರು, ಬೈಕ್, ಜೀಪು ಹತ್ತಿ…..ಸದ್ದಿಲ್ಲದೆ ಹಿಂದೆ ಕುಳಿತು…..ರಸ್ತೆ ನಿಯಮ ಪಾಲಿಸಿ… ಸಿಗ್ನಲ್ ನಲ್ಲಿ ಕಾದು….ಪುಕ್ಕಟೆ ಪ್ರಯಾಣಿಸುವ ಅನಿವಾರ್ಯತೆ ಅವಕ್ಕಿದೆಯೆ?
ಸಾಮಾನ್ಯವಾಗಿ ಏರು-ತಗ್ಗು ಇರುವ ಅಥವಾ ದುರ್ಗಮ ಬೆಟ್ಟಪ್ರದೇಶಗಳ ಸುತ್ತು-ಬಳಸಿನ ದಾರಿಯ ಪ್ರಯಾಣಕ್ಕೆ ಜೀಪನ್ನು ಬಳಸುತ್ತಾರೆ. ಇಂಥಹ ಕಡೆ ರಸ್ತೆಯೇ ಪ್ರಯಾಣಕ್ಕೆ ಯೋಗ್ಯವಾಗಿರುವುದಿಲ್ಲ. ಹಾಗಿರುವಾಗ, ಸಿ.ಸಿ.ಟಿ.ವಿ ಅಳವಡಿಕೆ ಇದ್ದು, ಅದು ದೆವ್ವದ ಫೋಟೊ ಕ್ಲಿಕ್ಕಿಸಿದೆ ಎಂದರೆ ನಂಬಲರ್ಹವೇ? ಅಷ್ಟಕ್ಕೂ ಶಕ್ತಿಯುತವಾದ ದೆವ್ವ, ಬಡಪಾಯಿಯಂತೆ ಯಾಕೆ ಹಿಂಬಾಲಿಸಬೇಕು? ಜೀಪಿನೊಳಗೆ ನುಗ್ಗಿ, ಡ್ರೈವರ್ ನನ್ನು ತಳ್ಳಿ, ತಾನೇ ಓಡಿಸಬಹುದಲ್ಲ?
ಮಕ್ಕಳು ತಮಗೆ ಸರಿ ಎನಿಸಿದ ರೀತಿ ಆಟವಾಡುವುದು, ಕನಸಿನಲ್ಲಿ ಬೆದರುವುದು, ನಿದ್ದೆಯಲ್ಲಿ ಎದ್ದು ಕೂರುವುದು, ಕೆಲವೊಮ್ಮೆ ನಿದ್ದೆಯಲ್ಲಿ ಮಾತನಾಡುವುದು, ಹಿರಿಯರ ಗಮನ ಸೆಳೆಯಲೆಂದೇ ವಿಚಿತ್ರವಾಗಿ ವರ್ತಿಸುವುದು…ಇವೆಲ್ಲಾ ಮಾಮೂಲಿ ಸಂಗತಿಗಳೆ.ಇದಕ್ಕೂ ದೆವ್ವವನ್ನು ‘ಟ್ಯಾಗ್’ ಮಾಡಬೇಕೆ?
ದೆವ್ವದ ಅಸ್ತಿತ್ವದ ಬಗ್ಗೆ ನಂಬಿಕೆ ಅವರವರ ಅನುಭವ, ಅಭಿಪ್ರಾಯಕ್ಕೆ ಬಿಟ್ಟಿದ್ದು. ಆದರೆ ಎಲ್ಲಾ ಜನರ ಮನೋಭಾವ ಮತ್ತು ಜೀವನದ ಬೇಡಿಕೆಗಳು ಒಂದೇ ರೀತಿ ಇರುವುದಿಲ್ಲ. ಉದಾಹರಣೆಗೆ, ದೆವ್ವದ ಬಗ್ಗೆ ಭೀತಿಯಿರುವ ಒಬ್ಬಾತನಿಗೆ ಇಂತಹ ಕಾರ್ಯಕ್ರಮವನ್ನು ನೋಡಿದರೆ, ಕಾರ್ಖಾನೆಗೆ ರಾತ್ರಿ ಪಾಳಿಯ ಕೆಲಸಕ್ಕೆ ಹೋಗುವಾಗ ತನ್ನ ಬೈಕ್ ನ ಹಿಂದಿನ ಸೀಟ್ ನಲ್ಲಿ ‘ದೆವ್ವ ಕೂತಿದ್ದರೆ’ ಎಂದು ಭಯವಾಗಬಹುದು. ಕತ್ತಲಲ್ಲಿ ಮನೆಯ ಹೊರಗೆ ಕಾಲಿಡಲು ಭಯ ಪಡುವ ಮಕ್ಕಳಿಗೆ ಇನ್ನಷ್ಟು ಭಯವಾಗಬಹುದು.
ಒಂದು ವೇಳೆ ಇವೆಲ್ಲಾ ನಿಜವಾಗಿ ನಡೆದ ಘಟನೆಗಳು ಅಂತ ಒಪ್ಪಿಕೊಂಡರೂ, ಅದನ್ನು ತಿಳಿದುಕೊಂಡು ಯಾರಿಗೆ ಏನು ಪ್ರಯೋಜನವಿದೆ?
ನನ್ನ ಸ್ಕೂಟರ್ ನಲ್ಲೋ, ಕಾರಿನಲ್ಲೋ ಹಿಂದಿನ ಸೀಟ್ ನಲ್ಲಿ ಅಕಸ್ಮಾತ್ ದೆವ್ವ ಬಂದು ಕುಳಿತರೆ, “ ಅಯ್ಯಾ, ನನಗೆ ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತುವ ಆಸೆ- ಆದರೆ ಸಾಕಷ್ಟು ದುಡ್ಡಿಲ್ಲ, ರಜೆಯಿಲ್ಲ……ಎವರೆಸ್ಟ್ ಮೇಲೇರುವ ಆಸೆ-ಆದರೆ ಇದಕ್ಕೆ ತಕ್ಕ ಆರೋಗ್ಯವಿಲ್ಲ, ನಿನ್ನ ಅತಿಮಾನುಷ ಶಕ್ತಿಯನ್ನು ಬಳಸಿ, ಈ ಎರಡು ಆಸೆಗಳನ್ನು ನೆರವೇರಿಸಿ ಪುಣ್ಯ ಕಟ್ಟಿಕೋ…. “ ಎನ್ನುತ್ತೇನೆ!!!!.

Tuesday, March 24, 2015

ಮೊಳುದುದ್ದ ಹೂವು…..ಮಾರುದ್ದದ ವಿಶ್ವಾಸ..

ದಿನಾ ಕೆಲಸಕ್ಕೆ ಹೋಗುವಾಗ ರಸ್ತೆಯ  ಟ್ರಾಫಿಕ್  ಸಿಗ್ನಲ್ ಒಂದರಲ್ಲಿ ಕಾಯಬೇಕಾಗುತ್ತದೆ. ಅಲ್ಲೊಬ್ಬ  ಮಲ್ಲಿಗೆ ಹೂವು ಮಾರುವವನು  ನಿಂತ ವಾಹನಗಳ ಹತ್ತಿರ ಬಂದು ‘ಹೂವು ಬೇಕೆ’ ಎನ್ನುವನು. ಕೆಲವರು ಬೇಡ ಅನ್ನುವುದು, ಕೆಲವರು ಹೂ ಕೊಳ್ಳುವುದು ನಡೆಯುತ್ತಿರುತ್ತದೆ. ಅರಳುವ ಮೊಗ್ಗುಗಳನ್ನು ಪೋಣಿಸಿರುವ ಮಾಲೆಗಳನ್ನು ಮಾರುತ್ತಿರುವ ಇವರ ಭವಿಷ್ಯ ಅರಳುವುದು ಯಾವಾಗಲೋ ಎನಿಸುತ್ತದೆ. ಅಷ್ಟರಲ್ಲಿ ಹಸಿರು ಸಿಗ್ನಲ್ ಬಂದು ನಿಂತ ಗಾಡಿಗಳೆಲ್ಲಾ ಹೋಗಿ ಇನ್ನಷ್ಟು ಕೆಲವು ಬಂದು ಸೇರುತ್ತವೆ. 
ಕೆಲವು ದಿನಗಳ ಹಿಂದೆ, ಸಿಗ್ನಲ್ ಬಳಿ ನಿಂತಿದ್ದಾಗ ಮಲ್ಲಿಗೆಹೂ ಮಾರುವಾತ ‘ಹೂ ಬೇಕೆ’ ಎಂದು ಕೇಳುತ್ತಾ ಬಂದ. ‘ಬೇಡ’ ಎಂದಿದ್ದಾಯಿತು. ಯಾಕೆಂದರೆ, ನಾನು ಹೂ ಮುಡಿಯುವುದು ಸಮಾರಂಭಗಳಿಗೆ ಹೋಗುವುದಿದ್ದರೆ ಮಾತ್ರ. ಇನ್ನು ಮನೆಯ ದೇವರ ಫೊಟೋಗಳಿಗೆ , ಎಮ್ಮ ಮನೆಯಂಗಳದ ಹೂಗಳೇ ಸಾಕಷ್ಟಿವೆ. ಮೇಲಾಗಿ,  ದೇವರ ಮನೆಗೆ ನಮ್ಮೆಜಮಾನ್ರು ಉಸ್ತುವಾರಿ ಸಚಿವರು. ಹಾಗಾಗಿ ನಾನು ಮಲ್ಲಿಗೆ ಹೂ ಕೊಳ್ಳುವ ಸಂದರ್ಭ ಅಪರೂಪ. ಈತ ಕೇಳಿದ್ದಾಗ ಮಾತ್ರ ಕೆಲವೊಮ್ಮೆ  ಹೂವನ್ನು ಖರೀದಿಸುತ್ತಿದ್ದೆ.
ಕಳೆದ ತಿಂಗಳು ಅದೊಂದು ದಿನ,  ಅದೇ ಸಿಗ್ನಲ್ ನಲ್ಲಿ, ನಾನು ಕಾರು ನಿಲ್ಲಿಸಿದ್ದೆ.  ಇನ್ನೇನು ಹಸಿರು ಸಿಗ್ನಲ್ ಬರಬೇಕು, ಅಷ್ಟರಲ್ಲಿ  ಆತ ಅದೆಲ್ಲಿದ್ದನೋ  ಒಂದು ಮೊಳದಷ್ಟು ಹೂವನ್ನು ನನಗೆ ಕೊಟ್ಟ. ನಾನು ಗಡಿಬಿಡಿಯಲ್ಲಿ   10  ರೂ ಚಿಲ್ಲರೆ ಇಲ್ಲ ಎನ್ನುತ್ತಾ, 100  ರೂ ಕೊಡಲು ಹೊರಟೆ.  ಅದು  ಹೇಗೋ ಕೈತಪ್ಪಿ ರಸ್ತೆಗೆ ಬಿತ್ತು.  ಹಸಿರು ಸಿಗ್ನಲ್ ಬಂದೇ ಬಿಟ್ಟಿತು, ಹಿಂದಿನ ವಾಹನಗಳ ಹಾರ್ನ್ ಶುರುವಾಗಿ   ಆ ಚಾಲಕರ ಕೋಪಕ್ಕೆ ತುತ್ತಾಗುವ  ನಾನು ಹೊರಡಲೇ ಬೇಕಲ್ಲಾ ಎಂದು ಕಾರು ಚಲಾಯಿಸುತ್ತಿದ್ದಂತೆ, ಹೂ ಮಾರುವಾತ ಓಡೋಡಿ ಬಂದು ರಸ್ತೆಗೆ ಬಿದ್ದಿದ್ದ ನೂರರ ನೋಟನ್ನು ಕಾರಿನ ಒಳಕ್ಕೆ ಹಾಕಿ ‘ದುಡ್ಡು ನಾಳೆ ಕೊಡಿ’ಎಂಬಂತೆ ಕೈಸನ್ನೆ ಮಾಡಿದ. ಅಂತೂ ಆವತ್ತು ನಾನು ದುಡ್ಡು ಕೊಡದೇ ಹೂ ಪಡೆದಂತಾಯಿತು.
ಸಿಗ್ನಲ್ ನಲ್ಲಿ ವಾಹನಗಳ ದೊಂಬಿಯಲ್ಲಿ, ಕೈತಪ್ಪಿ ಹೋದ ಆ ನೂರರ ನೋಟು ಯಾವುದಾದರೂ  ವಾಹನದ ಚಕ್ರಕ್ಕೆ ಸಿಕ್ಕಿ ಕೊಳೆಯಾಗುವ ಅಥವಾ ಹರಿಯುವ  ಸಾಧ್ಯತೆ ಇತ್ತು.  ಯಾರಾದರೂ ಹೆಕ್ಕಿದ್ದರೂ ನಾನು ಗಮನಿಸಲು ಸಾಧ್ಯವಿಲ್ಲವಾಗಿತ್ತು. ಆತ ತಾನೇ ಇಟ್ಟುಕೊಂಡಿದ್ದರೂ ನನಗೇನೂ ಗೊತ್ತಾಗುತ್ತಿರಲಿಲ್ಲ.  ಒಟ್ಟಿನಲ್ಲಿ ಆತನ ಪ್ರಾಮಾಣಿಕತೆ ಮೆಚ್ಚಿಗೆಯಾಯಿತು.
ನಾಳೆ ಆತನಿಗೆ ಮರೆಯದೆ  ಹಣ  ಕೊಡಬೇಕು ಎಂದು ಬೆಳಗ್ಗೆ ಹೊರಡುವಾಗ ದುಡ್ಡನ್ನು ಪಕ್ಕದ ಸೀಟ್ ನಲ್ಲಿ ಕಾಣಿಸುವಂತೆ ಎತ್ತಿಟ್ಟಿದ್ದೆ. ಸಿಗ್ನಲ್ ನಲ್ಲಿ ಕಾರಿನ  ಪಕ್ಕ ಬಂದ ಅವನಿಗೆ 5  ರೂ. ಜಾಸ್ತಿ ಸೇರಿಸಿ ಕೊಟ್ಟೆ. ನೋಡಿದ ತಕ್ಷಣ ಆತ “5 ರೂ. ಜಾಸ್ತಿ ಇದೆ… ನಂಗೆ ಫ್ರೀ ಏನೂ ಬೇಡಾ…..ವ್ಯಾಪಾರ ಮಾಡಿ….  ವಿಶ್ವಾಸವಿದ್ದರೆ ಥ್ಯಾಂಕ್ಸ್  ಅಂತೀನೀ… ”  ಅಂದ. ಸರಿ, ಆತನ ಸ್ವಾಭಿಮಾನಕ್ಕೆ ನಾನೇಕೆ ಭಂಗ ತರಲಿ ಎಂದು ‘ಹಾಗಿದ್ದರೆ ಈ ಗಣಪತಿ ಮೂರ್ತಿಗೆ ಮುಡಿಸುವಷ್ಟು ಸಣ್ಣ  ಮಾಲೆ ಕೊಡಿ’ ಎಂದೆ. ಆತ ಹೂಮಾಲೆಯನ್ನು ಕತ್ತರಿಸಿ ಕೊಟ್ಟ.  ಅದು ನಿನ್ನೆ 10. ರೂ ಗೆ ಕೊಟ್ಟಷ್ಟೇ ಉದ್ದವಿತ್ತು.

Jasmine
ಇದೇನ್ರಿ, ನಿನ್ನೆ ಕೊಟ್ಟಷ್ಟೇ ಇದೆಯಲ್ಲ….5 ರೂ.ಗೆ  ಸಣ್ಣ ತುಂಡು ಸಾಕಿತ್ತು ‘ ಅಂದೆ.  ‘ಈವತ್ತು ಮಲ್ಲಿಗೆಗೆ ಕಡಿಮೆ ರೇಟ್  ಇದೆ’ ಅಂದ. ಹಾಗಿದ್ದರೆ, ಇನ್ನೊಂದು 10  ರೂ. ಗೆ ಕೊಡಿ ಅಂದೆ. ಇನ್ನೊಂದು ಮೊಳ ಹೂ ಕೊಂಡಿದ್ದಾಯಿತು.   ನಗುಮುಖದಿಂದ “ಥ್ಯಾಂಕ್ಸ್ ಮೇಡಂ”  ಅಂದ. ಮನೆ ತಲಪಿದ ಮೇಲೆ ಕುತೂಹಲಕ್ಕೆಂದು ಹೋಲಿಸಿ ನೋಡಿದಾಗ  ಎರಡೂ ಮಲ್ಲಿಗೆ ಮಾಲೆಗಳು  ಒಂದೇ ಅಳತೆಯವಾಗಿದ್ದುವು !!  ಮೊಳುದುದ್ದ ಹೂವು ಅದಾದರೂ ಮಾರುದ್ದದ ವಿಶ್ವಾಸ ಅದರಲ್ಲಿತ್ತು.
ಈ ಘಟನೆಯ ನಂತರ ನಾನು ಒಂದು ಅಭ್ಯಾಸ ರೂಢಿಸಿಕೊಂಡಿದ್ದೇನೆ. ಅದೇನೆಂದರೆ, ಸಿಗ್ನಲ್ ನಲ್ಲಿ ವ್ಯಾಪಾರಕ್ಕೆ ಕೆಲವೇ ಸೆಕೆಂಡ್ಸ್ ಸಮಯ ಸಿಗುವುದರಿಂದ, ಮೊದಲಾಗಿಯೇ 10 ರೂ. ಅನ್ನು ಪಕ್ಕದ ಸೀಟ್ ನಲ್ಲಿ ಸುಲಭವಾಗಿ ಸಿಗುವಂತೆ  ಎತ್ತಿಟ್ಟು, ಹೊರಡುವುದು.  ಆತ ಕಾರಿನ ಬಳಿ ಬಂದರೆ , ನನಗೆ ಹೂ ಬೇಕಾಗಿದ್ದರೂ-ಬೇಡದಿದ್ದರೂ, ತಪ್ಪದೆ ಹೂ ಕೊಳ್ಳುವುದು.

 ವೃತ್ತಿ ಯಾವುದೇ  ಇರಲಿ, ಅದರ ಬಗ್ಗೆ ಗೌರವ ಮತ್ತು ಪ್ರಾಮಾಣಿಕತೆ , ಪರಸ್ಪರ ವಿಶ್ವಾಸವನ್ನು ಗಳಿಸಿಕೊಡುತ್ತದೆ.   


ಚಂದಿರನೇತಕೆ ಓಡುವನಮ್ಮ…ಪುಷ್ಪಾ ನಾಗತಿಹಳ್ಳಿ

ಈ ವಾರಾಂತ್ಯದಂದು, ಶ್ರೀಮತಿ ಪುಷ್ಪಾ ನಾಗತಿಹಳ್ಳಿಯವರು ಬರೆದ ಚಂದಿರನೇತಕೆ ಓಡುವನಮ್ಮ ಎಂಬ ಬಾಲ್ಯಕಾಲದ ಕಥನವನ್ನು ಓದಲೆಂದು ಕೈಗೆತ್ತಿಕೊಂಡಿದ್ದೆ. ಈಗ ಒಂದು ಬಾರಿ ಓದಿ ಮುಗಿಸಿದೆ. ಈ ಪುಸ್ತಕವು  ಓದಿಸಿಕೊಂಡು ಹೋಯಿತು  ಎನ್ನುವ ಬದಲು ನಾನೂ ಪುಸ್ತಕದೊಂದಿಗೆ ‘ಓಡಿಕೊಂಡು ಹೋದೆ’ ಎಂದರೆ ಹೆಚ್ಚು ಸೂಕ್ತ ಎನಿಸುತ್ತದೆ.
ನಾಗತಿಹಳ್ಳಿಯ ಹಳೆಮನೆ, ಹೊಸಮನೆ, ತೊಟ್ಟಿಮನೆ, ದಬಾನು ಗುಡಿ, ಮಾರಮ್ಮನ ಗುಡಿ, ತುಳಸಮ್ಮ ಗುಡಿ ಸುತ್ತಿ, ತೋಟ-ಹೊಲ-ಶಾಲೆಗೆ ಹೋಗಿ, ಹಳ್ಳಿ-ಕೇರಿ ಸುತ್ತಿ, ಟೆಂಟ್ ಸಿನೆಮಾ ನೋಡಿ, ತಮ್ಮಂದಿರ ಬಗ್ಗೆ ಆಕ್ಕರೆ ತೋರಿಸಿ, ಚಾಡಿ ಹೇಳಿ, ಬಾಲ್ಯದ ತುಂಟಾಟಗಳಲ್ಲಿ ಭಾಗಿಯಾಗಿ, ಕೂಡು ಕುಟುಂಬದ ಸಿಹಿ-ಕಹಿಗಳನ್ನುಂಡು…ಬಡತನದಲ್ಲೂ ಸಂತೋಷದಿಂದಿದ್ದ ಪುಷ್ಪಾ ಅವರ ಬಾಲ್ಯ ಕಾಲದ ನಿರೂಪಣೆ ಬಹಳ ಸೊಗಸಾಗಿದೆ.
ಅವರನ್ನೂ ಸೇರಿಸಿ  ಒಟ್ಟು ಆರು ಜನ ಸಹೋದರ-ಸಹೋದರಿಯರಿದ್ದರೂ ಅವರಲ್ಲಿ ಹೆಚ್ಚು ನಿಕಟವರ್ತಿಯಾಗಿದ್ದ ತಮ್ಮ ‘ಚಂದ್ರು’ (ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರು) . ಪುಸ್ತಕದುದ್ದಕ್ಕೂ ಈ ತಮ್ಮನ ಬಾಲ್ಯಲೀಲೆಗಳು ರಾರಾಜಿಸಿವೆ.  ಮುಂದಿನ ವೈವಾಹಿಕ ಜೀವನ, ಆಮೇಲೆ ಎದುರಾದ ಸಿಹಿ-ಕಹಿ ಘಟನೆಗಳು, ಪ್ರತಿ ಹಂತದಲ್ಲೂ ತನಗೆ ಬೆಂಬಲ ನೀಡಿದ/ನೀಡುತ್ತಿರುವ ತಮ್ಮನೊಂದಿಗೆ ಒಡನಾಟ.. ಹೀಗೆ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ.  ತನ್ನ  ಜೀವನ ಪಯಣದಲ್ಲಿ ಒದಗಿಬಂದ ಆಸ್ಟ್ರೇಲಿಯಾ ಮತ್ತು ಲಂಡನ್ ಪ್ರಯಾಣಗಳು ಮತ್ತು ಅಲ್ಲಿನ ವಿಶೇಷತೆಗಳ ಬಗ್ಗೆಯೂ ಲೇಖಕಿ ಸೊಗಸಾದ ವಿವರಣೆ ಕೊಟ್ಟಿದ್ದಾರೆ.
Chandiranetake Oduvanamma- Pushpa Nagatihalli
ಅತ್ಯಂತ ಸರಳವಾಗಿ ಮತ್ತು ಬಹಳ ಆಪ್ತವಾಗಿರುವ ಶೈಲಿಯಲ್ಲಿ ಬರೆದ ಈ ಬಾಲ್ಯಕಥನವನ್ನು  ಓದುವಾಗ ಇಲ್ಲಿ ಬರುವ ಕೆಲವು ಪಾತ್ರಗಳು ‘ನಮಗೂ ಚಿರಪರಿಚಿತ…ಆದರೆ ನಮ್ಮೂರಲ್ಲಿ ಅವರ ಹೆಸರು ಮಾತ್ರಬೇರೆಯಾಗಿತ್ತು‘ ಎನಿಸುತ್ತವೆ!  ಪುಷ್ಪಾ ಅವರು ಬರೆದಂತೆ ‘ಕಾಲದೊಳಗೆ ಬದುಕೂ, ಬದುಕಿನೊಳಗೆ ಕಾಲವೂ ನುಸುಳುತ್ತಾ‘ ಸಾಗುವುದು ಎಷ್ಟು ನಿಜ! (ಪುಟ 86)
ಕನಸುಗಳಿಗೆ ಅದೆಷ್ಟು ಶಕ್ತಿ ಇದೆ! ಬಾಲ್ಯದಲ್ಲಿ ಕಂಡ ಕನಸುಗಳನ್ನೆಲ್ಲಾ ನನಸು ಮಾಡಿದ ಖ್ಯಾತಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರದು. ಜತೆಗೆ  ತಮ್ಮೂರಿನ ಬೇರನ್ನು ಮರೆಯದೆ ಅದನ್ನು ವಿವಿಧ ರೂಪದಲ್ಲಿ ಪೋಷಿಸುತ್ತಿದ್ದಾರೆ. ಸಹಜವಾಗಿಯೇ ಅಕ್ಕರೆಯ ಅಕ್ಕನಿಗೆ  “ಕುಟ್ನುದಯ್ಯನ ಹಿಂದೆ ಸುತ್ತುತ್ತಾ  ‘ನನಗೊಂದು ಪುಸ್ತಕ ಕೊಡಯ್ಯಾ’ ಎಂದು ಹಲುಬುತ್ತಿದ್ದ್ದ ಹುಡುಗ ಇಂದು ಅವನೇ ಕಟ್ಟಿಸಿದ ಲೈಬ್ರೆರಿಯ ಕೋಣೆಯಲ್ಲಿದ್ದ ಸಾವಿರಾರು ಪುಸ್ತಕಗಳ ಮಧ್ಯದಲ್ಲಿ  ಕುಳಿತು ಸಾಹಿತ್ಯ, ಕಥೆ , ನಾಟಕ, ಪ್ರವಾಸಗಳ ಬಗ್ಗೆ ಮಾತನಾಡುವಾಗ ಹೆಮ್ಮೆಯಾಗುತ್ತದೆ. (ಪುಟ 134)
ಪುಷ್ಪಾ ನಾಗತಿಹಳ್ಳಿ ಅವರು ತಮ್ಮ ಕುಟುಂಬದ  ಕೆಲವು ಚಿತ್ರಗಳನ್ನು  ಹಾಗೂ  ಮನೆಯ ಇತರ  ಸದಸ್ಯರ ಬಗ್ಗೆಯೂ ಸ್ವಲ್ಪ ವಿವರಣೆ ಕೊಟ್ಟಿದ್ದರೆ ಓದುಗರಿಗೆ  ಇನ್ನೂ ಸ್ಪಷ್ಟಚಿತ್ರಣ ಸಿಗುತಿತ್ತು ಎಂದು ನನ್ನ ಭಾವನೆ.  ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಮೂಡಿಬರಲಿ ಎಂದು ನಮ್ಮ ಆಶಯ.