ನಾವು ಉಳಕೊಂಡಿದ್ದ ಹೋಟೆಲ್ ನಿಂದ ಅನತಿ ದೂರದಲ್ಲಿದ್ದ 'ಅಂಡರ್ ವಾಟರ್ ವರ್ಲ್ಡ್' ನೋಡಲು ಹೊರಟೆವು. "ಇಲ್ಲೆ ಪಕ್ಕದಲ್ಲಿ ಬಸ್ ನಿಲ್ದಾಣ ಇದೆ, ನೀವು ಟಿಕೆಟ್ ಪಡಕೊಳ್ಳಬೇಕಾಗಿಲ್ಲ, ಈ ಹೋಟೆಲ್ ನ 'ಪಿಂಕ್ ಕಾರ್ಡ್' ಇದ್ದರೆ ಸಾಕು,ಮೂರು ದಿನಗಳ ಕಾಲ ಸೆಂಟೋಸದಲ್ಲಿ ಎಲ್ಲಿಗೆ ಬೇಕಾದರು ಸುತ್ತಾಡಬಹುದು. ನೀವು ಹೋಗಬೇಕಾದ ಜಾಗಕ್ಕೆ, 'ರೆಡ್ ಲೈನ್ ಅಥವಾ ಬ್ಲೂ ಲೈನ್' ಬಳಸಬಹುದು" ಎಂದಳು, ಹೊಟೆಲ್ ನ ಸ್ವಾಗತಕಾರಿಣಿ.
ಹೋಟೆಲ್ ನಿಂದ ಹೊರಬಂದು ಬಸ್ ನಿಲ್ದಾಣಕ್ಕೆ ಬಂದೆವು. ಕೆಂಪು ಹಾಗು ನೀಲಿ ಲೈನ್ ಗಳೆಂದು ಗುರುತಿಸಲ್ಪಡುವ ಬಸ್ ಗಳ ನಿಲುಗಡೆಗಾಗಿ, ಪ್ರತ್ಯೇಕ ಜಾಗವಿತ್ತು. ಮಾರ್ಗದಲ್ಲಿ ಹಳದಿ ಬಣ್ಣದ ಬಸ್ ಗಳು,ಓಡಾಡುತಿದ್ದುವು. ಅವುಗಳ ಲ್ಲಿ ನಂಬರ್ ನ ಬದಲು 'ರೆಡ್' ಅಥವಾ 'ಬ್ಲೂ' ಎಂದಷ್ಟೇ ನಮೂದಿಸಲಾಗಿತ್ತು. ಬಸ್ ಬಂತು, ಹತ್ತಿ ಕುಳಿತೆವು. ವಾವ್! 'ಟಿಕೆಟ್, ಟಿಕೆಟ್ ಎಂದು ಕಿರುಚುವ ಕಂಡಕ್ಟರ್ ಇಲ್ಲ, ಚಿಲ್ಲರೆ ಇಲ್ಲವೆಂದು ಚಿಂತೆ ಬೇಕಾಗಿಲ್ಲ, ಬಸ್ ನಂಬರ್ ನೆನಪಿಡುವ ಅವಶ್ಯಕತೆಯಿಲ್ಲ, ಸದ್ದು- ಗದ್ದಲ, ಕಸ-ಕಡ್ಡಿ, ನೂಕು-ನುಗ್ಗಲು, ಪರಸ್ಪರ ಬೈಗಳು, ಮಳೆ-ಬಿಸಿಲಿಗೆ ಗಂಟೆಗಟ್ಟಲೆ ಕಾಯುವ ಪ್ರಮೇಯವಂತೂ ಇಲ್ಲವೇ ಇಲ್ಲ. ಎಲ್ಲವೂ ಅಚ್ಚುಕಟ್ಟು.
ಬಸ್ ನಿಲ್ದಾಣ
ಸೆಂಟೋಸದ ಇನ್ನೊಂದು ಪ್ರಮುಖ ಸಾರಿಗೆ ಅಲ್ಲಿನ 'ಮೊನೊ ರೈಲ್'. ಇವುಗಳು ನೆಲಮಟ್ಟಕ್ಕಿಂತ ಎತ್ತರದಲ್ಲಿರುವ ಸಿಂಗ್ ಲ್ ಲೈನ್ ಟ್ರಾಕ್ ನಲ್ಲಿ ಓಡಾಡುತ್ತಿರುತ್ತವೆ. ಇದನ್ನು ೧೯೬೨ರಲ್ಲಿ ಉದ್ಘಾಟಿಸಲಾಯಿತಂತೆ. ಒಟ್ಟು ೧೪ ಮೊನೊರೈಲ್ ಗಳು ಇದ್ದು , ಅವು ಸೆಂಟೋಸದ ಎಲ್ಲ ಮುಖ್ಯ ತಾಣಗಳಿಗೆ ಸಂಪರ್ಕ ಹೊಂದಿವೆ. ಇವುಗಳು ಇನ್ನೊಂದು ವಿಶೇಷತೆಯೆಂದರೆ, ಸೆಂಟೋಸದಲ್ಲಿ ತಂಗಿರುವ ಪ್ರವಾಸಿಗಳು ಎಷ್ಟು ಸಲ ಬೇಕಾದರೂ ಪ್ರಯಾಣಿಸಬಹುದು, ಟಿಕೆಟ್ ಕೊಳ್ಳುವ ರಗಳೆಯಿಲ್ಲದೆ. ಜತೆಗೆ, ೫ ನಿಮಿಷಕ್ಕೊಮ್ಮೆ ಮೊನೊರೈಲ್ ಗಳು ಬರುತ್ತಾ ಇರುತ್ತವೆ. ರೈಲ್ ನ ಬೋಗಿ ಪುಟ್ಟದಾಗಿದ್ದರೂ, ನೂಕು ನುಗ್ಗಲು ಇರುವುದಿಲ್ಲ. ಕಾಯಬೇಕಾಗಿಲ್ಲ.
ಹಳಿಯ ಮೇಲೆ ಮೊನೋ ರೈಲ್
ನಮ್ಮಲ್ಲಿ ಯಾವಾಗಲೂ ಜನರಿಂದ ಗಿಜಿಗುಟ್ಟುವ ಬಸ್-ರೈಲ್ ನಿಲ್ದಾಣಗಳು, ಕಿರಿಚುವ ಪ್ರಯಾಣಿಕರು, ಗದರುವ ನಿರ್ವಾಹಕರು, ತಿನಿಸು ಮಾರುವವರು, ಭಿಕ್ಷೆ ಬೇಡುವವರು...ಇತ್ಯಾದಿ ಇಲ್ಲದಿದ್ದರೆ ಬಸ್ ಪ್ರಯಾಣ ಅಪೂರ್ಣ ಎಂಬ ಅಚಲ ನಂಬಿಕೆ ಹೊಂದಿದ್ದ ನನಗೆ, ಇಲ್ಲಿಯ ಸಾರಿಗೆ ವ್ಯವಸ್ಥೆ ಆದರ್ಶಪ್ರಾಯ ಎನಿಸಿತು.
No comments:
Post a Comment