Total Pageviews

Tuesday, November 23, 2010

ಪುಸ್ತಕನೋಟ - ಕರ್ವಾಲೋ

ಪೂರ್ಣ ಚಂದ್ರ ತೇಜಸ್ವಿಯವರ ಅದ್ಭುತ ಕತೆಗಾರಿಕೆಯ ಕೃತಿ 'ಕರ್ವಾಲೋ'.

ಅದನ್ನು ಓದುತ್ತಾ ಹೋದಂತೆ ಪಶ್ಚಿಮ ಘಟ್ಟದ ನಿಸರ್ಗ ಸಿರಿ ಅನಾವರಣಗೊಳ್ಳುತ್ತದೆ. ಜೀವ ಜಾಲದ  ವಿಸ್ಮಯಗಳು, ಜೀವ ವೈವಿಧ್ಯಗಳ ಸಂಬಂಧಗಳು, ಜೀವ ವಿಕಾಸದ ಪಥದಲ್ಲಿ ಕಳಚಿ ಹೋದ ಕೊಂಡಿಯನ್ನು  ಹುಡುಕುವ ಪ್ರಯತ್ನ, ಇತ್ಯಾದಿಗಳ  ಮಿಶ್ರಣ ಈ ಕಾದಂಬರಿಯ ಹೂರಣ.

ವಿದ್ಯಾವಂತ ಕೃಷಿಕನಾಗಿದ್ದೂ , ಗ್ರಾಮೀಣ  ಜೀವನದ ಮೇಲೆ ಅಪಾರ ಆಸಕ್ತಿಯಿದ್ದರೂ, ಕೃಷಿಯಲ್ಲಿ ಹೆಚ್ಚಿನ ಯಶಸ್ಸು ಕಾಣದೆ , ತೋಟವನ್ನು ಮಾರಿ ಪಟ್ಟಣಕ್ಕೆ  ಹೋಗಬೇಕೆಂದು, ಕಥಾನಾಯಕ ಹವಣಿಸುತ್ತಾನೆ. ಈ ಸಂದರ್ಭದಲ್ಲಿ, ಆತನಿಗೆ ಮೇಧಾವಿ ಸಂಶೋಧಕ 'ಕರ್ವಾಲೋ ' ಅವರ  ಪರಿಚಯವಾಗುತ್ತದೆ. 

ಆವರೊಂದಿಗೆ ನಿಕಟ ಸಂಪರ್ಕದಲ್ಲಿರುವ ಮಂದಮತಿ ಮಂದಣ್ಣನನ್ನು ಕಂಡು ಕುತೂಹಲಿಯಾಗುತ್ತಾನೆ. ಈತನೊಂದಿಗೆ ಕರ್ವಾಲೋ ರವರ ಸ್ನೇಹಕ್ಕೆ ಕಾರಣವೇನೆಂದು  ಪ್ರಶ್ನಿಸುತ್ತಾನೆ. ಮಂದಣ್ಣನಿಗೆ  ಜೀವ ಪ್ರಭೇದಗಳನ್ನು ಗುರುತಿಸುವ ಪ್ರತಿಭೆಯಿದೆ,ಅದರಿಂದಾಗಿ ತನ್ನ ಸಂಶೋಧನೆಗೆ  ಸಹಾಯವಾಗುತ್ತದೆ,  ಎನ್ನುತ್ತಾರೆ ಕರ್ವಾಲೋ.

ಒಂದು ದಿನ ಕರ್ವಾಲೊ ಅವರು, ಮಂದಣ್ಣನು ಕಾಡಿನಲ್ಲಿ ಒಂದು ವಿಧವಾದ 'ಹಾರುವ ಒತಿಯನ್ನು' ನೋಡಿದ್ದನೆಂದೂ, ಈ ಪ್ರಭೇದವು ಜೀವ ವಿಕಾಸದ ಹಾದಿಯಲ್ಲಿ ಕಳಚಿಹೋದ ಕೊಂಡಿಯೆಂದು ಇದುವರೆಗೆ ನಂಬಲಾಗಿತ್ತೆಂದು ಹೇಳಿದರು. 

ಕಥನಾಯಕನೂ  ಕರ್ವಾಲೋ ಅವರ ತಂಡದೊಂದಿಗೆ ಜತೆಗೂಡಿ, ಕಾಡಿನಲ್ಲಿ 'ಹಾರುವ ಒತಿಯನ್ನು' ಅರಸುತ್ತ ಅಲೆದಾಡುವ ರೋಚಕ ಅನುಭವಗಳು ಹಾಗೂ ವೈಚಾರಿಕ ವಿಶ್ಲೇಷಣೆಗಳು  ಓದುಗರನ್ನು, ಪ್ರಕೃತಿಯ ಬಗ್ಗೆ ಚಿಂತನೆಗೆ ಹಚ್ಚುತ್ತವೆ.

Monday, November 22, 2010

ಕಸದಿಂದ ಅದ್ಭುತ ಸೃಷ್ಟಿ.. ರಾಕ್ ಗಾರ್ಡನ್

'ಕಸದಿಂದ ರಸ' ಎಂಬ ಮಾತನ್ನು ರುಜುವಾತುಗೊಳಿಸುವ ಹಲವರು ಪ್ರಯತ್ನಗಳನ್ನು ನಮ್ಮ  ಸುತ್ತುಮುತ್ತಲು ಗಮನಿಸಿರುತ್ತೇವೆ.

ಕಸದಿಂದಲೇ ಸೃಷ್ಟಿಸಿರುವ ಅದ್ಭುತ ಚಂಡಿಘಢದ 'ರಾಕ್ ಗಾರ್ಡನ್'. ಅದೂ ಅಂತಿಂಥ ಕಸವಲ್ಲ,  ಕೈಗಾರಿಕೆಗಳಲ್ಲಿ  ನಿರುಪಯುಕ್ತವಾದ ಪದಾರ್ಥಗಳು, ಒಡೆದ ಗಾಜಿನ ಚೂರುಗಳು, ಮಡಿಕೆ ಕುಡಿಕೆಗಳು, ಪೈಪುಗಳು, ಬೆಣಚು ಕಲ್ಲುಗಳು ಇತ್ಯಾದಿ 'ಕಸಗಳು' ಇಲ್ಲಿ ಗಾರೆಯೊಂದಿಗೆ ಸೇರಿ ಸುಂದರವಾದ ವಿವಿಧ ಪ್ರಾಣಿ-ಪಕ್ಷಿ, ಬೊಂಬೆ, ಗೋಪುರಗಳಾಗಿ ಕಂಗೊಳಿಸಿವೆ.

ಗಾರ್ಡನ್ ಎಂದಾಕ್ಷಣ ಬಣ್ಣ-ಬಣ್ಣದ ಹೂವುಗಳು, ಹಸಿರು ಹುಲ್ಲು ಹಾಸುಗಳು ನೆನಪಿಗೆ ಬರುತ್ತವೆ. ಆದರೆ 'ರಾಕ್ ಗಾರ್ಡನ್' ಭಿನ್ನವಾದುದು. ಇಲ್ಲಿ ತಾಂತ್ರಿಕತೆಯೊಂದಿಗೆ ಕ್ರಿಯಾಶೀಲತೆಯು  ಮೇಳೈಸಿದೆ.  ಈ 'ಗಾರ್ಡನ್ ' ನ ಕಣಿವೆಗಳಲ್ಲಿ ನಡೆದಾಡುವುದು ಒಂದು ಅವಿಸ್ಮರಣೀಯ ಅನುಭವ. ಇದರ ರೂವಾರಿ 'ನೇಕ್ ಚಂದ್' ಎಂಬವರು.



Monday, November 15, 2010

ಚಾಮುಂಡಿ ಬೆಟ್ಟದಲ್ಲಿ ಚಾರಣ..

ಮೈಸೂರಿನಲ್ಲಿ ನೆಲೆಸಿ ಸುಮಾರು ಇಪ್ಪತ್ತು ವರುಷಗಳಾದರೂ, ಚಾಮುಂಡೇಶ್ವರಿ ದೇವಾಲಯವನ್ನು ಹಲವಾರು ಬಾರಿ ಸಂದರ್ಶಿಸಿದ್ದರೂ,  ಇ ದುವರೆಗೂ ಬೆಟ್ಟದಲ್ಲಿ ಚಾರಣ ಮಾಡಿರಲಿಲ್ಲ. ಕಳೆದ ಭಾನುವಾರದಂದು, ಯೂಥ್ ಹಾಸ್ಟೆಲ್ ನವರ ತಂಡದೊಂದಿಗೆ ಸೇರಿ, ಪ್ರಥಮ ಬಾರಿಗೆ ಚಾರಣ ಮಾಡಿದ ಅನುಭವ ಹೀಗಿದೆ.

ಹಿತವಾದ ವಾತಾವರಣದಲ್ಲಿ,ಪುಟ್ಟ ಕಾಲುದಾರಿಗಳಲ್ಲಿ, ಅನುಭವಿ ಚಾರಣಿಗರ ಬೆಂಬಲದಲ್ಲಿ, ಹೆಜ್ಜೆ ಹಾಕಿದ ನಮಗೆ ಸಮಯದ ಪರಿವೆಯೂ ಇರಲಿಲ್ಲ, ದಣಿವೂ ಆಗಲಿಲ್ಲ. ಸುಮಾರು ಮೂರು ಗಂಟೆಗಳ ಕಾಲ ಚಾರಣ ನಡೆಸಿ, ಅಲ್ಲೊಂದು ವೀಕ್ಷಣಾ ಗೋಪುರವನ್ನು ತಲಪಿದೆವು. ಆಮೇಲೆ ಬೆಟ್ಟದ ಇನ್ನೊಂದು ಬದಿಯಿಂದ, ಮೆಟ್ಟಿಲುಗಳ ಮೂಲಕ ಕೆಳಗಿಳಿದೆವು.    



  
ಮುಂಜಾವಿನ ಮಂಜಿನಲ್ಲಿ
ಚಾಮುಂಡಿ ಬೆಟ್ಟದ ಸೊಗಸು..   

 
                                                

 ಮಾರ್ಗವಿಲ್ಲದ ಕಡೆ ನಡೆದಲ್ಲೇ ದಾರಿ














ಅಚ್ಚುಕಟ್ಟಾದ ವ್ಯವಸ್ಥೆ, ಸ್ನೇಹಮಯಿ ಸಹ ಚಾರಣಿಗರು, ರುಚಿಕಟ್ಟಾದ ತಿಂಡಿ-ತಿನಿಸುಗಳು -ಇವಕ್ಕೆಲ್ಲ ಮೇಳೈಸಿದ ಪ್ರಕೃತಿ ಸೌಂದರ್ಯ.   ಭಾನುವಾರವನ್ನು  ಸಂಪನ್ನಗೊಳಿಸಲು ಇನ್ನೇನು ಬೇಕು ? 

ಮೈಸೂರಿನಲ್ಲಿ ತಾಜಾ 'ತಾಜ್ ಮಹಲ್' ?

ಮೈಸೊರಿನಲ್ಲಿ  ಭಾನುವಾರದ ಸಂಜೆ ಕಳೆಯಲು ಹಲವಾರು ದಾರಿಗಳಿವೆ. ದೊಡ್ಡಕೆರೆ ಮೈದಾನದಲ್ಲಿರುವ, ದಸರಾ ವಸ್ತು ಪರ್ದರ್ಶನಕ್ಕೆ ಭೇಟಿ ಕೊಡುವುದೂ ಅವುಗಳಲ್ಲೊಂದು.  ನಿನ್ನೆ ವಸ್ತು ಪ್ರದರ್ಶನದ ಮೈದಾನದಲ್ಲಿ, ಸ್ವಲ್ಪ ಸುತ್ತಾಡಿ , ಸ್ವಲ್ಪ ತಿಂದು, ಹರಟುತ್ತಾ  ನಡೆಯುವಾಗ, ಇದ್ದಕ್ಕಿದ್ದಂತೆ 'ತಾಜಾ ತಾಜ್ ಮಹಲ್' ನ ದರ್ಶನವಾಯಿತು! 



ಪ್ರತಿ ವರುಷವೂ, ಏನಾದರೂ ವಿಶಿಷ್ಟವಾದುದನ್ನು ಮೂಡಿಸುವ ಕಲಾವಿದರಿಗೆ ಥಾಂಕ್ಸ್!



 
                                                            ಮೈಸೂರಿನಲ್ಲಿರುವ  'ತಾಜ್ ಮಹಲ್ '  ಹೀಗಿದೆ ನೋಡಿ.

   





ಕಳೆದ ಜನವರಿಯಲ್ಲಿ ಆಗ್ರಾಕ್ಕೆ ಹೋಗಿದ್ದೆ.

ಇದು 'ತಾಜ್ ಮಹಲ್' ನ ಮೋಡಿ.  

Saturday, November 6, 2010

ಪವಡಿಸಿದಾ ಬುದ್ಧ ಪರಮಾತ್ಮ, 'ವಾಟ್ ಫೊ'ನಲ್ಲಿ..

ಥೈಲಾಂಡ್ ನ ರಾಜಧಾನಿಯಾದ ಬ್ಯಾಂಕಾಕ್ ಅರಮನೆಯ ಅನತಿ ದೂರದಲ್ಲಿ ಕಂಗೊಳಿಸುತ್ತದೆ, 'ವಾಟ್ ಫೊ' ಎಂದು ಕರೆಯಲ್ಪಡುವ ಬುದ್ಧನ ದೇವಾಲಯ. ಇಲ್ಲಿನ ಬಹುದೊಡ್ಡದಾದ ಹಾಗೂ ಸುಂದರವಾದ   ಬುದ್ಧನ ವಿಗ್ರಹವನ್ನು ಮಲಗಿರುವ ಭಂಗಿಯಲ್ಲಿ ಕೆತ್ತಲಾಗಿದೆ.

ವಿಗ್ರಹವು  ೪೬ ಮೀಟರ್ ಉದ್ದ ಹಾಗು ೧೫ ಮೀಟರ್ಎತ್ತರವಿದೆಯಂತೆ. ವಿಗ್ರಹಕ್ಕೆ ಸಂಪೂರ್ಣವಾಗಿ  ಚಿನ್ನದ ಕವಚವಿದೆ.





ಥೈಲಾಂಡ್ ನಲ್ಲೆ ಅತಿ ದೊಡ್ಡದಾದ ಈ ದೇವಾಲಯವನ್ನು ೧೭೮೮ ರಲ್ಲಿ ಕಟ್ಟಿ, ಆಮೇಲೆ ದೊರೆ ರಾಮ-೩ ನ ಕಾಲದಲ್ಲಿ ಅಭಿವೃದ್ಧಿಗೊಳಿಸರಂತೆ.  








ಇಲ್ಲಿನ  ಒಂದು ಕಡೆ ಸಾಲಾಗಿ ಜೋಡಿಸಿರುವ ಪುಟ್ಟ ಪುಟ್ಟ ಹುಂಡಿಗಳಿವೆ. ಅಲ್ಲಿ  ಒಬ್ಬರು ಮಹಿಳೆ, ಪುಟ್ಟ ಪುಟ್ಟ ತಟ್ಟೆಗಳಲ್ಲಿ ನಾಣ್ಯಗಳನ್ನು ಸುರುವಿ ಕೊಡುತಿದ್ದರು. ಕೆಲವರು, ಥೈಲಾಂಡ್ ನ ಹಣವಾದ 'ಬಾಟ್'ನ್ನು ಕೊಟ್ಟು, ನಾಣ್ಯಗಳನ್ನು ಪಡೆದುಕೊಂಡು, ಆ ಹುಂಡಿಗಳಿಗೆ ತಲಾ ಒಂದರಂತೆ ನಾಣ್ಯವನ್ನು ಹಾಕುತಿದ್ದರು.




ಇದರ ಉದ್ದೇಶ ಮತ್ತು  ಔಚಿತ್ಯ ಏನೆಂದು  ಆಕೆಯನ್ನು ಇಂಗ್ಲಿಷ್ ನಲ್ಲಿ  ಕೇಳಿದೆ. ಥಾಯಿ ಭಾಷೆಯಲ್ಲಿ ಏನೋ ಅಂದಳು. ನನಗೆ ಅರ್ಥವಾಗಲಿಲ್ಲ.   ಗುಂಪಿನಲ್ಲಿ ಗೋವಿಂದ ಎಂದು  ನಾನೂ, ಉಳಿದವರನ್ನು ಅನುಸರಿಸಿದೆ.








"ಪವಡಿಸೋ ಪರಮಾತ್ಮ ಶ್ರೀವೆಂಕಟೇಶ.." ಹಾಡನ್ನು ಗುನುಗಿ,  ಶ್ರೀರಂಗಪಟ್ಟಣದ "ಮಲಗಿರುವೆಯಾ ರಂಗನಾಥ.." ಹಾಡನ್ನು ಸ್ಮರಿಸಿ, ಮಲಗಿರುವ ಬುದ್ಧನ ಅದ್ಭುತ ರೂಪವನ್ನು ಕಣ್ತುಂಬಿಸಿಕೊಂಡೆ.