ಜೂನ್ ೧೦ ರಂದು, ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಆಯೊಜಿಸಲಾದ ಸಣ್ಣ ಟ್ರೆಕ್ಕಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಸುಮಾರು ೩೦ ಜನರಿದ್ದ ನಮ್ಮ ತಂಡ, ಮೈಸೂರಿನ ರೈಲ್ವೇಸ್ಟೇಶನ್ ನಲ್ಲಿ ಸೇರಿ, ಹಾಸನದ ಕಡೆಗೆ ಹೋಗುವ ರೈಲ್ ನಲ್ಲಿ ಹೊರಟೆವು. ಕಟ್ಟಿಸಿ ತಂದಿದ್ದ ಇಡ್ಲಿ-ಚಟ್ನಿ ತಿಂದು, ದಾರಿಯಲ್ಲಿ ಯಾವುದೋ ಒಂದು ಸ್ಟೇಶನ್ ನಲ್ಲಿ ಮಾರುತ್ತಿದ್ದ ಹಲಸಿನ ಹಣ್ಣನ್ನೂ ತಿಂದು, ಅದೂ-ಇದೂ ಹರಟುತ್ತ, ಸುಮಾರು ೨ ಗಂಟೆ ಪ್ರಯಾಣಿಸುವಷ್ಟರಲ್ಲಿ ಮಾವಿನಕೆರೆ ಬಂದೇ ಬಿಟ್ಟಿತು.
ಶ್ರೀ ಎಮ್. ವಿ. ಸುಬ್ಬಣ್ಣ ಹಾಗೂ ಅವರ ಮನೆಯವರು ಅಲ್ಲಿ ನಮ್ಮನ್ನು ಬರಮಾಡಿಕೊಂಡರು. ಪರಸ್ಪರ ಪರಿಚಯ-ಯೋಗಕ್ಷೇಮ ಮಾತನಾಡಿ, ಮಾವಿನಕೆರೆ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದೆವು. ಸುಬ್ಬಣ್ಣನವರು ನಮಗಾಗಿ ಮಾವಿನಕೆರೆ ಕ್ಷೇತ್ರದ ಬಗ್ಗೆ ನಮಗಾಗಿ ಒಂದು ಪುಟ್ಟ ಮಾಹಿತಿ ಪುಸ್ತಕವನ್ನು ಬರೆದು ಮುದ್ರಿಸಿದ್ದರು. ಇದರ ಸರಳ ನಿರೂಪಣೆಯಿಂದ ಶ್ರೀಕ್ಷೇತ್ರದ ಸ್ಥಳಪುರಾಣ ತಿಳಿಯಲು ಅನುಕೂಲವಾಯಿತು.
ಮಾವಿನಕೆರೆ ಬೆಟ್ಟ ಚಿಕ್ಕದಾದುದು. ಸುಮಾರು ೫೦೦ ಮೆಟ್ಟಿಲುಗಳಿದ್ದುವು. ಅಲ್ಲಲ್ಲಿ ದೊಡ್ಡದಾದ ಬಂಡೆಗಳಿದ್ದುವು.
ಬಂಡೆಯನ್ನೇರಲು ನಮ್ಮ ತಂಡದಲ್ಲಿದ್ದ
’ತಾತ ಯೂಥ್’ಗಳೇ ಲೀಡರ್ಸ್!
ಬೆಟ್ಟದ ಮೇಲೆ, ಪುಟ್ಟದಾದ ಗುಹೆಯಲ್ಲಿ ಪುರಾತನವಾದ ಉದ್ಭವ ರಂಗನಾಥ ಸ್ವಾಮಿಯ ಶಿರೋಭಾಗ ಮಾತ್ರ ಕಾಣಿಸುತ್ತದೆ. ದೇವಸ್ಥಾನದ ಮುಂಭಾಗವನ್ನು ಇತ್ತೀಚೆಗೆ ನವೀಕರಿಸಿದ್ದಾರೆ. ಚಿಕ್ಕದಾದರೂ ಚೊಕ್ಕವಾದ ದೇವಸ್ಥಾನವಿದು. ಬೆಟ್ಟದ ಮೇಲೆ ಬೀಸುವ ತಂಗಾಳಿ ಮೆಟ್ಟಿಲು ಹತ್ತಿ ಬಂದ ಆಯಾಸವನ್ನು ಮರೆಸುತ್ತದೆ. ಬಹುಶ: ಅಲ್ಲಿನ ಗಾಳಿ ಬೀಸುವಿಕೆ ಜಾಸ್ತಿಯಿರಬೇಕು, ಇದಕ್ಕೆ ಪೂರಕವೆಂಬಂತೆ ಸ್ವಲ್ಪ ದೂರದಲ್ಲಿ , ಗಾಳಿಯಿಂದ ವಿದ್ಯುತ್ ತಯಾರಿಸುವ ’ವಿಂಡ್ ಮಿಲ್’ಗಳು ಕಾಣಿಸುತ್ತವೆ.
ತೀರ್ಥ-ಪ್ರಸಾದ ಸ್ವೀಕರಿಸಿ, ನಿಧಾನವಾಗಿ ಹರಟುತ್ತಾ. ಪ್ರಕೃತಿ ಸಿರಿಯನ್ನು ಮೆಚ್ಚುತ್ತಾ ಬೆಟ್ಟದ ಕೆಳಗಿಳಿಯುವಾಗ ೧.೩೦ ಗಂಟೆಯಾಗಿತ್ತು. ನಮ್ಮ ಮುಂದಿನ ಪಯಣ ಅಲ್ಲಿಂದ ಸುಮಾರು ೩. ಕಿ.ಮೀ ದೊರದಲ್ಲಿರುವ ಹೇಮಾವತಿ ನದಿ ದಂಡೆಯಲ್ಲಿ ಸ್ಥಾಪಿಸಲಾದ ’ಶ್ರೀಲಕ್ಶ್ಮಿ ವೆಂಕಟರಮಣ ಸ್ವಾಮಿ’ಯ ಮಂದಿರಕ್ಕೆ.
ಈ ದಾರಿಯಲ್ಲಿ, ಎರಡು ದೊಡ್ಡದಾದ ’ಅಕ್ವಾ ಡೆಟ್’ ಅಥವಾ ನೀರು ಹರಿಯುವ ಮೇಲುಸೇತುವೆಗಳಿವೆ. ಗೊರೂರು ಅಣೆಕಟ್ಟಿನಿಂದ ಹೇಮಾವತಿ ನದಿಯ ನೀರನ್ನು ಸಮರ್ಪಕವಾಗಿ ಬಳಸಲು ಈ ವ್ಯವಸ್ಥೆ.
ಸುಮಾರು ೨ ಗಂಟೆಗೆ ’ಶ್ರೀಲಕ್ಶ್ಮಿ ವೆಂಕಟರಮಣ ಸ್ವಾಮಿ’ ದೇವಸ್ಥಾನಕ್ಕೆ ತಲಪಿದೆವು. ಅಲ್ಲಿನ ಅರ್ಚಕರು ಬಹಳ ಶ್ರದ್ಧಾ-ಭಕ್ತಿಯಿಂದ ಪೂಜೆ-ಅರ್ಚನೆ ಕಾರ್ಯಕ್ರಮಗಳನ್ನು ನೆರವೇರಿಸಿದರು. ಅವರು ಸ್ಥಳಪುರಾಣ ಹಾಗೂ ತಮ್ಮ ಕುಟುಂಬದವರಿಗೆ ತಲೆಮಾರಿನಿಂದ ಒದಗಿ ಬಂದ ಪೂಜಾ-ಕೈಂಕರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಾಗಿ ಆಸ್ಠೆಯಿಂದ ವಿವರಿಸಿದರು.
ಈ ನಡುವೆ ಹೆಚ್ಚಿನ ಧಾರ್ಮಿಕ ಕ್ಷೇತ್ರಗಳಲ್ಲಿ ಕಾಟಾಚಾರಕ್ಕೆ ಅರ್ಚನೆ ಮಾಡುತ್ತಾರೆ. ಹಾಗಾಗಿ ಇಲ್ಲಿನ ಅರ್ಚಕರ ಸೌಜನ್ಯ ಹಾಗೂ ಪ್ರತಿಯೊಬ್ಬರನ್ನು "ಸ್ವಾಮಿಯನ್ನು ನೋಡಿಯಾಯಿತೆ, ಅಮ್ಮನವರಿಗೆ ಈ ದಿನ ವಿಶೇಷ ಅಲಂಕಾರವಿದೆ, ತೀರ್ಥ ಸಿಕ್ಕಿತೆ, ಪ್ರಸಾದ ಸ್ವೀಕರಿಸಿ" ಇತ್ಯಾದಿ ಪ್ರೀತಿಯಿಂದ ಆದರಿಸುವ ಪರಿ ಇಷ್ಟವಾಯಿತು.
ಮುತ್ತುಗದ ಎಲೆ ಮೇಲೆ ಧಾರಾಳವಾಗಿ ಬಡಿಸಿದ ಬಿಸಿಬೆಳೆ ಭಾತ್, ಸಿಹಿ ಪೊಂಗಲ್ ಹಾಗೂ ಮೊಸರನ್ನ ಸವಿದೆವು. ಪಕ್ಕದಲ್ಲಿ ಹರಿಯುತ್ತಿರುವ ಹೇಮಾವತಿ ನದಿದಂಡೆಯಲ್ಲಿ ಸ್ವಲ್ಪ ಹೊತ್ತು ಕುಳಿತು, ಮೈಸೂರಿಗೆ ಹಿಂತಿರುಗಿದೆವು.
ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅಯೋಜಿಸಿದ್ದ ಶ್ರೀ ಸ್ವಾಮಿ ಹಾಗೂ ಶ್ರೀ ಸೋಮಶೇಖರ್ ಅವರಿಗೆ ಹೃತ್ಪೂರ್ವಕ ಥಾಂಕ್ಸ್!
ಮಾವಿನಕೆರೆ ರಂಗನಾಥ ಸ್ವಾಮಿಯ ಬಗ್ಗೆ ತುಂಬಾ ಕೇಳಿದ್ದೆ. ಈ ಪ್ರವಾಸ ಕಥನದಿಂದ ನಾವು ಅಲ್ಲಿಗೆ ಭೇಟಿ ನೀಡಲು ಉತ್ತಮ ಮಾಹಿತಿಕೊಟ್ಟಿದ್ದಿರಿ. ಧನ್ಯವಾದಗಳು.
ReplyDeleteಅಂದಹಾಗೆ ನಮ್ಮ ಶ್ರೇಷ್ಟಸಾಹಿತಿ ಮಾವಿನಕೆರೆ ರಂಗನಾಥ್ ಅವರಿಗೂ ಈ ಕ್ಷೇತ್ರಕ್ಕೂ ಸಂಬಂಧವಿದೆಯೇ?
ನನ್ನ ಬ್ಲಾಗಿಗೂ ಬನ್ನಿ ನಿಮ್ಮ ಓದಿಗೆ ಒಂದೆರಡು ಕವನಗಳಿವೆ.
ಥಾಂಕ್ಸ್! ನನಗೆ ಅವರ ಬಗ್ಗೆ ಮಾಹಿತಿ ತಿಳಿದಿಲ್ಲ. ಇತರ ಸದಸ್ಯರ ಮೂಲಕ ಗೊತ್ತಾದರೆ ತಿಳಿಸುತ್ತೇನೆ. ನಿಮ್ಮ ಕವನಗಳನ್ನು ನೋದಿದೆ. ಚೆನ್ನಾಗಿವೆ, ಅರ್ಥಗರ್ಭಿತವಾಗಿವೆ.
Delete