Total Pageviews

Saturday, April 6, 2013

ಶಿಶಿಲೇಶ್ವರನ ಮತ್ಸ್ಯಧಾಮ....


ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದ ಸಮೀಪ ಶಿಶಿಲ ಎಂಬ ಪುಟ್ಟ ಊರಿನಲ್ಲಿ ಶಿಶಿಲೇಶ್ವರ ಸ್ವಾಮಿಯ ದೇವಾಲಯವಿದೆ.  ಇಲ್ಲಿ ಉದ್ಭವಲಿಂಗವಾದ  ಶಿವನನ್ನು  ಪೂಜಿಸುತ್ತಾರೆ. ಸುಮಾರು ೭೦೦ ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವು ಕೇರಳ ಶೈಲಿ ಹಾಗೂ ಜೈನ ಬಸದಿಯ ಮಿಶ್ರ ಛಾಯೆಯನ್ನು ಹೊಂದಿದೆ. ತುಳುನಾಡಿನ  ಸಂಸ್ಕೃತಿಯ  ಪ್ರತೀಕವಾಗಿ ನಾಗಾರಾಧನೆಗೂ ಆದ್ಯತೆಯಿದ್ದು, ದೇವಸ್ಥಾನದ ಎದುರು ನಾಗಬನವೂ ಇದೆ.


















ಹಚ್ಚ ಹಸಿರಿನ ನಡುವೆ, ಕಪಿಲಾ ನದಿ ತೀರದಲ್ಲಿ ಕಂಗೊಳಿಸುವ ಶಿಶಿಲೇಶ್ವರ  ದೇವಸ್ಥಾನವನ್ನು ತಲಪಲು ನದಿಯನ್ನು ದಾಟಬೇಕು, ಅದಕ್ಕಾಗಿ ಒಂದು ತೂಗುಸೇತುವೆ ಇದೆ. ಇಲ್ಲಿನ ಕಪಿಲಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ಮಹಶಿರ್ ತಳಿಯ ಮೀನುಗಳು ವಾಸಿಸುತ್ತಿವೆ. ಸುಮಾರು ೧ ಅಡಿ ಉದ್ದವಿರುವ ಈ ಮೀನುಗಳು ಇಲ್ಲಿನ ಮುಖ್ಯ ಆಕರ್ಷಣೆ. ಆಸಕ್ತರು ಹರಕೆಯ ರೂಪದಲ್ಲಿ ಮೀನುಗಳಿಗೆ ಆಹಾರ ಒದಗಿಸಲು ಅವಕಾಶವಿದೆ. ನಾವು ಅಲ್ಲಿಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಒಂದು ಮೂಟೆ ಪುರಿಯನ್ನು ಮೀನುಗಳಿಗೆ ಎರಚುತ್ತಿದ್ದರು. ಪುರಿಯನ್ನು  ನೀರಿಗೆ ಎರಚಿದ ತಕ್ಷಣ ಪುಟಿದೇಳುವ  ಮೀನುಗಳು ಕ್ಷಣಾರ್ಧದಲ್ಲಿ ಆಹಾರವನ್ನು ಧ್ವಂಸಗೊಳಿಸುತ್ತಿದ್ದುವು. ನಮ್ಮ ತಂಡದ ಸದಸ್ಯರೆಲ್ಲರೂ  ಮೀನುಗಳಿಗೆ ಪುರಿ ಎರಚಿ ಸಂಭ್ರಮಿಸಿದರು.











ಸಾಮಾನ್ಯವಾಗಿ ಹುಲಿಧಾಮ, ಕರಡಿಧಾಮ, ಸಿಂಹಧಾಮ, ನವಿಲುಧಾಮ ...ಇತ್ಯಾದಿಗಳನ್ನು ಕಂಡಿದ್ದೇವೆ.  ಆದರೆ ಎಲ್ಲದರೂ ಮತ್ಸ್ಯಧಾಮವಿದೆಯೇ? ಬಹುಶ: ಇಲ್ಲ, ಇದ್ದರೂ ವಿರಳ. ಆದರೆ ಶಿಶಿಲದ ಕಪಿಲಾ ನದಿಯಲ್ಲಿ, ಮತ್ಸ್ಯಧಾಮವಿದೆ ಹಾಗೂ ಇದಕ್ಕೆ ಶಿಶಿಲೇಶ್ವರನೇ  ಆಡಳಿತಾಧಿಕಾರಿ! ಭಕ್ತಾಭಿಮಾನಿಗಳ ಕಾಳಜಿಯಿಂದಾಗಿ ದೇವಸ್ಥಾನದಿಂದ  ೨ ಕಿ.ಮಿ. ಉದ್ದಕ್ಕೂ ಕಪಿಲಾ ನದಿಯಲ್ಲಿ ಮೀನುಗಾರಿಕೆಗೆ  ನಿಷೇಧವಿದೆ. ಹಾಗಾಗಿ ಈ ಮತ್ಸ್ಯ ಸಂಕುಲವು ಪ್ರಸಾದ-ನೈವೇದ್ಯ ಸೇವಿಸುತ್ತಾ ಹಾಯಾಗಿ ಬದುಕಿದೆ. ೧೯೯೬ ರಲ್ಲಿ, ಕಿಡಿಗೇಡಿಗಳ ಕೃತ್ಯದಿಂದ ಸಹಸ್ರಾರು ಮೀನುಗಳು ಏಕಕಾಲದಲ್ಲಿ ಸತ್ತು ಹೋದವಂತೆ. ಈ ಕಹಿನೆನಪಿಗಾಗಿ ಶಿಶಿಲದಲ್ಲಿ ಒಂದು ಮತ್ಸ್ಯ ಸ್ಮಾರಕವನ್ನು ಕಟ್ಟಲಾಗಿದೆ.








2 comments:

  1. ಶಿಶಿಲೇಶ್ವರನ ಮತ್ಯ್ಸಧಾಮದ ಬಗೆಗೆ ಒಳ್ಳೆಯ ನಿರೂಪಣೆ.
    http://badari-poems.blogspot.in

    ReplyDelete