Total Pageviews

Sunday, May 19, 2013

ಕುಮಾರ ಪರ್ವತಕ್ಕೆ ಚಾರಣ


ಎಪ್ರಿಲ್ ೧೩ ಮತ್ತು ೧೪ ರಂದು, ಮೈಸೂರಿನ ಯೂಥ್ ಹಾಸ್ಟೆಲ್ ಸಂಘಟನೆಯ  ಘಟಕದ ವತಿಯಿಂದ ಎರಡು ದಿನದ ಚಾರಣ ಕಾರ್ಯಕ್ರಮನ್ನು ಅಯೋಜಿಸಿದ್ದರು. ಮೊದಲನೆಯ ದಿನ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ  ಮಲ್ಲಳ್ಳಿ ಜಲಪಾತವನ್ನು ವೀಕ್ಷಿಸಿ, ಮರುದಿನ ಕುಮಾರ ಪರ್ವತಕ್ಕೆ ಚಾರಣ ಮಾಡುವ ಕಾರ್ಯಕ್ರಮವಿತ್ತು.      

ಎಪ್ರಿಲ್ ೧೩ರಂದು, ಸುಮಾರು ೫೫ ಜನರಿದ್ದ ನಮ್ಮ ತಂಡವು ಮೈಸೂರು ಬಿಟ್ಟಾಗ ಬೆಳಗ್ಗೆ ೭ ಗಂಟೆ ಆಗಿತ್ತು. ಇಷ್ಟು ಜನರಿದ್ದಾಗ ಬಸ್ಸಿನಲ್ಲಿ ಗಲಾಟೆ ಇರಲೇಬೇಕಲ್ಲವೇ? ಅಂತಾಕ್ಷರಿ ನಡೆಯಿತು. ಹೀಗೆ ಒಂದು ಘಂಟೆ ಪ್ರಯಾಣಿಸಿ ಹುಣಸೂರು ತಲಪಿದೆವು.

ಅಲ್ಲಿ ನಮ್ಮ ಬೆಳಗಿನ ತಿಂಡಿ ತಿಂದು, ಮಡಿಕೇರಿ ಜಿಲ್ಲೆಯ ಸೊಮವಾರಪೇಟೆ ಕಡೆಗೆ ತೆರಳಿದೆವು. ಸಾಮಾನ್ಯವಾಗಿ, ಕೊಡಗು ಜಿಲ್ಲೆಯ ಕಾಫಿ ತೋಟದ ಮಧ್ಯೆ  ತಂಪಾದ ಹವೆಯಲ್ಲಿ, ಕಾಫಿ ಹೂವಿನ ಸುವಾಸನೆ-ಸೊಬಗು ನೊಡುತ್ತ ಪ್ರಯಾಣಿಸುವುದು ಬಹಳ ಹಿತಕಾರಿಯಾಗಿರುತ್ತದೆ. ಆದರೆ ಈ ಬಾರಿ ಎಪ್ರಿಲ್ ನಲ್ಲಿ ಇಲ್ಲಿಯೂ ಸೆಕೆ ಇತ್ತು.

ಮಧ್ಯಾಹ್ನದ ಊಟವನ್ನು ಬುತ್ತಿಯಲ್ಲಿ ತುಂಬಿಸಿಕೊಂಡೆವು. ನಮ್ಮ ಬಸ್ ಇದ್ದ ರಸ್ತೆಯಿಂದ ಜಲಪಾತಕ್ಕೆ ಹೊಗಲು ೩ ಕಿ.ಮೀ. ನಡೆದು , ಸುಮಾರು ೩೦೦ ಮೆಟ್ಟಿಲು ಇಳಿಯಬೇಕು. ಮಳೆಗಾಲದಲ್ಲಿ ಇಲ್ಲಿ ಜಲಪಾತ ಭೋರ್ಗರೆಯುವುದಕ್ಕೆ ಕುರುಹಾಗಿ, ಅಲ್ಲಿನ ಕಲ್ಲು ಬಂಡೆಗಳಲ್ಲಿ  ನೀರಿನ ಚಲನೆಯ ಗುರುತು ಕಾಣಿಸಿತು. ಮಳೆಗಾಲದಲ್ಲಿ ಅಲ್ಲಿ ಆಕಸ್ಮಿಕ ಅಪಾಯಗಳು ಅಗುವುದರಿಂದ ನೀರಿಗೆ ಇಳಿಯಲು ಅವಕಾಶವಿಲ್ಲ ಎಂದು ಕೇಳಿಪಟ್ಟೆವು. ನಾವು ಹೋಗಿದ್ದಾಗ ಬಹಳ ಕಡಿಮೆ ನೀರಿತ್ತು. ಕೆಲವರು ನೀರಿಗಿಳಿದು ಸಂಭ್ರಮಿಸಿದರು. ನಾವು ಕೆಲವರು ಅತ್ತಿ ಮರದ ಕೆಳಗೆ, ಬಂಡೆಯೊಂದರ ಮೇಲೆ ಕುಳಿತು ವಿಶ್ರಮಿಸಿದೆವು.

ಅಲ್ಲಿಂದ ವಾಪಸ್ಸಾಗಿ ,ಬಸ್ ಮೂಲಕ ಸಮೀಪದ ಶಾಂತ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದೆವು. ಅಂದು ರಾತ್ರಿ ನಮಗೆ ಅಲ್ಲಿ ವಾಸ್ತವ್ಯ. ಹೆಸರಿಗೆ ತಕ್ಕಂತೆ ಶಾಂತವಾದ ಪರಿಸರ. ಈ ದೇವಸ್ಥಾನದಲ್ಲಿ. ಮುಂಚಿತವಾಗಿ ತಿಳಿಸಿದರೆ ಚಾರಣಿಗರಿಗೆ ಅನುಕೂಲವಾಗುವಂತೆ ಊಟ-ವಾಸ್ತವ್ಯಕ್ಕೆ ಸೌಕರ್ಯ ಮಾಡಿಕೊಡುತ್ತರೆ. ಬಚ್ಚಲು ಮನೆ, ಟಾಯ್ಲೆಟ್ ಸೌಲಭ್ಯವಿದೆ. ಸದಾ ಹರಿದು ಹೋಗುವ ಒರತೆ ನೀರಿಗೆ ಪೈಪ್ ಅಳವಡಿಸಿದ್ದಾರೆ. ವಿಶೇಷವೇನೆಂದರೆ ದೇವಾಲಯದ ಆವರಣದಲ್ಲಿ, ೮೫೦ ವರುಷಗಳಷ್ಟು ಹಳೆಯದಾದ ಬೃಹತ್ ಸಂಪಿಗೆ ಮರವೊಂದಿದೆ!  

ದೇವಸ್ಥಾನದಿಂದ ಸ್ವಲ್ಪ ಮೇಲೆ ಹೋದಾರೆ ದೂರದಲ್ಲಿ ಕುಮಾರ ಪರ್ವತ ಶ್ರೇಣಿ ಹಾಗೂ ಪರ್ವತ ಮತ್ತು ಮೋಡಗಳ  ಕಣ್ಣುಮುಚ್ಚಾಲೆ ಆಟ ತುಂಬಾ ಚೆನ್ನಾಗಿ ಕಾಣಿಸುತ್ತದೆ.
















ಸಂಜೆ, ದೊಡ್ಡ ಸಂಪಿಗೆ ಮರದ ಕೆಳಗೆ ಎಲ್ಲರೂ ವೃತ್ತಾಕಾರವಾಗಿ ಕುಳಿತೆವು. ಬೆಂಕಿ ಹಾಕದೆಯೇ  ಕ್ಯಾಂಪ್ ಫಯರ್ ಉದ್ಘಾಟಿಸಲಾಯಿತು. ಪರಸ್ಪರ ಕುಶಲೋಪರಿ ಮಾತು, ಪ್ರಥಮ ಬಾರಿಗೆ ವೈ.ಎಹ್.ಎ.ಐ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಅಭಿಪ್ರಾಯಗಳು, ಪ್ರತಿಭಾ ಪ್ರದರ್ಶನ ಇತ್ಯಾದಿ ಜರುಗಿದುವು.  ರಾತ್ರಿ ಊಟಕ್ಕೆ ಅನ್ನ, ತಿಳಿಸಾರು, ಸಾಂಬಾರು, ಹೆಸರು ಬೇಳೆ ಪಾಯಸ,ಮಜ್ಜಿಗೆ, ಉಪ್ಪಿನಕಾಯಿ, ಬಾಳ್ಕ ಮೆಣಸು ಇದ್ದವು. ಚೆನ್ನಾಗಿ ಉಂಡು, ನಾಳೆ ಬೆಳಗ್ಗೆ ಬೇಗನೆ ಏಳಬೇಕು ಎಂಬ ಅಲೋಚನೆಯಿಂದ ಬೇಗನೆ ವಿಶ್ರಮಿಸಿದೆವು. ಹಗಲು ಸೆಕೆಯಿದ್ದರೂ, ರಾತ್ರಿಯಾಗುತ್ತಿದ್ದಂತೆ ತಂಪಾಯಿತು.

ಮರುದಿನ ಬೆಳಗ್ಗೆ ಬೇಗನೇ ಎದ್ದು ಹೊರಡಲು ಅಣಿಯಾಗುವಷ್ಟರಲ್ಲಿ ೬ ಘಂಟೆ ಆಗಿತ್ತು. ಪರ್ವತ ಶ್ರೇಣಿಯಲ್ಲಿ ಸೂರ್ಯೋದಯ ನೋಡುತ್ತಾ  ಬಿಸಿ ಉಪ್ಪಿಟ್ಟು, ಶಾಲ್ಯಾನ್ನ, ಟಿ-ಕಾಫಿ ಸೇವನೆ ಮಾಡಿದೆವು. ಮಧ್ಯಾಹ್ನದ ಊಟಕ್ಕೆ ಬುತ್ತಿ ತುಂಬಿಸಿಕೊಂಡೆವು. ನಮ್ಮ ಮುಂದಿನ ಗುರಿ ದೂರದಲ್ಲಿ ಕಾಣಿಸುವ ಕುಮಾರ ಪರ್ವತ ಆಗಿತ್ತು.

ಆಯೋಜಕರಾದ ಗೋಪಕ್ಕ ಕಾಡಿನಲ್ಲಿ ಚಾರಣ ಮಾಡುವಾಗಿ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನೂ,  ಯಾರೂ ತಂಡವನ್ನು ಬಿಟ್ಟು ಹೋಗಿ ದಾರಿ ತಪ್ಪಬಾರದು, ದುಸ್ಸಾಹಸ ಮಾಡಬಾರದು ಇತ್ಯಾದಿ ವಿಚಾರಗಳನ್ನು ಒತ್ತಿ ಹೇಳಿದರು. ಎಲ್ಲರೂ ಶಾಂತ ಮಲ್ಲಿಕಾರ್ಜುನ ದೇವಸ್ಥಾನದಿಂದ ಹೊರಟು ೨ ಕಿ.ಮಿ. ನಡೆದು ಬೀದಳ್ಳಿ ಅರಣ್ಯ ಇಲಾಖೆಯ ಶಾಖೆಗೆ ತಲಪಿದೆವು. ಕುಮಾರ ಪರ್ವತವನ್ನು ಈ ಭಾಗದಿಂದ ಪುಷ್ಪಗಿರಿ ಎಂಬ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ಅರಣ್ಯ ಪ್ರವೇಶಿಸಲು ೨೦೦ ರೂ. ಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕು. ಅಲ್ಲದೇ ಕಾಡಿನಲ್ಲಿ ಏನಾದರೂ ಅಪಾಯವಾದರೆ ನಾವೇ ಹೊಣೆಗಾರರು ಎಂಬ ಬರಹವುಳ್ಳ ಪತ್ರಕ್ಕೆ ಸಹಿ ಹಾಕಬೇಕು. ಚಾರಣಿಗರಿಗಾಗಿ ಕೆಲವು ಸೂಚನೆಗಳಿವೆ. ಸಂಜೆ ೬ ಘಂಟೆಯ ಒಳಗೆ ಹಿಂತಿರುಗಿ ಬರಬೇಕು, ಕಾಡಿನಲ್ಲಿ ಬೆಂಕಿ ಹಾಕಬಾರದು, ನಿಷೇಧಿತ  ವಸ್ತುಗಳನ್ನು ಒಯ್ಯವಂತಿಲ್ಲ....ಇತ್ಯಾದಿ. ಇಲ್ಲಿ ಕುಡಿಯಲು ಸಿಹಿನೀರು ಸಿಗುತ್ತದೆ, ಬೇಕಿದ್ದಲ್ಲಿ ತುಂಬಿಸಿಕೊಳ್ಳಬಹುದು.

ಬೀದಳ್ಳಿಯಿಂದ ಕುಮಾರ ಪರ್ವತದ ತುದಿಗೆ ೮ ಕಿ. ಮೀ. ದೂರ. ಅದು ಸಮುದ್ರ ಮಟ್ಟದಿಂದ ಸುಮಾರು ೫೭೩೦ ಅಡಿ ಎತ್ತರದಲ್ಲಿದೆ.  ೮ ಘಂಟೆಗೆ ಅರಣ್ಯಕ್ಕೆ ಇಳಿಯುತ್ತಿದ್ದಂತೆ ಒಂದು ತೊರೆ ಹಾಗೂ ಅದಕ್ಕೆ ಅಡ್ಡಲಾಗಿ ಕಟ್ಟಿದ ಹಳೆಯ  ಮುರಿದ ತೂಗುಸೇತುವೆ ಎದುರಾಯಿತು. ಮುಂದೆ ದಾರಿಯುದ್ದಕ್ಕೂ ದೈತ್ಯಾಕಾರದ ವಿವಿಧ ಪ್ರಭೇದದ ಮರಗಳು. ಯಾವುದೋ ಹಕ್ಕಿಗಳ ಇನಿದನಿ ಕೇಳಿಸಿತು. ತಂಡದ ಕೆಲವರು ಅದನ್ನು ರೆಕಾರ್ಡ್ ಮಾಡಿದರು. ಇಲ್ಲಿ ದಾರಿಯುದ್ದಕ್ಕೂ ಕಲ್ಲು-ಪೊಟರೆಗಳು. ಹಾಗಾಗಿ ಪ್ರತಿ ಹೆಜ್ಜೆಯನ್ನೂ ಗಮನಿಸಿಯೇ ಕಾಲಿಡಬೇಕು. ಇಲ್ಲವಾದರೆ ಪಾದ ಉಳುಕು ಗ್ಯಾರಂಟಿ. ಅರಣ್ಯ ಇಲಾಖೆಯು ಮರಗಳಿಗೆ ಅಲ್ಲಲ್ಲಿ ಹೆಸರಿನ ಫಲಕ ಹಾಗೂ ದಾರಿ ಸೂಚನಾ ಫಲಕಗಳನ್ನು ಹಾಕಿದ್ದಾರೆ. ಹಾಗಾಗಿ ಕಾಡಿನಲ್ಲಿ  ದಾರಿ ತಪ್ಪುವ ಸಾಧ್ಯತೆ ಕಡಿಮೆ. ಧಾರಾಳವಾಗಿ ಕುಡಿಯುವ ನೀರನ್ನು ಒಯ್ಯಬೇಕು, ಯಾಕೆಂದರೆ ದಾರಿಯಲ್ಲಿ ನೀರು ಸಿಗುವ ತಾಣಗಳಿಲ್ಲ.


                                                              



                                                                         


ಹೀಗಿಯೇ ನಡೆಯುತ್ತಿದ್ದಗ ಒಂದೆಡೆ ಸುಬ್ರಮಣ್ಯ-ಗಿರಿಗದ್ದೆಯ ಕಡೆಗೆ ಹೋಗುವ ಪುಟ್ಟ ದಾರಿಸೂಚನಾ ಫಲಕ ಕಾಣಿಸಿತು. ಇನ್ನೂ ಸ್ವಲ್ಪ ಮುಂದೆ ಹೋದಾಗ ನಮ್ಮ ಎಡಭಾಗಕ್ಕೆ ಒಂದು 'ವ್ಯೂ ಪಾಯಿಂಟ್' ಸಿಗುತ್ತದೆ. ಇಲ್ಲಿಂದ ದೂರದ ಪ್ರಕೃತಿ ದೃಶ್ಯ ತುಂಬಾ ರಮಣೀಯ. ಅಕಸ್ಮಾತ್ ಕಾಲು ಜಾರಿದರೆ, ಕೆಳಗಡೆ ಪ್ರಪಾತ!. ಬಲಭಾಗದಲ್ಲಿ ಮುಂದುವರಿದೆವು. ಕೆಲವು ಕಡೆ ಎಲೆಗಳ ಮೇಲೆ ಮಳೆ ಬಿದ್ದ ಕುರುಹಾಗಿ ನೀರು ಕಾಣಿಸಿತು. ಅದ್ಯಾವುದೋ ಮಾಯೆಯಲ್ಲಿ ನನ್ನ ಶೂ ಒಳಗೂ ಒಂದು ಜಿಗಣೆ ಸೇರಿಕೊಂಡಿತ್ತು. ಮತ್ತೂ ಮುಂದೆ  ಕಡಿದಾದ ಬಂಡೆ ಮತ್ತು  ಸ್ವಲ್ಪ ಕಾಲುದಾರಿ ೩ ಬಾರಿ ಪುನರಾವರ್ತನೆಯಾದುವು. ಎಲ್ಲರೂ ಕಷ್ಟಪಟ್ಟು ಜಾಗರೂಕತೆಯಿಂದ ಹತ್ತಿದೆವು. ಕೆಲವು ಹಿರಿಯ ಮಹಿಳೆಯರಿಗೆ ಕಿರಿಯ ಚಾರಣಿಗರು ಸಹಾಯ ಹಸ್ತವನ್ನಿತ್ತು ದಾಟಿಸಿದರು. ಇದಾದ ಮೇಲೆ ತುಸು ದೂರದಲ್ಲಿಯೇ ಕಾಣುವ ಪರ್ವತದ ತುದಿಗೆ ಬಂದಾಗ ಒಂದು ಘಂಟೆ ಆಗಿತ್ತು. ನಮ್ಮಿಂದ ಮೊದಲು ಅಲ್ಲಿಗೆ ತಲಪಿದ್ದ ನಮ್ಮ ತಂಡದವರು ಆಗಲೇ ಊಟ ಮುಗಿಸಿದ್ದರು.

ಪರ್ವತದ ತುದಿಯಲ್ಲಿ ಕಲ್ಲುಗಳನ್ನು ಜೋಡಿಸಿ  ಕೋಟೆ ಕಟ್ಟಿದಂತೆ ಇರುವ ಪುಟ್ಟ ಶಿವನ ಗುಡಿಯ ರಚನೆಯಿದೆ. ಒಂದು ಕಂಚಿನ ಘಂಟೆಯೂ ಕಾಣಿಸಿತು. ಇಲ್ಲಿನ ನಿಸರ್ಗ ಸಿರಿ ಅದ್ಬುತ. ಒಂದೆಡೆ ಬೆಟ್ಟಗಳು ಮತ್ತು ಪ್ರಪಾತ. ನಮ್ಮ ಮಾತು ಬೆಟ್ಟಕ್ಕೆ ಬಡಿದು ಪ್ರತಿಧ್ವನಿಯಾಗುತ್ತಿತ್ತು. ಸಾಕಷ್ಟು ಗಲಾಟೆಯೆಬ್ಬಿಸಿ  ಪ್ರತಿಧ್ವನಿಸಿದೆವು. ಊಟ ಮಾಡಿದೆವು. ಪರ್ವತ ಹತ್ತಿ ಬಂದ ಆಯಾಸದ ಜತೆಗೆ ಹೊಟ್ಟೆಯೂ ತುಂಬಿ, ತಂಗಾಳಿ ಬೀಸಿ...ಕಣ್ಮುಚ್ಚಿದ್ದರೆ ಆರಾಮ ನಿದ್ರೆ ಬರುತ್ತಿತ್ತು. ಆದರೆ ಮೈಸೂರಿಗೆ ಹಿಂತಿರುಗಬೇಕಲ್ಲ.....೨ ಘಂಟೆಗೆ ಎಲ್ಲರೂ ಕೆಳಗಿಳಿಯಬೇಕು ಎಂಬ ಹುಕುಂ  ಬಂತು.



                                                                 










                                                                           


ಮನಸ್ಸಿಲ್ಲದ ಮನಸ್ಸಿನಿಂದ ಕೆಳಗಿಳಿಯತೊಡಗಿದೆವು. ಬಂಡೆ ಇಳಿಯುವುದು ಸ್ವಲ್ಪ ಕಷ್ಟವಾಯಿತು. ಎಲ್ಲರೂ ಜಾಗರೂಕತೆಯಿಂದ ಇಳಿದೆವು. ದಾರಿ ಸವೆಸುತ್ತಾ ಬೀದಳ್ಳಿ ಮೂಲಕವಾಗಿ ಶಾಂತ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಲಪುವಾಗ ಸಂಜೆ ೬.೩೦ ಆಗಿತ್ತು. ಈಗ ನಿಜವಾಗಿಯೂ ಎಲ್ಲರಿಗೂ ಸುಸ್ತಾಗಿತ್ತು. ಅಲ್ಲಿ ನಮಗೆ ಸಿಕ್ಕಿದ ಕಲ್ಲಂಗಡಿ ಹಣ್ಣಿನ ಜ್ಯೂಸ್ ಅಮೃತ ಸಮಾನ ಎನಿಸಿತು. ರಾತ್ರಿಯ ಊಟವನ್ನು ಅಲ್ಲಿಯೇ ಸೇವಿಸಿ ಬಸ್ ನಲ್ಲಿ ನಿದ್ರೆ ಮಾಡೋಣ ಎಂಬ ಉದ್ದೇಶದಿಂದ ಊಟ ಮಾಡಿ ದೇವಸ್ಥಾನದ ಅರ್ಚಕರಿಗೆ ಧನ್ಯವಾದ ಅರ್ಪಿಸಿ ಮೈಸೂರಿಗೆ  ಹೊರಟಾಗ ಸಂಜೆ ೭.೩೦ ಘಂಟೆ ಆಗಿತ್ತು. ಮೈಸೂರಿಗೆ  ರಾತ್ರಿ ೧೦ ಘಂಟೆಗೆ ತಲಪಿದಾಗ ಎರಡು ದಿನದ ಈ ಚಾರಣ ಕಾರ್ಯಕ್ರಮ ಮುಕ್ತಾಯವಾಯಿತು.


ಅಂತರ್ಜಾಲದಲ್ಲಿ ಕುಮಾರ ಪರ್ವತದ ಚಾರಣದ ಬಗ್ಗೆ ಹುಡುಕಿದರೆ ಹಲವಾರು ಮಾಹಿತಿ ಲಭ್ಯವಾಗುತ್ತದೆ. ಇದು ಕರ್ಣಾಟಕದಲ್ಲಿ ಅತಿ ಕಷ್ಟ ಎಂದು ಗುರುತಿಸಲ್ಪಟ್ಟ ಚಾರಣಗಳಲ್ಲಿ ಒಂದು. ಪ್ರತಿ ಬಾರಿಯ ಚಾರಣ ಕಾರ್ಯದಲ್ಲಿ ಭಾಗವಹಿಸುವ ಮೊದಲು, ಆಯೊಜಕರಿಗೆ ಫೊನಾಯಿಸಿ, ಅದು ಕಷ್ಟದ ಚಾರಣವೇ, ನನ್ನಿಂದ ಸಾಧ್ಯವೇ ಎಂದು ಕೇಳಿ, ಅವರು ಶಿಫಾರಸ್ ಮಾಡಿದರೆ ಮಾತ್ರ ನನ್ನ ಹೆಸರು ನೋಂದಾಯಿಸುವ ಪದ್ಧತಿ ನನ್ನದು. ಈ ಬಾರಿಯೂ ಗೋಪಕ್ಕ ಅವರ ಸಲಹೆ ಪಡೆದಿದ್ದೆ. "ಕಷ್ಟ ಇದೆ, ಆದರೆ ನಿಮಗೆ ಆಗುತ್ತೆ ಬಿಡಿ, ಯೋಚನೆಯಿಲ್ಲದೆ ಬನ್ನಿ" ಎಂದಿದ್ದರು. ಆದರೆ ಜಿಗಣೆ ಹಾಗೂ ಬಂಡೆಗಳ ವಿಚಾರ ಹೇಳಿರಲಿಲ್ಲ. ಈ ಮಾಹಿತಿ ಮೊದಲೇ ಗೊತ್ತಿದ್ದರೆ, ಬಹುಶ: ಈ ಚಾರಣಕ್ಕೆ ನಾನು ಹೆಸರು ನೋಂದಾಯಿಸುತ್ತಿರಲಿಲ್ಲ. ಈಗ ಹೋಗಿ ಬಂದ ಮೇಲೆ ತಂಡದ ಎಲ್ಲರಿಗೂ  'ಜೈ ಹೋ'!

6 comments:

  1. ಒಳ್ಳೆಯ ಚಾರಣ, ಸಚಿತ್ರ ಬರಹ :)

    ReplyDelete
  2. ಇನ್ನೊಂದು ಹದಿನೈದು ದಿನದಲ್ಲಿ ಎಲ್ಲಿಗಾದರೂ ಒಂದು ಚಾರಣಕ್ಕೆ ಹೋಗಲೇಬೇಕು!!!

    ReplyDelete
    Replies
    1. Thanks.If you are planning a trek to Kumara Parvata, please start before monsoon. There will be too many leaches in the forest, once rain starts!

      Delete
  3. naavu subramanya da kadeyinda chaarana maadiddevu.

    ReplyDelete
  4. ಸುಬ್ರಹ್ಮಣ್ಯದ ಕಡೆಯಿಂದ ಚಾರಣ ಕೈಗೊಂಡರೆ ಹೆಚ್ಚು ಸೊಗಸು ಇರುವುದು ಎಂದು ಕೇಳಿದ್ದೆ.

    ReplyDelete