ಮೇ ೨೫ ರಂದು, ರಾತ್ರಿ ೮ ಗಂಟೆಗೆ ವೈ.ಎಚ್.ಎ.ಐ ಗಂಗೋತ್ರಿ ಘಟಕದ ೨೩ ಮಂದಿ ಮೈಸೂರಿನ ರೈಲ್ವೇ ಸ್ಟೇಷನ್ ನಲ್ಲಿ ಸೇರಿದ್ದೆವು. ನೆರೆಯ ತಮಿಳುನಾಡಿನ ಅರಕ್ಕೋಣಂ ಸಮೀಪದಲ್ಲಿರುವ ಶೋಲಿಂಗೂರ್ ಹಾಗೂ ತಿರುತ್ತನಿಯ ಬೆಟ್ಟಗಳಿಗೆ ಚಾರಣ ಮಾಡುವುದು ನಮ್ಮ ಗುರಿಯಾಗಿತ್ತು.
ಮರುದಿನ ಮಂಜಾನೆ, ಅರಕ್ಕೋಣಂ ತಲಪಿದೆವು. ಅಲ್ಲಿನ ರೈಲ್ವೇ ಸ್ಟೆಷನ್ ನಿಂದ ಒಂದು ವ್ಯಾನ್ ನಲ್ಲಿ ಪ್ರಯಾಣಿಸಿ, ಸ್ವಲ್ಪ ದೂರದಲ್ಲಿದ್ದ ಕಲ್ಯಾಣಮಂಟಪವೊಂದರಲ್ಲಿ ವಿಶ್ರಾಂತಿ ಪಡೆದೆವು. ಅಲ್ಲಿ ಸ್ನಾನ ಮುಗಿಸಿ,ಪಕ್ಕದ ಹೋಟೆಲ್ ಒಂದರಲ್ಲಿ ಬೆಳಗಿನ ಉಪಾಹಾರ ಸೇವಿಸಿ ಎದುರುಗಡೆ ಕಾಣಿಸುತ್ತಿದ್ದ ಶೋಲಿಂಗೂರ್ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದೆವು. ದಂತಕಥೆಯ ಪ್ರಕಾರ, ಚೋಳ ರಾಜನಿಗೆ ಇಲ್ಲಿ ಶಿವಲಿಂಗ ದೊರಕಿತಂತೆ. ಇದು ಮುಂದೆ ಆಡುಭಾಷೆಯಲ್ಲಿ 'ಶೋಲಿಂಗೂರ್' ಎಂದು ಕರೆಯಲ್ಪಟ್ಟಿತು. ೧೭೮೧ ರಲ್ಲಿ ಬ್ರಿಟಿಷ್ ಮತ್ತು ಹೈದರ್ ಆಲಿ ನಡುವೆ ಇಲ್ಲಿ ನಡೆದ ಯುದ್ಧ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.
ಸ್ಥಳ ಪುರಾಣದ ಪ್ರಕಾರ, ವಿಶ್ವಾಮಿತ್ರರು ಈ ಸ್ಥಳದಲ್ಲಿ ವಿಷ್ಣುವನ್ನು ನೆನೆದು ಅರ್ಧ ಗಂಟೆಗಳ (ಕಟಿಕೈ) ಕಾಲ ತಪಸ್ಸು ಮಾಡಿ ಬ್ರಹ್ಮರ್ಷಿ ಪದವಿ ಗಳಿಸಿದರಂತೆ. ಹಾಗಾಗಿ ಈ ಸ್ಥಳಕ್ಕೆ ಘಟಿಕಾಚಲ ( ಕಟಿಕಾಚಲಂ)ಎಂಬ ಹೆಸರೂ ಇದೆ.ಇಲ್ಲಿ ಕೇವಲ ಅರ್ಧ ಗಂಟೆ ಕಾಲ ಕಳೆದರೆ ಜನನ-ಮರ್‍ಅಣದ ವರ್ತುಲದಿಂದ ಹೊರಬಂದು ಮೋಕ್ಷ ಲಭಿಸಿತ್ತದೆಯೆಂಬ ನಂಬಿಕೆ. ಮಾನಸಿಕ ವಿಕಲತೆ ಉಳ್ಳವರಿಗೂ ಈ ಕ್ಷೇತ್ರದಲ್ಲಿ ಗುಣಮುಖವಾಗುತ್ತದೆಯೆಂಬ ನಂಬಿಕೆಯೂ ಇದೆ. ರಾಜನೊಬ್ಬ ಬೇಟೆಯಾಡುತ್ತಿರುವಾಗ ಗಾಯಗೊಂಡ ಜಿಂಕೆಯು ದೈವಿಕ ಪ್ರಕಾಶ ಹೊಮ್ಮಿಸುವುದನ್ನು ಕಂಡನಂತೆ. ಇದು ಆತನು ಅಹಿಂಸಾ ಪಥವನ್ನು ಅನುಸರಿಸುವಂತೆ ಮಾರ್ಗದರ್ಶನ ಮಾಡಿತಂತೆ. ಸಾಕ್ಷಾತ್ ಆಂಜನೇಯನೇ ಜಿಂಕೆಯ ರೂಪದಲ್ಲಿ ಬಂದಿದ್ದನಂತೆ.
ಇನ್ನೊಂದು ದಂತಕಥೆಯ ಪ್ರಕಾರ, ಶ್ರೀರಾಮನು ತನ್ನ ಅವತಾರ ಸಮಾಪ್ತಿ ಮಾಡಲೆಂದು ಇಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ಆಂಜನೇಯನೂ ಅನುಸರಿಸಿದ್ದನಂತೆ. ಆದರೆ ಇಲ್ಲಿಗೆ ಬಂದ ಶ್ರೀರಾಮನಿಗೆ, ತಪಸ್ಸನ್ನು ಮಾಡುತ್ತಿರುವ ಸಪ್ತರ್ಷಿಗಳಿಗೆ ರಾಕ್ಷಸರು ಉಪಟಳ ಕೊಡುತ್ತಿರುವುದು ಕಾಣಿಸಿತು. ಆತನ ಆದೇಶದಂತೆ ಆಂಜನೇಯನು ರಾಕ್ಷಸರನ್ನು ಸಂಹರಿಸಿದನು. ಶ್ರೀರಾಮನು, ಸಪ್ತರ್ಷಿಗಳಿಗೆ ನರಸಿಂಹಾವತಾರದಲ್ಲಿ ದರ್ಶನ ಕೊಟ್ಟನು. ಪಕ್ಕದ ಬೆಟ್ಟದಲ್ಲಿ, ಆಂಜನೇಯನು ಶಂಖ-ಚಕ್ರ ಧಾರಿಯಾಗಿ ನೆಲೆ ನಿಂತನು.
ಸುಮಾರು ೧೩೦೦ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೊದಾಗ ಮುಖ್ಯ ದೇವರಾದ ಯೋಗನರಸಿಂಹನ ದರ್ಶನವಾಗುತ್ತದೆ. ಭಕ್ತರಿಗೆ ಮಳೆ-ಬಿಸಿಲಿನಿಂದಾಗಿ ತೊಂದರೆಯಾಗದಂತೆ ಮೆಟ್ಟಿಲುಗಳ ಮೇಲೆ ಮಾಡು ನಿರ್ಮಿಸಿದ್ದಾರೆ. ಮೈಸೂರಿನಿಂದ ಹೊರಡುವ ಮುನ್ನವೆ ಆಯೋಜಕರು 'ಮೆಟ್ಟಿಲುಗೊಂದರಂತೆ ಕೋತಿಗಳಿವೆ, ನೀರಿನ ಬಾಟಲ್ ಬಿಟ್ಟು ಬೇರೇನೂ ಒಯ್ಯಬೇಡಿ' ಎಂದು ನಮ್ಮನ್ನು ಎಚ್ಚರಿಸಿದ್ದರು. ಇದರ ಪ್ರತ್ಯಕ್ಷ ಅನುಭವ ನಮಗಾಯಿತು. ಇದ್ದಕ್ಕಿಂದಂತೆ ಯಾರೋ ಭಯದಿಂದ ಕಿರುಚಿದರು, ಯಾಕೆಂದರೆ ಅವರ ಮುಡಿಯಲ್ಲಿದ್ದ ಹೂವನ್ನು ಕೋತಿಯೊಂದು ಎಳೆದು ತಿನ್ನುತ್ತಿತ್ತು... ಭಕ್ತರೊಬ್ಬರು ದೇವರಿಗೆ ಅರ್ಪಿಸಲೆಂದು ತಂದಿದ್ದ ಹೂವು-ಹಣ್ಣು ದಾರಿ ಮಧ್ಯದಲ್ಲಿಯೇ ಆಂಜನೇಯ ಸ್ವಾಹಾ ಅಯಿತು...ಯಾರೋ ಕೈ ಜಗ್ಗಿದಂತಾಗಿ ಹಿಂದೆ ನೋಡುವಷ್ಟರಲ್ಲಿ ನೀರಿನ ಬಾಟಲಿಯೂ ಕಪಿ ಪಾಲಾಯಿತು.... ಯಾರೋ ತಂದಿದ್ದ ತುಳಸಿ ಹಾರವೂ ವಾನರ ಪಾಲಾಯಿತು ....ನೀರಿನ ಬಾಟಲಿ ಮುಚ್ಚಳವನ್ನು ತೆರೆದ ಜಾಣಕೋತಿಗೆ ಅದೇಕೋ ನೀರು ಕುಡಿಯಲು ಇನ್ನೂ ಅಭ್ಯಾಸವಿದ್ದಂತಿರಲಿಲ್ಲ..... ಹೀಗೆಲ್ಲಾ ನಮಗೆ ಪುಕ್ಕಟೆ ಭಯ ಮಿಶ್ರಿತ ಮನರಂಜನೆ ಲಭಿಸಿತು.
.
ವಾನರಸೈನ್ಯವನ್ನು ನಿಯಂತ್ರಿಸಲು ಬೆಟ್ಟದ ಪಾದದಲ್ಲಿ ಕೋಲು ಮಾರುವವರೂ ಇದ್ದರು. ಕೆಲವು ಭಕ್ತರು ಪೂಜೆಗಾಗಿ ಹೂವು -ಹಣ್ಣು ತಂದು, ಅವನ್ನು ಕೋತಿಯಿಂದ ರಕ್ಷಿಸಲೆಂದು ಅನಿವಾರ್ಯವಾಗಿ ಕೋಲು ಹಿಡಿದುಕೊಂಡೇ ದೇವರ ದರ್ಶನವನ್ನೂ ಮಾಡುತ್ತಿದ್ದುದು ತಮಾಷೆಯಾಗಿ ಕಾಣಿಸುತ್ತಿತ್ತು.
ಸಾರ್ವಜನಿಕ ಸಾರಿಗೆಯ ಮೂಲಕ ನೆರೆ ರಾಜ್ಯ ಪ್ರವೇಶಿಸಿ, ಒಂದೇ ಹಗಲಿನಲ್ಲಿ ಎರಡು ಬೆಟ್ಟಗಳನ್ನು ಹತ್ತಿ-ಇಳಿದು,ಒಟ್ಟಾರೆಯಾಗಿ ೫ ದೇವಸ್ಥಾನಗಳಿಗೆ ಭೇಟಿ ಕೊಟ್ಟ ಸಂಪನ್ನ ಕಾರ್ಯಕ್ರಮ ಇದು.
No comments:
Post a Comment