Total Pageviews

Thursday, August 29, 2013

ಕೊಳ್ಳೇಗಾಲಕ್ಕೆ ಲಗ್ಗೆ...

ಭಾನುವಾರದಂದು, ಮೈಸೂರು ನಗರ ಇನ್ನೂ ಸಕ್ಕರೆ ನಿದ್ದೆಯಲ್ಲಿರುವ ಮುಂಜಾನೆಯ ಸಮಯದಲ್ಲಿ, ಸುಮಾರು ಮಂದಿ ಸಮಾನಾಸಕ್ತರು , ಬೆನ್ನಿಗೊಂದು ಬ್ಯಾಗ್ ತಗಲಿಸಿಕೊಂದು ಬಸ್ ನಿಲ್ದಾಣದಲ್ಲಿಯೋ ರೈಲ್ವೇ ನಿಲ್ದಾಣದಲ್ಲಿಯೋ ಹಾಜರಾಗಿದ್ದರೆಂದರೆ, ಅವರು ಮೈಸೂರಿನ  ಯೈ.ಎಚ್.ಎ.ಐ. ಘಟಕದವರು ಎಂದು ಸಾಬೀತಾಗುತ್ತದೆ. ಹೀಗೆ ಜುಲೈ ೨೧ರಂದು ಬೆಳಗ್ಗೆ ೦೫೩೦ ಗಂಟೆಗೆ ಮೈಸೂರಿನ ಖಾಸಗಿ ಬಸ್ ಸ್ಟ್ಯಾಂಡ್ ನಲ್ಲಿ  ಸುಮಾರು ೩೦ ಮಂದಿ ಜಮಾಯಿಸಿದ್ದೆವು. ತಂಡದ ನಾಯಕರ ಸಲಹೆಯಂತೆ, ಕೊಳ್ಳೇಗಾಲಕ್ಕೆ ಹೋಗುವ ಬಸ್ ಏರಿದೆವು. ಅಂದು ಕೊಳ್ಳೇಗಾಲ ಸಮೀಪದಲ್ಲಿರುವ ಸಿದ್ದೇಶ್ವರ ಬೆಟ್ಟ, ರಂಗಪ್ಪನ ಪಾದ ಮತ್ತು ವೀರಭದ್ರ ಸ್ವಾಮಿಯ ಬೆಟ್ಟಕ್ಕೆ ಚಾರಣಗೈಯುವ ಕಾರ್ಯಕ್ರಮವಿತ್ತು.    

ಸುಮಾರು ೭.೩೦ ಗಂಟೆಗೆ ಕೊಳ್ಳೇಗಾಲ ತಲಪಿದೆವು. ಅಲ್ಲಿ ಹೋಟೆಲ್ ನಲ್ಲಿ ಬೆಳಗಿನ ಉಪಾಹಾರ ಸೇವಿಸಿದೆವು. ಚಿಕ್ಕ ವ್ಯಾನ್ ನಂತಿದ್ದ  ಮೂರು ಆಟೋ ರಿಕ್ಷಾ ಗಳಲ್ಲಿ ಕುಳಿತು ೩-೪ ಕಿ.ಮೀ ಗಳಷ್ಟು ಪ್ರಯಾಣಿಸಿ, ಹೊಂಡರಬಾಳು ಎಂಬಲ್ಲಿಗೆ ತಲಪಿದೆವು. ಅಲ್ಲಿಂದ ತುಸು ಮುಂದೆ ಸಿದ್ಧೇಶ್ವರ ಬೆಟ್ಟ ಸಿಗುತ್ತದೆ. ಈ ಬೆಟ್ಟಕ್ಕೆ ಕಾಡಾನೆಗಳು ಬರುತ್ತವೆಯೆಂದು ಸುತ್ತಲೂ ವಿದ್ಯುತ್ ಬೇಲಿ ಹಾಕಿದ್ದಾರೆ. ಆ ತಂತಿ ತಲೆಗೆ ಸೋಕದಂತೆ ಜಾಗರೂಕತೆಯಿಂದ ಬೆಟ್ಟದ ಪಾದದ ತಲಪಿದೆವು. ಇಲ್ಲಿ ಒಂದು ಪುಟ್ಟ ಕೊಳವಿದೆ. ಸುಮಾರು ೨೦೦ ಮೆಟ್ಟಿಲುಗಳು ಇದ್ದಿರಬಹುದು. ಆಮೇಲೆ ಸ್ವಲ್ಪ ಕಾಲುದಾರಿಯಲ್ಲಿ ಹೋದಾಗ ಸಿದ್ಧೇಶ್ವರ ಸ್ವಾಮಿಯ ಗುಡಿ ಸಿಗುತ್ತದೆ.





ಅಲ್ಲಿನ ಸ್ಥಳಪುರಾಣದ ಪ್ರಕಾರ ಬಿಳಿಗಿರಿ ರಂಗಸ್ವಾಮಿ ಮತ್ತು ಸಿದ್ದೇಶ್ವರ ಸ್ವಾಮಿ ಈ ಬೆಟ್ಟದಲ್ಲಿ ವಾಸವಿದ್ದರು. ರಂಗಸ್ವಾಮಿಯು ಪೂಜೆಗೆ ಬಳಸುತ್ತಿದ್ದ ಶಂಖ-ಜಾಗಟೆಗಳ ಸದ್ದಿನಿಂದ ಸಿದ್ದೇಶ್ವರ ಸ್ವಾಮಿಯ ತಪಸ್ಸಿಗೆ ತೊಂದರೆಯಾಗುತ್ತಿತ್ತು ಎಂಬ ಹಿನ್ನೆಲೆಯಲ್ಲಿ ಅವರು ಒಂದು ಒಪ್ಪಂದಕ್ಕೆ ಬಂದು, ಇಬ್ಬರೂ ಬೆಟ್ಟ ತೊರೆದು ಹೋಗುವುದೆಂದು ನಿರ್ಧರಿಸಿದರು. ಅದರಂತೆಯೇ , ರಂಗಸ್ವಾಮಿಯು ಬೆಟ್ಟವನ್ನು ತೊರೆದು ಬಿಳಿಗಿರಿ ರಂಗನ ಬೆಟ್ಟದಲ್ಲಿ ನೆಲೆಯಾದನು. ಆತನು ಹೋಗುವ ಮೊದಲು ಕಾಲೂರಿದ ಜಾಗವೇ 'ರಂಗಪ್ಪನ ಪಾದ' ಎಂಬ ಸ್ಥಳ. ಆದರೆ ಮಾತಿಗೆ ತಪ್ಪಿದ ಸಿದ್ದೇಶ್ವರನು ಪುನ: ಬೆಟ್ಟಕ್ಕೆ ಬಂದು ತಪಸ್ಸನ್ನಾಚರಿಸಿದನು. ಅಲ್ಲಿನ ಒಂದು ನಂಬಿಕೆಯ ಪ್ರಕಾರ 'ದೆವ್ವ ಹಿಡಿದವರು' ಪೂಜೆ ಸಲ್ಲಿಸಿ ಒಂದು ವಿಶಿಷ್ಟ ಕಲ್ಲಿನ ಮೂಲಕ ನುಸುಳಿದರೆ ಮುಂದೆ ದೆವ್ವ ಕಾಡುವುದಿಲ್ಲವಂತೆ.




ಸಿದ್ದೇಶ್ವರ ಬೆಟ್ಟ ಮತ್ತು  ರಂಗಪ್ಪನ ಪಾದ ನೋಡಿ ಕೆಳಗಿದೆವು.

ಊಟದ ನಂತರ ಸನಿಹದ ವೀರಭದ್ರೇಶ್ವರ ಬೆಟ್ಟ ಹತ್ತಿದೆವು. ಸ್ವಲ್ಪ ಕಾಲುದಾರಿ. ಕೆಲವು ಮೆಟ್ಟಿಲುಗಳಿದ್ದ ಈ ಬೆಟ್ಟ ಹತ್ತಲು ಸುಮಾರು ಒಂದು ಘಂಟೆ ಕಾಲ ಬೇಕಾಯಿತು.ಬೆಟ್ಟ ಹತ್ತಿಯಾದ ಮೇಲೆ ಇರುವ ದೇವಾಲಯದ ಪಕ್ಕ ಒಂದೆಡೆ ಕುಳಿತು ವಿಶ್ರಮಿಸಿದೆವು.  ಅದುವರೆಗೆ ಸುಮ್ಮನಿದ್ದ ವರುಣ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಮಳೆ ಸುರಿಸಿದ. ದೇವಾಲಯದ ಒಳಗೆ ಸೇರಿದೆವು. ದರ್ಶನ, ಪೂಜೆ, ಪ್ರಸಾದ ವಿನಿಯೋಗವಾಗುವಷ್ಟರಲ್ಲಿ ಮಳೆಯ ಅಬ್ಬರ ಕಡಿಮೆಯಾಗಿತ್ತು. ಅಲ್ಲಿನ ಅರ್ಚಕರು ಸಂಜೆ ನಾಲ್ಕು ಘಂಟೆಯ ನಂತರ ಬೆಟ್ಟದಲ್ಲಿ ಯಾರೂ ಇರಕೂಡದು, ಆನೆಗಳು ಬರುತ್ತವೆ ಎಂದು ಎಚ್ಚರಿಸಿದರು.

ಹಾಗಾಗಿ ರೈನ್ ಕೋಟ್ ಹಾಕಿಕೊಂಡು ಬೆಟ್ಟ ಇಳಿಯಲಾರಂಭಿಸಿದೆವು.  ಮಳೆ ಬಂದ ಕಾರಣ ಶೂ ಗಳಿಗೆ ಕೆಸರು ಮಣ್ಣು ಮೆತ್ತಿಕೊಂಡು ಜಾರಿ ಬೀಳುವಂತಾಗುತ್ತಿತ್ತು. ಬೆಟ್ಟ ಇಳಿದು, ಕೊಳ್ಳೇಗಾಲ ಮಾರ್ಗವಾಗಿ ಮೈಸೂರಿಗೆ ಹಿಂತಿರುಗಿವಷ್ಠರಲ್ಲಿ ಸಂಡೇ ಇಸ್ ಒವರ್!

Monday, August 26, 2013

'ನವಿಲಾಡಿ' ಎಂದರೇನು? .

ಮೈಸೂರಿನಿಂದ ೮೦ ಕಿ.ಮೀ ದೂರದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನವಿದೆ. ಇದು ಸಂರಕ್ಷಿತ ಹುಲಿಧಾಮವೂ ಹೌದು. ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ವನ್ಯಜಗತ್ತಿನ ಬಗ್ಗೆ ಅರಿವು  ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಆಸಕ್ತರು ಭಾಗವಹಿಸಬಹುದು. ಒಂದು ದಿನದ ಈ ಕಾರ್ಯಕ್ರಮದಲ್ಲಿ ಹುಲಿಯ ಬಗ್ಗೆ  ಉಪನ್ಯಾಸ, ಜೀಪಿನಲ್ಲಿ ಕಾಡೊಳಗೆ ಸುತ್ತು ಹಾಕಿ ಪ್ರಾಣಿಗಳ ವೀಕ್ಷಣೆ, ಪರಿಣಿತರ ಮಾರ್ಗದರ್ಶನದೊಂದಿಗೆ ಕಾಡೊಳಗೆ  ನಡಿಗೆ ಹಾಗೂ ವನ್ಯಜೀವಿಗಳ ಬಗ್ಗೆ ಸಾಕ್ಶ್ಯಚಿತ್ರ ವೀಕ್ಷಣೆಗೆ ಅವಕಾಶವಿರುತ್ತದೆ. ಮುಂಚಿತವಾಗಿ ಕಾಯ್ದಿರಿಸಿದರೆ  ಊಟ-ವಸತಿ ವ್ಯವಸ್ಥೆಯನ್ನೂ ಒದಗಿಸುತ್ತಾರೆ.

ಹೀಗೆ, ಮೊನ್ನೆ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಿಣಿತರ ಜತೆಗೆ ನಡೆಯುತ್ತಿರುವಾಗ ಅವರು ಪರಿಚಯಿಸಿದ 'ನವಿಲಾಡಿ' ಎಂಬ ವಿಶಿಷ್ಟ ಹಾಗೂ ಸೊಗಸಾದ ಹೆಸರು ಹೊತ್ತಿರುವ ಮರ ಇದು. ಈ ಮರದ ಸಸ್ಯಶಾಸ್ತ್ರೀಯ ಹೆಸರು  'ವಿಟೆಕ್ಸ್ ಅಲ್ಟಿಸ್ಸಿಮ'. ಮೂರು ಎಲೆಗಳು ಸೇರಿ ನವಿಲಿನ ಪಾದವನ್ನು ಹೋಲುವ ಸಂಯುಕ್ತ ಎಲೆ ಇರುವುದರಿಂದ ಈ ಪ್ರಭೇದದ ಮರಕ್ಕೆ 'ನವಿಲಾಡಿ' ಎಂಬ ಸೊಗಸಾದ ಕನ್ನಡದ ಹೆಸರಿಟ್ಟಿದ್ದಾರೆ!



                                                  








                                               


ಸುಮಾರು ಮಧ್ಯಮ ಗಾತ್ರಕ್ಕೆ ೨೫-೩೦ ಮೀ ಎತ್ತರಕ್ಕೆ ಬೆಳೆಯುವ  ಈ ಮರವು ಔಷಧೀಯ ಗುಣಗಳನ್ನು ಹೊಂದಿದೆ.   ಬಲಿತ ಮರವು ಪೀಠೋಪಕರಣಗಳ ತಯಾರಿಗೂ  ಬಳಕೆಯಾಗುತ್ತದೆ.  

Friday, August 16, 2013

ಬಂಡೆಯಾ ಕೆಳಗಿನ ಮನೆಗಳು ...


ಇತ್ತೀಚೆಗೆ  ಕೊಳ್ಳೇಗಾಲ   ಸಮೀಪದ  ಸಿದ್ಧೇಶ್ವರ ಬೆಟ್ಟಕ್ಕೆ  ಹೋಗಿದ್ದಾಗ  ಕಾಣಸಿಕ್ಕಿದ  ಬಂಡೆಯ  ಮನೆಗಳಿವು.
ಈ ಮನೆಗಳಲ್ಲಿ ಜನವಸತಿಯಿಲ್ಲ .