Total Pageviews

Friday, November 1, 2013

ಥ್ಯಾಂಕ್ಯೂ ಗ್ಯಾಂಗ್ ಮೆನ್!

ಇದುವರೆಗೆ ಹಲವು ಬಾರಿ ರೈಲ್ ನಲ್ಲಿ ಪ್ರಯಾಣಿಸಿದ್ದೇನೆ. ಆದರೆ ಎಂದೂ ರೈಲ್ ಹಳಿ ಮೇಲೆ ನಡೆದಿದ್ದಿಲ್ಲ. ರೈಲ್ ಹಳಿ ಮೇಲೆ ನಡೆಯುವುದು  ಅಪರಾಧ ಕೂಡ ಹೌದು. ಆದರೆ ಕೆಲವು ನಿಗದಿತ ಟ್ರ್ಯಾಕ್ ಗಳಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಪೂರ್ವಾನುಮತಿಯೊಂದಿಗೆ ನಡೆಯುವುದಕ್ಕೆ ಅವಕಾಶವಿದೆ. ಗೋವಾದ 'ಕಾಸಲ್ ರೋಕ್' ನಿಂದ 'ದೂಧ್ ಸಾಗರ್'  ವರೆಗಿನ ೧೪ ಕಿ. ಮಿ ದೂರದ ರೈಲ್ ವೇ ಟ್ರ್ಯಾಕ್ ಇಂತಹ ಚಾರಣಕ್ಕೆ ಅವಕಾಶ ಒದಗಿಸುವ ತಾಣ.

ದೂಧ್ ಸಾಗರ್ ನಲ್ಲಿ ಮಾಂಡೋವಿ ನದಿಯು ಸೃಷ್ಟಿಸಿರುವ ಸೊಗಸಾದ ಜಲಪಾತವಿದೆ. ಇದನ್ನು ವೀಕ್ಷಿಸಲು ಹಲವಾರು ಪ್ರವಾಸಿಗರು ಈ ರೈಲ್ ಮಾರ್ಗದಲ್ಲಿ ಬರುತ್ತಾರೆ.

ಹಸಿರು ಕಾಡಿನ  ಮಧ್ಯೆ ಹಾದು ಹೋಗಿರುವ ಈ ರೈಲ್ ಮಾರ್ಗದಲ್ಲಿ ಹಳಿಯುದ್ದಕ್ಕೂ ಹಲವಾರು ಸುರಂಗಗಳು ಎದುರಾಗುತ್ತವೆ. ರೈಲ್ ಹಳಿ ಮೇಲೆ ನಡೆಯುವುದು ಎಷ್ಟು ಕಷ್ಟ ಎಂದು ೧-೨ ಕಿ.ಮಿ. ನಡೆದಾಗ ಅರ್ಥವಾಯಿತು. ಜಲ್ಲಿ ಕಲ್ಲುಗಳ ಮೇಲೆ   ಕಾಲು ಉಳುಕದಂತೆ ಜಾಗರೂಕತೆ ವಹಿಸಬೇಕು. ಸಮಾನ ಅಂತರದಲ್ಲಿರುವ ರೈಲ್ ಪಟ್ಟಿಯ ಮೇಲೆ ನಡೆಯುವಾಗ ಒಂದು ಲಯ/ಗತಿ  ಬೇಕು. ಜತೆಗೆ ರೈಲ್ ಪಟ್ಟಿಯಲ್ಲಿ ಇರುವ ಕೊಳಕು ಪಾದಕ್ಕೆ ಹತ್ತದಂತೆ ಗಮನ ಹರಿಸುತ್ತಲೇ ಇರಬೇಕು!

ಹೀಗೆ ನಡೆಯುತ್ತಾ ಮುಂದೆ ಹೋದಂತೆ ಕೆಲವು  ಟ್ರೈನ್ ಗಳು ಎದುರಾದುವು.  ಹಳಿಯಲ್ಲಿ ಅಲ್ಲಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ಯಾಂಗ್ ಮೆನ್ ಕಾಣಸಿಕ್ಕಿದರು. ಕೆಲವರನ್ನು ಮಾತಿಗೆಳೆದಾಗ, ಅವರ ಕೆಲಸ ತುಂಬಾ ತ್ರಾಸದಾಯಕವಾದದ್ದು ಎಂದು ಅನಿಸಿತು. ಅವರು ಬಿಸಿಲಿರಲಿ, ಮಳೆಯಿರಲಿ, ಸಾಮಾನ್ಯವಾಗಿ ನಿರ್ಜನವಾದ ರೈಲ್ ಹಳಿಯ ಮೇಲೆ, ಭಾರವಾದ ಸುತ್ತಿಗೆಯಂತಹ ಉಪಕರಣ ಹೊತ್ತುಕೊಂಡು, ೮ ಕಿ. ಮೀ ದೂರ ಹಳಿಯನ್ನು ಪರಿಶೀಲಿಸುತ್ತಾ ನಡೆಯಬೇಕು. ಏನಾದರೂ ಲೋಪ-ದೋಷ ವಿದ್ದರೆ ತತ್ಕ್ಷಣ ಸರಿಪಡಿಸಬೇಕು.



ಚುಕ್-ಪುಕ್ ರೈಲ್ ನಲ್ಲಿ ಆರಾಮವಾಗಿ ಪ್ರಯಾಣಿಸುವ ನಮ್ಮ ಸುರಕ್ಷತೆಯ ಹಿಂದೆ  ಈ ಬಡ ಗ್ಯಾಂಗ್ ಮೆನ್ ಗಳ ಕಠಿಣ ಶ್ರಮವಿರುತ್ತದೆಯೆಂದು ಈಗ ತಾನೇ ಅರಿವಾಯಿತು. ಅವರಿಗೆಲ್ಲಾ ತುಂಬಾ ಥ್ಯಾಂಕ್ಸ್!







1 comment:

  1. ಆ ದಾರಿಯಲ್ಲಿ ಸಾಗಬೇಕೆಂಬ ಬಯಕೆೆ.

    ReplyDelete