Total Pageviews

Thursday, January 24, 2013

ಗೋಮಾತೆಗೆ ಬಣ್ಣ ಬಳಿಯಬೇಕೆ?

ಸಂಕ್ರಾಂತಿ ಹಬ್ಬ ಕಳೆಯಿತು.  ಹಬ್ಬದ ಹಲವಾರು ಆಚರಣೆಗಳಲ್ಲಿ  ಗೋ-ಪೂಜೆಯೂ ಒಂದು.  ಜನವರಿ ೧೪ ನೇ    ತಾರೀಕಿನಂದು ಸಂಕ್ರಾಂತಿ ಹಬ್ಬಕ್ಕೆ ಸಿಂಗಾರಗೊಂಡ  ಹಸು ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದರೂ ಇನ್ನೂ ಬಣ್ಣ ಮೆತ್ತಿಕೊಂಡೇ ಇದೆ.

ಬಣ್ಣಬಣ್ಣದ  ಬಟ್ಟೆ ತೊಟ್ಟು   ಸಂಭ್ರಮಿಸುವ ನಾವು,  ಗೋಮಾತೆಗೆ  ಬಣ್ಣ ಬಳಿಯುವುದು  ಎಷ್ಟು ಸರಿ? ಬಣ್ಣಗಳಲ್ಲಿ ಬಳಸಲಾಗುವ  ಸೀಸ, ಕ್ಯಾಡ್ಮಿಯಂ ಇತ್ಯಾದಿಗಳ ಲವಣಗಳು ಚರ್ಮಕ್ಕೆ  ಹಾನಿಕಾರಕ.  ಮನುಷ್ಯರ ಸಂಭ್ರಮಕ್ಕೆ ಮೂಕ  ಪ್ರಾಣಿ   ಎಷ್ಟು ಹಿಂಸೆ ಪಡುತ್ತಿದೆಯೋ?



ಹೇ ...ಕಳ್ಳೀ ...


ಮೊನ್ನೆ ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಏರಿದೆವು. ಅಲ್ಲಿಂದ ಉತ್ತನಹಳ್ಳಿಯ ಕಡೆಗೆ ಬೆಟ್ಟದ ಮಧ್ಯೆ  ಕಾಡಿನ ನಮ್ಮ ನಿಸರ್ಗ ಚಾರಣ. ಉತ್ತನಹಳ್ಳಿಯಲ್ಲಿ  'ತ್ರಿಪುರ ಸುಂದರಿ ಜ್ವಾಲಾಮುಖಿ'ಯ  ದೇವಾಲಯವಿದೆ. ಈಕೆ, ಚಾಮುಂಡೇಶ್ವರಿಯ ತಂಗಿ ಎಂಬ ನಂಬಿಕೆ.

ಕುರುಚಲು ಕಾಡಿನ  ಈ ಚಾರಣದ ದಾರಿಯುದ್ದಕ್ಕೂ ನಮಗೆ ಕಾಣಸಿಕ್ಕಿದುದು ವಿವಿಧ ಪ್ರಭೇದದ 'ಕಳ್ಳಿ'ಯರು!!! ಕೆಂಪು, ಹಳದಿ  ಹೂವಿನಿಂದ ಕಂಗೊಳಿಸುವ ಹೂಗಳ ಜತೆಗೆ ಹಸಿರು-ಕೆಂಪು ಹಣ್ಣುಗಳನ್ನು ಹೊತ್ತಿದ್ದ 'ಕಳ್ಳಿ' ಗಿಡಗಳನ್ನು ಕ್ಯಾ ಮೆರಾದಲ್ಲಿ ಸೆರೆಹಿಡಿದೆವು.



                                  
             
ಕಳ್ಳಿ ಹಣ್ಣು 

                                          

Sunday, October 14, 2012

ಹದಿನಾರು ಮುಖದ ಚಾವಡಿ


ಕಾಲಚಕ್ರವನ್ನು ಸುಮಾರು ೩೫೦ ವರ್ಷ ಹಿಂತಿರುಗಿಸಿ ...

ಹೆಡತಲೆ ಎಂಬೊಂದು ಊರು....ಊರಿಗೊಬ್ಬ ರಾಜ ಭೀಮಣ್ಣ ನಾಯಕ...ಆತನಿಗೊಬ್ಬಳು ರಾಣಿ...ಅವರಿಗೆ ೧೬ ಹೆಣ್ಣು ಮಕ್ಕಳು. ಎಲ್ಲಾ ಹೆಣ್ಣು ಮಕ್ಕಳನ್ನು ಯುಕ್ತ ವಯಸ್ಸಿಗೆ ಮದುವೆ ಮಾಡಿಕೊಟ್ಟು, ಮಗಳಂದಿರು ಹಾಗೂ ಅಳಿಯಂದಿರೊಂದಿಗೆ ಆಗಾಗ್ಗೆ ಕುಶಲೋಪರಿ ನಡೆಸುತ್ತಾ  ಮನೆಮಂದಿಯೆಲ್ಲ ಒಟ್ಟಾಗಿ ಸಂಭ್ರಮಿಸುವ ಆಸೆ ರಾಜನಿಗೆ. ಆಗ ಎದುರಾದದ್ದು ಒಂದು ಸಮಸ್ಯೆ. ರಾಜನಿಗೆ ತನ್ನ ಯಾವ ಮಗಳ ಗಂಡ ಯಾರು ಎಂಬ ಗೊಂದಲವಾಗುತ್ತಿತ್ತಂತೆ. ಮೇಲಾಗಿ, ಆಗಿನ ಕಾಲದ ಪದ್ಧತಿಯಂತೆ, ಅತ್ತೆಯಾದವಳು ತನ್ನ ಅಳಿಯಂದಿರನ್ನು ಮುಖವನ್ನು ನೋಡುವಂತಿಲ್ಲ.

ರಾಜ-ರಾಣಿ, ಎಲ್ಲಾ ಮಗಳಂದಿರು ಮತ್ತು ಅಳಿಯಂದಿರು  ಅಂದರೆ ಒಟ್ಟು ೧+೧+೧೬+೧೬ = ೩೪ ಜನ  ಏಕ ಕಾಲದಲ್ಲಿ ಕೂರುವ ಆಸನ ವ್ಯವಸ್ಥೆಯಿರಬೇಕು,ರಾಜನಿಗೆ ಎಲ್ಲರೂ ಕಾಣಿಸಬೇಕು, ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸಬೇಕು. ಪ್ರತೀ ಹೆಣ್ಣುಮಗಳೂ ತನ್ನ  ಗಂಡನ ಜತೆ ಅನುಕ್ರಮವಾಗಿ ಕೂರಬೇಕು. ಇಂತಹ ಚಾವಡಿಯನ್ನು ವಿನ್ಯಾಸಗೊಳಿಸಬೇಕೆಂದು ರಾಜನು ಸೂಚಿಸಿದಾಗ, ಅಂದಿನ ಹೊಯ್ಸಳ ವಾಸ್ತುಶಿಲ್ಪಿಗಳು ರಚಿಸಿದ  ಅದ್ಭುತ ಸಭಾಂಗಣವೇ 'ಹದಿನಾರು ಮುಖದ ಚಾವಡಿ'. ಈ ಚಾವಡಿಗೆ, ನಾಲ್ಕೂ ಮೂಲೆಗಳಿದ್ದು, ೧೬ ಕಂಭಗಳಿವೆ. ಪ್ರತಿ ಕಂಭಕ್ಕೆ ತಾಗಿಕೊಂಡಂತೆ ಇಬ್ಬರು ಕೂರುವಂತ ಕಲ್ಲಿನ ಸೋಫಾ  ಇದೆ. ಚಾವಡಿಯ ಮಧ್ಯ ಭಾಗದಲ್ಲಿಯೂ ವಿಶೇಷ ಕೆತ್ತನೆಯುಳ್ಳ ಕಂಭಗಳಿವೆ.

ಅಲ್ಲಿನ ಅರ್ಚಕರು ನಮಗೆ ವಿವರಿಸಿದಂತೆ, ರಾಜ ಕೂರುತ್ತಿದ್ದ ಜಾಗದಿಂದ ನೋಡಿದರೆ  ಇಡೀ ಸಭಾಂಗಣ ಕಾಣಿಸುತ್ತದೆ. ರಾಣಿ ಕೂರುತ್ತಿದ್ದ ಜಾಗದಿಂದ ನೋಡಿದರೆ, ಪ್ರತೀ ಸೋಫಾದ   ಅರ್ಧ ಭಾಗ ಕಾಣಿಸುತ್ತದೆ. ಅಂದರೆ ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸುತ್ತಿದ್ದರು ಎಂದಾಯಿತು. ಎಂಥಹಾ ಸೃಜನಶೀಲ ವಾಸ್ತು ವಿನ್ಯಾಸ!

'





ಹದಿನಾರು ಮುಖದ ಚಾವಡಿ' ಇರುವುದು ಹೆಡತಲೆ ಲಕ್ಷ್ಮೀಕಾಂತ ದೇವಾಲಯದಲ್ಲಿ. ಹಿಂದೆ ಇದು ಕೌಂಡಿನ್ಯ ಋಷಿಗಳು ತಪಸ್ಸನ್ನಾಚರಿಸುತ್ತಿದ್ದರಂತೆ. ಅಸುರನೊಬ್ಬ ಅವರಿಗೆ ಕಿರುಕುಳ ಕೊಡುತ್ತಿದ್ದ ಕಾರಣ ಅವರು ಲಕ್ಷ್ಮೀಕಾಂತ ಸ್ವಾಮಿಯ ಮೊರೆ ಹೊಕ್ಕರಂತೆ. ಅಸುರ ನಿಗ್ರಹವಾಗಿ ಆತನ ತಲೆ ಎಡಭಾಗಕ್ಕೆ ಬಿತ್ತಂತೆ. ಹೀಗಾಗಿ ಊರಿಗೆ ಎಡತಲೆ ಎಂಬ ಹೆಸರಾಯಿತು, ಕಾಲಾಂತರದಲ್ಲಿ ಅದು  'ಹೆಡತಲೆ' ಆಯಿತು. ಅಸುರನ ಹೆಮ್ಮರದಂತಹ ಕಾಲು ಬಿದ್ದ ಜಾಗ 'ಹೆಮ್ಮರಗಾಲ'ವಾಯಿತು. ಹೆಮ್ಮರಗಾಲ ಎಂಬ ಊರು ಹೆಡತಲೆಯಿಂದ ೧-೨ ಕಿ.ಮಿ ದೂರದಲ್ಲಿದೆ. ಅಲ್ಲಿಯೂ ಕೌಂಡಿನ್ಯರಿಂದ ಸ್ಥಾಪಿತವಾದ ಸಂತಾನ ಗೋಪಾಲಸ್ವಾಮಿಯ ದೇವಾಲಯವಿದೆ. ಹೀಗಿದೆ ಸ್ಥಳಪುರಾಣ ಅಥವಾ ದಂತಕಥೆ.

ಇಲ್ಲಿ ಅಚ್ಚುಕಟ್ಟಾದ, ೩ ಗರ್ಭಗುಡಿಯನ್ನು ಹೊಂದಿದ ದೇವಾಲಯವಿದೆ. ಹಾಗಾಗಿ ಇದಕ್ಕೆ ತ್ರಿಕುಟಾಚಲವೆಂಬ ಹೆಸರೂ ಇದೆ. ಇಲ್ಲಿನ  ಆಂಡಾಳ್ ಅಮ್ಮನವರ ವಿಗ್ರಹದ ಶಿಲ್ಪ ತುಂಬಾ ಸೊಗಸಾಗಿದೆ. ಅರ್ಚಕರು ವಿವರಿಸುವಂತೆ,ದೀಪ ಆರತಿಯ ತಟ್ಟೆಯನ್ನು ಅಮ್ಮನವರ ಹಣೆಯಿಂದ ಕೆಳಗೆ ನಿಧಾನವಾಗಿ ಸರಿಸಿದಾಗ, ಮೂರ್ತಿಯ ಕಣ್ಣುಗಳು ತುಂಬಾ ಕಾಂತಿಯುತವಾಗಿ, ನೈಜವಾಗಿ   ಕಾಣಿಸುತ್ತವೆ.  

ಹೊಯ್ಸಳರ ಕಾಲದಲ್ಲಿ ಅದೆಷ್ಟು ಚಿಕ್ಕ-ದೊಡ್ಡ ದೇವಾಲಯಗಳನ್ನು ಕಟ್ಟಿದ್ದರೋ? ಪ್ರಖ್ಯಾತವಾದ ಕೆಲವು ದೇವಸ್ಥಾನಗಳನ್ನು  ಬಿಟ್ಟರೆ, ಇಂಥಹ ವಿಶಿಷ್ಟ ದೇವಾಲಯಗಳ ಬಗ್ಗೆ ಲಭ್ಯವಿರುವ  ಮಾಹಿತಿ ಕಡಿಮೆ.

ಹೆಡತಲೆಗೆ ಹೋಗುವ ದಾರಿ:


ಮೈಸೂರಿನಿಂದ ಹೊರಟು ನಂಜನಗೂಡು ದಾರಿಯಾಗಿ, ಚಾಮರಾಜನಗರದ ಕಡೆಗೆ ಬಸ್ ಅಥವಾ ರೈಲ್ ನಲ್ಲಿ ಪ್ರಯಾಣಿಸಿ, ಬದನವಾಳು ಎಂಬಲ್ಲಿ ಇಳಿಯಬೇಕು.  ಅಲ್ಲಿಂದ ಸುಮಾರು ೫ ಕಿ.ಮಿ. ದೂರದ ಹಳ್ಳಿ ರಸ್ತೆಯಲ್ಲಿ ಸಾಗಬೇಕು.  ಕಾರಿನಲ್ಲೂ ಹೋಗಬಹುದು.

Saturday, October 6, 2012

ದಂಡ ದರ್ಶನಂ ಪಾಪ ನಾಶನಂ,ದಂಡ ಸ್ಪರ್ಶನಂ ಪುಣ್ಯ ವರ್ಧನಂ



ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿ, ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯವಿದೆ. ಇಲ್ಲಿ ಹಿಂದೆ ಕೌಂಡಿನ್ಯ ಮಹರ್ಷಿಯು ತಪಸ್ಸು ಮಾಡುತ್ತಿದ್ದರಂತೆ.

ಈ ದೇವಾಲಯದ ಚರಿತ್ರೆ ಹೀಗಿದೆ. ಬಹಳ ಹಿಂದೆ ಅಲ್ಲಿ ರಾಜ್ಯವಾಳುತ್ತಿದ್ದ  ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ  ಸ್ವಪ್ನದಲ್ಲಿ ಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ ಚಕ್ರ ಮುರಿದು ಬೀಳುವುದೆಂದೂ, ಆ ಸ್ಥಳದಲ್ಲಿ  ಅಗೆಸಿದರೆ ವೇಣುಗೋಪಾಲಸ್ವಾಮಿಯ ವಿಗ್ರಹ ಲಭಿಸುವುದೆಂದೂ, ಅದನ್ನು ಒಯ್ದು ಕೌಂಡಿನ್ಯ ಋಷಿಗಳಿಂದ  ಸ್ಥಾಪಿಸಿ ಪೂಜಿಸೆಂದೂ ಅನುಗ್ರಹವಾಯಿತಂತೆ.  ಕನಸಿನಂತೆಯೇ ಘಟನೆಗಳು ನಡೆದು, ಈಗಿನ ಹೆಮ್ಮರಗಾಲದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯ ರೂಪುಗೊಂಡಿತು. ಕಾಲಾನಂತರದಲ್ಲಿ ಹೊಯ್ಸಳರ ಪಾಳೆಯಗಾರರ ಆಳ್ವಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿಗೊಂಡಿತು. ಈಗಿನ  ದೇವಸ್ಥಾನವನ್ನು ೧೩ ನೆಯ ಶತಮಾನದಲ್ಲಿ ಕಟ್ಟಲಾಯಿತಂತೆ.

ಕೊಳಲನ್ನೂದುವ ವೇಣುಗೋಪಾಲನ ವಿಗ್ರಹ ತುಂಬಾ ಸುಂದರವಾಗಿದೆ. ಇವನ ಕುರಿತು ಹಬ್ಬಿರುವ ದಂತಕತೆ ಇನ್ನೂ ಸೊಗಸಾಗಿದೆ. ಬಾಲಗೋಪಾಲನಾಗಿ ಕಂಗೊಳಿಸುವ ವೇಣುಗೋಪಾಲನಿಗೆ ಸಂತಾನಗೋಪಾಲ ಎಂಬ ಹೆಸರೂ ಇದೆ.  ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತಾರೆಂಬ ನಂಬಿಕೆ. ಅದಕ್ಕೆ ಸಾಕ್ಷಿಯಾಗಿ ದೇವರಿಗೆ ಅರ್ಪಿಸಿದ ಪುಟ್ಟ ಬೆಳ್ಳಿಯ ತೊಟ್ಟಿಲುಗಳು ಅಲ್ಲಿ ತೂಗಾಡುತ್ತಿದ್ದುವು.

ಇದಲ್ಲದೆ ಈ ಸ್ವಾಮಿಗೆ 'ಹುಚ್ಚು ಗೋಪಾಲ' ಎಂಬ ಹೆಸರೂ ಇದೆ! ಇನ್ನೊಂದು ಕಥೆಯ ಪ್ರಕಾರ ಅಲ್ಲಿ ಆಳಿದ ಚೋಳ ರಾಜನೊಬ್ಬನಿಗೆ ೧೨ ಜನ ಹೆಣ್ಣು ಮಕ್ಕಳಿದ್ದರಂತೆ. ಪುತ್ರ್ರಾಕಾಂಕ್ಷಿಯಾಗಿ  ವೇಣುಗೋಪಾಲನನ್ನು  ಭಕ್ತಿಯಿಂದ ಪೂಜಿಸಿದರೂ ಆತನ ೧೩ನೆಯ ಮಗು ಹೆಣ್ಣಾಗಿ ಹುಟ್ಟಿತಂತೆ. ನಿರಾಶೆಯಿಂದ ರಾಜ-ರಾಣಿ ಇಬ್ಬರೂ ದೇವಾಲಯದಲ್ಲಿಯೇ  ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿ, ಕೊನೆಯ ಬಾರಿಗೆ ನವಜಾತ ಶಿಶುವನ್ನು ನೋಡಿ ಸಾಯೋಣ ಎಂದು ಮಗುವನ್ನು ನೋಡಿದಾಗ ಅದು ಗಂಡು ಮಗುವಾಗಿತ್ತಂತೆ. ಭಕ್ತಿ-ಆಶ್ಚರ್ಯ- ಸಂತೋಷಾತಿರೇಕದಿಂದ ಆತ ದೇವರನ್ನು 'ಹುಚ್ಚು ಗೋಪಾಲ'ನೆಂದು ಕರೆದು ಪೂಜಿಸಿದಂತೆ. ಹೀಗೆ ಬಹು ನಾಮಾಂಕಿತ ಈ ಗೋಪಾಲ.


ಈ ದೇವಾಲಯದ ಇನ್ನೊಂದು ವಿಶೇಷವೇನೆಂದರೆ 'ಕೌಂಡಿನ್ಯ ಮಹರ್ಷಿಯ  ದಂಡ'    . ನಂಬಿಕೆಯ ಪ್ರಕಾರ ಕೌಡಿನ್ಯರು ಸದ್ಗತಿ ಹೊಂದುವ ಸಮಯದಲ್ಲಿ ತನ್ನ ತಪಶ್ಶಕ್ತಿಯನ್ನು  ದಂಡಕ್ಕೆ ವರ್ಗಾಯಿಸಿ, ಭಕ್ತರ ಸಕಲ ಕಷ್ಟಗಳನ್ನೂ ಪರಿಹರಿಸಿದರಂತೆ. ಹಾಗಾಗಿ ಈ ದೇವಸ್ಥಾನದಲ್ಲಿ 'ದಂಡ ದರ್ಶನಂ ಪಾಪ ನಾಶನಂ, ದಂಡ ಸ್ಪರ್ಶನಂ ಪುಣ್ಯ ವರ್ಧನಂ'. ಹೂವಿನಿಂದ ಅಲಂಕೃತವಾದ ದಂಡವನ್ನು ಹಿಡಿದ ಅರ್ಚಕರು ಹಿಡಿದಿರುತಾರೆ. ಸಾಲಾಗಿ ಬರುವ ಭಕ್ತರು ಶಿರವೊಡ್ಡಿ ದಂಡವನ್ನು ಮೆತ್ತಗೆ ಸ್ಪರ್ಶಿಸುತ್ತಾರೆ. ಶನಿವಾರ ಹಾಗೂ ಭಾನುವಾರ  ಮಾತ್ರ ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯ ವರೆಗೆ 'ದಂಡ ಸ್ಪರ್ಶನ' ಮಾಡಲು ಅವಕಾಶವಿರುತ್ತದೆ. ಉಳಿದ ದಿನಗಳಲ್ಲಿ ಈ ಕಾರ್ಯಕ್ರಮವಿರುವುದಿಲ್ಲ.





ಅಲ್ಲಿಗೆ ಹೋಗುವ ವರೆಗೆ  ಈ ವಿಚಾರಗಳಾವುವೂ ನಮಗೆ ಗೊತ್ತಿರಲಿಲ್ಲ. ಆದರೂ  ಭಾನುವಾರವಾಗಿದ್ದರಿಂದ ದಂಡಸ್ಪರ್ಶನ ಸಾಧ್ಯವಾಯಿತು.  ಹುಣ್ಣಿಮೆಯ ದಿನವಾಗಿದ್ದರಿಂದ ವಿಶೇಷ ಕಾರ್ಯಕ್ರಮವಾಗಿ ಸುದರ್ಶನ ಯಾಗ ನಡೆಯುತ್ತಿತ್ತು. ಪ್ರಸಾದ ಅನ್ನ ಸಂತರ್ಪಣೆಯಲ್ಲೂ ಪಾಲ್ಗೊಂಡೆವು. ರುಚಿಯಾದ ಸಿಹಿ ಪೊಂಗಲ್, ಖಾರ ಪೊಂಗಲ್ ಸವಿದು ಮರಳಿದೆವು.

ಹೆಮ್ಮರಗಾಲಕ್ಕೆ ಹೋಗುವ ದಾರಿ : ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ   ಹೊರಟು ಬದನವಾಳು ಎಂಬಲ್ಲಿ ಇಳಿಯಬೇಕು. ಅಲ್ಲಿಂದ ಹೆಮ್ಮರಗಾಲಕ್ಕೆ  ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಆದರೆ ದೇವಸ್ಥಾನದ ವರೆಗೆ ಹೋಗಬಹುದು. ಹಳ್ಳಿ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಪ್ರಯಾಣಿಸಬೇಕು. ಬೇಕಾದಷ್ಟು ಸಮಯವಿದ್ದರೆ, ಗುಂಪಲ್ಲಿ ಹರಟುತ್ತಾ, ದಾರಿಯಲ್ಲಿ ಸಿಗುವ ಎಳನೀರು ಕುಡಿಯುತ್ತಾ, ಕಬ್ಬು ತಿನ್ನುತ್ತಾ, ನಡೆಯುವುದನ್ನೇ ಕೆಲಸವನ್ನಾಗಿಸಬಹುದು.

Friday, October 5, 2012

ಕತ್ತಾಳೆ


ಕ್ಯಾಕ್ಟಸ್ ವರ್ಗಕ್ಕೆ ಸೇರಿದ ಗಿಡಗಳು ಹೂಕುಂಡಗಳಲ್ಲಿ ಶೋಭಿಸುವುದಕ್ಕೆ ಮಾತ್ರ ಲಾಯಕ್ಕು ಎಂದು ತಿಳಿದಿದ್ದೆ. ಈ ವರ್ಗಕ್ಕೆ ಸೇರಬಹುದಾದ 'ಕತ್ತಾಳೆ' ಎಂಬ  ಗಿಡದ ಎಲೆಯಿಂದ ಹಗ್ಗ ತಯಾರಿಸುತ್ತಾರ್‍ಎಂದು ಮೊನ್ನೆ ತಾನೇ ತಿಳಿಯಿತು. ನಂಜನಗೂಡಿನ ಬದನವಾಳು ಸಮೀಪ ಹಳ್ಳೀ ದಾರಿಯಲ್ಲಿ ನಡೆಯುತ್ತಿದ್ದಾಗ ಕ್ಲಿಕ್ಕಿಸಿದ ಚಿತ್ರಗಳಿವು.



ಹಿಂದೆ ಈ ಎಲೆಗಳನ್ನು ನೀರಲ್ಲಿ ದಿನಗಟ್ಟಲೆ ನೆನೆಸಿ ನಾರು ತೆಗೆಯುತ್ತಿದ್ದರಂತೆ. ಈಗ ಈ ಕೆಲಸವನ್ನು ಯಂತ್ರ ಕ್ಷಣಾರ್ಧದಲ್ಲಿ  ಮಾಡುತ್ತದೆ. ನಾರನ್ನು ಬಿಸಿಲಿನಲ್ಲಿ ಒಣಗಿಸಿ ಹಗ್ಗ ತಯಾರಿಸುತ್ತಾರಂತೆ.

Wednesday, September 19, 2012

ಅಕ್ಕ- ತಂಗಿಯರ ಕೊಳ


ದಕ್ಷಿಣದ ಬದರಿ ಎಂದು ಕರಯಲ್ಪಡುವ ಮೇಲುಕೋಟೆಯಲ್ಲಿ ಆಸಕ್ತರಿಗೆ ಕುತೂಹಲ ಮೂಡಿಸುವ ವಿಶೇಷಗಳು ಸಾಕಷ್ಟಿವೆ. ಮೈಸೂರಿನಿಂದ ಹೊರಟು ಶ್ರೀರಂಗಪಟ್ಟಣ ದಾಟಿ ಪಾಂಡವಪುರ ದಾರಿಯಾಗಿ ಸುಮಾರು ೫೫ ಕಿ.ಮೀ ಪ್ರಯಾಣಿಸಿದರೆ  ಮೇಲುಕೋಟೆ ತಲಪಬಹುದು. ಕುಟುಂಬ ಸಮೇತವಾಗಿ ಒಂದು ದಿನದ ಪ್ರವಾಸಕ್ಕೆ ತಕ್ಕುದಾದ ಜಾಗ ಇದು. 

ಯೋಗ ನರಸಿಂಹ ದೇವಾಲಯ



ಮೇಲುಕೋಟೆಯ ಬೆಟ್ಟದ ಮೇಲೆ , ಯೋಗನರಸಿಂಹನ ದೇವಾಲಯವಿದೆ. ಇದನ್ನು ತಲಪಲು ಸುಮಾರು ೩೫೦ ಮೆಟ್ಟಲುಗಳನ್ನು ಹತ್ತಬೇಕು. ಇಲ್ಲಿನ ಯೋಗನರಸಿಂಹನನ್ನು  ಪ್ರಹ್ಲಾದನೇ ಸ್ಥಾಪಿಸಿದನೆಂಬ ಪ್ರತೀತಿ.








ಪುಷ್ಕರಿಣಿ



ಬೆಟ್ಟದ ಮೇಲೆ ನಿಂತರೆ ಕೆಳಗಿನ ದೃಶ್ಯ ಸುಮನೋಹರ. ಒಂದು ಕಡೆಯಲ್ಲಿ ವಿಶಾಲವಾದ ಪುಷ್ಕರಿಣಿ ಅಥವಾ ಕಲ್ಯಾಣಿ. ಇದಕ್ಕೆ ನಾಲ್ಕೂ ಕಡೆಯಿಂದ ಮೆಟ್ಟಿಲುಗಳಿವೆ. ಸುತ್ತಲೂ ಕಲ್ಲಿನ ಮಂಟಪವೂ ಇದೆ. ಇಲ್ಲಿ ಆಗಾಗ್ಗೆ ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತದೆ.









ನಾನೇನು ಕಡಿಮೆ ಎಂಬಂತೆ ದೂರದಲ್ಲಿ ಕಾಣಿಸುವ, ನೈಸರ್ಗಿಕವಾಗಿ ರಚನೆಗೊಂಡ ವಿಶಾಲವಾದ 'ತೊಣ್ಣೂರು ಕೆರೆ'. ಇವಲ್ಲದೆ, ಹೆಸರು ಗೊತ್ತಿಲ್ಲದ ಇನ್ನೂ ಕೆಲವು ಚಿಕ್ಕ-ಪುಟ್ಟ ಕೊಳಗಳು.  


 

ಮೇಲುಕೋಟೆಯ ಮುಖ್ಯರಸ್ತೆಯಲ್ಲಿರುವ ಪುರಾತನ  ಚೆಲುವನಾರಾಯಣ ಸ್ವಾಮಿಯ ದೇವಾಲಯ ಸೊಗಸಾಗಿದೆ. 
ಸ್ಠಳಪುರಾಣದ ಪ್ರಕಾರ,ಬಹಳ ಹಿಂದೆ  ಈ ಊರಿಗೆ  ಯಾದವಾದ್ರಿ ಎಂಬ ಹೆಸರಿತ್ತು. ಇಲ್ಲಿ ನೆಲೆಸಿದ್ದ ಚೆಲುವನಾರಾಯಣ ಸ್ವಾಮಿಯನ್ನು ತ್ರೇತಾಯುಗದಲ್ಲಿ ರಾಮನೂ, ದ್ವಾಪರದ ಕೃಷ್ಣ ಮತ್ತು ಬಲರಾಮರೂ ಪೂಜಿಸಿದ್ದರಂತೆ. ಕಲಿಯುಗದಲ್ಲಿ, ೧೨ ನೆಯ ಶತಮಾನದಲ್ಲಿ ಇಲ್ಲಿಗೆ ತಂಜಾವೂರಿನಿಂದ ಬಂದು ನೆಲೆಸಿದ ರಾಮಾನುಜಾಚಾರ್ಯರು ತಮ್ಮ ಕನಸಿನ ಪ್ರೇರಣೆಯಂತೆ, ಕಳೆದು ಹೋಗಿದ್ದ ಚೆಲುವನಾರಾಯಣನ ವಿಗ್ರಹವನ್ನು ಹುಡುಕಿ, ಪುನ: ಸ್ಥಾಪಿಸಿದರಂತೆ. ಅಂದಿನಿಂದ ಈ ಸ್ಥಳವು. ವೈಷ್ಣವರ  ಮೆಚ್ಚಿನ ಆರಾಧನಾ ಸ್ಠಳವಾಗಿದೆ. 


ದೇವಸ್ಥಾನದ  ಪಕ್ಕದಲ್ಲಿ, ಸ್ವಲ್ಪ ದೂರ ನಡೆದರೆ ' ಅಕ್ಕ- ತಂಗಿಯರ' ಕೊಳ ಸಿಗುತ್ತದೆ. ಇಬ್ಭಾಗವಾದಂತೆ ಇರುವ ಸುಂದರವಾದ ಅವಳಿ ಕೊಳಗಳಿವು. ಮಧ್ಯ ಸುತ್ತಲೂ ಮೆಟ್ಟಿಲುಗಳಿವೆ.   ನೀರು ಸ್ವಚ್ಛವಾಗಿತ್ತು. ಅಕ್ಕನ ಕೊಳ ಸ್ವಲ್ಪ ಚಿಕ್ಕದು, ತಂಗಿಯ ಕೊಳ ದೊಡ್ಡದು. ಇದ್ದಕ್ಕಿದ್ದಂತೆ, ಮಹಿಳೆಯೊಬ್ಬರು "ಅಲ್ಲಿ ನೀರಿಗೆ ಕಾಲು ಹಾಕ್ಬರ್ದು..ದಂಡ ಹಾಕ್ತೀನಿ..' ಎಂದು ಯಾರಿಗೋ ಗದರುವುದು ಕೇಳಿತು. ಆ ಅಜ್ಜಿಯನ್ನು ಮಾತನಾಡಿಸಿದಾಗ ಅವರು ಹೇಳಿದ ಕಥೆ ಹೀಗಿತ್ತು.  "೧೦೦೦ ವರ್ಷಗಳ ಹಿಂದೆ ಇಲ್ಲಿ ಚೆಲುವರಸ ಎಂಬ ಚೋಳ ರಾಜನಿದ್ದ. ಅವನಿಗೆ ಇಬ್ಬರು ಪತ್ನಿಯರು, ಅವರು ಅಕ್ಕ-ತಂಗಿಯರು ಕೂಡ. ಒಂದು ದಿನ ರಾಜ ಇಬ್ಬರೂ ಪತ್ನಿಯರಿಗೂ ಒಂದಷ್ಟು ದುಡ್ಡು ಕೊಟ್ಟು ಲೋಕ ಮೆಚ್ಚುವ ಕೆಲಸ ಮಾಡಿಸಿರಿ ಅಂದನಂತೆ. ಅಕ್ಕ ತಂಗಿಯರಿಬ್ಬರೂ ಕೊಳ ಕಟ್ಟಿಸಲು ಮುಂದಾದರು. ಜಕ್ಕಣಾಚಾರಿಯನ್ನು ಕರೆಸಿದರು. ಅಕ್ಕ ಕೆಲಸಗಾರರನ್ನು ಚೆನ್ನಾಗಿ ನೊಡಿಕೊಳ್ಳಲಿಲ್ಲ, ದೇವರ ನೇಮವನ್ನೂ ಸರಿಯಾಗಿ ಮಾಡಲಿಲ್ಲ. ಹಾಗಾಗಿ ಸ್ವಾಮಿಗೆ ಕೋಪ ಬಂತು. ಅಕ್ಕ ಕಟ್ಟಿಸಿದ ಕೊಳದ ನೀರು ಕಪ್ಪಾಗಿತ್ತು.

ಆದರೆ ತಂಗಿ, ಶ್ರದ್ಧಾ-ಭಕ್ತಿಯಿಂದ ಸ್ವಾಮಿಯನ್ನು ಪೂಜಿಸಿ ಕೊಳ ಕಟ್ಟಿಸಿದಳು, ಕೆಲಸಗಾರರನ್ನು ಚೆನ್ನಾಗಿ ನೋಡಿಕೊಂಡಳು.ಕೋಳದ ನೀರು ಎಳನೀರಿನಂಗಿತ್ತು. ಆ ಕೊಳದ ನೀರನ್ನು ತೀರ್ಥ, ಪೂಜೆಗೆ ಬಳಸುತ್ತಾರೆ. ಆಮೇಲೆ ಅಕ್ಕನಿಗೆ ಪಶ್ಚಾತ್ತಾಪವಾಗಿ ಸ್ವಾಮಿಯನ್ನು ಬೇಡಿಕೊಂಡಾಗ ಆತನು, ಅಕ್ಕನ ಕೊಳದ ನೀರನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಬಟ್ಟೆಬರೆಗಳನ್ನು ತೊಳೆಯಲು ಉಪಯೋಗಿಸಿವಂತೆಯೂ ಆ ಮೂಲಕ ಆಕೆಯ ಪಾಪ ಪರಿಹಾರವಾಗುತ್ತದೆಯೆಂದೂ ಅನುಗ್ರಹಿಸಿದನಂತೆ. ಹೀಗೆ ಅಕ್ಕನ ಕೆರೆಯ ನೀರು ಬಟ್ಟೆಬರೆ ತೊಳೆಯಲು ಉಪಯೋಗವಾಗುತ್ತದೆ."


ಎರಡು ಕೊಳಗಳ ನೀರು ಸುಮಾರಾಗಿ ಒಂದೇ ತರಹ ಕಾಣಿಸಿತು. ಸೂಕ್ಷ್ಮವಾಗಿ ಗಮನಿಸಿದರೆ ತಂಗಿಯ ಕೊಳದ ನೀರು ಹೆಚ್ಚು ಪಾರದರ್ಶಕವಾಗಿ ಕಾಣುತ್ತಿತ್ತು. ಅಕ್ಕನ ಕೊಳದನೀರು ಸ್ವಲ್ಪ ಹಸಿರಿನ ಛಾಯೆ ಹೊಂದಿತ್ತು.  ಪ್ರಸ್ತುತ   ಯಾವುದೇ ಕೋಟೆಗಳು ಇರದ ಇಲ್ಲಿಗೆ ಮೇಲುಕೋಟೆ ಎಂಬ ಹೆಸರು ಯಾಕೆ ಬಂತೋ ಗೊತ್ತಿಲ್ಲ. 'ಮೇಲುಕೊಳ' ಎಂದಿದ್ದರೆ ಅನ್ವರ್ಥನಾಮವಾಗುತ್ತಿತ್ತು.



ಅಕ್ಕನ ಕೊಳ

ತಂಗಿಯ ಕೊಳ  


ಅಜ್ಜಿಯ ಕಥೆ ಚೆನ್ನಾಗಿತ್ತು. ಈಗಿನ ಕಾಲದಲ್ಲಿ ಸ್ಥಳಪುರಾಣ ಗೊತ್ತಿರುವವರು ಕಡಿಮೆ, ಗೊತ್ತಿದ್ದರೂ ಅನುಕ್ರಮವಾಗಿ ಕಥೆ ಹೇಳಲು ಯಾರಿಗೂ ವ್ಯವಧಾನವಿಲ್ಲ. ಮೇಲಾಗಿ ಆ ಎರಡೂ ಕೊಳಗಳು ಶುಭ್ರವಾಗಿದ್ದವು. ಸಾಮಾನ್ಯವಾಗಿ ದೇವಸ್ಥಾನಗಳ ಪರಿಸರದಲ್ಲಿ ಭಕ್ತಿಗೆ ಸಾಕ್ಷಿಯಾಗಿ ಅಲ್ಲಲ್ಲಿ ಬಿದ್ದಿರುವ ತೆಂಗಿನ ಚಿಪ್ಪು, ಹೂವಿನ ಹಾರ, ಕರ್ಪೂರ-ಅಗರಬತ್ತಿಯ ಪಳೆಯುಳಿಕೆಗಳು ಕಾಣಲಿಲ್ಲ. ಇದು ಅಜ್ಜಿಯ ಪ್ರಭಾವವೇ ಇರಬೇಕು. ನಮಗೆ ಕಥೆ ಹೇಳುತ್ತ ನಡುನಡುವೆ ಇತರರನ್ನೂ ಗಮನಿಸುತ್ತಾ-ಗದರಿಸುತ್ತಾ ಇದ್ದ ಅಜ್ಜಿಯ ವೈಖರಿ ನನಗಂತೂ ತುಂಬಾ ಹಿಡಿಸಿತು. ಆಕೆ ಬೇಡವೆಂದರೂ ಸ್ವಲ್ಪ ಭಕ್ಷೀಸು ಕೊಟ್ಟು ಥಾಂಕ್ಸ್ ಹೇಳಿ ಹೊರಟೆವು. 

ಮೇಲುಕೋಟೆಯಲ್ಲಿ ಶತಮಾನಗಳಷ್ಟು ಹಳೆಯದಾದ ಸಂಸ್ಕೃತ ಸಂಶೋಧನಾ ಕೇಂದ್ರವಿದೆ. ಅಪೂರ್ಣಗೊಂಡ ರಾಜಗೋಪುರವಿದೆ. ದಂತ ಕಥೆಯ ಪ್ರಕಾರ ೩೦ ಅಡಿ ಎತ್ತರದ ಈ ರಾಜಗೋಪುರವನ್ನು ಒಂದೆ ರಾತ್ರಿಯಲ್ಲಿ ನಿರ್ಮಿಸುವೆನೆಂದು ಜಕ್ಕಣಾಚಾರಿ ಸವಾಲು ಸ್ವೀಕರಿಸಿದ್ದನಂತೆ. ಅವನು ಕಾರ್ಯನಿರತನಾಗಿದ್ದಾಗ ಕೆಲವರು ಅಸೂಯೆಯಿಂದ ಮಧ್ಯರಾತ್ರಿ ಆಗುತ್ತಿದ್ದಂತೆ, ಬೆಳಗಾಯಿತು, ಅವಧಿ ಮುಗಿಯಿತು ಎಂದು ಘೋಷಿಸಿದರಂತೆ. ಅವರ ಕುತಂತ್ರದಿಂದ ಅವಮಾನಿತನಾದ ಜಕ್ಕಣಾಚಾರಿ ಕೆಲಸವನ್ನು ಅರ್ಧಕ್ಕೇ ಕೈಬಿಟ್ಟನಂತೆ.

ಮೇಲುಕೋಟೆಯಿಂದ ಸುಮಾರು ೧.೫ ಕಿ.ಮೀ. ಹೋದರೆ 'ಧನುಷ್ಕೋಟಿ' ಎಂಬ ಪುಟ್ಟ ಬೆಟ್ಟ ಸಿಗುತ್ತದೆ. ಇಲ್ಲಿ ಶ್ರೀರಾಮಚಂದ್ರ-ಸೀತೆ-ಲಕ್ಷ್ಮಣ ವನವಾಸದ ಸಂಧರ್ಭದಲ್ಲಿ ತಂಗಿದ್ದರಂತೆ. ಸೀತೆಯ  ಬಾಯಾರಿಕೆ ತಣಿಸಲು ರಾಮ ಬಂಡೆಯೊಂದಕ್ಕೆ ಬಾಣ ಹೊಡೆದು ಗಂಗೆಯನ್ನು ತರಿಸಿನಂತೆ. ಕಲ್ಲಿನ ಮಧ್ಯದಲ್ಲಿರುವ ಈ ಚಿಕ್ಕ ನೀರಿನ ಒರತೆಯು ಎಂದೂ ಬತ್ತುವುದಿಲ್ಲವಂತೆ. ಬಂಡೆಗಳ ಮಧ್ಯದಲ್ಲಿ ಒಂದು ಸೀತಾಫಲ ಮರ ಬೆಳೆದು ನಿಂತಿದೆ. ಮಕ್ಕಳಿಲ್ಲದ ದಂಪತಿಗಳು ಇದಕ್ಕೆ ಪೂಜಿಸಿದರೆ ಮಕ್ಕಳಾಗುತ್ತಾರೆಂದೂ, ಹರಕೆಯಾಗಿ ಬಳೆಗಳನ್ನು ಮರಕ್ಕೆ ಕಟ್ಟುತ್ತಾರೆಂದೂ ತಿಳಿಯಿತು.  



ಮೇಲುಕೋಟೆಯ ಧನುಷ್ಕೋಟಿ



 ಪೌರಾಣಿಕ ಕಥೆಗಳು, ಸ್ಥಳೀಯ ಉಪಕಥೆಗಳು ಚರಿತ್ರೆಯಲ್ಲಿ ಹಾಸುಹೊಕ್ಕಾಗಿ  ಹರಿದು ಬರುವ ರೀತಿ ಅನನ್ಯ. 



 

Monday, September 3, 2012

ಮಾಲೇಕಲ್ ಬೆಟ್ಟದ ಮ್ಯಾಲೆ..


ಜುಲೈ ೧೫ ರಂದು, ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ ಅರಸೀಕೆರೆಯಲ್ಲಿರುವ 'ಮಾಲೇಕಲ್ ಬೆಟ್ಟಕ್ಕೆ' ಚಾರಣ ಕಾರ್ಯಕ್ರಮವವಿತ್ತು .  ಮಾಲೇಕಲ್ ಬೆಟ್ಟವು   ಮೈಸೂರಿನಿಂದ ೧೧೫ ಕಿ.ಮೀ. ದೂರದಲ್ಲಿದೆ. ಸುಮಾರು ೨೦ ಜನರಿದ್ದ ನಮ್ಮ ತಂಡವು ಬೆಳಗ್ಗೆ ೬ ಗಂಟೆಗೆ ಮೈಸೂರಿನಿಂದ ಒಂದು ಮಿನಿಬಸ್ ನಲ್ಲಿ ಹೊರಟು ಕೆ.ಆರ್ ಪೇಟೆ ಮಾರ್ಗವಾಗಿ ಅರಸೀಕೆರೆ ತಲಪಿತು. ಮಾರ್ಗ ಮಧ್ಯದಲ್ಲಿ ಕೆ.ಆರ್.ಪೇಟೆಯಲ್ಲಿ ಬೆಳಗಿನ ಉಪಾಹಾರ ಮುಗಿಸಿ ಅರಸೀಕೆರೆಯ ಕಡೆಗೆ ಪ್ರಯಾಣ ಬೆಳೆಸಿದೆವು. ದಾರಿಯುದ್ದಕ್ಕೂ ಆಲೂಗಡ್ಡೆ ಬೆಳೆದ ಹೊಲಗಳು ಬಿಳಿ ಹೂ ಬಿಟ್ಟು ಕಂಗೊಳಿಸುತ್ತಿದ್ದುವು. ಇದುವರೆಗೆ ಆಲೂಗಡ್ಡೆಯ ಬಗೆಬಗೆಯ ಊಟ ಸವಿದಿದ್ದ ನನಗೆ, ಆಲೂ ಹೊಲದ ನೋಟವೂ ಎಷ್ಟೊಂದು ಚೆನ್ನ ಅನಿಸಿತು.

ಸುಮಾರು ಹತ್ತು ಗಂಟೆಗೆ ಮಾಲೇಕಲ್ ಬೆಟ್ಟದ ಬುಡ ತಲಿಪಿದೆವು. ಅಲ್ಲಿ ನಮ್ಮನ್ನು ಅರಸೀಕೆರೆಯ ಮಿತ್ರರು ಸ್ವಾಗತಿಸಿದರು.  ಪರಸ್ಪರ ಪರಿಚಯದ ನಂತರ ಬೆಟ್ಟ ಹತ್ತಲು ಆರಂಭಿಸಿದೆವು.    

ಮಾಲೇಕಲ್ ಬೆಟ್ಟದ ಮೇಲೆ ಲಕ್ಷ್ಮೀ ವೆಂಹಟರಮಣ ಸ್ವಾಮಿಯ ದೇಗುಲವಿದೆ.ಬೆಟ್ಟದ ಮೇಲೆ ಹಾಗೂ ಕೆಳಗೆ ಇರುವ ಈ ದೇವಾಲಯಗಳು ತಿರುಮಲೆ-ತಿರುಪತಿಯನ್ನು ಹೋಲುವುದರಿಂದ ಇಲ್ಲಿಗೆ ಚಿಕ್ಕ-ತಿರುಪತಿ ಎಂಬ ಹೆಸರೂ ಇದೆ. ಈ ದೇವಾಲಯವನ್ನು ತಲಪಲು ಸುಮಾರು ೧೩೦೦ ಮೆಟ್ಟಲುಗಳನ್ನು ಹತ್ತಬೇಕು. ಅಲ್ಲಲ್ಲಿ ಬಂಡೆಗಳ ಮೇಲೆ ಹುಟ್ಟಿ ಬೆಳೆದು ಸೃಷ್ಟಿಯ ಸೋಜಿಗ ಮೆರೆದ ಗಿಡಗಳು ಲೆಕ್ಕವಿಲ್ಲದಷ್ಟು.

ಸ್ಥಳ ಪುರಾಣದ ಪ್ರಕಾರ, ಅಂದಿನ ಪಾಳೆಯಗಾರರೊಬ್ಬರಿಗೆ ವೆಂಕಟರಮಣ ಸ್ವಾಮಿಯು ಕನಸಿನಲ್ಲಿ ಕಾಣಿಸಿಕೊಂಡು, ಮೂಲ ತಿರುಪತಿಯು ದೂರವಿದ್ದು ನಿನಗೆ ಬರಲಾಗದ ಕಾರಣ ನಾನೇ ನಿನ್ನ ಬಳಿಗೆ ಬಂದಿದ್ದೇನೆ, ಬೆಟ್ಟದ ಮೇಲೆ ತುಳಸೀಹಾರ ಇರುವಲ್ಲಿ ಗುಡಿ ಕಟ್ಟು ಎಂದು ಆದೇಶಿಸಿದನಂತೆ.   ಹೀಗೆ ತುಳಸಿಮಾಲೆಯಿಂದಾಗಿ ಮಾಲೇಕಲ್ ಎಂಬ ಹೆಸರು ಬಂತು. ದೇವಾಲಯವನ್ನು  ಸುಮಾರು ೮೦೦ ವರುಷಗಳ ಹಿಂದೆ ಕಟ್ಟಲಾಯಿತಂತೆ. ಬೆಟ್ಟದ ಕೆಳಗೆ ಇರುವ ದೇವಸ್ಥಾನದಲ್ಲಿ, ವರುಷಕ್ಕೆ ಒಂದು ಬಾರಿ ರಥೋತ್ಸವವನ್ನು ಭಕ್ತಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸೌತಕಾಯಿ, ಕಿತ್ತಳೆ ಹಣ್ಣುಗಳನ್ನು ತಿನ್ನುತ್ತಾ, ಆಗಾಗ್ಗೆ  ಹಿಂತಿರುಗಿ ನೋಡಿ ದೂರದಲ್ಲಿ ಕಾಣಿಸುವ ಅರಸಿಯ ಕೆರೆಯನ್ನು ಕಣ್ತುಂಬಿಸುತ್ತಾ, ನಿಧಾನವೇ ಪ್ರಧಾನ ಎಂಬಂತೆ ಮೆಟ್ಟಿಲುಗಳನ್ನು ಹತ್ತಿದವರು ಕೆಲವರು. ಉತ್ಸಾಹದಿಂದ ಬೇಗನೆ ಬೆಟ್ಟದ ತುದಿ ತಲಪಿ, ಸಾಹಸಕ್ಕೆ ಇನ್ನೇನಾದರೂ ಅವಕಾಶವಿದೆಯೇ ಎಂದು ಹುಡುಕಿದವರು ಇನ್ನೂ ಕೆಲವರು. ಬೆಟ್ಟದ ಮೇಲೆ ಒಂದು ಬಂಡೆಗೆ ಒಂದೇ ಮೊಳೆ ಮೇಲೆ ಆಧರಿಸಿ ನಿಂತಂತೆ ಭಾಸವಾಗುತ್ತಿದ್ದ ಕಬ್ಬಿಣದ ಏಣಿಯೊಂದಿದೆ. ಧೈರ್ಯಯುಳ್ಳವರು ಅದನ್ನು ಏರಿ ತಮ್ಮ ಸರ್ಕಸ್ ಪ್ರಾವೀಣ್ಯತೆ ಮೆರೆದರು.









ಎಲ್ಲರೂ ಬೆಟ್ಟವೇರಿದ ಮೇಲೆ ಪೂಜೆಮಾಡಿ ಪ್ರಸಾದ ಸ್ವೀಕರಿಸಿದೆವು. ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ  ಶ್ರೀ ವೈದ್ಯನಾಥನ್ ಹಾಗೂ ಶ್ರೀಮತಿ ಗೋಪಮ್ಮನವರು ಸಾಂದರ್ಭಿಕ, ಜಾನಪದ  ಹಾಡುಗಳನ್ನು ಹಾಡಿ ರಂಜಿಸಿದರು. ಆಮೇಲೆ ಬೆಟ್ಟ  ಇಳಿದು, ಲಕ್ಶ್ಮೀವೆಂಕಟರಮಣ ಸ್ವಾಮಿಯ ದರ್ಶನ  ಮಾಡಿದೆವು. ಅರಸೀಕೆರೆಯ ಮಿತ್ರರು ಭೋಜನದ ವ್ಯವಸ್ಥೆಯನ್ನು ಹೊತ್ತಿದ್ದರು. ಬೆಟ್ಟ ಹತ್ತಿ- ಇಳಿದ ಆಯಾಸದ, ಮಧ್ಯಾಹ್ನ ೩ ಗಂಟೆಯೂ ಆಗಿತ್ತು. ಬಾಳೆ ಎಲೆಯಲ್ಲಿ ಕೋಸಂಬರಿ, ಪಲ್ಯ, ಪೊಂಗಲ್, ಪುಳಿಯೋಗರೆ, ಅನ್ನ, ಹುಳಿ,ತಿಳಿಸಾರು, ಬಜ್ಜಿ ಮೇಳೈಸಿದ ರುಚಿಕಟ್ಟಾದ ಊಟ, ಮೇಲಾಗಿ ಅರಸೀಕೆರೆಯ ಮಿತ್ರರ ಆದರದ ಅತಿಥಿ ಸತ್ಕಾರ. ಇನ್ನು ಕೇಳಬೇಕೆ! ಎಲ್ಲರೂ 'ಮಾಯಾ ಬಜಾರ್ 'ನ ಘಟೋತ್ಕಚನಂತೆ ಉಂಡೆವು!


ಆಲ್ಲಿಂದ ಹೊರಟು ಬರುವಾಗ ದಾರಿಯಲ್ಲಿ ಸಿಗುವ ಪುರಾತನ ಚಂದ್ರಮೌಳೇಶ್ವರ ದೇವಸ್ಥಾನಕ್ಕೂ ಭೇಟಿ ಕೊಟ್ಟೆವು. ಪ್ರಸ್ತುತ ಪ್ರಾಚ್ಯ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನ ಚೊಕ್ಕವಾಗಿದೆ. ಹೊಯ್ಸಳರ ಹಾಗೂ ಚೋಳರ ಕಾಲದ ವಾಸ್ತುಶಿಲ್ಪ ಇಲ್ಲಿ ಮೆರೆದಿವೆ. ಕಲ್ಲಿನ ನೃತ್ಯಮಂಟಪ ಈಗಲೂ ಸೊಗಸಾಗಿದೆ. ದೇವಾಲಯದ ಗೋಡೆಯಲ್ಲಿ ಕೆತ್ತಿರುವ ಪುಟ್ಟ-ಪುಟ್ಟ ಮೂರ್ತಿಗಳಲ್ಲಿ ಕೆಲವು ವಿರೂಪಗೊಂಡಿವೆ. ಆವರಣದಲ್ಲಿರುವ ಬಿಲ್ವ, ಬನ್ನಿ, ಅರಳಿ ಮರಗಳ ಕಟ್ಟೆಗಳು ವಿಶಿಷ್ಟ ಶೋಭೆ ನೀಡಿವೆ.


                                                                       
       
ಮುಂದೆ ಮೈಸೂರಿಗೆ ಬರುವಾಗ ಬಹುಶ: ಬೇರೆ ದಾರಿಯಿರಬೇಕು, ಕತ್ತಲೂ ಆಗುತಿತ್ತು, ದಾರಿಯುದ್ದಕ್ಕೂ ಅಲ್ಲಲ್ಲಿ ರಸ್ತೆತಡೆಗಳು ಸಿಗುತ್ತಿದ್ದವು. ಬಸ್ ನಲ್ಲಿ   ಮುಂದೆ ಕುಳಿತಿದ್ದ ವೈದ್ಯನಾಥನ್ ಪ್ರತೀ ರಸ್ತೆತಡೆ ಎದುರಾಗುವಾಗಲೂ  'ಹಂಪಾಸುರ' ಎಂದು ಎಲ್ಲರನ್ನು ಎಚ್ಚರಿಸುತ್ತಿದ್ದರು. ಹಂಪಾಸುರನನ್ನು ನೆನೆಯುತ್ತಾ ಮೈಸೂರು ತಲಪಿದ ನಮೆಗೆಲ್ಲರಿಗೂ ಭಾನುವಾರವನ್ನು ಸಂಪನ್ನಗೊಳಿಸಿದ ಅನುಭವ.