Total Pageviews

Friday, September 24, 2010

ಅಂಡಮಾನಿನ ಸೆಲ್ಯೂಲರ್ ಜೈಲ್ ...

ಅಂಡಮಾನಿಗೆ ಪ್ರವಾಸ   ಹೊರಟಿದ್ದೇನೆಂದು ಸಹೋದ್ಯೋಗಿಗಳೊಡನೆ ಹೇಳಿಕೊಂಡಾಗ  ಸಿಕ್ಕಿದ ಪ್ರತಿಕ್ರಿಯೆ ಹೀಗಿತ್ತು:
"ಅಲ್ಲಿ ಏನಿದೆ ಅಂತ ಹೋಗುತ್ತೀರ ? ಜೈಲ್ ನೋಡೋಕೆ ಅಷ್ಟು ಖರ್ಚು ಮಾಡಿಕೊಂಡು ಅಂಡಮಾನಿಗೆ ಹೋಗ್ಬೇಕಾ ? ಯಾಕೆ  ಮೈಸೂರಿನಲ್ಲಿ  ಜೈಲ್ ಇಲ್ವಾ?"  

ಕಳೆದ ವಾರ ಅಂಡಮಾನ್ ನ  ಸೆಲ್ಯೂಲರ್ ಜೈಲ್ ನ ಅಂಗಳದಲ್ಲಿ ಓಡಾಡಿದ್ದೆ. ಸ್ವಾತಂತ್ರ್ಯ ಪೂರ್ವದಲ್ಲಿ  'ಕಾಲಾಪಾನಿ' ಶಿಕ್ಷೆ ಗೆ ಗುರಿಯಾದವರನ್ನು ಅತ್ಯಂತ ಅಮಾನುಷವಾಗಿ ದಂಡಿಸಲೆಂದೇ ಕಟ್ಟಲಾದ ಈ ಜೈಲ್,  ಬ್ರಿಟಿಶ್ ಸರಕಾರದ ದಬ್ಬಾಳಿಕೆ  ಹಾಗು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟ ಕೋಟಲೆಗಳಿಗೆ  ಸಾಕ್ಷಿಯಾಗಿ ನಿಂತಿದೆ.

ಈಗ ಸೆಲ್ಯೂಲರ್ ಜೈಲ್ ಒಂದು ರಾಷ್ಟ್ರೀಯ ಸ್ಮಾರಕ . ಜೈಲನ ಆವರಣದಲ್ಲಿ , ಪ್ರತಿದಿನ ಸಂಜೆಯ ಸಮಯ 'ಧ್ವನಿ -ಬೆಳಕು' ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಾರೆ. ತೀರಾ ಹೃದಯಸ್ಪರ್ಶಿಯಾದ ಈ ಕಾರ್ಯಕ್ರಮವನ್ನು ಆಲಿಸಿ-ವೀಕ್ಷಿಸಿ ಹೊರ ಬರುವಾಗ, ನಮ್ಮ ಸ್ವಾತಂತ್ಯ್ರ ಹೋರಾಟಗಾರರು  ಮಾಡಿದ ತ್ಯಾಗ, ಅನುಭವಿಸಿದ ಹಿಂಸೆ, ಕೆಲವರಿಗೆ ಗಲ್ಲುಶಿಕ್ಷೆ- ಅವರಿಗೆ ಆಗಿರಬಹುದಾದ  ಹಸಿವು, ನಿರಾಶೆ, ನೋವು, ಅಸೌಖ್ಯತೆ,  ಏಕಾಂಗಿತನ- ಇವಕ್ಕೆಲ್ಲ ಕಾರಣವಾದ ಬ್ರಿಟಿಶ್ ಸರಕಾರ - ಸೆಲ್ಯುಲರ್ ಕುಖ್ಯಾತ ಜೈಲರ್ ಡೇವಿಡ್ ಬಾರಿಯ  ಅಟ್ಟಹಾಸದ ನುಡಿಗಳು ..ಇವೆಲ್ಲ ಮನಸ್ಸಿಗೆ ತುಂಬಾ  ವೇದನೆಯನ್ನು  ಉಂಟುಮಾಡುತ್ತವೆ.


ಈತನ ಹಿಂಸೆ ತಡೆಯಲಾರದೆ  ಕೆಲವರು ಮಾನಸಿಕವಾಗಿ  ಅಸ್ವಸ್ಥರಾದರಂತೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡರಂತೆ. 




ಮಧ್ಯ ದಲ್ಲಿ ಒಂದು ಗೋಪುರವಿದ್ದು, ಚಕ್ರದ ಕಡ್ಡಿಗಳಂತೆ 
ನಿರ್ಮಿಸಲಾದ ಜೈಲ್ ನಲ್ಲಿ ಏಳು 'ವಿಂಗ್'ಗಳು ಇದ್ದವಂತೆ.
ಪ್ರತಿ ವಿಂಗ್ ನಲ್ಲಿ ೩ ಅಂತಸ್ತುಗಳಿವೆ.








ಒಂದು ವಿಂಗ್ ನ ಮುಂಭಾಗಕ್ಕೆ  ಮತ್ತೊಂದು ವಿಂಗ್ ನ ಹಿಂಭಾಗದ ಗೋಡೆ ಕಾಣಿಸುವಂತೆ ಕಟ್ಟಿದ್ದಾರೆ. ಪ್ರತಿ ಸೆಲ್ ನಲ್ಲೂ, ಸುಮಾರು ೧೦ ಅಡಿ ಎತ್ತರದಲ್ಲಿ ಗವಾಕ್ಷಿ ಇದೆ. ಹಾಗಾಗಿ, ಸೆಲ್ ನ ಒಳಗಿರುವ ವ್ಯಕ್ತಿ ಇತರರೊಡನೆ ಸಂಪರ್ಕ ಸಾಧಿಸಲು ಸಾಧ್ಯವೇ ಇಲ್ಲ.

ವೀರ ಸಾವರ್ಕರ್ ಅವರ ಸಹೋದರ ಕೂಡ ಇದೆ ಜೈಲ್ ನಲ್ಲಿ ಬಂಧಿಯಾಗಿ ಇದ್ದರೆಂಬ ವಿಚಾರ ಅವರಿಗೆ ಎರಡು ವರುಷಗಳ ಕಾಲ ಗೊತ್ತಿರಲಿಲ್ಲವಂತೆ!! 

ಈಗ ಕೇವಲ ಎರಡು ವಿಂಗ್ ಗಳನ್ನು ಸ್ಮಾರಕ ವಾಗಿ ಉಳಿಸಿದ್ದಾರೆ.  ಇತರ ವಿಂಗ್ ಗಳನ್ನು  ಕೆಡವಿ  ಬೇರೆ  ಕಟ್ಟಡಗಳನ್ನು ನಿರ್ಮಿಸಲಾಗಿದೆ.
    
                          


ಒಬ್ಬರ ಮುಖ ಇನ್ನೊಬ್ಬರಿಗೆ ಕಾಣಿಸದಂತೆ ಕಟ್ಟಲಾದ 'ಸೆಲ್'ಗಳು, ಬಲವಾದ ಬೀಗಗಳು, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಹ ಪಹರೆ, ಅತಿ ಪರಿಶ್ರಮ ಬೇಡುವ ಗಾಣದ ಯಂತ್ರಕ್ಕೆ ಕತ್ತು ಒಡ್ಡುವ ಕೆಲಸ, ತೀರ ಕಳಪೆ, ಅತಿ ಕಡಿಮೆ ಆಹಾರ, ಕೆಲಸ ಮಾಡಲು ಅಸಾಧ್ಯವಾದಲ್ಲಿ  ಹೊಡೆತ, ಹೆಜ್ಜೆ ಹೆಜ್ಜೆಗೂ  ಅವಮಾನಕಾರಿಯಾದ  ಸನ್ನಿವೇಶ. ಒಂದು ವೇಳೆ ತಪ್ಪಿಸಿಕೊಂಡರೂ, ನಾಲ್ಕು ಕಡೆಯಲ್ಲೂ ಸಮುದ್ರ , ಹೋಗುವುದಾದರೂ ಹೇಗೆ? ತಪ್ಪಿಸಿಕೊಂಡ ಕೆಲವರನ್ನು  ಅಂಡಮಾನಿನ ಕಾಡುಗಳಲ್ಲಿದ್ದ ನರಭಕ್ಷಕ  ಆದಿವಾಸಿಗಳು ಕೊಂದರಂತೆ. ಸಿಕ್ಕಿಬಿದ್ದ  ಕೆಲವರನ್ನು ಬ್ರಿಟಿಷರು ಗಲ್ಲಿಗೆರಿಸಿದಂತೆ. 





ಇಂತಹ ಕಂಗೆಡಿಸುವ ವಾತಾವರಣದಲ್ಲೂ ಸ್ವಾತಂತ್ಯ್ರ ಯೋಧರ 'ವಂದೇ ಮಾತರಂ' ಎಂಬ ಕೆಚ್ಚಿನ ನುಡಿಗಳು ಕಳೆಗುಂದಲಿಲ್ಲ.
ಸುಮಾರು  ವರುಷಗಳನ್ನು ಅಂಡಮಾನಲ್ಲಿ ಕಳೆದ ವೀರ
ಸಾವರಕರ್ ಅವರ ದಿಟ್ಟನುಡಿಗಳು  ಇದಕ್ಕೆ ಸಾಕ್ಷಿ.  










ವೀರ ಸಾವರಕರ್ ಅವರ  ಸೆಲ್.







ಗಲ್ಲುಶಿಕ್ಷೆ ನಿಗದಿಯಾದವರು, ತಮ್ಮ ಅಂತಿಮ  ಸಂಸ್ಕಾರಗಳನ್ನು
ತಾವೇ ಮುಂಚಿತವಾಗಿ ಮಾಡಿ ನೇಣಿಗೆ ಸಿದ್ಧರಾಗುತಿದ್ದರಂತೆ.
ಇದಕ್ಕಾಗಿ ಜೈಲ್ ನ ಆವರಣದಲ್ಲಿ,
'ಫಾಸಿ ರೂಂ' ಪಕ್ಕದಲ್ಲಿ  ಒಂದು ಜಾಗವನ್ನು ನಿಗದಿಪಡಿಸಿದ್ದಾರೆ.


  
     



ಇಂತಹ ಯೋಧರ ಪರಿಶ್ರಮ, ತ್ಯಾಗ, ಬಲಿದಾನಗಳಿಂದಾಗಿ ಸಿಕ್ಕಿದ ಸ್ವಾತಂತ್ರ್ಯವನ್ನು ಆರಾಮವಾಗಿ ಅನುಭವಿಸುತ್ತಿರುವ ನಾವು, ಅವರ ಋಣವನ್ನು ಕಿಂಚಿತ್ತಾದರೂ ತೀರಿಸಲು ಅರ್ಹರೆ?

ಈ ಗುಂಗಿನಲ್ಲೇ  ಸೆಲ್ಯೂಲರ್ ಜೈಲ್ ನ ಆವರಣದಿಂದ  ಹೊರಬಂದಾಗ ನನಗೆ ಅನಿಸಿದ್ದು ಇಷ್ಟು : ಇನ್ನು  ಕಾಶಿ, ಪ್ರಯಾಗ ಇತ್ಯಾದಿ ಕ್ಷೇತ್ರಗಳಿಗೆ ಹೋಗದಿದ್ದರೂ ಅಡ್ಡಿಯಿಲ್ಲ, ಯಾಕೆಂದರೆ, ಅವಕ್ಕಿಂತಲೂ  ಶ್ರೇಷ್ಠವಾದ, ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಕ್ಷೇತ್ರವನ್ನು ಸಂದರ್ಶಿಸಿದೆನೆಂಬ ಧನ್ಯತಾ ಭಾವ ಸಿದ್ದಿಸಿತು.     

2 comments:

  1. ನಮಸ್ಕರ ಅಕ್ಕ, ನಿಂಗೊ ಅಂಡಮಾನಿಗೆ ಹೊಗಿ ಬಂದ ಸುದ್ದಿ ಕೇಳಲೆ ಕಾಯ್ತ ಇತ್ತಿದ್ದೆ. ಖುಶಿ ಆತು ನಿಂಗೊ ಬರೆದದ್ದು.

    ReplyDelete