Total Pageviews

Sunday, February 17, 2013

ತೀರದ ದಾಹ...ಬಂಡಿಪುರ

ಪರಿಸರ ಪ್ರೇಮಿಗಳಿಗೆ ಮೈಸೂರು -ಊಟಿ ರಸ್ತೆಯಲ್ಲಿರುವ ಬಂಡಿಪುರದ ರಕ್ಷಿತಾರಣ್ಯ ಅಚ್ಚುಮೆಚ್ಚಿನ ತಾಣ. ಹಿಂದೊಮ್ಮೆ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದಾಗ ಅಲ್ಲಿ ಎತ್ತ ನೋಡಿದರೂ  ಹಸಿರಾಗಿತ್ತು. ಹಾಗಾಗಿ,ಅರಣ್ಯ ಇಲಾಖೆಯ ಸಫಾರಿ ವ್ಯಾನ್ ನಲ್ಲಿ ಕಾಡೊಳಗೆ ಸುತ್ತು ಹಾಕಿದಾಗ ಬಹಳ ಸಂತಸವಾಗಿತ್ತು. 


ಆದರೆ ಈ ಬಾರಿ, ಫೆಬ್ರವರಿ ತಿಂಗಳಿನಲ್ಲಿಯೇ,  ಇನ್ನೂ ಕಡು ಬೇಸಗೆ ಆರಂಭವಾಗವ ಮೊದಲೇ ಭಣಗುಟ್ಟುವ ಅರಣ್ಯ ನಮ್ಮನ್ನು ಸ್ವಾಗತಿಸಿತು. ಒಣ ಹುಲ್ಲನ್ನು ಮೇಯುತ್ತಾ ವಿಶ್ರಮಿಸುತ್ತಿದ್ದ ಹಲವಾರು ಜಿಂಕೆಗಳೂ  ಕಡವೆಗಳೂ ಎದುರಾದುವು. ಒಂದು  ಕಾಡೆಮ್ಮೆ, ಒಂದು ಕಾಡುಕುರಿ, ಕೆಲವು ಕಾಡುಕೋಳಿಗಳು, ಕಾಡುಹಂದಿಗಳು ಹಾಗೂ ಕಾಡಾನೆ ಕೂಡ ಕಾಣಿಸಿದುವು. 




                       



ಹಸಿರೇ ಇಲ್ಲದ ಈ ಕಾಡಲ್ಲಿ, ಬತ್ತಿ ಹೋಗಿರುವ ಕೆರೆಗಳು ಬರದ ತೀವ್ರತೆಯನ್ನು ಅನಾವರಣಗೊಳಿಸಿದುವು. ಈ ಪ್ರಾಣಿಗಳಿಗೆ ಅಹಾರ-ನೀರು ಎಲ್ಲಿಂದ ಸಿಗಬೇಕು  ಎಂದು ನೆನೆದು ಖೇದವೆನಿಸಿತು.  

ಅರಣ್ಯ ಇಲಾಖೆಯವರು ಅಲ್ಲಲ್ಲಿ ಕೆಲವು ಪುಟ್ಟ ತಾತ್ಕಾಲಿಕ ಕೊಳಗಳನ್ನು ನಿರ್ಮಿಸಿ ಪ್ರಾಣಿಗಳಿಗೆ ನೀರುಣಿಸುವ ಮಹತ್ಕಾರ್ಯ ಮಾಡಿದ್ದಾರೆ. ಸಿಮೆಂಟ್ ರಿಂಗ್ ನಿಂದ ನಿರ್ಮಿಸಿದ ಪುಟ್ಟಕೊಳಗಳು ಹಾಗೂ ಪ್ಲಾಸ್ಟಿಕ್ ಶೀಟ್ ಅನ್ನು ಹಾಕಿ ನಿರ್ಮಿಸಿದ ಸಣ್ಣ ಕೊಳಗಳು ಕೆಲವು ಕಾಣಿಸಿತು. ಈ ಕಟ್ಟೆಗಳಿಗೆ ಟ್ರ್ಯಾಕ್ಟರ್ ನಲ್ಲಿ ನೀರು ತಂದು ಸುರಿಯುವ ವ್ಯವಸ್ಥೆ ಮಾಡಿದ್ದಾರೆ. ನಾವು ನೋಡುತ್ತಿದ್ದಂತೆಯೇ ದೂರದಿಂದ ಹಾರಿ ಬಂದ ಒಂದು ಹದ್ದು ಹಾರಿಬಂದು ಸಿಮೆಂಟ್ ರಿಂಗ್ ಮೇಲೆ ಕುಳಿತು ನೀರು ಕುಡಿದು  ಹಾರಿ ಹೋಯಿತು. 



ಪ್ರಕೃತಿಯ ಒಡ್ಡುವ ಸವಾಲುಗಳ ಮುಂದೆ ಮನುಷ್ಯ ಪ್ರಯತ್ನ ಗೌಣ ಎಂಬುದು  ಸತ್ಯ. ಆದರೂ ಪ್ರಕೃತಿ ಮುನಿಸಿಕೊಂಡಾಗ ಪ್ರಾಣಿ-ಪಕ್ಷಿಗಳ ದಾಹವನ್ನು ತಣಿಸಲು ತಮ್ಮಿಂದಾಗುವ ಪ್ರಯತ್ನ ಮಾಡಬೇಕಲ್ಲವೆ? ಈ ನಿಟ್ಟಿನಲ್ಲಿ  ಅರಣ್ಯ ಇಲಾಖೆಯ ಪ್ರಯತ್ನ ಶ್ಲಾಘನೀಯ. 

Thursday, February 7, 2013

ಕುದುರೆಮುಖ ಶಿಖರಗಾಮಿಗಳು!!!


ಗಣರಾಜ್ಯೋತ್ಸವ ದಿನವಾದ  ಜನವರಿ ೨೬ ಶನಿವಾರ ಹಾಗೂ ಮರುದಿನ ಭಾನುವಾರದ ರಜೆಯೂ ಇದ್ದುದರಿಂದ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಚಾರಣ ಏರ್ಪಡಿಸಿದ್ದರು.

ಜನವರಿ ೨೫ ರಂದು ರಾತ್ರಿ, ಸುಮಾರು ೨೦ ಜನರಿದ್ದ  ನಮ್ಮ ತಂಡ ಮೈಸೂರು ಬಿಟ್ಟಿತು. ಚಿಕ್ಕಮಗಳೂರು ಜಿಲ್ಲೆಯ ಕಳಸ ಮಾರ್ಗವಾಗಿ ಪ್ರಯಾಣಿಸಿ ಶಂಸೆ ಎಂಬ ಪುಟ್ಟ ಊರು ತಲಪಿದಾಗ ಬೆಳಗಾಗಿತ್ತು. ಊರು ಅಂದರೆ ಅಲ್ಲಿದ್ದುದು  ಎರಡು ಅಂಗಡಿಗಳು, ಎರಡು ಜೀಪ್ ಗಳು, ಪುಟ್ಟ ನದಿ, ಅದಕ್ಕೊಂದು ಸೇತುವೆ,ಪುಟ್ಟ ಕವಲು ದಾರಿ ಅಷ್ಟೆ. ಚಳಿ ಜೋರಾಗಿಯೇ ಇತ್ತು. ಹಾಗಾಗಿ ಸೇತುವೆ ಮೇಲೆ ನಿಂತು ಬಿಸಿಲು ಕಾಯಿಸುವುದು ಬಹಳ ಹಿತವಾಗಿತ್ತು.

ಅಲ್ಲಿಂದ ಮುಂದಕ್ಕೆ ಕಲ್ಲು-ಮಣ್ಣಿನ ತೀರ ಕಿರಿದಾದ  ರಸ್ತೆಯ ಮೂಲಕ  ನಡೆದು ಅಥವಾ ಜೀಪಿನಲ್ಲಿ ಪ್ರಯಾಣಿಸಿ 'ಮುಲ್ಲೋಡಿ ಸತೀಶ್' ಅವರ ಮನೆಗೆ ತಲಪಬೇಕಾಗಿತ್ತು. ಆಗಲೇ  ವಿಳಂಬವಾಗಿದ್ದರಿಂದ ನಾವು ನಾಲ್ಕು  ಮಂದಿ ಮಹಿಳೆಯರು ಎಲ್ಲರ ಲಗ್ಗೇಜ್ ನೊಂದಿಗೆ ಜೀಪಿನಲ್ಲಿ ಹೊರಟೆವು. ಇತರರು ಕಾಲ್ನಡಿಗೆಯಲ್ಲಿ ಬಂದರು. ಶಂಸೆಯಿಂದ ಮುಲ್ಲೋಡಿಗೆ ಸುಮಾರು ೬ ಕಿ.ಮಿ. ದೂರ. ತೀರ ಇಕ್ಕಾಟ್ಟಾದ ಈ ದಾರಿಯಲ್ಲಿ  ಜೀಪಿನ ಮೂಲಕ ಪ್ರಯಾಣಿಸಿ ಮುಲ್ಲೋಡಿ ತಲಪುವಷ್ಟರಲ್ಲಿ  ಟೊರಟೊರ - ಜೈಂಟ್ ವೀಲ್ ನಲ್ಲಿ ಕುಳಿತ ಅನುಭವ.



ಮುಲ್ಲೋಡಿ ಮನೆಯಿಂದ ಕುದುರೆಮುಖ ಶಿಖರದ ಕಡೆಗೆ ಚಾರಣಕ್ಕೆ ಹೊರಟ್ಟಾಗ ಬೆಳಗ್ಗೆ ೧೦.೩೦ ಘಂಟೆ ಕಳೆದಿತ್ತು. ಕಲ್ಲು-ಮಣ್ಣಿನ ದಾರಿಯಲ್ಲಿ ನಿಧಾನವಾಗಿ ಬೆಟ್ಟವೇರತೊಡಗಿದೆವು. ಸ್ವಲ್ಪ ದೂರದಲ್ಲಿ ಕಾಡು ಸಿಕ್ಕಿತು, ಕಾಡಲ್ಲೊಂದು ಪುಟ್ಟ ತೊರೆ, ಆಮೇಲೆ ಹುಲ್ಲುಗಾವಲು.......ಇದೇ ರೀತಿ ಪುನರಾವರ್ತನೆ ಆಗುತ್ತಾ ಸುಮಾರು ಒಂದು ಘಂಟೆ ನಡೆದಾದ 'ಒಂಟಿಮರ' ಕಟ್ಟೆ ಸಿಕ್ಕಿತು. ಅಲ್ಲಿ ಸ್ವಲ್ಪ ಹೊತ್ತು ಕುಳಿತು, ಸೌತೆಕಾಯಿ, ಹಣ್ಣು, ಕುರುಕಲು ತಿಂಡಿ  ಇತ್ಯಾದಿ ತಿಂದು ಹೊರಟೆವು. ಈ ಚಾರಣದ  ದಾರಿಯಲ್ಲಿ ಉದ್ದಕ್ಕೂ ಹುಲ್ಲುಗಾವಲು, ದಟ್ಟವಾದ ಶೋಲಾ ಅರಣ್ಯಗಳು, ಹಸಿರಾದ ಬೆಟ್ಟಗಳು, ನೀರಿನ ತೊರೆಗಳು ಲಭಿಸುತ್ತವೆ. ಅದೃಷ್ಟವಿದ್ದರೆ ಕಾಡು ಮೃಗಗಳೂ ಕಾಣ ಸಿಗುತ್ತವಂತೆ. ಅಲ್ಲೊಂದು ಕಡೆ 'ಲೋಬೊ ಮನೆ' ಎಂದು ಕರೆಯಲ್ಪಡುವ  ಪಾಳುಬಿದ್ದ ಮನೆ ಕಾಣಸಿಗುತ್ತದೆ.



ಮತ್ತೂ ಸ್ವಲ್ಪ ಮುನ್ನಡೆದಾಗ ಬಿಸಿಲು, ಹಸಿವು ಎರಡೂ ಹೆಚ್ಚಾಗಿತ್ತು. ಎದುರುಗಡೆಯಿಂದ ಶಿಖರ ಹತ್ತಿ ಕೆಳಗಿಳಿದು ಬರುತ್ತಿದ್ದ ಕೆಲವರನ್ನು ವಿಚಾರಿಸಿದಾಗ ಇನ್ನು ಹೆಚ್ಚು ದೂರವಿಲ್ಲವಾದರೂ ಮುಂದಿನ ಬೆಟ್ಟ ತುಂಬಾ ಕಡಿದಾಗಿದೆಯೆಂದೂ ಕನಿಷ್ಟ  ೩ ಘಂಟೆ ಬೇಕಾಗುತ್ತದೆಯೆಂದೂ  ಹೇಳಿದರು! ಹಾಗಾದರೆ  ನಾವು ಇನ್ನು ಮುಂದುವರಿದರೆ, ಶಿಖರ ತಲಪುವಷ್ಟರಲ್ಲಿ ಸಂಜೆಯಾಗಬಹುದು, ಆಮೇಲೆ ಮುಲ್ಲೋಡಿಗೆ ಹಿಂತಿರುಗುವಷ್ಟರಲ್ಲಿ ರಾತ್ರಿಯಾಗುವದರ ಜತೆಗೆ ನಮ್ಮಲ್ಲಿ ಚೈತನ್ಯ ಇರಲಾರದು ಅನಿಸಿತು. ಹಾಗಾಗಿ ಅಲ್ಲಿ ನೆರಳಿರುವ ಕಡೆ ವನಭೋಜನ ಮಾಡಿ ಹಿಂತಿರುಗುವುದೆಂದು ನಿಶ್ಚಯಿಸಿದೆವು. ನಮ್ಮ ತಂಡದ ಕೆಲವು  ಉತ್ಸಾಹೀ ತರುಣರು ಶಿಖರವೇರಿ ಧ್ವಜ ಹಾರಿಸಿ ಬರುತ್ತೇವೆಂದು ಹೊರಟರು.  ಅವರು ನುಡಿದಂತೆ ಸಾಧಿಸಿದ ಶಿಖರಗಾಮಿಗಳು!



ಮುಲ್ಲೋಡಿ ಮನೆಯಿಂದ ಮಧ್ಯಾಹ್ನದ ಊಟಕ್ಕೆ ಚಿತ್ರಾನ್ನ ಕೊಟ್ಟಿದ್ದರು. ನಾವು ಕೆಲವರು ಚಾರಣವನ್ನು ಅಲ್ಲಿಗೇ ನಿಲ್ಲಿಸಿ ಕುದುರೆಮುಖ ಶಿಖರಕ್ಕೆ ಸಮೀಪ ಬಂದುದಕ್ಕೆ ತೃಪ್ತಿ ಪಟ್ಟೆವು.  ಬಂದ ದಾರಿಯಲ್ಲಿ ಹಿಂತಿರುಗಿ, ಸಂಜೆ ೭ ಘಂಟೆಗೆ ಮುಲ್ಲೋಡಿ ಮನೆ ತಲಪಿದೆವು. ಟೀ-ಬಜ್ಜಿ ಸೇವಿಸಿ, ಆ ಮನೆಯ ಸದಸ್ಯರೊಂದಿಗೆ ಒಂದಿಷ್ಟು ಹರಟೆ ಹೊಡೆಯುವಷ್ಟರಲ್ಲಿ ಅಂಗಳದಲ್ಲಿ 'ಕಾಂಪ್ ಫೈರ್‍' ಹಾಕಿದ್ದರು.  ಹಗಲಿನ ವೇಳೆ ಸೆಖೆಯಿದ್ದರೂ ರಾತ್ರಿ ಅಲ್ಲಿ ತುಂಬಾ ಚಳಿಯಿತ್ತು. ಕಾಂಪ್ ಫೈರ್ ಪಕ್ಕ  ಚಳಿಕಾಯಿಸುತ್ತಾ ಸವಿದ ಚಪಾತಿ-ಪಲ್ಯ, ಪಲಾವ್-ಗೊಜ್ಜಿನ ಊಟ ಅದ್ಭುತವಾಗಿತ್ತು.

ಆ ದಿನ ಅಲ್ಲಿಗೆ ಬೆಂಗಳೂರಿನಿಂದಲೂ ಒಂದು ತಂಡ ಬಂದಿತ್ತು. ನಮ್ಮ ತಂಡ ಸತೀಶ್ ಅವರ ಮನೆಯಲ್ಲಿ ಮಲಗಿದರೆ,ಆ ತಂಡದವರು ಅಂಗಳದಲ್ಲಿ ಟೆಂಟ್ ಒಳಗೆ ಮಲಗಿದರು.




ಮುಲ್ಲೋಡಿ ಮನೆಯ ಮುಂದೆ ಕಾಫಿ ತೋಟ, ಸುತ್ತಲೂ ಕೋಟೆ ಕಟ್ಟಿದ ಹುದುರೆಮುಖ ಬೆಟ್ಟಗಳು, ಪಕ್ಕದಲ್ಲಿ ಸೋಮಾವತಿ ಜಲಪಾತ, ಸುತ್ತ ಮುತ್ತ ಹೆಸರು ಗೊತ್ತಿಲ್ಲದ ವನಸುಮಗಳ ರಾಶಿ,ಪಕ್ಕದಲ್ಲಿ ಹಸುವಿನ ಕೊಟ್ಟಿಗೆ, ಅಂಗಳದಲ್ಲಿ ಕಾಳು ಹೆಕ್ಕಿ ತಿನ್ನುವ ಕೋಳಿಗಳು, ನಿರಂತರವಾಗಿ ಪೈಪ್ ನಲ್ಲಿ ಹರಿದುಹೋಗುವ ನೀರು, ಹಿಟ್ಟು ರುಬ್ಬುವ ಕಲ್ಲು, ಸೌದೆ ಒಲೆಯಲ್ಲಿ ಅಡಿಗೆ, ಒಲೆಯ ಮುಂದೆಯೇ ಕುಳಿತು ಬಿಸಿ ಉಪ್ಪಿಟ್ಟು ತಿಂದು ಬೆಲ್ಲದ ಕಾಫಿ ಕುಡಿಯುತ್ತಿದ್ದ  ತಿನ್ನುತ್ತಿದ್ದ ಮನೆಯ ಯಜಮಾನ ಶೇಷಪ್ಪ........ ಒಟ್ಟಾರೆಯಾಗಿ ಅಪ್ಪಟ ಮಲೆನಾಡಿನ ಚಿತ್ರಣ. ಬೆಟ್ಟದ ಮೇಲೆ ಮನೆ ಮಾಡಿರುವ ಅವರಿಗೆ ಅತಿಥಿಗಳ ಊಟವ್ಯವಸ್ಥೆ ನೋಡಿಕೊಳ್ಳುವುದು ಸುಲಭವಲ್ಲ. ಆದರೂ  ಸತೀಶ್ ಅವರ ಮನೆಯರೆಲ್ಲರೂ ತಮ್ಮ ಪರಿಮಿತಿಯಲ್ಲಿ, ನಮ್ಮನ್ನು ಆತ್ಮೀಯವಾಗಿ ಉಪಚರಿಸಿ ಊಟ, ಉಪಾಹಾರ, ಸ್ನಾನ, ವಿಶ್ರಾಂತಿಗೆ ಅನುವು ಮಾಡಿಕೊಟ್ಟರು.   ಅವರೆಲ್ಲರಿಗೂ ಹೃತ್ಪೂರ್ವಕ ವಂದನೆಗಳು.    

ಮುಲ್ಲೋಡಿ ಮನೆಯಲ್ಲಿ ಚಾರಣಿಗರಿಗೆ ಅಗತ್ಯವಾದ ಮಾಹಿತಿ ಸಿಗುತ್ತದೆ. ಮುಂಚಿತವಾಗಿ ಸಂಪರ್ಕಿಸಿದರೆ ಅರಣ್ಯ ಇಲಾಖೆಯಿಂದ ಪಡೆಯಬೇಕಾದ ಅನುಮತಿ ಪತ್ರ, ಊಟ ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುತ್ತಾರೆ. ಆಸಕ್ತರು ಇವರ ಸಹಾಯದಿಂದ ಮಿತವ್ಯಯದಲ್ಲಿ ಕುದುರೆಮುಖ ಚಾರಣ ಕೈಗೊಳ್ಳಬಹುದು.  ಅವರ ವಿಳಾಸ: ಸತೀಶ್, ಮುಲ್ಲೋಡಿ ಹೌಸ್, ಶಂಸೆ, ಫೋನ್: ೦೮೨೬೩ ೨೪೯೫೯೫.

ಮರುದಿನ ಬೆಳಗ್ಗೆ  ಮುಲ್ಲೋಡಿ ಮನೆಯಿಂದ ಉಪಾಹಾರ ಸೇವಿಸಿ ಹೊರಟೆವು. ದಾರಿಯಲ್ಲಿ ಸಿಕ್ಕಿದ 'ಕಡಾಂಬಿ' ಜಲಪಾತವನ್ನು ದೂರದಿಂದ ನೋಡಿದೆವು. ಇನ್ನೂ ಸ್ವಲ್ಪ ಮುಂದೆ 'ಗಂಗಾ ಮೂಲ' ಎಂಬ ಸ್ಥಳಕ್ಕೆ ಒಂದು ಕಿ.ಮಿ. ನಡೆದು ಕೆಲವರು ಹೋಗಿ ಬಂದರು. ಕುದುರೆಮುಖ ಪಟ್ಟಣದಲ್ಲಿರುವ 'ಲಕ್ಯಾ' ಅಣೆಕಟ್ಟಿಗೂ ಭೇಟಿ ಕೊಟ್ಟೆವು. ಈ ಅಣೆಕಟ್ಟಿನಲ್ಲಿ ಹಿಂದೆ ಕಬ್ಬಿಣದ ಅದಿರು ಸಂಸ್ಕರಣ ಕಾರ್ಯದಲ್ಲಿ  ಮಲಿನವಾದ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಈಗ ಗಣಿಗಾರಿಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಈ ಅಣೆಕಟ್ಟು ಒಣಗಿ ಭಣಗುಟ್ಟುತ್ತಿದೆ.  


ಆಮೇಲೆ ಸಿಕ್ಕಿದುದು 'ಹನುಮಾನ್ ಗುಂಡಿ' ಎಂಬ ಜಲಪಾತ. ಇಲ್ಲಿ ದಟ್ಟ ಕಾಡಿನಲ್ಲಿ ೩೦೦ ಮೆಟ್ಟಿಲು ಕೆಳಗಿಳಿಯಬೇಕು. ಜಲಪಾತ ತುಂಬಾ ಸೊಗಸಾಗಿತ್ತು. ಅನಂತರ ಶೃಂಗೇರಿ ಮಾರ್ಗವಾಗಿ ಮೈಸೂರಿಗೆ ತಲಪಿದಾಗ ರಾತ್ರಿಯಾಗಿತ್ತು.



ವಿಭಿನ್ನ ಪರಿಸರ ಹಾಗೂ ಮಲೆನಾಡಿನ ಸರಳ ಮನೆಯ ವಾಸ್ತವ್ಯದ ಅವಕಾಶ ಕಲ್ಪಿಸಿದ ಈ ಚಾರಣ ತುಂಬಾ ಚೆನ್ನಾಗಿತ್ತು. ಈ ಬಾರಿ ಕುದುರೆಮುಖ ಶಿಖರವೇರದಿದ್ದರೂ ಮರಳಿ ಯತ್ನವ ಮಾಡಬೇಕೆಂಬ ಛಲ ಮೂಡಿಸಿತು.














Thursday, January 24, 2013

ಗೋಮಾತೆಗೆ ಬಣ್ಣ ಬಳಿಯಬೇಕೆ?

ಸಂಕ್ರಾಂತಿ ಹಬ್ಬ ಕಳೆಯಿತು.  ಹಬ್ಬದ ಹಲವಾರು ಆಚರಣೆಗಳಲ್ಲಿ  ಗೋ-ಪೂಜೆಯೂ ಒಂದು.  ಜನವರಿ ೧೪ ನೇ    ತಾರೀಕಿನಂದು ಸಂಕ್ರಾಂತಿ ಹಬ್ಬಕ್ಕೆ ಸಿಂಗಾರಗೊಂಡ  ಹಸು ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದರೂ ಇನ್ನೂ ಬಣ್ಣ ಮೆತ್ತಿಕೊಂಡೇ ಇದೆ.

ಬಣ್ಣಬಣ್ಣದ  ಬಟ್ಟೆ ತೊಟ್ಟು   ಸಂಭ್ರಮಿಸುವ ನಾವು,  ಗೋಮಾತೆಗೆ  ಬಣ್ಣ ಬಳಿಯುವುದು  ಎಷ್ಟು ಸರಿ? ಬಣ್ಣಗಳಲ್ಲಿ ಬಳಸಲಾಗುವ  ಸೀಸ, ಕ್ಯಾಡ್ಮಿಯಂ ಇತ್ಯಾದಿಗಳ ಲವಣಗಳು ಚರ್ಮಕ್ಕೆ  ಹಾನಿಕಾರಕ.  ಮನುಷ್ಯರ ಸಂಭ್ರಮಕ್ಕೆ ಮೂಕ  ಪ್ರಾಣಿ   ಎಷ್ಟು ಹಿಂಸೆ ಪಡುತ್ತಿದೆಯೋ?



ಹೇ ...ಕಳ್ಳೀ ...


ಮೊನ್ನೆ ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಏರಿದೆವು. ಅಲ್ಲಿಂದ ಉತ್ತನಹಳ್ಳಿಯ ಕಡೆಗೆ ಬೆಟ್ಟದ ಮಧ್ಯೆ  ಕಾಡಿನ ನಮ್ಮ ನಿಸರ್ಗ ಚಾರಣ. ಉತ್ತನಹಳ್ಳಿಯಲ್ಲಿ  'ತ್ರಿಪುರ ಸುಂದರಿ ಜ್ವಾಲಾಮುಖಿ'ಯ  ದೇವಾಲಯವಿದೆ. ಈಕೆ, ಚಾಮುಂಡೇಶ್ವರಿಯ ತಂಗಿ ಎಂಬ ನಂಬಿಕೆ.

ಕುರುಚಲು ಕಾಡಿನ  ಈ ಚಾರಣದ ದಾರಿಯುದ್ದಕ್ಕೂ ನಮಗೆ ಕಾಣಸಿಕ್ಕಿದುದು ವಿವಿಧ ಪ್ರಭೇದದ 'ಕಳ್ಳಿ'ಯರು!!! ಕೆಂಪು, ಹಳದಿ  ಹೂವಿನಿಂದ ಕಂಗೊಳಿಸುವ ಹೂಗಳ ಜತೆಗೆ ಹಸಿರು-ಕೆಂಪು ಹಣ್ಣುಗಳನ್ನು ಹೊತ್ತಿದ್ದ 'ಕಳ್ಳಿ' ಗಿಡಗಳನ್ನು ಕ್ಯಾ ಮೆರಾದಲ್ಲಿ ಸೆರೆಹಿಡಿದೆವು.



                                  
             
ಕಳ್ಳಿ ಹಣ್ಣು 

                                          

Sunday, October 14, 2012

ಹದಿನಾರು ಮುಖದ ಚಾವಡಿ


ಕಾಲಚಕ್ರವನ್ನು ಸುಮಾರು ೩೫೦ ವರ್ಷ ಹಿಂತಿರುಗಿಸಿ ...

ಹೆಡತಲೆ ಎಂಬೊಂದು ಊರು....ಊರಿಗೊಬ್ಬ ರಾಜ ಭೀಮಣ್ಣ ನಾಯಕ...ಆತನಿಗೊಬ್ಬಳು ರಾಣಿ...ಅವರಿಗೆ ೧೬ ಹೆಣ್ಣು ಮಕ್ಕಳು. ಎಲ್ಲಾ ಹೆಣ್ಣು ಮಕ್ಕಳನ್ನು ಯುಕ್ತ ವಯಸ್ಸಿಗೆ ಮದುವೆ ಮಾಡಿಕೊಟ್ಟು, ಮಗಳಂದಿರು ಹಾಗೂ ಅಳಿಯಂದಿರೊಂದಿಗೆ ಆಗಾಗ್ಗೆ ಕುಶಲೋಪರಿ ನಡೆಸುತ್ತಾ  ಮನೆಮಂದಿಯೆಲ್ಲ ಒಟ್ಟಾಗಿ ಸಂಭ್ರಮಿಸುವ ಆಸೆ ರಾಜನಿಗೆ. ಆಗ ಎದುರಾದದ್ದು ಒಂದು ಸಮಸ್ಯೆ. ರಾಜನಿಗೆ ತನ್ನ ಯಾವ ಮಗಳ ಗಂಡ ಯಾರು ಎಂಬ ಗೊಂದಲವಾಗುತ್ತಿತ್ತಂತೆ. ಮೇಲಾಗಿ, ಆಗಿನ ಕಾಲದ ಪದ್ಧತಿಯಂತೆ, ಅತ್ತೆಯಾದವಳು ತನ್ನ ಅಳಿಯಂದಿರನ್ನು ಮುಖವನ್ನು ನೋಡುವಂತಿಲ್ಲ.

ರಾಜ-ರಾಣಿ, ಎಲ್ಲಾ ಮಗಳಂದಿರು ಮತ್ತು ಅಳಿಯಂದಿರು  ಅಂದರೆ ಒಟ್ಟು ೧+೧+೧೬+೧೬ = ೩೪ ಜನ  ಏಕ ಕಾಲದಲ್ಲಿ ಕೂರುವ ಆಸನ ವ್ಯವಸ್ಥೆಯಿರಬೇಕು,ರಾಜನಿಗೆ ಎಲ್ಲರೂ ಕಾಣಿಸಬೇಕು, ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸಬೇಕು. ಪ್ರತೀ ಹೆಣ್ಣುಮಗಳೂ ತನ್ನ  ಗಂಡನ ಜತೆ ಅನುಕ್ರಮವಾಗಿ ಕೂರಬೇಕು. ಇಂತಹ ಚಾವಡಿಯನ್ನು ವಿನ್ಯಾಸಗೊಳಿಸಬೇಕೆಂದು ರಾಜನು ಸೂಚಿಸಿದಾಗ, ಅಂದಿನ ಹೊಯ್ಸಳ ವಾಸ್ತುಶಿಲ್ಪಿಗಳು ರಚಿಸಿದ  ಅದ್ಭುತ ಸಭಾಂಗಣವೇ 'ಹದಿನಾರು ಮುಖದ ಚಾವಡಿ'. ಈ ಚಾವಡಿಗೆ, ನಾಲ್ಕೂ ಮೂಲೆಗಳಿದ್ದು, ೧೬ ಕಂಭಗಳಿವೆ. ಪ್ರತಿ ಕಂಭಕ್ಕೆ ತಾಗಿಕೊಂಡಂತೆ ಇಬ್ಬರು ಕೂರುವಂತ ಕಲ್ಲಿನ ಸೋಫಾ  ಇದೆ. ಚಾವಡಿಯ ಮಧ್ಯ ಭಾಗದಲ್ಲಿಯೂ ವಿಶೇಷ ಕೆತ್ತನೆಯುಳ್ಳ ಕಂಭಗಳಿವೆ.

ಅಲ್ಲಿನ ಅರ್ಚಕರು ನಮಗೆ ವಿವರಿಸಿದಂತೆ, ರಾಜ ಕೂರುತ್ತಿದ್ದ ಜಾಗದಿಂದ ನೋಡಿದರೆ  ಇಡೀ ಸಭಾಂಗಣ ಕಾಣಿಸುತ್ತದೆ. ರಾಣಿ ಕೂರುತ್ತಿದ್ದ ಜಾಗದಿಂದ ನೋಡಿದರೆ, ಪ್ರತೀ ಸೋಫಾದ   ಅರ್ಧ ಭಾಗ ಕಾಣಿಸುತ್ತದೆ. ಅಂದರೆ ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸುತ್ತಿದ್ದರು ಎಂದಾಯಿತು. ಎಂಥಹಾ ಸೃಜನಶೀಲ ವಾಸ್ತು ವಿನ್ಯಾಸ!

'





ಹದಿನಾರು ಮುಖದ ಚಾವಡಿ' ಇರುವುದು ಹೆಡತಲೆ ಲಕ್ಷ್ಮೀಕಾಂತ ದೇವಾಲಯದಲ್ಲಿ. ಹಿಂದೆ ಇದು ಕೌಂಡಿನ್ಯ ಋಷಿಗಳು ತಪಸ್ಸನ್ನಾಚರಿಸುತ್ತಿದ್ದರಂತೆ. ಅಸುರನೊಬ್ಬ ಅವರಿಗೆ ಕಿರುಕುಳ ಕೊಡುತ್ತಿದ್ದ ಕಾರಣ ಅವರು ಲಕ್ಷ್ಮೀಕಾಂತ ಸ್ವಾಮಿಯ ಮೊರೆ ಹೊಕ್ಕರಂತೆ. ಅಸುರ ನಿಗ್ರಹವಾಗಿ ಆತನ ತಲೆ ಎಡಭಾಗಕ್ಕೆ ಬಿತ್ತಂತೆ. ಹೀಗಾಗಿ ಊರಿಗೆ ಎಡತಲೆ ಎಂಬ ಹೆಸರಾಯಿತು, ಕಾಲಾಂತರದಲ್ಲಿ ಅದು  'ಹೆಡತಲೆ' ಆಯಿತು. ಅಸುರನ ಹೆಮ್ಮರದಂತಹ ಕಾಲು ಬಿದ್ದ ಜಾಗ 'ಹೆಮ್ಮರಗಾಲ'ವಾಯಿತು. ಹೆಮ್ಮರಗಾಲ ಎಂಬ ಊರು ಹೆಡತಲೆಯಿಂದ ೧-೨ ಕಿ.ಮಿ ದೂರದಲ್ಲಿದೆ. ಅಲ್ಲಿಯೂ ಕೌಂಡಿನ್ಯರಿಂದ ಸ್ಥಾಪಿತವಾದ ಸಂತಾನ ಗೋಪಾಲಸ್ವಾಮಿಯ ದೇವಾಲಯವಿದೆ. ಹೀಗಿದೆ ಸ್ಥಳಪುರಾಣ ಅಥವಾ ದಂತಕಥೆ.

ಇಲ್ಲಿ ಅಚ್ಚುಕಟ್ಟಾದ, ೩ ಗರ್ಭಗುಡಿಯನ್ನು ಹೊಂದಿದ ದೇವಾಲಯವಿದೆ. ಹಾಗಾಗಿ ಇದಕ್ಕೆ ತ್ರಿಕುಟಾಚಲವೆಂಬ ಹೆಸರೂ ಇದೆ. ಇಲ್ಲಿನ  ಆಂಡಾಳ್ ಅಮ್ಮನವರ ವಿಗ್ರಹದ ಶಿಲ್ಪ ತುಂಬಾ ಸೊಗಸಾಗಿದೆ. ಅರ್ಚಕರು ವಿವರಿಸುವಂತೆ,ದೀಪ ಆರತಿಯ ತಟ್ಟೆಯನ್ನು ಅಮ್ಮನವರ ಹಣೆಯಿಂದ ಕೆಳಗೆ ನಿಧಾನವಾಗಿ ಸರಿಸಿದಾಗ, ಮೂರ್ತಿಯ ಕಣ್ಣುಗಳು ತುಂಬಾ ಕಾಂತಿಯುತವಾಗಿ, ನೈಜವಾಗಿ   ಕಾಣಿಸುತ್ತವೆ.  

ಹೊಯ್ಸಳರ ಕಾಲದಲ್ಲಿ ಅದೆಷ್ಟು ಚಿಕ್ಕ-ದೊಡ್ಡ ದೇವಾಲಯಗಳನ್ನು ಕಟ್ಟಿದ್ದರೋ? ಪ್ರಖ್ಯಾತವಾದ ಕೆಲವು ದೇವಸ್ಥಾನಗಳನ್ನು  ಬಿಟ್ಟರೆ, ಇಂಥಹ ವಿಶಿಷ್ಟ ದೇವಾಲಯಗಳ ಬಗ್ಗೆ ಲಭ್ಯವಿರುವ  ಮಾಹಿತಿ ಕಡಿಮೆ.

ಹೆಡತಲೆಗೆ ಹೋಗುವ ದಾರಿ:


ಮೈಸೂರಿನಿಂದ ಹೊರಟು ನಂಜನಗೂಡು ದಾರಿಯಾಗಿ, ಚಾಮರಾಜನಗರದ ಕಡೆಗೆ ಬಸ್ ಅಥವಾ ರೈಲ್ ನಲ್ಲಿ ಪ್ರಯಾಣಿಸಿ, ಬದನವಾಳು ಎಂಬಲ್ಲಿ ಇಳಿಯಬೇಕು.  ಅಲ್ಲಿಂದ ಸುಮಾರು ೫ ಕಿ.ಮಿ. ದೂರದ ಹಳ್ಳಿ ರಸ್ತೆಯಲ್ಲಿ ಸಾಗಬೇಕು.  ಕಾರಿನಲ್ಲೂ ಹೋಗಬಹುದು.

Saturday, October 6, 2012

ದಂಡ ದರ್ಶನಂ ಪಾಪ ನಾಶನಂ,ದಂಡ ಸ್ಪರ್ಶನಂ ಪುಣ್ಯ ವರ್ಧನಂ



ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿ, ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯವಿದೆ. ಇಲ್ಲಿ ಹಿಂದೆ ಕೌಂಡಿನ್ಯ ಮಹರ್ಷಿಯು ತಪಸ್ಸು ಮಾಡುತ್ತಿದ್ದರಂತೆ.

ಈ ದೇವಾಲಯದ ಚರಿತ್ರೆ ಹೀಗಿದೆ. ಬಹಳ ಹಿಂದೆ ಅಲ್ಲಿ ರಾಜ್ಯವಾಳುತ್ತಿದ್ದ  ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ  ಸ್ವಪ್ನದಲ್ಲಿ ಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ ಚಕ್ರ ಮುರಿದು ಬೀಳುವುದೆಂದೂ, ಆ ಸ್ಥಳದಲ್ಲಿ  ಅಗೆಸಿದರೆ ವೇಣುಗೋಪಾಲಸ್ವಾಮಿಯ ವಿಗ್ರಹ ಲಭಿಸುವುದೆಂದೂ, ಅದನ್ನು ಒಯ್ದು ಕೌಂಡಿನ್ಯ ಋಷಿಗಳಿಂದ  ಸ್ಥಾಪಿಸಿ ಪೂಜಿಸೆಂದೂ ಅನುಗ್ರಹವಾಯಿತಂತೆ.  ಕನಸಿನಂತೆಯೇ ಘಟನೆಗಳು ನಡೆದು, ಈಗಿನ ಹೆಮ್ಮರಗಾಲದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯ ರೂಪುಗೊಂಡಿತು. ಕಾಲಾನಂತರದಲ್ಲಿ ಹೊಯ್ಸಳರ ಪಾಳೆಯಗಾರರ ಆಳ್ವಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿಗೊಂಡಿತು. ಈಗಿನ  ದೇವಸ್ಥಾನವನ್ನು ೧೩ ನೆಯ ಶತಮಾನದಲ್ಲಿ ಕಟ್ಟಲಾಯಿತಂತೆ.

ಕೊಳಲನ್ನೂದುವ ವೇಣುಗೋಪಾಲನ ವಿಗ್ರಹ ತುಂಬಾ ಸುಂದರವಾಗಿದೆ. ಇವನ ಕುರಿತು ಹಬ್ಬಿರುವ ದಂತಕತೆ ಇನ್ನೂ ಸೊಗಸಾಗಿದೆ. ಬಾಲಗೋಪಾಲನಾಗಿ ಕಂಗೊಳಿಸುವ ವೇಣುಗೋಪಾಲನಿಗೆ ಸಂತಾನಗೋಪಾಲ ಎಂಬ ಹೆಸರೂ ಇದೆ.  ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತಾರೆಂಬ ನಂಬಿಕೆ. ಅದಕ್ಕೆ ಸಾಕ್ಷಿಯಾಗಿ ದೇವರಿಗೆ ಅರ್ಪಿಸಿದ ಪುಟ್ಟ ಬೆಳ್ಳಿಯ ತೊಟ್ಟಿಲುಗಳು ಅಲ್ಲಿ ತೂಗಾಡುತ್ತಿದ್ದುವು.

ಇದಲ್ಲದೆ ಈ ಸ್ವಾಮಿಗೆ 'ಹುಚ್ಚು ಗೋಪಾಲ' ಎಂಬ ಹೆಸರೂ ಇದೆ! ಇನ್ನೊಂದು ಕಥೆಯ ಪ್ರಕಾರ ಅಲ್ಲಿ ಆಳಿದ ಚೋಳ ರಾಜನೊಬ್ಬನಿಗೆ ೧೨ ಜನ ಹೆಣ್ಣು ಮಕ್ಕಳಿದ್ದರಂತೆ. ಪುತ್ರ್ರಾಕಾಂಕ್ಷಿಯಾಗಿ  ವೇಣುಗೋಪಾಲನನ್ನು  ಭಕ್ತಿಯಿಂದ ಪೂಜಿಸಿದರೂ ಆತನ ೧೩ನೆಯ ಮಗು ಹೆಣ್ಣಾಗಿ ಹುಟ್ಟಿತಂತೆ. ನಿರಾಶೆಯಿಂದ ರಾಜ-ರಾಣಿ ಇಬ್ಬರೂ ದೇವಾಲಯದಲ್ಲಿಯೇ  ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿ, ಕೊನೆಯ ಬಾರಿಗೆ ನವಜಾತ ಶಿಶುವನ್ನು ನೋಡಿ ಸಾಯೋಣ ಎಂದು ಮಗುವನ್ನು ನೋಡಿದಾಗ ಅದು ಗಂಡು ಮಗುವಾಗಿತ್ತಂತೆ. ಭಕ್ತಿ-ಆಶ್ಚರ್ಯ- ಸಂತೋಷಾತಿರೇಕದಿಂದ ಆತ ದೇವರನ್ನು 'ಹುಚ್ಚು ಗೋಪಾಲ'ನೆಂದು ಕರೆದು ಪೂಜಿಸಿದಂತೆ. ಹೀಗೆ ಬಹು ನಾಮಾಂಕಿತ ಈ ಗೋಪಾಲ.


ಈ ದೇವಾಲಯದ ಇನ್ನೊಂದು ವಿಶೇಷವೇನೆಂದರೆ 'ಕೌಂಡಿನ್ಯ ಮಹರ್ಷಿಯ  ದಂಡ'    . ನಂಬಿಕೆಯ ಪ್ರಕಾರ ಕೌಡಿನ್ಯರು ಸದ್ಗತಿ ಹೊಂದುವ ಸಮಯದಲ್ಲಿ ತನ್ನ ತಪಶ್ಶಕ್ತಿಯನ್ನು  ದಂಡಕ್ಕೆ ವರ್ಗಾಯಿಸಿ, ಭಕ್ತರ ಸಕಲ ಕಷ್ಟಗಳನ್ನೂ ಪರಿಹರಿಸಿದರಂತೆ. ಹಾಗಾಗಿ ಈ ದೇವಸ್ಥಾನದಲ್ಲಿ 'ದಂಡ ದರ್ಶನಂ ಪಾಪ ನಾಶನಂ, ದಂಡ ಸ್ಪರ್ಶನಂ ಪುಣ್ಯ ವರ್ಧನಂ'. ಹೂವಿನಿಂದ ಅಲಂಕೃತವಾದ ದಂಡವನ್ನು ಹಿಡಿದ ಅರ್ಚಕರು ಹಿಡಿದಿರುತಾರೆ. ಸಾಲಾಗಿ ಬರುವ ಭಕ್ತರು ಶಿರವೊಡ್ಡಿ ದಂಡವನ್ನು ಮೆತ್ತಗೆ ಸ್ಪರ್ಶಿಸುತ್ತಾರೆ. ಶನಿವಾರ ಹಾಗೂ ಭಾನುವಾರ  ಮಾತ್ರ ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯ ವರೆಗೆ 'ದಂಡ ಸ್ಪರ್ಶನ' ಮಾಡಲು ಅವಕಾಶವಿರುತ್ತದೆ. ಉಳಿದ ದಿನಗಳಲ್ಲಿ ಈ ಕಾರ್ಯಕ್ರಮವಿರುವುದಿಲ್ಲ.





ಅಲ್ಲಿಗೆ ಹೋಗುವ ವರೆಗೆ  ಈ ವಿಚಾರಗಳಾವುವೂ ನಮಗೆ ಗೊತ್ತಿರಲಿಲ್ಲ. ಆದರೂ  ಭಾನುವಾರವಾಗಿದ್ದರಿಂದ ದಂಡಸ್ಪರ್ಶನ ಸಾಧ್ಯವಾಯಿತು.  ಹುಣ್ಣಿಮೆಯ ದಿನವಾಗಿದ್ದರಿಂದ ವಿಶೇಷ ಕಾರ್ಯಕ್ರಮವಾಗಿ ಸುದರ್ಶನ ಯಾಗ ನಡೆಯುತ್ತಿತ್ತು. ಪ್ರಸಾದ ಅನ್ನ ಸಂತರ್ಪಣೆಯಲ್ಲೂ ಪಾಲ್ಗೊಂಡೆವು. ರುಚಿಯಾದ ಸಿಹಿ ಪೊಂಗಲ್, ಖಾರ ಪೊಂಗಲ್ ಸವಿದು ಮರಳಿದೆವು.

ಹೆಮ್ಮರಗಾಲಕ್ಕೆ ಹೋಗುವ ದಾರಿ : ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ   ಹೊರಟು ಬದನವಾಳು ಎಂಬಲ್ಲಿ ಇಳಿಯಬೇಕು. ಅಲ್ಲಿಂದ ಹೆಮ್ಮರಗಾಲಕ್ಕೆ  ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಆದರೆ ದೇವಸ್ಥಾನದ ವರೆಗೆ ಹೋಗಬಹುದು. ಹಳ್ಳಿ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಪ್ರಯಾಣಿಸಬೇಕು. ಬೇಕಾದಷ್ಟು ಸಮಯವಿದ್ದರೆ, ಗುಂಪಲ್ಲಿ ಹರಟುತ್ತಾ, ದಾರಿಯಲ್ಲಿ ಸಿಗುವ ಎಳನೀರು ಕುಡಿಯುತ್ತಾ, ಕಬ್ಬು ತಿನ್ನುತ್ತಾ, ನಡೆಯುವುದನ್ನೇ ಕೆಲಸವನ್ನಾಗಿಸಬಹುದು.

Friday, October 5, 2012

ಕತ್ತಾಳೆ


ಕ್ಯಾಕ್ಟಸ್ ವರ್ಗಕ್ಕೆ ಸೇರಿದ ಗಿಡಗಳು ಹೂಕುಂಡಗಳಲ್ಲಿ ಶೋಭಿಸುವುದಕ್ಕೆ ಮಾತ್ರ ಲಾಯಕ್ಕು ಎಂದು ತಿಳಿದಿದ್ದೆ. ಈ ವರ್ಗಕ್ಕೆ ಸೇರಬಹುದಾದ 'ಕತ್ತಾಳೆ' ಎಂಬ  ಗಿಡದ ಎಲೆಯಿಂದ ಹಗ್ಗ ತಯಾರಿಸುತ್ತಾರ್‍ಎಂದು ಮೊನ್ನೆ ತಾನೇ ತಿಳಿಯಿತು. ನಂಜನಗೂಡಿನ ಬದನವಾಳು ಸಮೀಪ ಹಳ್ಳೀ ದಾರಿಯಲ್ಲಿ ನಡೆಯುತ್ತಿದ್ದಾಗ ಕ್ಲಿಕ್ಕಿಸಿದ ಚಿತ್ರಗಳಿವು.



ಹಿಂದೆ ಈ ಎಲೆಗಳನ್ನು ನೀರಲ್ಲಿ ದಿನಗಟ್ಟಲೆ ನೆನೆಸಿ ನಾರು ತೆಗೆಯುತ್ತಿದ್ದರಂತೆ. ಈಗ ಈ ಕೆಲಸವನ್ನು ಯಂತ್ರ ಕ್ಷಣಾರ್ಧದಲ್ಲಿ  ಮಾಡುತ್ತದೆ. ನಾರನ್ನು ಬಿಸಿಲಿನಲ್ಲಿ ಒಣಗಿಸಿ ಹಗ್ಗ ತಯಾರಿಸುತ್ತಾರಂತೆ.