Total Pageviews

Sunday, December 11, 2011

ನೀರಿನಿಂದ ಮೇಲೆದ್ದ ವೇಣುಗೋಪಾಲಸ್ವಾಮಿ....

ಮೈಸೂರಿನ ಯಾವುದೇ  ರಸ್ತೆಯಲ್ಲಿ ನಿಂತು ಯಾವುದೇ ಕಡೆಗೆ ಪ್ರಯಾಣ ಮಾಡಿದರೂ ಯಾವುದಾದರೊಂದು ಪ್ರೇಕ್ಷಣೀಯ ಸ್ಠಳ ಅಥವಾ ಚಾರಿತ್ರಿಕ ಸ್ಮಾರಕ ತಲಪುತ್ತೇವೆ. ಇದು ನಮ್ಮ ಮೈಸೂರಿನ ಹಿರಿಮೆ!

















ಕಳೆದ ಭಾನುವಾರ ಮೈಸೂರಿನಿಂದ  ಸುಮಾರು ೨೫  ಕಿ.ಮೀ  ದೂರದಲ್ಲಿರುವ ಹೊಸ ಕನ್ನಂಬಾಡಿಗೆ  ಹೋಗಿದ್ದೆವು. ಕೃಷ್ಣರಾಜಸಾಗರ ಅಣೆಕಟ್ಟು  ಕಟ್ಟುವ ಸಂದರ್ಭದಲ್ಲಿ, ಕಾವೇರಿ ನದಿಯ ಹಿನ್ನೀರಿನಲ್ಲಿ ಮುಳುಗಡೆಯಾದ ಹಲವಾರು ಹಳ್ಳಿಗಳಲ್ಲಿ ಕನ್ನಂಬಾಡಿಯೂ ಒಂದು.

ಅಲ್ಲಿದ್ದ, ೧೨ ನೆಯ ಶತಮಾನದಲ್ಲಿ ಕಟ್ಟಿದ್ದ ವೇಣುಗೋಪಾಲಸ್ವಾಮಿಯ ದೇವಸ್ಥಾನವೂ ಮುಳುಗಡೆಯಾಗಿತ್ತು. ೨೦೦೨ರಲ್ಲಿ, ಅಣೆಕಟ್ಟಿಗೆ ನೀರಿನ ಒಳಹರಿವು ತೀರ ಕ್ಷೀಣವಾಗಿದ್ದಾಗ, ಈ ದೇವಸ್ಥಾನವು ಪುನ: ಕಾಣಿಸಿಕೊಂಡು ಆಸಕ್ತರನ್ನು ಸೆಳೆದಿತ್ತು.

ಮೈಸೂರಿನಿಂದ ಕೃಷ್ಣರಾಜಸಾಗರ  ಕಡೆಗೆ ಹೋಗುವ ದಾರಿಯಲ್ಲಿ, ಬೃಂದಾವನ ಗಾರ್ಡನ್ ಟೋಲ್ ಗೇಟ್  ಮೂಲಕ ಸ್ವಲ್ಪ ದೂರ ಸಾಗಿ, ಬಸ್ತಿಹಳ್ಳಿ  ಎಂಬ ಪುಟ್ಟ ಊರು ದಾಟಿ, ಹಚ್ಚ ಹಸುರಿನ ಗದ್ದೆಗಳ ನಡುವೆ ಪ್ರಯಾಣಿಸಿದಾಗ, ಹೊಸ ಕನ್ನಂಬಾಡಿ ಹಳ್ಳಿಯಲ್ಲಿ, ನಿರ್ಮಾಣದ ಹಂತದಲ್ಲಿರುವ ಜಲಾಂತರ್ಗತ  ವೇಣುಗೋಪಾಲಸ್ವಾಮಿಯ ದೇವಸ್ಥಾನ ಗೋಚರಿಸುತ್ತದೆ.

ಮೂರು ಕಡೆಯಲ್ಲೂ ಸುತ್ತುವರಿದ ಹಿನ್ನೀರು, ಒಂದು ಕಡೆಗೆ ರಸ್ತೆ, ಸ್ವಚ್ಛಂದವಾಗಿ ಹಾರುವ  ಹಕ್ಕಿಗಳು, ದೂರದಲ್ಲಿ ಪುಟ್ಟ  ದ್ವೀಪಗಳಂತೆ ಕಾಣಿಸುವ ನಡುಗುಡ್ಡೆಗಳು......ಎಲ್ಲವೂ ಮನಸ್ಸಿಗೆ ಮುದ  ಕೊಡುತ್ತವೆ.  ಸುಮಾರು ೭೦ ವರುಷಗಳಷ್ಟು ಕಾಲ ನೀರಲ್ಲಿ  ಮುಳುಗಿದ್ದ ದೇವಸ್ಥಾನವನ್ನು, ನೀರಿನಿಂದ ಮೇಲೆತ್ತಿ, ಮೂಲರೂಪಕ್ಕೆ ಧಕ್ಕೆ ಬಾರದಂತೆ ಅನುಕ್ರಮವಾಗಿ ಜೋಡಿಸಿ, ಪುನರ್ನಿಮಾಣ ಮಾಡುವ ಕಾರ್ಯ ಈಗ ನಡೆಯುತ್ತಿದೆ. ಉದ್ಯಮಿ  ಶ್ರೀ ಹರಿ ಖೋಡೆಯವರು ಇದರ ರೂವಾರಿ.

ನಿರ್ಮಾಣದ ಹಂತದಲ್ಲಿರುವ ಈ ದೇವಸ್ಥಾನದಲ್ಲಿ ಈಗ ವಿಶಾಲವಾದ ಪ್ರಾಂಗಣ, ಹಳೆಗನ್ನಡದಲ್ಲಿರುವ ಶಾಸನಗಳು, ಗರ್ಭಗುಡಿ, ಇನ್ನೂ ಕೆಲವು ದೇವರುಗಳ ಪುಟ್ಟ ಗುಡಿಗಳು ಇವೆ. ಗರ್ಭಗುಡಿಯಲ್ಲಿ ದೇವರ ಪ್ರತಿಷ್ಠಾಪನೆಯಾಗಿಲ್ಲ, ಒಂದು ನಂದಾದೀಪ ಉರಿಯುತ್ತಿತ್ತು.

ಈಗ ಅಲ್ಲಿ ನಗರದ ಗಲಾಟೆ-ಮಾಲಿನ್ಯ ಇಲ್ಲ. ಅಂಗಡಿ -ಹೋಟೆಲ್ ಗಳು ಇಲ್ಲ. ದೇವರ ಪ್ರತಿಷ್ಠಾಪನೆಯಾದ ನಂತರ ಭಕ್ತರ ಪ್ರವಾಹ ಬರಬಹುದು. ಸದ್ಯಕ್ಕೆ ನಿಸರ್ಗ ಪ್ರಿಯರಿಗೆ ಇಷ್ಟವಾಗಬಹುದಾದ ತಾಣ.  ಭಾನುವಾರದ ಪಿಕ್ನಿಕ್ ಹೋಗಬಯಸುವುದಾದರೆ , ಊಟ-ತಿಂಡಿ-ನೀರಿಗೆ ತಮ್ಮದೇ  ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು.


Saturday, October 8, 2011

ಕಥಾಮಾಲಾ..

ಕೆಲವು ದಿನಗಳ ಹಿಂದೆ ಯಕ್ಷಗಾನ ಕಾರ್ಯಕ್ರಮವೊಂದನ್ನು ನೋಡಿದ್ದೆ. 'ಭುವನ ಭಾಗ್ಯ'  ಎಂಬ ಕಥಾಭಾಗವನ್ನು ಕಲಾವಿದರು ಪ್ರಸ್ತುತಪಡಿಸಿದ್ದರು. ೩ ಗಂಟೆಗಳ ಕಾಲದ  ಕಾರ್ಯಕ್ರಮವಾಗಿತ್ತು. ನಾವು ಬಾಲ್ಯದಲ್ಲಿ ರಾತ್ರಿ ನಿದ್ದೆಗೆಟ್ಟು ಯಕ್ಷಗಾನ ನೋಡಿದ್ದಿದೆ.  ಈಗ  ಅಂತಹ  ಕಾರ್ಯಕ್ರಮಗಳು ಬಲು ವಿರಳ. ಇದ್ದರೂ ನೋಡುವಷ್ಟು ಸಮಯ -ತಾಳ್ಮೆ ಯಾರಿಗೂ ಇಲ್ಲ. 

ಪ್ರತಿ ಸೋಮವಾರ ಸಹೋದ್ಯೋಗಿಗಳನ್ನು ಭೇಟಿಯಾದಾಗ  ಭಾನುವಾರದ ವಿಶೇಷ ಏನು ಎಂದು ಕೇಳುವ ಪದ್ಧತಿ.ನಾನು ಭಾನುವಾರ ನೋಡಿದ್ದ ಯಕ್ಷ ಗಾನದ ಬಗ್ಗೆ ಹಾಗೂ ಕಥಾಭಾಗವನ್ನು ನನಗೆ ತೋಚಿದಂತೆ  ಹೇಳಿದ್ದೆ. ಗೆಳತಿ ರೇಖಾ, ೫ ವರುಷದ  ಮಗನಿಗೆ ಆ ಕಥೆಯನ್ನು   ವಿವರಿಸಿದ್ದಳು. ಆ ಹುಡುಗನಿಗೆ  'ರಾಕ್ಷಸರ'  ಕಥೆ ತುಂಬಾ ಇಷ್ಟವಾಯಿತಂತೆ, ದಿನಾ ಬೇರೆ ರಾಕ್ಷ್ಣಸನ ಕಥೆ ಹೇಳು ಎಂದು ದುಂಬಾಲು ಬೀಳುತ್ತಾನಂತೆ, ಹೀಗಾಗಿ ನಾನು ಇದ್ದಕಿದ್ದಂತೆ 'ಕಥೆ ಹೇಳುವ ಆಂಟಿ'  ಆಗಿಬಿಟ್ಟೆ!

ಈಗಿನ ಚಿಣ್ಣರು ಪೌರಾಣಿಕ ಕಥೆಗಳ ಬಗ್ಗೆ  ಆಸಕ್ತಿ ತೋರುವುದು ಬಲು ವಿರಳ. ಹಾಗಾಗಿ, ಅಪರೂಪಕ್ಕೆ ಒಂದು ಮಗು ಆಸಕ್ತಿ ತೋರಿಸುತ್ತಿರುವಾಗ ಖುಷಿಯಾಯಿತು. ಆ ನೆಪದಲ್ಲಿ ನನಗೂ ಮರೆತು ಹೋದ ಪೌರಾಣಿಕ ಕಥೆಗಳನ್ನು ಪುನ: ಓದುವ ಆಸಕ್ತಿ ಬಂತು.

ಓದಿದ್ದನ್ನು , ನೆನಪಿಸಿದ್ದನ್ನು ಬರೆಯೋಣ ಅನಿಸಿತು. ಹೀಗೆ ಬರೆಯಲು  'ಕಥಾಮಾಲಾ'  ಎಂಬ ಹೆಸರಿನ ಇನ್ನೊಂದು ಬ್ಲಾಗ್ ಪುಟ ಆರಂಭಿಸಿದ್ದೇನೆ.  ಇದಕ್ಕೆ ಸ್ಪೂರ್ತಿ ಸಿದ್ಧಾಂತ್  ಎಂಬ ಒಂದನೆಯ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ. 

ಥ್ಯಾಂಕ್ಸ್ ಸಿದ್ಧಾಂತ್ !

Saturday, September 24, 2011

ಚಾರಣಕ್ಕೊಂದು ಕಾರಣ....ಎಡಕಲ್ ಕೇವ್ಸ್ ...ಸೂಚಿಪಾರ ಫಾಲ್ಸ್....



ಸೆಪ್ಟೆಂಬರ್ ೧೮  ಭಾನುವಾರದಂದು  ಯೂಥ್ ಹಾಸ್ಟೆಲ್ ಅಸೋಸಿಯೇಶನ್ ಮೈಸೂರಿನವರು ವೈನಾಡಿನ ’ಎಡಕ್ಕಲ್ ಕೇವ್ಸ್’ ಮತ್ತು ಸಮೀಪದ ’ಸೂಚಿಪಾರ ಫಾಲ್ಸ್’ ಗೆ ಚಾರಣ/ಪ್ರವಾಸ ಏರ್ಪಡಿಸುವವರೆಂದು ಗೊತ್ತಾಯಿತು. ನನಗೆ ತಕ್ಷಣ ನೆನಪಾದದ್ದು  ’ಎಡಕಲ್ಲು ಗುಡ್ಡದ ಮೇಲೆ’ ಸಿನೆಮಾದಲ್ಲಿ ಬರುವ ಪ್ರಕೃತಿ ವೈಭವ ಹಾಗೂ ವಿರಹಾ...ವಿರಹಾ..ನೂರು ನೂರು ತರಹಾ.. ಹಾಡು. ಸರಿ, ಚಾರಣಕ್ಕೊಂದು ಕಾರಣ ಸಿಕ್ಕಿತು, ಗೆಳತಿ ರೇಖಾ ಹಾಗೂ ನಾನು ಹೆಸರು ನೊಂದಾಯಿಸಿಯೂ ಆಯಿತು.

ಮೈಸೂರಿನಿಂದ ಸುಮಾರು ೫೦ ಜನರನ್ನು ಹೊತ್ತಿದ್ದ ಬಸ್ ಗುಂಡ್ಲುಪೇಟೆ, ಸುಲ್ತಾನ್ ಬತ್ತೇರಿ ಮಾರ್ಗವಾಗಿ ವೈನಾಡ್ ತಲಪಿತು. ಹಚ್ಚ ಹಸಿರು ಕಾಡು, ಕಾಫಿ ತೋಟ, ಚಹಾ ತೋಟಗಳ ಮಧ್ಯೆ ಸಾಗುವ ಈ  ಮಾರ್ಗದಲ್ಲಿ ಪ್ರಯಾಣಿಸುವಾಗ ತುಂಬಾ ಹಿತವೆನಿಸುತ್ತದೆ. ಸಾಮಾನ್ಯವಾಗಿ ಬಸ್ ಪ್ರಯಾಣ ನನಗೆ ಒಗ್ಗುವುದಿಲ್ಲ. ವಾಂತಿ-ತಲೆಸುತ್ತು ಬಾರದಂತೆ ಮುಂಜಾಗರೂಕತೆಯಿಂದ  ಮಾತ್ರೆ ನುಂಗಿ, ಆಮೇಲೆ ಅದರ ಪ್ರಭಾವಕ್ಕೆ ಪ್ರಯಾಣದುದ್ದಕ್ಕೂ ತೂಕಡಿಸುವ ನಾನೇ ಬಿಟ್ಟ ಕಣ್ಣುಗಳಿಂದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದೆ. ಇನ್ನು ಕವಿಪುಂಗವರು, ಸಾಹಿತಿಗಳು  ಕವಿತೆ ಬರೆದರೆ ಆಶ್ಚರ್ಯವೇನು?      

ಹೀಗೆ ಮುಂದುವರಿದ ನಮ್ಮ ಪ್ರಯಾಣ ವೈನಾಡಿನ ’ಅಂಬುಕುಟ್ಟಿಮಲೆ’ವರೆಗೆ ಸಾಗಿತು. ಅಲ್ಲಿಂದ ಸುಮಾರು ೨ ಕಿ.ಮಿ ದೂರವನ್ನು ನಡೆದು ಬೆಟ್ಟ ಏರಬೇಕು. ಈ ಮಾರ್ಗ ಕೆಲವು ಕಡೆ ಎತ್ತರವಾಗಿದೆ, ಇನ್ನು ಕೆಲವೆಡೆ ಇಳಿಜಾರಾಗಿದೆ, ಕೆಲವೆಡೆ ಮೆಟ್ಟಿಲುಗಳಿವೆ, ಒಂದೆರೆಡು ಕಡೆ ಚಪ್ಪಡಿಕಲ್ಲುಗಳಿವೆ. ಕಾಲಿಟ್ಟರೆ ಜಾರುವಂತಿದ್ದುವು. ಒಟ್ಟಿನ ಮೇಲೆ ಬಹಳ ಜಾಗರೂಕತೆಯಿಂದ ಹತ್ತಬೇಕು/ಇಳಿಯಬೇಕು.

ಯಥಾ ಪ್ರಕಾರ ಅರ್ಧ ಬೆಟ್ಟ ಹತ್ತುವಷ್ಟರಲ್ಲಿ ನನಗೆ ಸುಸ್ತು ಶುರುವಾಯಿತು. ಸ್ವಲ್ಪ ನಿಧಾನವಾಗಿ ಗುರಿ ಮುಟ್ಟಿದೆ. ಸಹಚಾರಣಿಗ ರಘುನಾಥ್ ಅವರು ಆಧಾರಕ್ಕಿರಲಿ ಎಂದು ಒಂದು ಕೋನ್ನು  ಹುಡುಕಿ ಕೊಟ್ಟರು. ಊರುಗೋಲು ಉಪಯೋಗಿಸುವ ವಯಸ್ಸು ನನ್ನದಲ್ಲವಾದರೂ ಅದರಿಂದ ಸಹಾಯವಾಯಿತು. ಅಂತೂ ಬೆಟ್ಟ ಹತ್ತಿ ಸುತ್ತ ಮುತ್ತಲಿನ ದೃಶ್ಯಗಳನ್ನು   ನೋಡಿದಾಗ ಶ್ರಮ ಸಾರ್ಥಕ ಎನಿಸಿತು. ಎಲ್ಲೆಡೆಯೂ  ಅದ್ಭುತವಾದ ಪ್ರಕೃತಿ ಸೌಂದರ್ಯ ತುಂಬಿತ್ತು. 
  

ಅಲ್ಲಿಂದ ಕೆಲವು ಮೆಟ್ಟಿಲು ಕೆಳಗೆ ಇಳಿದಾಗ ಮೊದಲ ಗುಹೆ ಸಿಗುತ್ತದೆ. ಗುಹೆಯ ಒಳಗೆ ತುಂಬಾ ತಂಪಿತ್ತು. ಒಂದೆಡೆ ಸ್ವಚ್ಛ ತಿಳಿ ನೀರಿನ ಝರಿಯಿತ್ತು.


ಕೆಲವರು ನೀರನ್ನು ತಮ್ಮ ಬಾಟಲಿಗೆ ತುಂಬಿಸಿಕೊಂಡರು. ಈ ನಿಸರ್ಗದತ್ತ ಸಿಹಿನೀರಿನ ಮುಂದೆ ಬಗೆ ಬಗೆ ಹೆಸರಿನ ನವನವೀನ  ಶುದ್ಧ ನೀರಿನ ಮಾದರಿಗಳನ್ನು ನಿವಾಳಿಸಿ ಒಗೆಯಬಹುದು.  

ಕೆಲವು ಹೆಜ್ಜೆ  ಮುಂದೆ ಇನ್ನೊಂದು ಗುಹೆಯಿತ್ತು.ಎರಡು ಬೃಹದಾಕಾರದ  ಬಂಡೆಗಳ ಮೆಲೆ ಇನ್ನೊಂದು  ದೈತ್ಯಾಕಾರದ ಬಂಡೆ ಕುಳಿತಂತೆ ಕಾಣುತಿತ್ತು. ಅದು ನಮ್ಮ ತಲೆ ಮೇಲೆ ಯಾವುದೆ ಕ್ಷಣದಲ್ಲಿ ಬೀಳಬಹುದು ಎಂಬಂತೆ ಭಾಸವಾಗುತ್ತದೆ. ಇದರಿಂದಾಗಿ ಗುಹೆಗೆ  ಎಡಕ್ಕಲ್ ಎಂಬ ಹೆಸರು ಬಂತು. ಯಾಕೆಂದರೆ  ಮಲಯಾಳ ಭಾಷೆಯಲ್ಲಿ ಎಡಕ್ಕಲ್ ಅಂದರೆ ’ಮಧ್ಯದ ಕಲ್ಲು’ ಎಂದರ್ಥ.


ಆದರೆ ಈ ಗುಹೆಗಳಿಗೆ ಕ್ರಿ.ಪೂ ೫೦೦೦ ಕ್ಕೂ ಹಿಂದಿನ  ಇತಿಹಾಸವಿದೆ. ಗುಹೆಯ ಕಲ್ಲುಗಳಲ್ಲಿ ಕಾಣುವ ಚಿತ್ರ-ರೇಖೆಗಳನ್ನು ಶಿಲಾಯುಗದ  ಮಾನವನ ಬರಹ ಎಂದು ನಂಬಲಾಗಿದೆ. ಕ್ರಿ.ಶ ೧೮೯೦ ರಲ್ಲಿ ಅಂದಿನ ಮಲಬಾರ್ ಪ್ರಾಂತ್ಯದ   ಪೋಲಿಸ್ ಅಧಿಕಾರಿ ’ಫಾರೆಡ್  ಫಾಸೆಟ್’ ಈ ಗುಹೆಗಳ ಅಸ್ತಿತ್ವವನ್ನು ಗುರುತಿಸಿ ಹೊರಜಗತ್ತಿಗೆ ತಿಳಿಯಪಡಿಸಿದನಂತೆ. 

ಸಿನೆಮಾದಲ್ಲಿ ನಾನು ಕಂಡ ಗುಹೆಗೂ ಈ ಗುಹೆಗೂ ಬಹಳ ಅಂತರವಿತ್ತು. ಬಹುಶ: ಬೇರೆಲ್ಲೋ ಚಿತ್ರೀಕರಣ ಮಾಡಿರಬೇಕು ಇಲ್ಲವೇ ಕ್ಯಾಮೆರಾದ ಕೈಚಳಕವಿದ್ದಿರಬೇಕು. ಆದರೆ ಒಟ್ಟಾರೆಯಾಗಿ ಈ ಚಾಣ ಬಹಳ ಉತ್ತಮವಾಗಿತ್ತು.

ಇನ್ನೊಂದು ನಾನು ಗಮನಿಸಿದ ಅಂಶವೇನೆಂದರೆ, ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸುವ ಶಿಸ್ತು. ಬೆಟ್ಟದ ಮೇಲೆ ಯಾವುದೇ ಪ್ಲಾಸ್ಟಿಕ್ ಪದಾರ್ಥವನ್ನು ಎಸೆಯುವಂತಿಲ್ಲ. ಕುಡಿಯುವ ನೀರಿನ ಬಾಟಲಿಯನ್ನು ಒಯ್ಯುವುದಿದ್ದರೂ, ಅದಕ್ಕೆ ೨೦ ರೂ ತೆತ್ತು, ಒಂದು ಗುರುತಿನ ಸ್ಟಾಂಪ್ ಹಚ್ಚಿಸಿಕೊಳ್ಳಬೇಕು. ಹಿಂತಿರುಗಿ ಬರುವಾಗ  ಬಾಟಲಿಯನ್ನು ತೋರಿಸಿ ೨೦ ರೂ. ಪಡೆದುಕೊಳ್ಳಬೇಕು.

ದಾರಿಯುದ್ದಕ್ಕೂ ಸಿಗುವ ಚಿಕ್ಕ-ಪುಟ್ಟ ಅಂಗಡಿಗಳಲ್ಲಿ ಉಪ್ಪಿನಲ್ಲಿ ನೆನೆಸಿದ ನೆಲ್ಲಿಕಾಯಿ, ಮಾವಿನಕಾಯಿ, ಜೇನಿನಲ್ಲಿ ನೆನೆಸಿದ ನೆಲ್ಲಿಕಾಯಿ ಇತ್ಯಾದಿ ಮಾರಾಟಕ್ಕೆ ಲಭ್ಯವಿತ್ತು. ಅವುಗಳನ್ನು ಕಾಫಿ ಗಿಡದ ಎಲೆಯಲ್ಲಿ ಕೊಡುತ್ತಿದ್ದರು. ನಗರದ ಅಂಗಡಿಗಳಲ್ಲಿ ಸರಮಾಲೆಯಂತೆ ಕಾಣಿಸುವ  ವಿವಿಧ ಕುರುಕಲು ತಿಂಡಿಗಳ ಪ್ಯಾಕೆಟ್ ಗಳು ಹಾಗೂ ಅವನ್ನು ತಿಂದು ಅಲ್ಲಿಲ್ಲಿ ಎಸೆದ ಖಾಲಿ ಪ್ಲಾಸ್ಟಿಕ್ ಕವರ್ ಗಳು ಕಾಣಿಸಲಿಲ್ಲ. 

ಎಡಕ್ಕಲ್ ಗುಹೆಗಳನ್ನು ನೋಡಿಯಾದ ಮೇಲೆ ನಮ್ಮ ಮುಂದಿನ ಪಯಣ ’ಸೂಚಿಪಾರ  ಫಾಲ್ಸ್'ಕಡೆಗೆ. ಇದು ವೈನಾಡಿನ ಮೆಪ್ಪಾಡಿ ಎಂಬ ಊರಿನ ಸನಿಹದಲ್ಲಿದೆ. ಸುಮಾರು ಅರ್ಧ ಘಂಟೆ ಕಲ್ಲು ಚಪ್ಪಡಿ ಹಾಕಿದ ರಸ್ತೆಯಲ್ಲಿ ನಡೆದು, ಕೆಲವು ಕಡೆ ಮೆಟ್ಟಿಲುಗಳನ್ನು ಏರಿ, ಇನ್ನು ಕೆಲವೆಡೆ ಮೆಟ್ಟಿಲಿಳಿದಾಗ ಕೊನೆಯಲ್ಲಿ ಸೂಚಿಪಾರ ಫಾಲ್ಸ್ ನ ದರ್ಶನವಾಗುತ್ತದೆ

ಸುಮಾರು ೨೦೦ ಅಡಿ ಎತ್ತರದಿಂದ ಧುಮುಕುವ ಜಲರಾಶಿ ತುಂಬಾ ಸೊಗಸಾಗಿದೆ. ಸೂಚಿ ಎಂದರೆ ಮಲಯಾಳ ಭಾಷೆಯಲ್ಲಿ ಸೂಜಿ. ಬಹುಶ: ಬಂಡೆ ಕಲ್ಲುಗಳ ಮಧ್ಯೆ ನೇರವಾಗಿ ಸೂಜಿಯಂತೆ ಹರಿಯುವ ಕಾರಣ ಈ ಹೆಸರು ಬಂದಿರಬಹುದು.


ಅಷ್ಟರಲ್ಲಿ ಸಂಜೆಯಾಗುತ್ತಿತ್ತು. ಸುಮಾರು  ರಾತ್ರಿ ೧೧ ಗಂಟೆಗೆ  ಮೈಸೂರಿಗೆ ವಾಪಾಸ್ಸಾಗುವಷ್ಟರಲ್ಲಿ  ಸಂಡೇ ಈಸ್ ಓವರ್! ಇನ್ನೊಮ್ಮೆ  ವೈನಾಡ್ ನಲ್ಲಿ ಕನಿಷ್ಟ ಒಂದು ದಿನವಾದರೂ ತಂಗುವ ಕಾರ್ಯಕ್ರಮ ಇರಲಿ ಎಂದು ಆಶಿಸುವೆ.        
           
     
    

Sunday, September 4, 2011

ಮುದಗೆರೆಗೆ ಚಾರಣ.....ವೈನ್ ಈಸ್ ಫೈನ್


ಇತ್ತೀಚೆಗೆ ಯೂತ್ ಹಾಸ್ಟೆಲ್ ಸದಸ್ಯೆಯಾದೆ. ಹಾಗಾಗಿ, ಕೆಲವೊಮ್ಮೆ, ಅವರು ಆಯೋಜಿಸುವ ಸಣ್ಣ ಪುಟ್ಟ ಚಾರಣಕ್ಕೆ ಹೋಗುವ ಹುಮ್ಮಸ್ಸು ಬಂದಿದೆ. ಇದು ನನ್ನ ಮೂರನೆಯ ಚಾರಣ ಅನುಭವ.

ಕಳೆದ ಭಾನುವಾರ , ಮೈಸೂರಿನಿಂದ ಸುಮಾರು ೩೦ ಮಂದಿ ಸದಸ್ಯರು, ಒಂದು ಟೆಂಪೊ ಹಾಗೂ ಇನ್ನೊಂದು  ಟಾಟಾ ಸುಮೋ ದಲ್ಲಿ ಚೆನ್ನಪಟ್ಟಣ ಕಡೆಗೆ ಹೊರಟೆವು. ದಾರಿಯಲ್ಲಿ ಮದ್ದೂರಿನಲ್ಲಿ ಕಾಫಿ-ತಿಂಡಿ ಸೇವನೆಯಾಯಿತು.

ಚೆನ್ನಪಟ್ಟಣದ ಸಮೀಪದ 'ಮುದಗೆರೆ' ಎಂಬಲ್ಲಿ ತಿರುಗಿ ಸ್ವಲ್ಪ ಮುಂದೆ ಬಂದು, ಟೆಂಪೊ ನಿಂತಿತು. ಎದುರುಗಡೆ ಪುಟ್ಟ ಬೆಟ್ಟ ಇತ್ತು. ನಿಧಾನವಾಗಿ ಹತ್ತಿ ಬೆಟ್ಟದ ತುದಿ ತಲಪಿದೆವು.

 

ಸುತ್ತ ಬೆಳೆದಿದ್ದ ಹಸಿರು ಗಿಡಗಳು, ಕಾಡು ಹೂಗಳ ಫೊಟೊ ತೆಗೆಯುತ್ತಾ ಮೇಲೇರಿದೆವು. ಬೆಟ್ಟದ ತುದಿಯಲ್ಲಿ, 'ಕಂಭದ ನರಸಿಂಹಸ್ವಾಮಿಯ' ಮಂದಿರವಿದೆ. ಅಲ್ಲಿ ಪ್ರಸಾದ ಸ್ವೀಕರಿಸಿ ಕೆಳಗೆ ಬಂದಾಯಿತು.





 
 ಅಲ್ಲಿಂದ ಮುಂದೆ ಬಂದು 'ಹೆರಿಟೇಜ್  ಗ್ರೇಪ್ ವೈನರಿ'ಗೆ ಭೇಟಿಯ ವ್ಯವಸ್ಥೆ ಮಾಡಿದ್ದರು. ವೈನ್ ಉತ್ಪಾದನೆಯ ಪ್ರಾತ್ಯಕ್ಷಿಕೆಯ ಜೊತೆಗೆ, ರುಚಿ ನೊಡಲೆಂದು ಸ್ವಲ್ಪ ವೈನ್ ಸಾಂಪಲ್ ಕೊಟ್ಟರು. ಪುರಾಣಗಳಲ್ಲಿ ಬರುವ ದ್ರಾಕ್ಷಾರಸ, ಸೋಮರಸ ಇತ್ಯಾದಿಗಳ ವ್ಯಾಖ್ಯಾನದೊಂದಿಗೆ, ಆಯುರ್ವೇದದ ಅಮೃತಾರಿಷ್ಟ, ದ್ರಾಕ್ಷಾರಿಷ್ಟಗಳ ಬಗ್ಗೆ ಮಾತು ಹೊರ್‍ಅಳಿತು. ಕೆಲವರಿಗೆ, ವೈನ್ ಗ್ಲಾಸ್ ಹಿಡಿದುಕೊಂಡು ಫೊಟೊ ತೆಗೆಯುವ ಸಡಗರ.   





ಅಲ್ಲಿದ್ದ ಆಲಂಕಾರಿಕ ವೈನ್ ಜಾರ್ ನನಗೆ ಇಷ್ಟವಾಯಿತು. ಬಾಲ್ಯದಲ್ಲಿ ಕೇಳಿದ್ದ 'ಆಲಿ ಬಾಬಾ  ಮತ್ತು ೪೦ ಕಳ್ಳರು' ಕಥೆಯಲ್ಲಿ ಬರುವ ಪೀಪಾಯಿ ಇದೇ ರೀತಿ ಇದ್ದಿರಬಹುದೇನೋ ಅನಿಸಿತು.










.  
ಅಲ್ಲಿಂದ ಮುಂದೆ ನಮ್ಮ ಪಯಣ ಸಾಗಿದ್ದು ಬೆಂಗಳೂರು  ರಸ್ತೆಯಲ್ಲಿಯಲ್ಲಿರುವ   'ಜಾನಪದ ಲೋಕ'ದ ಕಡೆಗೆ. ಅಲ್ಲಿ ಆಗ ಕರಗ ನೃತ್ಯದ ಪ್ರದರ್ಶಿಸಲ್ಪಡುತ್ತಿತ್ತು. ಜಾನಪದ ವಸ್ತುಸಂಗ್ರಹಾಲಯ, ಕರಕುಶಲ ಕಲೆಗಳ ಪ್ರಾತ್ಯಕ್ಷಿಕೆ ಇತ್ಯಾದಿ ನೋಡಿ ಮೈಸೂರಿಗೆ ವಾಪಸ್ಸಾದೆವು.







ಒಟ್ಟಾರೆಯಾಗಿ ಇದು ಒಂದು ಪುಟ್ಟ ಚಾರಣ. ಸಮಾನ ಅಭಿರುಚಿಯ , ವಿವಿಧ ಕ್ಶೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಪರಿಚಯವಾಗುತ್ತದೆ. ಎಲ್ಲರೂ ಪರಸ್ಪರ ಸ್ನೇಹದಿಂದ ವರ್ತಿಸುತ್ತಾರೆ.  ಇನ್ನೊಂದು ಗಮನಾರ್ಹ ವಿಚಾರವೇನೆಂದರೆ,ಇಲ್ಲಿ ಯಾವುದೇ ಆಡಂಬರ, ಒಣ ಪ್ರತಿಷ್ಟೆ ಇಲ್ಲ. ಸಾಧ್ಯಾದಷ್ಟು ಸರಳವಾಗಿ, ಕಡಿಮೆ ಖರ್ಚಿನಲ್ಲಿ ,ವ್ಯವಸ್ಥೆ ಮಾಡುತ್ತಾರೆ. ಎಲ್ಲರಿಗೂ ಸಮಾನ ಆವಕಾಶ.  ನಾನಂತೂ ಇನ್ನು ಮುಂದೆ, ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದುಕೊಂಡಿದ್ದೇನೆ.     

ಇದರಿಂದ ನನಗೆ ಅನುಭವವೇದ್ಯವಾದ  ವಿಚಾರವೇನೆಂದರೆ, ಸಾಮಾನ್ಯವಾಗಿ ದೈಹಿಕ ಶ್ರಮದ ಯಾವುದೇ ಕೆಲಸ ಮಾಡದೆ, ಮನೆಯಲ್ಲಿ ಸ್ವಲ್ಪ ಅಡಿಗೆ ಕೆಲಸ ಮಾತ್ರ ಮಾಡಿ,ಆಫೀಸಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ನನಗೆ,ಬೆಟ್ಟ ಹತ್ತಲು ಸುಲಭವಾಗುವುದಿಲ್ಲ, ನನಗಿಂತ  ಹೆಚ್ಚು ವಯಸ್ಸಾದವರು ಕೂಡ ಆರಾಮವಾಗಿ ಬೆಟ್ಟ ಹತ್ತುವಾಗ, ಏದುಸಿರು ಬಿಡುತ್ತಾ ಅಲ್ಲಲ್ಲಿ ನಿಂತು ಸಾವರಿಕೊಳ್ಳುತಿದ್ದ ನನ್ನ ಬಗ್ಗೆ ನಾಚಿಕೆಯೆನಿಸಿತು.

ತಂಡದ ಮುಖ್ಯಸ್ಥೆ ಗೋಪಮ್ಮ ಅವರು ತುಂಬಾ ಸಹನೆ , ತಾಳ್ಮೆಯಿಂದ ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಅವರಿಂದ ನಾವು ಕಲಿಯಬೇಕು, ಸ್ಫೂರ್ತಿ ಪಡೆಯಬೇಕು ಅನಿಸಿತು. ನಿವೃತ್ತರಾದ ಅವರು, ಇದುವರೆಗೆ ಹಲವಾರು ಬಾರಿ ಹಿಮಾಲಯ ಚಾರಣ ಕೈಗೊಂಡಿದ್ದಾರೆ. ಸಮಾಜ ಸೇವೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಜೈ ಯೂತ್ ಹಾಸ್ಟೆಲ್!       

Sunday, August 21, 2011

ಚಾಮುಂಡಿ ಬೆಟ್ಟದಲ್ಲಿ ಪಾಂಡವರ ಮೆಟ್ಟಿಲು ...


ಮೈಸೂರಿಗೆ ಬಂದು ಇಪ್ಪತ್ತು ವರುಷಗಳಾಯಿತು. ಇದುವರೆಗೆ ಚಾಮುಂಡಿ ಬೆಟ್ಟಕ್ಕೆ ಬಸ್ಸಿನಲ್ಲಿ, ಕಾರಿನಲ್ಲಿ ಎಷ್ಟೋ ಬಾರಿ ಹೋಗಿದ್ದೆ. ಆದರೆ ಬೆಟ್ಟವನ್ನು  ಇದುವರೆಗೆ  ಮೆಟ್ಟಿಲುಗಳ ಮೂಲಕ ಹತ್ತಿರಲಿಲ್ಲ.  ಅಂತೂ ಈವತ್ತು ಬೆಟ್ಟ ಹತ್ತಲು ಸಂದರ್ಭ ಒದಗಿ ಬಂತು. ಅದು ಹೇಗೆಂದರೆ, ನಮ್ಮ ಸಂಸ್ಥೆಯ  ಮುಖ್ಯ ಕಚೇರಿಯಿಂದ ಬಂದಿದ್ದ ಡಾ. ಮಾರ್‍ಟಿನ್ ಶಾವ್ಗ್ ಕೋಫ್ಲರ್ ಎಂಬವರು ಬೆಟ್ಟ ಹತ್ತುವ ಆಸಕ್ತಿ ತೋರಿಸಿದರು.

ಅವರಿಗೆ ಜತೆಯಾಗಿ ನಾವು ಕೆಲವರು ಬೆಟ್ಟ ಹತ್ತಲೆಂದು ಅಣಿಯಾದೆವು. ಆಸಕ್ತಿ ಇರುವವರೆಲ್ಲರೂ ಬೆಳಗ್ಗೆ ೬.೩೦  ಗಂಟೆಗೆ ಚಾಮುಂಡಿ  ಬೆಟ್ಟದ ಬುಡದಲ್ಲಿರುವ ಅಯ್ಯಪ್ಪ ಸ್ವಾಮಿಯ ಮಂದಿರದ ಬಳಿ ಸೇರಿ, ಅಲ್ಲಿಂದ ಮೆಟ್ಟಲು ಹತ್ತುವುದೆಂದು ನಿರ್ಧರಿಸಿದೆವು. ತಮಾಷೆಯೇನೆಂದರೆ ನಾ ಬರುವೆ,ತಾ ಬರುವೆ ಎಂದು ಉತ್ಸಾಹ ತೋರಿದ ಹಲವು ಸಹೋದ್ಯೋಗಿಗಳಲ್ಲಿ, ಬೆಟ್ಟ ಹತ್ತಲು ಬಂದವರು ಕೇವಲ ನಾಲ್ಕು ಮಂದಿ. ಹೀಗಾಗಿ, ಡಾ.ಮಾರ್ಟಿನ್, ಗಣೇಶ್, ರೇಖಾ ಹಾಗೂ ನಾನು ಬೆಟ್ಟ ಹತ್ತಲು ಆರಂಭಿಸಿದೆವು.


ನನ್ನನ್ನು ಬಿಟ್ಟು ಉಳಿದವರೆಲ್ಲರೂ ಚುರುಕಾಗಿ ಬೆಟ್ಟ ಹತ್ತುತಿದ್ದರು. ನನಗೆ ನೇರವಾದ ದಾರಿಯಲ್ಲಿ ನಡೆಯಲು ಕಷ್ಟವಾಗುವುದಿಲ್ಲ. ಆದರೆ ಮೆಟ್ಟಲು ಏರುವಾಗ ಸುಸ್ತಾಗುತಿತ್ತು. ಅವರ ವೇಗಕ್ಕೆ ನನ್ನ ನಿಧಾನಗತಿ ಹೊಂದುವುದಿಲ್ಲ ಎಂದು ನಾನಾಗಿಯೇ ಅವರುಗಳಿಗೆ ನೀವು ಮುಂದೆ ಹೋಗಿ, ನನಗೆ ಸಾಧ್ಯವಾದಷ್ಟು ಮೆಟ್ಟಲು ಹತ್ತುತ್ತೇನೆ, ನೀವು ವಾಪಸು ಬರುವಾಗ ಜತೆಯಾಗುತ್ತೇನೆ ಅಂದೆ.

ತಂಪಾದ ಹವೆಯಲ್ಲಿ, ಇಬ್ಬನಿಯಿಂದ ತೋಯ್ದ ಗಿಡಗಳನ್ನು ನೋಡುತ್ತ, ನಡುನಡುವೆ ಹಿಂತಿರುಗಿ, ಕೆಳಗೆ ಕಾಣಿಸುತಿದ್ದ ಮೈಸೂರು ನಗರವನ್ನು ನೋಡುತ್ತಾ, ಫೊಟೊ ಕ್ಲಿಕ್ಕಿಸುತ್ತಾ, ಪಕ್ಷಿಗಳ ಕೂಜನಕ್ಕೆ ಕಿವಿಗೊಡುತ್ತಾ ನಿಧಾನವೇ ಪ್ರಧಾನ ಎಂಬಂತೆ ಸಾಗಿತ್ತು ನನ್ನ ಚಾರಣ.

ಕೆಲವು ಮಂದಿ ಆಗಲೇ ಬೆಟ್ಟ ಹತ್ತಿ ಇಳಿಯುತ್ತಿದ್ದರು, ಇನ್ನು ಕೆಲವರು ಶತ್ರುಗಳು ಅಟ್ಟಿಸಿಕೊಂಡು ಬರುತ್ತಾರೋ ಎಂಬಂತೆ ಏದುಸಿರು ಬಿಟ್ಟುಕೊಂಡು ಕುದುರೆಯ ಗೊರಸಿನ ಶಬ್ದದ ಶೂ ಹಾಕಿಕೊಂಡು ದಾಪುಗಾಲಿಡುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಅರಿಷಿನ-ಕುಂಕುಮ ಹಚ್ಚಿ ಮೆಟ್ಟಲೇರುವವರು ಇನ್ನು ಕೆಲವರು. ದೇವಿಯ ಸಹಸ್ರನಾಮವನ್ನು ಬಾಯಲ್ಲಿ ಗುನುಗುತ್ತಾ ಅಥವಾ ಮೊಬೈಲ್ ಫೋನ್ ಮೂಲಕ ಕೇಳುತ್ತಾ ಹತ್ತುವವರು ಇನ್ನು ಕೆಲವರು. ಜಾಗಿಂಗ್ ಡ್ರೆಸ್ ಧರಿಸಿ ಜಿದ್ದಿಗೆ ಬಿದ್ದವರಂತೆ ಓಡುವವರು ಹಲವರು. ಮೊಬೈಲ್ ಫೋನ್ ನ ಹಾಡಿಗೆ ದನಿಗೂಡಿಸುತ್ತಾ ಮೆಟ್ಟಿಲು ಹತ್ತುವವರೂ ಇದ್ದರು.

ಇಂತಹ ಸಹ ಚಾರಣಿಗರ ಮಧ್ಯೆ ಹೆಗಲಿಗೊಂದು ಬ್ಯಾಗ್ ತಗಲಿಸಿಕೊಂಡು, ಸೋತ ಮುಖದಿಂದ, ಅತ್ತಿಂದಿತ್ತ ನೋಡುತ್ತಾ ಮೆಟ್ಟಿಲೇರುತ್ತಿದ್ದ ನಾನು ಇತರರಿಗಿಂತ ಭಿನ್ನವಾಗಿ ಕಂಡಿದ್ದರೆ ಆಶ್ಚರ್ಯವೇನಿಲ್ಲ. ಸುಮಾರು ೪೦೦ ಮೆಟ್ಟಲು ಹತ್ತಿರಬಹುದು. ಅಲ್ಲೊಂದು ಕಡೆ ಕಲ್ಲಿನಲ್ಲಿ ಕೆತ್ತಿದ 'ಪಾಂಡವರ ಮೆಟ್ಟಿಲು' ಎಂಬುದು ಗಮನ ಸೆಳೆಯಿತು. ಅದನ್ನು ನೋಡುತ್ತಾ ಇದ್ದೆ. ಅಷ್ಟರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನನ್ನನ್ನು ಉದ್ದೇಶಿಸಿ " ನೀವು ಹತ್ತುವುದು  ಈ ವರ್ಷ, ಇಳಿಯುವುದು ಮುಂದಿನ ವರ್ಷ" ಅಂದರು!

ಅಪರಿಚಿತರ ಈ ಮಾತು ಒಂದು ಕ್ಷಣಕ್ಕೆ ತಬ್ಬಿಬ್ಬು ಹಾಗು ಮುಜುಗರ ಉಂಟು ಮಾಡಿತು. ಒಂದು ವೇಳೆ ನಾನು ಅವರ ಅಭಿಪ್ರಾಯಕ್ಕೆ ತಕ್ಕಂತೆ ಇದ್ದರೂ, ಅದರಿಂದ ಇತರರಿಗೆ ಯಾರಿಗೂ ತೊಂದರೆಯಿಲ್ಲವಷ್ಟೆ ? ಆತ ಅಧಿಕ ಪ್ರಸಂಗಿ, ನಕಾರಾತ್ಮಕ ವ್ಯಕ್ತಿ (ನ.ವ್ಯ) -ಎಂದು ಮನಸ್ಸಲ್ಲೇ ಬೈದುಕೊಂಡೆ. ನಾನು ಸಾಮಾನ್ಯವಾಗಿ ಈ ತರದ ನ.ವ್ಯ ಜನರ ಮಾತುಗಳಿಗೆ ಪ್ರತಿಕ್ರಿಯಿಸಲು ಹೋಗಿ ನನ್ನ ಮನಸ್ಸು ಕೆಡಿಸುವುದಿಲ್ಲ. 

ನನ್ನ ಪಾಡಿಗೆ ಪಾಂಡವರ ಮೆಟ್ಟಿಲಿನ ಮೇಲೆ  ಬಿದ್ದಿದ್ದ ಒಣಗಿದ ಎಲೆಗಳನ್ನು ಸ್ವಲ್ಪ ಸರಿಸಿ, ಪೋಟೊ ಕ್ಲಿಕ್ಕಿಸಿದೆ. ಪಕ್ಕದಲ್ಲಿಯೇ ಬಂಡೆಗೊರಗಿ  ಕುಳಿತುಕೊಂಡೆ. ಸುಸ್ತಾದಾಗ ಕುಳಿತುಕೊಳ್ಳಲು ಪಾಂಡವರ ಮೆಟ್ಟಲಾದರೇನು, ಕೌರವರ ಮೆಟ್ಟಿಲಾದರೇನು ಎಂಬಂತೆ.

ಆ ವ್ಯಕ್ತಿ ತುಸು ಗೌರವದಿಂದ ' ಫಸ್ಟ್ ಟೈಮ್ ಬರುತ್ತಿದ್ದೀರ?' ಎಂದು ಕೇಳಿದರು. ಆದಕ್ಕೆ ಉತ್ತರವಾಗಿ ಗಂಭೀರವಾಗಿ ತಲೆದೂಗಿದೆ. ಆತ ಮೆಟ್ಟಿಲಿಳಿಯುತ್ತಾ ೨-೩ ಬಾರಿ ಹಿಂತಿರುಗಿ ನನ್ನನ್ನು ನೋಡಿದರು. ನನ್ನ ಗೆಟಪ್ ನೋಡಿ ಪುರಾತತ್ವ ಇಲಾಖೆಯ  ಸಿಬ್ಬಂದಿ ಎಂದೋ ಅಥವಾ ಕನ್ನಡ ಅರ್ಥವಾಗದ ಪರಭಾಷಿಕಳೋ ಅಥವಾ ಮಾತು ಬಾರದ ಮೂಕಿಯೋ ಎಂದು ತಿಳಕೊಂಡಿರಬೇಕು ಆತ. ಏನೇ ಇದ್ದರೂ ನನಗೆ ಅದು ನಗಣ್ಯವಾಗಿತ್ತು.

ಸುಮಾರು ೭೦೦ ಮೆಟ್ಟಿಲುಗಳನ್ನು ಕ್ರಮಿಸಿದಾಗ ನಂದಿಯ ಏಕಶಿಲಾ ವಿಗ್ರಹ ಸಿಗುತ್ತದೆ. ಅಂತೂ ಬೆಟ್ಟದ ತುದಿಗೆ ತೀರ ಸನಿಹ ತಲಪಲು ನಾನು ತೆಗೆದುಕೊಂಡ ಸಮಯ ೧-೧೫ ಗಂಟೆ. ಇನ್ನೇನು ಕೇವಲ ೧೦೦ ಮೆಟ್ಟಿಲುಗಳು ಬಾಕಿ ಇರುವಷ್ಟರಲ್ಲಿ ನನ್ನ ಸಹೋದ್ಯೋಗಿಗಳು ಹಿಂತಿರುಗಿ ಬರುತ್ತಿದ್ದರು.


"ಇಷ್ಟು ದೂರ ಬಂದಿದ್ದೀರ, ಇನ್ನು ಕೇವಲ ೧೦೦ ಮೆಟ್ಟಿಲುಗಳು ಬಾಕಿ ಇವೆಯಷ್ಟೆ, ಹೋಗಿ ಬನ್ನಿ, ನಾವು ಇಲ್ಲೇ ಇರುತ್ತೇವೆ" ಅಂದರು. ನಾನೇ ಬೇಡವೆಂದೆ, ಇನ್ನೊಮ್ಮೆ ಬಂದರಾಯಿತು, ಆಗಾಗ್ಗೆ ಬಂದರೆ ಉತ್ತಮ ವ್ಯಾಯಾಮವಾಗುವುದು ಎಂದೆ. ಹಾಗೆಯೇ   ಅಪರಿಚಿತ ನ.ವ್ಯ ನನ್ನ ಚಾರಣದ ಬಗ್ಗೆ ನೀಡಿದ ಅಭಿಪ್ರಾಯವನ್ನು ಹೇಳಿ ಮನಸಾರೆ ನಕ್ಕೆವು. ಇನ್ನು ಮುಂದೆ ವರುಷಕ್ಕೆ ಕೆಲವು ಬಾರಿಯಾದರೂ ಬೆಟ್ಟ ಹತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ವ್ಯಾಯಾಮವೂ ಆಗುತ್ತದೆ, ನ.ವ್ಯ ಜನರ ಮಾತನ್ನು ಚಾಲೆಂಜ್ ಮಾಡಿದ ಹೆಮ್ಮೆಯೂ ನನ್ನದಾಗುತ್ತದೆ ಎಂದು ನಿರ್ಧರಿಸಿದೆ!     

ಡಾ.ಮಾರ್‍ಟಿನ್ ಅವರಿಗೆ ತುಂಬಾ ಖುಷಿಯಾಗಿತ್ತು. 'ವೆರಿ ಗುಡ್ ಎಕ್ಸ್ ಪಿರಿಯೆನ್ಸ್' ಎಂದರು. ವಾಸ್ತವವಾಗಿ ನಮಗೆ ಸಂಕೋಚವಾಗುತಿತ್ತು. ನಿಜವಾಗಿಯೂ ಚಾಮುಂಡಿ ಬೆಟ್ಟ ಸುಂದರವಾಗಿದೆ. ಮೈಸೂರಿನ ಹವೆಯೂ ಅನುಕೂಲಕರವಾಗಿದೆ. ಆದರೆ, ವಿದೇಶಗಳ ಪ್ರವಾಸಿತಾಣಗಳಲ್ಲಿ ಎದ್ದು ಕಾಣುವ ಶಿಸ್ತು, ಶುಚಿತ್ವ ನಮ್ಮಲ್ಲಿ ಇಲ್ಲವೇ ಇಲ್ಲ.  ಮೆಟ್ಟಿಲುಗಳ ಇಕ್ಕೆಲಗಳಲ್ಲೂ  ವಿವಿಧ ಪ್ಲಾಸ್ಟಿಕ್ ಕವರ್ ಗಳು, ತಿಂಡಿ ಪೊಟ್ಟಣಗಳು  ಬಿದ್ದಿದ್ದುವು. ಅಲ್ಲಲ್ಲಿ ಇದ್ದ ಕೆಲವು ಶಿಲಾಮಂಟಪಗಳಲ್ಲಿ ಅಸಂಬದ್ಧ ಬರಹಗಳಿದ್ದುವು.

ತರಗುಟ್ಟುವ ಚಳಿಯಲ್ಲಿ ಸೂಟ್-ಬೂಟ್ ಹಾಕಿಕೊಂಡು ಜರ್ಮನಿಯ 'ಆಂಡೆಕ್ಸ್' ಬೆಟ್ಟ ಏರಿದ್ದೆ. ನಮ್ಮ ಚಾಮುಂಡಿ ಬೆಟ್ಟದ ಮುಂದೆ ಅದು 'ಬಚ್ಚಾ'. ನಮ್ಮಲ್ಲಿ ಹಲವಾರು ಉತ್ತಮವಾದ ಪ್ರವಾಸಿ ತಾಣಗಳಿದ್ದರೂ, ಉತ್ತಮ ಹವೆಯಿದ್ದರೂ,  ಅಶುಚಿತ್ವ, ಅಶಿಸ್ತು ಹಾಗೂ ಕಳಪೆ ನಿರ್ವಹಣೆ  ನಮ್ಮನ್ನು  ತಲೆತಗ್ಗಿಸುವಂತೆ ಮಾಡುತ್ತವೆ.  


Tuesday, April 19, 2011

ಇನೋವೇಟಿವ್ ಫಿಲ್ಮ್ ಸಿಟಿ- ಪುಟಾಣಿಗಳಿಗೆ ’ಫಾರಿನ್’ನೋಡಬೇಕೆ?

ಬೇಸಗೆಯ ರಜಾದಿನಗಳಲ್ಲಿ ಮಕ್ಕಳಿಗೆ ಸಮಯ ಕಳೆಯಲು ನೂರಾರು ದಾರಿ. ಸಣ್ಣ ಪುಟ್ಟ ಪ್ರವಾಸ ಹೋಗುವುದೂ ಅವುಗಳಲ್ಲೊಂದು. ೧೫ ವಯಸ್ಸಿನ ನಮ್ಮ ಮಗನೊಂದಿಗೆ ನಿನ್ನೆ ಬೆಂಗಳೂರಿನ ಸಮೀಪದ ಬಿಡದಿ ಎಂಬಲ್ಲಿರುವ 'ಇನೋವೇಟಿವ್  ಫಿಲ್ಮ್ ಸಿಟಿ’ ನೋಡಲು ಹೋಗಿದ್ದೆವು.


















ಮೈಸೂರು-ಬೆಂಗಳೂರು  ಹೆದ್ದಾರಿಯಲ್ಲಿ ಬಿಡದಿಯ ಪಕ್ಕದಲ್ಲಿಯ ರಸ್ತೆ  ತಿರುವಿನಲ್ಲಿ ಚಲಿಸಿ, ಅಲ್ಲಿನ ಕೈಗಾರಿಕಾ ವಲಯದಲ್ಲಿ  ಸುಮಾರು ೫-೬ ಕಿ.ಮೀ.  ಪ್ರಯಾಣಿಸಿದಾಗ ’ಇನೋವೇಟಿವ್ ಫಿಲ್ಮ್ ಸಿಟಿ’ಯ ಭವ್ಯ ಕಮಾನು ಸ್ವಾಗತಿಸುತ್ತದೆ. ನಿಜಕ್ಕೂ  ಈ ಸ್ವಾಗತ ಕಮಾನು ಹಾಗೂ ಸುತ್ತುಮುತ್ತಲಿನ ತೆಂಗಿನಮರಗಳ ತೋಪು ಆಕರ್ಷಕವಾಗಿದೆ. 

ಅಲ್ಲಿ ಎರಡು ವಿಧದ  ಟಿಕೆಟ್ ಗಳು ಲಭ್ಯವಿದೆ.  ೫೦೦ ರುಪಾಯಿಯ ಟಿಕೆಟ್ ಗೆ ಎಲ್ಲಾ ಆಟಗಳನ್ನು ಆಡಬಹುದು. ಎಲ್ಲಾಮ್ಯೂಸಿಯುಂ ಗಳಿಗೆ ಪ್ರವೇಶ ಇದೆ. ೩೦೦ ರುಪಾಯಿಗಳ ಟಿಕೆಟ್ ಪಡಕೊಂಡರೆ ವಾಟೆರ್ ಗೇಮ್ಸ್, ಕೃತಕ ಸಮುದ್ರ, ಇತ್ಯಾದಿಗಳಿಗೆ ಪ್ರವೇಶವಿಲ್ಲ. ಕ್ಯಾಮೆರಾ ಟಿಕೆಟ್ ೧೦೦ ರೂ.

ಹೊರಗಡೆಯಿಂದ ಆಹಾರ ಪದಾರ್ಥಗಳನ್ನು ಒಯ್ಯಲು ಅನುಮತಿಯಿಲ್ಲ ಎಂಬ ಬೋರ್ಡ್  ಪ್ರವೇಶ ದ್ವಾರದಲ್ಲಿಯೇ ಎಚ್ಚರಿಸುತ್ತದೆ. ಒಳಗೆ ಊಟ-ತಿಂಡಿ ಬೇಕಾದರೆ, ಉಡುಪಿ ಆನಂದ ಭವನ ದಿಂದ ಹಿಡಿದು ಮಾಕ್ ಡೊನಾಲ್ಡ್ಸ್ ವರೆಗೆ ವೈವಿಧ್ಯತೆ ಇದೆ. ಆದರೆ ಸ್ವಲ್ಪ ದುಬಾರಿ.

ಟಿಕೆಟ್ ಒಪ್ಪಿಸಿ, ಒಳ ಹೊಕ್ಕಾಗ ಹೀಗೊಂದು ಮುದ್ರಿತ ವಾಣಿ ತೇಲಿ ಬಂತು "ತುಂಬಾ ಹಣ ಖರ್ಚು ಮಾಡಿ ವಿದೇಶಕ್ಕೆ  ಯಾಕೆ ಹೋಗಬೇಕು, ಇನೋವೇಷನ್ ಫಿಲ್ಮ್ ಸಿಟಿ ಯಲ್ಲಿ ಫಾರಿನ್ ನ ಅನುಭವ ಪಡೆಯಿರಿ".


.

ಈ ಮಾತಿಗೆ ಪೂರಕವಾಗಿ ಅಲ್ಲಿಯೇ ಕಾಣಿಸುತ್ತಿದ್ದ ಪ್ರತಿಮೆಗಳು ಸುಮಾರಾಗಿ ವಿದೇಶಿ ಶಿಲ್ಪವನ್ನು ಹೋಲುತ್ತಿದ್ದುವು.

ಇವುಗಳ ಮುಂದೆ ನಿಂತು ಫೊಟೊ ಕ್ಲಿಕ್ಕಿಸಿ  ಇದು ರೋಮ್  ನಲ್ಲೋ, ಇಂಗ್ಲೇಂಡ್ ನಲ್ಲೋ ಹೋಗಿದ್ದಾಗ ತೆಗೆದವು ಎಂದು, ಗೊತ್ತಿಲ್ಲದವರ ಮುಂದೆ ಬುರುಡೆ ಬಿಡಬಹುದು!


ಗುಡ್ ಮಾರ್ಕೆಟಿಂಗ್!







ಸುಮಾರು ೬  ಗಂಟೆಗಳ ಅವಧಿಯಲ್ಲಿ , ನಾವು ನೋಡಿದ ಕೆಲವು ಪ್ರದರ್ಶನಗಳು ಚೆನ್ನಾಗಿದ್ದುವು. ಉದಾಹರಣೆಗೆ, ಪುಟಾಣಿಗಳಿಗಾಗಿ ವಿವಿಧ ನಮೂನೆಯ ಟೆಡ್ಡಿಬೇರ್ ಗಳ ಪ್ರದರ್ಶನ, ಒಂದೇ ಕಟ್ಟಡದಲ್ಲಿ  ವಿಮಾನ ನಿಲ್ದಾಣ, ಟಿ.ವಿ. ಸ್ಟೇಶನ್ ಇತ್ಯಾದಿ ಇವೆ.   . ೪ ಡಿ ಶೊ, ಅಂಫಿಥೆಯೆಟರ್, ಟಾಕಿಸ್, ಎಲ್ಲ ವಯೋಮಾನದವರಿಗೆ ತರಾವರಿ  ಆಟಗಳು ಇವೆ. ರೋಲರ್ ಸ್ಕೇಟಿಂಗ್, ಕರೊಸಲ್, ಡಾಶಿಂಗ್ ಕಾರ್ ಇತ್ತ್ಯಾದಿ.

ವಾಕ್ಸ್ ಮ್ಯೂಸಿಯಂ ನಲ್ಲಿ ದಲೈ ಲಾಮ, ಮದರ್ ತೆರೆಸಾ, ಪೋಪ್ ಜಾನ್ ಪೌಲ್, ಮಹಾತ್ಮಾ ಗಾಂಧಿ ಮೊದಲಾದವರ ಪ್ರತಿಕೃತಿಗಳು ಸೊಗಸಾಗಿವೆ.

ರೆಪ್ಲೆ’ಸ್ 'ಬಿಲೀವ್ ಇಟ್ ಅರ್ ನಾಟ್ ' ಮ್ಯೂಸಿಯಂ ನಲ್ಲಿ ಪ್ರ ಪಂಚದ ವಿಸ್ಮಯ, ಅದ್ಭುತ ವಿಚಾರಗಳ ಸಂಗಮ ಇದೆ. ವಿಷಯ ಸಂಗ್ರಹದಲ್ಲಿ ಆಸಕ್ತಿ ಇರುವವರಿಗೆ, ಇಲ್ಲಿ ಕನಿಷ್ಟ ೩ ಗಂಟೆ  ಬೇಕಾಗಬಹುದು.

ಮಿರರ್ ಮೇಜ್  ಎಂಬ ಕನ್ನಡಿಗಳ ಲೋಕದಲ್ಲಿ, ಪ್ರತಿಫಲನದ  ಸಮ್ಮಿಳನದಿಂದಾಗಿ ದಾರಿ ತಪ್ಪಿ ಹೊರಬರಲು ಗೊತ್ತಾಗದೆ ತಬ್ಬಿಬ್ಬಾಗಬಹುದು.



ಪಳೆಯುಳಿಕೆಗಳ ಸಂಗ್ರಹ ಹಾಗೂ ಡೈನೊಸಾರಸ್ ಗಳ ಲೋಕ ಪ್ರವೇಶಿಸುತ್ತಿದ್ದಂತೆ, ಜುರಾಸಿಕ್ ಪಾರ್ಕ್ ಸಿನೆಮಾದಲ್ಲಿ ಕಾಣಿಸಿರುವ ಪ್ರಾಣಿಗಳು ಜೀವ ತಳೆದು ನಮ್ಮ ಕಣ್ಮುಂದೆ  ಹೂಂಕರಿಸುತ್ತವೆ.










ಸಾಹಸ ಪ್ರಿಯರಿಗೆ ಪಕ್ಕದಲ್ಲಿ ಒಂದು ದೆವ್ವದ ಮನೆಯೂ ಇದೆ. ಜನರು ಒಳ ಹೊಕ್ಕಾಗ, ಕೆಲವು ಆಕೃತಿಗಳಿಗೆ/ವಸ್ತುಗಳಿಗೆ ಇದ್ದಕ್ಕಿದ್ದಂತೆ ದೆವ್ವ ಹಿಡಿದು, ಅವು ಅಲುಗಾಡುತ್ತವೆ ಅಥವಾ ವಿಚಿತ್ರವಾದ  ಸದ್ದು ಮಾಡುತ್ತವೆ, ಯಾಕೆಂದರೆ ಅವಕ್ಕೆ ಸೆನ್ಸರ್ ನ್ನು ಅಳವಡಿಸಿಲಾಗಿದೆ! ಚಿಕ್ಕ ಮಕ್ಕಳು ಹಾಗೂ  ಅಂಜುವ ಸ್ವಭಾವದವರು ಇಲ್ಲಿಗೆ ಭೇಟಿ ಕೊಡದಿದ್ದರೆ ಉತ್ತಮ.

ಇನ್ನೂ ಹಲವಾರು ಪ್ರದರ್ಶನಗಳು ಇದ್ದುವು. ಸಮಯದ ಅಭಾವದಿಂದ ಹಾಗೂ ನಡೆದು ಸುಸ್ತಾದ ಕಾರಣ ನಾವು ಎಲ್ಲವನ್ನೂ ನೋಡಲಾಗಲಿಲ್ಲ. ವಾರದ ರಜಾದಿನಗಳಲ್ಲಿ ಎಷ್ಟು ನೂಕು-ನುಗ್ಗಲು ಇರುತ್ತೋ ಗೊತ್ತಿಲ್ಲ, ನಾವು ಹೋದ ದಿನ ಸೋಮವಾರ, ಅಷ್ಟೇನೂ ಜನರಿರಲಿಲ್ಲ. ನಮಗೆ ಆರಾಮವಾಗಿ ಸುತ್ತಾಡಲು ಸಾಧ್ಯವಾಯಿತು.

ವಿನ್ಯಾಸ, ವಿಸ್ತಾರ ಹಾಗೂ ವೈವಿಧ್ಯತೆಯಲ್ಲಿ, ನಾನು ಈ ಮೊದಲು ನೊಡಿದ್ದ ವಿದೇಶದ ಫಿಲ್ಮ್ ಸಿಟಿ ಗಳಿಗೆ ಇದನ್ನು ಹೋಲಿಸಲು ಸಾಧ್ಯವೇ ಇಲ್ಲ. ಹೈದರಾಬಾದ್ ನ ರಾಮೋಜಿ    ಫಿಲ್ಮ್ ಸಿಟಿ ಗೆ ಹೋಲಿಸಿದರೆ ಇದು ತುಂಬಾ ಸಣ್ಣದು. ಆದರೆ ಅಚ್ಚುಕಟ್ಟಾಗಿದೆ.  ಒಟ್ಟಿನಲ್ಲಿ, ಮನೆಯ ಎಲ್ಲ ಸದಸ್ಯರಿಗೂ ಇಷ್ಟವಾಗಬಲ್ಲ ಕನಿಷ್ಟ ೩-೪ ಪ್ರದರ್ಶನ ಗಳು ಇದ್ದೇ ಇವೆ.  ಎಲ್ಲದಕ್ಕಿಂತ ಹೆಚ್ಚು ನಮಗೆ ಹತ್ತಿರದಲ್ಲಿದೆ.


ಆರಂಭದಲ್ಲಿ ಹೇಳಿದಂತೆ, ನಿಮ್ಮ ಪುಟಾಣಿಗಳಿಗೆ. ಅತಿ ಕಡಿಮೆ ಖರ್ಚಿನಲ್ಲಿ  ಒಂದು ವಿದೇಶಿ ನಗರಿಯ ಅನುಭವ ಕೊಡಲು, ಒಂದು ರಜಾದಿನವನ್ನು ಖುಷಿಯಿಂದ ಕಳೆಯಲು ’ದಿಸ್ ಇಸ್ ಫರ್ಫೆಕ್ಟ್’!

Sunday, April 10, 2011

ಎಂಜಾಯಿಂಗ್ ದ ವೆದರ್...ಬೀರೋತ್ಸವ!

ಮಾರ್ಚ್ ೨೯ ರಂದು, ಜರ್ಮನಿಯಲ್ಲಿರುವ ಹೆಡ್ ಅಫೀಸ್ ನಲ್ಲಿ,ನಮ್ಮ ಕಾರ್ಯಕ್ರಮ  ಸಂಜೆ ನಾಲ್ಕು ವರೆ ಗಂಟೆಗೆ ಮುಗಿದಿತ್ತು. ಆಲ್ಲಿನ ಸಹೋದ್ಯೋಗಿಗಳು ಈವತ್ತು ಹವೆ ತುಂಬಾ ಚೆನ್ನಾಗಿದೆ,ಹಾಗಾಗಿ ನಾವು ನಿಮ್ಮನ್ನು 'ಸೆಂಟರ್ ಒಫ್ ಮ್ಯೂನಿಕ್' ಗೆ ಕರೆದೊಯ್ಯುತ್ತೇವೆ, ಲೆಟ್ ಅಸ್ ಎಂಜಾಯ್ ದ ವೆದರ್ ಆಂಡ್ ಹಾವ್ ಡಿನ್ನರ್ ದೇರ್' ಅಂದರು.

ನಾನು ಗಮನಿಸಿದಂತೆ, ಇಲ್ಲಿನ ಜನರಿಗೆ ಹವೆಯ ಬಗ್ಗೆ ಮಾತನಾಡುವುದು ಹಾಗೂ  ವಿವಿಧ ಹವೆಗಳಲ್ಲಿ ವಿಭಿನ್ನ ರೀತಿಯಲ್ಲಿ ಖುಷಿ ಪಡುವುದೇ ಒಂದು ಹವ್ಯಾಸ. ಥರಗುಟ್ಟುವ ಚಳಿಯಲ್ಲಿ  ಹಿಮದಲ್ಲಿ ಆಡುವ ಸ್ಕೀಯಿಂಗ್  ಆಡುತ್ತಾರೆ, ಬೇಸಗೆಯಲ್ಲಿ ಸಾಧ್ಯವಾದಷ್ಟೂ ಬಿಸಿಲಿನಲ್ಲಿ ಕಾಲ ಕಳೆಯಲು ಹವಣಿಸುತ್ತಾರೆ.

ಆದರೆ ಎಲ್ಲಾ ಹವೆಯಲ್ಲೂ ನೀರಿಗಿಂತ ಹೆಚ್ಚು ಬೀರ್ ನ್ನೇ  ಕುಡಿಯುತ್ತಾರೆ. ಒಕ್ಟೋಬರ್  ತಿಂಗಳಲ್ಲಿ ನಡೆಯುವ ಬೀರ್ ಫೆಸ್ಟಿವಲ್ ನಲ್ಲಿ, ಲೀಟರ್ ಗಟ್ಟಲೆ ಬೀರ್ ಕುಡಿದವರೇ ಜಾಣರಂತೆ. ಒಂದಿಷ್ಟು ಬಿಸಿಲು ಬಿದ್ದರೆ  ಆರಾಮವಾಗಿ  ಹೊರಾಂಗಣದಲ್ಲಿ ಕುಳಿತು ಬೀರ್ ಹೀರುವುದೆಂದರೆ ಅವರಿಗೆ ಪಂಚಪ್ರಾಣ.  ಇದನ್ನು ಬೀರೋತ್ಸವ ಎನ್ನೋಣವೇ?





ಹವೆ ತುಂಬಾ ಚೆನ್ನಾಗಿದೆಯೆಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ರೈಲ್ ನ ಮೂಲಕ ಸೆಂಟರ್ ಆಫ್ ಮ್ಯೂನಿಕ್ ತಲಪಿದೆವು.  ಅಲ್ಲಿ ಕೆಲವು ಹಳೆಯ ಐತಿಹಾಸಿಕ ಕಟ್ಟಡಗಳು ಹಾಗೂ ಚರ್ಚುಗಳು ಇವೆ. ತರಕಾರಿ, ಹೂ-ಹಣ್ಣು ಇತ್ಯಾದಿ ಮಾರುವ ಅಂಗಡಿಗಳು, ಕೋಟ್ ಹಾಕಿಕೊಂಡು ಓಡಾಡುತ್ತಿರುವ ಜನ, ಬೀರ್ ಶಾಪ್ ಒಂದರ ಮುಂದೆ ಬಿಸಿಲಿನಲ್ಲಿ ಕುಳಿತು ಬೀರ್ ಹೀರುವ ಮಂದಿ, ಈಸ್ತರ್  ಹಬ್ಬದ ಸಿದ್ದತೆಗಾಗಿ ಹಬ್ಬಕ್ಕೆ ಬೇಕಾದ ಪರಿಕರಗಳು, ಹಬ್ಬಕ್ಕಾಗಿ  ಚಿತ್ತಾರ ಬರೆದ  ಮೊಟ್ಟೆಗಳ ಮಾರಾಟ,  .....ಎಲ್ಲವೂ ತುಂಬಾ ಚೆನ್ನಾಗಿದ್ದುವು.

ಮಾರ್ಗದ ಬದಿಯಲ್ಲಿ ಒಬ್ಬಾತ ಅದೇನೋ ತಬಲಾ ವನ್ನು ಹೊಲುವ ಡಬ್ಬಿಯೊಂದನ್ನು ಬಡಿಯುತ್ತಾ ಹಾಡುತ್ತಿದ್ದ. ಭಿಕ್ಷೆ ಬೇಡುವ ಇನ್ನೊಂದು ರೂಪ ಅಲ್ಲೂ ಇತ್ತು.  

ಒಟ್ಟಿನ ಮೇಲೆ, ಗಣೇಶ ಚತುರ್ಥಿ ಹಬ್ಬದ  ಮುನ್ನಾ ದಿನ ಮೈಸೂರಿನ ದೇವರಾಜ ಮಾರುಕಟ್ಟೆಗೆ ಹೋದರೆ ಕಾಣಸಿಗುವ ಹಬ್ಬದ ಕಳೆ ಹೊತ್ತ ವ್ಯಾಪಾರ.ಆದರೆ ಅಲ್ಲಿ ಎಲ್ಲವೂ ಸ್ವಚ್ಛ,ಅಚ್ಚುಕಟ್ಟು. ಗಲಾಟೆ ಗೊಂದಲವಿಲ್ಲ, ವಸ್ತುಗಳನ್ನು ಕೊಳ್ಳಿರೆಂದು  ಕಿರುಚುವ ಮಾರಾಟಗಾರರಿಲ್ಲ,  ದೊಡ್ಡದನಿಯಲ್ಲಿ ಚೌಕಾಸಿ ಮಾಡಿ ಕಿರಿಕಿರಿ ತರಿಸುವ ಗ್ರಾಹಕರೂ ಇಲ್ಲ.

 ಟುಲಿಪ್ ಹೂಗಳು 

ಸ್ವಲ್ಪ ಸುತ್ತಾಡಿ, ಹೋಟೆಲ್ ಒಂದರಲ್ಲಿ ಊಟ ಮಾಡಿ ಹಿಂತಿರುಗಿದೆವು. ಕೆಲವರು ಪರಸ್ಪರ ಶುಭರಾತ್ರಿ, ವಿದಾಯದ ಹಾರೈಕೆಗಳ ಜತೆಗೆ 'ವೆದರ್ ವಾಸ್ ಸೊ ಗುಡ್, ವಿ ಎಂಜಾಯೆಡ್, ವ್ ಹಾಡ್ ಗ್ರೇಟ್ ಟೈಮ್, ಸ್ಕೈ ಇಸ್ ಕ್ಲೀಯರ್‍, ವಿ ಕಾನ್ ಈವನ್ ಸಿ ಸ್ಟಾರ್‍ಸ್' ಇತ್ಯಾದಿ ಅನ್ನುತಿದ್ದರು. 

ಆಗ ಸುಮಾರು 8-10 ಡಿಗ್ರಿ ತಾಪಮಾನ ಇದ್ದಿರಬಹುದು. ನಿಜ ಹೇಳಬೇಕೆಂದರೆ, ಸ್ವೆಟರ್, ಕೋಟ್ , ಶೂ -ಹಾಕಿಕೊಂಡಿದ್ದರೂ ನನಗೆ ಚಳಿಯೆನಿಸಿತ್ತು. ಇದನ್ನು ಉತ್ತಮ ಹವೆ ಎನ್ನುವ ಪ್ರಶಂಸಿಸುವ ನೀವೆಲ್ಲಾ ನಮ್ಮ ಮೈಸೂರಿಗೆ ಬನ್ನಿ, ವರುಷವಿಡೀ ಅತ್ಯುತ್ತಮ ಹವೆಯಿರುತ್ತದೆ ಅನ್ನೋಣ ಎನಿಸಿತಾದರೂ ತೆಪ್ಪಗಿದ್ದೆ.

ಮೆಚ್ಚೆಬೇಕಾದ ವಿಷಯವೇನೆಂದರೆ, ಹವೆಯನ್ನು ಅನುಭವಿಸುವುದರಲ್ಲಿ ಅವರಿಗೆ ಅದೆಷ್ಟು ಸರಳ ಸಂತೃಪ್ತಿ! ನಮಗೆ ಧಾರಾಳವಾಗಿ ಹಾಗೂ  ಉಚಿತವಾಗಿ ಸಿಗುವ ಉತ್ತಮ ಹವೆಯನ್ನು  ಖಂಡಿತವಾಗಿಯೂ ಇಷ್ಟು ಸಂತೋಷದಿಂದ ಅನುಭವಿಸುವುದಿಲ್ಲ. ವಿ ಟೇಕ್  ವೆದರ್ ಫಾರ್‍ ಗ್ರಾಂಟೆಡ್!

ಹವೆಯನ್ನು ಎಂಜಾಯ್ ಮಾಡುವುದಿರಲಿ, ಮೈಸೂರಿನಲ್ಲಿ ದಿಸೆಂಬರ್ ನ 15-18 ಡಿಗ್ರಿ ತಾಪಮಾನ ನಮಗೆ ಅತಿ-ಚಳಿಯಾಗುತ್ತದೆ. 32 ಡಿಗ್ರಿ ತಾಪಮಾನ ಇರುವ ಈಗ, ಸೆಕೆಯನ್ನೂ, ಪದೇ ಪದೇ  ವಿದ್ಯುತ್ ಕಡಿತಗೊಳಿಸುವ  ವಿದ್ಯುತ್ ಮಂಡಳಿಯನ್ನೂ ಮನಸಾರೆ  ಶಪಿಸುತ್ತೇವೆ. ಮಳೆಗಾಲದಲ್ಲಿ, ಹಳ್ಳ ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ನೀರೂ ತುಂಬಿ ವಾಹನ ಚಲಾಯಿಸಲು ಸಾಧ್ಯವಾಗದ ಸಂಕಟಕ್ಕೆ ಮಳೆಯ ಜತೆ  ಸರಕಾರವನ್ನೂ, ಮಂತ್ರಿಗಳ ಕಾರ್ಯವೈಖರಿಯನ್ನೂ ಸೇರಿಸಿ ದೂರುತ್ತೇವೆ. ನಾವು ಹವೆಯನ್ನು ಅನುಭವಿಸುವ ಪರಿ ಇದು! .
  
ಇನ್ನು  ಮುಂದಾದರೂ ಹವೆಯನ್ನು ಎಂಜಾಯ್ ಮಾಡಲು ಶುರುಮಾಡಬೇಕು ಎಂದು ನಿರ್ಧರಿಸಿದೆ. 






Wednesday, April 6, 2011

ಜರ್ಮನಿಯ ತರಕಾರಿ ಅಂಗಡಿಯಲ್ಲಿ 'ಅಟಿಚೋಕ್'


ಕಳೆದ ವಾರ, ಜರ್ಮನಿಯ ಮೂನಿಕ್ ನಗರದಲ್ಲಿರುವ ನಮ್ಮ ಸಂಸ್ಥೆಯ ಕೇಂದ್ರ ಕಛೇರಿಗೆ ಹೋಗಿದ್ದೆ. 
ನಾನು ಅಲ್ಲಿ ಇದ್ದ ಮೂರೂ  ದಿನಗಳಲ್ಲೂ, ಆಯಾಯ ದಿನದ ಅಫೀಸಿನ  ಕಾರ್ಯಕ್ರಮಗಳು ಮುಗಿದ ನಂತರ ಊರಲ್ಲಿ ಸುತ್ತಾಡಲು ಸ್ವಲ್ಪ ಸಮಯ ಸಿಗುತಿತ್ತು.

ಅಲ್ಲಿ ಇದೀಗ ಚಳಿಗಾಲ ಕಳೆದು ವಸಂತ ಕಾಲ ಶುರುವಾಗುತ್ತಿದೆ. ಎಲೆ ಉದುರಿಸಿಕೊಂಡ ಮರಗಿಡಗಳು  ಇನ್ನು ಕೆಲವು ದಿನಗಳಲ್ಲಿ ಚಿಗುರುವಂತೆ ಕಾಣಿಸುತಿದ್ದುವು. ಸಂಜೆ ಸುಮಾರು ೧೨-೧೩ ಡಿಗ್ರಿ ಉಷ್ಣತೆ ಇದ್ದಿರಬಹುದು, ೭.೩೦ ಗಂಟೆಯಾದರೂ, ಇನ್ನೂ ಸೂರ್ಯನ ಬೆಳಕಿತ್ತು. 

ಮೂನಿಕ್ ಸಿಟಿಯ ರಸ್ತೆಯೊಂದರಲ್ಲಿ ನಡೆಯುತಿದ್ದಾಗ ತರಕಾರಿ ಅಂಗಡಿಯೊಂದರಲ್ಲಿ ಬುಟ್ಟಿಯಲ್ಲಿ ಜೊಡಿಸಿಟ್ಟಿದ್ದ, ಹೂವಿನಂತೆ ಕಾಣುವ ತರಕಾರಿ ಗಮನ ಸೆಳೆಯಿತು. ಸಾಮಾನ್ಯವಾಗಿ ಹೂವು ತರಕಾರಿಗಳಲ್ಲಿ ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೋಲಿ ಗೊತ್ತು. ಸಾಂಪ್ರದಾಯಿಕ ಅಡುಗೆಗೆ ಬಳಸುವ ಹಿತ್ತಲಿನ  ನುಗ್ಗೆ ಹೂ, ಬಾಳೆ ಹೂ, ಕುಂಬಳಕಾಯಿ ಹೂ ಇತ್ಯಾದಿಗಳೂ ಗೊತ್ತು.ಇವುಗಳಲ್ಲಿ ಹಲವು ಬಣ್ಣದವುಗಳು ಹಾಗು ವಿವಿಧ ಗಾತ್ರ ದವುಗಳನ್ನು ನೋಡಿದ್ದೆ.

.



ಆದರೆ ಗುಲಾಬಿ ಹೂವಿನಂತೆ ಕಾಣುವ, ತುಸು ಒರಟಾದ ಈ ತರಕಾರಿ ಏನೆಂದು ಗೊತ್ತಾಗಲಿಲ್ಲ
    


ಅಂಗಡಿಯಾತನನ್ನು ಇದೇನೆಂದು ಇಂಗ್ಲಿಷ್ ನಲ್ಲಿ ಕೇಳಿದೆ. ಅವನಿಗೆ  ಇಂಗ್ಲಿಷ್ ನಲ್ಲಿ ಮಾತನಾಡಲು ಕಷ್ಟವಾಗುತಿತ್ತು. ನನಗೆ ಜರ್ಮನ್ ಭಾಷೆಯ ೪-೫ ವ್ಯಾವಹಾರಿಕ  ಪದಗಳು ಮಾತ್ರ ಗೊತ್ತು.  ಒಟ್ಟಿನಲ್ಲಿ ಅವನು ಹೇಳಿದುದರಲ್ಲಿ ನನಗೆ ಅರ್ಥವಾದ ದ್ದು ಇಷ್ಟು:


ಇದು 'ಅಟಿಚೋಕ್'ಎಂಬ  ತರಕಾರಿ. ಹಸಿ  ಸಲಾಡಿನಂತೆಯೂ ಬಳಸಬಹುದು, ಒಲಿವ್ ಎಣ್ಣೆಯ ಜತೆ ಸೇರಿಸಿ ಹುರಿದು ತಿನ್ನಬಹುದು.  ಅಥವಾ ಬೇಯಿಸಿ  ತಿನ್ನಬಹುದು. ಬೆಂದಾಗ  ಹೂವಿನ ದಳಗಳ ಹೊರಭಾಗ ಗಟ್ಟಿಯಾಗುತ್ತದೆ. ಬೆಂದ ಅಟಿಚೋಕ್ ಅನ್ನು ಮೂಳೆ ತಿನ್ನುವಂತೆ ಸಾಸ್ ನಲ್ಲಿ ಅದ್ದಿ  ತಿನ್ನಬಹುದು ಅಂದ!

ಸಸ್ಯಾಹಾರಿಗಳು ಇದನ್ನು 'ನುಗ್ಗೆಕಾಯಿ ದಂಟು ತಿಂದಂತೆ' ಎಂದು ಹೋಲಿಕೆ ಕೊಡಬಹುದು!       



Sunday, February 20, 2011

ಕಸಿನೋ...ಬೆಳ್ಳನೆ ಬೆಳಗಾಯಿತೆ?


ಇತ್ತೀಚೆಗೆ ಕಾನ್ಫರೆನ್ಸ್ ಪ್ರಯುಕ್ತ ಹಾಂಗ್ ಕಾಂಗ್ ಪಕ್ಕದ ಮಕಾವ್ ದ್ವೀಪಕ್ಕೆ ಹೋಗಿದ್ದೆ. ಸಂಜೆ ವಿರಾಮ ಕಾಲದಲ್ಲಿ ಹೊರಗಡೆ ಸುತ್ತಾಡುವ ಆಲೋಚನೆ ಮಾಡಿದೆವು.

ಅಲ್ಲಿನ ಆರ್ಥಿಕ ವ್ಯವಸ್ಥೆ ಹಾಗೂ  ಪ್ರವಾಸೋದ್ಯಮಕ್ಕೆ ಪ್ರಮುಖ ಮೂಲ 'ಕಸಿನೋ'. ಮಕಾವ್ ನ ಮುಖ್ಯ ರಸ್ತೆಯಲ್ಲಿ  ನಿಂತು ಯಾವ ಕಡೆಗೆ ಕ್ಯಾಮರಾ ತಿರುಗಿಸಿದರೂ ಯಾವುದೊ ಒಂದು ಕಸಿನೊ ಸಿಗುತ್ತದೆ. ಕಸಿನೊ ಅಂದರೆ, ಸುಲಭವಾಗಿ ಹೇಳುವುದಾರೆ ಅತ್ಯಾಧುನಿಕ ಜೂಜುಗಾರರ ಅಡ್ಡೆ. ಕೇವಲ ಮಕಾವ್ ಸಿಟಿಯೊಂದರಲ್ಲೇ ೬೦ ಕ್ಕೂ ಹೆಚ್ಚು ವೈಭವೊಪೇತ ಕಸಿನೊಗಳಿವೆಯಂತೆ. ಇನ್ನೊಂದು ಇಲ್ಲಿನ ಗಮನಾರ್ಹ ಅಂಶವೇನೆಂದರೆ ಈ ಕಸಿನೊಗಳಲ್ಲಿ ಆಡುವ ಹೆಚ್ಚಿನವರು ವಿದೇಶೀಯರಂತೆ.


ನಾವು ಐದು ಜನ ಸಹೊದ್ಯೋಗಿಗಳು ಕಸಿನೋಕ್ಕೆ ಭೇಟಿ ಕೊಡಲು ನಿರ್ಧರಿಸಿದೆವು. ನಾವು ಉಳಕೊಂಡಿದ್ದ ಹೋಟೆಲ್ ನಿಂದ ಗಂಟೆಗೆ ಒಂದು ಬಾರಿಯಂತೆ   ಹೋಟೆಲ್ ನ  ಬಸ್  'ವೆನೇಶಿಯ' ಎಂಬ ಕಸಿನೋ ದ ಬಳಿ ಹೋಗುತ್ತದೆಯೆಂದು ಗೊತ್ತಾಯಿತು. ಅದೇ ಬಸ್ ಅಲ್ಲಿಂದ ಗಂಟೆಗೊಮ್ಮೆ ಹಿಂತಿರುಗಿ ಬರುತ್ತದೆ. ಈ ಉಚಿತ ವ್ಯವಸ್ಥೆಯನ್ನು ಯಾರು ಬೇಕಾದರೂ  ಉಪಯೋಗಿಸಬಹುದು. ಇದೇ ಬಸ್ ನಲ್ಲಿ  ಮಾರ್ಕೆಟ್ ಹಾಗೂ ಇತರ ಪ್ರವಾಸಿಗಳಿಗೂ ಭೇಟಿ ಕೊಡಬಹುದು. ನಾವು ಬಸ್ಸನ್ನೇರಿ ಹೊರಟೆವು.

ದಾರಿಯಲ್ಲಿ ಬೇರೆ  ಹೋಟೆಲ್ ಅಥವಾ ಕಸಿನೋ ಗಳ ನಾಮಫಲಕ ಹೊತ್ತ ಹಲವಾರು ಬಸ್ ಗಳನ್ನು ನೋಡಿದೆ. ಎಲ್ಲೂ ನೂಕು ನುಗ್ಗಲು ಇಲ್ಲ, ಟಿಕೆಟ್ ಕೊಡಬೇಕಾಗಿಲ್ಲ. ಕೆಲವು ಕಸಿನೋಗಳ ಹತ್ತಿರ ನಿಲ್ಲಿಸುವ ಈ ಉಚಿತ ಬಸ್ ಸೇವೆಯನ್ನು ಬೇರೆ ಗ್ರಾಹಕರೂ ಬಳಸಬಹುದು. ಈ ರೀತಿ ಸಮೂಹ ಸಾರಿಗೆ ವ್ಯವಸ್ಥೆ ತುಂಬಾ ಅನುಕೂಲಕರವಾಗಿ ಇರುವುದಿಂದ, ರಸ್ತೆಯಲ್ಲಿ ವಾಹನಗಳ ದಟ್ಟಣೆ ಬಲು ಕಡಿಮೆ ಇತ್ತು. ಕಿರಿಚುವ ಹಾರ್ನ್ ಇರಲೇ ಇಲ್ಲ. ಪ್ರವಾಸಿಗಳಿಗೆ  ಇದು ತುಂಬ ಅನುಕೂಲಕರವಾಗಿದೆ. ಕಸಿನೋ ಪ್ರವೇಶಿಸುವ ಮುನ್ನವೇ ಅವುಗಳ  ಮಾರ್ಕೆಟಿಂಗ್ ತಂತ್ರ ದ ಪರಿಚಯ ನಮಗಾಯಿತು.

ದಾರಿಯುದ್ದಕ್ಕೂ ವಿವಿಧ ವಿನ್ಯಾಸಗಳ ಕಸಿನೋ ಗಳು ಕಂಗೊಳಿಸುತ್ತಿದ್ದುವು. ಕಟ್ಟಡಗಳು ಒಂದಕ್ಕಿಂತ ಇನ್ನೊಂದು ಸುಂದರವಾಗಿದ್ದುವು. ಕಸಿನೋದ ಇಸ್ಪಿಟ್ ಆಡುವ ಸ್ಥಳಗಳಲ್ಲದೆ, ಶಾಪಿಂಗ್ ಮಾಲ್ ಗಳು, ಹೊಟೆಲ್ ಗಳು, ಸ್ಪಾ ಗಳು... ಇತ್ಯಾದಿ ಇವೆ.


ವೆನೇಶಿಯ ಎಂಬುದು ಮಕಾವ್ ನಲ್ಲಿ ಸ್ಥಾಪಿತವಾದ ಮೊದಲ ಕಸಿನೋವಂತೆ. ಅದೊಂದು ಭವ್ಯವಾದ ಕನಸಿನ ಲೋಕ. ಇಲ್ಲಿ ಏನು ಇದೆ, ಏನಿಲ್ಲ? ಬಹಳ ದೊಡ್ಡದಾದ, ವೈಭವೊಪೇತವದ ಕಸಿನೋ ವನ್ನು ಸುತ್ತಾಡಲು ತುಂಬಾ ಸಮಯ ಬೇಕು. ಸೀಮಿತ ಅವಧಿಯಲ್ಲಿ ಒಂದು ಕಸಿನೋದ ಒಳಗೆ ಸುತ್ತಾಡಿದ್ದರ ಅನುಭವವಿದು.      

ಭವ್ಯವಾದ  ಕಟ್ಟಡ. ಎತ್ತ ನೋಡಿದರೂ ಹಲವಾರು ವೃತ್ತಾಕಾರದ ಮೇಜುಗಳ ಮುಂದೆ   ಗೈಡ್ ಗಳು  ಕುಳಿತಿದ್ದರು. ಸಮವಸ್ತ್ರಧಾರಿಯಾಗಿದ್ದ  ಅವಳ ಬಳಿ ಕರೆನ್ಸಿ ಇಡಲು ಒಂದು ಬಾಕ್ಸ್ ಇತ್ತು. ಕೇರಂ ಆಟದ ಕಾಯಿನ್ ಗಳನ್ನು ಹೋಲುವ ನಾಣ್ಯಗಳನ್ನು ಆಗಾಗ ಮೇಜಿನಲ್ಲಿ ತಳ್ಳುತ್ತಿದ್ದಳು. ಅವಳ ಮುಂದೆ ಇಸ್ಪಿಟ್ ಎಲೆಗಳನ್ನು ಹೊಂದಿಸುತ್ತ ಆಡುವವರು ಕೆಲವರು. ಬಹುಶ: ದುಡ್ಡು ಕಳೆದುಕೊಂಡವರಿರಬೇಕು, ಚಿಂತಾಕ್ರಾಂತರಾಗಿ, ಆಲೋಚನಾ ಮಗ್ನರಾಗಿ ಇದ್ದವರು ಕೆಲವರು. ಆಗ ಸುಮಾರು ರಾತ್ರಿ ಹನ್ನೊಂದು ಗಂಟೆಯಾಗಿದ್ದರೂ , ಎಷ್ಟೋ ಮಂದಿ ಯುವತಿಯರು ಕೂಡ ಆರಾಮವಾಗಿ ಆಟ ಆಡುತಿದ್ದರು. ಅಲ್ಲಿ ಇದ್ದ ಜನರ ಸಂಖ್ಯೆ ನೋಡಿ ದುಡ್ಡು ಕಳೆದುಕೊಳ್ಳಲೂ ಇಷ್ಟೊಂದು ಪೈಪೋಟಿಯೇ ಎನಿಸಿತು.

ಇಸ್ಪೀಟ್ ಆಟಗಳಲ್ಲದೆ, ಕಂಪ್ಯೂಟರ್ ಮುಂದೆ ಒಬ್ಬರೇ ಕುಳಿತು ಆಡುವ ಆಟಗಳು ಕೆಲವು. ಬೇರೆ  ದೇಶದ ಕರೆನ್ಸಿಯನ್ನು  ಬದಲಿಸಿ  ಮಕಾವ್ ನ ಕರೆನ್ಸಿಯನ್ನು ಕೊಡುವ ಕೌಂಟರ್ ಗಳು ಅಲ್ಲಲ್ಲಿ  ಇದ್ದವು.  ಸುಮಾರು ೧೦ ಸಾವಿರಕ್ಕಿಂತಲೂ ಹೆಚ್ಚು ಜನ ಅಲ್ಲಿ ಇದ್ದಿರಬಹುದಾದರೂ ಹೆಚ್ಚು ಗೌಜು-ಗಲಾಟೆ ಇರಲಿಲ್ಲ. ಒಟ್ಟಿನ ಮೇಲೆ ಪಂಚತಾರಾ ಹೊಟೆಲ್ ನಂತೆ ಇತ್ತು. ನಾವು ಹೋಗಿದ್ದ ಸಮಯ ಕ್ರಿಸ್ ಮಸ್ ಗೆ ಹತ್ತಿರವಾಗಿತ್ತು. ಹಾಗಾಗಿ ಕಸಿನೋ ದಲ್ಲಿ ಅಲ್ಲಲ್ಲಿ 'ಕ್ರಿಸ್ ಮಸ್ ಟ್ರೀ' ಯನ್ನು ಬಹಳ ಕಲಾತ್ಮಕವಾಗಿ ಜೋಡಿಸಿದ್ದರು. ಅದ್ಭುತವಾದ ವರ್ಣಚಿತ್ರಗಳು ಅಲ್ಲಿನ ಗೋಡೆಗಳನ್ನು ಅಲಂಕರಿಸಿದ್ದುವು.

ಒಂದೆಡೆ  ಚೈನಿಸ್ ಸಂಗೀತ ಕಾರ್ಯಕ್ರಮ ನಡೆಯುತಿತ್ತು.  ಪುಟ್ಟ ಪುಟ್ಟ  ಚೈನಿಸ್ ಲಲನೆಯರು, ಸಣ್ಣದಾದ ಪಿಟೀಲಿನಂತಹ ತಂತಿವಾದ್ಯವನ್ನು ಸುಶ್ರಾವ್ಯವಾಗಿ ನುಡಿಸುತಿದ್ದರು. ಕಸಿನೊ ದ ಒಳಗೆ   ಫೊಟೊ ತೆಗೆಯುವುದು ನಿಷಿದ್ದ ಹಾಗೂ  ಶಿಕ್ಷಾರ್ಹ ಅಪರಾಧವಂತೆ. 

ತಮಾಷೆಗೆಂದು, ನಮ್ಮ ಅದೃಷ್ಟವನ್ನೂ ನೋಡೇಬಿಡೋಣ  ಎಂದು ನಿರ್ಧರಿಸಿದೆವು.  ಮೊದಲನೆಯದಾಗಿ. ಕೌಂಟರಿಗೆ  ಹೋಗಿ ಯು.ಎಸ್ ಡಾಲರ್ ಕೊಟ್ಟು, ಮಕಾವ್ ನ ಡಾಲರ್ ಪಡಕೊಂಡೆವು. ಒಂದು ಯು.ಎಸ್ ಡಾಲರಿಗೆ ಸುಮಾರ್ ೬ ಮಕಾವ್ ಡಾಲರ್ ಸಿಕ್ಕಿತು. ಒಂದು ಕಂಪೂಟರ್ ಮುಂದೆ ಕುಳಿತು ಎಲ್ಲಾ ಬಟನ್ ಪ್ರಯೋಗ ಮಾಡಿದೆವು. ಏನು ಗೊತ್ತಾಗಲಿಲ್ಲ.

ಕೊನೆಗೆ ನಮ್ಮ ಪಕ್ಕದಲ್ಲಿ ಆಡುತಿದ್ದ ಒಬ್ಬರನ್ನು ಕೇಳಿದೆವು. ಹರಕು-ಮುರುಕು ಇಂಗ್ಲಿಷನಲ್ಲಿ ವಿವರಿಸಿದ. ನಮಗೆ ಅರ್ಥವಾದಿದ್ದು ಇಷ್ಟು. ಕಂಪ್ಯೂಟರ್ ನಲ್ಲಿರುವ  ಸ್ಲಾಟ್ ಗೆ ನಾವು ದುಡ್ಡು ಹಾಕಬೇಕು. ಹತ್ತು ಸಲ ಗುಂಡಿ  ಒತ್ತಬಹುದು. ಪ್ರತೀ ಸಾರಿಯೂ,  ಪರದೆಯಲ್ಲಿರುವ ಮೂರು ತಿರುಗುವ ರಿಂಗ್ ಗಳು ಸುತ್ತುತ್ತವೆ.  ಅವುಗಳ ಚಲನೆ  ನಿಂತಾಗ, ಪರದೆಯ ಮೇಲೆ ಮೂಡಿದ ಅಂಕಿಗಳಲ್ಲಿ ಏಕರೂಪತೆ ಇದ್ದರೆ , ನಮಗೆ ದುಡ್ಡು ಸಿಗುತ್ತದೆ. ಉದಾ:  ೭-೭-೭ ಎಂದು ಬಂದರೆ ನಮಗೆ ದುಡ್ಡು ಸಿಗುತ್ತದೆ.

ಸುಮಾರಾಗಿ ಎ.ಟಿ.ಎಮ್ ಮೆಶಿನ್ ಅನ್ನು ಹೋಲುವ  ಅದನ್ನು ನಮಗೆ ಅರ್ಥವಾದಂತೆ ಚಾಲನೆ ಮಾಡಿದೆವು.  ಮೆಶಿನ್   ೩೦ ಡಾಲರ್ ಗಳನ್ನು ಗುಳುಂ ಮಾಡಿತು.  ಯಾವುದೋ ಹಂತದಲ್ಲಿ ೪೫ ಡಾಲರ್ ಬೋನಸ್ ಬಂತು ಎಂದು ಕಂಪ್ಯೂಟರ್ ತೋರಿಸಿತು. ಅದೇ ಗೆಲುವಿನ ಉತ್ಸಾಹದಲ್ಲಿ ನಾವು ಹಾಕಿದ್ದ ೩೦ ಡಾಲರ್ ನ್ನು  ಹಿಂತೆಗೆಯುವ  ಜಾಣತನ ಪ್ರದರ್ಶಿಸಿದೆವು.  ಇನ್ನ್ಯಾವುದೋ ಹಂತದಲ್ಲಿ ಪರದೆಯ ಮೇಲೆ ನಮ್ಮ ಲಾಭ ಸೊನ್ನೆ ಎಂದು ಮೂಡಿ ಬಂತು.  ಲಾಭವೂ ಇಲ್ಲ ನಷ್ಟವೂ ಇಲ್ಲ ಎಂದು, ಆದರೆ ನಾವೂ ಜೂಜಾಡಿದೆವು ಎಂದು ನಗುತ್ತಾ ಜಾಗ ಖಾಲಿ ಮಾಡಿದೆವು. ಮರುದಿನ ನಮ್ಮ ತಂಡದ ಇತರ ಸಹೋದ್ಯೋಗಿಗಳಲ್ಲಿ ಕೆಲವರು ಸರಿಯಾಗಿ ಟೋಪಿ ಹಾಕಿಸಿಕೊಂಡಿದ್ದಾರೆಂದು ಗೊತ್ತಾಯಿತು.

ಹಾಗೆಯೇ ಇನ್ನೇನಿದೆ ಎಂದು ನೊಡಲು ಹೊರಟೆವು. ಆಗ ರಾತ್ರಿ ೧೧ ಗಂಟೆಯಾಗಿತ್ತು. ಅದುವರೆಗೆ ಜಗಮಗಿಸುವ ವಿದ್ಯುದೀಪಗಳ ನಡುವೆ ಇದ್ದೆವು. ಇದ್ದಕ್ಕಿದ್ದಂತೆ 'ಬೆಳ್ಳನೆ  ಬೆಳಗಾಯಿತು'. ನಾವು ಮೂರನೆಯ ಮಹಡಿಯಲ್ಲಿದ್ದ  ಫುಡ್ ಕೋರ್ಟ್ ತಲಪಿದ್ದೆವು. ವಿವಿಧ ದೇಶಗಳ ಆಹಾರ ಮಳಿಗೆಗಳ ಜತೆಗೆ  ಅಲ್ಲಿನ  ಪ್ರಮುಖ ಆಕರ್ಷಣೆಯಾಗಿ  ಹಾಡು ಹಗಲಿನ ವಾತಾವರಣವನ್ನು ಸೃಷ್ಟಿಸಿದ್ದರು.

ನಾನು ಅಲ್ಲಿನ  ಪೋರ್ಚುಗೀಸ್ ರೆಸ್ಟಾರಂಟ್ ಒಂದರಿಂದ ಘೀ-ರೈಸ್ ತಂದೆ.  ಕೇವಲ ೨ ಕಪ್ ಅನ್ನ ಮತ್ತು ಸ್ವಲ್ಪ ತರಕಾರಿ ಇದ್ದ ಈ ಭೋಜನಕ್ಕೆ ೭೮ ಮಕಾವ್ ಡಾಲರ್ ತೆರಬೇಕಾಯಿತು. ಅಂದರೆ ಸುಮಾರು ೪೦೦ ರೂ. ನನ್ನ ಸಹೋದ್ಯೋಗಿಗಳು ಬೇರೆ ಬೇರೆ ಕಡೆಗಳಿಂದ ತಮಗೆ ಇಷ್ಟವಾದ ಅಡುಗೆಗಳನ್ನು ಆರಿಸಿ ತಂದರು. ಎಲ್ಲರೂ ಆ ಮಾನವ ನಿರ್ಮಿತ ಆಕಾಶದ ಅಡಿಯಲ್ಲಿ ಕುಳಿತು ಊಟ ಮಾಡಿದೆವು.






ಒಟ್ಟಾರೆಯಾಗಿ ಇದೊಂದು ಅದ್ಭುತ ಅನುಭವವಾಗಿತ್ತು.  







Friday, February 11, 2011

ಗೆಂಟಿಂಗ್ ಹೈಲಾಂಡ್' ನಲ್ಲಿ 'ಕೇಬಲ್ ಕಾರ್' '

ಮಲೇಶ್ಯಾದ 'ಲಾಸ್ ವೆಗಾಸ್' ಎಂದು ಕರೆಯಲ್ಪಡುವ 'ಗೆಂಟಿಂಗ್ ಹೈಲಾಂಡ್' ಎಲ್ಲಾ ವಯೋಮಾನದ ಪ್ರವಾಸಿಗಳಿಗೆ ಹೇಳಿ ಮಾಡಿಸಿದಂತೆ ಇದೆ.  ಸಮುದ್ರ ಮಟ್ಟದಿಂದ ಸುಮಾರು  ೨೦೦೦ ಮೀ. ಎತ್ತರದಲ್ಲಿರುವ ಈ ಗಿರಿಧಾಮವು, ಮಲೇಶ್ಯಾದ ರಾಜಧಾನಿ ಕೌಲಾಲಂಪುರ್ ನಿಂದ  ಸುಮಾರು ೫೦ ಕಿ.ಮಿ. ದೂರದ 'ತಿತಿವಾಂಗ್ಸ್' ಬೆಟ್ಟಗಳ ಶ್ರೇಣಿಯ ನಡುವೆ ಇದೆ. 

ಕೌಲಾಲಂಪುರ್ ನಿಂದ ಸುಮಾರು ೪೫ ನಿಮಿಷಗಳ ಕಾಲ ಬಸ್ಸಿನಲ್ಲಿ ಪ್ರಯಣಿಸಿದರೆ, 'ಗೆಂಟಿಂಗ್ ಹೈಲಾಂಡ್'  ತಲಪುತ್ತೇವೆ. ಹಚ್ಚ ಹಸುರಿನ ಕಾಡಿನ ಮಧ್ಯ ಸಾಗುವ ಈ ಬಸ್ ಪ್ರಯಾಣ, 'ಮಳೆ ಕಾಡು'ಗಳ ಸಾಂದ್ರತೆಯನ್ನು ತೋರಿಸುತ್ತವೆ. ಕೆಲವೊಮ್ಮೆ ಮಾರ್ಗಮಧ್ಯದಲ್ಲಿ ವನ್ಯ ಪ್ರಾಣಿಗಳು ಕಾಣಸಿಗುತ್ತವಂತೆ. 

'ಗೆಂಟಿಂಗ್ ಹೈಲಾಂಡ್'ನಲ್ಲಿ  ಏನಿದೆ, ಏನಿಲ್ಲ ಎನ್ನುವುದು ಕಷ್ಟ. ನಾನು ಅಲ್ಲಿದ್ದ ಅರ್ಧ ದಿನದ  ಅವಧಿಯಲ್ಲಿ ನೋಡಿದ ಕೆಲವು ವಿಚಾರಗಳು ಇವು. ಸುಮಾರಾಗಿ ಎಲ್ಲಾ ಫಿಲ್ಮ್ ಸಿಟಿ, ಮನೋರಂಜನಾ ಪಾರ್ಕ್ ಗಳಲ್ಲಿ ಇರುವ  ಒಳಾಂಗಣ, ಹೊರಾಂಗಣ ಕ್ರೀಡೆಗಳು, ವಿವಿಧ ನಮೂನೆಯ ಹೊಟೆಲ್ ಗಳು, ಶಾಪಿಂಗ್ ಮಾಲ್ ಗಳು, ವಿಸ್ಮಯಗಳು,  ಪ್ರದರ್ಶನಗಳು...ಇತ್ತ್ಯಾದಿ . ಪ್ರಮುಖವಾದ ಆಕರ್ಷಣೆಯಾಗಿ, ಅದೃಷ್ಟ ಪರೀಕ್ಶೆ ಮಾಡಿಕೊಳ್ಳಲು, ಜೂಜಾಡಲು ಬೇಕಾದಷ್ಟು 'ಕಸಿನೊ' ಗಳಿವೆ.

ಈ ಎಲ್ಲಾ ಮಾನವನಿರ್ಮಿತ ವೈಭವಗಳಿಗಿಂತಲೂ ನನಗೆ ಹೆಚ್ಚ್ಚು ಖುಷಿ ಕೊಟ್ಟಿದ್ದು ಇಲ್ಲಿನ 'ಕೇಬಲ್ ಕಾರ್' ವ್ಯವಸ್ಥೆ. ಬೆಟ್ಟದ ತಪ್ಪಲಿನ 'ಗೊಹ್ ತಾಂಗ್'   ಎಂಬಲ್ಲಿಂದ ಹೈಲಾಂಡ್ ಹೊಟೆಲ್ ವರೆಗೆ ೩.೪ ಕಿ.ಮಿ. ಉದ್ದದ ಕೇಬಲ್ ಕಾರ್' ಪ್ರಯಾಣದ ವ್ಯವಸ್ಥೆಯು ದಕ್ಷಿಣ ಏಶ್ಯಾದಲ್ಲಿ ಅತಿ ದೊಡ್ಡದಂತೆ. 


ಸುಮಾರು  ೫೦ ಮಿ. ಎತ್ತರದಲ್ಲಿ 'ರೋಪ್ ವೇ'ಗೆ ಪೋಣಿಸಿದ  'ಕೇಬಲ್ ಕಾರ್' ನಲ್ಲಿ  ಪ್ರಯಾಣ ತುಂಬಾ ಇಷ್ಟವಾಯಿತು.
ಎತ್ತರದಲ್ಲಿ ನಾವು, ಕೆಳಗೆ ಪ್ರಪಾತದಲ್ಲಿ  ಹಚ್ಚ ಹಸುರಿನ ಕಾಡು. ದೂರದಲ್ಲಿ ಸಾಲು ಸಾಲಾಗಿ ಬರುತ್ತಿರುವ- ಹೋಗುತ್ತಿರುವ 'ಕೇಬಲ್ ಕಾರ್' ಗಳು.  ಆ ದಿನ ಸ್ವಲ್ಪ ಮಳೆ ಬಂದಿತ್ತು, ಮಂಜು ಕೂಡ ಮುಸುಕಿತ್ತು,.... ವಾಹ್ ಅಧ್ಭುತ ಪ್ರಾಕೃತಿಕ ಸೌಂದರ್ಯ.


ಈ 'ರೋಪ್ ವೇ'  ತುಂಡಾದರೆ, 'ಕೇಬಲ್ ಕಾರ್' ನ ಬಾಗಿಲು ಇದ್ದಕ್ಕಿದ್ದಂತೆ ತೆರೆದರೆ, ಕೆಳಗಿನ ಪ್ರಪಾತಕ್ಕೆ ಬಿದ್ದರೆ...ಇತ್ಯ್ಯಾದಿ  'ರೆ' ಗಳು ಆರಂಭದಲ್ಲಿ, ಸ್ವಲ್ಪ ಸಮಯ ಭಯ ಹುಟ್ಟಿಸಿದ್ದು ನಿಜವಾದರೂ, ಸುಮಾರು ೨೦  ನಿಮಿಷದ ಪ್ರಯಾಣ ಮುಗಿಯುವಷ್ಟರಲ್ಲಿ, 'ರೋಪ್ ವೇ' ಇನ್ನಷ್ಟು ಉದ್ದವಿರಬಾರದಿತ್ತೇ ಅನಿಸಿತು.

Tuesday, February 1, 2011

ಸಾಹಸಿಗರ ಲಂಘನ - 'ಮಕಾವ್ ಗೋಪುರ' ದಿಂದ 'ಬಂಗಿ ಜಂಪ್ '

ಮಕಾವ್ ನಲ್ಲಿ  'ಮಕಾವ್ ಗೋಪುರ'  ಮುಖ್ಯ ಆಕರ್ಷಣೆಗಳಲ್ಲೊಂದು. ಇದರ ಒಟ್ಟು  ಎತ್ತರ ನೆಲಮಟ್ಟದಿಂದ ೩೩೮ ಮೀಟರ್. ನೆಲಮಟ್ಟದಿಂದ  ೨೩೩ ಮೀ. ಎತ್ತರದಲ್ಲಿ ಒಂದು ವೀಕ್ಷಣಾ  ಮಹಡಿಯಿದೆ. ಇಲ್ಲಿ ನಿಂತರೆ ಮಕಾವ್ ಪಟ್ಟಣದ ವಿಹಂಗಮ ನೋಟವನ್ನು ಸವಿಯಬಹುದು. 

ಮಕಾವ್ ಟವರ್ ನಲ್ಲಿ, ಗುಂಡಿಗೆ ಗಟ್ಟಿಯುಳ್ಳವರಿಗಾಗಿ 'ಬಂಗಿ ಜಂಪ್' ಎಂದ ಸಾಹಸ ಕ್ರೀಡೆಯ ಅವಕಾಶವಿದೆ. 'ಬಂಗಿ ಜಂಪ್'ನ್ನು 'ಗೋಪುರದಿಂದ ಲಂಘನ' ಎಂದು  ಹೇಳಬಹುದು.  ಇದು ಎತ್ತರದಲ್ಲಿ, ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿರುವ 'ಬಂಗಿ ಜಂಪ್' ಗೋಪುರವಂತೆ. 


ಈ ಲಂಘನಕ್ಕೆ, ಸಾಕಷ್ಟು ಸುರಕ್ಷಾ ವ್ಯವಸ್ಥೆಯಿದೆ, ಆದರೂ ೨೩೩ ಮಿ. ಎತ್ತರದಿಂದ ಕೆಳಗೆ ಜಿಗಿಯುವುದನ್ನು ನೋಡುವಾಗ ಮೈ ಜುಮ್ಮೆನ್ನುತ್ತದೆ. ಬಂಗಿ ಜಂಪ್ ಮಾಡುವವರು   ಸುಮಾರು ೪-೫ ಸೆಕೆಂಡ್ಸ್ ಗಳ ಕಾಲ ಅತಿವೇಗವಾಗಿ ಗುರುತ್ವಾಕರ್ಷಣೆಗೆ ಅಭಿಮುಖವಾಗಿ ಕೆಳಗೆ 'ಬೀಳುತ್ತಾರೆ' ಹಾಗೂ ಗಾಳಿಯಲ್ಲಿ ೩-೪ ಸಲ ಜೋಲಿ ಹೊಡೆಯುತ್ತಾರೆ. ನೆಲದಿಂದ  ಸುಮಾರು ೨೦ ಮೀ ಎತ್ತರ ತಲಪುವಷ್ಟರಲ್ಲಿ,ತಮಗೆ ಕಟ್ಟಲಾದ  ಕೇಬೆಲ್ ನ ಮೂಲಕ ವಾಪಸ್  ಮೇಲಕ್ಕೆ ಬರುತ್ತಾರೆ.      

ಬಂಗಿ ಜಂಪ್ ಸಾಹಸಕ್ಕೆ  ೩೦೦೦ ಮಕಾವ್  ಡಾಲರ್ ಅಂದರೆ ಸುಮಾರು ೧೮೦೦೦ ರು. ತೆರಬೇಕು. ನಮ್ಮ ಸಹೋದ್ಯೋಗಿಗಳಲ್ಲಿ ಕೆಲವು ಉತ್ಸಾಹಿ ತರುಣರು, 'ಬಂಗಿ  ಜಂಪ್' ಮಾಡಿ ನಮ್ಮೂರ ಹಮ್ಮೀರರಾದರು.  ನನಗಂತೂ  ಬಂಗಿ ಜಂಪ್  ಮಾಡುವುದಿರಲಿ, ಬೇರೆಯವರ ಲಂಘನದ ವೀಡಿಯೋ ನೋಡಿಯೇ ತಲೆ ಸುತ್ತು ಬಂದಂತಾಯಿತು .

ಇದಲ್ಲದೆ, ವೀಕ್ಷಣಾ  ಮಹಡಿಯಲ್ಲಿ, ಗೋಪುರದ  ಸುತ್ತಲು 'ಸ್ಕೈ ವಾಕ್' ಗೆ  ಅವಕಾಶವಿದೆ. ಇದಕ್ಕೆ ೧೦೦ ಮಕಾವ್ ಡಾಲರ್ ಫೀ. ಇದು ಕೂಡ ಧೈರ್ಯವಂತರಿಗೆ ಮಾತ್ರ. ಇನ್ನೊಂದು ಕಡೆ ಒಂದು ದೊಡ್ಡ ಗಾಜಿನ  ಚಪ್ಪಡಿಯಿತ್ತು. ನಾವು ಇದರ ಮೇಲೆ ನಡೆದಾಡಬಹುದು. ನಮ್ಮ ಕಾಲಿನ  ಕೆಳಗೆ ಅಂದರೆ  ೨೩೩ ಮೀ. ಆಳದಲ್ಲಿ ರಸ್ತೆಯಲ್ಲಿ ಓಡಾಡುವ ವಾಹನಗಳೂ, ಜನರೂ ಕಾಣಿಸುತ್ತಾರೆ.

ನನ್ನ ಸುರಕ್ಷತಾ ಕಾಳಜಿ/ಅಂಜಿಕೆ ಇಲ್ಲೂ  ಜಾಗೃತಗೊಂಡಿತು. ಒಂದು ವೇಳೆ ಈ ಗಾಜು ಮುರಿದರೆ.... ನಾನು ೨೩೩ ಮೀ. ಆಳಕ್ಕೆ ಬಿದ್ದರೆ...... ಎಂದು ಹೆದರಿಸಿತು! "ಅನಾವಶ್ಯಕವಾಗಿ ನೀವು ಹೆದರುತ್ತೀರ, ನೋಡಿ ಏನೂ ಆಗಲ್ಲ"  ಎಂದು  ನಮ್ಮ ತಂಡದ ಕೆಲವರು ಈ ಗಾಜಿನ ಮೇಲೆ ಬೇಕೆಂದೇ  ಯಕ್ಷಗಾನ ಪಾತ್ರಧಾರಿಗಳಂತೆ ಕುಣಿದು, ಗಾಜು ತುಂಬಾ ಭದ್ರವಾಗಿದೆಯೆಂದು ಸಾಬೀತುಗೊಳಿಸಿದರು!! 

Sunday, January 23, 2011

ಟುಗು ನೆಗರ - ಮಲೇಶ್ಯಾದ 'ಅಮರ ಜವಾನ್' ಸ್ಮಾರಕ

'ಟುಗು ನೆಗರ ' ಅಂದರೆ  ಮಲಯ ಭಾಷೆಯಲ್ಲಿ  'ರಾಷ್ಟ್ರೀಯ ಸ್ಮಾರಕ' ಎಂದರ್ಥ.  ಮಲೇಶ್ಯಾದ  ಕೌಲಾಲಂಪುರ್ ನಲ್ಲಿರುವ  'ಟುಗು ನೆಗರ' ವು ಒಂದು ಅದ್ಬುತವಾದ ಕಂಚಿನ ಪುತ್ಥಳಿ . ಮಲೇಶ್ಯಾದ ಸ್ವಾತಂತ್ರ್ರ್ಯಕಾಗಿ  ಹಾಗೂ  ಎರಡನೆಯ ವಿಶ್ವ ಮಹಾಯುಧ್ಧದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಇದನ್ನು  ಸ್ಥಾಪಿಸಲಾಗಿದೆ.

೧೫ ಮೀಟರ್ ಎತ್ತರದ ಈ ಕಂಚಿನ ಪುತ್ಥಳಿಯಲ್ಲಿ ೭ ಮಂದಿ ಯೋಧರ ಪ್ರತಿಮೆಯಿದೆ.  ಇವು ನಾಯಕತ್ವ, ಐಕ್ಯತೆ, ಕಟ್ಟೆಚ್ಚರ, ಶಕ್ತಿ, ಧೈರ್ಯ ಹಾಗೂ ತ್ಯಾಗವನ್ನು ಸೂಚಿಸುತ್ತವೆ. ೧೯೬೬ ರಲ್ಲಿ ಶಿಲ್ಪಿ  'ಫೆಲಿಕ್ಸ್ ಡಿ ವೆಲ್ಡೊನ್' ಅವರಿಂದ ರಚಿತವಾದ ಈ ಶಿಲ್ಪವು ಬಹಳ ಮನೋಹರವಾಗಿದೆ.  ತುತ್ತ ತುದಿಯಲ್ಲಿರುವ ಯೋಧನ ಕೈಯಲ್ಲಿ  ಮಲೇಶ್ಯಾದ ಧ್ವಜವಿದೆ. ಇದನ್ನು ದಿನಾಲೂ ಬೆಳಗ್ಗೆ ಆರೋಹಣ ಮಾಡಿ, ಸಂಜೆ ಅವರೋಹಣ ಮಾಡುತ್ತಾರಂತೆ.    

'ಟುಗು ನೆಗರ'  ಪ್ರತಿಮೆಯನ್ನು, ಪ್ರಶಾಂತವಾದ ವಾತಾವರಣದಲ್ಲಿ, ಒಂದು ಕೊಳದ ಮಧ್ಯೆ ಸ್ಥಾಪಿಸಲಾಗಿದೆ. ಅಲ್ಲಿಯ ಫಲಕಗಳಗಲ್ಲಿ   ಹುತಾತ್ಮರ ಪಟ್ಟಿಯಲ್ಲಿ  'ಸಿಂಗ್' ಎಂದು ಕೊನೆಗೊಳ್ಳುವ ಪಂಜಾಬಿ ಯೋಧರ ಹೆಸರೂ ಇದ್ದುವು. ಬ್ರಿಟಿಷರು ಭಾರತದ ಸೇನೆಯನ್ನು ಅಲ್ಲಿ ಹೋರಾಡಲು ಆಯೋಜಿಸಿದ್ದರ ಫಲವಿದು. 




ನನಗೆ ಇಲ್ಲಿ ಇಷ್ಟವಾದ ವಿಚಾರವೇನೆಂದರೆ ಸೆಕ್ಯುರಿಟಿ ಹೆಸರಿನಲ್ಲಿ ಇಲ್ಲಿ ನಮ್ಮನ್ನು ಅಡಿಗಡಿಗೆ ತಡೆಯಲು ಯಾರೂ ಇರಲಿಲ್ಲ. ಫೋಟೊ ತೆಗೆಯಲು ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಕೆಲವು ಪ್ರವಾಸಿ ತಾಣಗಳಲ್ಲಿರುವಂತೆ ಕ್ಯಾಮೆರಾ ಚಾರ್ಜ್ ಕೊಡಬೇಕಾಗಿಲ್ಲ,  'ಇಲ್ಲಿ ಫೊಟೊ ತೆಗಯಬಾರದು' ಎಂಬ ಎಚ್ಚರಿಕೆಯ ಬರಹವಂತೂ ಇಲ್ಲವೇ ಇಲ್ಲ, ಬಲೂನ್ ಮಾರುವವರಾಗಲಿ, ವಿವಿಧ ತಿಂಡಿ- ತಿನಿಸು ಮಾರುವವರಾಗಲೀ , ಭಿಕ್ಷೆ ಬೇಡುವವರಾಗಲೀ - ಸುತ್ತಮುತ್ತ ಕಾಣಿಸಲೇ ಇಲ್ಲ. ಹಾಗಾಗಿ, ಈ  ಪರಿಸರವು ಶಾಂತವಾಗಿ, ಸ್ವಚ್ಛವಾಗಿ  ಇದೆ. 

ದೇಶ ಯಾವುದೇ ಇರಲಿ, ಅದರ ರಕ್ಷಣೆಗೆ  ಹೋರಾಡಿದವರೆಲ್ಲರೂ  ಚಿರಸ್ಮರಣೀಯರು. ಈ  ಸ್ಮಾರಕದ ಭವ್ಯತೆ ಹಾಗು ಸುತ್ತಲಿನ ಪ್ರಶಾಂತತೆ ಯನ್ನು  ನೋಡಿದಾಗ ಗೌರವ ತಾನಾಗಿ  ಉಕ್ಕುತ್ತದೆ. ಅಯಾಚಿತವಾಗಿ, ನನಗೆ ದೆಹಲಿಯಲ್ಲಿರುವ 'ಅಮರ ಜವಾನ್ ಜ್ಯೋತಿ' ನೆನಪಾಯಿತು.ನಮ್ಮ 'ಅಮರ ಜವಾನ್' ರಿಗೂ  ಇಂತಹುದೇ ಸ್ವಚ್ಚ, ಶಾಂತ ಪರಿಸರದಲ್ಲಿ ಸ್ಮಾರಕ ಇರಬೇಕಿತ್ತಲ್ಲವೆ? 

ದೆಹಲಿಯಲ್ಲಿ, 'ಅಮರ ಜವಾನ್ ' ಜ್ಯೋತಿಯನ್ನು ಅಚ್ಚುಕಟ್ಟಾಗಿ ಕಾಯುತ್ತಾರಾದರೂ, ಸುತ್ತಲಿನ ಪರಿಸರ ಒಂದು ಸಂತೆ.  ವಿವಿಧ ವಸ್ತುಗಳನ್ನು  ಮಾರುವವರ- ಕೊಳ್ಳುವವರ ಗಲಾಟೆಯೊಂದಿಗೆ, ಕಿಕ್ಕಿರಿದ ಜಾಗದಲ್ಲೂ  ಫೋಟೊ ಕ್ಲಿಕ್ಕಿಸಿ ಕಾಸು ಮಾಡುವವರ ಕಿರಿಕಿರಿಯಲ್ಲಿ  'ಅಮರ ಜವಾನ  ಜ್ಯೋತಿ' ಮಂಕಾಗಿ ಕಾಣಿಸುತ್ತದೆ!. ಇಲ್ಲಿಂದ ಒಮ್ಮೆ ಹೊರಟರೆ ಸಾಕು ಎನಿಸುತ್ತದೆ!

Thursday, January 13, 2011

'ಭಟು ಕೇವ್ಸ್', ಶಿಲೆಯಲ್ಲವೀ ಗುಹೆಯು..

ಮಲೇಶ್ಯಾದ ಕೌಲಾಲಂಪುರ್ ನಿಂದ ಸುಮಾರು ೧೩ ಕಿಲೋ ಮೀಟರ್ ದೂರದದಲ್ಲಿದೆ 'ಭಟು ಕೇವ್ಸ್' ಎಂದು ಕರೆಯಲ್ಪಡುವ ಅದ್ಭುತ ಪ್ರಾಕೃತಿಕ ವಿಸ್ಮಯ. ಇದು 'ಲೈಮ್ ಸ್ಟೋನ್' ನಿಂದ (ಸುಣ್ಣದ  ಕಲ್ಲು) ರಚನೆಯಾದ ಗುಹೆಯಾಗಿದ್ದು,ಸುಮಾರು  ೪೦೦ ಮಿಲಿಯನ್ ವರುಷಗಳ ಹಿಂದೆ ರೂಪುಗೊಂಡಿತೆಂದು ನಂಬಿಕೆ.

ನಮ್ಮ ಗೈಡ್ ವಿವರಿಸಿದ ಪ್ರಕಾರ, ತುಂಬಾ ಹಿಂದೆಯೇ ಇದರ ಅಸ್ತಿತ್ವವಿದ್ದರೂ, ಮಲೇಶ್ಯಾದಲ್ಲಿ ಬ್ರಿಟಿಷರ ಅಧಿಕಾರವಾವಧಿಯಲ್ಲಿ (೧೮೭೮)ಈ ಗುಹೆ ವಿಶೇಷ ಪ್ರಾಮುಖ್ಯತೆ ಗಳಿಸಿತು.  ಆ ಕಾಲದಲ್ಲಿ, ಕೆಲವು ಭಾರತೀಯ ಮೂಲದ ತಮಿಳು ವರ್ತಕರು, ಮಲೇಶ್ಯಾದ ಅರ್ಥಿಕ ವ್ಯವಸ್ಥೆಯಲ್ಲಿ  ಪ್ರಮುಖ ಪಾತ್ರ ವಹಿಸಿದ್ದರು. ತಂಬುಸಾಮಿ ಪಿಳ್ಳೈ ಅವರಲ್ಲಿ ಪ್ರಮುಖರಾಗಿದ್ದರು. ಅವರ ಶ್ರಮದ ಫಲವಾಗಿ, 'ಭಟು ಕೇವ್ಸ್',ನಲ್ಲಿ  ಕಾರ್ತಿಕೇಯನ  ದೇವಸ್ಥಾನ ಸ್ಥಾಪನೆಯಾಯಿತು. 

ಅಂದಿನಿಂದ  ಇಂದಿನ ವರೆಗೂ, 'ಭಟು ಕೇವ್ಸ್' ನಲ್ಲಿ, ವರುಷಕ್ಕೆ ಒಂದು ಬಾರಿ ಜನವರಿ ಅಥವಾ ಫೆಬ್ರವರಿ  ತಿಂಗಳಲ್ಲಿ 'ಥೈಪಸಮ್' ಎಂದು ಕರೆಯಲ್ಪಡುವ ಉತ್ಸವವನ್ನು ಬಹಳ ವಿಶಿಷ್ಟವಾಗಿ ನಡೆಸಲಾಗುತ್ತದೆ ಹಾಗು ಇದು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.  

'ಭಟು ಕೇವ್ಸ್' ನ ಪಕ್ಕ ನಮ್ಮ ಬಸ್ ನಿಲ್ಲುತ್ತಿದ್ದಂತೆ, ನಮ್ಮನ್ನು ಅಕರ್ಷಿಸಿದ್ದು   ಅಲ್ಲಿ ಸ್ವಚ್ಚಂದವಾಗಿದ್ದ  ಹಿಂಡು-ಹಿಂಡು ಪಾರಿವಾಳಗಳು.





 ೨೦೦೬ ರಲ್ಲಿ, ಸುಮಾರು ೧೪೦ ಅಡಿ ಎತ್ತರದ ಮುರುಗನ್ ದೇವರ ಮೂರ್ತಿಯನ್ನು, ಗುಹೆಯ ಬುಡದಲ್ಲಿ ಸ್ಥಾಪಿಸಿಲಾಗಿದೆ. ಇದು ಪ್ರಪಂಚದಲ್ಲಿ ಅತಿ ದೊಡ್ಡದಾದ  ಸುಬ್ರಹ್ಮಣ್ಯ ದೇವರ ಪ್ರತಿಮೆಯಂತೆ.




ಗುಹೆಯು ರಸ್ತೆಯ ಮಟ್ಟದಿಂದ ಸುಮಾರು ೪೦೦ ಅಡಿ ಎತ್ತರದಲ್ಲಿದೆ. ೨೭೨ ಮೆಟ್ಟಲುಗಳನ್ನು ಏರಿ,  ಗುಹೆಯ ಒಳಗೆ ಪ್ರವೇಶ ಮಾಡಿದರೆ, ಸುಮಾರು ೧೦೦ ಅಡಿ  ಎತ್ತರದ ವಿಶಾಲವಾದ ಗುಹೆ ಗೋಚರಿಸುತ್ತದೆ. ಗುಹೆಯ ಒಳಗೆ, ಕೆಲವು ದೇವರ ಮೂರ್ತಿಗಳಿವೆ. ತೀರ ಶಾಂತವಾದ ಹಾಗೂ ತಂಪಾದ ಪರಿಸರ.



ಗುಹೆಯ ಅಂತ್ಯದಲ್ಲಿ ಮಾಡು ತೆರೆದಿದ್ದು, ಅಕಾಶ ಕಾಣಿಸುತ್ತದೆ ಹಾಗು ಗುಹೆಯ ಒಳಗೆ ಬೆಳಕು ಬೀಳುತ್ತದೆ.



ಒಟ್ಟಿನಲ್ಲಿ  ಅದ್ಭುತವಾದ  ದೈವಿಕ ಅನುಭವ. ಅಪ್ಪಟ ವಾಸ್ತವವಾದಿಯಾದ, ಸುಮಾರಾಗಿ ನಾಸ್ತಿಕಳಾದ ನನಗೇ ಈ ಅನುಭವ ಉಂಟಾಗಬೇಕಾದರೆ, ಬಹುಶ:, ಹಿಂದಿನ ಕಾಲದಲ್ಲಿ ಋಷಿಗಳು ಇಂತಹ ಜಾಗಗಳಲ್ಲಿ ತಪಸ್ಸು  ಮಾಡುತ್ತಿದ್ದರಬಹುದು ಅನಿಸಿತು.

ನಿಜವಾಗಿ ಹೇಳಬೇಕೆಂದರೆ, ತೀರ ಕಡಿದಾಗಿದ್ದ ೨೭೨ ಮೆಟ್ಟಲುಗಳನ್ನು ಹತ್ತುವಷ್ಟರಲ್ಲಿ ನನಗೆ ಸಾಕು-ಸಾಕಾಗಿತ್ತು. ಎರಡು  ವಾರಗಳ 'ವಾಕಿಂಗ್'  ಒಂದೇ ದಿನ ಮಾಡಿದಂತಾಗಿತ್ತು.  ಇದನ್ನೇಕೆ ಹೇಳುತ್ತೇನೆಂದರೆ, 'ಥೈಪಸಮ್' ಹಬ್ಬದ  ಸಂದರ್ಭದಲ್ಲಿ ಸಹಸ್ರಾರು ಭಕ್ತರು ತಮ್ಮ ಮೈಗೆ ನಿಂಬೆಹಣ್ಣು,  ತೆಂಗಿನಕಾಯಿ,  ಇತ್ಯ್ಯಾದಿಗಳನ್ನು ಕೊಕ್ಕೆಯಿಂದ ತಮ್ಮ ಚರ್ಮಕ್ಕೆ ಚುಚ್ಚಿಕೊಂಡು, ಕಾವಡಿಯನ್ನು ಹೊತ್ತುಕೊಂಡು, ಕಲಶವನ್ನು ಹಿಡಿದುಕೊಂಡು......ಇತ್ಯಾದಿ   ಹರಕೆಗಳನ್ನು ಸಲ್ಲಿಸುತ್ತಾ, ಮೆಟ್ಟಲುಗಳನ್ನು ಏರಿ ದೇವರ ದರುಶನ ಪಡೆಯುತ್ತಾರಂತೆ.  

ಅವರ ಭಕ್ತಿ, ಶಕ್ತಿ, ಛಲ, ಸಹನೆಗೆ  ಏನು ಹೇಳಬೇಕು?  ಶ್ರೀ ಮುರುಗ ಹರೋಹರ! ಶ್ರೀ ಮುರುಗ ಹರೋಹರ!

Sunday, January 9, 2011

ಮಲೇಶ್ಯಾದಲ್ಲಿ ತಿಂಡಿ ತಿನಿಸು..ದಿಯಾ ಖಾಯೆ ಹಮ್ ಲೋಗ್..

ಇತ್ತೀಚೆಗೆ ಕಾನ್ಫೆರೆನ್ಸ್  ಪ್ರಯುಕ್ತ ಮೂರು ದಿನಗಳ ಕಾಲ  ಮಲೇಶ್ಯಾಕ್ಕೆ ಹೋಗಿದ್ದೆ.
ಅಪ್ಪಟ ಸಸ್ಯಾಹಾರಿಯಾದ ನನಗೆ ಪಂಚತಾರಾ ಹೋಟೆಲ್ ಗಳಲ್ಲಿ ಊಟಕ್ಕಿಂತ ನೋಟವೇ ಚೆನ್ನ. ನನಗೆ ತಕ್ಕುದಾದ ತಿನಿಸುಗಳನ್ನು ಆಯ್ದುಕೊಳ್ಳಲೆಂದು, ಬಫೆಗೆ ಒಂದು ಸುತ್ತು ಹಾಕಿದೆ. ಚೈನೀಸ್, ಮಲೇಶಿಯನ್ ಹಾಗು  ಇಂಡಿಯನ್ ಎಂದು ಹೆಸರಿಡಲಾಗಿದ್ದ  ತರಾವರಿ ಸಸ್ಯಾಹಾರಿ -ಮಾಂಸಾಹಾರಿ  ಭಕ್ಷ್ಯ-ಭೋಜ್ಯಗಳು ಹೀಗಿದ್ದುವು:
   
'ಎಗ್ ಟಾರ‍ಟ್' 

ದೀಪಾವಳಿ ಹಬ್ಬ ನೆನಪಾಯಿತೆ? 'ದಿಯಾ ಜಲೇ  ಸಾರೇ ರಾತ್ ' ಹಾಡು ಗುನುಗಿದಿರಾ ? ಇದು 'ಎಗ್ ಟಾರ್‍ಟ್' ಎಂಬ ಹೆಸರಿನ ಚೈನೀಸ್ ಸಿಹಿ ತಿಂಡಿ. ಗೋದಿಹಿಟ್ಟು ಹಾಗೂ ಮೊಟ್ಟೆಯಿಂದ ಕೂಡಿದ ಈ ತಿಂಡಿ ಕೇಕ್ ನ ರುಚಿ ಹೊಂದಿದೆ. ಇದು ಚೀನಾದ ಸಾಂಪ್ರದಾಯಿಕ ತಿನಿಸಂತೆ.


ಕೆಂಪಾಗಿ ಕಾಣುವ ಇದು 'ಡ್ರಾಗನ್ ಫ್ರುಟ್'. ಬಿಳಿ ಬಣ್ಣದ ತಿರುಳಿನ ಜತೆಗೆ ಕಪ್ಪು ಬೀಜಗಳನ್ನು ಹೊಂದಿದ್ದು, ಬಾಳೆ ಹಣ್ಣಿನ ಮೇಲೆ 'ಪೆಪ್ಪರ್ ಪುಡಿ' ಚಿಮುಕಿಸಿದಂತೆ  ಕಾಣುತ್ತದೆ. ಸ್ವಲ್ಪ ಹುಳಿ ಮಿಶ್ರಿತ ಸಿಹಿ ರುಚಿ ಹೊಂದಿದೆ.

                                                                 
ಆಜ್ಜಿಯ ಎಲೆ-ಅಡಿಕೆ ಕುಟ್ಟಣ ನೆನಪಾಯಿತೆ? ವಿವಿಧ ಮಾಂಸಾಹಾರ ಭಕ್ಷ್ಯಗಳಿವು..           





'ಸಾಗೊ ಡೆಸರ್ಟ್', 


ಇದು ನಮ್ಮ ಸಬ್ಬಕ್ಕಿ ಪಾಯಸದ ಇನ್ನೊಂದು ರೂಪ. ಸಬ್ಬಕ್ಕಿ ಮತ್ತು ಸ್ವಲ್ಪ ಹೆಸರುಕಾಳುಗಳನ್ನು ಬೇಯಿಸಿ, ಬಾಳೆಹಣ್ಣು, ಹಾಲು, ಸಕ್ಕರೆ  ಸೇರಿಸಿ ಪಾಯಸ ಮಾಡಿ, ಸ್ವಲ್ಪ ಕೇಸರಿ ದಳ ಉದುರಿಸಿ,  ಫ್ರಿಜ್ಜಲ್ಲಿ ಇಟ್ಟು ತಂಪು ಮಾಡಿದರೆ, ಇದೇ ರುಚಿ ಬರಬಹುದು ಅನಿಸಿತು. ಒಟ್ಟಿನಲ್ಲಿ ಈ 'ಕಲರ್ ಫುಲ್ ಪಾಯಸ' ಚೆನ್ನಾಗಿತ್ತು.

ಸಲಾಡ್ ಗ್ಯಾಲರಿ..