Total Pageviews

Sunday, October 14, 2012

ಹದಿನಾರು ಮುಖದ ಚಾವಡಿ


ಕಾಲಚಕ್ರವನ್ನು ಸುಮಾರು ೩೫೦ ವರ್ಷ ಹಿಂತಿರುಗಿಸಿ ...

ಹೆಡತಲೆ ಎಂಬೊಂದು ಊರು....ಊರಿಗೊಬ್ಬ ರಾಜ ಭೀಮಣ್ಣ ನಾಯಕ...ಆತನಿಗೊಬ್ಬಳು ರಾಣಿ...ಅವರಿಗೆ ೧೬ ಹೆಣ್ಣು ಮಕ್ಕಳು. ಎಲ್ಲಾ ಹೆಣ್ಣು ಮಕ್ಕಳನ್ನು ಯುಕ್ತ ವಯಸ್ಸಿಗೆ ಮದುವೆ ಮಾಡಿಕೊಟ್ಟು, ಮಗಳಂದಿರು ಹಾಗೂ ಅಳಿಯಂದಿರೊಂದಿಗೆ ಆಗಾಗ್ಗೆ ಕುಶಲೋಪರಿ ನಡೆಸುತ್ತಾ  ಮನೆಮಂದಿಯೆಲ್ಲ ಒಟ್ಟಾಗಿ ಸಂಭ್ರಮಿಸುವ ಆಸೆ ರಾಜನಿಗೆ. ಆಗ ಎದುರಾದದ್ದು ಒಂದು ಸಮಸ್ಯೆ. ರಾಜನಿಗೆ ತನ್ನ ಯಾವ ಮಗಳ ಗಂಡ ಯಾರು ಎಂಬ ಗೊಂದಲವಾಗುತ್ತಿತ್ತಂತೆ. ಮೇಲಾಗಿ, ಆಗಿನ ಕಾಲದ ಪದ್ಧತಿಯಂತೆ, ಅತ್ತೆಯಾದವಳು ತನ್ನ ಅಳಿಯಂದಿರನ್ನು ಮುಖವನ್ನು ನೋಡುವಂತಿಲ್ಲ.

ರಾಜ-ರಾಣಿ, ಎಲ್ಲಾ ಮಗಳಂದಿರು ಮತ್ತು ಅಳಿಯಂದಿರು  ಅಂದರೆ ಒಟ್ಟು ೧+೧+೧೬+೧೬ = ೩೪ ಜನ  ಏಕ ಕಾಲದಲ್ಲಿ ಕೂರುವ ಆಸನ ವ್ಯವಸ್ಥೆಯಿರಬೇಕು,ರಾಜನಿಗೆ ಎಲ್ಲರೂ ಕಾಣಿಸಬೇಕು, ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸಬೇಕು. ಪ್ರತೀ ಹೆಣ್ಣುಮಗಳೂ ತನ್ನ  ಗಂಡನ ಜತೆ ಅನುಕ್ರಮವಾಗಿ ಕೂರಬೇಕು. ಇಂತಹ ಚಾವಡಿಯನ್ನು ವಿನ್ಯಾಸಗೊಳಿಸಬೇಕೆಂದು ರಾಜನು ಸೂಚಿಸಿದಾಗ, ಅಂದಿನ ಹೊಯ್ಸಳ ವಾಸ್ತುಶಿಲ್ಪಿಗಳು ರಚಿಸಿದ  ಅದ್ಭುತ ಸಭಾಂಗಣವೇ 'ಹದಿನಾರು ಮುಖದ ಚಾವಡಿ'. ಈ ಚಾವಡಿಗೆ, ನಾಲ್ಕೂ ಮೂಲೆಗಳಿದ್ದು, ೧೬ ಕಂಭಗಳಿವೆ. ಪ್ರತಿ ಕಂಭಕ್ಕೆ ತಾಗಿಕೊಂಡಂತೆ ಇಬ್ಬರು ಕೂರುವಂತ ಕಲ್ಲಿನ ಸೋಫಾ  ಇದೆ. ಚಾವಡಿಯ ಮಧ್ಯ ಭಾಗದಲ್ಲಿಯೂ ವಿಶೇಷ ಕೆತ್ತನೆಯುಳ್ಳ ಕಂಭಗಳಿವೆ.

ಅಲ್ಲಿನ ಅರ್ಚಕರು ನಮಗೆ ವಿವರಿಸಿದಂತೆ, ರಾಜ ಕೂರುತ್ತಿದ್ದ ಜಾಗದಿಂದ ನೋಡಿದರೆ  ಇಡೀ ಸಭಾಂಗಣ ಕಾಣಿಸುತ್ತದೆ. ರಾಣಿ ಕೂರುತ್ತಿದ್ದ ಜಾಗದಿಂದ ನೋಡಿದರೆ, ಪ್ರತೀ ಸೋಫಾದ   ಅರ್ಧ ಭಾಗ ಕಾಣಿಸುತ್ತದೆ. ಅಂದರೆ ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸುತ್ತಿದ್ದರು ಎಂದಾಯಿತು. ಎಂಥಹಾ ಸೃಜನಶೀಲ ವಾಸ್ತು ವಿನ್ಯಾಸ!

'





ಹದಿನಾರು ಮುಖದ ಚಾವಡಿ' ಇರುವುದು ಹೆಡತಲೆ ಲಕ್ಷ್ಮೀಕಾಂತ ದೇವಾಲಯದಲ್ಲಿ. ಹಿಂದೆ ಇದು ಕೌಂಡಿನ್ಯ ಋಷಿಗಳು ತಪಸ್ಸನ್ನಾಚರಿಸುತ್ತಿದ್ದರಂತೆ. ಅಸುರನೊಬ್ಬ ಅವರಿಗೆ ಕಿರುಕುಳ ಕೊಡುತ್ತಿದ್ದ ಕಾರಣ ಅವರು ಲಕ್ಷ್ಮೀಕಾಂತ ಸ್ವಾಮಿಯ ಮೊರೆ ಹೊಕ್ಕರಂತೆ. ಅಸುರ ನಿಗ್ರಹವಾಗಿ ಆತನ ತಲೆ ಎಡಭಾಗಕ್ಕೆ ಬಿತ್ತಂತೆ. ಹೀಗಾಗಿ ಊರಿಗೆ ಎಡತಲೆ ಎಂಬ ಹೆಸರಾಯಿತು, ಕಾಲಾಂತರದಲ್ಲಿ ಅದು  'ಹೆಡತಲೆ' ಆಯಿತು. ಅಸುರನ ಹೆಮ್ಮರದಂತಹ ಕಾಲು ಬಿದ್ದ ಜಾಗ 'ಹೆಮ್ಮರಗಾಲ'ವಾಯಿತು. ಹೆಮ್ಮರಗಾಲ ಎಂಬ ಊರು ಹೆಡತಲೆಯಿಂದ ೧-೨ ಕಿ.ಮಿ ದೂರದಲ್ಲಿದೆ. ಅಲ್ಲಿಯೂ ಕೌಂಡಿನ್ಯರಿಂದ ಸ್ಥಾಪಿತವಾದ ಸಂತಾನ ಗೋಪಾಲಸ್ವಾಮಿಯ ದೇವಾಲಯವಿದೆ. ಹೀಗಿದೆ ಸ್ಥಳಪುರಾಣ ಅಥವಾ ದಂತಕಥೆ.

ಇಲ್ಲಿ ಅಚ್ಚುಕಟ್ಟಾದ, ೩ ಗರ್ಭಗುಡಿಯನ್ನು ಹೊಂದಿದ ದೇವಾಲಯವಿದೆ. ಹಾಗಾಗಿ ಇದಕ್ಕೆ ತ್ರಿಕುಟಾಚಲವೆಂಬ ಹೆಸರೂ ಇದೆ. ಇಲ್ಲಿನ  ಆಂಡಾಳ್ ಅಮ್ಮನವರ ವಿಗ್ರಹದ ಶಿಲ್ಪ ತುಂಬಾ ಸೊಗಸಾಗಿದೆ. ಅರ್ಚಕರು ವಿವರಿಸುವಂತೆ,ದೀಪ ಆರತಿಯ ತಟ್ಟೆಯನ್ನು ಅಮ್ಮನವರ ಹಣೆಯಿಂದ ಕೆಳಗೆ ನಿಧಾನವಾಗಿ ಸರಿಸಿದಾಗ, ಮೂರ್ತಿಯ ಕಣ್ಣುಗಳು ತುಂಬಾ ಕಾಂತಿಯುತವಾಗಿ, ನೈಜವಾಗಿ   ಕಾಣಿಸುತ್ತವೆ.  

ಹೊಯ್ಸಳರ ಕಾಲದಲ್ಲಿ ಅದೆಷ್ಟು ಚಿಕ್ಕ-ದೊಡ್ಡ ದೇವಾಲಯಗಳನ್ನು ಕಟ್ಟಿದ್ದರೋ? ಪ್ರಖ್ಯಾತವಾದ ಕೆಲವು ದೇವಸ್ಥಾನಗಳನ್ನು  ಬಿಟ್ಟರೆ, ಇಂಥಹ ವಿಶಿಷ್ಟ ದೇವಾಲಯಗಳ ಬಗ್ಗೆ ಲಭ್ಯವಿರುವ  ಮಾಹಿತಿ ಕಡಿಮೆ.

ಹೆಡತಲೆಗೆ ಹೋಗುವ ದಾರಿ:


ಮೈಸೂರಿನಿಂದ ಹೊರಟು ನಂಜನಗೂಡು ದಾರಿಯಾಗಿ, ಚಾಮರಾಜನಗರದ ಕಡೆಗೆ ಬಸ್ ಅಥವಾ ರೈಲ್ ನಲ್ಲಿ ಪ್ರಯಾಣಿಸಿ, ಬದನವಾಳು ಎಂಬಲ್ಲಿ ಇಳಿಯಬೇಕು.  ಅಲ್ಲಿಂದ ಸುಮಾರು ೫ ಕಿ.ಮಿ. ದೂರದ ಹಳ್ಳಿ ರಸ್ತೆಯಲ್ಲಿ ಸಾಗಬೇಕು.  ಕಾರಿನಲ್ಲೂ ಹೋಗಬಹುದು.

Saturday, October 6, 2012

ದಂಡ ದರ್ಶನಂ ಪಾಪ ನಾಶನಂ,ದಂಡ ಸ್ಪರ್ಶನಂ ಪುಣ್ಯ ವರ್ಧನಂ



ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿ, ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯವಿದೆ. ಇಲ್ಲಿ ಹಿಂದೆ ಕೌಂಡಿನ್ಯ ಮಹರ್ಷಿಯು ತಪಸ್ಸು ಮಾಡುತ್ತಿದ್ದರಂತೆ.

ಈ ದೇವಾಲಯದ ಚರಿತ್ರೆ ಹೀಗಿದೆ. ಬಹಳ ಹಿಂದೆ ಅಲ್ಲಿ ರಾಜ್ಯವಾಳುತ್ತಿದ್ದ  ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ  ಸ್ವಪ್ನದಲ್ಲಿ ಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ ಚಕ್ರ ಮುರಿದು ಬೀಳುವುದೆಂದೂ, ಆ ಸ್ಥಳದಲ್ಲಿ  ಅಗೆಸಿದರೆ ವೇಣುಗೋಪಾಲಸ್ವಾಮಿಯ ವಿಗ್ರಹ ಲಭಿಸುವುದೆಂದೂ, ಅದನ್ನು ಒಯ್ದು ಕೌಂಡಿನ್ಯ ಋಷಿಗಳಿಂದ  ಸ್ಥಾಪಿಸಿ ಪೂಜಿಸೆಂದೂ ಅನುಗ್ರಹವಾಯಿತಂತೆ.  ಕನಸಿನಂತೆಯೇ ಘಟನೆಗಳು ನಡೆದು, ಈಗಿನ ಹೆಮ್ಮರಗಾಲದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯ ರೂಪುಗೊಂಡಿತು. ಕಾಲಾನಂತರದಲ್ಲಿ ಹೊಯ್ಸಳರ ಪಾಳೆಯಗಾರರ ಆಳ್ವಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿಗೊಂಡಿತು. ಈಗಿನ  ದೇವಸ್ಥಾನವನ್ನು ೧೩ ನೆಯ ಶತಮಾನದಲ್ಲಿ ಕಟ್ಟಲಾಯಿತಂತೆ.

ಕೊಳಲನ್ನೂದುವ ವೇಣುಗೋಪಾಲನ ವಿಗ್ರಹ ತುಂಬಾ ಸುಂದರವಾಗಿದೆ. ಇವನ ಕುರಿತು ಹಬ್ಬಿರುವ ದಂತಕತೆ ಇನ್ನೂ ಸೊಗಸಾಗಿದೆ. ಬಾಲಗೋಪಾಲನಾಗಿ ಕಂಗೊಳಿಸುವ ವೇಣುಗೋಪಾಲನಿಗೆ ಸಂತಾನಗೋಪಾಲ ಎಂಬ ಹೆಸರೂ ಇದೆ.  ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತಾರೆಂಬ ನಂಬಿಕೆ. ಅದಕ್ಕೆ ಸಾಕ್ಷಿಯಾಗಿ ದೇವರಿಗೆ ಅರ್ಪಿಸಿದ ಪುಟ್ಟ ಬೆಳ್ಳಿಯ ತೊಟ್ಟಿಲುಗಳು ಅಲ್ಲಿ ತೂಗಾಡುತ್ತಿದ್ದುವು.

ಇದಲ್ಲದೆ ಈ ಸ್ವಾಮಿಗೆ 'ಹುಚ್ಚು ಗೋಪಾಲ' ಎಂಬ ಹೆಸರೂ ಇದೆ! ಇನ್ನೊಂದು ಕಥೆಯ ಪ್ರಕಾರ ಅಲ್ಲಿ ಆಳಿದ ಚೋಳ ರಾಜನೊಬ್ಬನಿಗೆ ೧೨ ಜನ ಹೆಣ್ಣು ಮಕ್ಕಳಿದ್ದರಂತೆ. ಪುತ್ರ್ರಾಕಾಂಕ್ಷಿಯಾಗಿ  ವೇಣುಗೋಪಾಲನನ್ನು  ಭಕ್ತಿಯಿಂದ ಪೂಜಿಸಿದರೂ ಆತನ ೧೩ನೆಯ ಮಗು ಹೆಣ್ಣಾಗಿ ಹುಟ್ಟಿತಂತೆ. ನಿರಾಶೆಯಿಂದ ರಾಜ-ರಾಣಿ ಇಬ್ಬರೂ ದೇವಾಲಯದಲ್ಲಿಯೇ  ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿ, ಕೊನೆಯ ಬಾರಿಗೆ ನವಜಾತ ಶಿಶುವನ್ನು ನೋಡಿ ಸಾಯೋಣ ಎಂದು ಮಗುವನ್ನು ನೋಡಿದಾಗ ಅದು ಗಂಡು ಮಗುವಾಗಿತ್ತಂತೆ. ಭಕ್ತಿ-ಆಶ್ಚರ್ಯ- ಸಂತೋಷಾತಿರೇಕದಿಂದ ಆತ ದೇವರನ್ನು 'ಹುಚ್ಚು ಗೋಪಾಲ'ನೆಂದು ಕರೆದು ಪೂಜಿಸಿದಂತೆ. ಹೀಗೆ ಬಹು ನಾಮಾಂಕಿತ ಈ ಗೋಪಾಲ.


ಈ ದೇವಾಲಯದ ಇನ್ನೊಂದು ವಿಶೇಷವೇನೆಂದರೆ 'ಕೌಂಡಿನ್ಯ ಮಹರ್ಷಿಯ  ದಂಡ'    . ನಂಬಿಕೆಯ ಪ್ರಕಾರ ಕೌಡಿನ್ಯರು ಸದ್ಗತಿ ಹೊಂದುವ ಸಮಯದಲ್ಲಿ ತನ್ನ ತಪಶ್ಶಕ್ತಿಯನ್ನು  ದಂಡಕ್ಕೆ ವರ್ಗಾಯಿಸಿ, ಭಕ್ತರ ಸಕಲ ಕಷ್ಟಗಳನ್ನೂ ಪರಿಹರಿಸಿದರಂತೆ. ಹಾಗಾಗಿ ಈ ದೇವಸ್ಥಾನದಲ್ಲಿ 'ದಂಡ ದರ್ಶನಂ ಪಾಪ ನಾಶನಂ, ದಂಡ ಸ್ಪರ್ಶನಂ ಪುಣ್ಯ ವರ್ಧನಂ'. ಹೂವಿನಿಂದ ಅಲಂಕೃತವಾದ ದಂಡವನ್ನು ಹಿಡಿದ ಅರ್ಚಕರು ಹಿಡಿದಿರುತಾರೆ. ಸಾಲಾಗಿ ಬರುವ ಭಕ್ತರು ಶಿರವೊಡ್ಡಿ ದಂಡವನ್ನು ಮೆತ್ತಗೆ ಸ್ಪರ್ಶಿಸುತ್ತಾರೆ. ಶನಿವಾರ ಹಾಗೂ ಭಾನುವಾರ  ಮಾತ್ರ ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯ ವರೆಗೆ 'ದಂಡ ಸ್ಪರ್ಶನ' ಮಾಡಲು ಅವಕಾಶವಿರುತ್ತದೆ. ಉಳಿದ ದಿನಗಳಲ್ಲಿ ಈ ಕಾರ್ಯಕ್ರಮವಿರುವುದಿಲ್ಲ.





ಅಲ್ಲಿಗೆ ಹೋಗುವ ವರೆಗೆ  ಈ ವಿಚಾರಗಳಾವುವೂ ನಮಗೆ ಗೊತ್ತಿರಲಿಲ್ಲ. ಆದರೂ  ಭಾನುವಾರವಾಗಿದ್ದರಿಂದ ದಂಡಸ್ಪರ್ಶನ ಸಾಧ್ಯವಾಯಿತು.  ಹುಣ್ಣಿಮೆಯ ದಿನವಾಗಿದ್ದರಿಂದ ವಿಶೇಷ ಕಾರ್ಯಕ್ರಮವಾಗಿ ಸುದರ್ಶನ ಯಾಗ ನಡೆಯುತ್ತಿತ್ತು. ಪ್ರಸಾದ ಅನ್ನ ಸಂತರ್ಪಣೆಯಲ್ಲೂ ಪಾಲ್ಗೊಂಡೆವು. ರುಚಿಯಾದ ಸಿಹಿ ಪೊಂಗಲ್, ಖಾರ ಪೊಂಗಲ್ ಸವಿದು ಮರಳಿದೆವು.

ಹೆಮ್ಮರಗಾಲಕ್ಕೆ ಹೋಗುವ ದಾರಿ : ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ   ಹೊರಟು ಬದನವಾಳು ಎಂಬಲ್ಲಿ ಇಳಿಯಬೇಕು. ಅಲ್ಲಿಂದ ಹೆಮ್ಮರಗಾಲಕ್ಕೆ  ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಆದರೆ ದೇವಸ್ಥಾನದ ವರೆಗೆ ಹೋಗಬಹುದು. ಹಳ್ಳಿ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಪ್ರಯಾಣಿಸಬೇಕು. ಬೇಕಾದಷ್ಟು ಸಮಯವಿದ್ದರೆ, ಗುಂಪಲ್ಲಿ ಹರಟುತ್ತಾ, ದಾರಿಯಲ್ಲಿ ಸಿಗುವ ಎಳನೀರು ಕುಡಿಯುತ್ತಾ, ಕಬ್ಬು ತಿನ್ನುತ್ತಾ, ನಡೆಯುವುದನ್ನೇ ಕೆಲಸವನ್ನಾಗಿಸಬಹುದು.

Friday, October 5, 2012

ಕತ್ತಾಳೆ


ಕ್ಯಾಕ್ಟಸ್ ವರ್ಗಕ್ಕೆ ಸೇರಿದ ಗಿಡಗಳು ಹೂಕುಂಡಗಳಲ್ಲಿ ಶೋಭಿಸುವುದಕ್ಕೆ ಮಾತ್ರ ಲಾಯಕ್ಕು ಎಂದು ತಿಳಿದಿದ್ದೆ. ಈ ವರ್ಗಕ್ಕೆ ಸೇರಬಹುದಾದ 'ಕತ್ತಾಳೆ' ಎಂಬ  ಗಿಡದ ಎಲೆಯಿಂದ ಹಗ್ಗ ತಯಾರಿಸುತ್ತಾರ್‍ಎಂದು ಮೊನ್ನೆ ತಾನೇ ತಿಳಿಯಿತು. ನಂಜನಗೂಡಿನ ಬದನವಾಳು ಸಮೀಪ ಹಳ್ಳೀ ದಾರಿಯಲ್ಲಿ ನಡೆಯುತ್ತಿದ್ದಾಗ ಕ್ಲಿಕ್ಕಿಸಿದ ಚಿತ್ರಗಳಿವು.



ಹಿಂದೆ ಈ ಎಲೆಗಳನ್ನು ನೀರಲ್ಲಿ ದಿನಗಟ್ಟಲೆ ನೆನೆಸಿ ನಾರು ತೆಗೆಯುತ್ತಿದ್ದರಂತೆ. ಈಗ ಈ ಕೆಲಸವನ್ನು ಯಂತ್ರ ಕ್ಷಣಾರ್ಧದಲ್ಲಿ  ಮಾಡುತ್ತದೆ. ನಾರನ್ನು ಬಿಸಿಲಿನಲ್ಲಿ ಒಣಗಿಸಿ ಹಗ್ಗ ತಯಾರಿಸುತ್ತಾರಂತೆ.

Wednesday, September 19, 2012

ಅಕ್ಕ- ತಂಗಿಯರ ಕೊಳ


ದಕ್ಷಿಣದ ಬದರಿ ಎಂದು ಕರಯಲ್ಪಡುವ ಮೇಲುಕೋಟೆಯಲ್ಲಿ ಆಸಕ್ತರಿಗೆ ಕುತೂಹಲ ಮೂಡಿಸುವ ವಿಶೇಷಗಳು ಸಾಕಷ್ಟಿವೆ. ಮೈಸೂರಿನಿಂದ ಹೊರಟು ಶ್ರೀರಂಗಪಟ್ಟಣ ದಾಟಿ ಪಾಂಡವಪುರ ದಾರಿಯಾಗಿ ಸುಮಾರು ೫೫ ಕಿ.ಮೀ ಪ್ರಯಾಣಿಸಿದರೆ  ಮೇಲುಕೋಟೆ ತಲಪಬಹುದು. ಕುಟುಂಬ ಸಮೇತವಾಗಿ ಒಂದು ದಿನದ ಪ್ರವಾಸಕ್ಕೆ ತಕ್ಕುದಾದ ಜಾಗ ಇದು. 

ಯೋಗ ನರಸಿಂಹ ದೇವಾಲಯ



ಮೇಲುಕೋಟೆಯ ಬೆಟ್ಟದ ಮೇಲೆ , ಯೋಗನರಸಿಂಹನ ದೇವಾಲಯವಿದೆ. ಇದನ್ನು ತಲಪಲು ಸುಮಾರು ೩೫೦ ಮೆಟ್ಟಲುಗಳನ್ನು ಹತ್ತಬೇಕು. ಇಲ್ಲಿನ ಯೋಗನರಸಿಂಹನನ್ನು  ಪ್ರಹ್ಲಾದನೇ ಸ್ಥಾಪಿಸಿದನೆಂಬ ಪ್ರತೀತಿ.








ಪುಷ್ಕರಿಣಿ



ಬೆಟ್ಟದ ಮೇಲೆ ನಿಂತರೆ ಕೆಳಗಿನ ದೃಶ್ಯ ಸುಮನೋಹರ. ಒಂದು ಕಡೆಯಲ್ಲಿ ವಿಶಾಲವಾದ ಪುಷ್ಕರಿಣಿ ಅಥವಾ ಕಲ್ಯಾಣಿ. ಇದಕ್ಕೆ ನಾಲ್ಕೂ ಕಡೆಯಿಂದ ಮೆಟ್ಟಿಲುಗಳಿವೆ. ಸುತ್ತಲೂ ಕಲ್ಲಿನ ಮಂಟಪವೂ ಇದೆ. ಇಲ್ಲಿ ಆಗಾಗ್ಗೆ ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತದೆ.









ನಾನೇನು ಕಡಿಮೆ ಎಂಬಂತೆ ದೂರದಲ್ಲಿ ಕಾಣಿಸುವ, ನೈಸರ್ಗಿಕವಾಗಿ ರಚನೆಗೊಂಡ ವಿಶಾಲವಾದ 'ತೊಣ್ಣೂರು ಕೆರೆ'. ಇವಲ್ಲದೆ, ಹೆಸರು ಗೊತ್ತಿಲ್ಲದ ಇನ್ನೂ ಕೆಲವು ಚಿಕ್ಕ-ಪುಟ್ಟ ಕೊಳಗಳು.  


 

ಮೇಲುಕೋಟೆಯ ಮುಖ್ಯರಸ್ತೆಯಲ್ಲಿರುವ ಪುರಾತನ  ಚೆಲುವನಾರಾಯಣ ಸ್ವಾಮಿಯ ದೇವಾಲಯ ಸೊಗಸಾಗಿದೆ. 
ಸ್ಠಳಪುರಾಣದ ಪ್ರಕಾರ,ಬಹಳ ಹಿಂದೆ  ಈ ಊರಿಗೆ  ಯಾದವಾದ್ರಿ ಎಂಬ ಹೆಸರಿತ್ತು. ಇಲ್ಲಿ ನೆಲೆಸಿದ್ದ ಚೆಲುವನಾರಾಯಣ ಸ್ವಾಮಿಯನ್ನು ತ್ರೇತಾಯುಗದಲ್ಲಿ ರಾಮನೂ, ದ್ವಾಪರದ ಕೃಷ್ಣ ಮತ್ತು ಬಲರಾಮರೂ ಪೂಜಿಸಿದ್ದರಂತೆ. ಕಲಿಯುಗದಲ್ಲಿ, ೧೨ ನೆಯ ಶತಮಾನದಲ್ಲಿ ಇಲ್ಲಿಗೆ ತಂಜಾವೂರಿನಿಂದ ಬಂದು ನೆಲೆಸಿದ ರಾಮಾನುಜಾಚಾರ್ಯರು ತಮ್ಮ ಕನಸಿನ ಪ್ರೇರಣೆಯಂತೆ, ಕಳೆದು ಹೋಗಿದ್ದ ಚೆಲುವನಾರಾಯಣನ ವಿಗ್ರಹವನ್ನು ಹುಡುಕಿ, ಪುನ: ಸ್ಥಾಪಿಸಿದರಂತೆ. ಅಂದಿನಿಂದ ಈ ಸ್ಥಳವು. ವೈಷ್ಣವರ  ಮೆಚ್ಚಿನ ಆರಾಧನಾ ಸ್ಠಳವಾಗಿದೆ. 


ದೇವಸ್ಥಾನದ  ಪಕ್ಕದಲ್ಲಿ, ಸ್ವಲ್ಪ ದೂರ ನಡೆದರೆ ' ಅಕ್ಕ- ತಂಗಿಯರ' ಕೊಳ ಸಿಗುತ್ತದೆ. ಇಬ್ಭಾಗವಾದಂತೆ ಇರುವ ಸುಂದರವಾದ ಅವಳಿ ಕೊಳಗಳಿವು. ಮಧ್ಯ ಸುತ್ತಲೂ ಮೆಟ್ಟಿಲುಗಳಿವೆ.   ನೀರು ಸ್ವಚ್ಛವಾಗಿತ್ತು. ಅಕ್ಕನ ಕೊಳ ಸ್ವಲ್ಪ ಚಿಕ್ಕದು, ತಂಗಿಯ ಕೊಳ ದೊಡ್ಡದು. ಇದ್ದಕ್ಕಿದ್ದಂತೆ, ಮಹಿಳೆಯೊಬ್ಬರು "ಅಲ್ಲಿ ನೀರಿಗೆ ಕಾಲು ಹಾಕ್ಬರ್ದು..ದಂಡ ಹಾಕ್ತೀನಿ..' ಎಂದು ಯಾರಿಗೋ ಗದರುವುದು ಕೇಳಿತು. ಆ ಅಜ್ಜಿಯನ್ನು ಮಾತನಾಡಿಸಿದಾಗ ಅವರು ಹೇಳಿದ ಕಥೆ ಹೀಗಿತ್ತು.  "೧೦೦೦ ವರ್ಷಗಳ ಹಿಂದೆ ಇಲ್ಲಿ ಚೆಲುವರಸ ಎಂಬ ಚೋಳ ರಾಜನಿದ್ದ. ಅವನಿಗೆ ಇಬ್ಬರು ಪತ್ನಿಯರು, ಅವರು ಅಕ್ಕ-ತಂಗಿಯರು ಕೂಡ. ಒಂದು ದಿನ ರಾಜ ಇಬ್ಬರೂ ಪತ್ನಿಯರಿಗೂ ಒಂದಷ್ಟು ದುಡ್ಡು ಕೊಟ್ಟು ಲೋಕ ಮೆಚ್ಚುವ ಕೆಲಸ ಮಾಡಿಸಿರಿ ಅಂದನಂತೆ. ಅಕ್ಕ ತಂಗಿಯರಿಬ್ಬರೂ ಕೊಳ ಕಟ್ಟಿಸಲು ಮುಂದಾದರು. ಜಕ್ಕಣಾಚಾರಿಯನ್ನು ಕರೆಸಿದರು. ಅಕ್ಕ ಕೆಲಸಗಾರರನ್ನು ಚೆನ್ನಾಗಿ ನೊಡಿಕೊಳ್ಳಲಿಲ್ಲ, ದೇವರ ನೇಮವನ್ನೂ ಸರಿಯಾಗಿ ಮಾಡಲಿಲ್ಲ. ಹಾಗಾಗಿ ಸ್ವಾಮಿಗೆ ಕೋಪ ಬಂತು. ಅಕ್ಕ ಕಟ್ಟಿಸಿದ ಕೊಳದ ನೀರು ಕಪ್ಪಾಗಿತ್ತು.

ಆದರೆ ತಂಗಿ, ಶ್ರದ್ಧಾ-ಭಕ್ತಿಯಿಂದ ಸ್ವಾಮಿಯನ್ನು ಪೂಜಿಸಿ ಕೊಳ ಕಟ್ಟಿಸಿದಳು, ಕೆಲಸಗಾರರನ್ನು ಚೆನ್ನಾಗಿ ನೋಡಿಕೊಂಡಳು.ಕೋಳದ ನೀರು ಎಳನೀರಿನಂಗಿತ್ತು. ಆ ಕೊಳದ ನೀರನ್ನು ತೀರ್ಥ, ಪೂಜೆಗೆ ಬಳಸುತ್ತಾರೆ. ಆಮೇಲೆ ಅಕ್ಕನಿಗೆ ಪಶ್ಚಾತ್ತಾಪವಾಗಿ ಸ್ವಾಮಿಯನ್ನು ಬೇಡಿಕೊಂಡಾಗ ಆತನು, ಅಕ್ಕನ ಕೊಳದ ನೀರನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಬಟ್ಟೆಬರೆಗಳನ್ನು ತೊಳೆಯಲು ಉಪಯೋಗಿಸಿವಂತೆಯೂ ಆ ಮೂಲಕ ಆಕೆಯ ಪಾಪ ಪರಿಹಾರವಾಗುತ್ತದೆಯೆಂದೂ ಅನುಗ್ರಹಿಸಿದನಂತೆ. ಹೀಗೆ ಅಕ್ಕನ ಕೆರೆಯ ನೀರು ಬಟ್ಟೆಬರೆ ತೊಳೆಯಲು ಉಪಯೋಗವಾಗುತ್ತದೆ."


ಎರಡು ಕೊಳಗಳ ನೀರು ಸುಮಾರಾಗಿ ಒಂದೇ ತರಹ ಕಾಣಿಸಿತು. ಸೂಕ್ಷ್ಮವಾಗಿ ಗಮನಿಸಿದರೆ ತಂಗಿಯ ಕೊಳದ ನೀರು ಹೆಚ್ಚು ಪಾರದರ್ಶಕವಾಗಿ ಕಾಣುತ್ತಿತ್ತು. ಅಕ್ಕನ ಕೊಳದನೀರು ಸ್ವಲ್ಪ ಹಸಿರಿನ ಛಾಯೆ ಹೊಂದಿತ್ತು.  ಪ್ರಸ್ತುತ   ಯಾವುದೇ ಕೋಟೆಗಳು ಇರದ ಇಲ್ಲಿಗೆ ಮೇಲುಕೋಟೆ ಎಂಬ ಹೆಸರು ಯಾಕೆ ಬಂತೋ ಗೊತ್ತಿಲ್ಲ. 'ಮೇಲುಕೊಳ' ಎಂದಿದ್ದರೆ ಅನ್ವರ್ಥನಾಮವಾಗುತ್ತಿತ್ತು.



ಅಕ್ಕನ ಕೊಳ

ತಂಗಿಯ ಕೊಳ  


ಅಜ್ಜಿಯ ಕಥೆ ಚೆನ್ನಾಗಿತ್ತು. ಈಗಿನ ಕಾಲದಲ್ಲಿ ಸ್ಥಳಪುರಾಣ ಗೊತ್ತಿರುವವರು ಕಡಿಮೆ, ಗೊತ್ತಿದ್ದರೂ ಅನುಕ್ರಮವಾಗಿ ಕಥೆ ಹೇಳಲು ಯಾರಿಗೂ ವ್ಯವಧಾನವಿಲ್ಲ. ಮೇಲಾಗಿ ಆ ಎರಡೂ ಕೊಳಗಳು ಶುಭ್ರವಾಗಿದ್ದವು. ಸಾಮಾನ್ಯವಾಗಿ ದೇವಸ್ಥಾನಗಳ ಪರಿಸರದಲ್ಲಿ ಭಕ್ತಿಗೆ ಸಾಕ್ಷಿಯಾಗಿ ಅಲ್ಲಲ್ಲಿ ಬಿದ್ದಿರುವ ತೆಂಗಿನ ಚಿಪ್ಪು, ಹೂವಿನ ಹಾರ, ಕರ್ಪೂರ-ಅಗರಬತ್ತಿಯ ಪಳೆಯುಳಿಕೆಗಳು ಕಾಣಲಿಲ್ಲ. ಇದು ಅಜ್ಜಿಯ ಪ್ರಭಾವವೇ ಇರಬೇಕು. ನಮಗೆ ಕಥೆ ಹೇಳುತ್ತ ನಡುನಡುವೆ ಇತರರನ್ನೂ ಗಮನಿಸುತ್ತಾ-ಗದರಿಸುತ್ತಾ ಇದ್ದ ಅಜ್ಜಿಯ ವೈಖರಿ ನನಗಂತೂ ತುಂಬಾ ಹಿಡಿಸಿತು. ಆಕೆ ಬೇಡವೆಂದರೂ ಸ್ವಲ್ಪ ಭಕ್ಷೀಸು ಕೊಟ್ಟು ಥಾಂಕ್ಸ್ ಹೇಳಿ ಹೊರಟೆವು. 

ಮೇಲುಕೋಟೆಯಲ್ಲಿ ಶತಮಾನಗಳಷ್ಟು ಹಳೆಯದಾದ ಸಂಸ್ಕೃತ ಸಂಶೋಧನಾ ಕೇಂದ್ರವಿದೆ. ಅಪೂರ್ಣಗೊಂಡ ರಾಜಗೋಪುರವಿದೆ. ದಂತ ಕಥೆಯ ಪ್ರಕಾರ ೩೦ ಅಡಿ ಎತ್ತರದ ಈ ರಾಜಗೋಪುರವನ್ನು ಒಂದೆ ರಾತ್ರಿಯಲ್ಲಿ ನಿರ್ಮಿಸುವೆನೆಂದು ಜಕ್ಕಣಾಚಾರಿ ಸವಾಲು ಸ್ವೀಕರಿಸಿದ್ದನಂತೆ. ಅವನು ಕಾರ್ಯನಿರತನಾಗಿದ್ದಾಗ ಕೆಲವರು ಅಸೂಯೆಯಿಂದ ಮಧ್ಯರಾತ್ರಿ ಆಗುತ್ತಿದ್ದಂತೆ, ಬೆಳಗಾಯಿತು, ಅವಧಿ ಮುಗಿಯಿತು ಎಂದು ಘೋಷಿಸಿದರಂತೆ. ಅವರ ಕುತಂತ್ರದಿಂದ ಅವಮಾನಿತನಾದ ಜಕ್ಕಣಾಚಾರಿ ಕೆಲಸವನ್ನು ಅರ್ಧಕ್ಕೇ ಕೈಬಿಟ್ಟನಂತೆ.

ಮೇಲುಕೋಟೆಯಿಂದ ಸುಮಾರು ೧.೫ ಕಿ.ಮೀ. ಹೋದರೆ 'ಧನುಷ್ಕೋಟಿ' ಎಂಬ ಪುಟ್ಟ ಬೆಟ್ಟ ಸಿಗುತ್ತದೆ. ಇಲ್ಲಿ ಶ್ರೀರಾಮಚಂದ್ರ-ಸೀತೆ-ಲಕ್ಷ್ಮಣ ವನವಾಸದ ಸಂಧರ್ಭದಲ್ಲಿ ತಂಗಿದ್ದರಂತೆ. ಸೀತೆಯ  ಬಾಯಾರಿಕೆ ತಣಿಸಲು ರಾಮ ಬಂಡೆಯೊಂದಕ್ಕೆ ಬಾಣ ಹೊಡೆದು ಗಂಗೆಯನ್ನು ತರಿಸಿನಂತೆ. ಕಲ್ಲಿನ ಮಧ್ಯದಲ್ಲಿರುವ ಈ ಚಿಕ್ಕ ನೀರಿನ ಒರತೆಯು ಎಂದೂ ಬತ್ತುವುದಿಲ್ಲವಂತೆ. ಬಂಡೆಗಳ ಮಧ್ಯದಲ್ಲಿ ಒಂದು ಸೀತಾಫಲ ಮರ ಬೆಳೆದು ನಿಂತಿದೆ. ಮಕ್ಕಳಿಲ್ಲದ ದಂಪತಿಗಳು ಇದಕ್ಕೆ ಪೂಜಿಸಿದರೆ ಮಕ್ಕಳಾಗುತ್ತಾರೆಂದೂ, ಹರಕೆಯಾಗಿ ಬಳೆಗಳನ್ನು ಮರಕ್ಕೆ ಕಟ್ಟುತ್ತಾರೆಂದೂ ತಿಳಿಯಿತು.  



ಮೇಲುಕೋಟೆಯ ಧನುಷ್ಕೋಟಿ



 ಪೌರಾಣಿಕ ಕಥೆಗಳು, ಸ್ಥಳೀಯ ಉಪಕಥೆಗಳು ಚರಿತ್ರೆಯಲ್ಲಿ ಹಾಸುಹೊಕ್ಕಾಗಿ  ಹರಿದು ಬರುವ ರೀತಿ ಅನನ್ಯ. 



 

Monday, September 3, 2012

ಮಾಲೇಕಲ್ ಬೆಟ್ಟದ ಮ್ಯಾಲೆ..


ಜುಲೈ ೧೫ ರಂದು, ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ ಅರಸೀಕೆರೆಯಲ್ಲಿರುವ 'ಮಾಲೇಕಲ್ ಬೆಟ್ಟಕ್ಕೆ' ಚಾರಣ ಕಾರ್ಯಕ್ರಮವವಿತ್ತು .  ಮಾಲೇಕಲ್ ಬೆಟ್ಟವು   ಮೈಸೂರಿನಿಂದ ೧೧೫ ಕಿ.ಮೀ. ದೂರದಲ್ಲಿದೆ. ಸುಮಾರು ೨೦ ಜನರಿದ್ದ ನಮ್ಮ ತಂಡವು ಬೆಳಗ್ಗೆ ೬ ಗಂಟೆಗೆ ಮೈಸೂರಿನಿಂದ ಒಂದು ಮಿನಿಬಸ್ ನಲ್ಲಿ ಹೊರಟು ಕೆ.ಆರ್ ಪೇಟೆ ಮಾರ್ಗವಾಗಿ ಅರಸೀಕೆರೆ ತಲಪಿತು. ಮಾರ್ಗ ಮಧ್ಯದಲ್ಲಿ ಕೆ.ಆರ್.ಪೇಟೆಯಲ್ಲಿ ಬೆಳಗಿನ ಉಪಾಹಾರ ಮುಗಿಸಿ ಅರಸೀಕೆರೆಯ ಕಡೆಗೆ ಪ್ರಯಾಣ ಬೆಳೆಸಿದೆವು. ದಾರಿಯುದ್ದಕ್ಕೂ ಆಲೂಗಡ್ಡೆ ಬೆಳೆದ ಹೊಲಗಳು ಬಿಳಿ ಹೂ ಬಿಟ್ಟು ಕಂಗೊಳಿಸುತ್ತಿದ್ದುವು. ಇದುವರೆಗೆ ಆಲೂಗಡ್ಡೆಯ ಬಗೆಬಗೆಯ ಊಟ ಸವಿದಿದ್ದ ನನಗೆ, ಆಲೂ ಹೊಲದ ನೋಟವೂ ಎಷ್ಟೊಂದು ಚೆನ್ನ ಅನಿಸಿತು.

ಸುಮಾರು ಹತ್ತು ಗಂಟೆಗೆ ಮಾಲೇಕಲ್ ಬೆಟ್ಟದ ಬುಡ ತಲಿಪಿದೆವು. ಅಲ್ಲಿ ನಮ್ಮನ್ನು ಅರಸೀಕೆರೆಯ ಮಿತ್ರರು ಸ್ವಾಗತಿಸಿದರು.  ಪರಸ್ಪರ ಪರಿಚಯದ ನಂತರ ಬೆಟ್ಟ ಹತ್ತಲು ಆರಂಭಿಸಿದೆವು.    

ಮಾಲೇಕಲ್ ಬೆಟ್ಟದ ಮೇಲೆ ಲಕ್ಷ್ಮೀ ವೆಂಹಟರಮಣ ಸ್ವಾಮಿಯ ದೇಗುಲವಿದೆ.ಬೆಟ್ಟದ ಮೇಲೆ ಹಾಗೂ ಕೆಳಗೆ ಇರುವ ಈ ದೇವಾಲಯಗಳು ತಿರುಮಲೆ-ತಿರುಪತಿಯನ್ನು ಹೋಲುವುದರಿಂದ ಇಲ್ಲಿಗೆ ಚಿಕ್ಕ-ತಿರುಪತಿ ಎಂಬ ಹೆಸರೂ ಇದೆ. ಈ ದೇವಾಲಯವನ್ನು ತಲಪಲು ಸುಮಾರು ೧೩೦೦ ಮೆಟ್ಟಲುಗಳನ್ನು ಹತ್ತಬೇಕು. ಅಲ್ಲಲ್ಲಿ ಬಂಡೆಗಳ ಮೇಲೆ ಹುಟ್ಟಿ ಬೆಳೆದು ಸೃಷ್ಟಿಯ ಸೋಜಿಗ ಮೆರೆದ ಗಿಡಗಳು ಲೆಕ್ಕವಿಲ್ಲದಷ್ಟು.

ಸ್ಥಳ ಪುರಾಣದ ಪ್ರಕಾರ, ಅಂದಿನ ಪಾಳೆಯಗಾರರೊಬ್ಬರಿಗೆ ವೆಂಕಟರಮಣ ಸ್ವಾಮಿಯು ಕನಸಿನಲ್ಲಿ ಕಾಣಿಸಿಕೊಂಡು, ಮೂಲ ತಿರುಪತಿಯು ದೂರವಿದ್ದು ನಿನಗೆ ಬರಲಾಗದ ಕಾರಣ ನಾನೇ ನಿನ್ನ ಬಳಿಗೆ ಬಂದಿದ್ದೇನೆ, ಬೆಟ್ಟದ ಮೇಲೆ ತುಳಸೀಹಾರ ಇರುವಲ್ಲಿ ಗುಡಿ ಕಟ್ಟು ಎಂದು ಆದೇಶಿಸಿದನಂತೆ.   ಹೀಗೆ ತುಳಸಿಮಾಲೆಯಿಂದಾಗಿ ಮಾಲೇಕಲ್ ಎಂಬ ಹೆಸರು ಬಂತು. ದೇವಾಲಯವನ್ನು  ಸುಮಾರು ೮೦೦ ವರುಷಗಳ ಹಿಂದೆ ಕಟ್ಟಲಾಯಿತಂತೆ. ಬೆಟ್ಟದ ಕೆಳಗೆ ಇರುವ ದೇವಸ್ಥಾನದಲ್ಲಿ, ವರುಷಕ್ಕೆ ಒಂದು ಬಾರಿ ರಥೋತ್ಸವವನ್ನು ಭಕ್ತಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸೌತಕಾಯಿ, ಕಿತ್ತಳೆ ಹಣ್ಣುಗಳನ್ನು ತಿನ್ನುತ್ತಾ, ಆಗಾಗ್ಗೆ  ಹಿಂತಿರುಗಿ ನೋಡಿ ದೂರದಲ್ಲಿ ಕಾಣಿಸುವ ಅರಸಿಯ ಕೆರೆಯನ್ನು ಕಣ್ತುಂಬಿಸುತ್ತಾ, ನಿಧಾನವೇ ಪ್ರಧಾನ ಎಂಬಂತೆ ಮೆಟ್ಟಿಲುಗಳನ್ನು ಹತ್ತಿದವರು ಕೆಲವರು. ಉತ್ಸಾಹದಿಂದ ಬೇಗನೆ ಬೆಟ್ಟದ ತುದಿ ತಲಪಿ, ಸಾಹಸಕ್ಕೆ ಇನ್ನೇನಾದರೂ ಅವಕಾಶವಿದೆಯೇ ಎಂದು ಹುಡುಕಿದವರು ಇನ್ನೂ ಕೆಲವರು. ಬೆಟ್ಟದ ಮೇಲೆ ಒಂದು ಬಂಡೆಗೆ ಒಂದೇ ಮೊಳೆ ಮೇಲೆ ಆಧರಿಸಿ ನಿಂತಂತೆ ಭಾಸವಾಗುತ್ತಿದ್ದ ಕಬ್ಬಿಣದ ಏಣಿಯೊಂದಿದೆ. ಧೈರ್ಯಯುಳ್ಳವರು ಅದನ್ನು ಏರಿ ತಮ್ಮ ಸರ್ಕಸ್ ಪ್ರಾವೀಣ್ಯತೆ ಮೆರೆದರು.









ಎಲ್ಲರೂ ಬೆಟ್ಟವೇರಿದ ಮೇಲೆ ಪೂಜೆಮಾಡಿ ಪ್ರಸಾದ ಸ್ವೀಕರಿಸಿದೆವು. ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ  ಶ್ರೀ ವೈದ್ಯನಾಥನ್ ಹಾಗೂ ಶ್ರೀಮತಿ ಗೋಪಮ್ಮನವರು ಸಾಂದರ್ಭಿಕ, ಜಾನಪದ  ಹಾಡುಗಳನ್ನು ಹಾಡಿ ರಂಜಿಸಿದರು. ಆಮೇಲೆ ಬೆಟ್ಟ  ಇಳಿದು, ಲಕ್ಶ್ಮೀವೆಂಕಟರಮಣ ಸ್ವಾಮಿಯ ದರ್ಶನ  ಮಾಡಿದೆವು. ಅರಸೀಕೆರೆಯ ಮಿತ್ರರು ಭೋಜನದ ವ್ಯವಸ್ಥೆಯನ್ನು ಹೊತ್ತಿದ್ದರು. ಬೆಟ್ಟ ಹತ್ತಿ- ಇಳಿದ ಆಯಾಸದ, ಮಧ್ಯಾಹ್ನ ೩ ಗಂಟೆಯೂ ಆಗಿತ್ತು. ಬಾಳೆ ಎಲೆಯಲ್ಲಿ ಕೋಸಂಬರಿ, ಪಲ್ಯ, ಪೊಂಗಲ್, ಪುಳಿಯೋಗರೆ, ಅನ್ನ, ಹುಳಿ,ತಿಳಿಸಾರು, ಬಜ್ಜಿ ಮೇಳೈಸಿದ ರುಚಿಕಟ್ಟಾದ ಊಟ, ಮೇಲಾಗಿ ಅರಸೀಕೆರೆಯ ಮಿತ್ರರ ಆದರದ ಅತಿಥಿ ಸತ್ಕಾರ. ಇನ್ನು ಕೇಳಬೇಕೆ! ಎಲ್ಲರೂ 'ಮಾಯಾ ಬಜಾರ್ 'ನ ಘಟೋತ್ಕಚನಂತೆ ಉಂಡೆವು!


ಆಲ್ಲಿಂದ ಹೊರಟು ಬರುವಾಗ ದಾರಿಯಲ್ಲಿ ಸಿಗುವ ಪುರಾತನ ಚಂದ್ರಮೌಳೇಶ್ವರ ದೇವಸ್ಥಾನಕ್ಕೂ ಭೇಟಿ ಕೊಟ್ಟೆವು. ಪ್ರಸ್ತುತ ಪ್ರಾಚ್ಯ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನ ಚೊಕ್ಕವಾಗಿದೆ. ಹೊಯ್ಸಳರ ಹಾಗೂ ಚೋಳರ ಕಾಲದ ವಾಸ್ತುಶಿಲ್ಪ ಇಲ್ಲಿ ಮೆರೆದಿವೆ. ಕಲ್ಲಿನ ನೃತ್ಯಮಂಟಪ ಈಗಲೂ ಸೊಗಸಾಗಿದೆ. ದೇವಾಲಯದ ಗೋಡೆಯಲ್ಲಿ ಕೆತ್ತಿರುವ ಪುಟ್ಟ-ಪುಟ್ಟ ಮೂರ್ತಿಗಳಲ್ಲಿ ಕೆಲವು ವಿರೂಪಗೊಂಡಿವೆ. ಆವರಣದಲ್ಲಿರುವ ಬಿಲ್ವ, ಬನ್ನಿ, ಅರಳಿ ಮರಗಳ ಕಟ್ಟೆಗಳು ವಿಶಿಷ್ಟ ಶೋಭೆ ನೀಡಿವೆ.


                                                                       
       
ಮುಂದೆ ಮೈಸೂರಿಗೆ ಬರುವಾಗ ಬಹುಶ: ಬೇರೆ ದಾರಿಯಿರಬೇಕು, ಕತ್ತಲೂ ಆಗುತಿತ್ತು, ದಾರಿಯುದ್ದಕ್ಕೂ ಅಲ್ಲಲ್ಲಿ ರಸ್ತೆತಡೆಗಳು ಸಿಗುತ್ತಿದ್ದವು. ಬಸ್ ನಲ್ಲಿ   ಮುಂದೆ ಕುಳಿತಿದ್ದ ವೈದ್ಯನಾಥನ್ ಪ್ರತೀ ರಸ್ತೆತಡೆ ಎದುರಾಗುವಾಗಲೂ  'ಹಂಪಾಸುರ' ಎಂದು ಎಲ್ಲರನ್ನು ಎಚ್ಚರಿಸುತ್ತಿದ್ದರು. ಹಂಪಾಸುರನನ್ನು ನೆನೆಯುತ್ತಾ ಮೈಸೂರು ತಲಪಿದ ನಮೆಗೆಲ್ಲರಿಗೂ ಭಾನುವಾರವನ್ನು ಸಂಪನ್ನಗೊಳಿಸಿದ ಅನುಭವ.




Wednesday, August 8, 2012

ಮನಸಾ ಮಾತಾ ಮಂದಿರ್.. ಚುನರಿ..


ಚಂಡಿಗರ್ ನಿಂದ ಸುಮಾರು ೧೦ ಕಿ.ಮಿ ದೂರದಲ್ಲಿರುವ್ ಪಂಚ್ಕುಲ ಎಂಬಲ್ಲಿ, ಶಕ್ತಿ ದೇವತೆಯೆಂದು ಆರಾಧಿಸಲ್ಪಡುವ  'ಮನಸಾ ಮಾತೆ'ಯ ಮಂದಿರವಿದೆ.

ಕ್ರಿ.ಶ. ೧೮೧೧-೧೮೧೫ ರ ಅವಧಿಯಲ್ಲಿ ಅಂದಿನ ಮಣಿಮಜ್ರ ದ ದೊರೆ ಮಹಾರಾಜ ಗೋಪಾಲ್ ಸಿಂಗ್ ಈ ದೇವಸ್ತಾನವನ್ನು ಕಟ್ಟಿಸಿದನಂತೆ. ಅಮೇಲೆ ನವೀಕರಣಗೊಂಡ ಈ ದೇವಾಲಯ ಈಗಂತೂ ಪುರಾತನ ಮಂದಿರವೆನಿಸುವುದಿಲ್ಲ. ವಿಶಾಲವಾದ ಆವರಣದಲ್ಲಿ, ಚಂದ್ರಕಾಂತ ಶಿಲೆಯಿಂದ ಮಾಡಿದ ನೆಲ, ಕೆತ್ತನೆ, ಜಗಮಗಿಸುವ ವಿದ್ಯುದೀಪಗಳು ಆಧುನಿಕತೆಯ ಮೆರುಗು ಕೊಟ್ಟಿವೆ.






ಎಲ್ಲ ದೇವಾಲಯಗಳ ಹೊರಗೆ  ಇರುವಂತೆ ಇಲ್ಲೂ  ಹೂವು-ಹಣ್ಣು ಮಾರುವವರು,  ಚಪ್ಪಲಿ ಸಂರಕ್ಷಕಕರು, ಭಿಕ್ಷೆ ಬೇಡುವವರು ಇದ್ದರು. ಜೊತೆಗೆ ಕೆಂಬಣ್ಣದ  ಜರಿ ಅಂಚಿನ ಪುಟ್ಟ ಶಾಲುಗಳನ್ನೂ ಮಾರಾಟಕ್ಕೆ ಇಟ್ಟಿದ್ದರು. ಕುತೂಹಲದಿಂದ ಅದೇನೆಂದು ವಿಚಾರಿಸಿದಾಗ ಸ್ವಾರಸ್ಯಕರವಾದ ಉತ್ತರ ಸಿಕ್ಕಿತು.

'ಏ ಚುನರಿ ಹೈ, ಆಪ್ ಪ್ರಾರ್ಥನಾ ಕರ್ಕೆ ಇಸೆ ಪೇಡ್ ಕೊ ಬಾಂದನಾ ಹೈ, ಮಾತಾ ಆಪ್ನಾ ಇಛ್ಛಾ ಪೂರಿ ಕರ್ತೀ ಹೈ, ಫಿರ್  ಆಪ್ ಏಕ್ ಔರ್ ಬಾದ್ ಆಕೆ ಅಪ್ನಾ ಚುನರಿ ಲೇನಾ ಹೈ' ಅಂದ ಅಂಗಡಿಯಾತ. ಆ ಕ್ಷಣದಲ್ಲಿ  ನನಗೆ  ಮನಸಾ ಮಾತೆಯಲ್ಲಿ ಪ್ರಾರ್ಥಿಸಬಹುದಾದ ಯಾವುದೇ ನಿವೇದನೆ ಹೊಳೆಯಲಿಲ್ಲ. ಇಲ್ಲಿ ವರೆಗೆ ಬಂದುದಕ್ಕೆ, ವಿಶಿಷ್ಟ ಹರಕೆಯ ವಿಧಾನ ತಿಳಿದಂತಾಯಿತು ಎಂದು ನಾನೂ ಹೂವು-ಹಣ್ಣು ಹಾಗೂ ಚುನರಿ ಯನ್ನು ಖರೀದಿಸಿದೆ.  






ದೇವಿಯ ದರ್ಶನವಾಗಿ ಹೊರಬರುತ್ತಿದ್ದಂತೆ ಅಲ್ಲಿರುವ ಕೆಲವು  ಮರಗಳಲ್ಲಿ ತೂಗಾಡುತ್ತಿರುವ ಕೆಂಪು ಶಾಲುಗಳು ಕಾಣಿಸಿದುವು. ಜನರು  ಶ್ರದ್ಧಾ-ಭಕ್ತಿಯಿಂದ ಚುನರಿಯನ್ನು  ಮರದ ಗೆಲ್ಲುಗಳಿಗೆ  ಕಟ್ಟುವ  ಕಾರ್ಯದಲ್ಲಿ ನಿರತರಾಗಿದ್ದರು.

ಈಗ ನನಗೆ ನಿಜಕ್ಕೂ ಪೇಚಿಗೆ ಸಿಲುಕುವಂತಾಯಿತು. ನಾನು ಯಾವುದಾದರು ಕೋರಿಕೆಯನ್ನು ಈಡೇರಿಸೆಂದು ದೇವಿಗೆ ಹರಕೆ ಹೊತ್ತು ಚುನರಿಯನ್ನು ಮರದ ಟೊಂಗೆಗೆ ಕಟ್ಟಿದರೆ..... ಅಕಸ್ಮಾತ್ ಆ ಕೋiರಿಕೆ ನೆರವೇರಿದರೆ......ಅದಕ್ಕೆ ಮಾತೆಯ ವರವೇ ಕಾರಣವೆಂಬ ಚಿಂತನೆ ಕಾಡಿದರೆ......ಆಗ ನಾನು ಪುನಃ ಮೈಸೂರಿನಿಂದ ಹರಕೆ ತೀರಿಸಲು ಇಲ್ಲಿಗೆ ಬರಬೇಕಾಗಿ ಬಂದರೆ......ಬಂದರೂ ಇಷ್ಟೊಂದು ಚುನರಿಗಳ ಮಧ್ಯದಲ್ಲಿ ನಾನು ಕಟ್ಟಿದ ಚುನರಿಯನ್ನು ಗುರುತಿಸಿವುದು ಸಾಧ್ಯವೆ ..... .....ಕೊನೆಗೆ ಮನಸ ಮಾತೆ  ಹರಸುವ ಬದಲು  ಮುನಿಸು ತೋರಿದರೆ........ಇತ್ಯಾದಿ 'ರೆ' ಸಾಮ್ರಾಜ್ಯದ ಕಲ್ಪನೆಗಳು ಕಾಡತೊಡಗಿದವು .

ಹಾಗಾಗಿ 'ಸರ್ವೇ ಜನಾ ಸುಖಿನೊ ಭವಂತು' ಎಂದು ಗುಣುಗುಣಿಸಿ,  ನಾನು  ಒಯ್ದಿದ್ದ  ಚುನರಿಯನ್ನು, ಮರದ ಒಂದು ಟೊಂಗೆಗೆ  ಕಟ್ಟಿ ಬಂದೆ. ಇನ್ನು ನಾನು ಅಲ್ಲಿಗೆ ಪುನ: ಹೋಗಬೇಕಾದರೆ ಮನಸಾ ಮಾತೆಯೇ ಮನಸು ಮಾಡಬೇಕು  ಹೊರತು,  ನನಗೂ ಅವಳಿಗೂ ಏನೂ ಒಪ್ಪಂದವಿಲ್ಲ, ಹಾಗೂ ಬೇರೆ ಯಾರಾದರೂ ಭಕ್ತರು ನಾನು ಕಟ್ಟಿದ ಚುನರಿಯನ್ನು ಬಿಡಿಸಿದರೆ ಅವರಿಗೂ ಒಳ್ಳೆಯದಾಗಲಿ ಎಂಬಂತೆ!

ಅವರವರ ಭಾವಕ್ಕೆ ಅವರವರ ಭಕುತಿ!





Thursday, July 26, 2012

ಬಟಾಟೆ ಹೊಲದ ನೋಟ..


ವಿವಿಧ  ಅಡಿಗೆಗೆ ಬಳಸುವ ಬಟಾಟೆ ಅಥವಾ ಆಲೂಗಡ್ಡೆ ಬಲುರುಚಿ.  ಬಟಾಟೆ ಬೆಳೆದಿರುವ ಹೊಲದ ನೋಟವೂ ಬಲು ಅಂದ. ಬಿಳಿ ಬಣ್ಣದ ಹೂಗಳನ್ನು  ಬಿಟ್ಟು ಕಂಗೊಳಿಸುತ್ತಿದ್ದ ಬಟಾಟೆ ಹೊಲದ   ಚಿತ್ರವನ್ನು ಕ್ಲಿಕ್ಕಿಸ್ಸಿದ್ದು ಅರಸೀಕೆರೆಯ ಪಕ್ಕದ ಹಳ್ಳಿಯೊಂದರಲ್ಲಿ.




Thursday, June 21, 2012

ಹೊನ್ನೇ ಮರದ ಸಾಹಸಗಾಥೆ .. ..

ಮಾವಿನಕೆರೆ ಯಲ್ಲಿರುವ  ಲಕ್ಶ್ಮಿ ವೆಂಕಟರಮಣ   ಸ್ವಾಮಿಯ ದೇವಸ್ಥಾನದ ಆವರಣದಲ್ಲಿ , ಗೋಡೆಯ ಮೂಲಕ ಹಾದು ಬೆಳೆ ದು   ನಿಂತ ಹೊನ್ನೇ ಮರದ ಸಾಹಸಗಾಥೆ ನೋಡಿ....


       

 

Tuesday, June 19, 2012

ಪಯಣ -ಮಾವಿನಕೆರೆ ಬೆಟ್ಟ


ಜೂನ್ ೧೦ ರಂದು, ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಆಯೊಜಿಸಲಾದ ಸಣ್ಣ  ಟ್ರೆಕ್ಕಿಂಗ್  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಸುಮಾರು ೩೦ ಜನರಿದ್ದ ನಮ್ಮ ತಂಡ, ಮೈಸೂರಿನ ರೈಲ್ವೇಸ್ಟೇಶನ್ ನಲ್ಲಿ ಸೇರಿ, ಹಾಸನದ ಕಡೆಗೆ ಹೋಗುವ ರೈಲ್ ನಲ್ಲಿ ಹೊರಟೆವು.  ಕಟ್ಟಿಸಿ ತಂದಿದ್ದ ಇಡ್ಲಿ-ಚಟ್ನಿ ತಿಂದು, ದಾರಿಯಲ್ಲಿ ಯಾವುದೋ ಒಂದು ಸ್ಟೇಶನ್ ನಲ್ಲಿ ಮಾರುತ್ತಿದ್ದ ಹಲಸಿನ ಹಣ್ಣನ್ನೂ ತಿಂದು, ಅದೂ-ಇದೂ ಹರಟುತ್ತ, ಸುಮಾರು ೨ ಗಂಟೆ ಪ್ರಯಾಣಿಸುವಷ್ಟರಲ್ಲಿ ಮಾವಿನಕೆರೆ ಬಂದೇ ಬಿಟ್ಟಿತು.

ಶ್ರೀ ಎಮ್. ವಿ. ಸುಬ್ಬಣ್ಣ ಹಾಗೂ ಅವರ ಮನೆಯವರು ಅಲ್ಲಿ ನಮ್ಮನ್ನು ಬರಮಾಡಿಕೊಂಡರು. ಪರಸ್ಪರ ಪರಿಚಯ-ಯೋಗಕ್ಷೇಮ ಮಾತನಾಡಿ, ಮಾವಿನಕೆರೆ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದೆವು. ಸುಬ್ಬಣ್ಣನವರು ನಮಗಾಗಿ ಮಾವಿನಕೆರೆ ಕ್ಷೇತ್ರದ ಬಗ್ಗೆ ನಮಗಾಗಿ ಒಂದು ಪುಟ್ಟ ಮಾಹಿತಿ ಪುಸ್ತಕವನ್ನು ಬರೆದು ಮುದ್ರಿಸಿದ್ದರು. ಇದರ ಸರಳ ನಿರೂಪಣೆಯಿಂದ ಶ್ರೀಕ್ಷೇತ್ರದ ಸ್ಥಳಪುರಾಣ  ತಿಳಿಯಲು ಅನುಕೂಲವಾಯಿತು.








ಮಾವಿನಕೆರೆ ಬೆಟ್ಟ ಚಿಕ್ಕದಾದುದು. ಸುಮಾರು ೫೦೦ ಮೆಟ್ಟಿಲುಗಳಿದ್ದುವು. ಅಲ್ಲಲ್ಲಿ ದೊಡ್ಡದಾದ ಬಂಡೆಗಳಿದ್ದುವು.

















ಬಂಡೆಯನ್ನೇರಲು ನಮ್ಮ ತಂಡದಲ್ಲಿದ್ದ
’ತಾತ ಯೂಥ್’ಗಳೇ ಲೀಡರ್ಸ್!












ಬೆಟ್ಟದ ಮೇಲೆ, ಪುಟ್ಟದಾದ  ಗುಹೆಯಲ್ಲಿ ಪುರಾತನವಾದ ಉದ್ಭವ ರಂಗನಾಥ ಸ್ವಾಮಿಯ ಶಿರೋಭಾಗ ಮಾತ್ರ ಕಾಣಿಸುತ್ತದೆ. ದೇವಸ್ಥಾನದ ಮುಂಭಾಗವನ್ನು  ಇತ್ತೀಚೆಗೆ ನವೀಕರಿಸಿದ್ದಾರೆ. ಚಿಕ್ಕದಾದರೂ ಚೊಕ್ಕವಾದ ದೇವಸ್ಥಾನವಿದು. ಬೆಟ್ಟದ ಮೇಲೆ ಬೀಸುವ ತಂಗಾಳಿ ಮೆಟ್ಟಿಲು ಹತ್ತಿ ಬಂದ ಆಯಾಸವನ್ನು ಮರೆಸುತ್ತದೆ. ಬಹುಶ: ಅಲ್ಲಿನ ಗಾಳಿ ಬೀಸುವಿಕೆ ಜಾಸ್ತಿಯಿರಬೇಕು, ಇದಕ್ಕೆ ಪೂರಕವೆಂಬಂತೆ ಸ್ವಲ್ಪ ದೂರದಲ್ಲಿ , ಗಾಳಿಯಿಂದ ವಿದ್ಯುತ್ ತಯಾರಿಸುವ ’ವಿಂಡ್ ಮಿಲ್’ಗಳು ಕಾಣಿಸುತ್ತವೆ. 


ತೀರ್ಥ-ಪ್ರಸಾದ ಸ್ವೀಕರಿಸಿ, ನಿಧಾನವಾಗಿ ಹರಟುತ್ತಾ. ಪ್ರಕೃತಿ ಸಿರಿಯನ್ನು ಮೆಚ್ಚುತ್ತಾ ಬೆಟ್ಟದ ಕೆಳಗಿಳಿಯುವಾಗ ೧.೩೦ ಗಂಟೆಯಾಗಿತ್ತು. ನಮ್ಮ ಮುಂದಿನ ಪಯಣ  ಅಲ್ಲಿಂದ ಸುಮಾರು ೩. ಕಿ.ಮೀ ದೊರದಲ್ಲಿರುವ ಹೇಮಾವತಿ ನದಿ ದಂಡೆಯಲ್ಲಿ ಸ್ಥಾಪಿಸಲಾದ ’ಶ್ರೀಲಕ್ಶ್ಮಿ ವೆಂಕಟರಮಣ ಸ್ವಾಮಿ’ಯ  ಮಂದಿರಕ್ಕೆ. 


ಈ ದಾರಿಯಲ್ಲಿ, ಎರಡು ದೊಡ್ಡದಾದ ’ಅಕ್ವಾ ಡೆಟ್’ ಅಥವಾ ನೀರು ಹರಿಯುವ ಮೇಲುಸೇತುವೆಗಳಿವೆ. ಗೊರೂರು ಅಣೆಕಟ್ಟಿನಿಂದ ಹೇಮಾವತಿ ನದಿಯ ನೀರನ್ನು ಸಮರ್ಪಕವಾಗಿ ಬಳಸಲು ಈ ವ್ಯವಸ್ಥೆ.






ಸುಮಾರು ೨ ಗಂಟೆಗೆ ’ಶ್ರೀಲಕ್ಶ್ಮಿ ವೆಂಕಟರಮಣ ಸ್ವಾಮಿ’ ದೇವಸ್ಥಾನಕ್ಕೆ ತಲಪಿದೆವು. ಅಲ್ಲಿನ ಅರ್ಚಕರು ಬಹಳ ಶ್ರದ್ಧಾ-ಭಕ್ತಿಯಿಂದ ಪೂಜೆ-ಅರ್ಚನೆ ಕಾರ್ಯಕ್ರಮಗಳನ್ನು ನೆರವೇರಿಸಿದರು. ಅವರು ಸ್ಥಳಪುರಾಣ ಹಾಗೂ ತಮ್ಮ  ಕುಟುಂಬದವರಿಗೆ ತಲೆಮಾರಿನಿಂದ ಒದಗಿ ಬಂದ ಪೂಜಾ-ಕೈಂಕರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಾಗಿ ಆಸ್ಠೆಯಿಂದ ವಿವರಿಸಿದರು. 

ಈ ನಡುವೆ ಹೆಚ್ಚಿನ ಧಾರ್ಮಿಕ ಕ್ಷೇತ್ರಗಳಲ್ಲಿ ಕಾಟಾಚಾರಕ್ಕೆ ಅರ್ಚನೆ ಮಾಡುತ್ತಾರೆ. ಹಾಗಾಗಿ ಇಲ್ಲಿನ ಅರ್ಚಕರ ಸೌಜನ್ಯ ಹಾಗೂ   ಪ್ರತಿಯೊಬ್ಬರನ್ನು "ಸ್ವಾಮಿಯನ್ನು ನೋಡಿಯಾಯಿತೆ, ಅಮ್ಮನವರಿಗೆ ಈ ದಿನ ವಿಶೇಷ ಅಲಂಕಾರವಿದೆ, ತೀರ್ಥ ಸಿಕ್ಕಿತೆ, ಪ್ರಸಾದ ಸ್ವೀಕರಿಸಿ" ಇತ್ಯಾದಿ   ಪ್ರೀತಿಯಿಂದ ಆದರಿಸುವ ಪರಿ ಇಷ್ಟವಾಯಿತು.

ಮುತ್ತುಗದ ಎಲೆ ಮೇಲೆ ಧಾರಾಳವಾಗಿ ಬಡಿಸಿದ ಬಿಸಿಬೆಳೆ ಭಾತ್, ಸಿಹಿ ಪೊಂಗಲ್ ಹಾಗೂ ಮೊಸರನ್ನ ಸವಿದೆವು. ಪಕ್ಕದಲ್ಲಿ ಹರಿಯುತ್ತಿರುವ ಹೇಮಾವತಿ ನದಿದಂಡೆಯಲ್ಲಿ ಸ್ವಲ್ಪ ಹೊತ್ತು ಕುಳಿತು, ಮೈಸೂರಿಗೆ ಹಿಂತಿರುಗಿದೆವು.

ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅಯೋಜಿಸಿದ್ದ ಶ್ರೀ ಸ್ವಾಮಿ ಹಾಗೂ ಶ್ರೀ ಸೋಮಶೇಖರ್ ಅವರಿಗೆ ಹೃತ್ಪೂರ್ವಕ ಥಾಂಕ್ಸ್!



Friday, June 15, 2012

ನಮ್ಮ ಮನೆಯ ಅಂಗಳದಿ ಬೆಳೆದ ಹೂವನ್ನು...

ಮೈಸೂರಿನ ಹೊರವಲಯದಲ್ಲಿರುವ ನಮ್ಮ ಪುಟ್ಟ ಮನೆಗೆ  ಚಿಕ್ಕದಾದ  ಕೈತೋಟವೂ  ಇದೆ. ಸ್ವಲ್ಪ ಹುಲ್ಲು ಹಾಸು, ಕೆಲವು ಹೂವು- ಹಣ್ಣಿನ  ಗಿಡಗಳು ಬೆಳೆದು ನಿಂತು ನಮ್ಮ ಕಣ್ಣಿಗೆ  ಮುದ ಕೊಡುತ್ತವೆ . ಹೂಗಳು ಗಿಡದಲ್ಲಿಯೇ ಇದ್ದರೆ ಚೆನ್ನ ಎಂದು ನನ್ನ ನಂಬಿಕೆ.

ಬೆಳಗ್ಗೆ ವಾಕಿಂಗ್ ಹೋಗುವ ನೆಪದಲ್ಲಿ ಕೆಲವರು, ಬೇರೊಬ್ಬರ ಮನೆಯ ಅಂಗಳದಲ್ಲಿ ಅರಳಿದ ಹೂವನ್ನು ಕದ್ದು ತಂದು ತಮ್ಮ ಮನೆಯ ದೇವರಿಗೆ ಅರ್ಪಿಸಿ  ಧನ್ಯರಾಗುತ್ತಾರೆ. ನಾನು ಗಮನಿಸಿದಂತೆ  ಮಲ್ಲಿಗೆ, ದಾಸವಾಳ ಇತ್ಯಾದಿ  ಪೂಜೆಗೆ ಬಳಸುವ ಹೂಗಳಿಗೆ  'ಕಳ್ಳ' ರು ಹೆಚ್ಚ್ಚು.














                                                               


ಆದರೆ ಸಾಮಾನ್ಯವಾಗಿ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುರ್ಗಾ ಪೂಜೆಗೆ  ಅತಿ ಶ್ರೇಷ್ಥವೆಂದು ಪರಿಗಣಿಸುವ 'ಕೇಪುಳ' ಹೂವನ್ನು ಇಲ್ಲಿ ಯಾರು ಕೀಳುವುದಿಲ್ಲ. ಅದಕ್ಕೆ ಕೇವಲ ಅಲಂಕಾರಿಕ  ಹೂವಿನ ಸ್ಥಾನ. ಹಾಗಾಗಿ ನಮ್ಮ ಮನೆಯ ಮುಂದೆ ರಸ್ತೆ ಬದಿಯಲ್ಲಿ ಹಾಕಿರುವ  ಕೇಪುಳ  ಹೂವಿನ ಗಿಡವು, ಹಲವಾರು ವರ್ಷಗಳಿಂದ ನಿರಾತಂಕವಾಗಿ  ಕಂಗೊಳಿಸುತ್ತಿದೆ .

ಪ್ರತಿದಿನವೂ ಮನೆ ಕೆಲಸದ ಗಡಿಬಿಡಿ, ಕೆಲಸಕ್ಕೆ ಹೊರಡುವ ತರಾತುರಿಯಲ್ಲಿ, ತಕ್ಕ ಮಟ್ಟಿಗೆ ನಾಸ್ತಿಕತೆಯು ಜತೆಗೂಡಿ ಯಾವುದೇ ಪೂಜೆ -ಪುನಸ್ಕಾರ ಮಾಡದೆ ಇರುವವಳು ನಾನು. ಹಾಗಾಗಿ,  ನಮ್ಮ  ಮನೆಯ ಅಂಗಳದಿ ಬೆಳೆದ ಹೂವನ್ನು, ತಮ್ಮ ಮನೆಯ ದೇವರಿಗೆ ಅರ್ಪಿಸಿ, ತಾವು ಪೂಜೆ ಮಾಡಿ,  ನನ್ನ ಅರಿವಿಗೇ  ಬಾರದಷ್ಟು ಸೌಜನ್ಯದಿಂದ, ನನ್ನ ಪುಣ್ಯದ ಅಕೌಂಟ್ ಗೆ ಜಮೆ ಮಾಡುವ ನಾಗರಿಕರಿಗೆ ನಮೋ ನಮ:!  

Sunday, May 20, 2012

ಅನಿವಾರ್ಯದ ನಿತ್ಯ ಚಾರಣ..


ಚಾರಣಪ್ರಿಯರಿಗೆ  ಬೆಟ್ಟ  ಹತ್ತುವುದು   ಒಂದು  ಚಟ ಅಥವಾ ವಾರಾಂತ್ಯದ  ವಿಶ್ರಾಂತಿಯ ಇನ್ನೊಂದು ರೂಪ. ಜತೆಗೆ ಸ್ನೇಹಿತರೊಡನೆ ಬೆರೆಯುವ ಸದವಕಾಶ,  ಹಳೆಯ ಚಾರಣದ ನೆನಪನ್ನು ಮೆಲುಕು ಹಾಕುತ್ತ,  ಮುಂದಿನ ಹೊಸ ಚಾರಣದ ಬಗ್ಗೆ ಸಮಾಲೋಚನೆ ಮಾಡುತ್ತಾ, ಕಟ್ಟಿ ತಂದ ಬುತ್ತಿಯನ್ನು ಹಂಚಿ ತಿಂದು,  ಪರಸ್ಪರ ಕುಶಾಲ-ಹರಟೆ-ಲೇವಡಿ ಮಾತುಕತೆ  ಮಾಡುತ್ತಾ - ಒಟ್ಟಾರೆಯಾಗಿ ಸಂತೋಷವಾಗಿ ದಿನವನ್ನು ಕಳೆಯುವ ಪರಿ.  



ಈ ಶ್ರಮಿಕ ಕಾರ್ಮಿಕನಿಗೆ ನಿತ್ಯ ಚಾರಣ  ಅನಿವಾರ್ಯ. ಯಾಕೆಂದರೆ  ಬೆಟ್ಟ ಹತ್ತಲು ಅನುವು ಮಾಡುವ ಮೆಟ್ಟಿಲು ಕಡಿಯುವುದೇ ಈತನ ಕಾಯಕ. ಕೊರೆಯುವ ಚಳಿಯನ್ನು ಲೆಕ್ಕಿಸದೆ,  ಆಗಿಂದಾಗ್ಗೆ ಸುರಿಯುತ್ತಿರುವ  ಹಿಮಯನ್ನು ಹಾರೆಯಿಂದ ಹೆರೆದು ಮೆಟ್ಟಿಲುಗಳನ್ನು ಶುಭ್ರಗೊಳಿಸುವ ಈತನ ಕೆಲಸ ನಿಜಕ್ಕೂ ತ್ರಾಸದಾಯಕ. ಹೊಟ್ಟೆಪಾಡು...... 

 ಇದನ್ನು  ಕ್ಲಿಕ್ಕಿಸಿದ್ದು  ನಾಲಿಯ  'ಗುಲಾಬಾ ಸ್ನೋ ಪಾಯಿಂಟ್ ' ನಲ್ಲಿ. 

Wednesday, May 16, 2012

'ಶಿರಸ್' ತಿರುಗಿಸುವ ಚರಸ್ ..ಕ್ಲಿಕ್

'ಕುಲು'  ವಿನಿಂದ ಸ್ವಲ್ಪ ದೂರದ ಕಸೋಲ್  ಎಂಬಲ್ಲಿಗೆ  ಹೋಗಿದ್ದೆವು. 


ನಮ್ಮ ಕಾರಿನ ಡ್ರೈವರ್ ನ ಇದ್ದಕ್ಕಿದ್ದಂತೆ ಪುಟಾಣಿ ಗಿಡವೊಂದನ್ನು ತೋರಿಸುತ್ತ  ' ಎ ಚರಸ್ ಹೇ, ದುನಿಯಾ ಮೇ ಸಬ್ ಸೆ   ಅಚ್ಚ್ಚಾ ಚರಸ್ ಕಸೋಲ್ ಮೇ ಮಿಲತಾ ಹೇ', ಬಹುತ್ ಅಂಗ್ರೇಜಿ  ಲೋಗ್  ಚರಸ್ ಪೀನೆ ಕೆ ಲಿಯೇ ಕಸೋಲ್ ಆತೆ ಹೇ'  ಅಂದ.  ಮಾದಕ  ವಸ್ತುಗಳಲ್ಲಿ ಒಂದಾದ  'ಹಶೀಶ್'ನ್ನು ತಯಾರಿಸಲು ಬೇಕಾದ ಕಚ್ಚಾವಸ್ತುವನ್ನು ' ಚರಸ್' ಗಿಡದಿಂದ ಪಡೆಯುತ್ತಾರಂತೆ.   

ಶಿರಸ್ ಗೆ ನಶೆ  ಹಿಡಿಸುವ  ಚರಸ್ ..ಕ್ಲಿಕ್ 

Sunday, May 13, 2012

ಮೂಡಲ ಮನೆಯಾ ಮುತ್ತಿನ ನೀರಿನ ಎರಕವಾ .. .......



ಸೂರ್ಯೋದಯದ   ಈ ದೃಶ್ಯಗಳನ್ನು  ಕ್ಲಿಕ್ಕಿಸಿದ್ದು  ನೇಪಾಳದ  'ನಾಗರ ಕೋಟ' ಎಂಬಲ್ಲಿ.  ಇಲ್ಲಿಂದ  ಎವೆರೆಸ್ಟ್ ಶಿಖರವು ೩೦ ಕಿ.ಮೇ ದೂರದಲ್ಲಿದೆ.  ಕ್ಯಾಮರ ಕಣ್ಣಿಗೆ ಅಸ್ಪಷ್ಟವಾಗಿ  ಕಾಣಿಸುತ್ತದೆ.



 

Friday, May 11, 2012

ಹಿಮಾಚಲ ಪ್ರದೇಶದ ಶ್ರಮಿಕ ಮಹಿಳೆಯರು ...ಕ್ಲಿಕ್

ಹಿಮಾಚಲ ಪ್ರದೇಶದಲ್ಲಿರುವ ಮನಾಲಿಯ ಪಕ್ಕದ ಒಂದು ಪುಟ್ಟ ಊರು 'ನೆಗರ್'  .ಅಲ್ಲಿನ ಪರ್ವತ ಮಾರ್ಗದ   ಕಾಲುದಾರಿಯಲ್ಲಿ  ನಿಧಾನವಾಗಿ   ಬೆಟ್ಟ ಸುತ್ತಿದ್ದೆವು. ಪರ್ವತದಲ್ಲಿ ಹುಲ್ಲುಹಾಸಿನ ನಡುವೆ ಸೇಬಿನ ಮರಗಳು. 

ತೋಟದಲ್ಲಿ ದಿನದ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಹೊರೆ ಹೊತ್ತ  ಶ್ರಮಿಕ   'ಪಹಾಡಿ  ಔರತ್''  ಹೀಗಿದ್ದರು ..... 






Thursday, May 3, 2012

ಗುಲಾಬ್ ಮೆ ಉಡ್ತಾ ಜಾಯೇ ಹಮಾರಾ ಲಾಲ್ ದುಪಟ್ಟಾ..


ಹಿಮಾಚಲ  ಪ್ರದೇಶದಲ್ಲಿ ಪ್ರವಾಸಿಗರಿಗೆ ಹಿಮವೇ ಮುಖ್ಯ ಆಕರ್ಷಣೆ. ಮನಾಲಿಯ ’ರೋತಾಂಗ್ ಪಾಸ್’ ಒಂದು  ಪ್ರಸಿದ್ಧ ’ಸ್ನೊ ಪಾಯಿಂಟ್’. ಹಿಮಾಛ್ಛಾದಿತ ಪರ್ವತಗಳ ಮಧ್ಯೆ ಪ್ರಯಾಣ ಸೊಗಸಾಗಿತ್ತು. ವಿಪರೀತ ಹಿಮ ಬಿದ್ದು ರಸ್ತೆ ಲಭ್ಯವಿಲ್ಲವೆಂದು ನಮಗೆ ’ರೋತಾಂಗ್ ಪಾಸ್’ ತಲಪಲಾಗಲಿಲ್ಲ. ದಾರಿ ಮಧ್ಯದ ’ಗುಲಾಬ್’ ಎಂಬ ಇನ್ನೊಂದು ’ಸ್ನೊ ಪಾಯಿಂಟ್’ನಲ್ಲಿ ಇಳಿದೆವು.  ಅಲ್ಲಿ, ಹಿಮದಲ್ಲಿ ವಿವಿಧ ಆಟಗಳನ್ನು ಆಡಬಹುದು. ಉದಾ :ಸ್ಕೀಯಿಂಗ್, ಹಿಮದಲ್ಲಿ ಬೊಂಬೆ ಮಾಡುವುದು ಇತ್ಯಾದಿ. 



ಚಳಿಯನ್ನು ಎದುರಿಸಲೆಂದು, ಸಾಕಷ್ಟು ಉಣ್ಣೆಯ  ಬಟ್ಟೆ ಧರಿಸಿದ್ದೆವು. ಕೆಲವರು ಉಣ್ಣೆಯ ಶಾಲನ್ನೂ ಹೊದ್ದಿದ್ದರು. ಇಷ್ಟೆಲ್ಲಾ ಇದ್ದರೂ ಹಿಮದಲ್ಲಿ ಆಟವಾಡಲು ತಕ್ಕುದಾದ ’ವಿಂಡ್ ಚೀಟರ್’ ಕೋಟ್ ಮತ್ತು  ಗಮ್ ಬೂಟ್  ಬೇಕಾಗುತ್ತವೆ. ಇವು, ಅಲ್ಲಿ ೨೫೦ ರೂ. ಗಳಿಗೆ   ಬಾಡಿಗೆಗೆ ಸಿಗುತ್ತವೆ.


ಕೆಲವು ಮನಾಲಿಯ ಮಹಿಳೆಯರು, ಪ್ರವಾಸಿಗಳಿಗೆ ತಮ್ಮ ನೆಲದ ಸಾಂಪ್ರದಾಯಿಕ ಉಡುಗೆ ’ಪಟ್ಟೂ’ ವನ್ನು ತೊಡಿಸಿ ಹಣ ಗಳಿಸುತ್ತಿದ್ದರು.

ಒಂದು ಪ್ರತಿ ಬಟ್ಟೆಗೆ ೧೦೦ ರೂ ಬಾಡಿಗೆ ಕೊಟ್ಟರೆ, ಸ್ವಲ್ಪ ಸಮಯ ಅವನ್ನು ತೊಟ್ಟು, ಹಿಮದಲ್ಲಿ ನಡೆದಾಡಿ, ಫೊಟೊ ಕ್ಲಿಕ್ಕಿಸಿ ಸಂಭ್ರಮಿಸಬಹುದು.

ಕೆಂಪು ಬಣ್ಣ ಅವರಿಗೆ ಶುಭಕಾರಕ ಬಣ್ಣವಂತೆ. ನಾವೂ ಪಟ್ಟೂ ತೊಟ್ಟು ಮನಾಲಿಯ ಪಹಾಡಿ ಜನರಾದೆವು.


ಗುಲಾಬ್ ಕಾ ಹವಾ ಮೆ ಉಡ್ತಾ ಜಾಯೇ ಹಮಾರಾ ಲಾಲ್ ದುಪಟ್ಟಾ......





ಆ ಚಳಿಯಲ್ಲಿ, ಒಬ್ಬಾತ ತಯಾರಿಸಿ ಕೊಡುತ್ತಿದ್ದ ಬಿಸಿ ಚಹಾವಂತೂ  ಅದ್ಭುತ ಪೇಯವೆನಿಸಿತು. ಮಸಾಲಾ  ಚಾಯ್ ಕುಡಿದು ಹಿಮದ ಬೆಟ್ಟದಿಂದ ಕೆಳಗಿಳಿದೆವು.






Wednesday, May 2, 2012

ಹಿಡಿಂಬಾ ಮಂದಿರ.... ಎಷ್ಟೊಂದು ಸುಂದರ..


ಎಪ್ರಿಲ್ ನಲ್ಲಿ ಹಿಮಾಚಲ ಪ್ರದೇಶದ ಕೆಲವು ಪ್ರೇಕ್ಷಣೀಯ  ಸ್ಥಳಗಳನ್ನು ನೋಡಿ ಬಂದೆವು. ’ಮನಾಲಿ’ಯಲ್ಲಿರುವ ಹಿಡಿಂಬಾ ದೇವಾಲಯ ಅವುಗಳಲ್ಲಿ ಒಂದು.

ಮನಾಲಿ ಪಟ್ಟಣದಿಂದ ಕಾರಿನಲ್ಲಿ ಪ್ರಯಾಣ ತುಂಬಾ ಮುದ ಕೊಟ್ಟಿತು. ಬೆಟ್ಟಗಳ ನಡುವೆ, ಹಸಿರಿನ ವನಸಿರಿಯ ಮಧ್ಯೆ ಹಾದು ಹೋಗುವ ಅಂಕು-ಡೊಂಕಾದ ರಸ್ತೆ. ಇಲ್ಲಿ ದೇವದಾರು, ಓಕ್, ಪೈನ್ ಇತ್ಯಾದಿ  ಮರಗಳು ಸೊಂಪಾಗಿ ಬೆಳೆದಿದ್ದು, ಸುಮಾರಾಗಿ ’ಊಟಿಯ’ ಪರಿಸರವನ್ನು ಹೋಲುತ್ತದೆ. ನಮ್ಮ ಸುತ್ತಲೂ ಕಡಿದಾದ ಬೆಟ್ಟಗಳು, ಅಲ್ಲಲ್ಲಿ ಕಾಣಿಸುವ ಸೇಬಿನ ತೋಟಗಳು, ನೂರಾರು ಸಣ್ಣ ಪುಟ್ಟ ಝರಿಗಳು..ದಾರಿಯುದ್ದಕ್ಕೂ ಜತೆಯಾಗುವ ’ಬಿಯಾಸ್’ ನದಿ ಅಥವಾ ಇನ್ಯಾವುದೋ ಉಪನದಿಯ ಜುಳು-ಜುಳು ನಾದ. ಇಲ್ಲಿನ ನದಿಯಗಳಲ್ಲಿ ಬೆಳಗಿನ ಸಮಯ ನೀರಿನ ಹರಿವು ಸ್ವಲ್ಪ ಕಡಿಮೆ ಇರುತ್ತದೆ. ಸಂಜೆ ಆಗುತ್ತಿದ್ದಂತೆ  ನೀರಿನ ರಭಸ ಹೆಚ್ಚುತ್ತದೆ. ಹಿಮಾಲಯ ಪರ್ವತ ಶ್ರೇಣಿಯಿಂದ ಹಿಮ ಕರಗಿ ನದಿಗೆ ಸೇರುವುದೇ ಇದಕ್ಕೆ ಕಾರಣ.

ಸ್ವಲ್ಪ ಪ್ರಯಾಣದ ನಂತರ  ಹಿಡಿಂಬಾ ಮಂದಿರ ತಲಪಿದೆವು.

ತಮಾಷೆಗೆಂದೋ, ಕುಚೋದ್ಯಕ್ಕೆಂದೋ-  ಸ್ಥೂಲಕಾಯದ ಸ್ತ್ರೀಯರನ್ನು ’ಹಿಡಿಂಬೆ’ ಗೆ ಹೋಲಿಸಿ ಲೇವಡಿ ಮಾಡುವವರಿದ್ದಾರೆ. ಹಾಗಾಗಿ, ರಾಕ್ಷಸಿ ಹಿಡಿಂಬೆಯ  ದೇವಾಲಯ ಅವಳ ಉಪಮೆಗೆ ತಕ್ಕಂತೆ ಬಲು ದೊಡ್ಡದಿರಬಹುದೆಂದು ಊಹಿಸಿದ್ದೆ. ನನ್ನ  ನಿರೀಕ್ಷೆ ತಪ್ಪಾಯಿತು. 





ಹಿಡಿಂಬಾ ದೇವಾಲಯವು ಚಿಕ್ಕದಾದರೂ ಚೊಕ್ಕವಾಗಿತ್ತು. ಮರದ ಕುಸುರಿ ಕೆಲಸವನ್ನೊಳಗೊಂಡ ಪುಟ್ಟದಾದ ಬಾಗಿಲು, ಸುಮಾರು ೫ ಅಡಿ ಎತ್ತರ, ೩ ಅಡಿ ಅಗಲವಿದ್ದಿರಬಹುದು. ಅದಕ್ಕಿಂತ ಉದ್ದದವರು ತಲೆ/ಬೆನ್ನು ಬಾಗಿಸಿದರೆ ಮಾತ್ರ ಮಂದಿರದ ಒಳಗೆ ಹೋಗಲು ಸಾಧ್ಯ. ದೇವಾಲಯದ ಒಳಗೆ ಒಂದು ಪುಟ್ಟ ಗುಹೆ ಇದೆ.  ಹಿಡಿಂಬೆ ಇಲ್ಲಿ ಕುಳಿತು ತಪಸ್ಸನ್ನು ಆಚರಿಸಿದಳು ಎಂಬ ನಂಬಿಕೆ. ಖಂಡಿತವಾಗಿಯೂ, ಹಿಡಿಂಬೆ ಧಡೂತಿಕಾಯದವಳಾಗಿದ್ದರೆ, ಅವಳಿಗೆ ಅಲ್ಲಿ ತಪಸ್ಸಿಗೆ ಕೂರಲು ಅಸಾಧ್ಯ! ನಾವು ಹಿಡಿಂಬೆಗೆ ಇಷ್ಟು ಅವಮಾನ ಮಾಡುವುದು ಸರಿಯೇ ಅನಿಸಿತು.

ಅನತಿ ದೂರದಲ್ಲಿ  ಘಟೋತ್ಕಚನ ಗುಡಿಯಿದೆ.

















ಅಲ್ಲಿ ಅಲಂಕೃತ ಯಾಕ್ ಪ್ರಾಣಿಗಳಿದ್ದುವು. ಅವುಗಳ ಮೇಲೆ ಪ್ರವಾಸಿಗಳನ್ನು ಸವಾರಿ ಮಾಡಿಸಿ ಹಣ ಸಂಪಾದಿಸುವವರು  ಕೆಲವರು. ಹಾಗೆಯೇ ೩೦ ರೂ. ಕೊಟ್ಟರೆ ಮುದ್ದಾದ ಮೊಲಗಳನ್ನು ಎತ್ತಿಕೊಂಡು  ಫೋಟೊ ತೆಗೆಯಬಹುದಾಗಿತ್ತು.

ಕೊರೆಯುವ ಚಳಿ, ಆಗೊಮ್ಮೆ ಈಗೊಮ್ಮೆ ಹಾದು ಹೊಗುವ ಮೋಡಗಳು, ಶಿಸ್ತಿನ ಸಿಪಾಯಿಗಳಂತೆ ಬೆಳೆದು  ನಿಂತ ದೇವದಾರು ವೃಕ್ಷಗಳ ಮಧ್ಯೆ, ಅನನ್ಯವಾದ ಶಾಂತ ಪರಿಸರ. ನಗರದ ದೇವಾಲಯಗಳಂತೆ ಕಿಕ್ಕಿರಿದ ಜನ ಸಂದಣಿಯಿಲ್ಲ,ಮೊರೆಯುವ ಮೈಕಾಸುರನಿಲ್ಲ, ಚಪ್ಪಲಿ ಕಳೆದು ಹೋದೀತೆಂಬ ಚಿಂತೆಯೂ ಇಲ್ಲ, ಭಿಕ್ಷುಕರ ಕಾಟವೂ ಇಲ್ಲ... ಇಲ್ಲಿರುವುದು ಕೇವಲ ಶಾಂತತೆ.

ಇಂತಹ ನಿಸರ್ಗದ ಮಡಿಲಲ್ಲಿ ತನ್ನದಾದ ಒಂದು ಪುಟ್ಟ ಮಂದಿರವನ್ನು ಹೊಂದಿರುವ ಹಿಡಿಂಬೆ ನಿಜವಾಗಲೂ ಅದೃಷ್ಟವಂತೆ!


Monday, April 2, 2012

ಚೀನಾದಲ್ಲಿ ಚಹಾ ತಂಬಿಗೆ....


ನಾನು ಓದಿ ತಿಳಿದಂತೆ, ಚಹಾ, ರೇಶ್ಮೆ ಹಾಗೂ ಪಿಂಗಾಣಿ ಪಾತ್ರೆಗಳ ಉಗಮಸ್ಥಾನ  ಚೀನಾ. ಚೀನಾದ ಚಹಾಕ್ಕೆ ಶತಮಾನಗಳ ಇತಿಹಾಸವಿದೆ.

ನಮ್ಮ ಚೀನೀ ಸಹೊದ್ಯೋಗಿಗಳು  ಶಾಂಘೈ ನಗರದ ಸಸ್ಯಾಹಾರಿ ಹೋಟೆಲ್  ಒಂದಕ್ಕೆ ನನ್ನನ್ನು ಕರೆದೊಯ್ದಿದ್ದರು. ಚಹಾ ಸೇವನೆಯು ಚೀನಾದ ಭೋಜನದ ಅವಿಭಾಜ್ಯ ಅಂಗ. ಇದರಲ್ಲಿ ಹಲವು ಬಗೆ. ತಯಾರಿ ಪದ್ಧತಿ ಬಹಳ ಸುಲಭ. ಹಲವಾರು ಬಗೆಯ ಹೂವು, ಬೀಜ, ಕಾಳು, ಸೊಪ್ಪು, ಗಡ್ಡೆ ಗಳಿಂದ ತಯಾರಿಸಿದ ಚಹಾ ಲಭ್ಯ. ನಮಗೆ ಬೇಕೆನಿಸಿದ ಹೂವನ್ನೋ, ಬೀಜವನ್ನೋ, ಸೊಪ್ಪನ್ನೋ  ಸ್ವಲ್ಪ ಹೂಜಿಗೆ ಹಾಕಿ, ಒಂದಷ್ಟು  ನೀರು ಕುದಿಸಿ ಸುರಿದರೆ ಸಾಕು,  ಚಹಾ ಸಿದ್ದ. ಉದಾ: ಹಸಿರು ಚಹಾ, ಎಳ್ಳಿನ ಚಹಾ, ಓಟ್ಸ್ ಚಹಾ...ಇತ್ಯಾದಿ.


  



           
ಒಂದು ಹೂಜಿ  ಚಹಾ ತಂದು, ಊಟದ ಮೇಜಿನ ಮಧ್ಯೆ ಇಡುತ್ತಾರ. ಊಟದ  ಮಧ್ಯೆ, ಆಗಿಂದಾಗ್ಗೆ ಚಹಾವನ್ನು ತಮ್ಮ ಲೋಟಕ್ಕೆ ಬಗ್ಗಿಸಿ ಕುಡಿಯುತ್ತಾರೆ. ಈ ಚಹಾಕ್ಕೆ ಸಕ್ಕರೆ-ಹಾಲು ಸೇರಿಸುವುದಿಲ್ಲ. ಹಾಗಾಗಿ ರುಚಿ ಹೆಚ್ಚು ಕಡಿಮೆ  ಬಿಸಿನೀರಿನಂತೆ ಇದ್ದು, ಸ್ವಲ್ಪ ಬಣ್ಣ ಹಾಗೂ ಪರಿಮಳ ಇರುತ್ತದೆ. ಇಂತಹ ಚಹಾವನ್ನು ತಂಬಿಗೆಗಟ್ಟಲೆ ಕುಡಿದರೂ, ಕ್ಯಾಲೊರಿ -ಕೊಲೆಸ್ಟೆರಾಲ್ ಗಳ  ಭಯ ಬೇಕಿಲ್ಲ. ಮಾರ್ಚ್ ತಿಂಗಳಲ್ಲಿ ಅಲ್ಲಿ ೫ ಡಿಗ್ರಿ ತಾಪಮಾನವಿತ್ತು. ಹಾಗಾಗಿ ಬಿಸಿ ಚಹಾ ನನಗೂ ಇಷ್ಟವಾಯಿತು.


ಒಟ್ಟಾರೆಯಾಗಿ ನೋಡಿದರೆ, ನಮ್ಮ ಹಳ್ಳಿ ಮನೆಗಳ ’ಕಷಾಯ’ವು, ಕೊತ್ತಂಬರಿ ಚಹಾ, ಜೀರಿಗೆ ಚಹಾ, ಏಲಕ್ಕಿ ಚಹಾ, ಕಾಳುಮೆಣಸು ಚಹಾ .....ಇತ್ಯಾದಿಗಳ ಸಂಗಮ, ಜತೆಗೆ ಹಾಲು-ಸಕ್ಕರೆ ಮೇಳೈಸಿದ ಅರೋಗ್ಯದಾಯಕ ಪೇಯ! ಆದರೆ ನಮ್ಮ ಬಡ ಕಷಾಯದ ಪುಡಿಗೆ  ’ಮಾರ್ಕೆಟಿಂಗ್ ತಂತ್ರ’ ಸಿದ್ದಿಸಿಲ್ಲ, ಅಷ್ಟೆ!

ಅಂದವಾದ ಚಹಾ ತುಂಬಿದ ಹೂಜಿಗಳನ್ನು ನೋಡುತ್ತ "ತಾರಕ್ಕ ಬಿಂದಿಗೆ, ನಾ ಚಹಾಕ್ಕೆ ಹೋಗುವೆ, ತಾರೇ ಬಿಂದಿಗೆಯ" ಎಂದು ಮನಸ್ಸಿನಲ್ಲಿ ಗುನುಗಿದೆ.  

Sunday, April 1, 2012

’ಸುಶಿ’ ತಿಂದ ಖುಷಿ


ಉದ್ಯೋಗ ನಿಮಿತ್ತವಾಗಿ ಮಾರ್ಚ್ ೧೨ ರಿಂದ ೧೮ ರ ವರೆಗೆ ಚೀನಾದ  ಶಾಂಘೈ ನಗರಕ್ಕೆ ಹೋಗಿದ್ದೆ. ಇದು ಚೀನಾಕ್ಕೆ ನನ್ನ ಪ್ರಥಮ ಭೇಟಿ. ಹಾಗಾಗಿ ಪ್ರತಿಯೊಂದು ವಸ್ತು-ವಿಷಯಗಳನ್ನು ಕುತೂಹಲದಿಂದ ಕೇಳಿ ತಿಳಿಯುತ್ತಿದ್ದೆ.        

ನಾನು ಅಪ್ಪಟ ಸಸ್ಯಾಹಾರಿ. ಚೀನಾ ದೇಶದಲ್ಲಿ ಮನುಷ್ಯರನ್ನು ಬಿಟ್ಟು ಉಳಿದ ಜೀವಜಗತ್ತನ್ನು ಭಕ್ಷಿಸುತ್ತಾರೆಂದು ಓದಿ ತಿಳಿದಿದ್ದೆ. ಹಾಗಾಗಿ ಚೀನಾದಲ್ಲಿರುವ ನಮ್ಮ ಸಂಸ್ಥೆಯವರಿಗೆ ನಾನು ಸಸ್ಯಾಹಾರಿಯೆಂದು ಮುಂಚಿತವಾಗಿ ತಿಳಿಸಿದ್ದೆ. ಅವರುಗಳು ತುಂಬಾ ಕಾಳಜಿಯಿಂದ ನನಗೆ ಅತಿಥಿ ಸತ್ಕಾರ ನೀಡಿದರು. ಅಲ್ಲಿದ್ದ ನಾಲ್ಕು ದಿನಗಳಲ್ಲಿ, ಪ್ರತಿ ಸಂಜೆ ಸಸ್ಯಾಹಾರಿ ಹೋಟೆಲ್ ನ್ನು ಹುಡುಕಿ  ಕರೆದೊಯ್ಯುತ್ತಿದ್ದರು.  



ನಾನು ತಿಂದ ಒಂದು ತಿಂಡಿಯ ಹೆಸರು ’ಸುಶಿ’. ಇದರಲ್ಲಿ ಹಲವಾರು ವೈವಿಧ್ಯಗಳಿರುತ್ತವೆಯಂತೆ. ನನಗಾಗಿ ಸಸ್ಯಾಹಾರದ ’ಸುಶಿ’ ತಯಾರಾಗಿ ಬಂತು. ನೋಡಲು ತುಂಬಾ ಚೆನ್ನಾಗಿತ್ತು.ಅಲಂಕಾರಿಕ ತಟ್ಟೆಯಲ್ಲಿ, ಸ್ವಲ್ಪ ಸೀಳಿದ ಹಸಿರು ಮೆಣಸಿನ ಕಾಯಿ, ಲೆಟ್ಟೂಸ್ ಎಲೆಗಳು ಹಾಗೂ ಸೋಯಾಬೀನ್ಸ್ ನಿಂದ ತಯಾರಿಸಿದ ಕೇಕ್ ನಂತಹ ವಸ್ತುವನ್ನು ಜೋಡಿಸಿದ್ದರು. ನೋಡಲು ತುಂಬಾ ಚೆನ್ನಾಗಿತ್ತು.





ಅದನ್ನು ತಿನ್ನುವ ಪದ್ಧತಿ ಇನ್ನೂ ಚೆನ್ನ. ನಮ್ಮಲ್ಲಿ ವೀಳ್ಯದೆಲೆಯಲ್ಲಿ ಬೀಡಾ ಕಟ್ಟುವಂತೆ, ಮೊದಲು ಲೆಟ್ಟೂಸ್ ಎಲೆಯನ್ನು ತೆಗೆದುಕೊಂಡು, ಅದರಲ್ಲಿ ಒಂದೆರಡು ಹಸಿರುಮೆಣಸಿನಕಾಯಿ ಸೀಳುಗಳನ್ನಿರಿಸಿ, ಅದರ ಜತೆಗೆ ಸೋಯಾ ತಿಂಡಿ ಇಟ್ಟು ಮಡಚಿ ತಿನ್ನುವುದು.










ರುಚಿ ಸುಮಾರಾಗಿತ್ತು. ಹಸಿರುಮೆಣಸಿನಕಾಯಿ ಖಾರವೇ ಇರಲಿಲ್ಲ. ಸೋಯ ಕೇಕ್ ನಂತೆ ಇದ್ದ ತಿಂಡಿಗೆ ತೀರಾ ಕಡಿಮೆ ಉಪ್ಪು ಹಾಕಿದ್ದರು. ಒಟ್ಟಿನಲ್ಲಿ ಎಲ್ಲವೂ ಸೇರಿ ಸಪ್ಪೆ. ತಿಂಡಿಯ ರುಚಿಗಿಂತಲೂ ಅದರ ಹೊಸತನಕ್ಕೆ ಮಾರುಹೋಗಿ ೩-೪ ಸುಶಿ ತಿಂದೆ. ನಾನು ಗಮನಿಸಿದಂತೆ ಚೀನಿಯರು ಅತಿಥಿ ಸತ್ಕಾರಕ್ಕೆ ಆದ್ಯತೆ ಕೊಡುತ್ತಾರೆ. ಸುಶಿ ತಿನ್ನುವ ನನ್ನ ಸಡಗರ ನೋಡಿ ಚೀನಾದ ಸಹೋದ್ಯೋಗಿಗಳಿಗೂ ಖುಷಿಯಾಯಿತು.


ಭಾರತ ಹಾಗೂ ಚೀನಾದ ಅಡುಗೆಯ ವೈವಿಧ್ಯತೆಗಳನ್ನು ಚರ್ಚಿಸುತ್ತಾ, ಇನ್ನೂ ಬಗೆಬಗೆಯ ಚೈನೀಸ್ ಅಡುಗೆಗಳನ್ನು ಸವಿದೆ.




Wednesday, February 22, 2012

ಯೂಥ್ ಗಳೊಡನೆ ಸಾಥ್.....ಮಹಾದೇವಪುರಕ್ಕೆ ಸೈಕಲ್ ಜಾಥಾ


ಕಳೆದ ಭಾನುವಾರ, ಮೈಸೂರಿನ ಯೂಥ್ ಹಾಸ್ಟೆಲ್ ಅಸೋಸಿಯೇಷನ್ ನವರು, ಸುಮಾರು ೩೦ ಕಿ.ಮಿ. ದೂರದಲ್ಲಿರುವ ಮಹದೇಪುರಕ್ಕೆ ಸೈಕಲ್ ಜಾಥಾ ಏರ್ಪಡಿಸಿದ್ದರು.

ಕಾವೇರಿ ನದಿಯ ತೀರದಲ್ಲಿರುವ ಹಚ್ಚ ಹಸುರಿನ ಮಹಾದೇವಪುರಕ್ಕೆ ಕೆಲವು ವರುಷಗಳ ಹಿಂದೆ ಹೋಗಿದ್ದೆ. ಸುಂದರವಾದ ಈ ಹಳ್ಳಿಯಲ್ಲಿ ಕನ್ನಡ ಚಲನಚಿತ್ರಗಳ ಛಾಯಾಗ್ರಹಣ ನಡೆಯುತ್ತದೆ. ಹಾಗಾಗಿ, ನನಗೆ ಸೈಕಲ್ ಚಲಾಯಿಸುವ ಧೈರ್ಯ ಇಲ್ಲದಿದ್ದರೂ, ಹಳ್ಳಿಗೆ ಹೋಗುವ ಉದ್ದೇಶದಿಂದ ನಾನೂ ಭಾಗವಹಿಸಿದೆ. ನಮ್ಮ ಬಡಾವಣೆಯ ಸಮಾನಾಸಕ್ತರೂ ಜತೆಯಾದರು. ಐದು ಜನರ ನಮ್ಮ ತಂಡ ಕಾರಿನಲ್ಲಿ ಮಹಾದೇವಪುರಕ್ಕೆ ಹೊರಟಿತು.ಶ್ರೀಮತಿ ಉಷಾ ಅವರ ಹುಮ್ಮಸ್ಸಿನ ಕಾರು ಚಾಲನೆ ಯಲ್ಲಿ ರಸ್ತೆ ಮಧ್ಯದ ಗುಂಡಿಗಳನ್ನು ದಾಟುತ್ತಾ ಸುಮಾರು ೧೦ ಕಿ.ಮಿ. ಕ್ರಮಿಸಿರಬಹುದು. ಅಷ್ಟರಲ್ಲಿ  ನಮ್ಮಿಂದ ಮೊದಲು ಹೊರಟಿದ್ದ ಸೈಕಲ್ ಜಾಥಾ ತಂಡ ಕಾಣಿಸಿತು.


ಸೈಕಲ್ ಜಾಥಾ ದ ಮುಂಚೂಣಿಯಲ್ಲಿದ್ದ ಶ್ರೀ.ಸೋಮಶೇಖರ್ ಅವರು ಹಿರಿಯ ನಾಗರಿಕರಂತೆ ಕಾಣಿಸುತ್ತಿದ್ದರೂ, ಸೈಕಲ್ ಸವಾರಿಯಲ್ಲಿ ದಿಗ್ಗಜರು. ಹಲವಾರು ಪ್ರಶಸ್ತಿ- ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.









ಅಲ್ಲಲ್ಲಿ ತುಸು ವಿಶ್ರಾಂತಿ ಪಡೆದು ಸೈಕಲ್ ಸವಾರರು ಮಹಾದೇವಪುರಕ್ಕೆ ತಲಪುವಾಗ ಸುಮಾರು ೧೧.೩೦ ಗಂಟೆಯಾಗಿತ್ತು.

ಪುಟ್ಟ ತೆಪ್ಪಗಳಲ್ಲಿ ಕುಳಿತು ಕಾವೇರಿ ನದಿಯಲ್ಲಿ ಒಂದು ಸುತ್ತು ಬಂದಾಯಿತು. ತಂಪಾದ ಗಾಳಿಯನ್ನು ಆಸ್ವಾದಿಸುತ್ತಾ, ಫೊಟೊ ಕ್ಲಿಕ್ಕಿಸುತ್ತಾ ಇರುವಷ್ಟರಲ್ಲಿ ಇನ್ನೊಂದು ಕಾರಿನಲ್ಲಿ ಬಂದ ’ಯೂಥ್’ ಬಳಗ ಸವಿಯಾದ ಕಲ್ಲಂಗಡಿ ಹಣ್ಣು ಹಾಗೂ ಊಟದ ವ್ಯವಸ್ಥೆ ಮಾಡಿತು.

ನದಿದಡದಲ್ಲಿ ಕುಳಿತು ಅಥವಾ ನಿಂತುಕೊಂಡು  ಪಲಾವ್, ಪಚಡಿ, ಮೊಸರನ್ನ, ಉಪ್ಪಿನಕಾಯಿಯ ಊಟವನ್ನು ಸವಿದೆವು. ಅನಂತರ ಅಲ್ಲಿಯೇ ಸ್ವಲ್ಪ ದೂರದಲ್ಲಿರುವ ಪುಟ್ಟ ಅಣೆಕಟ್ಟಿಗೆ (ರಾಮಸ್ವಾಮಿ ಅಣೆಕಟ್ಟು)  ಹೋದೆವು. ಇಲ್ಲಿ ನೀರು ಶುಭ್ರವಾಗಿತ್ತು, ಹಾಗೂ ನೀರಿನಲ್ಲಿ ಈಜಲು- ತೇಲಲು ಬೇಕಾಗುವ ಪರಿಕರಗಳನ್ನು ಯೂಥ್ ಬಳಗ ವ್ಯವಸ್ಥೆ ಮಾಡಿತ್ತು. ಜನ ಜಂಗುಳಿಯೂ ಇದ್ದಿರಲಿಲ್ಲ. ಹಾಗಾಗಿ, ನೀರಿನಲ್ಲಿ ಆಡಲು ಶುರುಹಚ್ಚಿದವರಿಗೆ ಸಮಯದ ಪರಿವೆಯೇ ಇದ್ದಂತಿರಲಿಲ್ಲ.

ಜೀವ ರಕ್ಷಕ ಜಾಕೆಟ್ ಹಾಕಿ ನೀರಿನಲ್ಲಿ ತೇಲಿದವರು ಕೆಲವರು, ರಬ್ಬರ್ ಟಯರ್ ಮೂಲಕ ಈಜಿದವರು ಇನ್ನು ಕೆಲವರು, ನೀರಿನಲ್ಲಿ ಪದ್ಮಾಸನ ಹಾಕಿ ಜಾಣ್ಮೆ ಮೆರೆದವರೊಬ್ಬರು....ಪರಸ್ಪರ ನೀರೆರಚಾಡಿ ಕೀಟಲೆ ಮಾಡುತ್ತಿದ್ದವರು ಕೆಲವರು.....ಇವರೆಲ್ಲರ ಸಡಗರವನ್ನು ನೋಡುತ್ತಾ, ನೀರಿಗೆ ಇಳಿಯದೆಯೇ ಸಂತೊಷಿಸುತಿದ್ದ ನಾನು. ಹೀಗಿತ್ತು ನಮ್ಮ ಯೂಥ್ ತಂಡ.

                                                                          

ಸೈಕಲ್ ಜಾಥಾ ಅಂದಾಗ, ನಾನು ಶಾಲಾ-ಕಾಲೇಜಿಗೆ ಹೋಗುವ ವಯಸ್ಸಿನ ಯೂಥ್ ತಂಡವನ್ನು ನಿರೀಕ್ಷಿಸಿದ್ದೆ. ಆದರೆ ಅಲ್ಲಿ ಭಾಗವಹಿಸಿದ್ದ ೧೮ ಮಂದಿಯಲ್ಲಿ ಹುಡುಗರ ಜತೆಗೆ, ನಿವೃತ್ತರೂ  ಇದ್ದರು, ಒಬ್ಬ ಮಹಿಳೆಯೂ ಇದ್ದರು. ಎಲ್ಲರೂ ಇಲ್ಲಿ   ’ಯೂಥ್’. ವಿರಾಮದ ವೇಳೆಯನ್ನು ಇಷ್ಟೊಂದು ಲವಲವಿಕೆ ಹಾಗೂ  ಚಟುವಟಿಕೆಯಿಂದ ಸಂಪನ್ನಗೊಳಿಸುವ ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಎನಿಸಿತು.






Tuesday, January 10, 2012

ಕಟ್ಮಂಡು ಕಣಿವೆಯಲ್ಲಿ...ನಮೋ ಪಶುಪತಿನಾಥ!


೨೦೧೧ ರ ಡಿಸೆಂಬರ್ ೧೯-೨೩ ರ ವರೆಗೆ ನಮ್ಮ ವಾರ್ಷಿಕ  ಸಭೆ ನೇಪಾಳದ ಕಟ್ಮಂಡುವಿನಲ್ಲಿ ಜರಗಿತು.   ಹಿಮಾಲಯದ ಮಡಿಲಿನಲ್ಲಿರುವ ನೇಪಾಳ ನಿಸರ್ಗ ಸಿರಿಯನ್ನು ಹೊಂದಿದೆ. ಡಿಸೆಂಬರ್ ನ ಚಳಿ ನಡುಕ ಹುಟ್ಟಿಸುತ್ತಿದ್ದರೂ, ಸಂಜೆ ನಗರ ಸುತ್ತಲು ನಮ್ಮ ತಂಡ ಅಣಿಯಾಗುತ್ತಿತ್ತು.

ಕಟ್ಮಂಡುವಿನ ಪಶುಪತಿನಾಥ ದೇವಸ್ಥಾನವು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳ. ಬಾಗ್ಮತಿ ನದಿ ದಂಡೆಯ ಮೇಲೆ ಇರುವ ಈ  ದೇವಸ್ಥಾನವು ಸುಮಾರು ಕ್ರಿ.ಶ. ೪೦೦ ಆಸುಪಾಸಿನಲ್ಲಿ ಕಟ್ಟಲ್ಪಟ್ಟಿತು ಎಂಬ ನಂಬಿಕೆ. ನೇಪಾಳದ 'ಲಿಂಚ್ಚಾವಿ' ಮನೆತನದ ದೊರೆಯಾದ  'ಸುಪಾಸ್ ಪಡೆವ’ ನ ಕಾಲದಲ್ಲಿ ಇದನ್ನು ಕಟ್ಟಲಾಯಿತು.

ದಂತಕಥೆಗಳ ಪ್ರಕಾರ ಒಮ್ಮೆ ಶಿವನು ಕೃಷ್ಣ ಮೃಗದ ರೂಪ ತಾಳಿ ಬಾಗ್ಮತಿ ನದೀ ತೀರದಲ್ಲಿ ವಿಹರಿಸುತ್ತಿದ್ದನು. ಅವನು ತನ್ನ ದೈವರೂಪಕ್ಕೆ  ಮರಳಿ ತಮ್ಮನ್ನು ಕಾಪಾಡಾಬೇಕೆಂಬ ಹಂಬಲದಿಂದ ದೇವತೆಗಳು ಬೆಂಬೆತ್ತಿದರು. ದೇವತೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೃಷ್ಣ ಮೃಗ ರೂಪಿಯಾದ ಶಿವನು ಓಡಿದಾಗ  ಮೃಗದ  ಒಂದು ಕೋಡು ಮುರಿದು ಬಿತ್ತು. ಅದು  ಪಶುಪತಿನಾಥ ಶಿವಲಿಂಗವಾಯಿತು.  ಕಾಲಾನಂತರದಲ್ಲಿ  ದನಗಾಹಿಯೊಬ್ಬ  ತನ್ನ ಹಸುವೊಂದು, ಭೂಮಿಗೆ ಹಾಲು ಸುರಿಸುವುದನ್ನು ನೋಡಿ ಅಚ್ಚರಿಗೊಂಡು ಭೂಮಿಯನ್ನು ಅಗೆದಾಗ ಅಲ್ಲಿ ಶಿವಲಿಂಗ ದೊರಕಿತು. ಈ ಜಾಗದಲ್ಲಿ, ಇಂದಿನ ಪಶುಪತಿನಾಥ ದೇವಾಲಯವಿದೆ.    

ನಾವು ಅಲ್ಲಿಗೆ ತಲಪಿದಾಗ ತಾಪಮಾನ  ೨-೩ ಡಿಗ್ರಿ ಇದ್ದಿರಬಹುದು. ಅಂಥಹ ಚಳಿಯಲ್ಲಿ  ಬರಿಗಾಲಿನಲ್ಲಿ ದೇವಸ್ಥಾನದ  ಒಳ ಹೊಕ್ಕೆವು. ಅಲ್ಲಿ ಛಾಯಾಗ್ರಹಣ ನಿಷಿದ್ಧವಾಗಿತ್ತು. ಅಷ್ಟಾಗಿ ಜನ-ಜಂಗುಳಿಯಿದ್ದಿರಲಿಲ್ಲ, ಹಾಗಾಗಿ ನಮಗೆ ಅನುಕೂಲವಾಯಿತು.

ಸುತ್ತಲೂ ಮರದ ಶಿಲ್ಪದಿಂದ ಕೂಡಿದ ಪ್ರಾಂಗಣ. ಗರ್ಭಗುಡಿಗೆ ನಾಲ್ಕು ಬಾಗಿಲುಗಳು. ಇಲ್ಲಿ ಶಿವಲಿಂಗಕ್ಕೆ ನಾಲ್ಕು ಮುಖಗಳು.  ಪ್ರದಕ್ಷಿಣಾಕಾರವಾಗಿ ಸಾಗುವಾಗ, ನಾಲ್ಕೂ ಬಾಗಿಲುಗಳಿಂದ,  ತೀರಾ   ಸನಿಹದಿಂದ ಶಿವಲಿಂಗವನ್ನು ನೋಡಲು  ಸಾಧ್ಯವಾಗುತ್ತದೆ.

ಬಹುಶ:  ಅಲ್ಲಿ ಅರ್ಚನೆ ಚೀಟಿ ಮಾಡಿಸುವ  ಪದ್ಧತಿ ಇಲ್ಲ , ಅಥವಾ  ಇದ್ದರೂ ನಮಗೆ ಗೊತ್ತಾಗಲಿಲ್ಲ . ನಮ್ಮ  ತಂಡ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿದ ಅರ್ಚಕರು  ಕನ್ನಡದಲ್ಲಿ ಪ್ರತಿಕ್ರಿಯಿಸಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಯವೆಂದು ಗೊತ್ತಾಯಿತು. ಪಶುಪತಿನಾಥನ ಸನ್ನಿಧಿಯಲ್ಲಿ ಪೂಜೆ ಮಾಡುವ ಅಧಿಕಾರ ಅವರಿಗೆ ತಲೆತಲಾಂತರದಿಂದ, ಬಂದುದಂತೆ.

ಅವರ ವೇಷ-ಭೂಷಣವೂ ವಿಭಿನ್ನವಾಗಿತ್ತು. ಅರಶಿನ  ಬಣ್ಣದ  ಪಂಚೆಯುಟ್ಟು, ಅದೇ ಬಣ್ಣದ ಉತ್ತರೀಯವನ್ನು  ತಲೆಗೂ ಹೊದ್ದು, ರುದ್ರಾಕ್ಷಿ ಮಾಲೆಯನ್ನು ತಲೆಗೆ ’ರಿಂಗ್’ ನಂತೆ ಸುತ್ತಿದ್ದರು. ಕತ್ತಿಗೆ ರುದ್ರಾಕ್ಷಿ ಹಾರ. ಕೈಗಳಿಗೂ ರುದ್ಕ್ರಾಕ್ಷಿ ಹಾರದ ’ಬ್ರೇಸ್ ಲೆಟ್’. ಶಂಕರಾಚಾರ್ಯನ್ನೂ, ಬೌದ್ಧರ ಲಾಮಾರನ್ನೂ ಏಕಕಾಲಕ್ಕೆ ನೆನಪಾಯಿತು.

ಪೂಜೆಯ ಆಚರಣೆಯೂ ವಿಭಿನ್ನವಾಗಿತ್ತು.  ಹಾಲು ತುಂಬಿಸಿದ್ದ ಒಂದು  ಬೆಳ್ಳಿಯ ಚೊಂಬನ್ನು ನಮಗೆ ಸ್ಪರ್ಶಿಸಲು  ಹೇಳಿದರು. ನಮ್ಮ ಹೆಸರು-ಗೋತ್ರವನ್ನೂ ಕೇಳಿ ,  ತಾವು ಉಚ್ಛರಿಸಿದರು. ಆಮೇಲೆ ಹಾಲನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಿ, ನಮಗೆ ಗಂಧ ಪ್ರಸಾದ, ಕಲ್ಲು ಸಕ್ಕರೆ ಕೊಟ್ಟರು. ಜತೆಗೆ, ಶಿವಲಿಂಗದ ಮೇಲೆ ಶೋಭಿಸುತ್ತಿದ್ದ ಒಂದು ರುದ್ರಾಕ್ಷಿ  ಹಾರವನ್ನು ನಮ್ಮ ಕೊರಳಿಗೆ ಆಶೀರ್ವಾದಪೂರ್ವಕವಾಗಿ ಹಾಕಿದರು. ಅನಿರೀಕ್ಷಿತವಾಗಿ,  ಪಶುಪತಿನಾಥನ  ವಿಗ್ರಹದಲ್ಲಿ ರಾರಾಜಿಸುತ್ತಿದ್ದ ರುದ್ರಾಕ್ಷಿ ಹಾರ ನನ್ನ ಕೊರಳಿಗೆ ಬಿದ್ದಾಗ ಧನ್ಯತಾ ಭಾವ ಮೂಡಿತು.





ಪಶುಪತಿನಾಥ ದೇವಾಲಯದ ಇನ್ನೊಂದು ಆಕರ್ಷಣೆ  ೫೦೧ ಶಿವಲಿಂಗಗಳಿಗೆ ಪ್ರದಕ್ಷಿಣೆ ಬರುವುದು. ಒಂದು ಆವರಣದಲ್ಲಿ, ೫೦೧ ಶಿವಲಿಂಗಗಳನ್ನು ಸಾಲಾಗಿ  ಜೋಡಿಸಿದ್ದಾರೆ. ಭಕ್ತರು ’ಓಂ ನಮ: ಶಿವಾಯ’ ಎಂದು ಸ್ತುತಿಸುತ್ತಾ, ಪ್ರತಿಯೊಂದು ಶಿವಲಿಂಗವನ್ನೂ  ಸ್ಪರ್ಶಿಸುತ್ತಾ, ಸಾಲಾಗಿ ಹೋಗುವರು. ಅಲ್ಲಿ  ಕೆಲವು ಸಾಧುಗಳು ಕುಳಿತಿದ್ದರು.  ಭಕ್ತರ ಹಣೆಗೆ  ಅರಶಿನ ಅಥವಾ ಕುಂಕುಮದ ಬೊಟ್ಟು ಇಡುವವರು ಇಬ್ಬರಿದ್ದರು. ರುದ್ರಾಕ್ಷಿಯನ್ನು  ಹಂಚಿದವರೊಬ್ಬರು. ಅರಶಿನ- ಕುಂಕುಮದ ದಾರವನ್ನು ಕೈಗೆ ಕಟ್ಟಿದವರು ಇನ್ನೊಬ್ಬರು.

ಈ ಸಾಧುಗಳು ತಮ್ಮ ಮುಂದೆ ಇರಿಸಲಾದ ತಟ್ಟೆ ಗೆ ದಕ್ಷಿಣೆ ಹಾಕಲು ಅಕಸ್ಮಾತ್ತಾಗಿ ನಾವು ಮರೆತರೆ, ಗದರುವ ಧ್ವನಿಯಲ್ಲಿ  ನಮ್ಮ ಗಮನ ಸೆಳೆಯುತ್ತಿದ್ದರು!




ದೇವಸ್ಥಾನದ ಸನಿಹದಲ್ಲಿ ಹರಿಯುವ  ಬಾಗ್ಮತಿ ನದಿ ತೀರದಲ್ಲಿ, ಹಿಂದುಗಳು ಅಂತ್ಯಕ್ರಿಯೆಯನ್ನು ನಡೆಸುತ್ತಾರೆ ಹಾಗೂ ನದಿ ಕಲುಷಿತಗೊಂಡಿದೆ.


Sunday, January 8, 2012

ಲಾಡೂ...ಇದ ನೀ ನೋಡೂ..


ಹೊಸ ವರುಷದ ಸ್ವಾಗತಕ್ಕೆ ಹಲವಾರು ಸಿದ್ಧತೆಗಳು, ವಿನೂತನ ಆಯಾಮಗಳು... ಒಟ್ಟಾರೆ ಸಂಭ್ರಮ.

ಈ ಬಾರಿ ಜನವರಿ ಒಂದರಂದು, ಮೈಸೂರಿನ ವಿಜಯನಗರದಲ್ಲಿರುವ ಯೋಗನರಸಿಂಹ ಸ್ವಾಮಿಯ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಲಾಡು ಪ್ರಸಾದ ಹಂಚಿದ್ದರು.ತಲಾ ೧೦೦ ಗ್ರಾಂ ಮತ್ತು  ೪೦೦ ಗ್ರಾಂ ತೂಕದ ಲಾಡುಗಳನ್ನು ಸಾಮಾನ್ಯರಿಗೂ, ಒಂದುವರೆ ಕಿಲೋ ತೂಕದ ಲಾಡನ್ನು ಗಣ್ಯರಿಗೂ ವ್ಯವಸ್ಥೆ ಮಾಡಿದ್ದರು.

ಸ್ಥಳೀಯ ಪತ್ರಿಕೆಯ ವರದಿ ಪ್ರಕಾರ ಹೊಸವರುಷದಂದು  ದೇವಸ್ಥಾನದ ವತಿಯಿಂದ ಒಂದು ಲಕ್ಷ ಲಾಡು ತಯಾರಿಸಿದ್ದರು! ಹಾಗೂ ಪ್ರಸಾದವನ್ನು  ಪಡೆಯಲು ದೇವಸ್ಥಾನದಿಂದ ಸುಮಾರು ಒಂದು ಕಿ.ಮೀ. ದೂರದವರೆಗೂ ಜನರ ಸಾಲು, ಮಧ್ಯರಾತ್ರಿ ವರೆಗೂ ಕರಗಿರಲಿಲ್ಲ.

ನಮ್ಮ ಮನೆಯಿಂದ ಆದಿನ ದೇವಸ್ಥಾನಕ್ಕೆ ಯಾರೂ ಹೋಗಿರದಿದ್ದರೂ, ನಾವು   ಯಾರೂ ಗಣ್ಯವ್ಯಕ್ತಿಯಲ್ಲದಿದ್ದರೂ, ಅನಿರೀಕ್ಷಿತವಾಗಿ, ಹಿತೈಷಿಯೊಬ್ಬರ  ಮೂಲಕ ಮರುದಿನ ಪ್ರಸಾದ ಲಭಿಸಿತು. ಇದು ನಿಜವಾಗಲೂ ನಮ್ಮ ಯೋಗ ಹಾಗೂ ಯೋಗನರಸಿಂಹನ ಆಶೀರ್ವಾದ!    



ಪುಟ್ಟದಾದ ಬುಟ್ಟಿಯಲ್ಲಿ, ಮುತ್ತುಗದ ಎಲೆಯ ಹಾಸಿನ ಮೇಲೆ ಮಹಾ ಲಾಡು ಕಂಗೊಳಿಸುತಿತ್ತು.  ಸುಮಾರು ’ಶೋಟ್ ಪುಟ್ ಗೇಮ್’ನ ಭಾರವಾದ ಚೆಂಡನ್ನು ಹೋಲುವ ಈ ಲಾಡು, ರುಚಿಯಲ್ಲೂ ಅದ್ಭುತವಾಗಿತ್ತು.  ದ್ರಾಕ್ಷಿ, ಗೋಡಂಬಿ, ಲವಂಗ, ಏಲಕ್ಕಿ, ಪಚ್ಚ ಕರ್ಪೂರ ಹಾಕಿ ತಯಾರಿಸಲಾಗಿದ್ದ ಲಾಡು ತಿರುಪತಿಯ ಪ್ರಸಾದವನ್ನೂ ಮೀರಿಸುವಂತಿತ್ತು.