ಉದ್ಯೋಗ ನಿಮಿತ್ತ ಕೆಲವೊಮ್ಮೆ ಪರವೂರುಗಳಿಗೆ ಪ್ರವಾಸವಿರುತ್ತದೆ. ಹೀಗೆ ದೊರೆತ ಅವಕಾಶಗಳ ಜೊತೆಗೆ ಅಗಾಗ ಚಾರಣಗಳಲ್ಲಿ ಭಾಗವಹಿಸುತ್ತಾ,ನನ್ನ ಪ್ರಯಾಣದ ಪರಿಧಿಯಲ್ಲಿ ಗಮನಕ್ಕೆ ಬಂದ ಚಿಕ್ಕ-ಪುಟ್ಟ ವಿಚಾರಗಳನ್ನು ತೋಚಿದಂತೆ ಗೀಚಿದ ಬರಹಗಳು 'ಮಾಲಾ-ಅಯನ' ದ ಸಂಪತ್ತು.
Total Pageviews
Thursday, August 22, 2013
Friday, August 16, 2013
Sunday, June 30, 2013
ಕುಂತಿಬೆಟ್ಟವೂ ' ಮದರ್ಸ್ ಡೇ' ಯೂ ..
ಅಮ್ಮಂದಿರಿಗೆ ಶುಭಾಶಯ ಹೇಳಲು ಅಮೇರಿಕಾದಲ್ಲಿ ೧೯೦೮ರಲ್ಲಿ ಆರಂಭವಾದ 'ಮದರ್ಸ್ ಡೇ' ಎಂಬ ಪರಿಕಲ್ಪನೆ ಈಗ ವಿಶ್ವವ್ಯಾಪಿಯಾಗಿದೆ. ಆದರೆ, ಈ ಪರಿಕಲ್ಪನೆ ಮಹಾಭಾರತದ ಕಾಲದಲ್ಲೂ ಇತ್ತೆ? ಯಾಕೆಂದರೆ, ದಂತಕಥೆಯ ಪ್ರಕಾರ ಪಾಂಡವರು ತಮ್ಮ ಅಜ್ನಾತವಾಸದ ಕೆಲವು ದಿನಗಳನ್ನು ಪಾಂಡವಪುರದಲ್ಲಿ ಕಳೆದಿದ್ದರಂತೆ. ತಮ್ಮ ತಾಯಿಯ ಮೇಲಿನ ಪ್ರೀತಿಯಿಂದ ಈ ಬೆಟ್ಟಕ್ಕೆ 'ಕುಂತಿಬೆಟ್ಟ' ವೆಂದು ಹೆಸರಿಟ್ಟರಂತೆ. ಹಾಗಾದರೆ ಮಹಾಭಾರತ ಕಾಲದಲ್ಲಿಯೇ 'ಮದರ್ಸ್ ಡೇ' ಆರಂಭಿಸಿದ ಹೆಗ್ಗಳಿಕೆ, ಪಾಂಡವರಿಗೆ ಸಲ್ಲಬೇಕಲ್ಲವೆ?
ದಂತಕಥೆಯ ಪ್ರಕಾರ ಇದೇ ಊರಲ್ಲಿ, ಭೀಮನು ಬಕಾಸುರನನ್ನು ಸಂಹರಿಸಿದ್ದನಂತೆ. ಬ್ರಿಟಿಷರ ಎದುರು ಹೋರಾಡುತ್ತಿದ್ದ ಟಿಪ್ಪು ಸುಲ್ತಾನ್ ನಿಗೆ ಸಹಾಯ ಮಾಡುವ ಉದ್ದೇಶದಿಂದ ಫ್ರೆಂಚ್ ಸೈನಿಕರು ಇಲ್ಲಿ ಬೀಡು ಬಿಟ್ಟಿದ್ದ ಕಾರಣ ಬ್ರಿಟಿಷರು ಕುಂತಿಬೆಟ್ಟವನ್ನು 'ಫ್ರೆಂಚ್ ರಾಕ್ಸ್' ಎಂದು ಕರೆದರು.
ಕುಂತಿಬೆಟ್ಟಕ್ಕೆ ಹೋಗಲೆಂದು ಮೈಸೂರಿನಿಂದ ಸುಮಾರು ೨೫ ಮಂದಿ ಬೆಳಗ್ಗೆ ಬಸ್ ನಲ್ಲಿ ಹೊರಟು ಪಾಂಡವಪುರ ತಲಪಿದೆವು. ಬಸ್ ನಿಲ್ದಾಣದಿಂದ ೪ ಕಿ.ಮಿ. ದೂರದಲ್ಲಿರುವ ಕುಂತಿಬೆಟ್ಟದ ಪಾದದ ವರೆಗೆ ಕಾಲುದಾರಿಯಲ್ಲಿ ನಡೆದೆವು. ಬೆಟ್ಟದ ಪಾದದಲ್ಲಿ ಸ್ಥಳೀಯ ಶಾಲಾ ಕ್ರೀಡಾಂಗಣ ಇದೆ.ಅಲ್ಲಿ ಬೆಳಗಿನ ಉಪಾಹಾರವಾಗಿ ಉಪ್ಪಿಟ್ಟು-ಮೈಸೂರು ಪಾಕ್ , ಟೀ ಸೇವಿಸಿದೆವು. ಪರಸ್ಪರ ಪರಿಚಯ ಕಾರ್ಯಕ್ರಮದ ನಂತರ ಸುಮಾರು ೧೦೦ ಮೆಟ್ಟಿಲುಗಳನ್ನೇರಿದೆವು.
ಅಲ್ಲಿ ಒಂದು ಪುಟ್ಟ ಗುಡಿಯಿದೆ, ಕೊಳವಿದೆ, ಬಂಡೆಯಲ್ಲಿ ಕೆತ್ತಿದ ಗಣೇಶನ ಮೂರ್ತಿಯಿದೆ. ಆಮೇಲೆ ಸ್ವಲ್ಪ ಕಾಲುದಾರಿಯಲ್ಲಿ, ಹಸಿರಿನ ನಡುವೆ ನಡೆದೆವು. ಮುಂದೆ ಹೋದಂತೆ ಹಲವಾರು ಸಣ್ಣ-ದೊಡ್ಡ-ಬೃಹತ್ ಬಂಡೆಗಳದ್ದೇ ಸಾಮ್ರಾಜ್ಯ. ಎಲ್ಲರೂ ನಿಧಾನವಾಗಿ ಬೆಟ್ಟ ಹತ್ತಿದೆವು,ಕೆಲವು ಕಡೆ ಕಾಲು ಜಾರಿ ಬೀಳುವಂತಾಗುತ್ತಿತ್ತು. ಕೆಲವರು ಸಹಾಯ ಹಸ್ತವನ್ನಿತ್ತರು. ಸುಮಾರು ೧೧.೩೦ ಘಂಟೆಗೆ ಬೆಟ್ಟದ ತುದಿ ತಲಪಿದೆವು. ಇಲ್ಲಿಂದ ಕಾಣುವ ಪ್ರಾಕೃತಿಕ ದೃಶ್ಯ ಮನೋಹರ. ಬೀಸುವ ತಂಗಾಳಿ ಆಯಾಸ ಪರಿಹರಿಸಿತ್ತು. ಬೆಟ್ಟದ ತುದಿಯಲ್ಲಿ ಒಂದು ಕಲ್ಲಿನ ಕಂಭವಿದೆ. ತಂಡದ ಕೆಲವು ಉತ್ಸಾಹಿಗಳು ಕಂಭವನ್ನೇರಿದರು.

ಸ್ವಲ್ಪ ಹೊತ್ತು ಅಲ್ಲಿ ವಿರಮಿಸಿ ಬೆಟ್ಟ ಇಳಿಯತೊಡಗಿದೆವು . ಬೆಟ್ಟ ಹತ್ತುವುದಕ್ಕಿಂತ, ಇಳಿಯುವುದು ಸವಾಲಾಗಿತ್ತು. ಕಾರ್ಯಕ್ರಮದ ಆಯೋಜಕರ ನೇತೃತ್ವದಲ್ಲಿ 'ರಾಕ್ ಕ್ಲೈಂಬಿಂಗ್' ನಡೆಯಿತು. ಅಲ್ಲಲ್ಲಿ ಎದುರಾದ ಸಣ್ಣ-ಪುಟ್ಟ ಬಂಡೆಗಳನ್ನು ನಿರಾಯಾಸವಾಗಿ ಹತ್ತಿ-ಇಳಿದೆವು. ಆದರೆ ಒಂದು ಕಡೆ ಸುಮಾರು ೮ ಅಡಿ ಆಳಕ್ಕೆ ನಾವು ಇಳಿಯಬೇಕಿತ್ತು. ಕೆಲವು ಜಾಣರು ಹಗ್ಗದ ಸಹಾಯವಿಲ್ಲದೆಯೇ ಇಳಿದರು. ಇನ್ನು ಕೆಲವರು ಹಗ್ಗದ ಸಹಾಯದಿಂದ, ಆಯೋಜಕರ ಪ್ರೋತ್ಸಾಹದಿಂದ 'ಟಾಸ್ಕ್' ಪೂರೈಸಿದರು. ತಂಡದಲ್ಲಿದ್ದ ಕೆಲವು ಮಕ್ಕಳು ಈ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು.
ಇನ್ನು ಮುಂದೆ ನಡೆದಾಗ ಎದುರಾದದ್ದು ದೊಡ್ಡದಾದ ಸ್ವಾಭಾವಿಕ ಜಾರುಬಂಡೆ. ಬಹಳಷ್ಟು ಜನ ವಯೋಬೇಧ ಮರೆತು ಜಾರುಬಂಡಯಲ್ಲಿ ಜಾರಿದರು. ಅಷ್ಟರಲ್ಲಿ ಮಧ್ಯಾಹ್ನವಾಗಿತ್ತು.
ದಂತಕಥೆಯ ಪ್ರಕಾರ ಇದೇ ಊರಲ್ಲಿ, ಭೀಮನು ಬಕಾಸುರನನ್ನು ಸಂಹರಿಸಿದ್ದನಂತೆ. ಬ್ರಿಟಿಷರ ಎದುರು ಹೋರಾಡುತ್ತಿದ್ದ ಟಿಪ್ಪು ಸುಲ್ತಾನ್ ನಿಗೆ ಸಹಾಯ ಮಾಡುವ ಉದ್ದೇಶದಿಂದ ಫ್ರೆಂಚ್ ಸೈನಿಕರು ಇಲ್ಲಿ ಬೀಡು ಬಿಟ್ಟಿದ್ದ ಕಾರಣ ಬ್ರಿಟಿಷರು ಕುಂತಿಬೆಟ್ಟವನ್ನು 'ಫ್ರೆಂಚ್ ರಾಕ್ಸ್' ಎಂದು ಕರೆದರು.
ಅಲ್ಲಿ ಒಂದು ಪುಟ್ಟ ಗುಡಿಯಿದೆ, ಕೊಳವಿದೆ, ಬಂಡೆಯಲ್ಲಿ ಕೆತ್ತಿದ ಗಣೇಶನ ಮೂರ್ತಿಯಿದೆ. ಆಮೇಲೆ ಸ್ವಲ್ಪ ಕಾಲುದಾರಿಯಲ್ಲಿ, ಹಸಿರಿನ ನಡುವೆ ನಡೆದೆವು. ಮುಂದೆ ಹೋದಂತೆ ಹಲವಾರು ಸಣ್ಣ-ದೊಡ್ಡ-ಬೃಹತ್ ಬಂಡೆಗಳದ್ದೇ ಸಾಮ್ರಾಜ್ಯ. ಎಲ್ಲರೂ ನಿಧಾನವಾಗಿ ಬೆಟ್ಟ ಹತ್ತಿದೆವು,ಕೆಲವು ಕಡೆ ಕಾಲು ಜಾರಿ ಬೀಳುವಂತಾಗುತ್ತಿತ್ತು. ಕೆಲವರು ಸಹಾಯ ಹಸ್ತವನ್ನಿತ್ತರು. ಸುಮಾರು ೧೧.೩೦ ಘಂಟೆಗೆ ಬೆಟ್ಟದ ತುದಿ ತಲಪಿದೆವು. ಇಲ್ಲಿಂದ ಕಾಣುವ ಪ್ರಾಕೃತಿಕ ದೃಶ್ಯ ಮನೋಹರ. ಬೀಸುವ ತಂಗಾಳಿ ಆಯಾಸ ಪರಿಹರಿಸಿತ್ತು. ಬೆಟ್ಟದ ತುದಿಯಲ್ಲಿ ಒಂದು ಕಲ್ಲಿನ ಕಂಭವಿದೆ. ತಂಡದ ಕೆಲವು ಉತ್ಸಾಹಿಗಳು ಕಂಭವನ್ನೇರಿದರು.

ಸ್ವಲ್ಪ ಹೊತ್ತು ಅಲ್ಲಿ ವಿರಮಿಸಿ ಬೆಟ್ಟ ಇಳಿಯತೊಡಗಿದೆವು . ಬೆಟ್ಟ ಹತ್ತುವುದಕ್ಕಿಂತ, ಇಳಿಯುವುದು ಸವಾಲಾಗಿತ್ತು. ಕಾರ್ಯಕ್ರಮದ ಆಯೋಜಕರ ನೇತೃತ್ವದಲ್ಲಿ 'ರಾಕ್ ಕ್ಲೈಂಬಿಂಗ್' ನಡೆಯಿತು. ಅಲ್ಲಲ್ಲಿ ಎದುರಾದ ಸಣ್ಣ-ಪುಟ್ಟ ಬಂಡೆಗಳನ್ನು ನಿರಾಯಾಸವಾಗಿ ಹತ್ತಿ-ಇಳಿದೆವು. ಆದರೆ ಒಂದು ಕಡೆ ಸುಮಾರು ೮ ಅಡಿ ಆಳಕ್ಕೆ ನಾವು ಇಳಿಯಬೇಕಿತ್ತು. ಕೆಲವು ಜಾಣರು ಹಗ್ಗದ ಸಹಾಯವಿಲ್ಲದೆಯೇ ಇಳಿದರು. ಇನ್ನು ಕೆಲವರು ಹಗ್ಗದ ಸಹಾಯದಿಂದ, ಆಯೋಜಕರ ಪ್ರೋತ್ಸಾಹದಿಂದ 'ಟಾಸ್ಕ್' ಪೂರೈಸಿದರು. ತಂಡದಲ್ಲಿದ್ದ ಕೆಲವು ಮಕ್ಕಳು ಈ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು.
ಇನ್ನು ಮುಂದೆ ನಡೆದಾಗ ಎದುರಾದದ್ದು ದೊಡ್ಡದಾದ ಸ್ವಾಭಾವಿಕ ಜಾರುಬಂಡೆ. ಬಹಳಷ್ಟು ಜನ ವಯೋಬೇಧ ಮರೆತು ಜಾರುಬಂಡಯಲ್ಲಿ ಜಾರಿದರು. ಅಷ್ಟರಲ್ಲಿ ಮಧ್ಯಾಹ್ನವಾಗಿತ್ತು.
ಸರಳವಾಗಿ ಒಂದು ದಿನದ ಪ್ರಕೃತಿಯ ಒಡನಾಟದಲ್ಲಿ ಕಳೆಯಲು ಕುಂತಿಬೆಟ್ಟ ಉತ್ತಮ ತಾಣ. ಅಲ್ಲಿ ಊಟ -ತಿಂಡಿ-ನೀರು ಒದಗಿಸುವ ಹೋಟೆಲ್ ಇಲ್ಲದಿರುವುದರಿಂದ ನಮ್ಮದೇ ಏರ್ಪಾಡು ಮಾಡಿಕೊಳ್ಳಬೇಕು ಅಥವಾ ಹತ್ತಿರದ ಪಾಂಡವಪುರಕ್ಕೆ ಹೋಗಬೇಕು. ಊಟ ಮುಗಿಸಿ, ಅಂದಿನ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದೆವು.
Saturday, June 22, 2013
ಶೋಲಿಂಗೂರ್
ಮೇ ೨೫ ರಂದು, ರಾತ್ರಿ ೮ ಗಂಟೆಗೆ ವೈ.ಎಚ್.ಎ.ಐ ಗಂಗೋತ್ರಿ ಘಟಕದ ೨೩ ಮಂದಿ ಮೈಸೂರಿನ ರೈಲ್ವೇ ಸ್ಟೇಷನ್ ನಲ್ಲಿ ಸೇರಿದ್ದೆವು. ನೆರೆಯ ತಮಿಳುನಾಡಿನ ಅರಕ್ಕೋಣಂ ಸಮೀಪದಲ್ಲಿರುವ ಶೋಲಿಂಗೂರ್ ಹಾಗೂ ತಿರುತ್ತನಿಯ ಬೆಟ್ಟಗಳಿಗೆ ಚಾರಣ ಮಾಡುವುದು ನಮ್ಮ ಗುರಿಯಾಗಿತ್ತು.
ಮರುದಿನ ಮಂಜಾನೆ, ಅರಕ್ಕೋಣಂ ತಲಪಿದೆವು. ಅಲ್ಲಿನ ರೈಲ್ವೇ ಸ್ಟೆಷನ್ ನಿಂದ ಒಂದು ವ್ಯಾನ್ ನಲ್ಲಿ ಪ್ರಯಾಣಿಸಿ, ಸ್ವಲ್ಪ ದೂರದಲ್ಲಿದ್ದ ಕಲ್ಯಾಣಮಂಟಪವೊಂದರಲ್ಲಿ ವಿಶ್ರಾಂತಿ ಪಡೆದೆವು. ಅಲ್ಲಿ ಸ್ನಾನ ಮುಗಿಸಿ,ಪಕ್ಕದ ಹೋಟೆಲ್ ಒಂದರಲ್ಲಿ ಬೆಳಗಿನ ಉಪಾಹಾರ ಸೇವಿಸಿ ಎದುರುಗಡೆ ಕಾಣಿಸುತ್ತಿದ್ದ ಶೋಲಿಂಗೂರ್ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದೆವು. ದಂತಕಥೆಯ ಪ್ರಕಾರ, ಚೋಳ ರಾಜನಿಗೆ ಇಲ್ಲಿ ಶಿವಲಿಂಗ ದೊರಕಿತಂತೆ. ಇದು ಮುಂದೆ ಆಡುಭಾಷೆಯಲ್ಲಿ 'ಶೋಲಿಂಗೂರ್' ಎಂದು ಕರೆಯಲ್ಪಟ್ಟಿತು. ೧೭೮೧ ರಲ್ಲಿ ಬ್ರಿಟಿಷ್ ಮತ್ತು ಹೈದರ್ ಆಲಿ ನಡುವೆ ಇಲ್ಲಿ ನಡೆದ ಯುದ್ಧ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.
ಸ್ಥಳ ಪುರಾಣದ ಪ್ರಕಾರ, ವಿಶ್ವಾಮಿತ್ರರು ಈ ಸ್ಥಳದಲ್ಲಿ ವಿಷ್ಣುವನ್ನು ನೆನೆದು ಅರ್ಧ ಗಂಟೆಗಳ (ಕಟಿಕೈ) ಕಾಲ ತಪಸ್ಸು ಮಾಡಿ ಬ್ರಹ್ಮರ್ಷಿ ಪದವಿ ಗಳಿಸಿದರಂತೆ. ಹಾಗಾಗಿ ಈ ಸ್ಥಳಕ್ಕೆ ಘಟಿಕಾಚಲ ( ಕಟಿಕಾಚಲಂ)ಎಂಬ ಹೆಸರೂ ಇದೆ.ಇಲ್ಲಿ ಕೇವಲ ಅರ್ಧ ಗಂಟೆ ಕಾಲ ಕಳೆದರೆ ಜನನ-ಮರ್‍ಅಣದ ವರ್ತುಲದಿಂದ ಹೊರಬಂದು ಮೋಕ್ಷ ಲಭಿಸಿತ್ತದೆಯೆಂಬ ನಂಬಿಕೆ. ಮಾನಸಿಕ ವಿಕಲತೆ ಉಳ್ಳವರಿಗೂ ಈ ಕ್ಷೇತ್ರದಲ್ಲಿ ಗುಣಮುಖವಾಗುತ್ತದೆಯೆಂಬ ನಂಬಿಕೆಯೂ ಇದೆ. ರಾಜನೊಬ್ಬ ಬೇಟೆಯಾಡುತ್ತಿರುವಾಗ ಗಾಯಗೊಂಡ ಜಿಂಕೆಯು ದೈವಿಕ ಪ್ರಕಾಶ ಹೊಮ್ಮಿಸುವುದನ್ನು ಕಂಡನಂತೆ. ಇದು ಆತನು ಅಹಿಂಸಾ ಪಥವನ್ನು ಅನುಸರಿಸುವಂತೆ ಮಾರ್ಗದರ್ಶನ ಮಾಡಿತಂತೆ. ಸಾಕ್ಷಾತ್ ಆಂಜನೇಯನೇ ಜಿಂಕೆಯ ರೂಪದಲ್ಲಿ ಬಂದಿದ್ದನಂತೆ.
ಇನ್ನೊಂದು ದಂತಕಥೆಯ ಪ್ರಕಾರ, ಶ್ರೀರಾಮನು ತನ್ನ ಅವತಾರ ಸಮಾಪ್ತಿ ಮಾಡಲೆಂದು ಇಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ಆಂಜನೇಯನೂ ಅನುಸರಿಸಿದ್ದನಂತೆ. ಆದರೆ ಇಲ್ಲಿಗೆ ಬಂದ ಶ್ರೀರಾಮನಿಗೆ, ತಪಸ್ಸನ್ನು ಮಾಡುತ್ತಿರುವ ಸಪ್ತರ್ಷಿಗಳಿಗೆ ರಾಕ್ಷಸರು ಉಪಟಳ ಕೊಡುತ್ತಿರುವುದು ಕಾಣಿಸಿತು. ಆತನ ಆದೇಶದಂತೆ ಆಂಜನೇಯನು ರಾಕ್ಷಸರನ್ನು ಸಂಹರಿಸಿದನು. ಶ್ರೀರಾಮನು, ಸಪ್ತರ್ಷಿಗಳಿಗೆ ನರಸಿಂಹಾವತಾರದಲ್ಲಿ ದರ್ಶನ ಕೊಟ್ಟನು. ಪಕ್ಕದ ಬೆಟ್ಟದಲ್ಲಿ, ಆಂಜನೇಯನು ಶಂಖ-ಚಕ್ರ ಧಾರಿಯಾಗಿ ನೆಲೆ ನಿಂತನು.
ಸುಮಾರು ೧೩೦೦ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೊದಾಗ ಮುಖ್ಯ ದೇವರಾದ ಯೋಗನರಸಿಂಹನ ದರ್ಶನವಾಗುತ್ತದೆ. ಭಕ್ತರಿಗೆ ಮಳೆ-ಬಿಸಿಲಿನಿಂದಾಗಿ ತೊಂದರೆಯಾಗದಂತೆ ಮೆಟ್ಟಿಲುಗಳ ಮೇಲೆ ಮಾಡು ನಿರ್ಮಿಸಿದ್ದಾರೆ. ಮೈಸೂರಿನಿಂದ ಹೊರಡುವ ಮುನ್ನವೆ ಆಯೋಜಕರು 'ಮೆಟ್ಟಿಲುಗೊಂದರಂತೆ ಕೋತಿಗಳಿವೆ, ನೀರಿನ ಬಾಟಲ್ ಬಿಟ್ಟು ಬೇರೇನೂ ಒಯ್ಯಬೇಡಿ' ಎಂದು ನಮ್ಮನ್ನು ಎಚ್ಚರಿಸಿದ್ದರು. ಇದರ ಪ್ರತ್ಯಕ್ಷ ಅನುಭವ ನಮಗಾಯಿತು. ಇದ್ದಕ್ಕಿಂದಂತೆ ಯಾರೋ ಭಯದಿಂದ ಕಿರುಚಿದರು, ಯಾಕೆಂದರೆ ಅವರ ಮುಡಿಯಲ್ಲಿದ್ದ ಹೂವನ್ನು ಕೋತಿಯೊಂದು ಎಳೆದು ತಿನ್ನುತ್ತಿತ್ತು... ಭಕ್ತರೊಬ್ಬರು ದೇವರಿಗೆ ಅರ್ಪಿಸಲೆಂದು ತಂದಿದ್ದ ಹೂವು-ಹಣ್ಣು ದಾರಿ ಮಧ್ಯದಲ್ಲಿಯೇ ಆಂಜನೇಯ ಸ್ವಾಹಾ ಅಯಿತು...ಯಾರೋ ಕೈ ಜಗ್ಗಿದಂತಾಗಿ ಹಿಂದೆ ನೋಡುವಷ್ಟರಲ್ಲಿ ನೀರಿನ ಬಾಟಲಿಯೂ ಕಪಿ ಪಾಲಾಯಿತು.... ಯಾರೋ ತಂದಿದ್ದ ತುಳಸಿ ಹಾರವೂ ವಾನರ ಪಾಲಾಯಿತು ....ನೀರಿನ ಬಾಟಲಿ ಮುಚ್ಚಳವನ್ನು ತೆರೆದ ಜಾಣಕೋತಿಗೆ ಅದೇಕೋ ನೀರು ಕುಡಿಯಲು ಇನ್ನೂ ಅಭ್ಯಾಸವಿದ್ದಂತಿರಲಿಲ್ಲ..... ಹೀಗೆಲ್ಲಾ ನಮಗೆ ಪುಕ್ಕಟೆ ಭಯ ಮಿಶ್ರಿತ ಮನರಂಜನೆ ಲಭಿಸಿತು.
.
ವಾನರಸೈನ್ಯವನ್ನು ನಿಯಂತ್ರಿಸಲು ಬೆಟ್ಟದ ಪಾದದಲ್ಲಿ ಕೋಲು ಮಾರುವವರೂ ಇದ್ದರು. ಕೆಲವು ಭಕ್ತರು ಪೂಜೆಗಾಗಿ ಹೂವು -ಹಣ್ಣು ತಂದು, ಅವನ್ನು ಕೋತಿಯಿಂದ ರಕ್ಷಿಸಲೆಂದು ಅನಿವಾರ್ಯವಾಗಿ ಕೋಲು ಹಿಡಿದುಕೊಂಡೇ ದೇವರ ದರ್ಶನವನ್ನೂ ಮಾಡುತ್ತಿದ್ದುದು ತಮಾಷೆಯಾಗಿ ಕಾಣಿಸುತ್ತಿತ್ತು.
ಸಾರ್ವಜನಿಕ ಸಾರಿಗೆಯ ಮೂಲಕ ನೆರೆ ರಾಜ್ಯ ಪ್ರವೇಶಿಸಿ, ಒಂದೇ ಹಗಲಿನಲ್ಲಿ ಎರಡು ಬೆಟ್ಟಗಳನ್ನು ಹತ್ತಿ-ಇಳಿದು,ಒಟ್ಟಾರೆಯಾಗಿ ೫ ದೇವಸ್ಥಾನಗಳಿಗೆ ಭೇಟಿ ಕೊಟ್ಟ ಸಂಪನ್ನ ಕಾರ್ಯಕ್ರಮ ಇದು.
Sunday, May 19, 2013
ಕುಮಾರ ಪರ್ವತಕ್ಕೆ ಚಾರಣ
ಎಪ್ರಿಲ್ ೧೩ ಮತ್ತು ೧೪ ರಂದು, ಮೈಸೂರಿನ ಯೂಥ್ ಹಾಸ್ಟೆಲ್ ಸಂಘಟನೆಯ ಘಟಕದ ವತಿಯಿಂದ ಎರಡು ದಿನದ ಚಾರಣ ಕಾರ್ಯಕ್ರಮನ್ನು ಅಯೋಜಿಸಿದ್ದರು. ಮೊದಲನೆಯ ದಿನ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ ಮಲ್ಲಳ್ಳಿ ಜಲಪಾತವನ್ನು ವೀಕ್ಷಿಸಿ, ಮರುದಿನ ಕುಮಾರ ಪರ್ವತಕ್ಕೆ ಚಾರಣ ಮಾಡುವ ಕಾರ್ಯಕ್ರಮವಿತ್ತು.
ಎಪ್ರಿಲ್ ೧೩ರಂದು, ಸುಮಾರು ೫೫ ಜನರಿದ್ದ ನಮ್ಮ ತಂಡವು ಮೈಸೂರು ಬಿಟ್ಟಾಗ ಬೆಳಗ್ಗೆ ೭ ಗಂಟೆ ಆಗಿತ್ತು. ಇಷ್ಟು ಜನರಿದ್ದಾಗ ಬಸ್ಸಿನಲ್ಲಿ ಗಲಾಟೆ ಇರಲೇಬೇಕಲ್ಲವೇ? ಅಂತಾಕ್ಷರಿ ನಡೆಯಿತು. ಹೀಗೆ ಒಂದು ಘಂಟೆ ಪ್ರಯಾಣಿಸಿ ಹುಣಸೂರು ತಲಪಿದೆವು.
ಅಲ್ಲಿ ನಮ್ಮ ಬೆಳಗಿನ ತಿಂಡಿ ತಿಂದು, ಮಡಿಕೇರಿ ಜಿಲ್ಲೆಯ ಸೊಮವಾರಪೇಟೆ ಕಡೆಗೆ ತೆರಳಿದೆವು. ಸಾಮಾನ್ಯವಾಗಿ, ಕೊಡಗು ಜಿಲ್ಲೆಯ ಕಾಫಿ ತೋಟದ ಮಧ್ಯೆ ತಂಪಾದ ಹವೆಯಲ್ಲಿ, ಕಾಫಿ ಹೂವಿನ ಸುವಾಸನೆ-ಸೊಬಗು ನೊಡುತ್ತ ಪ್ರಯಾಣಿಸುವುದು ಬಹಳ ಹಿತಕಾರಿಯಾಗಿರುತ್ತದೆ. ಆದರೆ ಈ ಬಾರಿ ಎಪ್ರಿಲ್ ನಲ್ಲಿ ಇಲ್ಲಿಯೂ ಸೆಕೆ ಇತ್ತು.
ಮಧ್ಯಾಹ್ನದ ಊಟವನ್ನು ಬುತ್ತಿಯಲ್ಲಿ ತುಂಬಿಸಿಕೊಂಡೆವು. ನಮ್ಮ ಬಸ್ ಇದ್ದ ರಸ್ತೆಯಿಂದ ಜಲಪಾತಕ್ಕೆ ಹೊಗಲು ೩ ಕಿ.ಮೀ. ನಡೆದು , ಸುಮಾರು ೩೦೦ ಮೆಟ್ಟಿಲು ಇಳಿಯಬೇಕು. ಮಳೆಗಾಲದಲ್ಲಿ ಇಲ್ಲಿ ಜಲಪಾತ ಭೋರ್ಗರೆಯುವುದಕ್ಕೆ ಕುರುಹಾಗಿ, ಅಲ್ಲಿನ ಕಲ್ಲು ಬಂಡೆಗಳಲ್ಲಿ ನೀರಿನ ಚಲನೆಯ ಗುರುತು ಕಾಣಿಸಿತು. ಮಳೆಗಾಲದಲ್ಲಿ ಅಲ್ಲಿ ಆಕಸ್ಮಿಕ ಅಪಾಯಗಳು ಅಗುವುದರಿಂದ ನೀರಿಗೆ ಇಳಿಯಲು ಅವಕಾಶವಿಲ್ಲ ಎಂದು ಕೇಳಿಪಟ್ಟೆವು. ನಾವು ಹೋಗಿದ್ದಾಗ ಬಹಳ ಕಡಿಮೆ ನೀರಿತ್ತು. ಕೆಲವರು ನೀರಿಗಿಳಿದು ಸಂಭ್ರಮಿಸಿದರು. ನಾವು ಕೆಲವರು ಅತ್ತಿ ಮರದ ಕೆಳಗೆ, ಬಂಡೆಯೊಂದರ ಮೇಲೆ ಕುಳಿತು ವಿಶ್ರಮಿಸಿದೆವು.
ದೇವಸ್ಥಾನದಿಂದ ಸ್ವಲ್ಪ ಮೇಲೆ ಹೋದಾರೆ ದೂರದಲ್ಲಿ ಕುಮಾರ ಪರ್ವತ ಶ್ರೇಣಿ ಹಾಗೂ ಪರ್ವತ ಮತ್ತು ಮೋಡಗಳ ಕಣ್ಣುಮುಚ್ಚಾಲೆ ಆಟ ತುಂಬಾ ಚೆನ್ನಾಗಿ ಕಾಣಿಸುತ್ತದೆ.
ಸಂಜೆ, ದೊಡ್ಡ ಸಂಪಿಗೆ ಮರದ ಕೆಳಗೆ ಎಲ್ಲರೂ ವೃತ್ತಾಕಾರವಾಗಿ ಕುಳಿತೆವು. ಬೆಂಕಿ ಹಾಕದೆಯೇ ಕ್ಯಾಂಪ್ ಫಯರ್ ಉದ್ಘಾಟಿಸಲಾಯಿತು. ಪರಸ್ಪರ ಕುಶಲೋಪರಿ ಮಾತು, ಪ್ರಥಮ ಬಾರಿಗೆ ವೈ.ಎಹ್.ಎ.ಐ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಅಭಿಪ್ರಾಯಗಳು, ಪ್ರತಿಭಾ ಪ್ರದರ್ಶನ ಇತ್ಯಾದಿ ಜರುಗಿದುವು. ರಾತ್ರಿ ಊಟಕ್ಕೆ ಅನ್ನ, ತಿಳಿಸಾರು, ಸಾಂಬಾರು, ಹೆಸರು ಬೇಳೆ ಪಾಯಸ,ಮಜ್ಜಿಗೆ, ಉಪ್ಪಿನಕಾಯಿ, ಬಾಳ್ಕ ಮೆಣಸು ಇದ್ದವು. ಚೆನ್ನಾಗಿ ಉಂಡು, ನಾಳೆ ಬೆಳಗ್ಗೆ ಬೇಗನೆ ಏಳಬೇಕು ಎಂಬ ಅಲೋಚನೆಯಿಂದ ಬೇಗನೆ ವಿಶ್ರಮಿಸಿದೆವು. ಹಗಲು ಸೆಕೆಯಿದ್ದರೂ, ರಾತ್ರಿಯಾಗುತ್ತಿದ್ದಂತೆ ತಂಪಾಯಿತು.
ಮರುದಿನ ಬೆಳಗ್ಗೆ ಬೇಗನೇ ಎದ್ದು ಹೊರಡಲು ಅಣಿಯಾಗುವಷ್ಟರಲ್ಲಿ ೬ ಘಂಟೆ ಆಗಿತ್ತು. ಪರ್ವತ ಶ್ರೇಣಿಯಲ್ಲಿ ಸೂರ್ಯೋದಯ ನೋಡುತ್ತಾ ಬಿಸಿ ಉಪ್ಪಿಟ್ಟು, ಶಾಲ್ಯಾನ್ನ, ಟಿ-ಕಾಫಿ ಸೇವನೆ ಮಾಡಿದೆವು. ಮಧ್ಯಾಹ್ನದ ಊಟಕ್ಕೆ ಬುತ್ತಿ ತುಂಬಿಸಿಕೊಂಡೆವು. ನಮ್ಮ ಮುಂದಿನ ಗುರಿ ದೂರದಲ್ಲಿ ಕಾಣಿಸುವ ಕುಮಾರ ಪರ್ವತ ಆಗಿತ್ತು.
ಆಯೋಜಕರಾದ ಗೋಪಕ್ಕ ಕಾಡಿನಲ್ಲಿ ಚಾರಣ ಮಾಡುವಾಗಿ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನೂ, ಯಾರೂ ತಂಡವನ್ನು ಬಿಟ್ಟು ಹೋಗಿ ದಾರಿ ತಪ್ಪಬಾರದು, ದುಸ್ಸಾಹಸ ಮಾಡಬಾರದು ಇತ್ಯಾದಿ ವಿಚಾರಗಳನ್ನು ಒತ್ತಿ ಹೇಳಿದರು. ಎಲ್ಲರೂ ಶಾಂತ ಮಲ್ಲಿಕಾರ್ಜುನ ದೇವಸ್ಥಾನದಿಂದ ಹೊರಟು ೨ ಕಿ.ಮಿ. ನಡೆದು ಬೀದಳ್ಳಿ ಅರಣ್ಯ ಇಲಾಖೆಯ ಶಾಖೆಗೆ ತಲಪಿದೆವು. ಕುಮಾರ ಪರ್ವತವನ್ನು ಈ ಭಾಗದಿಂದ ಪುಷ್ಪಗಿರಿ ಎಂಬ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ಅರಣ್ಯ ಪ್ರವೇಶಿಸಲು ೨೦೦ ರೂ. ಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕು. ಅಲ್ಲದೇ ಕಾಡಿನಲ್ಲಿ ಏನಾದರೂ ಅಪಾಯವಾದರೆ ನಾವೇ ಹೊಣೆಗಾರರು ಎಂಬ ಬರಹವುಳ್ಳ ಪತ್ರಕ್ಕೆ ಸಹಿ ಹಾಕಬೇಕು. ಚಾರಣಿಗರಿಗಾಗಿ ಕೆಲವು ಸೂಚನೆಗಳಿವೆ. ಸಂಜೆ ೬ ಘಂಟೆಯ ಒಳಗೆ ಹಿಂತಿರುಗಿ ಬರಬೇಕು, ಕಾಡಿನಲ್ಲಿ ಬೆಂಕಿ ಹಾಕಬಾರದು, ನಿಷೇಧಿತ ವಸ್ತುಗಳನ್ನು ಒಯ್ಯವಂತಿಲ್ಲ....ಇತ್ಯಾದಿ. ಇಲ್ಲಿ ಕುಡಿಯಲು ಸಿಹಿನೀರು ಸಿಗುತ್ತದೆ, ಬೇಕಿದ್ದಲ್ಲಿ ತುಂಬಿಸಿಕೊಳ್ಳಬಹುದು.
ಬೀದಳ್ಳಿಯಿಂದ ಕುಮಾರ ಪರ್ವತದ ತುದಿಗೆ ೮ ಕಿ. ಮೀ. ದೂರ. ಅದು ಸಮುದ್ರ ಮಟ್ಟದಿಂದ ಸುಮಾರು ೫೭೩೦ ಅಡಿ ಎತ್ತರದಲ್ಲಿದೆ. ೮ ಘಂಟೆಗೆ ಅರಣ್ಯಕ್ಕೆ ಇಳಿಯುತ್ತಿದ್ದಂತೆ ಒಂದು ತೊರೆ ಹಾಗೂ ಅದಕ್ಕೆ ಅಡ್ಡಲಾಗಿ ಕಟ್ಟಿದ ಹಳೆಯ ಮುರಿದ ತೂಗುಸೇತುವೆ ಎದುರಾಯಿತು. ಮುಂದೆ ದಾರಿಯುದ್ದಕ್ಕೂ ದೈತ್ಯಾಕಾರದ ವಿವಿಧ ಪ್ರಭೇದದ ಮರಗಳು. ಯಾವುದೋ ಹಕ್ಕಿಗಳ ಇನಿದನಿ ಕೇಳಿಸಿತು. ತಂಡದ ಕೆಲವರು ಅದನ್ನು ರೆಕಾರ್ಡ್ ಮಾಡಿದರು. ಇಲ್ಲಿ ದಾರಿಯುದ್ದಕ್ಕೂ ಕಲ್ಲು-ಪೊಟರೆಗಳು. ಹಾಗಾಗಿ ಪ್ರತಿ ಹೆಜ್ಜೆಯನ್ನೂ ಗಮನಿಸಿಯೇ ಕಾಲಿಡಬೇಕು. ಇಲ್ಲವಾದರೆ ಪಾದ ಉಳುಕು ಗ್ಯಾರಂಟಿ. ಅರಣ್ಯ ಇಲಾಖೆಯು ಮರಗಳಿಗೆ ಅಲ್ಲಲ್ಲಿ ಹೆಸರಿನ ಫಲಕ ಹಾಗೂ ದಾರಿ ಸೂಚನಾ ಫಲಕಗಳನ್ನು ಹಾಕಿದ್ದಾರೆ. ಹಾಗಾಗಿ ಕಾಡಿನಲ್ಲಿ ದಾರಿ ತಪ್ಪುವ ಸಾಧ್ಯತೆ ಕಡಿಮೆ. ಧಾರಾಳವಾಗಿ ಕುಡಿಯುವ ನೀರನ್ನು ಒಯ್ಯಬೇಕು, ಯಾಕೆಂದರೆ ದಾರಿಯಲ್ಲಿ ನೀರು ಸಿಗುವ ತಾಣಗಳಿಲ್ಲ.
ಹೀಗಿಯೇ ನಡೆಯುತ್ತಿದ್ದಗ ಒಂದೆಡೆ ಸುಬ್ರಮಣ್ಯ-ಗಿರಿಗದ್ದೆಯ ಕಡೆಗೆ ಹೋಗುವ ಪುಟ್ಟ ದಾರಿಸೂಚನಾ ಫಲಕ ಕಾಣಿಸಿತು. ಇನ್ನೂ ಸ್ವಲ್ಪ ಮುಂದೆ ಹೋದಾಗ ನಮ್ಮ ಎಡಭಾಗಕ್ಕೆ ಒಂದು 'ವ್ಯೂ ಪಾಯಿಂಟ್' ಸಿಗುತ್ತದೆ. ಇಲ್ಲಿಂದ ದೂರದ ಪ್ರಕೃತಿ ದೃಶ್ಯ ತುಂಬಾ ರಮಣೀಯ. ಅಕಸ್ಮಾತ್ ಕಾಲು ಜಾರಿದರೆ, ಕೆಳಗಡೆ ಪ್ರಪಾತ!. ಬಲಭಾಗದಲ್ಲಿ ಮುಂದುವರಿದೆವು. ಕೆಲವು ಕಡೆ ಎಲೆಗಳ ಮೇಲೆ ಮಳೆ ಬಿದ್ದ ಕುರುಹಾಗಿ ನೀರು ಕಾಣಿಸಿತು. ಅದ್ಯಾವುದೋ ಮಾಯೆಯಲ್ಲಿ ನನ್ನ ಶೂ ಒಳಗೂ ಒಂದು ಜಿಗಣೆ ಸೇರಿಕೊಂಡಿತ್ತು. ಮತ್ತೂ ಮುಂದೆ ಕಡಿದಾದ ಬಂಡೆ ಮತ್ತು ಸ್ವಲ್ಪ ಕಾಲುದಾರಿ ೩ ಬಾರಿ ಪುನರಾವರ್ತನೆಯಾದುವು. ಎಲ್ಲರೂ ಕಷ್ಟಪಟ್ಟು ಜಾಗರೂಕತೆಯಿಂದ ಹತ್ತಿದೆವು. ಕೆಲವು ಹಿರಿಯ ಮಹಿಳೆಯರಿಗೆ ಕಿರಿಯ ಚಾರಣಿಗರು ಸಹಾಯ ಹಸ್ತವನ್ನಿತ್ತು ದಾಟಿಸಿದರು. ಇದಾದ ಮೇಲೆ ತುಸು ದೂರದಲ್ಲಿಯೇ ಕಾಣುವ ಪರ್ವತದ ತುದಿಗೆ ಬಂದಾಗ ಒಂದು ಘಂಟೆ ಆಗಿತ್ತು. ನಮ್ಮಿಂದ ಮೊದಲು ಅಲ್ಲಿಗೆ ತಲಪಿದ್ದ ನಮ್ಮ ತಂಡದವರು ಆಗಲೇ ಊಟ ಮುಗಿಸಿದ್ದರು.
ಪರ್ವತದ ತುದಿಯಲ್ಲಿ ಕಲ್ಲುಗಳನ್ನು ಜೋಡಿಸಿ ಕೋಟೆ ಕಟ್ಟಿದಂತೆ ಇರುವ ಪುಟ್ಟ ಶಿವನ ಗುಡಿಯ ರಚನೆಯಿದೆ. ಒಂದು ಕಂಚಿನ ಘಂಟೆಯೂ ಕಾಣಿಸಿತು. ಇಲ್ಲಿನ ನಿಸರ್ಗ ಸಿರಿ ಅದ್ಬುತ. ಒಂದೆಡೆ ಬೆಟ್ಟಗಳು ಮತ್ತು ಪ್ರಪಾತ. ನಮ್ಮ ಮಾತು ಬೆಟ್ಟಕ್ಕೆ ಬಡಿದು ಪ್ರತಿಧ್ವನಿಯಾಗುತ್ತಿತ್ತು. ಸಾಕಷ್ಟು ಗಲಾಟೆಯೆಬ್ಬಿಸಿ ಪ್ರತಿಧ್ವನಿಸಿದೆವು. ಊಟ ಮಾಡಿದೆವು. ಪರ್ವತ ಹತ್ತಿ ಬಂದ ಆಯಾಸದ ಜತೆಗೆ ಹೊಟ್ಟೆಯೂ ತುಂಬಿ, ತಂಗಾಳಿ ಬೀಸಿ...ಕಣ್ಮುಚ್ಚಿದ್ದರೆ ಆರಾಮ ನಿದ್ರೆ ಬರುತ್ತಿತ್ತು. ಆದರೆ ಮೈಸೂರಿಗೆ ಹಿಂತಿರುಗಬೇಕಲ್ಲ.....೨ ಘಂಟೆಗೆ ಎಲ್ಲರೂ ಕೆಳಗಿಳಿಯಬೇಕು ಎಂಬ ಹುಕುಂ ಬಂತು.
ಮನಸ್ಸಿಲ್ಲದ ಮನಸ್ಸಿನಿಂದ ಕೆಳಗಿಳಿಯತೊಡಗಿದೆವು. ಬಂಡೆ ಇಳಿಯುವುದು ಸ್ವಲ್ಪ ಕಷ್ಟವಾಯಿತು. ಎಲ್ಲರೂ ಜಾಗರೂಕತೆಯಿಂದ ಇಳಿದೆವು. ದಾರಿ ಸವೆಸುತ್ತಾ ಬೀದಳ್ಳಿ ಮೂಲಕವಾಗಿ ಶಾಂತ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಲಪುವಾಗ ಸಂಜೆ ೬.೩೦ ಆಗಿತ್ತು. ಈಗ ನಿಜವಾಗಿಯೂ ಎಲ್ಲರಿಗೂ ಸುಸ್ತಾಗಿತ್ತು. ಅಲ್ಲಿ ನಮಗೆ ಸಿಕ್ಕಿದ ಕಲ್ಲಂಗಡಿ ಹಣ್ಣಿನ ಜ್ಯೂಸ್ ಅಮೃತ ಸಮಾನ ಎನಿಸಿತು. ರಾತ್ರಿಯ ಊಟವನ್ನು ಅಲ್ಲಿಯೇ ಸೇವಿಸಿ ಬಸ್ ನಲ್ಲಿ ನಿದ್ರೆ ಮಾಡೋಣ ಎಂಬ ಉದ್ದೇಶದಿಂದ ಊಟ ಮಾಡಿ ದೇವಸ್ಥಾನದ ಅರ್ಚಕರಿಗೆ ಧನ್ಯವಾದ ಅರ್ಪಿಸಿ ಮೈಸೂರಿಗೆ ಹೊರಟಾಗ ಸಂಜೆ ೭.೩೦ ಘಂಟೆ ಆಗಿತ್ತು. ಮೈಸೂರಿಗೆ ರಾತ್ರಿ ೧೦ ಘಂಟೆಗೆ ತಲಪಿದಾಗ ಎರಡು ದಿನದ ಈ ಚಾರಣ ಕಾರ್ಯಕ್ರಮ ಮುಕ್ತಾಯವಾಯಿತು.
ಅಂತರ್ಜಾಲದಲ್ಲಿ ಕುಮಾರ ಪರ್ವತದ ಚಾರಣದ ಬಗ್ಗೆ ಹುಡುಕಿದರೆ ಹಲವಾರು ಮಾಹಿತಿ ಲಭ್ಯವಾಗುತ್ತದೆ. ಇದು ಕರ್ಣಾಟಕದಲ್ಲಿ ಅತಿ ಕಷ್ಟ ಎಂದು ಗುರುತಿಸಲ್ಪಟ್ಟ ಚಾರಣಗಳಲ್ಲಿ ಒಂದು. ಪ್ರತಿ ಬಾರಿಯ ಚಾರಣ ಕಾರ್ಯದಲ್ಲಿ ಭಾಗವಹಿಸುವ ಮೊದಲು, ಆಯೊಜಕರಿಗೆ ಫೊನಾಯಿಸಿ, ಅದು ಕಷ್ಟದ ಚಾರಣವೇ, ನನ್ನಿಂದ ಸಾಧ್ಯವೇ ಎಂದು ಕೇಳಿ, ಅವರು ಶಿಫಾರಸ್ ಮಾಡಿದರೆ ಮಾತ್ರ ನನ್ನ ಹೆಸರು ನೋಂದಾಯಿಸುವ ಪದ್ಧತಿ ನನ್ನದು. ಈ ಬಾರಿಯೂ ಗೋಪಕ್ಕ ಅವರ ಸಲಹೆ ಪಡೆದಿದ್ದೆ. "ಕಷ್ಟ ಇದೆ, ಆದರೆ ನಿಮಗೆ ಆಗುತ್ತೆ ಬಿಡಿ, ಯೋಚನೆಯಿಲ್ಲದೆ ಬನ್ನಿ" ಎಂದಿದ್ದರು. ಆದರೆ ಜಿಗಣೆ ಹಾಗೂ ಬಂಡೆಗಳ ವಿಚಾರ ಹೇಳಿರಲಿಲ್ಲ. ಈ ಮಾಹಿತಿ ಮೊದಲೇ ಗೊತ್ತಿದ್ದರೆ, ಬಹುಶ: ಈ ಚಾರಣಕ್ಕೆ ನಾನು ಹೆಸರು ನೋಂದಾಯಿಸುತ್ತಿರಲಿಲ್ಲ. ಈಗ ಹೋಗಿ ಬಂದ ಮೇಲೆ ತಂಡದ ಎಲ್ಲರಿಗೂ 'ಜೈ ಹೋ'!
Saturday, April 6, 2013
ಶಿಶಿಲೇಶ್ವರನ ಮತ್ಸ್ಯಧಾಮ....
ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದ ಸಮೀಪ ಶಿಶಿಲ ಎಂಬ ಪುಟ್ಟ ಊರಿನಲ್ಲಿ ಶಿಶಿಲೇಶ್ವರ ಸ್ವಾಮಿಯ ದೇವಾಲಯವಿದೆ. ಇಲ್ಲಿ ಉದ್ಭವಲಿಂಗವಾದ ಶಿವನನ್ನು ಪೂಜಿಸುತ್ತಾರೆ. ಸುಮಾರು ೭೦೦ ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವು ಕೇರಳ ಶೈಲಿ ಹಾಗೂ ಜೈನ ಬಸದಿಯ ಮಿಶ್ರ ಛಾಯೆಯನ್ನು ಹೊಂದಿದೆ. ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿ ನಾಗಾರಾಧನೆಗೂ ಆದ್ಯತೆಯಿದ್ದು, ದೇವಸ್ಥಾನದ ಎದುರು ನಾಗಬನವೂ ಇದೆ.
ಸಾಮಾನ್ಯವಾಗಿ ಹುಲಿಧಾಮ, ಕರಡಿಧಾಮ, ಸಿಂಹಧಾಮ, ನವಿಲುಧಾಮ ...ಇತ್ಯಾದಿಗಳನ್ನು ಕಂಡಿದ್ದೇವೆ. ಆದರೆ ಎಲ್ಲದರೂ ಮತ್ಸ್ಯಧಾಮವಿದೆಯೇ? ಬಹುಶ: ಇಲ್ಲ, ಇದ್ದರೂ ವಿರಳ. ಆದರೆ ಶಿಶಿಲದ ಕಪಿಲಾ ನದಿಯಲ್ಲಿ, ಮತ್ಸ್ಯಧಾಮವಿದೆ ಹಾಗೂ ಇದಕ್ಕೆ ಶಿಶಿಲೇಶ್ವರನೇ ಆಡಳಿತಾಧಿಕಾರಿ! ಭಕ್ತಾಭಿಮಾನಿಗಳ ಕಾಳಜಿಯಿಂದಾಗಿ ದೇವಸ್ಥಾನದಿಂದ ೨ ಕಿ.ಮಿ. ಉದ್ದಕ್ಕೂ ಕಪಿಲಾ ನದಿಯಲ್ಲಿ ಮೀನುಗಾರಿಕೆಗೆ ನಿಷೇಧವಿದೆ. ಹಾಗಾಗಿ ಈ ಮತ್ಸ್ಯ ಸಂಕುಲವು ಪ್ರಸಾದ-ನೈವೇದ್ಯ ಸೇವಿಸುತ್ತಾ ಹಾಯಾಗಿ ಬದುಕಿದೆ. ೧೯೯೬ ರಲ್ಲಿ, ಕಿಡಿಗೇಡಿಗಳ ಕೃತ್ಯದಿಂದ ಸಹಸ್ರಾರು ಮೀನುಗಳು ಏಕಕಾಲದಲ್ಲಿ ಸತ್ತು ಹೋದವಂತೆ. ಈ ಕಹಿನೆನಪಿಗಾಗಿ ಶಿಶಿಲದಲ್ಲಿ ಒಂದು ಮತ್ಸ್ಯ ಸ್ಮಾರಕವನ್ನು ಕಟ್ಟಲಾಗಿದೆ.
Tuesday, April 2, 2013
ಜಮಾಲಾಬಾದ್ ನ ಕಮಾಲ್
ಜಮಾಲಾಬಾದ್, ನರಸಿಂಹಗಡ ಹಾಗೂ ಗಡಾಯಿಕಲ್ಲು ಎಂಬ ವಿವಿಧ ಹೆಸರಿನಿಂದ ಕರೆಯಲ್ಪಡುವ ಅಕರ್ಷಕ ಕೋಟೆಯು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ೬ ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ೧೭೦೦ ಅಡಿ ಎತ್ತರದಲ್ಲಿರುವ ಈ ಕೋಟೆಯು, ಬೃಹದಾಕಾರದ ಗ್ರಾನೈಟ್ ಕಲ್ಲಿನ ತುದಿಯಲ್ಲಿದೆ. ಹಿಂದೆ ಇಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕೋಟೆ ಇತ್ತಂತೆ. ೧೭೯೪ ರಲ್ಲಿ, ಟಿಪ್ಪು ಸುಲ್ತಾನನು ಇದನ್ನು ನವೀಕರಿಸಿ ತನ್ನ ತಾಯಿಯಾದ ಜಮಾಲಬಿಯ ನೆನಪಿಗಾಗಿ 'ಜಮಾಲಾಬಾದ್' ಎಂಬ ಹೆಸರಿಟ್ಟಂತೆ.
ಜಮಾಲಾಬಾದ್ ಕೋಟೆಯನ್ನೇರಲು ೧೮೭೬ ಮೆಟ್ಟಿಲುಗಳನ್ನೇರಬೇಕು. ಆರಂಭದಲ್ಲಿ ಸುಲಭವಾಗಿ ಹತ್ತಬಹುದಾದರೂ ಕೊನೆಗೆ ತೀರಾ ಕಡಿದಾದ ಮೆಟ್ಟಿಲುಗಳಿವೆ. ಅಲ್ಲಿ ಹಸಿರು ಮರಗಳ ನೆರ್‍ಅಳು ಕಡಿಮೆ. ಹಾಗಾಗಿ ಬಿಸಿಲಿನ ಝಳವೂ ನಮ್ಮ ಶ್ರಮ ಹೆಚ್ಚಿಸುತ್ತದೆ.
ದಾರಿಯಲ್ಲಿ ಒಂದು ಕಡೆ ಮುರಿದು ಬಿದ್ದ ಫಿರಂಗಿ ಈಗಲೂ ಇದೆ.ಕೋಟೆಯ ಮೇಲೆ ಬಹುಶ: ಮದ್ದುಗುಂಡುಗಳನ್ನು ಇಡುತ್ತಿದ್ದ ಕೋಣೆ ಇದೆ. ಒಂದು ಕೊಳವಿದೆ. ಆದರೆ ಅದರ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ಕೋಟೆಯನ್ನು ಹತ್ತಲು ಶ್ರಮ ಹಾಗೂ ೩-೪ ತಾಸು ಸಮಯ ಬೇಕು. ಆದರು, ಕೋಟೆಯ ಮೇಲಿನಿಂದ ಕಾಣಿಸುವ ಪ್ರಕೃತಿ ಸೌಂದರ್ಯ ಈ ಶ್ರಮವನ್ನು ಸಾರ್ಥಕಗೊಳಿಸುತ್ತದೆ.
ಬಿಸಿಲಿನ ಝಳವು ಜೋರಾಗಿ ಇದ್ದುದರಿಂದ, ನಾವು ದಾರಿಯುದ್ದಕ್ಕೂ ಕಿತ್ತಳೆ, ಸೌತೆಕಾಯಿ ತಿನ್ನುತ್ತಾ ನಿಧಾನವಾಗಿ ಚಾರಣ ಮಾಡಿದೆವು. ಬೆಳಗ್ಗೆ ಸುಮಾರು ೯ ಗಂಟೆಗೆ ಹತ್ತಲಾರಂಭಿಸಿದ್ದ್ದೆವು. ಎಲ್ಲರೂ ಕೋಟೆಯನ್ನೇರಿ ಕೆಳಗಿಳಿಯುವಷ್ಟರಲ್ಲಿ ಮಧ್ಯಾಹ್ನ ೩ ಗಂಟೆ ಆಗಿತ್ತು .
ಜಮಾಲಾಬಾದ್ ಕೋಟೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಬೇಕು. ಅಲ್ಲಿ ಟಿಕೆಟ್ ಕೌಂಟರ್ ಇದೆ. ಕೋಟೆಯ ಕೆಳಭಾಗದಲ್ಲಿ ಒಂದು ಸಣ್ಣ ಅಂಗಡಿ ಇದ್ದು, ಅದರಲ್ಲಿ ನೀರು, ಜ್ಯೂಸ್ ಇತ್ಯಾದಿ ಸಿಗುತ್ತದೆ. ಆದರೆ ಊಟ ಸಿಗುವುದಿಲ್ಲ. ಹಾಗಾಗಿ, ನಮಗೆ ಊಟ ಬೇಕಿದ್ದರೆ ನಾವೇ ಒಯ್ಯಬೇಕು ಅಥವಾ ಬೆಳ್ತಂಗಡಿ -ಉಜಿರೆಗೆ ಹೋಗಬೇಕು.
Subscribe to:
Posts (Atom)


