Total Pageviews

Saturday, September 24, 2011

ಚಾರಣಕ್ಕೊಂದು ಕಾರಣ....ಎಡಕಲ್ ಕೇವ್ಸ್ ...ಸೂಚಿಪಾರ ಫಾಲ್ಸ್....



ಸೆಪ್ಟೆಂಬರ್ ೧೮  ಭಾನುವಾರದಂದು  ಯೂಥ್ ಹಾಸ್ಟೆಲ್ ಅಸೋಸಿಯೇಶನ್ ಮೈಸೂರಿನವರು ವೈನಾಡಿನ ’ಎಡಕ್ಕಲ್ ಕೇವ್ಸ್’ ಮತ್ತು ಸಮೀಪದ ’ಸೂಚಿಪಾರ ಫಾಲ್ಸ್’ ಗೆ ಚಾರಣ/ಪ್ರವಾಸ ಏರ್ಪಡಿಸುವವರೆಂದು ಗೊತ್ತಾಯಿತು. ನನಗೆ ತಕ್ಷಣ ನೆನಪಾದದ್ದು  ’ಎಡಕಲ್ಲು ಗುಡ್ಡದ ಮೇಲೆ’ ಸಿನೆಮಾದಲ್ಲಿ ಬರುವ ಪ್ರಕೃತಿ ವೈಭವ ಹಾಗೂ ವಿರಹಾ...ವಿರಹಾ..ನೂರು ನೂರು ತರಹಾ.. ಹಾಡು. ಸರಿ, ಚಾರಣಕ್ಕೊಂದು ಕಾರಣ ಸಿಕ್ಕಿತು, ಗೆಳತಿ ರೇಖಾ ಹಾಗೂ ನಾನು ಹೆಸರು ನೊಂದಾಯಿಸಿಯೂ ಆಯಿತು.

ಮೈಸೂರಿನಿಂದ ಸುಮಾರು ೫೦ ಜನರನ್ನು ಹೊತ್ತಿದ್ದ ಬಸ್ ಗುಂಡ್ಲುಪೇಟೆ, ಸುಲ್ತಾನ್ ಬತ್ತೇರಿ ಮಾರ್ಗವಾಗಿ ವೈನಾಡ್ ತಲಪಿತು. ಹಚ್ಚ ಹಸಿರು ಕಾಡು, ಕಾಫಿ ತೋಟ, ಚಹಾ ತೋಟಗಳ ಮಧ್ಯೆ ಸಾಗುವ ಈ  ಮಾರ್ಗದಲ್ಲಿ ಪ್ರಯಾಣಿಸುವಾಗ ತುಂಬಾ ಹಿತವೆನಿಸುತ್ತದೆ. ಸಾಮಾನ್ಯವಾಗಿ ಬಸ್ ಪ್ರಯಾಣ ನನಗೆ ಒಗ್ಗುವುದಿಲ್ಲ. ವಾಂತಿ-ತಲೆಸುತ್ತು ಬಾರದಂತೆ ಮುಂಜಾಗರೂಕತೆಯಿಂದ  ಮಾತ್ರೆ ನುಂಗಿ, ಆಮೇಲೆ ಅದರ ಪ್ರಭಾವಕ್ಕೆ ಪ್ರಯಾಣದುದ್ದಕ್ಕೂ ತೂಕಡಿಸುವ ನಾನೇ ಬಿಟ್ಟ ಕಣ್ಣುಗಳಿಂದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದೆ. ಇನ್ನು ಕವಿಪುಂಗವರು, ಸಾಹಿತಿಗಳು  ಕವಿತೆ ಬರೆದರೆ ಆಶ್ಚರ್ಯವೇನು?      

ಹೀಗೆ ಮುಂದುವರಿದ ನಮ್ಮ ಪ್ರಯಾಣ ವೈನಾಡಿನ ’ಅಂಬುಕುಟ್ಟಿಮಲೆ’ವರೆಗೆ ಸಾಗಿತು. ಅಲ್ಲಿಂದ ಸುಮಾರು ೨ ಕಿ.ಮಿ ದೂರವನ್ನು ನಡೆದು ಬೆಟ್ಟ ಏರಬೇಕು. ಈ ಮಾರ್ಗ ಕೆಲವು ಕಡೆ ಎತ್ತರವಾಗಿದೆ, ಇನ್ನು ಕೆಲವೆಡೆ ಇಳಿಜಾರಾಗಿದೆ, ಕೆಲವೆಡೆ ಮೆಟ್ಟಿಲುಗಳಿವೆ, ಒಂದೆರೆಡು ಕಡೆ ಚಪ್ಪಡಿಕಲ್ಲುಗಳಿವೆ. ಕಾಲಿಟ್ಟರೆ ಜಾರುವಂತಿದ್ದುವು. ಒಟ್ಟಿನ ಮೇಲೆ ಬಹಳ ಜಾಗರೂಕತೆಯಿಂದ ಹತ್ತಬೇಕು/ಇಳಿಯಬೇಕು.

ಯಥಾ ಪ್ರಕಾರ ಅರ್ಧ ಬೆಟ್ಟ ಹತ್ತುವಷ್ಟರಲ್ಲಿ ನನಗೆ ಸುಸ್ತು ಶುರುವಾಯಿತು. ಸ್ವಲ್ಪ ನಿಧಾನವಾಗಿ ಗುರಿ ಮುಟ್ಟಿದೆ. ಸಹಚಾರಣಿಗ ರಘುನಾಥ್ ಅವರು ಆಧಾರಕ್ಕಿರಲಿ ಎಂದು ಒಂದು ಕೋನ್ನು  ಹುಡುಕಿ ಕೊಟ್ಟರು. ಊರುಗೋಲು ಉಪಯೋಗಿಸುವ ವಯಸ್ಸು ನನ್ನದಲ್ಲವಾದರೂ ಅದರಿಂದ ಸಹಾಯವಾಯಿತು. ಅಂತೂ ಬೆಟ್ಟ ಹತ್ತಿ ಸುತ್ತ ಮುತ್ತಲಿನ ದೃಶ್ಯಗಳನ್ನು   ನೋಡಿದಾಗ ಶ್ರಮ ಸಾರ್ಥಕ ಎನಿಸಿತು. ಎಲ್ಲೆಡೆಯೂ  ಅದ್ಭುತವಾದ ಪ್ರಕೃತಿ ಸೌಂದರ್ಯ ತುಂಬಿತ್ತು. 
  

ಅಲ್ಲಿಂದ ಕೆಲವು ಮೆಟ್ಟಿಲು ಕೆಳಗೆ ಇಳಿದಾಗ ಮೊದಲ ಗುಹೆ ಸಿಗುತ್ತದೆ. ಗುಹೆಯ ಒಳಗೆ ತುಂಬಾ ತಂಪಿತ್ತು. ಒಂದೆಡೆ ಸ್ವಚ್ಛ ತಿಳಿ ನೀರಿನ ಝರಿಯಿತ್ತು.


ಕೆಲವರು ನೀರನ್ನು ತಮ್ಮ ಬಾಟಲಿಗೆ ತುಂಬಿಸಿಕೊಂಡರು. ಈ ನಿಸರ್ಗದತ್ತ ಸಿಹಿನೀರಿನ ಮುಂದೆ ಬಗೆ ಬಗೆ ಹೆಸರಿನ ನವನವೀನ  ಶುದ್ಧ ನೀರಿನ ಮಾದರಿಗಳನ್ನು ನಿವಾಳಿಸಿ ಒಗೆಯಬಹುದು.  

ಕೆಲವು ಹೆಜ್ಜೆ  ಮುಂದೆ ಇನ್ನೊಂದು ಗುಹೆಯಿತ್ತು.ಎರಡು ಬೃಹದಾಕಾರದ  ಬಂಡೆಗಳ ಮೆಲೆ ಇನ್ನೊಂದು  ದೈತ್ಯಾಕಾರದ ಬಂಡೆ ಕುಳಿತಂತೆ ಕಾಣುತಿತ್ತು. ಅದು ನಮ್ಮ ತಲೆ ಮೇಲೆ ಯಾವುದೆ ಕ್ಷಣದಲ್ಲಿ ಬೀಳಬಹುದು ಎಂಬಂತೆ ಭಾಸವಾಗುತ್ತದೆ. ಇದರಿಂದಾಗಿ ಗುಹೆಗೆ  ಎಡಕ್ಕಲ್ ಎಂಬ ಹೆಸರು ಬಂತು. ಯಾಕೆಂದರೆ  ಮಲಯಾಳ ಭಾಷೆಯಲ್ಲಿ ಎಡಕ್ಕಲ್ ಅಂದರೆ ’ಮಧ್ಯದ ಕಲ್ಲು’ ಎಂದರ್ಥ.


ಆದರೆ ಈ ಗುಹೆಗಳಿಗೆ ಕ್ರಿ.ಪೂ ೫೦೦೦ ಕ್ಕೂ ಹಿಂದಿನ  ಇತಿಹಾಸವಿದೆ. ಗುಹೆಯ ಕಲ್ಲುಗಳಲ್ಲಿ ಕಾಣುವ ಚಿತ್ರ-ರೇಖೆಗಳನ್ನು ಶಿಲಾಯುಗದ  ಮಾನವನ ಬರಹ ಎಂದು ನಂಬಲಾಗಿದೆ. ಕ್ರಿ.ಶ ೧೮೯೦ ರಲ್ಲಿ ಅಂದಿನ ಮಲಬಾರ್ ಪ್ರಾಂತ್ಯದ   ಪೋಲಿಸ್ ಅಧಿಕಾರಿ ’ಫಾರೆಡ್  ಫಾಸೆಟ್’ ಈ ಗುಹೆಗಳ ಅಸ್ತಿತ್ವವನ್ನು ಗುರುತಿಸಿ ಹೊರಜಗತ್ತಿಗೆ ತಿಳಿಯಪಡಿಸಿದನಂತೆ. 

ಸಿನೆಮಾದಲ್ಲಿ ನಾನು ಕಂಡ ಗುಹೆಗೂ ಈ ಗುಹೆಗೂ ಬಹಳ ಅಂತರವಿತ್ತು. ಬಹುಶ: ಬೇರೆಲ್ಲೋ ಚಿತ್ರೀಕರಣ ಮಾಡಿರಬೇಕು ಇಲ್ಲವೇ ಕ್ಯಾಮೆರಾದ ಕೈಚಳಕವಿದ್ದಿರಬೇಕು. ಆದರೆ ಒಟ್ಟಾರೆಯಾಗಿ ಈ ಚಾಣ ಬಹಳ ಉತ್ತಮವಾಗಿತ್ತು.

ಇನ್ನೊಂದು ನಾನು ಗಮನಿಸಿದ ಅಂಶವೇನೆಂದರೆ, ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸುವ ಶಿಸ್ತು. ಬೆಟ್ಟದ ಮೇಲೆ ಯಾವುದೇ ಪ್ಲಾಸ್ಟಿಕ್ ಪದಾರ್ಥವನ್ನು ಎಸೆಯುವಂತಿಲ್ಲ. ಕುಡಿಯುವ ನೀರಿನ ಬಾಟಲಿಯನ್ನು ಒಯ್ಯುವುದಿದ್ದರೂ, ಅದಕ್ಕೆ ೨೦ ರೂ ತೆತ್ತು, ಒಂದು ಗುರುತಿನ ಸ್ಟಾಂಪ್ ಹಚ್ಚಿಸಿಕೊಳ್ಳಬೇಕು. ಹಿಂತಿರುಗಿ ಬರುವಾಗ  ಬಾಟಲಿಯನ್ನು ತೋರಿಸಿ ೨೦ ರೂ. ಪಡೆದುಕೊಳ್ಳಬೇಕು.

ದಾರಿಯುದ್ದಕ್ಕೂ ಸಿಗುವ ಚಿಕ್ಕ-ಪುಟ್ಟ ಅಂಗಡಿಗಳಲ್ಲಿ ಉಪ್ಪಿನಲ್ಲಿ ನೆನೆಸಿದ ನೆಲ್ಲಿಕಾಯಿ, ಮಾವಿನಕಾಯಿ, ಜೇನಿನಲ್ಲಿ ನೆನೆಸಿದ ನೆಲ್ಲಿಕಾಯಿ ಇತ್ಯಾದಿ ಮಾರಾಟಕ್ಕೆ ಲಭ್ಯವಿತ್ತು. ಅವುಗಳನ್ನು ಕಾಫಿ ಗಿಡದ ಎಲೆಯಲ್ಲಿ ಕೊಡುತ್ತಿದ್ದರು. ನಗರದ ಅಂಗಡಿಗಳಲ್ಲಿ ಸರಮಾಲೆಯಂತೆ ಕಾಣಿಸುವ  ವಿವಿಧ ಕುರುಕಲು ತಿಂಡಿಗಳ ಪ್ಯಾಕೆಟ್ ಗಳು ಹಾಗೂ ಅವನ್ನು ತಿಂದು ಅಲ್ಲಿಲ್ಲಿ ಎಸೆದ ಖಾಲಿ ಪ್ಲಾಸ್ಟಿಕ್ ಕವರ್ ಗಳು ಕಾಣಿಸಲಿಲ್ಲ. 

ಎಡಕ್ಕಲ್ ಗುಹೆಗಳನ್ನು ನೋಡಿಯಾದ ಮೇಲೆ ನಮ್ಮ ಮುಂದಿನ ಪಯಣ ’ಸೂಚಿಪಾರ  ಫಾಲ್ಸ್'ಕಡೆಗೆ. ಇದು ವೈನಾಡಿನ ಮೆಪ್ಪಾಡಿ ಎಂಬ ಊರಿನ ಸನಿಹದಲ್ಲಿದೆ. ಸುಮಾರು ಅರ್ಧ ಘಂಟೆ ಕಲ್ಲು ಚಪ್ಪಡಿ ಹಾಕಿದ ರಸ್ತೆಯಲ್ಲಿ ನಡೆದು, ಕೆಲವು ಕಡೆ ಮೆಟ್ಟಿಲುಗಳನ್ನು ಏರಿ, ಇನ್ನು ಕೆಲವೆಡೆ ಮೆಟ್ಟಿಲಿಳಿದಾಗ ಕೊನೆಯಲ್ಲಿ ಸೂಚಿಪಾರ ಫಾಲ್ಸ್ ನ ದರ್ಶನವಾಗುತ್ತದೆ

ಸುಮಾರು ೨೦೦ ಅಡಿ ಎತ್ತರದಿಂದ ಧುಮುಕುವ ಜಲರಾಶಿ ತುಂಬಾ ಸೊಗಸಾಗಿದೆ. ಸೂಚಿ ಎಂದರೆ ಮಲಯಾಳ ಭಾಷೆಯಲ್ಲಿ ಸೂಜಿ. ಬಹುಶ: ಬಂಡೆ ಕಲ್ಲುಗಳ ಮಧ್ಯೆ ನೇರವಾಗಿ ಸೂಜಿಯಂತೆ ಹರಿಯುವ ಕಾರಣ ಈ ಹೆಸರು ಬಂದಿರಬಹುದು.


ಅಷ್ಟರಲ್ಲಿ ಸಂಜೆಯಾಗುತ್ತಿತ್ತು. ಸುಮಾರು  ರಾತ್ರಿ ೧೧ ಗಂಟೆಗೆ  ಮೈಸೂರಿಗೆ ವಾಪಾಸ್ಸಾಗುವಷ್ಟರಲ್ಲಿ  ಸಂಡೇ ಈಸ್ ಓವರ್! ಇನ್ನೊಮ್ಮೆ  ವೈನಾಡ್ ನಲ್ಲಿ ಕನಿಷ್ಟ ಒಂದು ದಿನವಾದರೂ ತಂಗುವ ಕಾರ್ಯಕ್ರಮ ಇರಲಿ ಎಂದು ಆಶಿಸುವೆ.        
           
     
    

Sunday, September 4, 2011

ಮುದಗೆರೆಗೆ ಚಾರಣ.....ವೈನ್ ಈಸ್ ಫೈನ್


ಇತ್ತೀಚೆಗೆ ಯೂತ್ ಹಾಸ್ಟೆಲ್ ಸದಸ್ಯೆಯಾದೆ. ಹಾಗಾಗಿ, ಕೆಲವೊಮ್ಮೆ, ಅವರು ಆಯೋಜಿಸುವ ಸಣ್ಣ ಪುಟ್ಟ ಚಾರಣಕ್ಕೆ ಹೋಗುವ ಹುಮ್ಮಸ್ಸು ಬಂದಿದೆ. ಇದು ನನ್ನ ಮೂರನೆಯ ಚಾರಣ ಅನುಭವ.

ಕಳೆದ ಭಾನುವಾರ , ಮೈಸೂರಿನಿಂದ ಸುಮಾರು ೩೦ ಮಂದಿ ಸದಸ್ಯರು, ಒಂದು ಟೆಂಪೊ ಹಾಗೂ ಇನ್ನೊಂದು  ಟಾಟಾ ಸುಮೋ ದಲ್ಲಿ ಚೆನ್ನಪಟ್ಟಣ ಕಡೆಗೆ ಹೊರಟೆವು. ದಾರಿಯಲ್ಲಿ ಮದ್ದೂರಿನಲ್ಲಿ ಕಾಫಿ-ತಿಂಡಿ ಸೇವನೆಯಾಯಿತು.

ಚೆನ್ನಪಟ್ಟಣದ ಸಮೀಪದ 'ಮುದಗೆರೆ' ಎಂಬಲ್ಲಿ ತಿರುಗಿ ಸ್ವಲ್ಪ ಮುಂದೆ ಬಂದು, ಟೆಂಪೊ ನಿಂತಿತು. ಎದುರುಗಡೆ ಪುಟ್ಟ ಬೆಟ್ಟ ಇತ್ತು. ನಿಧಾನವಾಗಿ ಹತ್ತಿ ಬೆಟ್ಟದ ತುದಿ ತಲಪಿದೆವು.

 

ಸುತ್ತ ಬೆಳೆದಿದ್ದ ಹಸಿರು ಗಿಡಗಳು, ಕಾಡು ಹೂಗಳ ಫೊಟೊ ತೆಗೆಯುತ್ತಾ ಮೇಲೇರಿದೆವು. ಬೆಟ್ಟದ ತುದಿಯಲ್ಲಿ, 'ಕಂಭದ ನರಸಿಂಹಸ್ವಾಮಿಯ' ಮಂದಿರವಿದೆ. ಅಲ್ಲಿ ಪ್ರಸಾದ ಸ್ವೀಕರಿಸಿ ಕೆಳಗೆ ಬಂದಾಯಿತು.





 
 ಅಲ್ಲಿಂದ ಮುಂದೆ ಬಂದು 'ಹೆರಿಟೇಜ್  ಗ್ರೇಪ್ ವೈನರಿ'ಗೆ ಭೇಟಿಯ ವ್ಯವಸ್ಥೆ ಮಾಡಿದ್ದರು. ವೈನ್ ಉತ್ಪಾದನೆಯ ಪ್ರಾತ್ಯಕ್ಷಿಕೆಯ ಜೊತೆಗೆ, ರುಚಿ ನೊಡಲೆಂದು ಸ್ವಲ್ಪ ವೈನ್ ಸಾಂಪಲ್ ಕೊಟ್ಟರು. ಪುರಾಣಗಳಲ್ಲಿ ಬರುವ ದ್ರಾಕ್ಷಾರಸ, ಸೋಮರಸ ಇತ್ಯಾದಿಗಳ ವ್ಯಾಖ್ಯಾನದೊಂದಿಗೆ, ಆಯುರ್ವೇದದ ಅಮೃತಾರಿಷ್ಟ, ದ್ರಾಕ್ಷಾರಿಷ್ಟಗಳ ಬಗ್ಗೆ ಮಾತು ಹೊರ್‍ಅಳಿತು. ಕೆಲವರಿಗೆ, ವೈನ್ ಗ್ಲಾಸ್ ಹಿಡಿದುಕೊಂಡು ಫೊಟೊ ತೆಗೆಯುವ ಸಡಗರ.   





ಅಲ್ಲಿದ್ದ ಆಲಂಕಾರಿಕ ವೈನ್ ಜಾರ್ ನನಗೆ ಇಷ್ಟವಾಯಿತು. ಬಾಲ್ಯದಲ್ಲಿ ಕೇಳಿದ್ದ 'ಆಲಿ ಬಾಬಾ  ಮತ್ತು ೪೦ ಕಳ್ಳರು' ಕಥೆಯಲ್ಲಿ ಬರುವ ಪೀಪಾಯಿ ಇದೇ ರೀತಿ ಇದ್ದಿರಬಹುದೇನೋ ಅನಿಸಿತು.










.  
ಅಲ್ಲಿಂದ ಮುಂದೆ ನಮ್ಮ ಪಯಣ ಸಾಗಿದ್ದು ಬೆಂಗಳೂರು  ರಸ್ತೆಯಲ್ಲಿಯಲ್ಲಿರುವ   'ಜಾನಪದ ಲೋಕ'ದ ಕಡೆಗೆ. ಅಲ್ಲಿ ಆಗ ಕರಗ ನೃತ್ಯದ ಪ್ರದರ್ಶಿಸಲ್ಪಡುತ್ತಿತ್ತು. ಜಾನಪದ ವಸ್ತುಸಂಗ್ರಹಾಲಯ, ಕರಕುಶಲ ಕಲೆಗಳ ಪ್ರಾತ್ಯಕ್ಷಿಕೆ ಇತ್ಯಾದಿ ನೋಡಿ ಮೈಸೂರಿಗೆ ವಾಪಸ್ಸಾದೆವು.







ಒಟ್ಟಾರೆಯಾಗಿ ಇದು ಒಂದು ಪುಟ್ಟ ಚಾರಣ. ಸಮಾನ ಅಭಿರುಚಿಯ , ವಿವಿಧ ಕ್ಶೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಪರಿಚಯವಾಗುತ್ತದೆ. ಎಲ್ಲರೂ ಪರಸ್ಪರ ಸ್ನೇಹದಿಂದ ವರ್ತಿಸುತ್ತಾರೆ.  ಇನ್ನೊಂದು ಗಮನಾರ್ಹ ವಿಚಾರವೇನೆಂದರೆ,ಇಲ್ಲಿ ಯಾವುದೇ ಆಡಂಬರ, ಒಣ ಪ್ರತಿಷ್ಟೆ ಇಲ್ಲ. ಸಾಧ್ಯಾದಷ್ಟು ಸರಳವಾಗಿ, ಕಡಿಮೆ ಖರ್ಚಿನಲ್ಲಿ ,ವ್ಯವಸ್ಥೆ ಮಾಡುತ್ತಾರೆ. ಎಲ್ಲರಿಗೂ ಸಮಾನ ಆವಕಾಶ.  ನಾನಂತೂ ಇನ್ನು ಮುಂದೆ, ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದುಕೊಂಡಿದ್ದೇನೆ.     

ಇದರಿಂದ ನನಗೆ ಅನುಭವವೇದ್ಯವಾದ  ವಿಚಾರವೇನೆಂದರೆ, ಸಾಮಾನ್ಯವಾಗಿ ದೈಹಿಕ ಶ್ರಮದ ಯಾವುದೇ ಕೆಲಸ ಮಾಡದೆ, ಮನೆಯಲ್ಲಿ ಸ್ವಲ್ಪ ಅಡಿಗೆ ಕೆಲಸ ಮಾತ್ರ ಮಾಡಿ,ಆಫೀಸಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ನನಗೆ,ಬೆಟ್ಟ ಹತ್ತಲು ಸುಲಭವಾಗುವುದಿಲ್ಲ, ನನಗಿಂತ  ಹೆಚ್ಚು ವಯಸ್ಸಾದವರು ಕೂಡ ಆರಾಮವಾಗಿ ಬೆಟ್ಟ ಹತ್ತುವಾಗ, ಏದುಸಿರು ಬಿಡುತ್ತಾ ಅಲ್ಲಲ್ಲಿ ನಿಂತು ಸಾವರಿಕೊಳ್ಳುತಿದ್ದ ನನ್ನ ಬಗ್ಗೆ ನಾಚಿಕೆಯೆನಿಸಿತು.

ತಂಡದ ಮುಖ್ಯಸ್ಥೆ ಗೋಪಮ್ಮ ಅವರು ತುಂಬಾ ಸಹನೆ , ತಾಳ್ಮೆಯಿಂದ ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಅವರಿಂದ ನಾವು ಕಲಿಯಬೇಕು, ಸ್ಫೂರ್ತಿ ಪಡೆಯಬೇಕು ಅನಿಸಿತು. ನಿವೃತ್ತರಾದ ಅವರು, ಇದುವರೆಗೆ ಹಲವಾರು ಬಾರಿ ಹಿಮಾಲಯ ಚಾರಣ ಕೈಗೊಂಡಿದ್ದಾರೆ. ಸಮಾಜ ಸೇವೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಜೈ ಯೂತ್ ಹಾಸ್ಟೆಲ್!