Total Pageviews

Wednesday, December 18, 2013

ದೂದ್ ಸಾಗರ್....

ದೂದ್ ಸಾಗರ್ ಎಂಬ ಹೆಸರು ಕಿವಿಗೆ ಬಿದ್ದಾಗ ಇದು ಯಾವುದೋ ಸಿನೆಮಾ ಕತೆ ಅಥವಾ ಹೋಟೆಲ್ ಇರಬಹುದು ಎಂಬು ಅರ್ಥೈಸಿದರೆ ತಪ್ಪು. ಇದು ಪ್ರಕೃತಿಪ್ರೇಮಿಗಳಿಗೆ ಹಾಗೂ ವಿಭಿನ್ನ ರೀತಿಯ  ಚಾರಣವನ್ನು ಬಯಸುವವರಿಗೆ ಇಷ್ಟವಾಗುವ ತಾಣ. ನಮ್ಮ ನೆರೆಯ ಗೋವಾದಲ್ಲಿ ಹರಿಯುವ ಮಾಂಡೋವಿ ನದಿಯು ಸೃಷ್ಟಿಸಿರುವ ದೂದ್ ಸಾಗರ ಜಲಪಾತವು  ನಾಲ್ಕು ಹಂತಗಳಲ್ಲಿ ನೀರನ್ನು ಚಿಮ್ಮಿಸುತ್ತದೆ. ಹೀಗೆ ಧುಮುಕುವ ಜಲಪಾತವು  ಹಾಲಿನಂತೆ ಕಾಣಿಸುವುದರಿಂದ ದೂದ್ ಸಾಗರ್ ಎಂಬ ಅನ್ವರ್ಥ ನಾಮ ಪಡೆದುಕೊಂಡಿದೆ. ಇದು ಗೋವಾದ ಪಣಜಿಯಿಂದ 60 ಕಿ.ಮೀ ದೂರದಲ್ಲಿದೆ.    

ದೂದ್ ಸಾಗರವನ್ನು ತಲಪಲು ರೈಲ್ ಅಥವಾ ಬಸ್ ಮಾರ್ಗದಲ್ಲಿ ಪ್ರಯಾಣಿಸಬೇಕು.  ಗೋವಾದ ಪಣಜಿಯಿಂದ ಬರುವುದಾದರೆ, 'ಕೊಲ್ಲೆಮ್' ಎಂಬ ಸ್ಟೇಷನ್ ಮೂಲಕ ಬರಬೇಕು. ಕರ್ನಾಟಕದ ಕಡೆಯಿಂದ ಹೋಗುವುದಾದರೆ 'ಕಾಸಲ್ ರೋಕ್' ಸ್ಟೇಶನ್ ಮೂಲಕ್ ಹಾದು ಹೋಗಬೇಕು. ದೂದ್ ಸಾಗರ್ ನಲ್ಲಿಯೂ  ರೈಲು ಒಂದು ನಿಮಿಷ ನಿಲ್ಲುವುದಾದರೂ ಇಲ್ಲಿ ಟಿಕೆಟ್ ಕೊಡುವ ವ್ಯವಸ್ಥೆ  ಇಲ್ಲದಿರುವುದರಿಂದ ಪ್ರಯಾಣಿಕರು ಮುಂಚಿತವಾಗಿ ಟಿಕೆಟ್ ಖರೀದಿಸಬೇಕು.

ಒಕ್ಟೋಬರ್ ತಿಂಗಳಿನಲ್ಲಿ ಕೂಡ ಬಹಳಷ್ಟು ನೀರನ್ನು ಹೊಂದಿದ್ದು ಸುಂದರವಾಗಿದ್ದ ದೂದ್ ಸಾಗರವು, ಮಳೆಗಾಲದಲ್ಲಿ ಇನ್ನಷ್ಟು ನೀರು ತುಂಬಿ ರಮಣೀಯವಾಗುತ್ತದೆ. ಜಲಪಾತದ ಕೆಳಭಾಗಲ್ಲಿ ನೀರಿಗೆ ಇಳಿದು ಸಂಭ್ರಮಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ನೀರಿನ ಆಳ, ರಭಸ  ಗಮನಿಸಿಕೊಂಡು ನೀರಿಗೆ ಇಳಿಯುವುದು ಒಳ್ಳೆಯದು. ನಾಲ್ಕು ಹಂತಗಳಿರುವ ಈ ಜಲಪಾತದ ಒಟ್ಟೂ ಎತ್ತರ  310 ಮೀಟರ್   ಹಾಗೂ ಸರಾಸರಿ 30 ಮೀಟರ್   ಅಗಲವಿದ್ದು, ಇದು ಭಾರತಸಲ್ಲಿ ಐದನೆಯ ದೊಡ್ಡ ಜಲಪಾತವಾಗಿದೆ.

ಚಾರಣಕ್ಕೆ ಹಲವಾರು ದಾರಿಗಳಿವೆಯಾದರೂ 'ಕಾಸಲ್ ರೋಕ್' ನಿಂದ  ರೈಲ್ವೇ  ಟ್ರ್ಯಾಕ್ ಮೇಲೆ  14 ಕಿ.ಮೀ  ನಡೆದು ದೂದ್ ಸಾಗರ್ ತಲಪವುದು ಹೆಚ್ಚಿನವರ ಆಯ್ಕೆ. ಇದಕ್ಕೆ ಕಾರಣ, ಈ ದಾರಿಯಲ್ಲಿ ಉತ್ತಮ ನಿಸರ್ಗ ಸಿರಿಯಿದೆ ಹಾಗೂ ಕೊಂಕಣ ರೈಲ್ವೇಯ  ಸುರಂಗ  ಮಾರ್ಗದಲ್ಲಿ ನಡೆಯುವ ಅವಕಾಶ ಸಿಗುತ್ತದೆ.  ರೈಲ್ ಹಳಿ ಮೇಲೆ ನಡೆಯುಯುದು  ಅಪರಾಧ ಕೂಡ ಹೌದು. ಆದರೆ ಕೆಲವು ನಿಗದಿತ ಟ್ರ್ಯಾಕ್ ಗಳಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಪೂರ್ವಾನುಮತಿಯೊಂದಿಗೆ ನಡೆಯುವುದುದಕ್ಕೆ ಅವಕಾಶವಿದೆ.

ದೂದ್ ಸಾಗರ್ ಬಗ್ಗೆ ಪ್ರಚಲಿತವಿರುವ ದಂತಕತೆಯ ಪ್ರಕಾರ, ಹಿಂದೆ, ಇಲ್ಲಿಗೆ ಪಕ್ಕದ  ಅರಮನೆಯಲ್ಲಿ ರಾಜಕುಮಾರಿಯೊಬ್ಬಳು ವಾಸವಿದ್ದಳು. ಇಲ್ಲೊಂದು ಸುಂದರ ಸರೋವರವಿತ್ತು. ರಾಜಕುಮಾರಿಯು ಪ್ರತಿದಿನ ಸರೋವರಕ್ಕೆ ಬಂದು ಸ್ನಾನ  ಮಾಡಿದ ನಂತರ, ಚಿನ್ನದ ಹೂಜಿಯಲ್ಲಿ ತಾನು ತಂದಿದ್ದ ಸಿಹಿಹಾಲನ್ನು ಕುಡಿಯುತ್ತಿದ್ದಳಂತೆ. ಹೀಗೆ ಒಂಸು ದಿನ ಸ್ನಾನ ಮಾಡಿ ಹಾಲು ಕುಡಿಯುತ್ತಿರುವಾಗ, ಪಕ್ಕದ ಕಾಡಿನ ಮರೆಯಲ್ಲಿ, ರಾಜಕುಮಾರನೊಬ್ಬ  ತನ್ನನ್ನು ನೋಡುತ್ತಿರುವುದನ್ನು ಗಮನಿಸಿದಳಂತೆ. ಮುಜುಗರಗೊಂಡ ಆಕೆ ಹೂಜಿಯ ಹಾಲನ್ನು ಚೆಲ್ಲಿ, ಅಪಾರದರ್ಶಕತೆಯನ್ನು ಸೃಷ್ಟಿಸಿ ತನ್ನ ಗೌರವವನ್ನು ಕಾಪಾಡಿಕೊಂಡಳಂತೆ. ಹೀಗೆ ಹರಿದ ಹೂಜಿಯ ಹಾಲು 'ದೂದ್ ಸಾಗರ್' ಎಂದ ಹೆಸರು ಪಡೆಯಿತಂತೆ.























ಮೈಸೂರಿನ  ಯೂತ್ ಹಾಸ್ಟೆಲ್ ಅಸೋಸಿಯೇಶನ್, ಗಂಗೋತ್ರಿ ಘಟಕವು , ಒಕ್ಟೊಬರ್ 18 -19 ರಂದು ಆಯೊಜಿಸಿದ್ದ ಈ ಕಾರ್ಯಕ್ರಮದಲ್ಲಿ 102 ಜನ ಭಾಗವಹಿಸಿದ್ದೆವು. 2  ಬಸ್ ತುಂಬಾ ಜನ ಮೈಸೂರಿನಿಂದ  ಸುಮಾರು ಸಂಜೆ  ಘಂಟೆಗೆ ಹೊರಟೆವು. ಆಗ ತಾನೇ ದಸರಾ ಮುಗಿದಿದ್ದ ನೆನಪೋ ಎಂಬಂತೆ, ನಮ್ಮ ತಂಡದ ಕೆಲವರು, ಬಸ್ ಪ್ರಯಾಣದುದ್ದಕ್ಕು ಹಾಡು -ನೃತ್ಯ ಸಂಯೋಜನೆಯಿಂದ ಬಸ್ ನಲ್ಲಿ 'ಯುವ ದಸರಾ' ವನ್ನು  ಸೃಷ್ಟಿಸಿದ್ದರು.ನಾವೇನು ಕಡಿಮೆ ಎಂಬಂತೆ ಹಿರಿಯ ಯೂಥ್ ಗಳು ಸಾಥ್ ಕೊಟ್ಟಿದ್ದರು.

ನಮ್ಮ ಆಯೋಜಕರ ಆಯ್ಕೆ ಕಾಸಲ್ ರೋಕ್ ಮೂಲಕ ಆಅಗಿತ್ತು. ಅಲ್ಲಿನ ಅತಿಥಿ ಗೃಹವನ್ನು ಮುಂಚಿತವಾಗಿ ಕಾದಿರಿಸಿದ್ದುದು ನಮಗೆ  ಫ್ರೆಶ್ ಅಪ್ ಆಗಲು ಅನುಕೂಲವಾಯಿತು. ಊಟ-ತೀಂಡಿಯ ಜವಾಬ್ದಾರಿ ಹೊತ್ತಿದ್ದ ಶ್ರೀ ಜಿ.ಡಿ. ಸುರೇಶ್ ಅವರ ನೇತೃತ್ವದಲ್ಲಿ, ಬಹಳ ಅಚ್ಚುಕಟ್ಟಾಗಿ, ರುಚಿ-ರುಚಿ, ಬಿಸಿ-ಬಿಸಿ ಊಟ ತಿಂಡಿ ನಮ್ಮೆದುರೇ ತಯಾರಾಗುತ್ತಿತ್ತು. ತಮ್ಮ ವಾಹನದಲ್ಲಿ ಅಡುಗೆಯ ಪರಿಕರಗಳನ್ನೂ ಜೋಡಿಸಿಕೊಂಡು, ಆಯಾಯ ಸ್ಥಳದಲ್ಲಿ ಇರುವ ಅನುಕೂಲತೆಗಳನ್ನು ಬಳಸಿಕೊಂಡು ನಳಪಾಕ ಸಿದ್ಧಪಡಿಸುತ್ತಿದ್ದರು.

ಹಸಿರು ಕಾಡಿನ  ಮಧ್ಯೆ ಹಾದು ಹೋಗಿರುವ ಈ ರೈಲ್ ಮಾರ್ಗದಲ್ಲಿ ಹಳಿಯುದ್ದಕ್ಕೂ ಹಲವಾರು ಸುರಂಗಗಳು ಎದುರಾಗುತ್ತವೆ. ರೈಲ್ ಹಳಿ ಮೇಲೆ ನಡೆಯುವುದು ಎಷ್ಟು ಕಷ್ಟ ಎಂದು ಕಿ.ಮಿ. ನಡೆದಾಗ ಅರ್ಥವಾಯಿತು. ಜಲ್ಲಿ ಕಲ್ಲುಗಳ ಮೇಲೆ   ಕಾಲು ಉಳುಕದಂತೆ ಜಾಗರೂಕತೆ ವಹಿಸಬೇಕು. ಸಮಾನ ಅಂತರದಲ್ಲಿರುವ ರೈಲ್ ಪಟ್ಟಿಯ ಮೇಲೆ ನಡೆಯುವಾಗ ಒಂದು ಲಯ/ಗತಿ  ಬೇಕು. ಜತೆಗೆ ರೈಲ್ ಪಟ್ಟಿಯಲ್ಲಿ ಇರುವ ಕೊಳಕು ಪಾದಕ್ಕೆ ಹತ್ತದಂತೆ ಗಮನ ಹರಿಸುತ್ತಲೇ ಇರಬೇಕು!



ತಂಡದ ಕೆಲವರು ಉತ್ಸಾಹದಿಂದ ನಡೆದರು, ಇನ್ನು ಕೆಲವರು ಆರಂಭ ಶೂರತ್ವ ಪ್ರದರ್ಶಿಸಿ ಆಮೇಲೆ ನಿಧಾನ ಗತಿಗೆ ಶರಣಾದರು. ಟ್ರೈನ್ ಬರುವ ಸಂಕೇತ ಸಿಕ್ಕಿದಾಗ ಸುರಂಗ ಮಾರ್ಗದಲ್ಲಿ ನಡೆಯಬೇಡಿರೆಂದು ನಮಗೆ ಆಯೋಜಕರು ಮುನ್ನೆಚ್ಚರಿಕೆ ಕೊಟ್ಟಿದ್ದರು. ಯಾಕೆಂದರೆ, ಬೋಗಿಗಳು ಸುರಂಗ ಮಾರ್ಗದಲ್ಲಿ ಭಡಭಡನೆ ಹಾದುಹೋಗುವಾಗ  ಉಂಟಾಗುವ ಶಬ್ದಕ್ಕೆ ನಮ್ಮ ಕಿವಿತಮ್ಮಟೆ ಕಿತ್ತು ಹೋಗುವಂತಾಗುತ್ತದೆ! 



ದಾರಿಯಲ್ಲಿ ಅಲ್ಲಲ್ಲಿ ಸಣ್ಣ-ಪುಟ್ಟ ನೀರಿನ ಝರಿಗಳು ಕಾಣ ಸಿಕ್ಕಿದುವು. ಅದೆಷ್ಟು ಬಾರಿ ನಮ್ಮ ಬಾಟಲಿಗೆ ನೀರು ತುಂಬಿಸಿಕೊಂಡೆವೋ ಗೊತ್ತಿಲ್ಲ, ಸಿಹಿನೀರು ಕುಡಿದಷ್ಟು ಸಾಲದು ಎನಿಸಿತ್ತು. ದಾರಿಯುದ್ದಕ್ಕೂ  ಸೌತೆಕಾಯಿ ತಿಂದೆವು, ಫೊಟೊ ಕ್ಲಿಕ್ಕಿಸಿದೆವು, ಬಂದು-ಹೋಗುತ್ತಿದ್ದ ಟ್ರೈನ್ ಗಳ ಬೋಗಿಗಳನ್ನು ಎಣಿಸಿದೆವು,    ಕೀಟಲೆ ಮಾತುಗಳು, ಅಣಕು ಹಾಡುಗಳು.....ಇತ್ಯಾದಿಗಳಿಂದ ಸಂಪನ್ನಗೊಂಡ ನಮ್ಮ ತಂಡ ದೂದ್ ಸಾಗರ್ ತಲಪಿದಾಗ ಸುಮಾರು 3 ಘಂಟೆ ಆಗಿತ್ತು. ಮಧ್ಯಾಹ್ನದ ಊಟಕ್ಕೆಂದು ಕೊಟ್ಟಿದ್ದ ಚಿತ್ರಾನ್ನ, ಸಿಹಿ ಸವಿದೆವು. ಊಟದ ನಂತರ ಕೆಲವರು ಜಲಪಾತದ ನೀರಿಗೆ  ಇಳಿದರು. ಹಿಂತಿರುಗಿ  ಬರಲು ಟ್ರೈನ್ ನಿಗದಿತ ಅವಧಿಗೆ ಬಾರದೆ ಇದ್ದುದರಿಂದ ನಾವು ದೂದ್ ಸಾಗರ್ ರೈಲ್ವೇ ಸ್ಟೇಶನ್ ನಲ್ಲಿ ಒಂದು ತಾಸು ಕಾದೆವು. ಕೊನೆಗೂ  ಘಂಟೆಗೆ ಟ್ರೈನ್ ಬಂತು. ಎಲ್ಲರೂ ಅದರಲ್ಲಿ ಪ್ರಯಾಣಿಸಿ  ಕಾಸಲ್ ರೋಕ್ ತಲಪಿದೆವು. ರಾತ್ರಿಯ ಊಟಕ್ಕೆ ಅನ್ನ, ಸಾಂಬಾರ್, ತಿಳಿಸಾರು, ಸಿಹಿ ಇತ್ತು. ಈಗ  ಎಲ್ಲರಿಗೂ ಸುಸ್ತಾಗಿತ್ತು, ಆದರೆ ಚಾರಣ ಪೂರೈಸಿದ ತೃಪ್ತಿ ಇತ್ತು. ಹೀಗೆ ನಮ್ಮ ದೂದ್ ಸಾಗರ್ ಚಾರಣ ಕೊನೆಗೊಂಡು ನಮ್ಮ ಮುಂದಿನ  ಗಮ್ಯ ಸ್ಥಾನವಾಗಿದ್ದ  ಜೋಗ  ಜಲಪಾತದೆಡೆಗೆ ಪ್ರಯಾಣ ಮುಂದುವರಿಯಿತು.


ವಿಭಿನ್ನ ಹಿನ್ನೆಲೆಯ ಆದರೆ ಸಮಾನಾಸಕ್ತಿಯುಳ್ಳ ಗುಂಪನ್ನು ಒಟ್ಟುಗೂಡಿಸಿ, ಇನ್ನೊಂದು ರಾಜ್ಯದಲ್ಲಿ ಚಾರಣ ಕಾರ್ಯಕ್ರಮಕ್ಕೆ ಕರೆದೊಯ್ದು, ಎಲ್ಲರ ಊಟ-ತಿಂಡಿ-ಯೊಗಕ್ಷೇಮದ  ಹೊಣೆ ಹೊರುವುದು ಸುಲಭದ ಕೆಲಸವಲ್ಲ. ಈ ಹೊಣೆಗಾರಿಕೆಯನ್ನು ಯಶಸ್ವಿಯಾಗಿ  ನಿಭಾಯಿಸಿದ ಶ್ರೀ. ಜಿ.ಡಿ ಸುರೇಶ್ ಹಾಗು ಶ್ರೀಮತಿ ಗೋಪಿ ಅವರಿಗೆ ಅನಂತ ವಂದನೆಗಳು. 

Sunday, December 8, 2013

ಇದು ಕಪಿಚೇಷ್ಟೆ ಅಲ್ಲ..





.










ಇದು ಕಪಿಚೇಷ್ಟೆ ಖಂಡಿತಾ ಅಲ್ಲ... ಬಹಳ ಗಂಭೀರ ವಿಚಾರ. 
ವನ್ಯಜೀವಿಗಳಿಗೆ ಆಶ್ರಯತಾಣವಾಗಿರುವ ಬಂಡೀಪುರ ಅರಣ್ಯವ್ಯಾಪ್ತಿಯಲ್ಲಿ, ನಗರ ಪ್ರದೇಶದಿಂದ ಬಂದು,ಅಲ್ಲಿನ ಕಸ, ಪ್ಲಾಸ್ಟಿಕ್ ಇತ್ಯಾದಿ ತಂದು ಹಾಕಿ ಪರಿಸರವನ್ನೂ, ತಮ್ಮ ಅರೋಗ್ಯವನ್ನೂ ಹಾಳುಗೆಡವಬೇಡಿರೆಂದು ಕಳಕಳಿಯ ವಿನಂತಿ..




Friday, December 6, 2013

ಸವಿರುಚಿ : ಇಡ್ಲಿ ಹಿಟ್ಟಿನ ಪಕೋಡ

ದಕ್ಷಿಣ ಭಾರತದಲ್ಲಿ ಬೆಳಗ್ಗಿನ  ಉಪಾಹಾರವಾದ  'ಇಡ್ಲಿ'ಯನ್ನು  ಬಹುಜನರ ಮೆಚ್ಚಿನ ತಿಂಡಿ. ಇಡ್ಲಿ ತಯಾರಿಸಿ ಮಿಕ್ಕ ಹಿಟ್ಟಿನಿಂದ ರುಚಿಕಟ್ಟಾದ  ಸ್ನ್ಕಾಕ್ಸ್ ತಯಾರಿಸಿದರೆ, ಸಾಯಂಕಾಲದ ತಿಂಡಿಯೂ ಆಗುತ್ತದೆ, ರುಚಿಯ ಏಕತಾನತೆಯೂ ತಪ್ಪುತ್ತದೆ.

ಇಡ್ಲಿ ಹಿಟ್ಟನ್ನು ಗರಿಗರಿ ಪಕೋಡವನ್ನಾಗಿಸುವ ಬಗೆಯನ್ನು, ಶ್ರೀಮತಿ ಸಾವಿತ್ರಿ ಎಸ ಭಟ್ , ಹೇಳಿ ಕೊಟ್ಟಿದ್ದು ಹೀಗೆ:

ತಿನಿಸು  : ಇಡ್ಲಿ ಹಿಟ್ಟಿನ ಪಕೋಡ     


ಇವೆಲ್ಲಾ  ಬೇಕು: 

  • ಇಡ್ಲಿ ಹಿಟ್ಟು - ಕಪ್
  • ಮೈದಾ ಹಿಟ್ಟು - ½  ಕಪ್
  • ಸಣ್ಣ ರವೆ -  ¼ ಕಪ್
  • ಹೆಚ್ಚಿದ ಈರುಳ್ಳಿ - ½  ಕಪ್
  • ಹೆಚ್ಚಿದ ಕರಿಬೇವಿನ ಸೊಪ್ಪು  - ಸ್ವಲ್ಪ
  • ಹಸಿರು ಮೆಣಸಿನಕಾಯಿ ಅಥವಾ ಖಾರದ ಪುಡಿ - ಸ್ವಲ್ಪ
  • ಅರಸಿನ  ಹುಡಿ -  ಚಿಟಿಕೆ 
  • ಅಡುಗೆ ಸೋಡಾ - ಚಿಟಿಕೆ
  • ರುಚಿಗೆ ತಕ್ಕಷ್ಟು  ಉಪ್ಪು 
  • ಕರಿಯಲು ಎಣ್ಣೆ

ಹೀಗೆ ಮಾಡಿ ನೋಡಿ :


1. ಎಣ್ಣೆಯನ್ನು ಬಿಟ್ಟು, ಮಿಕ್ಕ ಎಲ್ಲಾ  ಸಾಮಾನುಗಳನ್ನು ಒಟ್ಟಾಗಿ  ಕಲಸಿ ಇಟ್ಟುಕೊಳ್ಳಿ.
2. ಒಂದು ಬಾಣಲಿಯಲ್ಲಿ  ಎಣ್ಣೆಯನ್ನು ಕಾಯಲು ಇಡಿ.
3. ಎಣ್ಣೆ ಕಾದ ಮೇಲೆ,  ಕಲಸಿಟ್ಟ ಹಿಟ್ಟನ್ನು ಚಿಕ್ಕ ಚಿಕ್ಕ  ಉಂಡೆಯಂತೆ ಹಾಕಿ ಕರಿಯಿರಿ.
4. ಪಕೋಡ ಗರಿಗರಿಯಾಗಿ ಹೊಂಬಣ್ಣಕ್ಕೆ ತಿರುಗಿದಾಗ ಎಣ್ಣೆಯಿಂದ ತೆಗೆಯಿರಿ.

ಇಡ್ಲಿ ಹಿಟ್ಟಿನ ಪಕೋಡ ಸಿದ್ಧ .  ಟೊಮ್ಯಾಟೋ ಸಾಸ್ ನೊಂದಿಗೆ  ಬಲು ರುಚಿ.



Sunday, December 1, 2013

ಸವಿರುಚಿ : ವೆಜ್ ಫೋಲ್ಡರ್

ಬಹುಶ: ಅಡಿಗೆಮನೆಯಲ್ಲಿ ನಡೆಯುವಷ್ಟು  ಸಂಶೋಧನಾ ಕಾರ್ಯ ಬೇರೆಲ್ಲೂ ನಡೆಯುವುದಿಲ್ಲ ಎಂದು ನನ್ನ ಭಾವನೆ. ಹಾಗಾಗಿ ವಿಭಿನ್ನ ರುಚಿಯ ತಿನಿಸುಗಳು ಪ್ರಾದೇಶಿಕತೆಯನ್ನು ಮೈಗೂಡಿಸಿಕೊಂಡು ಉಣ್ಣುವವರ ಜಿಹ್ವಾಚಾಪಲ್ಯ ತಣಿಸುತ್ತವೆ ಹಾಗೂ ಆರೋಗ್ಯವನ್ನು ವರ್ಧಿಸುತ್ತವೆ.

ಪುತ್ತೂರಿನ ಶ್ರೀಮತಿ ಸಾವಿತ್ರಿ ಎಸ್ ಭಟ್, ಅವರು ಕಳುಹಿಸಿದ ಒಂದು ಸವಿರುಚಿಯ ವಿವರ ಹೀಗಿದೆ:

ತಿನಿಸು         :  ವೆಜ್ ಫೋಲ್ಡರ್

ಇವೆಲ್ಲಾ ಬೇಕು :
                  ಗೋಧಿ ಹಿಟ್ಟು - 2 ಕಪ್
                  ಸಣ್ಣ ರವೆ - 1 ಕಪ್
                  ಸಣ್ಣಗೆ ಹೆಚ್ಚಿದ ತರಕಾರಿಗಳು - 2 ಕಪ್(ಬೀನ್ಸ್,ಕ್ಯಾರೆಟ್, ಬೀಟ್ ರೂಟ್, ಕ್ಯಾಬೇಜ್)
                  ಕೊತ್ತಂಬರಿ ಸೊಪ್ಪು - 1 ಕಪ್
                  ಬೆಳ್ಳುಳ್ಳಿ ಎಸಳು - 2
                  ಹಸಿರುಮೆಣಸಿನ ಕಾಯಿ - 2
                  ಅಡುಗೆ ಎಣ್ಣೆ  - 4ಚಮಚ
                  ತುಪ್ಪ- 8 ಚಮಚ
                  ಉಪ್ಪು - ರುಚಿಗೆ ತಕ್ಕಷ್ಟು

ಹೀಗೆ ಮಾಡಿ ನೋಡಿ :

1. ಗೋಧಿಹಿಟ್ಟು ಮತ್ತು ಸಣ್ಣ ರವೆಯನ್ನು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.




2. ಹೆಚ್ಚಿದ ತರಕಾರಿಗಳನ್ನು, ಉಪ್ಪು ಹಾಕಿ, ಸ್ವಲ್ಪ ಎಣ್ಣೆಯೊಂದಿಗೆ ಹುರಿಯಿರಿ.
3. ಕೊತ್ತಂಬರಿ ಸೊಪ್ಪು, ಹಸಿರುಮೆಣಸಿನಕಾಯಿ  ಮತ್ತು ಬೆಳ್ಳುಳ್ಳಿ ಯನ್ನು, ಮಿಕ್ಸಿಗೆ  ಹಾಕಿ ರುಬ್ಬಿ.
4. ರುಬ್ಬಿದ ಮಿಶ್ರಣವನ್ನು ತರಕಾರಿ ಪಲ್ಯಕ್ಕೆ ಹಾಕಿ ಚೆನ್ನಾಗಿ ಬೆರೆಸಿ.
5. ಕಲಸಿಟ್ಟ ಹಿಟ್ಟಿನಿಂದ ಸಣ್ಣ ಚಪಾತಿಗಳನ್ನು ಲಟ್ಟಿಸಿ.



6. ತಯಾರಿಸಿದ ಪಲ್ಯವನ್ನು ಚಪಾತಿ ಮಧ್ಯೆ  ಇಟ್ಟು,  ಚಿತ್ರದಲ್ಲಿ ತೋರಿಸಿದಂತೆ ೪ ಮೂಲೆಯಲ್ಲೂ ಮಡಚಿ.





7. ಮಡಚಿದ ಚಪಾತಿಯನ್ನು, ತವಾದಲ್ಲಿ, ತುಪ್ಪ ಹಾಕಿ  ಬೇಯಿಸಿ.


ರುಚಿಯಾದ ವೆಜ್ ಫೋಲ್ಡರ್. ತಿನ್ನಲು ಸಿದ್ಧ. ಇದನ್ನು ಚಟ್ನಿಯೊಂದಿಗೆ ಅಥವಾ ಗಟ್ಟಿ ಮೊಸರಿನೊಂದಿಗೆ ಸವಿಯಬಹುದು. ಬೆಳಗಿನ  ತಿಂಡಿಗೂ ಸೈ, ಮಕ್ಕಳ ಲಂಚ್ ಬಾಕ್ಸ್ ಗೂ ಚೆನ್ನಾಗಿರುತ್ತದೆ.