Total Pageviews

Wednesday, November 19, 2014

ಲೋಟಸ್ ಟೆಂಪಲ್ – ಕಮಲ ಮಂದಿರ

 / 

Share Button
ಇದು ದೆಹಲಿಯಲ್ಲಿರುವ ಲೋಟಸ್ ಟೆಂಪಲ್  – ಕಮಲ ಮಂದಿರ ಬಹವಾಯಿ ಪಂಥದವರು ಇದರ ಸೃಷ್ಟಿಕರ್ತರು.
lotus temple
ಸರೋವರದ ಮಧ್ಯದಲ್ಲಿ ಕಂಗೊಳಿಸುವ ಕಮಲದ ಆಕಾರದಲ್ಲಿ ಕಟ್ಟಲಾದ ಭವ್ಯ ಧ್ಯಾನಮಂದಿರ. ಸಾರ್ವತ್ರಿಕ ಐಕ್ಯತೆ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುವ  ಈ  ಧ್ಯಾನಮಂದಿರದಲ್ಲಿ ಯಾವ ಧರ್ಮದವರೂ ನಿಶ್ಶಬ್ದವಾಗಿ ತಮ್ಮ ನಂಬಿಕೆಯ ದೇವರನ್ನು ಪ್ರಾರ್ಥಿಸಬಹುದು. ಬಹಳ ಸೊಗಸಾದ ಈ ಮಂದಿರವನ್ನು  1986 ರಲ್ಲಿ ಕಟ್ಟಿದರು. ಈ ಮಂದಿರವನ್ನು ಕಟ್ಟಲು 10 ವರ್ಷಗಳ ಕಾಲ  800 ಕ್ಕೂ ಹೆಚ್ಚು ಜನ ದುಡಿದರು. ಒಂಭತ್ತು ಬಾಗಿಲುಗಳನ್ನು ಹೊಂದಿದ ಈ ಕಟ್ಟಡವು ವಿಶಾಲವಾಗಿದ್ದು ಏಕಕಾಲದಲ್ಲಿ  ಸಾವಿರಕ್ಕೂ ಹೆಚ್ಚು ಜನ ಪ್ರಾರ್ಥಿಸಬಹುದು.
Lotus temple1
ಅದ್ಭುತವಾದ ವಾಸ್ತುರಚನೆಯಿಂದಾಗಿ ಮುಖ್ಯ ಪ್ರವಾಸಿ ಆಕರ್ಷಣೆಯಾದ ಈ ಕಟ್ಟಡದ ವಾಸ್ತುಶಿಲ್ಪಿ Fariborz Sahba. 
.
- ಹೇಮಮಾಲಾ.ಬಿ
  

ನೀರಿನಿಂದ ಮೇಲೆದ್ದ ವೇಣುಗೋಪಾಲಸ್ವಾಮಿ


Share Button

ಮೈಸೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ‘ಹೊಸಕನ್ನಂಬಾಡಿ’ ಎಂಬ ಊರು ಕೃಷ್ಣರಾಜ ಸಾಗರ (ಕೆ.ಆರ್.ಎಸ್) ಅಣೆಕಟ್ಟಿನ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿದೆ. ಅಣೆಕಟ್ಟನ್ನು ಕಟ್ಟಿದಾಗ ಮುಳುಗಡೆಯಾಗಿದ್ದ ವೇಣುಗೋಪಾಲಸ್ವಾಮಿ ದೇವಾಲಯನ್ನು ನೀರಿನಿಂದ ಮೇಲೆತ್ತಿ, ಯಥಾವತ್ತಾಗಿ ಪುನರ್ನಿಮಾಣಗೊಳಿಸುವ ಕಾರ್ಯ ಅಲ್ಲಿ ಭರದಿಂದ ನಡೆಯುತ್ತಿದೆ. ಈ ಪರಿಸರವು ತುಂಬಾ ಚೆನ್ನಾಗಿದೆ. 


Hosa kannambadi temple1
Hosa kannambadi Venugopal temple

ಕೆ.ಆರ್.ಎಸ್ ನ ಬೃಂದಾವನಕ್ಕೆ ಹೊಗುವ ದಾರಿಯಲ್ಲಿ ಮುಂದಕ್ಕೆ ಪ್ರಯಾಣಿಸಿದಾಗ ‘ಬಸ್ತಿಹಳ್ಳಿ’ ಸಿಗುತ್ತದೆ. ಅಲ್ಲಿಂದ ಸುಮಾರು 3 ಕಿ.ಮಿ ಮುಂದೆ ಹೋಗುವಷ್ಟರಲ್ಲಿ ‘ಹೊಸಕನ್ನಂಬಾಡಿ’ ಸಿಗುತ್ತದೆ. ಅಲ್ಲಿ ಈ ದೇವಸ್ಥಾನ ಇರುವುದು.


- ಸುರಗಿ

ಜಾನಪದ ಲೋಕದಲ್ಲಿ ವಿಹಾರ

ಜಾನಪದ ಲೋಕದಲ್ಲಿ ವಿಹಾರ

Share Button
Janapada loka entrance


ಮೈಸೂರು – ಬೆಂಗಳೂರಿನ ಹೆದ್ದಾರಿಯಲ್ಲಿ 2 ಗಂಟೆ ಪ್ರಯಾಣಿಸಿದಾಗ ‘ರಾಮನಗರ’ ಸಿಗುತ್ತದೆ. ಇಲ್ಲಿ ಸುಮಾರು 15 ಎಕರೆಯಷ್ಟು ವಿಸ್ತಾರವಾದ ಜಾಗದಲ್ಲಿ ನಿರ್ಮಿಸಲಾದ ‘ಜಾನಪದ ಲೋಕ’ ಬಹಳ ಸೊಗಸಾಗಿದೆ. ಇದು ಶ್ರೀ. ಎಚ್. ಎಲ್. ನಾಗೇಗೌಡರ ಕನಸಿನ ಕೂಸು.
ಸುಂದರವಾದ ಕೊಂಬು-ಹರಿಗೆಗಳನ್ನೊಳಗೊಂಡ ಹೆಬ್ಬಾಗಿಲು ನಮ್ಮನ್ನು ಸಾಗತಿಸುತ್ತದೆ. ನಾವು ಅಲ್ಲಿಗೆ ಭೇಟಿ ಕೊಟ್ಟ ಸಂದ ರ್ಭದಲ್ಲಿ ಅಲ್ಲಿ ಕಲಾತಂಡವೊಂದು ‘ ಕಂಸಾಳೆ’ ಕಾರ್ಯಕ್ರಮ ನೀಡುತ್ತಿತ್ತು. ಇನ್ನು ಮುಂದೆ ಹೋದಾಗ ವಿವಿಧ ಜಾನಪದ ವಸ್ತು ಸಂಗ್ರಹಾಲಯಗಳು ಎದುರಾದವು. ಹಿಂದೆ ಬಳಸಲಾಗುತ್ತಿದ್ದ ಅಳತೆಯ ಮಾಪನಗಳು, ಅಡಿಗೆಯ ಪರಿಕರಗಳು, ಕೃಷಿಗೆ ಬಳಸುವ ಪರಿಕರಗಳು,  ಮರದ ಮೊರ, ತೊಟ್ಟಿಲು, ಬೀಸಣಿಗೆ, ಬುಟ್ಟಿ..ಇತ್ಯಾದಿ ಜನಪದ ಜೀವನ ಶೈಲಿಯನ್ನು ಬಿಂಬಿಸುವ ವಸ್ತುಗಳನ್ನು ಓರಣವಾಗಿ ಜೋಡಿಸಲಾಗಿತ್ತು.
Janapada loka- wax statues






DSC04430






ಕಂಬಗಳನ್ನೊಳಗೊಂಡ ಮನೆಯಲ್ಲಿ ಭತ್ತ ಕುಟ್ಟುವ, ರಾಗಿ ಬೀಸುವ, ಬಾವಿಯಿಂದ ನೀರು ಸೇದುವ, ಗಾಣದಲ್ಲಿ ಎಣ್ಣೆ ತೆಗೆಯುವ ..ಜನರ ಮೇಣದ ಪ್ರತಿಮೆಗಳು ಅಂದಿನ ಜನಜೀವನ ಹೀಗಿತ್ತು, ಎಂದು ತೋರಿಸುತ್ತವೆ.
Janapada loka- pottery‘ಲೋಕಮಹಲ್'; ಎಂಬ ಭವ್ಯ ಕಟ್ಟಡದಲ್ಲಿ ಅದೆಷ್ಟೊ ಬಗೆಯ ಜನಪದ ಕಲೆಗಳ ಅನಾವರಣವಿದೆ. ತೊಗಲುಬೊಂಬೆ, ಬೊಂಬೆಯಾಟ, ಯಕ್ಷಗಾನ ಇತ್ಯಾದಿಗಳ ಬಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ.
ನಮ್ಮೆದುರೇ ಮರದ ಸಣ್ಣ ಪುಟ್ಟ ಮರದ ಬೊಂಬೆಗಳನ್ನು ತಯಾರಿಸಿ ಕೊಡುವವರು ಅಲ್ಲಿ ಇದ್ದರೆ. ಹಾಗೆಯೇ, ಮಣ್ಣಿನಿಂದ ಮಡಿಕೆ-ಕುಡಿಕೆ ಮಾಡುವ ಪ್ರಾತ್ಯಕ್ಷಿಕೆಯೂ ಇದೆ. ಮಕ್ಕಳಿಗೆ ಮನರಂಜನೆಗೆಂದು ದೋಣಿವಿಹಾರಕ್ಕೂ ಆಸ್ಪದವಿದೆ. ಒಟ್ಟಾರೆಯಾಗಿ, ಜನಪದ ಬದುಕಿನ ಬಗ್ಗೆ ಆಸಕ್ತಿಯಿರುವವರಿಗೆ ಅರಿಯಲು ಬಹಳಷ್ಟು ವಿಚಾರಗಳಿವೆ. ಹೆಚ್ಚಿನ ವಿವರಗಳು ಗೂಗಲ್ ನಲ್ಲಿ ಲಭ್ಯ.



– ಹೇಮಮಾಲಾ

ಇಲ್ಲಿ ಕಾಲ ಸ್ತಬ್ಧವಾಗಿದೆಯೇ?

ಇಲ್ಲಿ ಕಾಲ ಸ್ತಬ್ಧವಾಗಿದೆಯೇ?

Share Button
Hema6
ಹೇಮಮಾಲಾ. ಬಿ.

ಸುತ್ತಲೂ ಅಲೆ ಅಲೆಯಾಗಿ ಕಾಣಿಸುವ ಮಲೆಗಳು, ಕೆಲವು ಕಿರಿದಾದ ಕಾಲುದಾರಿಗಳು, ಕತ್ತೆಗಳ ಬೆನ್ನ ಮೇಲೆ ಹೊರೆ ಹೊರಿಸಿ ವಸ್ತುಗಳ ಸಾಗಾಣಿಕೆ, ಬೆರಳೆಣಿಕೆಯ ಮನೆಗಳು, ಆ ಮನೆಗಳಲ್ಲಿ ಸೆಗಣಿ ಸಾರಿಸುತ್ತಿರುವ, ಮೊಸರು ಕಡೆಯುತ್ತಿರುವ, ಒರಳಲ್ಲಿ ಮಸಾಲೆ ರುಬ್ಬುತ್ತಿರುವ , ಬಾವಿಯಿಂದ ನೀರು ಸೇದುತ್ತಿರುವ ಜನರು…  ಒಟ್ಟಾರೆಯಾಗಿ ಈಗಿನ ಸೂಪರ್ ಸೋನಿಕ್ ಯುಗದಲ್ಲೂ  ಕನಿಷ್ಟ ಸೌಲಭ್ಯದಲ್ಲಿ  ಜೀವನ ಸಾಗಿಸಬೇಕಾದ ಅನಿವಾರ್ಯತೆಯುಳ್ಳ ಹಳ್ಳಿಗಳು. ಇದು ಯಾವುದೋ ಪುರಾತನ ನಗರಿಯ ವರ್ಣನೆಯಲ್ಲ. ಜೂನ್ 22 ಭಾನುವಾರ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಿಂದ 14 ಕಿ.ಮಿ ದೂರವಿರುವ ‘ನಾಗಮಲೆ’ ಗೆ ಚಾರಣ ಮಾಡುವಾಗ ಕಂಡ ದೃಶ್ಯಗಳು.
Donkeysಮೈಸೂರಿನ ಯೂಥ್ ಹಾಸ್ಟೆಲ್ ಅಸೋಸಿಯೇಷನ್ ನ ವತಿಯಿಂದ ಜೂನ್ 22 ರಂದು ನಾಗಮಲೆಗೆ  ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ಜೂನ್ 21  ರಂದು ರಾತ್ರಿ 1030 ಗಂಟೆಗೆ ನಮ್ಮ ತಂಡವನ್ನು ಹೊತ್ತಿದ್ದ ಮಿನಿಬಸ್  ಚಾಮರಾಜ ನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಹೊರಟಿತು. ಅಲ್ಲಿಗೆ ಬೆಳಗಿನ ಜಾವ ತಲಪಿದೆವು. ವಸತಿಗೃಹವೊಂದರಲ್ಲಿ ತಾತ್ಕಾಲಿಕವಾಗಿ ವಿಶ್ರಮಿಸಿ ಬೆಳಗ್ಗೆ 0530  ಗಂಟೆಗೆ ಚಾರಣಕ್ಕೆ ಹೊರಡಲು ಸಜ್ಜಾದೆವು. ಅಲ್ಲಿನ ಉಪಾಹಾರ ಗೃಹದಿಂದ ನಮ್ಮ  ಟಿಫಿನ್ ಬಾಕ್ಸ್ ಗೆ ಇಡ್ಲಿ-ವಡೆ ತುಂಬಿಸಿ ನಡೆಯಲು ಆರಂಭಿಸಿದೆವು.
ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗಲು ಸ್ವಲ್ಪ ದೂರ ರಸ್ತೆಯಲ್ಲಿ ನಡೆದೆವು. ಆಮೇಲೆ ಸುಮಾರಾದ ಮಣ್ಣಿನ ರಸ್ತೆ ಎದುರಾಯಿತು. ಈ ಕಚ್ಚಾ ದಾರಿಯಲ್ಲಿ ಜೀಪ್ ಗಳು ಮಾತ್ರ  ಅನಿವಾರ್ಯವಾದ ವೈಯಾರದಿಂದ ಬಳಕುತ್ತಾ, ಕುಲುಕುತ್ತಾ ಹೋಗುತ್ತವೆ. ಇಲ್ಲೂ ಕೆಲವು ‘ಸಿಟಿ ಹುಡುಗರು’ ತಮ್ಮ ಮೋಟರ್ ಬೈಕ್ ನಲ್ಲಿ ಪ್ರಯಾಣಿಸಿ ನಮಗೆ ಪುಕ್ಕಟೆ ‘ಸ್ಟಂಟ್ ಶೋ’ ಒದಗಿಸಿದರು.  ಬಹುಶ: ಅವರಿಗೆಲ್ಲ ಮಾದಪ್ಪನ ದಯವಿದ್ದಿರಬೇಕು, ಯಾಕೆಂದರೆ, ಯಾರೂ ಬಿದ್ದು ತಮ್ಮ ಕೈ-ಕಾಲು ಮುರಿದುಕೊಳ್ಳಲಿಲ್ಲ.
Curd churningಆಗ ಇನ್ನೂ ಬೆಳಗಿನ ಹೊತ್ತು. ನಿಸರ್ಗದ ಸಿರಿಯನ್ನು ಸವಿಯುತ್ತ ನಡೆದೆವು. ಸುಮಾರು ೩ ಗಂಟೆ ನಡೆದಾದ ಮೇಲೆ ಕಾಡಲ್ಲಿ ಒಂದು ಕಡೆ ಕುಳಿತು ನಾವು ತಂದ ಉಪಾಹಾರವನ್ನು ಮುಗಿಸಿ ಮುಂದಿನ ಪಯಣಕ್ಕೆ ಸಜ್ಜಾದೆವು. ಇನ್ನೂ ಒಂದು ಗಂಟೆ ನಡೆದಾದ ಮೇಲೆ ‘ಇಂಡಿಗನತ್ತ’ ಎಂಬ ಪುಟ್ಟ ಹಳ್ಳಿಯನ್ನು ತಲಪಿದೆವು. ಇಲ್ಲಿ ನಾಡಹೆಂಚಿನ ಕೆಲವು ಮನೆಗಳು ಮಾತ್ತು ಸೋಗೆ ಹೊದಿಸಿದ ಪುಟ್ಟ ಅಂಗಡಿಗಳು ಸಿಕ್ಕಿದುವು. ಅಂಗಡಿಗಳ ಮುಂದೆ ಅವರೇ ನಿರ್ಮಿಸಿದ ‘ಬಳ್ಳಿ ಮಂಚ’ಗಳಿದ್ದುವು. ನಡೆದು ಬಸವಳಿದ ನಮಗೆ ಟೀ/ಜ್ಯೂಸ್ ಕುಡಿಯಲು ಇಲ್ಲಿ ಅನುಕೂಲವಾಯಿತು. ಇನ್ನೂ ಮುಂದೆ ಹೋದಾಗ ಒಂದೆರಡು ಬಾವಿಗಳು ಸಿಕ್ಕಿದುವು. ಮನೆಯೊಂದರಲ್ಲಿ ಕಡೆಗೋಲಿನಿಂದ ಮೊಸರನ್ನು ಕಡೆಯುವ ದೃಶ್ಯ ಕಾಣಸಿಕ್ಕಿತು. ಅಲ್ಲಲ್ಲಿ ಕೆಲವರು ಮಜ್ಜಿಗೆ, ನಿಂಬೆ ಹಣ್ಣಿನ ಪಾನಕ , ಹಲಸಿನಹಣ್ಣು ಇತ್ಯಾದಿ ಮಾರುತ್ತಿದ್ದರು.  ಒಟ್ಟಾರೆಯಾಗಿ ಇವನ್ನೆಲ್ಲ  ನೋಡಿದಾಗ ಇಲ್ಲಿ ಕಾಲವೇ ಸ್ತಬ್ಧವಾಗಿದೆಯೇಅನಿಸಿತು.
ಎರಡು ಬೆಟ್ಟ ಹತ್ತಿದೆವು, ಎರಡು ಬೆಟ್ಟ ಇಳಿದೆವು. ದಾರಿಯಲ್ಲಿ ಸ್ವಲ್ಪ ದಣಿವಾರಿಸಲೆಂದು ಅಂಗಡಿಯೊಂದರಲ್ಲಿ ತಂಪಾದ ಪಾನಕ ಕುಡಿದೆವು. ಅಂಗಡಿಯಾತನೊಂದಿಗೆ ಮಾತನಾಡಿದಾಗ ಗೊತ್ತಾದುದೇನೆಂದರೆ ಅಲ್ಲಿಗೆ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ಕತ್ತೆಗಳ ಮೂಲಕ ಸಾಮಾನು ಸರಂಜಾಮುಗಳನ್ನು ತರಿಸಿಕೊಳ್ಳುತ್ತಾರೆ.  ಇನ್ನೂ ನಡೆದು ‘ನಾಗಮಲೆ’ ತಲಪಿದೆವು. ಅಲ್ಲಿ  ಬಂಡೆಯೊಂದನ್ನು ಕೊರೆದು ಮೂರ್ತಿಯನ್ನು ಕೂರಿಸಿದ್ದಾರೆ. ಬಂಡೆಯೊಂದರಲ್ಲಿ ನಾಗದೇವರ  ಹೆಡೆಯೂ ಇದೆ. ಸುತ್ತಲಿನ ನಿಸರ್ಗ ಸಿರಿ ಮತ್ತು ತಂಪಾದ ಗಾಳಿ ನಮ್ಮ ಶ್ರಮವನ್ನು ಸಾರ್ಥಕಗೊಳಿಸಿತು.
YH team

ಎಲ್ಲರೂ ಸುಮಾರು 12  ಗಂಟೆಗೆ ಬೆಟ್ಟ ಇಳಿಯಲಾರಂಭಿಸಿದರು. ವೇಗವಾಗಿ ನಡೆಯುತ್ತಿದ್ದ ಹೆಚ್ಚಿನವರು 0130  ಗಂಟೆಗೆ ‘ಇಂಡಿಗನತ್ತ’ ತಲಪಿದರು. ನನ್ನ ಮಟ್ಟಿಗೆ ಹೇಳುವುದಾದರೆ, ನಿಧಾನ ಗತಿಯ ಚಾರಣಿಗಳಾದ ನಾನು ಹೋಗುವಾಗಲೂ ಬರುವಾಗಲೂ ತಂಡದ ಇತರರಿಂದ ಬಹಳಷ್ಟು ಹಿಂದೆ ಇದ್ದೆ. ದಾರಿಯಲ್ಲಿ ಎದುರಾದ ಒಂದಿಬ್ಬರು “ ಅಕ್ಕಾ ನೀವು ಇಷ್ಟು ನಿಧಾನ ನಡೆದರೆ ಬೆಟ್ಟ ತಲಪುವಾಗ ಸಂಜೆಯಾಗುತ್ತದೆ,  ಉಘೇ ಮಾದಪ್ಪಾ ಅನ್ನಿ…ಆರಾಮವಾಗಿ ಹತ್ತಬಹುದು” ಇತ್ಯಾದಿ ಪುಕ್ಕಟೆ ಸಲಹೆ ಕೊಟ್ಟರು! ಆದರೆ ಆಯೋಜಕರಾದ ಶ್ರೀ ನಾಗೇಂದ್ರ ಪ್ರಸಾದ್ ಅವರು ನನಗೆ ಧೈರ್ಯ ತುಂಬುತ್ತಾ ನನ್ನ ಜತಗೆ ತಾವೂ ನಿಧಾನವಾಗಿ ನಡೆದು ನಾನು ಈ ‘ರಿಯಾಲಿಟಿ ಟಾಸ್ಕ್’ ಅನ್ನು ಯಶಸ್ವಿಯಾಗಿ ಪೂರೈಸಲು ಕಾರಣರಾದರು! ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
‘ಇಂಡಿಗನತ್ತ’ ದಿಂದ ನಮ್ಮ ಗಮ್ಯ ಸ್ಥಾನವಾಗಿದ್ದ ಮಲೆ ಮಹದೇಶ್ವರ ಬೆಟ್ಟಕ್ಕೆ ಜೀಪ್ ನಲ್ಲಿ ಬಂದೆವು. ಈ ದಾರಿಯೋ ಮಾದಪ್ಪನಿಗೇ ಪ್ರೀತಿ ಅನ್ನುವಂತಿತ್ತು. ಆ ಜೀಪ್ ಪ್ರಯಾಣವು  ದಸರಾ ವಸ್ತುಪ್ರದರ್ಶನದ ‘ಟೊರಟೊರ’ದಲ್ಲಿ ಕುಳಿತಂತೆ ಆಯಿತು.  ಆಮೇಲೆ ಕೆಲವರು  ಕ್ಯೂನಲ್ಲಿ ನಿಂತು  ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು. ಇನ್ನು ಕೆಲವರು ವಿಶ್ರಮಿಸಿದರು. ಸಂಜೆ 5 ಗಂಟೆಗೆ ಪುನ: ವ್ಯಾನ್ ಹತ್ತಿದೆವು. ದಾರಿಯಲ್ಲಿ ಹೋಟೆಲ್ ಒಂದರಲ್ಲಿ ತಿಂಡಿ ತಿಂದು, ಮೈಸೂರು ತಲಪಿದಾಗ ರಾತ್ರಿ   0930 ಗಂಟೆ ಆಗಿತ್ತು. ಇಲ್ಲಿಗೆ ನಾಗಮಲೆ ಚಾರಣ ಯಶಸ್ವಿಯಾಗಿ ಕೊನೆಗೊಂಡಿತು.
ಒಟ್ಟಿನಲ್ಲಿ ಇದು ಒಂದು ಉತ್ತಮ ಚಾರಣವಾಗಿತ್ತು. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಎಲ್ಲರೂ ಸಮಯಪಾಲನೆಯೂ ಮಾಡಿದುದರಿಂದ ಭಾಗವಹಿಸಿದವರೆಲ್ಲರಿಗೂ ಗುರಿ ಮುಟ್ಟಿದ ಸಂತಸ ಲಭ್ಯವಾಯಿತು. ಈ ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀ ವೈದ್ಯನಾಥನ್ ಮತ್ತು ಶ್ರೀ ನಾಗೇಂದ್ರ ಪ್ರಸಾದ್ ಅವರಿಗೆ ಧನ್ಯವಾದಗಳು.

– ಹೇಮಮಾಲಾ. ಬಿ.