Total Pageviews

Wednesday, October 27, 2010

ಸೆಂಟುಸ ದಲ್ಲಿ ಸಾರಿಗೆ ಬಸ್ ....ಮೊನೋ ರೈಲ್...

ಕಳೆದ ಎಪ್ರಿಲ್ ತಿಂಗಳಲ್ಲಿ, ಸಿಂಗಾಪುರದ ಸೆಂಟೋಸ ದ್ವೀಪದಲ್ಲಿ, ಮೂರು ದಿನಗಳ ಮಟ್ಟಿಗೆ ವಾಸವಾಗಿದ್ದೆ.  ಅಲ್ಲಿನ  ಹಲವಾರು ಪ್ರೇಕ್ಷಣೀಯ ವಿಚಾರಗಳ ಜತೆಗೆ , ಪ್ರವಾಸಿಗಳಿಗೆ ಒದಗಿಸಲಾದ ಸಾರಿಗೆ ಸೌಲಭ್ಯ ನನಗೆ ಅದ್ಬುತವೆನಿಸಿತು.

ನಾವು ಉಳಕೊಂಡಿದ್ದ ಹೋಟೆಲ್ ನಿಂದ ಅನತಿ ದೂರದಲ್ಲಿದ್ದ 'ಅಂಡರ್ ವಾಟರ್ ವರ್ಲ್ಡ್' ನೋಡಲು ಹೊರಟೆವು. "ಇಲ್ಲೆ ಪಕ್ಕದಲ್ಲಿ ಬಸ್ ನಿಲ್ದಾಣ ಇದೆ, ನೀವು ಟಿಕೆಟ್ ಪಡಕೊಳ್ಳಬೇಕಾಗಿಲ್ಲ, ಈ ಹೋಟೆಲ್ ನ 'ಪಿಂಕ್ ಕಾರ್ಡ್' ಇದ್ದರೆ ಸಾಕು,ಮೂರು ದಿನಗಳ ಕಾಲ ಸೆಂಟೋಸದಲ್ಲಿ ಎಲ್ಲಿಗೆ ಬೇಕಾದರು ಸುತ್ತಾಡಬಹುದು. ನೀವು ಹೋಗಬೇಕಾದ ಜಾಗಕ್ಕೆ, 'ರೆಡ್ ಲೈನ್ ಅಥವಾ ಬ್ಲೂ ಲೈನ್' ಬಳಸಬಹುದು" ಎಂದಳು, ಹೊಟೆಲ್ ನ ಸ್ವಾಗತಕಾರಿಣಿ.

ಹೋಟೆಲ್ ನಿಂದ ಹೊರಬಂದು ಬಸ್  ನಿಲ್ದಾಣಕ್ಕೆ ಬಂದೆವು. ಕೆಂಪು ಹಾಗು ನೀಲಿ ಲೈನ್ ಗಳೆಂದು ಗುರುತಿಸಲ್ಪಡುವ ಬಸ್ ಗಳ ನಿಲುಗಡೆಗಾಗಿ, ಪ್ರತ್ಯೇಕ ಜಾಗವಿತ್ತು. ಮಾರ್ಗದಲ್ಲಿ ಹಳದಿ ಬಣ್ಣದ ಬಸ್ ಗಳು,ಓಡಾಡುತಿದ್ದುವು. ಅವುಗಳ ಲ್ಲಿ ನಂಬರ್ ನ ಬದಲು 'ರೆಡ್' ಅಥವಾ 'ಬ್ಲೂ' ಎಂದಷ್ಟೇ ನಮೂದಿಸಲಾಗಿತ್ತು. ಬಸ್ ಬಂತು, ಹತ್ತಿ ಕುಳಿತೆವು. ವಾವ್! 'ಟಿಕೆಟ್, ಟಿಕೆಟ್ ಎಂದು ಕಿರುಚುವ ಕಂಡಕ್ಟರ್ ಇಲ್ಲ, ಚಿಲ್ಲರೆ ಇಲ್ಲವೆಂದು  ಚಿಂತೆ ಬೇಕಾಗಿಲ್ಲ, ಬಸ್ ನಂಬರ್ ನೆನಪಿಡುವ ಅವಶ್ಯಕತೆಯಿಲ್ಲ, ಸದ್ದು- ಗದ್ದಲ, ಕಸ-ಕಡ್ಡಿ, ನೂಕು-ನುಗ್ಗಲು, ಪರಸ್ಪರ ಬೈಗಳು, ಮಳೆ-ಬಿಸಿಲಿಗೆ ಗಂಟೆಗಟ್ಟಲೆ ಕಾಯುವ ಪ್ರಮೇಯವಂತೂ ಇಲ್ಲವೇ ಇಲ್ಲ. ಎಲ್ಲವೂ ಅಚ್ಚುಕಟ್ಟು.









 ಬಸ್ ನಿಲ್ದಾಣ







ಸೆಂಟೋಸದ ಇನ್ನೊಂದು ಪ್ರಮುಖ ಸಾರಿಗೆ ಅಲ್ಲಿನ 'ಮೊನೊ ರೈಲ್'. ಇವುಗಳು ನೆಲಮಟ್ಟಕ್ಕಿಂತ ಎತ್ತರದಲ್ಲಿರುವ ಸಿಂಗ್ ಲ್ ಲೈನ್ ಟ್ರಾಕ್ ನಲ್ಲಿ ಓಡಾಡುತ್ತಿರುತ್ತವೆ. ಇದನ್ನು ೧೯೬೨ರಲ್ಲಿ ಉದ್ಘಾಟಿಸಲಾಯಿತಂತೆ. ಒಟ್ಟು ೧೪ ಮೊನೊರೈಲ್ ಗಳು ಇದ್ದು , ಅವು ಸೆಂಟೋಸದ ಎಲ್ಲ ಮುಖ್ಯ ತಾಣಗಳಿಗೆ ಸಂಪರ್ಕ ಹೊಂದಿವೆ. ಇವುಗಳು ಇನ್ನೊಂದು ವಿಶೇಷತೆಯೆಂದರೆ, ಸೆಂಟೋಸದಲ್ಲಿ ತಂಗಿರುವ ಪ್ರವಾಸಿಗಳು ಎಷ್ಟು ಸಲ ಬೇಕಾದರೂ  ಪ್ರಯಾಣಿಸಬಹುದು, ಟಿಕೆಟ್ ಕೊಳ್ಳುವ ರಗಳೆಯಿಲ್ಲದೆ. ಜತೆಗೆ, ೫ ನಿಮಿಷಕ್ಕೊಮ್ಮೆ ಮೊನೊರೈಲ್ ಗಳು ಬರುತ್ತಾ ಇರುತ್ತವೆ. ರೈಲ್ ನ  ಬೋಗಿ ಪುಟ್ಟದಾಗಿದ್ದರೂ, ನೂಕು ನುಗ್ಗಲು ಇರುವುದಿಲ್ಲ. ಕಾಯಬೇಕಾಗಿಲ್ಲ.









ಹಳಿಯ ಮೇಲೆ  ಮೊನೋ  ರೈಲ್







ನಮ್ಮಲ್ಲಿ ಯಾವಾಗಲೂ ಜನರಿಂದ ಗಿಜಿಗುಟ್ಟುವ ಬಸ್-ರೈಲ್ ನಿಲ್ದಾಣಗಳು,   ಕಿರಿಚುವ ಪ್ರಯಾಣಿಕರು, ಗದರುವ ನಿರ್ವಾಹಕರು, ತಿನಿಸು ಮಾರುವವರು, ಭಿಕ್ಷೆ ಬೇಡುವವರು...ಇತ್ಯಾದಿ  ಇಲ್ಲದಿದ್ದರೆ ಬಸ್ ಪ್ರಯಾಣ ಅಪೂರ್ಣ ಎಂಬ ಅಚಲ ನಂಬಿಕೆ ಹೊಂದಿದ್ದ ನನಗೆ, ಇಲ್ಲಿಯ   ಸಾರಿಗೆ ವ್ಯವಸ್ಥೆ ಆದರ್ಶಪ್ರಾಯ ಎನಿಸಿತು.

Wednesday, October 13, 2010

ವೈಪರ್ ದ್ವೀಪ....ಮಾರ್ಗದರ್ಶಕ ಸಂಜಯ್

ಅಂಡಮಾನ್ ನ ಪೋರ್ಟ್  ಬ್ಲೈರ್ ನಿಂದ  ಕೇವಲ  ೨ ಕಿ.ಮೀ. ದೂರದಲ್ಲಿದೆ, ಬಹಳ ಸುಂದರವಾದ   'ವೈಪೆರ್ ದ್ವೀಪ'. ಪೊರ್ಟ್ ಬ್ಲೈರ್ ನ' 'ಫಿಯೊನಿಕ್ಸ್ ' ಹಾರ್ಬರ್ ನಿಂದ  ಪುಟ್ಟ ಹಡಗುಗಳ  ಮೂಲಕ ಸಮುದ್ರದಲ್ಲಿ ೧೫ ನಿಮಿಷ ಪ್ರಯಾಣ ಮಾಡಿದರೆ ವೈಪರ್  ದ್ವೀಪ ಸಿಗುತ್ತದೆ.

ಬ್ರಿಟಿಷರ ಕಾಲದಲ್ಲಿ, ಸೆಲ್ಲುಲಾರ್ ಜೈಲ್ ನ್ನು ಕಟ್ಟಿಸುವ ಮೊದಲು, ಅಪಾಯಕಾರಿ ಕೈದಿಗಳನ್ನು ಇಲ್ಲಿ ಇರಿಸಲಾಗುತಿತ್ತು. ಸೆಲ್ಲುಲರ್ ಜೈಲ್  ನ್ನು ಕಟ್ಟಿಸಿದ ನಂತರ ಈ ದ್ವೀಪದಲ್ಲಿ  ಮಹಿಳಾ ಕೈದಿಗಳನ್ನು ಇರಿಸಲಾಗಿತ್ತು.   'ವೈಪೆರ್' ಎಂಬ ಹೆಸರಿನ ಬ್ರಿಟಿಶ್ ನೌಕೆಯು  ಈ ದ್ವೀಪದ ಹತ್ತಿರದಲ್ಲಿ ಅಪಘಾತಕ್ಕೆ ಒಳಗಾಗಿತ್ತಂತೆ, ಹಾಗಾಗಿ, ಈ ದ್ವೀಪವನ್ನು ಅದೇ ಹೆಸರಿನಿಂದ  ಕರೆಯಲಾಯಿತು. ಈ ದ್ವೀಪದಲ್ಲಿ, 'ವೈಪೆರ್' ಎಂಬ ವಿಷಪೂರಿತ ಹಾವುಗಳು  ಇರುವುದರಿಂದಲೂ ಹೆಸರಿಗೆ ಅನ್ವರ್ಥವಾಗಿದೆಯೆಂದು ಕೆಲವರ ಅಭಿಪ್ರಾಯವಿದೆ.

ಈ ದ್ವೀಪದಲ್ಲಿ, ಹಳೆ ಜೈಲ್ ನ ಅವಶೇಷಗಳು, ಕೋರ್ಟ್ ರೂಮ್ ಹಾಗು ದಿಬ್ಬದ ತುದಿಯಲ್ಲಿ 'ರೆಡ್ ಗಲ್ಲೊಸ್' ಎನ್ದು ಕರೆಯಲ್ಪಡುವ 'ಫಾಸಿ ರೂಮ್' ಇದೆ. ಗಲ್ಲಿಗೆ ಹಾಕುವ ಈ ಕೆಂಬಣ್ಣದ  ಮರದ ತೊಲೆಯನ್ನು, ಅಂಡಮಾನ್ ನಲ್ಲಿ ಮಾತ್ರ ದೊರೆಯುವ 'ಪಡೊಕು' ಮರದಿಂದ  ತಯಾರಿಸಿದ್ದಾರೆ . ಈ ಮರ ೨-೩ ಸಾವಿರ ವರ್ಷಗಳಾದರೂ, ಕೆಡುವುದಿಲ್ಲವಂತೆ.

ಪಡೊಕು ಮರಗಳನ್ನು ಕಡಿದು ಸಂಸ್ಕರಿಸಿ  ಸಾಗಿಸಲೆಂದೇ, ಬ್ರಿಟಿಶರು,  'ಚತ್ತಮ್  ದ್ವೀಪದಲ್ಲಿ' ೧೫೦ ವರ್ಷಗಳ ಹಿಂದೆ  ಸ್ಥಾಪಿಸಿದ, 'ಚತ್ತಂ  ಸೊ ಮಿಲ್ಲ್ಸ್' ಎಂಬ  ಕಾರ್ಖಾನೆ  ಇಂದಿಗೂ ಸುಸ್ಥಿತಿಯಲ್ಲಿದ್ದು,  ಕಾರ್ಯ ನಿರತವಾಗಿದೆ.  ಇದು ಏಷಿಯಾ ಖಂಡದಲ್ಲೇ ಅತಿ ದೊಡ್ಡದಾದ ಮರ ಸಿಗಿಯುವ  ಕಾರ್ಖಾನೆಯಂತೆ.

ವೈಪರ್ ದ್ವೀಪದಲ್ಲಿ 'ಶೇರ್ ಆಲಿ'ಯ ಹೆಸರು ಶಾಶ್ವತ. ಬ್ರಿಟಿಷರ ಹಿಂಸೆಯಿಂದ ರೋಸಿಹೋಗಿದ್ದ ಆತ,ಆಗಿನ ವೈಸ್ ರಾಯ್ ಆಗಿದ್ದ 'ಲಾರ್ಡ್ ಮಾಯೋ' , ಅಂಡಮಾನ್ ನ  ಹಾರಿಯಟ್ ಬೆಟ್ಟಕ್ಕೆ ಪ್ರಕೃತಿ ವೀಕ್ಷಣೆಗೆ ಬಂದಿದ್ದಾಗ  ಕೊಲೆಗೈದನಂತೆ. ಆತನನ್ನು   ವೈಪೆರ್ ದ್ವೀಪದಲ್ಲಿ  ಗಲ್ಲಿಗೇರಿಸಿದರು.  ಸುನಾಮಿಯ ಅರ್ಭಟಕ್ಕೆ, ಇಲ್ಲಿನ  ಕಟ್ಟಡಗಳು ಹಾನಿಗೊಂಡಿವೆ. ಆಳಿದುಳಿದ ಕಟ್ಟಡಗಳು ಇಲ್ಲಿ ನಡೆದ  ಪೈಶಾಚಿಕ ಕೃತ್ಯಗಳಿಗೆ ಸಾಕ್ಷಿಯಾಗಿ ನಿಂತಿವೆ. 

ಮಾರ್ಗದರ್ಶಕ ಸಂಜಯ್ ಹೇಳುವ ಪ್ರಕಾರ, ಈ ದ್ವೀಪದಲ್ಲಿ  ಪ್ರೇಕ್ಷಣೀಯವಾದದ್ದು ಏನು ಇಲ್ಲ, ಆದರೆ, ಪ್ರತಿಯೊಬ್ಬ ಹಿಂದುಸ್ತಾನಿ ಪ್ರಜೆ ಗೌರವದಿಂದ ನಮನ ಸಲ್ಲಿಸಬೇಕಾದ  'ಫಾಸಿಗಂಬ' ವಿದೆ.  ಈ ದ್ವೀಪದಲ್ಲಿ, ಮೂರು ವಿಧದ ಶಿಕ್ಷೆ  ವಿಧಿಸಲಾಗುತಿತ್ತು. ಕೈದಿಗಳನ್ನು ಕತ್ತಲೆ ಕೊಣೆಯಲ್ಲಿ ದಿನಗಟ್ಟಲೆ ಕೂಡಿ ಹಾಕುವುದು, ಹಾವುಗಳು ಹರಿದಾಡುವ ಕಾಡಿನಲ್ಲಿ ಮರಕ್ಕೆ ಕಟ್ಟಿ ಹಾಕುವುದು, ಕೊನೆಯದಾಗಿ ಗಲ್ಲು...!

ತುಂಬಾ ಭಾವಪೂರ್ಣವಾಗಿ, ಹಿಂದಿ ಭಾಷೆಯಲ್ಲಿ  ನಿರರ್ಗಳವಾಗಿ ಮಾತನಾಡುವ ಸಂಜಯ್, ಸುಮಾರು  ೨೦-೨೫ ವಯಸ್ಸಿನ ಯುವಕ.

ಪ್ರವಾಸಿಯೊಬ್ಬರು 'ಇಲ್ಲಿ ಏನಿದೆ,  ಒಂದು ಮರದ ತೊಲೆ ನೋಡೋಕೆ ಅರ್ಧ ದಿನ ವೇಸ್ಟ್' ಎಂದರು.

ಅದನ್ನು ಕೇಳಿಸಿಕೊಂಡ ಸಂಜಯ್ ಖಾರವಾಗಿ ಪ್ರತಿಕ್ರಿಯಿಸಿದ "ಪ್ರೇಕ್ಷಣೀಯ ಜಾಗವನ್ನು ಬಯಸುವವರು ಈ ಶಹೀದ್ ಭೂಮಿಗೆ ಯಾಕೆ ಬರಬೇಕು?  ನಿಮ್ಮ ಊರಲ್ಲಿ ಸಾಕಷ್ಟು  ಗಿರಿಧಾಮ, ವಿಲಾಸಿ ತಾಣಗಳಿಲ್ಲವೆ?  ಇಂಥಹ ಪವಿತ್ರ ಭೂಮಿಗೆ ಬಂದು ಈ ಸ್ಥಳವನ್ನು, ಆ ಹುತಾತ್ಮರನ್ನು  ಅವಮಾನಿಸಬೇಕೆ ?  ಒಂದು  ಮಾತು ಹೇಳುತ್ತೇನೆ, ಈವತ್ತು ನಾನು-ನೀವು ಇಲ್ಲಿ ಸ್ವತಂತ್ರವಾಗಿ ಇರುವುದು ಆ ನೇಣುಗಂಬವೇರಿದ ಶಹೀದರಿಂದಾಗಿ, ನೀವು ಮಂದಿರ್, ಮಸೀದಿ , ಇಗರ್ಜಿ, ಗುರುದ್ವಾರಕ್ಕೆ ಹೋಗುತ್ತಿರಬಹುದು, ಆದರೆ, ಇದು ಅವಕ್ಕಿಂತಲು ಪವಿತ್ರ "ಎಂದ.

ಚಿಕ್ಕ ವಯಸ್ಸಿನ ಅವನ ದೇಶಪ್ರೇಮ ಹಾಗು ಸ್ಥಳ ಗೌರವವನ್ನು ಕಾಯುವ ಕಾಳಜಿ ಇಷ್ಟವಾಯಿತು. ಹಿಂತಿರುಗಿ ಬರುವಾಗ, ಅವನನ್ನು ಶ್ಲಾಘಿಸಿ ನಾನಾಗಿ ಮಾತಿಗೆಳೆದೆ. 'ಡೆಕ್ ನ ಮೇಲೆ ಚೆನ್ನಾಗಿ ಗಾಳಿ ಬರುತ್ತದೆ,ನಾನು ಅಲ್ಲಿಗೆ ಹೋಗುತ್ತೇನೆ, ಇದು ಸಣ್ಣ ಫೆರ್ರಿ ಆದ ಕಾರಣ ನಾಲ್ಕು ಜನ ಏಕಕಾಲದಲ್ಲಿ ಡೆಕ್ ಗೆ ಹೋಗಬಹುದಷ್ಟೇ, ಆಸಕ್ತಿಯಿದ್ದರೆ ಬನ್ನಿ' ಅಂದ. ಡೆಕ್ ನ ಮೇಲೆ ಹೋಗಿ, ಅವನ ಜತೆ ಹರಟಲು ಶುರು ಮಾಡಿದೆ.

ಆತ ಬಂಗಾಲಿ ಮೂಲದ ಯುವಕ. ಆತನ ಹಿರಿಯರು ಎರಡು ತಲೆಮಾರಿನಿಂದಲೇ  ಪೊರ್ಟ್ ಬ್ಲೈರ್ ನಲ್ಲಿ ನೆಲೆಸಿದ್ದಾರೆ. ಪಿ.ಯು.ಸಿ ವರೆಗೆ ಓದಿದ್ದಾನೆ. ಅಂಡಮಾನ್ ನ ಸದಾ ಮಳೆ-ಸೆಖೆ ವಾತಾವರಣ..... ಜೀವನಾವಶ್ಯಕ  ವಸ್ತುಗಳಿಗೆ ಚೆನ್ನೈ , ಕಲ್ಕತ್ತ ಅಥವ ವಿಶಾಖ ಪಟ್ಟಣದಿಂದ ಬರುವ ಸಾಮಾಗ್ರಿಗಳ ಮೇಲೆ ಅವಲಂಬನೆ ಅನಿವಾರ್ಯ......ಕಾಲೇಜು ವಿದ್ಯಾಭ್ಯಾಸಕ್ಕೆ ಮೈನ್ ಲಾಂಡ್ ಗೇ  ಹೋಗಬೇಕಾಗುತ್ತದೆ.....  ತರಕಾರಿಗಳಿಗೆ ತುಂಬ ಬೆಲೆ.... ಸಮುದ್ರ ಉತ್ಪನ್ನಗಳು ಅಗ್ಗ ....ಇತ್ತೀಚೆಗೆ ಪ್ರವಾಸೋದ್ಯಮ  ಬೆಳೆದಿದೆ .... ಸರಕಾರೀ ಉದ್ಯೋಗಸ್ಥರು  ಜಾಸ್ತಿ.......ಕಾರ್ಖಾನೆಗಳು ಇಲ್ಲ....ಜರವಾ ಜನಗಳು ....ಇತರ ವಲಸೆಗಾರರು...ನಿರ್ಜನವಾದ ವೈಪರ್  ದ್ವೀಪದಲ್ಲಿ  ಒಬ್ಬನೇ ಒಬ್ಬ ವ್ಯಕ್ತಿ ಸುಮಾರು ೫೦ ವರ್ಷ ವಾಸವಾಗಿದ್ದ, ಆತ ಬಹಳ ಧೈರ್ಯಶಾಲಿಯಾಗಿದ್ದ , ಇತ್ತೀಚಿಗೆ ಮರಣಿಸಿದ...
.....ಹೀಗೆಲ್ಲಾ  ಮಾತಿನ ಲಹರಿ ಹರಿಯಿತು.

'ಹಾಗಾದರೆ ಅಂಡಮಾನ್ ನಲ್ಲಿ ಜೀವನ ನಡೆಸುವುದು ಬಹಳ ಕಷ್ಟವಾಗಿರಬೇಕಲ್ಲವೆ?" ಅಂದೆ.

ಅದಕ್ಕೆ ಅವನ ಸ್ಪಷ್ಟ ಉತ್ತರ ಹೀಗಿತ್ತು " ಮುಝೆ ಯೆಹಿ ಅಚ್ಚ ಲಗತಾ ಹೆ. ಸಾಲ್ ಮೆ ಏಕ್ ಬಾರ್ ಮೆ ಕಲ್ಕತ್ತ ಜಾತಾ ಹೂಮ್. ಉಧರ್ ಮೇರೆ ಜೈಸೆ ಲೋಗೊಂಕೋ ಕಾಮ್ ನಹಿ ಹೆ, ಇಧರ್ ಮೆರೆ ಪಾಸ್ ಜ್ಯಾದಾ ಪೈಸಾ ನಹಿ ಹೆ, ವರನಾ ಖಾನಾ-ಮಖಾನ್ ಕೊ ಕಮ್  ನಹಿ ಹೆ,   ದೆಖಿಯೆ ಅಂಡಮಾನ್ ಮೆ, ಕೊಯಿ ಭಿಕಾರಿ ನಹಿ ಹೇ, ಮೈನ್ ಲಾಂಡ್ ಮೆ ಕಿಥನೆ ಲೊಗ್ ಹೆ ಭಿಕಾರಿ..ಕಾಮ್ ನಹಿ ಉನ್ ಲೋಗೊಂಕೋ"  

ಕೆಲವು ತರಬೇತಿ ಕಾರ್ಯಕ್ರಮಗಳಲ್ಲಿ ಪ್ರಸ್ತುತಪಡಿಸುವ ವಿಚಾರ ಹೀಗಿರುತ್ತದೆ "ನಿಮ್ಮ ಕೆಲಸದಲ್ಲಿ ಪ್ರಾವೀಣ್ಯತೆ ಸಾಧಿಸಲು ನೀವು ಮಾಡಬೇಕಾದ ಪ್ರಥಮ ಕೆಲಸವೇನೆಂದರೆ, ನಿಮ್ಮ ಕೆಲಸವನ್ನು ಪ್ರೀತಿಸಿ, ಗೌರವಿಸಿ, ಕೆಲಸದಲ್ಲಿ  ಅನಂದ  ಕಂಡುಕೊಳ್ಳಿ".

ಸಂಜಯ್ ಇದಕ್ಕೆ ಒಂದು ಉತ್ತಮ ನಿದರ್ಶನ ಎನಿಸಿತು.

ಅಂಡಮಾನ್ ನ ರಾಸ್ ದ್ವೀಪ, ಆ ಕಾಲವೊಂದಿತ್ತು..ಭವ್ಯ ತಾನಾಗಿತ್ತು..

ಬ್ರಿಟಿಷರು ಅಂಡಮಾನನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಅಲ್ಲಿ 'ಶಿಕ್ಷಾ ನೆಲೆ'ಯನ್ನು ಸ್ಥಾಪಿಸಲು ನಿರ್ಧಾರ ಕೈಗೊಂಡ ಮೇಲೆ, ತಮ್ಮ ವಾಸ್ತ ವ್ಯಕ್ಕಾಗಿ 'ರಾಸ್' ದ್ವೀಪವನ್ನು ಬಳಸಿಕೊಂಡರು. ಸುಮಾರು ೧೮೫೮ ರಿಂದ  ೧೯೪೭ ರ ವರೆಗೂ (೩ ವರುಷಗಳ ಜಪಾನೀಯರ ಆಳ್ವಿಕೆ ಹೊರತುಪಡಿಸಿ) 'ರಾಸ್' ದ್ವೀಪ  ಬ್ರಿಟಿಷರ ಆಡಳಿತ ಕೇಂದ್ರವಾಗಿತ್ತು. 


ಅವರು ನಡೆಸಿರಬಹುದಾದ ವೈಭವೊಪೇತವಾದ ಜೀವನಶೈಲಿಯನ್ನು ಪ್ರತಿಬಿಂಬಿಸುವ ಬಂಗಲೆಗಳು, ಕ್ಲಬ್ಬು ಗಳು, ಬೇಕರಿ, ಮುದ್ರಣಾಲಯ, ಟೆನ್ನಿಸ್ ಕೊರ್ಟ್,  ಉಪ್ಪುನೀರನ್ನು ಸಿಹಿನೀರಾಗಿ  ಪರಿವರ್ತಿಸಲು  ಬಳಸುತಿದ್ದ ಬಾಯ್ಲರ್ ಗಳು, ಚರ್ಚ್..ಇತ್ಯಾದಿ  ಈಗ  ಶಿಥಿಲಾವಸ್ಥೆಯಲ್ಲಿವೆ.






ಚರ್ಚ್ ನ "ಗಂಟೆ-ಗೋಪುರ" ಮರದ ಬಿಳಲುಗಳ ಮಧ್ಯ    ಮರೆಯಾಗಿದೆ.

    ಬಾಯ್ಲರ್ ಗಳು  


ಮುದ್ರಣಾಲಯ

ಈಗ ಶಿಥಿಲಾವಸ್ಥೆ ಯಲ್ಲಿರುವ  ರಾಸ್ ದ್ವೀಪ ದ ಕಟ್ಟಡಗಳನ್ನು ಬೃಹತ್ ಮರಗಳ  ಬೇರುಗಳು ಹಾಗೂ ಬಿಳಲುಗಳು ಭದ್ರವಾಗಿ ಹಿಡಿದುಕೊಂಡಿವೆ. ಇವು ಗತವೈಭವದ ಕುರುಹಾಗಿ ಉಳಿದಿವೆ.

ಕೇವಲ ಒಂದು  ಕಿಲೋ ಮೀಟರ್  ದೂರದ ಪೊರ್ಟ್ ಬ್ಲೈರ್ ದ್ವೀಪದ ಜೈಲ್ ನಲ್ಲಿ  ನರಕಯಾತನೆ ಅನುಭವಿಸುತ್ತಿದ್ದ  ಕೈದಿಗಳು... ಸ್ವಾತಂತ್ರ್ಯ ಹೋರಾಟಗಾರರು...  ಮಗ್ಗುಲಲ್ಲೇ ಐಶಾರಾಮಿ ಬದುಕು ನಡೆಸುತ್ತಿದ್ದ  ಬ್ರಿಟಿಶ್  ಮಂದಿ!
ಆ ಭವ್ಯತೆ ಯನ್ನು ಬ್ರಿಟಿಶರಿಗೆ ಒದಗಿಸಿಕೊಡಲು, ಅದೆಷ್ಟು ಜನ  ಪ್ರತಿಕೂಲ ಹವೆಯಲ್ಲಿ, ನಿರಂತರ  ದೈಹಿಕ, ಮಾನಸಿಕ ಹಿಂಸೆಯ  ನಡುವೆ ದುಡಿದಿದ್ದಾರೋ!!

Monday, October 4, 2010

'ಜರವಾ' ಗಳ ನಾಡಿನಲ್ಲಿ..

ಅಂಡಮಾನ್ ನ ಪ್ರಮುಖ ಪ್ರವಾಸಿ  ತಾಣವಾಗಿರುವ 'ಜರವಾ' ಆದಿವಾಸಿಗಳ ರಕ್ಷಿತಾರಣ್ಯಕ್ಕೆ  ನಾಳೆ ಹೋಗುವುದೆಂದು ನಮ್ಮಟೂರ್  ವ್ಯವಸ್ಥಾಪಕರು ಪ್ರಕಟಿಸಿದಾಗ, ಈ ಆದಿಮಾನವರು ಹೇಗಿರುತ್ತಾರೋ ಎಂಬ ಕುತೂಹಲ ಉಂಟಾಯಿತು. ಅಲ್ಲಿನ ಟ್ರಾವೆಲ್ ಸಂಸ್ಥೆಯ ಮಾರ್ಗದರ್ಶಕರ ಮಾತುಗಳು ಹೀಗಿದ್ದುವು:

'ಜರವಾ'ಗಳು ಹಿಂದೆ ನರಭಕ್ಷಕರಾಗಿದ್ದರು ಹಾಗು ಅವರಿರುವ ಕಾಡಿಗೆ ಇತರರ ಪ್ರವೇಶವನ್ನು  ಸಹಿಸುತ್ತಿರಲಿಲ್ಲ. ಕೆಲವು  ವರುಷಗಳ ಹಿಂದೆ ಜರವಾ ಮನುಷ್ಯನೊಬ್ಬ ಕಣಿವೆಯಲ್ಲಿ ಬಿದ್ದು ಕಷ್ಟಪಡುತ್ತಿರುವುದನ್ನು ನೋಡಿದ  ಅಧಿಕಾರಿಗಳು  ಅವನಿಗೆ ಫೋರ್ಟ್ ಬ್ಲೈರ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಟ್ಟು  ವಾಪಸ್ ಕಾಡಿಗೆ ಬಿಟ್ಟರಂತೆ, ಅಂದಿನಿಂದ ಜರವಾ ಜನಗಳಿಗೆ ನಾಗರಿಕ ಸಮಾಜವು ತಮಗೆ ಹಾನಿಯನ್ನು ಉಂಟುಮಾಡುವುದಿಲ್ಲ ಎಂಬ ನಂಬಿಕೆ ಬಂದು, ಈಗೀಗ  ಬಸ್ ಗಳು ಓಡಾಡುವ ಮಾರ್ಗದಲ್ಲಿ ಆರಾಮವಾಗಿ ಕಾಣ ಸಿಗುತ್ತಾರೆ.

ಈಗಲೂ ಬೇಟೆಯಾಡುತ್ತ, ದಟ್ಟವಾದ  ಕಾಡಿನಲ್ಲಿ ಸಣ್ಣ ಹುಲ್ಲಿನ ಜೋಪಡಿಗಳನ್ನು ಕಟ್ಟಿಕೊಂಡು ಜೀವಿಸುವ ಇವರಿಗೆ ಬಟ್ಟೆ, ವಿದ್ಯೆ, ಹಣ, ವ್ಯವಹಾರ ಇತ್ಯಾದಿಗಳ ಅರಿವಿಲ್ಲ.  ೧೦ ರುಪಾಯಿಗಳನ್ನು ಕೊಟ್ಟರೆ ಎಸೆಯುತ್ತಾರೆ, ಆದರೆ ೫ ರುಪಾಯಿ ಕೊಟ್ಟರೆ ನಗುತ್ತ  ಸ್ವೀಕರಿಸುತ್ತಾರೆ, ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅವರಿಗೂ 'ಪಾನ್' ನ ರುಚಿ ಗೊತ್ತಾಗಿದೆ, ಕಾಡಿನ ಮಗ್ಗುಲಲ್ಲಿ ಇರುವ ಸಣ್ಣ ಅಂಗಡಿಯಲ್ಲಿ ೫ ರುಪಾಯಿ ನಾಣ್ಯ ಕೊಟ್ಟರೆ 'ಪಾನ್' ಸಿಗುತ್ತದೆ  ಎಂಬಷ್ಟು ಜ್ಞಾನ ಗಳಿಸಿದ್ದಾರೆ!

ಇತ್ತೀಚಿಗಿನ ದಿನಗಳಲ್ಲಿ ಸರಕಾರದ ಪ್ರಯತ್ನಗಳಿಂದ ಜರವಾ ಜನರು ಇತರ ಸಮಾಜದ ಅಸ್ತಿತ್ವವನ್ನು ಸ್ವೀಕರಿಸಿದ್ದಾರೆ.
ಅವರ ಕೈಗಳಲ್ಲಿ  ಬಿಲ್ಲು, ಭರ್ಚಿ, ಕೋಲುಗಳು ಇರುತ್ತವಾದರೂ, ಇತ್ತೀಚಿಗಿನ ದಿನಗಳಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಹಾಗೆಂದು ಅವರನ್ನು ಕೆಣಕಬಾರದು, ಫೋಟೋ ತೆಗೆಯಲೇ ಬಾರದು,  ಕಿಟಿಕಿಯಿಂದ ಹೊರಗೆ  ಬಿಸ್ಕೆಟ್ -ಚಾಕೋಲೆಟ್-ಪಾನ್-ಹಣ -ಬಟ್ಟೆ ಇತ್ಯಾದಿ ಏನನ್ನೂ ಎಸೆಯಬಾರದು ಎಂಬ ನಿಯಮವಿದೆ.

ಅವರ ಸ್ನೇಹವನ್ನು ಗಳಿಸಲಿಕ್ಕಾಗಿ ಅರಣ್ಯಾಧಿಕಾರಿಗಳು ತಿಂಗಳಿಗೊಮ್ಮೆ ಬಾಳೆಹಣ್ಣು ಮತ್ತು  ತೆಂಗಿನಕಾಯಿಗಳನ್ನು  ಜರವಾ ಜನರಿಗೆ ಸಿಗುವಂತೆ ಕಾಡಿನಲ್ಲಿ ಬಿಟ್ಟು ಬರುತ್ತಾರಂತೆ.ಇವರ  ಸಂತತಿ ಕಡಮೆಯಾಗುತ್ತಾ ಬಂದು ಈಗ ಕೇವಲ ೨೫೦ ಮಂದಿ ಜರವಾಗಳು ಇದ್ದಾರಂತೆ.

ಒಟ್ಟಿನಲ್ಲಿ, 'ಜರವಾ ರಕ್ಷಿತಾರಣ್ಯ'ವಾದ ಜಿರ್ಕಾತಂಗ್ ಪ್ರದೇಶದಿಂದ  ಮಧ್ಯ ಅಂಡಮಾನ್ ನ ನಡುವಿನ  ದಟ್ಟ ಕಾಡುಗಳ ನಡುವೆ, ಬಸ್  ಚಲಿಸುವಾಗ ಸುಮಾರು  ೨೦ ಜರವಾ ಜನರನ್ನು ನಾವು ನೋಡಿದೆವು. ಚಿಕ್ಕಮಕ್ಕಳ  ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ  ವೇಷಧಾರಿಗಳಂತೆ ಕಾಣುವ ಕೆಲವರು, ಅದೇ ರೀತಿಯ ವಯಸ್ಕರು, ಹೆಣ್ಣು ಮಕ್ಕಳು ಕಾಣಿಸಿದರು. ಕೆಲವು ಮಕ್ಕಳ ಮೈಯಲ್ಲಿ ಚಡ್ಡಿ ಹಾಗು ಕಾಲಿನಲ್ಲಿ ಚಪ್ಪಲಿ ಕಂಡುಬಂತು. ಕೆಲವು ಬಾಲಕಿಯರು  ಚಿಪ್ಪಿನ ಅಥವಾ ಮುತ್ತಿನ ಹಾರಗಳನ್ನು ಧರಿಸಿದ್ದರು. ಸೊಂಟದ ಸುತ್ತ ಕೆಂಪಿನ ದಾರಗಳನ್ನು   'ಫ್ರಿಲ್' ನಂತೆ ಬಿಟ್ಟಿದ್ದರು. ಇನ್ನು ಕೆಲವರು ಮುಖಕ್ಕೆ ಅದೇನೋ  ಮಣ್ಣಿನಂತೆ ಕಾಣುವ ಲೇಪ ಹಚ್ಚಿದ್ದರು. ಒಂದೆರಡು ಜನ ಟವೆಲ್ ನ್ನು ಉಟ್ಟುಕೊಂಡಿದ್ದರು.

ನಾವು ನೋಡಿದ 'ಜರವಾ' ಜನರು, ತಮಗೆ ಏನಾದರು ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಇದ್ದ ಹಾಗಿತ್ತು. ಇವರು ನಿಜವಾಗಿಯೂ ಒಂದು ಕಾಲದಲ್ಲಿ ನರ ಭಕ್ಷಕರಾಗಿರಲು  ಸಾಧ್ಯವೇ ಅನಿಸಿತು.

ಇವರನ್ನು 'ಪ್ರವಾಸಿ ಆಕರ್ಷಣೆ' ಎಂದು ಪರಿಗಣಿಸುವ ಬದಲು, ಯೋಗ್ಯವಾದ  ಅವಕಾಶ,ವಿದ್ಯಾಭ್ಯಾಸ ಕಲ್ಪಿಸಿದರೆ, ಇವರು ಸಮಾಜದ ಮುಖ್ಯವಾಹಿನಿಯ ಜತೆಗೆ ಬೇರೆಲಾರರೆ? ಯಾಕೋ, ಇದು ಸರಿಯಲ್ಲ ಅನಿಸಿತು.

ಜರವಾ ಜನರನ್ನು ನೋಡಿದುದಕ್ಕಿಂತಲೂ , ಅವರನ್ನು ನೋಡಲು ನಾವು ಪಟ್ಟ ಶ್ರಮ ಹಾಗು  ಅಂಡಮಾನ್ ನ ಬಸ್ ಪ್ರಯಾಣ ನನಗೆ ಹೆಚ್ಚು ಮುದ ಕೊಟ್ಟಿತು. 'ಜರವಾ ರಕ್ಷಿತಾರಣ್ಯ' ತಲಪಲು, ನಾವು ಉಳಿದುಕೊಂಡಿದ್ದ ಸುಮಾರು ೩ ಗಂಟೆ ಬಸ್ ಪ್ರಯಾಣ. ನಮ್ಮ ಬಳಗ ಒಂದು ಬಸ್ಸನ್ನೇರಿ, ೩ ಗಂಟೆ  ಹರಸಾಹಸ ಪ್ರಯಾಣ ಮಾಡಿ 'ಜಿರ್ಕಾತಂಗ್' ಎಂಬ ಪುಟ್ಟ ಊರನ್ನು ಸೇರಿತು.

ದಿನಕ್ಕೆ ಕೇವಲ ೧೫೦ ವಾಹನಗಳಿಗೆ 'ಜರವಾ' ಜನರಿರುವ  ಜಿರ್ಕತಾಂಗ್ ಎಂಬಲ್ಲಿ  ಕಾಡನ್ನು ಪ್ರವೇಶಿಸಲು ಅನುಮತಿ ಕೊಡುತ್ತಾರಂತೆ.ಈ ವಾಹನಗಳು  ಜಿರ್ಕತಾಂಗ್ ಗೇಟ್ ನ ಬಳಿ  ಬೆಳಗ್ಗೆ ೬ ಗಂಟೆಗೇ  ಸಾಲಾಗಿ  ನಿಲ್ಲಬೇಕು. ಗೇಟ್ ತೆರೆದಾಗ ಮುಂದೆ ಒಂದು ಪೋಲಿಸ್ ವಾಹನ, ಹಿಂದೆ ಸಾಲಾಗಿ ಇತರ ವಾಹನಗಳು ಹೋಗಬೇಕು. ಕೊನೆಯಲ್ಲಿ ಇನ್ನೊದು ಪೋಲಿಸ್ ವಾಹನ ಇರುತ್ತದೆ. ಕಾಡಿನಲ್ಲಿ ಬಸ್ ನ್ನು ಎಲ್ಲೂ ನಿಲ್ಲಿಸುವಂತಿಲ್ಲ.

ಈ ಬಸ್ ಪ್ರಯಾಣ ಕೆಲವರಿಗೆ ಕಿರಿ-ಕಿರಿ ತರಿಸಿತು. ಕೆಲವರು ಕನಿಷ್ಠ ಸೌಲಭ್ಯಗಳಿಲ್ಲದಿರುವ  ಈ  ಬಸ್ ನ್ನು ಯಾಕಾದರೂ ಕರೆಸಿದೆರೆಂದು  ಟೂರ್  ವ್ಯವಸ್ಥಾಪಕರನ್ನು ತರಾಟೆಗೆ ತೆಗೆದು ಕೊಂಡರು.

ಕಾರಣಗಳು ಹೀಗಿದ್ದುವು: "ಮುಂದುಗಡೆಯ ಸೀಟ್ ಗೆ ಮುಗ್ಗರಿಸಿದಾಗ ಹಿಡಿಯಲು ಕಂಬಿ ಇಲ್ಲ.. . ಕಿಟಿಕಿ ಗಾಜುಗಳು ಏನೇ ಮಾಡಿದರು  ಹಿಂದೆ-ಮುಂದೆ ಹೋಗುತ್ತಾ ಇಲ್ಲ.....ಸೀಟ್ ಇಬ್ಬರಿಗೆ ಕೂರುವಷ್ಟು ಅಗಲವಿಲ್ಲ ..... ಮಳೆ ನೀರೆಲ್ಲ ಬಸ್ ನ ಒಳಗೆ ಬರ್ತಾ ಇದೆ......ಬೆಳಗ್ಗೆ ೪:೩೦ ಗಂಟೆಗೆ ಬಂದ ಈ ಬಸ್ ಹಿಡಿಯಲು ನಾವು ೩ ಗಂಟೆಗೇ  ಎದ್ದು ಮಾರ್ಗದ ಬದಿ ಕಾಯಬೇಕಿತ್ತೆ? " ಇತ್ಯಾದಿ.

'ನಾನೇನು ಮಾಡ್ಲಿ, ಈ ಊರಲ್ಲಿ ಇಂಥಹ ಬಸ್ ಗಳೇ ಇರುವುದು,  ಇದಾದರು ಸಿಕ್ಕಿತಲ್ಲ' ಎಂಬುದು ಆತನ ಅಳಲು. ಮಳೆ ನೀರು  ಒಳಗೆ ಸುರಿಯುತಿದ್ದ ಸೀಟ್ ನಲ್ಲಿದ್ದ ಸ್ವಲ್ಪ ವಯಸ್ಸಾಗಿದ್ದ ಸಹಪ್ರಯಾಣಿಕರು ಕುಳಿತ್ತಿದ್ದರು. ಅವರನ್ನು ನಮ್ಮ ಸೀಟ್ ನಲ್ಲಿ ಕುಳ್ಳಿರಿಸಿ, ರೇಖಾ ( ನನ್ನ ಸಹೋದ್ಯೋಗಿ) ಮತ್ತು ನಾನು ಅವರ ಸೀಟ್ ನಲ್ಲಿ  ಕುಳಿತೆವು. ಬಸ್ ಬ್ರೇಕ್ ಹಾಕಿದಾಗ  ಮುಗ್ಗರಿಸುತ್ತ- ಸಾವರಿಸುತ್ತ-ನಗುತ್ತ ಇದ್ದೆವು.

ಸೋನೆಯಾಗಿ ಸುರಿಯುತಿದ್ದ ಮಳೆ ಇದ್ದಕಿದ್ದಂತೆ  ಜೋರಾಯಿತು. ಏನೇ ಮಾಡಿದರು, ಕಿಟಿಕಿಯ ಗಾಜು ಸರಿಸಲು ನಮ್ಮ ಕೈಯಿಂದಲೂ ಆಗಲಿಲ್ಲ. ಕೊನೆಗೆ , ಬಸ್ ನ ನಿರ್ವಾಹಕನ ಸಹಾಯ ಕೇಳಿದೆವು. ಆತ ಮಾಡಿದ ಕೆಲಸವೇನೆಂದರೆ- ಇಡೀ ಕಿಟಿಕಿಯ ಫ್ರೇಮ್ ನ್ನು ಕಿತ್ತು ನಮ್ಮ ಕಾಲಿನ ಪಕ್ಕ ಇರಿಸಿದ! ಈಗ ಮಳೆ ನೀರು ಬಸ್ ನ ಒಳಗೆ ಬರಲು ಮತ್ತಷ್ಟು ಅನುಕೂಲವಾಯಿತು!

ಆಮೇಲೆ ಬಸ್ ನ ಗೇರ್  ಬಾಕ್ಸ್ ನ ಪಕ್ಕದಲ್ಲಿ ಕೂರುವಂತೆ ನಮಗೆ ವಿನಂತಿಸಿದ. ಅಲ್ಲಿ ಹೋಗಿ ನೋಡಿದರೆ, ಬಸ್ ನ ತಳ ಸುಮಾರು ಅರ್ಧ ಅಡಿ ಅಗಲಕ್ಕೆ ಕಿತ್ತುಹೋಗಿ,ಮಾರ್ಗ ಕಾಣಿಸುತ್ತಿತ್ತು. ಕಾಲಿಟ್ಟರೆ ಕಾಲು ಸಿಕ್ಕಿಹಾಕಿಕೊಳ್ಳುವುದು ಖಂಡಿತ. ಈ 'ಆಫರ್'ಗಿಂತ  ಮಳೆ ನೀರು ಬೀಳುವ ಸೀಟ್ ಎಷ್ಟೋ ವಾಸಿ ಎಂದು ಮರಳಿ ಹಳೆ ಜಾಗಕ್ಕೆ ಬಂದೆವು.

ಸಣ್ಣದಾದ ಕೊಡೆಯನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದೆ. ಈ ಸಂದರ್ಭದಲ್ಲಿ ಸದುಪಯೋಗಕ್ಕೆ ಬಂತು. ಸರಿ, ಅದನ್ನು ಬಿಡಿಸಿ, ಕಿಟಿಕಿಯ ಫ್ರೇಮ್ ನ ಜಾಗದಲ್ಲಿ ಇಟ್ಟೆವು. ಅಂತೂ-ಇಂತೂ, ಬಸ್ ನ ಒಳಗೆ 'ಕೊಡೆ ಬಿಡಿಸಿ' ಕುಳಿತ ನಮ್ಮ ಚಾತುರ್ಯವನ್ನು ಕಂಡು ಇತರರು ಹೃತ್ಪೂರ್ವಕವಾಗಿ ನಕ್ಕರು. ಹರಟೆ ಹೊಡೆಯುತ್ತಾ, ನಗುತ್ತಾ ಸಾಗಿತ್ತು ನಮ್ಮ ಪಯಣ. ಜತೆಯಲ್ಲಿ ಸಹಪ್ರಯಾಣಿಕರು ತಮ್ಮ ತಮ್ಮ ಊರುಗಳಿಂದ ತಂದ ಕುರುಕಲು ತಿಂಡಿಗಳ ವಿನಿಮಯವೂ ಆಯಿತು.

ಮೈಸೂರು-ಬೆಂಗಳೂರು  ಮಧ್ಯದ ವೋಲ್ವೋ ಬಸ್ ಪ್ರಯಾಣದ ಏಕತಾನತೆಗೆ, ಪ್ರಯಾಣಿಕರ ನಿರಂತರ ಗಡಿಬಿಡಿಗೆ, ಪರಿಚಯವಿದ್ದರೂ  ಮುಗುಳು ನಗೆ ವಿನಿಮಯಕ್ಕೂ ಸಮಯವಿಲ್ಲದ ಯಾಂತ್ರಿಕತೆಗೆ ಬೇಸತ್ತಿದ್ದ ನನಗೆ, ಜರವಾ ಆದಿವಾಸಿಗಳನ್ನು ನೋಡಿದುದಕ್ಕಿಂತಲೂ, ಈ ವರ್ಣರಂಜಿತ ಬಸ್ ಪ್ರಯಾಣ ತುಂಬಾ ಖುಷಿ ಕೊಟ್ಟಿತು.

Friday, October 1, 2010

ಮರಳಿನಲ್ಲಿ 'ಮಕ್ಕಳಾಟ' ಮರಳಿ ನೋಡಬಾರದೆ..

ಸಮುದ್ರವೇ ಸುತ್ತುವರಿದಿರುವ  ಅಂಡಮಾನ್ ನಲ್ಲಿ  ಬೀಚುಗಳಿಗೇನು  ಕೊರತೆ ? ಅಲ್ಲಿದ್ದ ಒಂದು ವಾರದಲ್ಲಿ  ನಾವು ಸಂದರ್ಶಿಸಿದ ಬೀಚುಗಳು ಹಲವಾರು.

ಹವಳ ದ್ವೀಪವೆಂದು ಕರೆಯಲ್ಪಡುವ ಅಂಡಮಾನ್ ನ    'ನಾರ್ತ್ ಬೇ' ದ್ವೀಪ ದಲ್ಲಿ ಸಮುದ್ರದ ಕೆಲವು ಭಾಗಗಳು ಪಾರದರ್ಶಕವಾಗಿರುತ್ತವೆ. ಪ್ರವಾಸಿಗಳನ್ನು  ಚಿಕ್ಕದಾದ, ಪಾರದರ್ಶಕ ಗ್ಲಾಸ್ ನ  ತಳವಿರುವ  ದೋಣಿಯಲ್ಲಿ  ಕರೆದೊಯ್ಯುತ್ತಾರೆ.  ಕೆಲವು  ನಿಗದಿತ ಜಾಗಗಳಲ್ಲಿ ದೋಣಿಯನ್ನು  ನಿಲ್ಲಿಸಿ ಗಾಜಿನ ತಳದ ಮೂಲಕ 'ಕೊರಲ್' ನ್ನು ತೋರಿಸುತ್ತಾರೆ.  ಇಲ್ಲಿ  ಸಮುದ್ರದ ಒಳಗೆ ಹೋಗಿ  'ಸ್ನೋರ್ಕೆಲಿಂಗ್' ಕೂಡ ಮಾಡಬಹುದು.  ಹೀಗೆ 'ಕೊರಲ್' ಗಳನ್ನು ತೀರ ಸನಿಹದಿಂದ  ನೋಡಬಹುದು.

ಇದುವರೆಗೆ ಹವಳವೆಂದರೆ ಕೆಂಪು/ನಸುಗೆಂಪು ಬಣ್ಣದ ಆಭರಣ ತಯಾರಿಸಲು ಉಪಯೋಗಿಸುವ ವಸ್ತು ಎಂದು ತಿಳಿದಿದ್ದ ನನಗೆ, ಸಮುದ್ರದ ತಳದಲ್ಲಿ ಗೊಂಚಲು - ಗೊಂಚಲುಗಳಂತೆ, ಸಣ್ಣ ಪುಟ್ಟ ಕಲ್ಲುಗಳಂತೆ ಕಂಡ  ಬಿಳಿ/ಕಂದು/ನೀಲಿ ಅಥವಾ ಮಿಶ್ರ  ಬಣ್ಣದ  ಕೊರಲ್ ಗಳನ್ನು ನೋಡಿ ಆಶ್ಚರ್ಯವಾಯಿತು.  ಇಲ್ಲಿ ಸಮುದ್ರದ ದಂಡೆಯುದ್ದಕ್ಕೂ 'ಕೊರಲ್'  ಕಲ್ಲುಗಳು  ಬಿದ್ದಿರುತ್ತವೆ. ಇವನ್ನು ಔಷಧಿಗೂ  ಬಳಸುತ್ತಾರಂತೆ.

"ಬಿಟ್ಟಿಯಾಗಿ ಸಿಗುತ್ತದೆಯೆಂದು ಬ್ಯಾಗ್ ನಲ್ಲಿ ಹಾಕಬೇಡಿ,ರಸೀದಿ ಇಲ್ಲದೆ ತೆಗೆದುಕೊಂಡು ಹೋಗುವುದು ಶಿಕ್ಷಾರ್ಹ ಅಪರಾಧ, ಪೋರ್ಟ್ ಬ್ಲೈರ್  ವಿಮಾನ  ನಿಲ್ದಾಣದಲ್ಲಿ ತೊಂದರೆಯಾಗಬಹುದು"  ಎಂದು ನಮ್ಮ ಟೂರ್ ವ್ಯವಸ್ಥಾಪಕರು ಎಚ್ಚರಿಸಿದರು.

ನಮ್ಮ ತಂಡದಲ್ಲಿ 'ಅಜ್ಜಿಯರ' ಸಾಲಿಗೆ ಸೇರಿಸಬಹುದಾದ ಹಲವರು ಇದ್ದರು. ' ಯಾಕೋ ಸುಸ್ತು, ನಿನ್ನೆಯಿಂದ  ಪಾದ ನೋವು,  ಮೊಮ್ಮಗ ಏನು ಮಾಡುತ್ತಾನೋ, ನಿವೃತ್ತಿ ಆಗಿ ಏಳು ವರುಷ  ಆಯಿತು, ಬಿ.ಪಿ ಸುರುವಾಗಿದೆ..    . . ಇತ್ಯಾದಿ  ವಯಸ್ಸನ್ನು ಸಾಬೀತುಗೊಳಿಸುತಿದ್ದ ವರೆಲ್ಲ ನೀರಿಗಿಳಿದಾಗ ಮಕ್ಕಳನ್ನು  ನಾಚಿಸುವಂತೆ   ಆಟ ಆಡಿದರು. 





ಕಾರ್ಬನ್ ಕಾವ್  ಬೀಚ್ ನಲ್ಲಿ ಸಮುದ್ರದ ಅಲೆಗಳಿಗೆ ಮೈಯೊಡ್ಡಿ ಆಡಬಹುದು.  ಇಲ್ಲಿ ಅಲೆಗಳು ತುಂಬಾ ಅಬ್ಬರವಿಲ್ಲದೇ ಕಿನಾರೆಗೆ  ಬರುತಿದ್ದುವು.ಇಲ್ಲೂ ವಯೋಬೇಧ ಮರೆತು ನಮ್ಮ  ತಂಡ ನೀರಲ್ಲಿ ಕುಣಿಯಿತು.



 
ಬಾಲಕನೊಬ್ಬ  ಎದೆ ವರೆಗೂ ಮರಳಿನಲ್ಲಿ ಹೂತು  ಕುಳಿತು, 
ಅಲೆಗಳು ಬಂದು ಮರಳು ಕೊಚ್ಚಿಕೊಂಡು ಹೋಗುವುದನ್ನು ಕಾಯುತಿದ್ದ.



ವಂದೂರ್ ಬೀಚನಲ್ಲಿ  ಅಲೆಗಳು ಕಾಣಿಸಲೇ ಇಲ್ಲ.  ಸಮುದ್ರದ ನೀರು ಬಹಳ ತಿಳಿಯಾಗಿತ್ತು.  ಅಲ್ಲಿನ ನೀರು  ನಸುಗೆಂಪು, ಕೆಂಪು, ನಸುನೀಲಿ... ಹೀಗೆ  ಹಂತ ಹಂತ ವಾಗಿ  ಹೆಚ್ಚುತ್ತ ಕೊನೆಗೆ ಕಡುನೀಲಿಯಾಗಿ ದಿಗಂತದ ವರೆಗೂ ಬಹಳ ರಮ್ಯವಾಗಿ ಕಾಣಿಸುತ್ತಿತ್ತು. ಇಲ್ಲಿ ಮೊಸಳೆಗಳು ಇರುತ್ತದೆಯೆಂದು ಎಚ್ಚರಿಸಿದ ಕಾರಣ ಹೆಚ್ಚಿನವರು ನೀರಿಗೆ ಇಳಿಯಲಿಲ್ಲ.  

ಹಾವ್ಲೋಕ್  ಬೀಚಲ್ಲಿ, ಸಮುದ್ರ ಜೀವಿಯೊಂದು ಮರಳಿನ ಸಣ್ಣ ಗೋಲಿಗಳನ್ನು  ರಚಿಸುತ್ತ ದಂಡೆಯುದ್ದಕ್ಕೂ ಚಿತ್ತಾರ ಬರೆಯುತ್ತಿತ್ತು. ಎಲ್ಲಿ ನೋಡಿದರೂ ಪುಟ್ಟ ಪುಟ್ಟ ಮರಳಿನ ಗೋಲಿಗಳು.  ಇವುಗಳನ್ನು ನಿರ್ದಾಕ್ಷಿಣ್ಯವಾಗಿ  ಕೊಚ್ಚ್ಚಿಕೊಂಡು ಹೋಗುವ ಅಲೆಗಳು, ಅಷ್ಟೇ ನಿರ್ಲಿಪ್ತತೆಯಿಂದ ಪುನಃ ಮರಳಿನ ಗೋಲಿಗಳನ್ನು ರಚಿಸುವ ಪುಟ್ಟ ಸಮುದ್ರ ಜೀವಿ. 

ಕೆಲವು ಔದ್ಯೋಗಿಕ ತರಬೇತಿ ಕಾರ್ಯಕ್ರಮಗಳಲ್ಲಿ, 'ಸೋಲನ್ನು ಗೆಲುವಾಗಿ ಸ್ವೀಕರಿಸಬೇಕು, ಮರಳಿ  ಮರಳಿ ಯತ್ನವ ಮಾಡು. ನೆವರ್  ಗಿವ್ ಅಪ್  ' ಇತ್ಯಾದಿ ಹಲವು ಬಾರಿ ಕೇಳಿಸಿಕೊಂಡಿದ್ದೇನೆ.  ಚಿಕ್ಕ ಮಕ್ಕಳು ಇಂಥಹ ತರಬೇತಿ ಪಡೆಯದೇ , ಎಷ್ಟೊಂದು ಆಸಕ್ತಿಯಿಂದ ಮರಳಿನಲ್ಲಿ ಮಕ್ಕಳಾಟ ಮರಳಿ ಮರಳಿ ಆಡುತ್ತಾರಲ್ಲ! ಈ ಸಮುದ್ರ ಜೀವಿಯು ಎಷ್ಟೊಂದು ಸಲ ಮರಳಿ ಮರಳಿ  ಯತ್ನ  ಮಾಡುತ್ತಿದೆಯಲ್ಲ! 'ಪ್ರಕೃತಿಯ ಮುಂದೆ ಮಾನವ ಯಾವತ್ತು ಶಿಶು' ಎಂಬ ಮಾತು ನೆನಪಾಯಿತು.