Total Pageviews

Monday, October 4, 2010

'ಜರವಾ' ಗಳ ನಾಡಿನಲ್ಲಿ..

ಅಂಡಮಾನ್ ನ ಪ್ರಮುಖ ಪ್ರವಾಸಿ  ತಾಣವಾಗಿರುವ 'ಜರವಾ' ಆದಿವಾಸಿಗಳ ರಕ್ಷಿತಾರಣ್ಯಕ್ಕೆ  ನಾಳೆ ಹೋಗುವುದೆಂದು ನಮ್ಮಟೂರ್  ವ್ಯವಸ್ಥಾಪಕರು ಪ್ರಕಟಿಸಿದಾಗ, ಈ ಆದಿಮಾನವರು ಹೇಗಿರುತ್ತಾರೋ ಎಂಬ ಕುತೂಹಲ ಉಂಟಾಯಿತು. ಅಲ್ಲಿನ ಟ್ರಾವೆಲ್ ಸಂಸ್ಥೆಯ ಮಾರ್ಗದರ್ಶಕರ ಮಾತುಗಳು ಹೀಗಿದ್ದುವು:

'ಜರವಾ'ಗಳು ಹಿಂದೆ ನರಭಕ್ಷಕರಾಗಿದ್ದರು ಹಾಗು ಅವರಿರುವ ಕಾಡಿಗೆ ಇತರರ ಪ್ರವೇಶವನ್ನು  ಸಹಿಸುತ್ತಿರಲಿಲ್ಲ. ಕೆಲವು  ವರುಷಗಳ ಹಿಂದೆ ಜರವಾ ಮನುಷ್ಯನೊಬ್ಬ ಕಣಿವೆಯಲ್ಲಿ ಬಿದ್ದು ಕಷ್ಟಪಡುತ್ತಿರುವುದನ್ನು ನೋಡಿದ  ಅಧಿಕಾರಿಗಳು  ಅವನಿಗೆ ಫೋರ್ಟ್ ಬ್ಲೈರ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಟ್ಟು  ವಾಪಸ್ ಕಾಡಿಗೆ ಬಿಟ್ಟರಂತೆ, ಅಂದಿನಿಂದ ಜರವಾ ಜನಗಳಿಗೆ ನಾಗರಿಕ ಸಮಾಜವು ತಮಗೆ ಹಾನಿಯನ್ನು ಉಂಟುಮಾಡುವುದಿಲ್ಲ ಎಂಬ ನಂಬಿಕೆ ಬಂದು, ಈಗೀಗ  ಬಸ್ ಗಳು ಓಡಾಡುವ ಮಾರ್ಗದಲ್ಲಿ ಆರಾಮವಾಗಿ ಕಾಣ ಸಿಗುತ್ತಾರೆ.

ಈಗಲೂ ಬೇಟೆಯಾಡುತ್ತ, ದಟ್ಟವಾದ  ಕಾಡಿನಲ್ಲಿ ಸಣ್ಣ ಹುಲ್ಲಿನ ಜೋಪಡಿಗಳನ್ನು ಕಟ್ಟಿಕೊಂಡು ಜೀವಿಸುವ ಇವರಿಗೆ ಬಟ್ಟೆ, ವಿದ್ಯೆ, ಹಣ, ವ್ಯವಹಾರ ಇತ್ಯಾದಿಗಳ ಅರಿವಿಲ್ಲ.  ೧೦ ರುಪಾಯಿಗಳನ್ನು ಕೊಟ್ಟರೆ ಎಸೆಯುತ್ತಾರೆ, ಆದರೆ ೫ ರುಪಾಯಿ ಕೊಟ್ಟರೆ ನಗುತ್ತ  ಸ್ವೀಕರಿಸುತ್ತಾರೆ, ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅವರಿಗೂ 'ಪಾನ್' ನ ರುಚಿ ಗೊತ್ತಾಗಿದೆ, ಕಾಡಿನ ಮಗ್ಗುಲಲ್ಲಿ ಇರುವ ಸಣ್ಣ ಅಂಗಡಿಯಲ್ಲಿ ೫ ರುಪಾಯಿ ನಾಣ್ಯ ಕೊಟ್ಟರೆ 'ಪಾನ್' ಸಿಗುತ್ತದೆ  ಎಂಬಷ್ಟು ಜ್ಞಾನ ಗಳಿಸಿದ್ದಾರೆ!

ಇತ್ತೀಚಿಗಿನ ದಿನಗಳಲ್ಲಿ ಸರಕಾರದ ಪ್ರಯತ್ನಗಳಿಂದ ಜರವಾ ಜನರು ಇತರ ಸಮಾಜದ ಅಸ್ತಿತ್ವವನ್ನು ಸ್ವೀಕರಿಸಿದ್ದಾರೆ.
ಅವರ ಕೈಗಳಲ್ಲಿ  ಬಿಲ್ಲು, ಭರ್ಚಿ, ಕೋಲುಗಳು ಇರುತ್ತವಾದರೂ, ಇತ್ತೀಚಿಗಿನ ದಿನಗಳಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಹಾಗೆಂದು ಅವರನ್ನು ಕೆಣಕಬಾರದು, ಫೋಟೋ ತೆಗೆಯಲೇ ಬಾರದು,  ಕಿಟಿಕಿಯಿಂದ ಹೊರಗೆ  ಬಿಸ್ಕೆಟ್ -ಚಾಕೋಲೆಟ್-ಪಾನ್-ಹಣ -ಬಟ್ಟೆ ಇತ್ಯಾದಿ ಏನನ್ನೂ ಎಸೆಯಬಾರದು ಎಂಬ ನಿಯಮವಿದೆ.

ಅವರ ಸ್ನೇಹವನ್ನು ಗಳಿಸಲಿಕ್ಕಾಗಿ ಅರಣ್ಯಾಧಿಕಾರಿಗಳು ತಿಂಗಳಿಗೊಮ್ಮೆ ಬಾಳೆಹಣ್ಣು ಮತ್ತು  ತೆಂಗಿನಕಾಯಿಗಳನ್ನು  ಜರವಾ ಜನರಿಗೆ ಸಿಗುವಂತೆ ಕಾಡಿನಲ್ಲಿ ಬಿಟ್ಟು ಬರುತ್ತಾರಂತೆ.ಇವರ  ಸಂತತಿ ಕಡಮೆಯಾಗುತ್ತಾ ಬಂದು ಈಗ ಕೇವಲ ೨೫೦ ಮಂದಿ ಜರವಾಗಳು ಇದ್ದಾರಂತೆ.

ಒಟ್ಟಿನಲ್ಲಿ, 'ಜರವಾ ರಕ್ಷಿತಾರಣ್ಯ'ವಾದ ಜಿರ್ಕಾತಂಗ್ ಪ್ರದೇಶದಿಂದ  ಮಧ್ಯ ಅಂಡಮಾನ್ ನ ನಡುವಿನ  ದಟ್ಟ ಕಾಡುಗಳ ನಡುವೆ, ಬಸ್  ಚಲಿಸುವಾಗ ಸುಮಾರು  ೨೦ ಜರವಾ ಜನರನ್ನು ನಾವು ನೋಡಿದೆವು. ಚಿಕ್ಕಮಕ್ಕಳ  ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ  ವೇಷಧಾರಿಗಳಂತೆ ಕಾಣುವ ಕೆಲವರು, ಅದೇ ರೀತಿಯ ವಯಸ್ಕರು, ಹೆಣ್ಣು ಮಕ್ಕಳು ಕಾಣಿಸಿದರು. ಕೆಲವು ಮಕ್ಕಳ ಮೈಯಲ್ಲಿ ಚಡ್ಡಿ ಹಾಗು ಕಾಲಿನಲ್ಲಿ ಚಪ್ಪಲಿ ಕಂಡುಬಂತು. ಕೆಲವು ಬಾಲಕಿಯರು  ಚಿಪ್ಪಿನ ಅಥವಾ ಮುತ್ತಿನ ಹಾರಗಳನ್ನು ಧರಿಸಿದ್ದರು. ಸೊಂಟದ ಸುತ್ತ ಕೆಂಪಿನ ದಾರಗಳನ್ನು   'ಫ್ರಿಲ್' ನಂತೆ ಬಿಟ್ಟಿದ್ದರು. ಇನ್ನು ಕೆಲವರು ಮುಖಕ್ಕೆ ಅದೇನೋ  ಮಣ್ಣಿನಂತೆ ಕಾಣುವ ಲೇಪ ಹಚ್ಚಿದ್ದರು. ಒಂದೆರಡು ಜನ ಟವೆಲ್ ನ್ನು ಉಟ್ಟುಕೊಂಡಿದ್ದರು.

ನಾವು ನೋಡಿದ 'ಜರವಾ' ಜನರು, ತಮಗೆ ಏನಾದರು ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಇದ್ದ ಹಾಗಿತ್ತು. ಇವರು ನಿಜವಾಗಿಯೂ ಒಂದು ಕಾಲದಲ್ಲಿ ನರ ಭಕ್ಷಕರಾಗಿರಲು  ಸಾಧ್ಯವೇ ಅನಿಸಿತು.

ಇವರನ್ನು 'ಪ್ರವಾಸಿ ಆಕರ್ಷಣೆ' ಎಂದು ಪರಿಗಣಿಸುವ ಬದಲು, ಯೋಗ್ಯವಾದ  ಅವಕಾಶ,ವಿದ್ಯಾಭ್ಯಾಸ ಕಲ್ಪಿಸಿದರೆ, ಇವರು ಸಮಾಜದ ಮುಖ್ಯವಾಹಿನಿಯ ಜತೆಗೆ ಬೇರೆಲಾರರೆ? ಯಾಕೋ, ಇದು ಸರಿಯಲ್ಲ ಅನಿಸಿತು.

ಜರವಾ ಜನರನ್ನು ನೋಡಿದುದಕ್ಕಿಂತಲೂ , ಅವರನ್ನು ನೋಡಲು ನಾವು ಪಟ್ಟ ಶ್ರಮ ಹಾಗು  ಅಂಡಮಾನ್ ನ ಬಸ್ ಪ್ರಯಾಣ ನನಗೆ ಹೆಚ್ಚು ಮುದ ಕೊಟ್ಟಿತು. 'ಜರವಾ ರಕ್ಷಿತಾರಣ್ಯ' ತಲಪಲು, ನಾವು ಉಳಿದುಕೊಂಡಿದ್ದ ಸುಮಾರು ೩ ಗಂಟೆ ಬಸ್ ಪ್ರಯಾಣ. ನಮ್ಮ ಬಳಗ ಒಂದು ಬಸ್ಸನ್ನೇರಿ, ೩ ಗಂಟೆ  ಹರಸಾಹಸ ಪ್ರಯಾಣ ಮಾಡಿ 'ಜಿರ್ಕಾತಂಗ್' ಎಂಬ ಪುಟ್ಟ ಊರನ್ನು ಸೇರಿತು.

ದಿನಕ್ಕೆ ಕೇವಲ ೧೫೦ ವಾಹನಗಳಿಗೆ 'ಜರವಾ' ಜನರಿರುವ  ಜಿರ್ಕತಾಂಗ್ ಎಂಬಲ್ಲಿ  ಕಾಡನ್ನು ಪ್ರವೇಶಿಸಲು ಅನುಮತಿ ಕೊಡುತ್ತಾರಂತೆ.ಈ ವಾಹನಗಳು  ಜಿರ್ಕತಾಂಗ್ ಗೇಟ್ ನ ಬಳಿ  ಬೆಳಗ್ಗೆ ೬ ಗಂಟೆಗೇ  ಸಾಲಾಗಿ  ನಿಲ್ಲಬೇಕು. ಗೇಟ್ ತೆರೆದಾಗ ಮುಂದೆ ಒಂದು ಪೋಲಿಸ್ ವಾಹನ, ಹಿಂದೆ ಸಾಲಾಗಿ ಇತರ ವಾಹನಗಳು ಹೋಗಬೇಕು. ಕೊನೆಯಲ್ಲಿ ಇನ್ನೊದು ಪೋಲಿಸ್ ವಾಹನ ಇರುತ್ತದೆ. ಕಾಡಿನಲ್ಲಿ ಬಸ್ ನ್ನು ಎಲ್ಲೂ ನಿಲ್ಲಿಸುವಂತಿಲ್ಲ.

ಈ ಬಸ್ ಪ್ರಯಾಣ ಕೆಲವರಿಗೆ ಕಿರಿ-ಕಿರಿ ತರಿಸಿತು. ಕೆಲವರು ಕನಿಷ್ಠ ಸೌಲಭ್ಯಗಳಿಲ್ಲದಿರುವ  ಈ  ಬಸ್ ನ್ನು ಯಾಕಾದರೂ ಕರೆಸಿದೆರೆಂದು  ಟೂರ್  ವ್ಯವಸ್ಥಾಪಕರನ್ನು ತರಾಟೆಗೆ ತೆಗೆದು ಕೊಂಡರು.

ಕಾರಣಗಳು ಹೀಗಿದ್ದುವು: "ಮುಂದುಗಡೆಯ ಸೀಟ್ ಗೆ ಮುಗ್ಗರಿಸಿದಾಗ ಹಿಡಿಯಲು ಕಂಬಿ ಇಲ್ಲ.. . ಕಿಟಿಕಿ ಗಾಜುಗಳು ಏನೇ ಮಾಡಿದರು  ಹಿಂದೆ-ಮುಂದೆ ಹೋಗುತ್ತಾ ಇಲ್ಲ.....ಸೀಟ್ ಇಬ್ಬರಿಗೆ ಕೂರುವಷ್ಟು ಅಗಲವಿಲ್ಲ ..... ಮಳೆ ನೀರೆಲ್ಲ ಬಸ್ ನ ಒಳಗೆ ಬರ್ತಾ ಇದೆ......ಬೆಳಗ್ಗೆ ೪:೩೦ ಗಂಟೆಗೆ ಬಂದ ಈ ಬಸ್ ಹಿಡಿಯಲು ನಾವು ೩ ಗಂಟೆಗೇ  ಎದ್ದು ಮಾರ್ಗದ ಬದಿ ಕಾಯಬೇಕಿತ್ತೆ? " ಇತ್ಯಾದಿ.

'ನಾನೇನು ಮಾಡ್ಲಿ, ಈ ಊರಲ್ಲಿ ಇಂಥಹ ಬಸ್ ಗಳೇ ಇರುವುದು,  ಇದಾದರು ಸಿಕ್ಕಿತಲ್ಲ' ಎಂಬುದು ಆತನ ಅಳಲು. ಮಳೆ ನೀರು  ಒಳಗೆ ಸುರಿಯುತಿದ್ದ ಸೀಟ್ ನಲ್ಲಿದ್ದ ಸ್ವಲ್ಪ ವಯಸ್ಸಾಗಿದ್ದ ಸಹಪ್ರಯಾಣಿಕರು ಕುಳಿತ್ತಿದ್ದರು. ಅವರನ್ನು ನಮ್ಮ ಸೀಟ್ ನಲ್ಲಿ ಕುಳ್ಳಿರಿಸಿ, ರೇಖಾ ( ನನ್ನ ಸಹೋದ್ಯೋಗಿ) ಮತ್ತು ನಾನು ಅವರ ಸೀಟ್ ನಲ್ಲಿ  ಕುಳಿತೆವು. ಬಸ್ ಬ್ರೇಕ್ ಹಾಕಿದಾಗ  ಮುಗ್ಗರಿಸುತ್ತ- ಸಾವರಿಸುತ್ತ-ನಗುತ್ತ ಇದ್ದೆವು.

ಸೋನೆಯಾಗಿ ಸುರಿಯುತಿದ್ದ ಮಳೆ ಇದ್ದಕಿದ್ದಂತೆ  ಜೋರಾಯಿತು. ಏನೇ ಮಾಡಿದರು, ಕಿಟಿಕಿಯ ಗಾಜು ಸರಿಸಲು ನಮ್ಮ ಕೈಯಿಂದಲೂ ಆಗಲಿಲ್ಲ. ಕೊನೆಗೆ , ಬಸ್ ನ ನಿರ್ವಾಹಕನ ಸಹಾಯ ಕೇಳಿದೆವು. ಆತ ಮಾಡಿದ ಕೆಲಸವೇನೆಂದರೆ- ಇಡೀ ಕಿಟಿಕಿಯ ಫ್ರೇಮ್ ನ್ನು ಕಿತ್ತು ನಮ್ಮ ಕಾಲಿನ ಪಕ್ಕ ಇರಿಸಿದ! ಈಗ ಮಳೆ ನೀರು ಬಸ್ ನ ಒಳಗೆ ಬರಲು ಮತ್ತಷ್ಟು ಅನುಕೂಲವಾಯಿತು!

ಆಮೇಲೆ ಬಸ್ ನ ಗೇರ್  ಬಾಕ್ಸ್ ನ ಪಕ್ಕದಲ್ಲಿ ಕೂರುವಂತೆ ನಮಗೆ ವಿನಂತಿಸಿದ. ಅಲ್ಲಿ ಹೋಗಿ ನೋಡಿದರೆ, ಬಸ್ ನ ತಳ ಸುಮಾರು ಅರ್ಧ ಅಡಿ ಅಗಲಕ್ಕೆ ಕಿತ್ತುಹೋಗಿ,ಮಾರ್ಗ ಕಾಣಿಸುತ್ತಿತ್ತು. ಕಾಲಿಟ್ಟರೆ ಕಾಲು ಸಿಕ್ಕಿಹಾಕಿಕೊಳ್ಳುವುದು ಖಂಡಿತ. ಈ 'ಆಫರ್'ಗಿಂತ  ಮಳೆ ನೀರು ಬೀಳುವ ಸೀಟ್ ಎಷ್ಟೋ ವಾಸಿ ಎಂದು ಮರಳಿ ಹಳೆ ಜಾಗಕ್ಕೆ ಬಂದೆವು.

ಸಣ್ಣದಾದ ಕೊಡೆಯನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದೆ. ಈ ಸಂದರ್ಭದಲ್ಲಿ ಸದುಪಯೋಗಕ್ಕೆ ಬಂತು. ಸರಿ, ಅದನ್ನು ಬಿಡಿಸಿ, ಕಿಟಿಕಿಯ ಫ್ರೇಮ್ ನ ಜಾಗದಲ್ಲಿ ಇಟ್ಟೆವು. ಅಂತೂ-ಇಂತೂ, ಬಸ್ ನ ಒಳಗೆ 'ಕೊಡೆ ಬಿಡಿಸಿ' ಕುಳಿತ ನಮ್ಮ ಚಾತುರ್ಯವನ್ನು ಕಂಡು ಇತರರು ಹೃತ್ಪೂರ್ವಕವಾಗಿ ನಕ್ಕರು. ಹರಟೆ ಹೊಡೆಯುತ್ತಾ, ನಗುತ್ತಾ ಸಾಗಿತ್ತು ನಮ್ಮ ಪಯಣ. ಜತೆಯಲ್ಲಿ ಸಹಪ್ರಯಾಣಿಕರು ತಮ್ಮ ತಮ್ಮ ಊರುಗಳಿಂದ ತಂದ ಕುರುಕಲು ತಿಂಡಿಗಳ ವಿನಿಮಯವೂ ಆಯಿತು.

ಮೈಸೂರು-ಬೆಂಗಳೂರು  ಮಧ್ಯದ ವೋಲ್ವೋ ಬಸ್ ಪ್ರಯಾಣದ ಏಕತಾನತೆಗೆ, ಪ್ರಯಾಣಿಕರ ನಿರಂತರ ಗಡಿಬಿಡಿಗೆ, ಪರಿಚಯವಿದ್ದರೂ  ಮುಗುಳು ನಗೆ ವಿನಿಮಯಕ್ಕೂ ಸಮಯವಿಲ್ಲದ ಯಾಂತ್ರಿಕತೆಗೆ ಬೇಸತ್ತಿದ್ದ ನನಗೆ, ಜರವಾ ಆದಿವಾಸಿಗಳನ್ನು ನೋಡಿದುದಕ್ಕಿಂತಲೂ, ಈ ವರ್ಣರಂಜಿತ ಬಸ್ ಪ್ರಯಾಣ ತುಂಬಾ ಖುಷಿ ಕೊಟ್ಟಿತು.

No comments:

Post a Comment