Total Pageviews

Sunday, January 23, 2011

ಟುಗು ನೆಗರ - ಮಲೇಶ್ಯಾದ 'ಅಮರ ಜವಾನ್' ಸ್ಮಾರಕ

'ಟುಗು ನೆಗರ ' ಅಂದರೆ  ಮಲಯ ಭಾಷೆಯಲ್ಲಿ  'ರಾಷ್ಟ್ರೀಯ ಸ್ಮಾರಕ' ಎಂದರ್ಥ.  ಮಲೇಶ್ಯಾದ  ಕೌಲಾಲಂಪುರ್ ನಲ್ಲಿರುವ  'ಟುಗು ನೆಗರ' ವು ಒಂದು ಅದ್ಬುತವಾದ ಕಂಚಿನ ಪುತ್ಥಳಿ . ಮಲೇಶ್ಯಾದ ಸ್ವಾತಂತ್ರ್ರ್ಯಕಾಗಿ  ಹಾಗೂ  ಎರಡನೆಯ ವಿಶ್ವ ಮಹಾಯುಧ್ಧದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಇದನ್ನು  ಸ್ಥಾಪಿಸಲಾಗಿದೆ.

೧೫ ಮೀಟರ್ ಎತ್ತರದ ಈ ಕಂಚಿನ ಪುತ್ಥಳಿಯಲ್ಲಿ ೭ ಮಂದಿ ಯೋಧರ ಪ್ರತಿಮೆಯಿದೆ.  ಇವು ನಾಯಕತ್ವ, ಐಕ್ಯತೆ, ಕಟ್ಟೆಚ್ಚರ, ಶಕ್ತಿ, ಧೈರ್ಯ ಹಾಗೂ ತ್ಯಾಗವನ್ನು ಸೂಚಿಸುತ್ತವೆ. ೧೯೬೬ ರಲ್ಲಿ ಶಿಲ್ಪಿ  'ಫೆಲಿಕ್ಸ್ ಡಿ ವೆಲ್ಡೊನ್' ಅವರಿಂದ ರಚಿತವಾದ ಈ ಶಿಲ್ಪವು ಬಹಳ ಮನೋಹರವಾಗಿದೆ.  ತುತ್ತ ತುದಿಯಲ್ಲಿರುವ ಯೋಧನ ಕೈಯಲ್ಲಿ  ಮಲೇಶ್ಯಾದ ಧ್ವಜವಿದೆ. ಇದನ್ನು ದಿನಾಲೂ ಬೆಳಗ್ಗೆ ಆರೋಹಣ ಮಾಡಿ, ಸಂಜೆ ಅವರೋಹಣ ಮಾಡುತ್ತಾರಂತೆ.    

'ಟುಗು ನೆಗರ'  ಪ್ರತಿಮೆಯನ್ನು, ಪ್ರಶಾಂತವಾದ ವಾತಾವರಣದಲ್ಲಿ, ಒಂದು ಕೊಳದ ಮಧ್ಯೆ ಸ್ಥಾಪಿಸಲಾಗಿದೆ. ಅಲ್ಲಿಯ ಫಲಕಗಳಗಲ್ಲಿ   ಹುತಾತ್ಮರ ಪಟ್ಟಿಯಲ್ಲಿ  'ಸಿಂಗ್' ಎಂದು ಕೊನೆಗೊಳ್ಳುವ ಪಂಜಾಬಿ ಯೋಧರ ಹೆಸರೂ ಇದ್ದುವು. ಬ್ರಿಟಿಷರು ಭಾರತದ ಸೇನೆಯನ್ನು ಅಲ್ಲಿ ಹೋರಾಡಲು ಆಯೋಜಿಸಿದ್ದರ ಫಲವಿದು. 




ನನಗೆ ಇಲ್ಲಿ ಇಷ್ಟವಾದ ವಿಚಾರವೇನೆಂದರೆ ಸೆಕ್ಯುರಿಟಿ ಹೆಸರಿನಲ್ಲಿ ಇಲ್ಲಿ ನಮ್ಮನ್ನು ಅಡಿಗಡಿಗೆ ತಡೆಯಲು ಯಾರೂ ಇರಲಿಲ್ಲ. ಫೋಟೊ ತೆಗೆಯಲು ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಕೆಲವು ಪ್ರವಾಸಿ ತಾಣಗಳಲ್ಲಿರುವಂತೆ ಕ್ಯಾಮೆರಾ ಚಾರ್ಜ್ ಕೊಡಬೇಕಾಗಿಲ್ಲ,  'ಇಲ್ಲಿ ಫೊಟೊ ತೆಗಯಬಾರದು' ಎಂಬ ಎಚ್ಚರಿಕೆಯ ಬರಹವಂತೂ ಇಲ್ಲವೇ ಇಲ್ಲ, ಬಲೂನ್ ಮಾರುವವರಾಗಲಿ, ವಿವಿಧ ತಿಂಡಿ- ತಿನಿಸು ಮಾರುವವರಾಗಲೀ , ಭಿಕ್ಷೆ ಬೇಡುವವರಾಗಲೀ - ಸುತ್ತಮುತ್ತ ಕಾಣಿಸಲೇ ಇಲ್ಲ. ಹಾಗಾಗಿ, ಈ  ಪರಿಸರವು ಶಾಂತವಾಗಿ, ಸ್ವಚ್ಛವಾಗಿ  ಇದೆ. 

ದೇಶ ಯಾವುದೇ ಇರಲಿ, ಅದರ ರಕ್ಷಣೆಗೆ  ಹೋರಾಡಿದವರೆಲ್ಲರೂ  ಚಿರಸ್ಮರಣೀಯರು. ಈ  ಸ್ಮಾರಕದ ಭವ್ಯತೆ ಹಾಗು ಸುತ್ತಲಿನ ಪ್ರಶಾಂತತೆ ಯನ್ನು  ನೋಡಿದಾಗ ಗೌರವ ತಾನಾಗಿ  ಉಕ್ಕುತ್ತದೆ. ಅಯಾಚಿತವಾಗಿ, ನನಗೆ ದೆಹಲಿಯಲ್ಲಿರುವ 'ಅಮರ ಜವಾನ್ ಜ್ಯೋತಿ' ನೆನಪಾಯಿತು.ನಮ್ಮ 'ಅಮರ ಜವಾನ್' ರಿಗೂ  ಇಂತಹುದೇ ಸ್ವಚ್ಚ, ಶಾಂತ ಪರಿಸರದಲ್ಲಿ ಸ್ಮಾರಕ ಇರಬೇಕಿತ್ತಲ್ಲವೆ? 

ದೆಹಲಿಯಲ್ಲಿ, 'ಅಮರ ಜವಾನ್ ' ಜ್ಯೋತಿಯನ್ನು ಅಚ್ಚುಕಟ್ಟಾಗಿ ಕಾಯುತ್ತಾರಾದರೂ, ಸುತ್ತಲಿನ ಪರಿಸರ ಒಂದು ಸಂತೆ.  ವಿವಿಧ ವಸ್ತುಗಳನ್ನು  ಮಾರುವವರ- ಕೊಳ್ಳುವವರ ಗಲಾಟೆಯೊಂದಿಗೆ, ಕಿಕ್ಕಿರಿದ ಜಾಗದಲ್ಲೂ  ಫೋಟೊ ಕ್ಲಿಕ್ಕಿಸಿ ಕಾಸು ಮಾಡುವವರ ಕಿರಿಕಿರಿಯಲ್ಲಿ  'ಅಮರ ಜವಾನ  ಜ್ಯೋತಿ' ಮಂಕಾಗಿ ಕಾಣಿಸುತ್ತದೆ!. ಇಲ್ಲಿಂದ ಒಮ್ಮೆ ಹೊರಟರೆ ಸಾಕು ಎನಿಸುತ್ತದೆ!

Thursday, January 13, 2011

'ಭಟು ಕೇವ್ಸ್', ಶಿಲೆಯಲ್ಲವೀ ಗುಹೆಯು..

ಮಲೇಶ್ಯಾದ ಕೌಲಾಲಂಪುರ್ ನಿಂದ ಸುಮಾರು ೧೩ ಕಿಲೋ ಮೀಟರ್ ದೂರದದಲ್ಲಿದೆ 'ಭಟು ಕೇವ್ಸ್' ಎಂದು ಕರೆಯಲ್ಪಡುವ ಅದ್ಭುತ ಪ್ರಾಕೃತಿಕ ವಿಸ್ಮಯ. ಇದು 'ಲೈಮ್ ಸ್ಟೋನ್' ನಿಂದ (ಸುಣ್ಣದ  ಕಲ್ಲು) ರಚನೆಯಾದ ಗುಹೆಯಾಗಿದ್ದು,ಸುಮಾರು  ೪೦೦ ಮಿಲಿಯನ್ ವರುಷಗಳ ಹಿಂದೆ ರೂಪುಗೊಂಡಿತೆಂದು ನಂಬಿಕೆ.

ನಮ್ಮ ಗೈಡ್ ವಿವರಿಸಿದ ಪ್ರಕಾರ, ತುಂಬಾ ಹಿಂದೆಯೇ ಇದರ ಅಸ್ತಿತ್ವವಿದ್ದರೂ, ಮಲೇಶ್ಯಾದಲ್ಲಿ ಬ್ರಿಟಿಷರ ಅಧಿಕಾರವಾವಧಿಯಲ್ಲಿ (೧೮೭೮)ಈ ಗುಹೆ ವಿಶೇಷ ಪ್ರಾಮುಖ್ಯತೆ ಗಳಿಸಿತು.  ಆ ಕಾಲದಲ್ಲಿ, ಕೆಲವು ಭಾರತೀಯ ಮೂಲದ ತಮಿಳು ವರ್ತಕರು, ಮಲೇಶ್ಯಾದ ಅರ್ಥಿಕ ವ್ಯವಸ್ಥೆಯಲ್ಲಿ  ಪ್ರಮುಖ ಪಾತ್ರ ವಹಿಸಿದ್ದರು. ತಂಬುಸಾಮಿ ಪಿಳ್ಳೈ ಅವರಲ್ಲಿ ಪ್ರಮುಖರಾಗಿದ್ದರು. ಅವರ ಶ್ರಮದ ಫಲವಾಗಿ, 'ಭಟು ಕೇವ್ಸ್',ನಲ್ಲಿ  ಕಾರ್ತಿಕೇಯನ  ದೇವಸ್ಥಾನ ಸ್ಥಾಪನೆಯಾಯಿತು. 

ಅಂದಿನಿಂದ  ಇಂದಿನ ವರೆಗೂ, 'ಭಟು ಕೇವ್ಸ್' ನಲ್ಲಿ, ವರುಷಕ್ಕೆ ಒಂದು ಬಾರಿ ಜನವರಿ ಅಥವಾ ಫೆಬ್ರವರಿ  ತಿಂಗಳಲ್ಲಿ 'ಥೈಪಸಮ್' ಎಂದು ಕರೆಯಲ್ಪಡುವ ಉತ್ಸವವನ್ನು ಬಹಳ ವಿಶಿಷ್ಟವಾಗಿ ನಡೆಸಲಾಗುತ್ತದೆ ಹಾಗು ಇದು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.  

'ಭಟು ಕೇವ್ಸ್' ನ ಪಕ್ಕ ನಮ್ಮ ಬಸ್ ನಿಲ್ಲುತ್ತಿದ್ದಂತೆ, ನಮ್ಮನ್ನು ಅಕರ್ಷಿಸಿದ್ದು   ಅಲ್ಲಿ ಸ್ವಚ್ಚಂದವಾಗಿದ್ದ  ಹಿಂಡು-ಹಿಂಡು ಪಾರಿವಾಳಗಳು.





 ೨೦೦೬ ರಲ್ಲಿ, ಸುಮಾರು ೧೪೦ ಅಡಿ ಎತ್ತರದ ಮುರುಗನ್ ದೇವರ ಮೂರ್ತಿಯನ್ನು, ಗುಹೆಯ ಬುಡದಲ್ಲಿ ಸ್ಥಾಪಿಸಿಲಾಗಿದೆ. ಇದು ಪ್ರಪಂಚದಲ್ಲಿ ಅತಿ ದೊಡ್ಡದಾದ  ಸುಬ್ರಹ್ಮಣ್ಯ ದೇವರ ಪ್ರತಿಮೆಯಂತೆ.




ಗುಹೆಯು ರಸ್ತೆಯ ಮಟ್ಟದಿಂದ ಸುಮಾರು ೪೦೦ ಅಡಿ ಎತ್ತರದಲ್ಲಿದೆ. ೨೭೨ ಮೆಟ್ಟಲುಗಳನ್ನು ಏರಿ,  ಗುಹೆಯ ಒಳಗೆ ಪ್ರವೇಶ ಮಾಡಿದರೆ, ಸುಮಾರು ೧೦೦ ಅಡಿ  ಎತ್ತರದ ವಿಶಾಲವಾದ ಗುಹೆ ಗೋಚರಿಸುತ್ತದೆ. ಗುಹೆಯ ಒಳಗೆ, ಕೆಲವು ದೇವರ ಮೂರ್ತಿಗಳಿವೆ. ತೀರ ಶಾಂತವಾದ ಹಾಗೂ ತಂಪಾದ ಪರಿಸರ.



ಗುಹೆಯ ಅಂತ್ಯದಲ್ಲಿ ಮಾಡು ತೆರೆದಿದ್ದು, ಅಕಾಶ ಕಾಣಿಸುತ್ತದೆ ಹಾಗು ಗುಹೆಯ ಒಳಗೆ ಬೆಳಕು ಬೀಳುತ್ತದೆ.



ಒಟ್ಟಿನಲ್ಲಿ  ಅದ್ಭುತವಾದ  ದೈವಿಕ ಅನುಭವ. ಅಪ್ಪಟ ವಾಸ್ತವವಾದಿಯಾದ, ಸುಮಾರಾಗಿ ನಾಸ್ತಿಕಳಾದ ನನಗೇ ಈ ಅನುಭವ ಉಂಟಾಗಬೇಕಾದರೆ, ಬಹುಶ:, ಹಿಂದಿನ ಕಾಲದಲ್ಲಿ ಋಷಿಗಳು ಇಂತಹ ಜಾಗಗಳಲ್ಲಿ ತಪಸ್ಸು  ಮಾಡುತ್ತಿದ್ದರಬಹುದು ಅನಿಸಿತು.

ನಿಜವಾಗಿ ಹೇಳಬೇಕೆಂದರೆ, ತೀರ ಕಡಿದಾಗಿದ್ದ ೨೭೨ ಮೆಟ್ಟಲುಗಳನ್ನು ಹತ್ತುವಷ್ಟರಲ್ಲಿ ನನಗೆ ಸಾಕು-ಸಾಕಾಗಿತ್ತು. ಎರಡು  ವಾರಗಳ 'ವಾಕಿಂಗ್'  ಒಂದೇ ದಿನ ಮಾಡಿದಂತಾಗಿತ್ತು.  ಇದನ್ನೇಕೆ ಹೇಳುತ್ತೇನೆಂದರೆ, 'ಥೈಪಸಮ್' ಹಬ್ಬದ  ಸಂದರ್ಭದಲ್ಲಿ ಸಹಸ್ರಾರು ಭಕ್ತರು ತಮ್ಮ ಮೈಗೆ ನಿಂಬೆಹಣ್ಣು,  ತೆಂಗಿನಕಾಯಿ,  ಇತ್ಯ್ಯಾದಿಗಳನ್ನು ಕೊಕ್ಕೆಯಿಂದ ತಮ್ಮ ಚರ್ಮಕ್ಕೆ ಚುಚ್ಚಿಕೊಂಡು, ಕಾವಡಿಯನ್ನು ಹೊತ್ತುಕೊಂಡು, ಕಲಶವನ್ನು ಹಿಡಿದುಕೊಂಡು......ಇತ್ಯಾದಿ   ಹರಕೆಗಳನ್ನು ಸಲ್ಲಿಸುತ್ತಾ, ಮೆಟ್ಟಲುಗಳನ್ನು ಏರಿ ದೇವರ ದರುಶನ ಪಡೆಯುತ್ತಾರಂತೆ.  

ಅವರ ಭಕ್ತಿ, ಶಕ್ತಿ, ಛಲ, ಸಹನೆಗೆ  ಏನು ಹೇಳಬೇಕು?  ಶ್ರೀ ಮುರುಗ ಹರೋಹರ! ಶ್ರೀ ಮುರುಗ ಹರೋಹರ!

Sunday, January 9, 2011

ಮಲೇಶ್ಯಾದಲ್ಲಿ ತಿಂಡಿ ತಿನಿಸು..ದಿಯಾ ಖಾಯೆ ಹಮ್ ಲೋಗ್..

ಇತ್ತೀಚೆಗೆ ಕಾನ್ಫೆರೆನ್ಸ್  ಪ್ರಯುಕ್ತ ಮೂರು ದಿನಗಳ ಕಾಲ  ಮಲೇಶ್ಯಾಕ್ಕೆ ಹೋಗಿದ್ದೆ.
ಅಪ್ಪಟ ಸಸ್ಯಾಹಾರಿಯಾದ ನನಗೆ ಪಂಚತಾರಾ ಹೋಟೆಲ್ ಗಳಲ್ಲಿ ಊಟಕ್ಕಿಂತ ನೋಟವೇ ಚೆನ್ನ. ನನಗೆ ತಕ್ಕುದಾದ ತಿನಿಸುಗಳನ್ನು ಆಯ್ದುಕೊಳ್ಳಲೆಂದು, ಬಫೆಗೆ ಒಂದು ಸುತ್ತು ಹಾಕಿದೆ. ಚೈನೀಸ್, ಮಲೇಶಿಯನ್ ಹಾಗು  ಇಂಡಿಯನ್ ಎಂದು ಹೆಸರಿಡಲಾಗಿದ್ದ  ತರಾವರಿ ಸಸ್ಯಾಹಾರಿ -ಮಾಂಸಾಹಾರಿ  ಭಕ್ಷ್ಯ-ಭೋಜ್ಯಗಳು ಹೀಗಿದ್ದುವು:
   
'ಎಗ್ ಟಾರ‍ಟ್' 

ದೀಪಾವಳಿ ಹಬ್ಬ ನೆನಪಾಯಿತೆ? 'ದಿಯಾ ಜಲೇ  ಸಾರೇ ರಾತ್ ' ಹಾಡು ಗುನುಗಿದಿರಾ ? ಇದು 'ಎಗ್ ಟಾರ್‍ಟ್' ಎಂಬ ಹೆಸರಿನ ಚೈನೀಸ್ ಸಿಹಿ ತಿಂಡಿ. ಗೋದಿಹಿಟ್ಟು ಹಾಗೂ ಮೊಟ್ಟೆಯಿಂದ ಕೂಡಿದ ಈ ತಿಂಡಿ ಕೇಕ್ ನ ರುಚಿ ಹೊಂದಿದೆ. ಇದು ಚೀನಾದ ಸಾಂಪ್ರದಾಯಿಕ ತಿನಿಸಂತೆ.


ಕೆಂಪಾಗಿ ಕಾಣುವ ಇದು 'ಡ್ರಾಗನ್ ಫ್ರುಟ್'. ಬಿಳಿ ಬಣ್ಣದ ತಿರುಳಿನ ಜತೆಗೆ ಕಪ್ಪು ಬೀಜಗಳನ್ನು ಹೊಂದಿದ್ದು, ಬಾಳೆ ಹಣ್ಣಿನ ಮೇಲೆ 'ಪೆಪ್ಪರ್ ಪುಡಿ' ಚಿಮುಕಿಸಿದಂತೆ  ಕಾಣುತ್ತದೆ. ಸ್ವಲ್ಪ ಹುಳಿ ಮಿಶ್ರಿತ ಸಿಹಿ ರುಚಿ ಹೊಂದಿದೆ.

                                                                 
ಆಜ್ಜಿಯ ಎಲೆ-ಅಡಿಕೆ ಕುಟ್ಟಣ ನೆನಪಾಯಿತೆ? ವಿವಿಧ ಮಾಂಸಾಹಾರ ಭಕ್ಷ್ಯಗಳಿವು..           





'ಸಾಗೊ ಡೆಸರ್ಟ್', 


ಇದು ನಮ್ಮ ಸಬ್ಬಕ್ಕಿ ಪಾಯಸದ ಇನ್ನೊಂದು ರೂಪ. ಸಬ್ಬಕ್ಕಿ ಮತ್ತು ಸ್ವಲ್ಪ ಹೆಸರುಕಾಳುಗಳನ್ನು ಬೇಯಿಸಿ, ಬಾಳೆಹಣ್ಣು, ಹಾಲು, ಸಕ್ಕರೆ  ಸೇರಿಸಿ ಪಾಯಸ ಮಾಡಿ, ಸ್ವಲ್ಪ ಕೇಸರಿ ದಳ ಉದುರಿಸಿ,  ಫ್ರಿಜ್ಜಲ್ಲಿ ಇಟ್ಟು ತಂಪು ಮಾಡಿದರೆ, ಇದೇ ರುಚಿ ಬರಬಹುದು ಅನಿಸಿತು. ಒಟ್ಟಿನಲ್ಲಿ ಈ 'ಕಲರ್ ಫುಲ್ ಪಾಯಸ' ಚೆನ್ನಾಗಿತ್ತು.

ಸಲಾಡ್ ಗ್ಯಾಲರಿ..