Total Pageviews

Sunday, January 23, 2011

ಟುಗು ನೆಗರ - ಮಲೇಶ್ಯಾದ 'ಅಮರ ಜವಾನ್' ಸ್ಮಾರಕ

'ಟುಗು ನೆಗರ ' ಅಂದರೆ  ಮಲಯ ಭಾಷೆಯಲ್ಲಿ  'ರಾಷ್ಟ್ರೀಯ ಸ್ಮಾರಕ' ಎಂದರ್ಥ.  ಮಲೇಶ್ಯಾದ  ಕೌಲಾಲಂಪುರ್ ನಲ್ಲಿರುವ  'ಟುಗು ನೆಗರ' ವು ಒಂದು ಅದ್ಬುತವಾದ ಕಂಚಿನ ಪುತ್ಥಳಿ . ಮಲೇಶ್ಯಾದ ಸ್ವಾತಂತ್ರ್ರ್ಯಕಾಗಿ  ಹಾಗೂ  ಎರಡನೆಯ ವಿಶ್ವ ಮಹಾಯುಧ್ಧದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಇದನ್ನು  ಸ್ಥಾಪಿಸಲಾಗಿದೆ.

೧೫ ಮೀಟರ್ ಎತ್ತರದ ಈ ಕಂಚಿನ ಪುತ್ಥಳಿಯಲ್ಲಿ ೭ ಮಂದಿ ಯೋಧರ ಪ್ರತಿಮೆಯಿದೆ.  ಇವು ನಾಯಕತ್ವ, ಐಕ್ಯತೆ, ಕಟ್ಟೆಚ್ಚರ, ಶಕ್ತಿ, ಧೈರ್ಯ ಹಾಗೂ ತ್ಯಾಗವನ್ನು ಸೂಚಿಸುತ್ತವೆ. ೧೯೬೬ ರಲ್ಲಿ ಶಿಲ್ಪಿ  'ಫೆಲಿಕ್ಸ್ ಡಿ ವೆಲ್ಡೊನ್' ಅವರಿಂದ ರಚಿತವಾದ ಈ ಶಿಲ್ಪವು ಬಹಳ ಮನೋಹರವಾಗಿದೆ.  ತುತ್ತ ತುದಿಯಲ್ಲಿರುವ ಯೋಧನ ಕೈಯಲ್ಲಿ  ಮಲೇಶ್ಯಾದ ಧ್ವಜವಿದೆ. ಇದನ್ನು ದಿನಾಲೂ ಬೆಳಗ್ಗೆ ಆರೋಹಣ ಮಾಡಿ, ಸಂಜೆ ಅವರೋಹಣ ಮಾಡುತ್ತಾರಂತೆ.    

'ಟುಗು ನೆಗರ'  ಪ್ರತಿಮೆಯನ್ನು, ಪ್ರಶಾಂತವಾದ ವಾತಾವರಣದಲ್ಲಿ, ಒಂದು ಕೊಳದ ಮಧ್ಯೆ ಸ್ಥಾಪಿಸಲಾಗಿದೆ. ಅಲ್ಲಿಯ ಫಲಕಗಳಗಲ್ಲಿ   ಹುತಾತ್ಮರ ಪಟ್ಟಿಯಲ್ಲಿ  'ಸಿಂಗ್' ಎಂದು ಕೊನೆಗೊಳ್ಳುವ ಪಂಜಾಬಿ ಯೋಧರ ಹೆಸರೂ ಇದ್ದುವು. ಬ್ರಿಟಿಷರು ಭಾರತದ ಸೇನೆಯನ್ನು ಅಲ್ಲಿ ಹೋರಾಡಲು ಆಯೋಜಿಸಿದ್ದರ ಫಲವಿದು. 




ನನಗೆ ಇಲ್ಲಿ ಇಷ್ಟವಾದ ವಿಚಾರವೇನೆಂದರೆ ಸೆಕ್ಯುರಿಟಿ ಹೆಸರಿನಲ್ಲಿ ಇಲ್ಲಿ ನಮ್ಮನ್ನು ಅಡಿಗಡಿಗೆ ತಡೆಯಲು ಯಾರೂ ಇರಲಿಲ್ಲ. ಫೋಟೊ ತೆಗೆಯಲು ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಕೆಲವು ಪ್ರವಾಸಿ ತಾಣಗಳಲ್ಲಿರುವಂತೆ ಕ್ಯಾಮೆರಾ ಚಾರ್ಜ್ ಕೊಡಬೇಕಾಗಿಲ್ಲ,  'ಇಲ್ಲಿ ಫೊಟೊ ತೆಗಯಬಾರದು' ಎಂಬ ಎಚ್ಚರಿಕೆಯ ಬರಹವಂತೂ ಇಲ್ಲವೇ ಇಲ್ಲ, ಬಲೂನ್ ಮಾರುವವರಾಗಲಿ, ವಿವಿಧ ತಿಂಡಿ- ತಿನಿಸು ಮಾರುವವರಾಗಲೀ , ಭಿಕ್ಷೆ ಬೇಡುವವರಾಗಲೀ - ಸುತ್ತಮುತ್ತ ಕಾಣಿಸಲೇ ಇಲ್ಲ. ಹಾಗಾಗಿ, ಈ  ಪರಿಸರವು ಶಾಂತವಾಗಿ, ಸ್ವಚ್ಛವಾಗಿ  ಇದೆ. 

ದೇಶ ಯಾವುದೇ ಇರಲಿ, ಅದರ ರಕ್ಷಣೆಗೆ  ಹೋರಾಡಿದವರೆಲ್ಲರೂ  ಚಿರಸ್ಮರಣೀಯರು. ಈ  ಸ್ಮಾರಕದ ಭವ್ಯತೆ ಹಾಗು ಸುತ್ತಲಿನ ಪ್ರಶಾಂತತೆ ಯನ್ನು  ನೋಡಿದಾಗ ಗೌರವ ತಾನಾಗಿ  ಉಕ್ಕುತ್ತದೆ. ಅಯಾಚಿತವಾಗಿ, ನನಗೆ ದೆಹಲಿಯಲ್ಲಿರುವ 'ಅಮರ ಜವಾನ್ ಜ್ಯೋತಿ' ನೆನಪಾಯಿತು.ನಮ್ಮ 'ಅಮರ ಜವಾನ್' ರಿಗೂ  ಇಂತಹುದೇ ಸ್ವಚ್ಚ, ಶಾಂತ ಪರಿಸರದಲ್ಲಿ ಸ್ಮಾರಕ ಇರಬೇಕಿತ್ತಲ್ಲವೆ? 

ದೆಹಲಿಯಲ್ಲಿ, 'ಅಮರ ಜವಾನ್ ' ಜ್ಯೋತಿಯನ್ನು ಅಚ್ಚುಕಟ್ಟಾಗಿ ಕಾಯುತ್ತಾರಾದರೂ, ಸುತ್ತಲಿನ ಪರಿಸರ ಒಂದು ಸಂತೆ.  ವಿವಿಧ ವಸ್ತುಗಳನ್ನು  ಮಾರುವವರ- ಕೊಳ್ಳುವವರ ಗಲಾಟೆಯೊಂದಿಗೆ, ಕಿಕ್ಕಿರಿದ ಜಾಗದಲ್ಲೂ  ಫೋಟೊ ಕ್ಲಿಕ್ಕಿಸಿ ಕಾಸು ಮಾಡುವವರ ಕಿರಿಕಿರಿಯಲ್ಲಿ  'ಅಮರ ಜವಾನ  ಜ್ಯೋತಿ' ಮಂಕಾಗಿ ಕಾಣಿಸುತ್ತದೆ!. ಇಲ್ಲಿಂದ ಒಮ್ಮೆ ಹೊರಟರೆ ಸಾಕು ಎನಿಸುತ್ತದೆ!

No comments:

Post a Comment