Total Pageviews

Sunday, April 10, 2011

ಎಂಜಾಯಿಂಗ್ ದ ವೆದರ್...ಬೀರೋತ್ಸವ!

ಮಾರ್ಚ್ ೨೯ ರಂದು, ಜರ್ಮನಿಯಲ್ಲಿರುವ ಹೆಡ್ ಅಫೀಸ್ ನಲ್ಲಿ,ನಮ್ಮ ಕಾರ್ಯಕ್ರಮ  ಸಂಜೆ ನಾಲ್ಕು ವರೆ ಗಂಟೆಗೆ ಮುಗಿದಿತ್ತು. ಆಲ್ಲಿನ ಸಹೋದ್ಯೋಗಿಗಳು ಈವತ್ತು ಹವೆ ತುಂಬಾ ಚೆನ್ನಾಗಿದೆ,ಹಾಗಾಗಿ ನಾವು ನಿಮ್ಮನ್ನು 'ಸೆಂಟರ್ ಒಫ್ ಮ್ಯೂನಿಕ್' ಗೆ ಕರೆದೊಯ್ಯುತ್ತೇವೆ, ಲೆಟ್ ಅಸ್ ಎಂಜಾಯ್ ದ ವೆದರ್ ಆಂಡ್ ಹಾವ್ ಡಿನ್ನರ್ ದೇರ್' ಅಂದರು.

ನಾನು ಗಮನಿಸಿದಂತೆ, ಇಲ್ಲಿನ ಜನರಿಗೆ ಹವೆಯ ಬಗ್ಗೆ ಮಾತನಾಡುವುದು ಹಾಗೂ  ವಿವಿಧ ಹವೆಗಳಲ್ಲಿ ವಿಭಿನ್ನ ರೀತಿಯಲ್ಲಿ ಖುಷಿ ಪಡುವುದೇ ಒಂದು ಹವ್ಯಾಸ. ಥರಗುಟ್ಟುವ ಚಳಿಯಲ್ಲಿ  ಹಿಮದಲ್ಲಿ ಆಡುವ ಸ್ಕೀಯಿಂಗ್  ಆಡುತ್ತಾರೆ, ಬೇಸಗೆಯಲ್ಲಿ ಸಾಧ್ಯವಾದಷ್ಟೂ ಬಿಸಿಲಿನಲ್ಲಿ ಕಾಲ ಕಳೆಯಲು ಹವಣಿಸುತ್ತಾರೆ.

ಆದರೆ ಎಲ್ಲಾ ಹವೆಯಲ್ಲೂ ನೀರಿಗಿಂತ ಹೆಚ್ಚು ಬೀರ್ ನ್ನೇ  ಕುಡಿಯುತ್ತಾರೆ. ಒಕ್ಟೋಬರ್  ತಿಂಗಳಲ್ಲಿ ನಡೆಯುವ ಬೀರ್ ಫೆಸ್ಟಿವಲ್ ನಲ್ಲಿ, ಲೀಟರ್ ಗಟ್ಟಲೆ ಬೀರ್ ಕುಡಿದವರೇ ಜಾಣರಂತೆ. ಒಂದಿಷ್ಟು ಬಿಸಿಲು ಬಿದ್ದರೆ  ಆರಾಮವಾಗಿ  ಹೊರಾಂಗಣದಲ್ಲಿ ಕುಳಿತು ಬೀರ್ ಹೀರುವುದೆಂದರೆ ಅವರಿಗೆ ಪಂಚಪ್ರಾಣ.  ಇದನ್ನು ಬೀರೋತ್ಸವ ಎನ್ನೋಣವೇ?





ಹವೆ ತುಂಬಾ ಚೆನ್ನಾಗಿದೆಯೆಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ರೈಲ್ ನ ಮೂಲಕ ಸೆಂಟರ್ ಆಫ್ ಮ್ಯೂನಿಕ್ ತಲಪಿದೆವು.  ಅಲ್ಲಿ ಕೆಲವು ಹಳೆಯ ಐತಿಹಾಸಿಕ ಕಟ್ಟಡಗಳು ಹಾಗೂ ಚರ್ಚುಗಳು ಇವೆ. ತರಕಾರಿ, ಹೂ-ಹಣ್ಣು ಇತ್ಯಾದಿ ಮಾರುವ ಅಂಗಡಿಗಳು, ಕೋಟ್ ಹಾಕಿಕೊಂಡು ಓಡಾಡುತ್ತಿರುವ ಜನ, ಬೀರ್ ಶಾಪ್ ಒಂದರ ಮುಂದೆ ಬಿಸಿಲಿನಲ್ಲಿ ಕುಳಿತು ಬೀರ್ ಹೀರುವ ಮಂದಿ, ಈಸ್ತರ್  ಹಬ್ಬದ ಸಿದ್ದತೆಗಾಗಿ ಹಬ್ಬಕ್ಕೆ ಬೇಕಾದ ಪರಿಕರಗಳು, ಹಬ್ಬಕ್ಕಾಗಿ  ಚಿತ್ತಾರ ಬರೆದ  ಮೊಟ್ಟೆಗಳ ಮಾರಾಟ,  .....ಎಲ್ಲವೂ ತುಂಬಾ ಚೆನ್ನಾಗಿದ್ದುವು.

ಮಾರ್ಗದ ಬದಿಯಲ್ಲಿ ಒಬ್ಬಾತ ಅದೇನೋ ತಬಲಾ ವನ್ನು ಹೊಲುವ ಡಬ್ಬಿಯೊಂದನ್ನು ಬಡಿಯುತ್ತಾ ಹಾಡುತ್ತಿದ್ದ. ಭಿಕ್ಷೆ ಬೇಡುವ ಇನ್ನೊಂದು ರೂಪ ಅಲ್ಲೂ ಇತ್ತು.  

ಒಟ್ಟಿನ ಮೇಲೆ, ಗಣೇಶ ಚತುರ್ಥಿ ಹಬ್ಬದ  ಮುನ್ನಾ ದಿನ ಮೈಸೂರಿನ ದೇವರಾಜ ಮಾರುಕಟ್ಟೆಗೆ ಹೋದರೆ ಕಾಣಸಿಗುವ ಹಬ್ಬದ ಕಳೆ ಹೊತ್ತ ವ್ಯಾಪಾರ.ಆದರೆ ಅಲ್ಲಿ ಎಲ್ಲವೂ ಸ್ವಚ್ಛ,ಅಚ್ಚುಕಟ್ಟು. ಗಲಾಟೆ ಗೊಂದಲವಿಲ್ಲ, ವಸ್ತುಗಳನ್ನು ಕೊಳ್ಳಿರೆಂದು  ಕಿರುಚುವ ಮಾರಾಟಗಾರರಿಲ್ಲ,  ದೊಡ್ಡದನಿಯಲ್ಲಿ ಚೌಕಾಸಿ ಮಾಡಿ ಕಿರಿಕಿರಿ ತರಿಸುವ ಗ್ರಾಹಕರೂ ಇಲ್ಲ.

 ಟುಲಿಪ್ ಹೂಗಳು 

ಸ್ವಲ್ಪ ಸುತ್ತಾಡಿ, ಹೋಟೆಲ್ ಒಂದರಲ್ಲಿ ಊಟ ಮಾಡಿ ಹಿಂತಿರುಗಿದೆವು. ಕೆಲವರು ಪರಸ್ಪರ ಶುಭರಾತ್ರಿ, ವಿದಾಯದ ಹಾರೈಕೆಗಳ ಜತೆಗೆ 'ವೆದರ್ ವಾಸ್ ಸೊ ಗುಡ್, ವಿ ಎಂಜಾಯೆಡ್, ವ್ ಹಾಡ್ ಗ್ರೇಟ್ ಟೈಮ್, ಸ್ಕೈ ಇಸ್ ಕ್ಲೀಯರ್‍, ವಿ ಕಾನ್ ಈವನ್ ಸಿ ಸ್ಟಾರ್‍ಸ್' ಇತ್ಯಾದಿ ಅನ್ನುತಿದ್ದರು. 

ಆಗ ಸುಮಾರು 8-10 ಡಿಗ್ರಿ ತಾಪಮಾನ ಇದ್ದಿರಬಹುದು. ನಿಜ ಹೇಳಬೇಕೆಂದರೆ, ಸ್ವೆಟರ್, ಕೋಟ್ , ಶೂ -ಹಾಕಿಕೊಂಡಿದ್ದರೂ ನನಗೆ ಚಳಿಯೆನಿಸಿತ್ತು. ಇದನ್ನು ಉತ್ತಮ ಹವೆ ಎನ್ನುವ ಪ್ರಶಂಸಿಸುವ ನೀವೆಲ್ಲಾ ನಮ್ಮ ಮೈಸೂರಿಗೆ ಬನ್ನಿ, ವರುಷವಿಡೀ ಅತ್ಯುತ್ತಮ ಹವೆಯಿರುತ್ತದೆ ಅನ್ನೋಣ ಎನಿಸಿತಾದರೂ ತೆಪ್ಪಗಿದ್ದೆ.

ಮೆಚ್ಚೆಬೇಕಾದ ವಿಷಯವೇನೆಂದರೆ, ಹವೆಯನ್ನು ಅನುಭವಿಸುವುದರಲ್ಲಿ ಅವರಿಗೆ ಅದೆಷ್ಟು ಸರಳ ಸಂತೃಪ್ತಿ! ನಮಗೆ ಧಾರಾಳವಾಗಿ ಹಾಗೂ  ಉಚಿತವಾಗಿ ಸಿಗುವ ಉತ್ತಮ ಹವೆಯನ್ನು  ಖಂಡಿತವಾಗಿಯೂ ಇಷ್ಟು ಸಂತೋಷದಿಂದ ಅನುಭವಿಸುವುದಿಲ್ಲ. ವಿ ಟೇಕ್  ವೆದರ್ ಫಾರ್‍ ಗ್ರಾಂಟೆಡ್!

ಹವೆಯನ್ನು ಎಂಜಾಯ್ ಮಾಡುವುದಿರಲಿ, ಮೈಸೂರಿನಲ್ಲಿ ದಿಸೆಂಬರ್ ನ 15-18 ಡಿಗ್ರಿ ತಾಪಮಾನ ನಮಗೆ ಅತಿ-ಚಳಿಯಾಗುತ್ತದೆ. 32 ಡಿಗ್ರಿ ತಾಪಮಾನ ಇರುವ ಈಗ, ಸೆಕೆಯನ್ನೂ, ಪದೇ ಪದೇ  ವಿದ್ಯುತ್ ಕಡಿತಗೊಳಿಸುವ  ವಿದ್ಯುತ್ ಮಂಡಳಿಯನ್ನೂ ಮನಸಾರೆ  ಶಪಿಸುತ್ತೇವೆ. ಮಳೆಗಾಲದಲ್ಲಿ, ಹಳ್ಳ ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ನೀರೂ ತುಂಬಿ ವಾಹನ ಚಲಾಯಿಸಲು ಸಾಧ್ಯವಾಗದ ಸಂಕಟಕ್ಕೆ ಮಳೆಯ ಜತೆ  ಸರಕಾರವನ್ನೂ, ಮಂತ್ರಿಗಳ ಕಾರ್ಯವೈಖರಿಯನ್ನೂ ಸೇರಿಸಿ ದೂರುತ್ತೇವೆ. ನಾವು ಹವೆಯನ್ನು ಅನುಭವಿಸುವ ಪರಿ ಇದು! .
  
ಇನ್ನು  ಮುಂದಾದರೂ ಹವೆಯನ್ನು ಎಂಜಾಯ್ ಮಾಡಲು ಶುರುಮಾಡಬೇಕು ಎಂದು ನಿರ್ಧರಿಸಿದೆ. 






No comments:

Post a Comment