Total Pageviews

Sunday, August 21, 2011

ಚಾಮುಂಡಿ ಬೆಟ್ಟದಲ್ಲಿ ಪಾಂಡವರ ಮೆಟ್ಟಿಲು ...


ಮೈಸೂರಿಗೆ ಬಂದು ಇಪ್ಪತ್ತು ವರುಷಗಳಾಯಿತು. ಇದುವರೆಗೆ ಚಾಮುಂಡಿ ಬೆಟ್ಟಕ್ಕೆ ಬಸ್ಸಿನಲ್ಲಿ, ಕಾರಿನಲ್ಲಿ ಎಷ್ಟೋ ಬಾರಿ ಹೋಗಿದ್ದೆ. ಆದರೆ ಬೆಟ್ಟವನ್ನು  ಇದುವರೆಗೆ  ಮೆಟ್ಟಿಲುಗಳ ಮೂಲಕ ಹತ್ತಿರಲಿಲ್ಲ.  ಅಂತೂ ಈವತ್ತು ಬೆಟ್ಟ ಹತ್ತಲು ಸಂದರ್ಭ ಒದಗಿ ಬಂತು. ಅದು ಹೇಗೆಂದರೆ, ನಮ್ಮ ಸಂಸ್ಥೆಯ  ಮುಖ್ಯ ಕಚೇರಿಯಿಂದ ಬಂದಿದ್ದ ಡಾ. ಮಾರ್‍ಟಿನ್ ಶಾವ್ಗ್ ಕೋಫ್ಲರ್ ಎಂಬವರು ಬೆಟ್ಟ ಹತ್ತುವ ಆಸಕ್ತಿ ತೋರಿಸಿದರು.

ಅವರಿಗೆ ಜತೆಯಾಗಿ ನಾವು ಕೆಲವರು ಬೆಟ್ಟ ಹತ್ತಲೆಂದು ಅಣಿಯಾದೆವು. ಆಸಕ್ತಿ ಇರುವವರೆಲ್ಲರೂ ಬೆಳಗ್ಗೆ ೬.೩೦  ಗಂಟೆಗೆ ಚಾಮುಂಡಿ  ಬೆಟ್ಟದ ಬುಡದಲ್ಲಿರುವ ಅಯ್ಯಪ್ಪ ಸ್ವಾಮಿಯ ಮಂದಿರದ ಬಳಿ ಸೇರಿ, ಅಲ್ಲಿಂದ ಮೆಟ್ಟಲು ಹತ್ತುವುದೆಂದು ನಿರ್ಧರಿಸಿದೆವು. ತಮಾಷೆಯೇನೆಂದರೆ ನಾ ಬರುವೆ,ತಾ ಬರುವೆ ಎಂದು ಉತ್ಸಾಹ ತೋರಿದ ಹಲವು ಸಹೋದ್ಯೋಗಿಗಳಲ್ಲಿ, ಬೆಟ್ಟ ಹತ್ತಲು ಬಂದವರು ಕೇವಲ ನಾಲ್ಕು ಮಂದಿ. ಹೀಗಾಗಿ, ಡಾ.ಮಾರ್ಟಿನ್, ಗಣೇಶ್, ರೇಖಾ ಹಾಗೂ ನಾನು ಬೆಟ್ಟ ಹತ್ತಲು ಆರಂಭಿಸಿದೆವು.


ನನ್ನನ್ನು ಬಿಟ್ಟು ಉಳಿದವರೆಲ್ಲರೂ ಚುರುಕಾಗಿ ಬೆಟ್ಟ ಹತ್ತುತಿದ್ದರು. ನನಗೆ ನೇರವಾದ ದಾರಿಯಲ್ಲಿ ನಡೆಯಲು ಕಷ್ಟವಾಗುವುದಿಲ್ಲ. ಆದರೆ ಮೆಟ್ಟಲು ಏರುವಾಗ ಸುಸ್ತಾಗುತಿತ್ತು. ಅವರ ವೇಗಕ್ಕೆ ನನ್ನ ನಿಧಾನಗತಿ ಹೊಂದುವುದಿಲ್ಲ ಎಂದು ನಾನಾಗಿಯೇ ಅವರುಗಳಿಗೆ ನೀವು ಮುಂದೆ ಹೋಗಿ, ನನಗೆ ಸಾಧ್ಯವಾದಷ್ಟು ಮೆಟ್ಟಲು ಹತ್ತುತ್ತೇನೆ, ನೀವು ವಾಪಸು ಬರುವಾಗ ಜತೆಯಾಗುತ್ತೇನೆ ಅಂದೆ.

ತಂಪಾದ ಹವೆಯಲ್ಲಿ, ಇಬ್ಬನಿಯಿಂದ ತೋಯ್ದ ಗಿಡಗಳನ್ನು ನೋಡುತ್ತ, ನಡುನಡುವೆ ಹಿಂತಿರುಗಿ, ಕೆಳಗೆ ಕಾಣಿಸುತಿದ್ದ ಮೈಸೂರು ನಗರವನ್ನು ನೋಡುತ್ತಾ, ಫೊಟೊ ಕ್ಲಿಕ್ಕಿಸುತ್ತಾ, ಪಕ್ಷಿಗಳ ಕೂಜನಕ್ಕೆ ಕಿವಿಗೊಡುತ್ತಾ ನಿಧಾನವೇ ಪ್ರಧಾನ ಎಂಬಂತೆ ಸಾಗಿತ್ತು ನನ್ನ ಚಾರಣ.

ಕೆಲವು ಮಂದಿ ಆಗಲೇ ಬೆಟ್ಟ ಹತ್ತಿ ಇಳಿಯುತ್ತಿದ್ದರು, ಇನ್ನು ಕೆಲವರು ಶತ್ರುಗಳು ಅಟ್ಟಿಸಿಕೊಂಡು ಬರುತ್ತಾರೋ ಎಂಬಂತೆ ಏದುಸಿರು ಬಿಟ್ಟುಕೊಂಡು ಕುದುರೆಯ ಗೊರಸಿನ ಶಬ್ದದ ಶೂ ಹಾಕಿಕೊಂಡು ದಾಪುಗಾಲಿಡುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಅರಿಷಿನ-ಕುಂಕುಮ ಹಚ್ಚಿ ಮೆಟ್ಟಲೇರುವವರು ಇನ್ನು ಕೆಲವರು. ದೇವಿಯ ಸಹಸ್ರನಾಮವನ್ನು ಬಾಯಲ್ಲಿ ಗುನುಗುತ್ತಾ ಅಥವಾ ಮೊಬೈಲ್ ಫೋನ್ ಮೂಲಕ ಕೇಳುತ್ತಾ ಹತ್ತುವವರು ಇನ್ನು ಕೆಲವರು. ಜಾಗಿಂಗ್ ಡ್ರೆಸ್ ಧರಿಸಿ ಜಿದ್ದಿಗೆ ಬಿದ್ದವರಂತೆ ಓಡುವವರು ಹಲವರು. ಮೊಬೈಲ್ ಫೋನ್ ನ ಹಾಡಿಗೆ ದನಿಗೂಡಿಸುತ್ತಾ ಮೆಟ್ಟಿಲು ಹತ್ತುವವರೂ ಇದ್ದರು.

ಇಂತಹ ಸಹ ಚಾರಣಿಗರ ಮಧ್ಯೆ ಹೆಗಲಿಗೊಂದು ಬ್ಯಾಗ್ ತಗಲಿಸಿಕೊಂಡು, ಸೋತ ಮುಖದಿಂದ, ಅತ್ತಿಂದಿತ್ತ ನೋಡುತ್ತಾ ಮೆಟ್ಟಿಲೇರುತ್ತಿದ್ದ ನಾನು ಇತರರಿಗಿಂತ ಭಿನ್ನವಾಗಿ ಕಂಡಿದ್ದರೆ ಆಶ್ಚರ್ಯವೇನಿಲ್ಲ. ಸುಮಾರು ೪೦೦ ಮೆಟ್ಟಲು ಹತ್ತಿರಬಹುದು. ಅಲ್ಲೊಂದು ಕಡೆ ಕಲ್ಲಿನಲ್ಲಿ ಕೆತ್ತಿದ 'ಪಾಂಡವರ ಮೆಟ್ಟಿಲು' ಎಂಬುದು ಗಮನ ಸೆಳೆಯಿತು. ಅದನ್ನು ನೋಡುತ್ತಾ ಇದ್ದೆ. ಅಷ್ಟರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನನ್ನನ್ನು ಉದ್ದೇಶಿಸಿ " ನೀವು ಹತ್ತುವುದು  ಈ ವರ್ಷ, ಇಳಿಯುವುದು ಮುಂದಿನ ವರ್ಷ" ಅಂದರು!

ಅಪರಿಚಿತರ ಈ ಮಾತು ಒಂದು ಕ್ಷಣಕ್ಕೆ ತಬ್ಬಿಬ್ಬು ಹಾಗು ಮುಜುಗರ ಉಂಟು ಮಾಡಿತು. ಒಂದು ವೇಳೆ ನಾನು ಅವರ ಅಭಿಪ್ರಾಯಕ್ಕೆ ತಕ್ಕಂತೆ ಇದ್ದರೂ, ಅದರಿಂದ ಇತರರಿಗೆ ಯಾರಿಗೂ ತೊಂದರೆಯಿಲ್ಲವಷ್ಟೆ ? ಆತ ಅಧಿಕ ಪ್ರಸಂಗಿ, ನಕಾರಾತ್ಮಕ ವ್ಯಕ್ತಿ (ನ.ವ್ಯ) -ಎಂದು ಮನಸ್ಸಲ್ಲೇ ಬೈದುಕೊಂಡೆ. ನಾನು ಸಾಮಾನ್ಯವಾಗಿ ಈ ತರದ ನ.ವ್ಯ ಜನರ ಮಾತುಗಳಿಗೆ ಪ್ರತಿಕ್ರಿಯಿಸಲು ಹೋಗಿ ನನ್ನ ಮನಸ್ಸು ಕೆಡಿಸುವುದಿಲ್ಲ. 

ನನ್ನ ಪಾಡಿಗೆ ಪಾಂಡವರ ಮೆಟ್ಟಿಲಿನ ಮೇಲೆ  ಬಿದ್ದಿದ್ದ ಒಣಗಿದ ಎಲೆಗಳನ್ನು ಸ್ವಲ್ಪ ಸರಿಸಿ, ಪೋಟೊ ಕ್ಲಿಕ್ಕಿಸಿದೆ. ಪಕ್ಕದಲ್ಲಿಯೇ ಬಂಡೆಗೊರಗಿ  ಕುಳಿತುಕೊಂಡೆ. ಸುಸ್ತಾದಾಗ ಕುಳಿತುಕೊಳ್ಳಲು ಪಾಂಡವರ ಮೆಟ್ಟಲಾದರೇನು, ಕೌರವರ ಮೆಟ್ಟಿಲಾದರೇನು ಎಂಬಂತೆ.

ಆ ವ್ಯಕ್ತಿ ತುಸು ಗೌರವದಿಂದ ' ಫಸ್ಟ್ ಟೈಮ್ ಬರುತ್ತಿದ್ದೀರ?' ಎಂದು ಕೇಳಿದರು. ಆದಕ್ಕೆ ಉತ್ತರವಾಗಿ ಗಂಭೀರವಾಗಿ ತಲೆದೂಗಿದೆ. ಆತ ಮೆಟ್ಟಿಲಿಳಿಯುತ್ತಾ ೨-೩ ಬಾರಿ ಹಿಂತಿರುಗಿ ನನ್ನನ್ನು ನೋಡಿದರು. ನನ್ನ ಗೆಟಪ್ ನೋಡಿ ಪುರಾತತ್ವ ಇಲಾಖೆಯ  ಸಿಬ್ಬಂದಿ ಎಂದೋ ಅಥವಾ ಕನ್ನಡ ಅರ್ಥವಾಗದ ಪರಭಾಷಿಕಳೋ ಅಥವಾ ಮಾತು ಬಾರದ ಮೂಕಿಯೋ ಎಂದು ತಿಳಕೊಂಡಿರಬೇಕು ಆತ. ಏನೇ ಇದ್ದರೂ ನನಗೆ ಅದು ನಗಣ್ಯವಾಗಿತ್ತು.

ಸುಮಾರು ೭೦೦ ಮೆಟ್ಟಿಲುಗಳನ್ನು ಕ್ರಮಿಸಿದಾಗ ನಂದಿಯ ಏಕಶಿಲಾ ವಿಗ್ರಹ ಸಿಗುತ್ತದೆ. ಅಂತೂ ಬೆಟ್ಟದ ತುದಿಗೆ ತೀರ ಸನಿಹ ತಲಪಲು ನಾನು ತೆಗೆದುಕೊಂಡ ಸಮಯ ೧-೧೫ ಗಂಟೆ. ಇನ್ನೇನು ಕೇವಲ ೧೦೦ ಮೆಟ್ಟಿಲುಗಳು ಬಾಕಿ ಇರುವಷ್ಟರಲ್ಲಿ ನನ್ನ ಸಹೋದ್ಯೋಗಿಗಳು ಹಿಂತಿರುಗಿ ಬರುತ್ತಿದ್ದರು.


"ಇಷ್ಟು ದೂರ ಬಂದಿದ್ದೀರ, ಇನ್ನು ಕೇವಲ ೧೦೦ ಮೆಟ್ಟಿಲುಗಳು ಬಾಕಿ ಇವೆಯಷ್ಟೆ, ಹೋಗಿ ಬನ್ನಿ, ನಾವು ಇಲ್ಲೇ ಇರುತ್ತೇವೆ" ಅಂದರು. ನಾನೇ ಬೇಡವೆಂದೆ, ಇನ್ನೊಮ್ಮೆ ಬಂದರಾಯಿತು, ಆಗಾಗ್ಗೆ ಬಂದರೆ ಉತ್ತಮ ವ್ಯಾಯಾಮವಾಗುವುದು ಎಂದೆ. ಹಾಗೆಯೇ   ಅಪರಿಚಿತ ನ.ವ್ಯ ನನ್ನ ಚಾರಣದ ಬಗ್ಗೆ ನೀಡಿದ ಅಭಿಪ್ರಾಯವನ್ನು ಹೇಳಿ ಮನಸಾರೆ ನಕ್ಕೆವು. ಇನ್ನು ಮುಂದೆ ವರುಷಕ್ಕೆ ಕೆಲವು ಬಾರಿಯಾದರೂ ಬೆಟ್ಟ ಹತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ವ್ಯಾಯಾಮವೂ ಆಗುತ್ತದೆ, ನ.ವ್ಯ ಜನರ ಮಾತನ್ನು ಚಾಲೆಂಜ್ ಮಾಡಿದ ಹೆಮ್ಮೆಯೂ ನನ್ನದಾಗುತ್ತದೆ ಎಂದು ನಿರ್ಧರಿಸಿದೆ!     

ಡಾ.ಮಾರ್‍ಟಿನ್ ಅವರಿಗೆ ತುಂಬಾ ಖುಷಿಯಾಗಿತ್ತು. 'ವೆರಿ ಗುಡ್ ಎಕ್ಸ್ ಪಿರಿಯೆನ್ಸ್' ಎಂದರು. ವಾಸ್ತವವಾಗಿ ನಮಗೆ ಸಂಕೋಚವಾಗುತಿತ್ತು. ನಿಜವಾಗಿಯೂ ಚಾಮುಂಡಿ ಬೆಟ್ಟ ಸುಂದರವಾಗಿದೆ. ಮೈಸೂರಿನ ಹವೆಯೂ ಅನುಕೂಲಕರವಾಗಿದೆ. ಆದರೆ, ವಿದೇಶಗಳ ಪ್ರವಾಸಿತಾಣಗಳಲ್ಲಿ ಎದ್ದು ಕಾಣುವ ಶಿಸ್ತು, ಶುಚಿತ್ವ ನಮ್ಮಲ್ಲಿ ಇಲ್ಲವೇ ಇಲ್ಲ.  ಮೆಟ್ಟಿಲುಗಳ ಇಕ್ಕೆಲಗಳಲ್ಲೂ  ವಿವಿಧ ಪ್ಲಾಸ್ಟಿಕ್ ಕವರ್ ಗಳು, ತಿಂಡಿ ಪೊಟ್ಟಣಗಳು  ಬಿದ್ದಿದ್ದುವು. ಅಲ್ಲಲ್ಲಿ ಇದ್ದ ಕೆಲವು ಶಿಲಾಮಂಟಪಗಳಲ್ಲಿ ಅಸಂಬದ್ಧ ಬರಹಗಳಿದ್ದುವು.

ತರಗುಟ್ಟುವ ಚಳಿಯಲ್ಲಿ ಸೂಟ್-ಬೂಟ್ ಹಾಕಿಕೊಂಡು ಜರ್ಮನಿಯ 'ಆಂಡೆಕ್ಸ್' ಬೆಟ್ಟ ಏರಿದ್ದೆ. ನಮ್ಮ ಚಾಮುಂಡಿ ಬೆಟ್ಟದ ಮುಂದೆ ಅದು 'ಬಚ್ಚಾ'. ನಮ್ಮಲ್ಲಿ ಹಲವಾರು ಉತ್ತಮವಾದ ಪ್ರವಾಸಿ ತಾಣಗಳಿದ್ದರೂ, ಉತ್ತಮ ಹವೆಯಿದ್ದರೂ,  ಅಶುಚಿತ್ವ, ಅಶಿಸ್ತು ಹಾಗೂ ಕಳಪೆ ನಿರ್ವಹಣೆ  ನಮ್ಮನ್ನು  ತಲೆತಗ್ಗಿಸುವಂತೆ ಮಾಡುತ್ತವೆ.  


No comments:

Post a Comment