Total Pageviews

Saturday, September 24, 2011

ಚಾರಣಕ್ಕೊಂದು ಕಾರಣ....ಎಡಕಲ್ ಕೇವ್ಸ್ ...ಸೂಚಿಪಾರ ಫಾಲ್ಸ್....



ಸೆಪ್ಟೆಂಬರ್ ೧೮  ಭಾನುವಾರದಂದು  ಯೂಥ್ ಹಾಸ್ಟೆಲ್ ಅಸೋಸಿಯೇಶನ್ ಮೈಸೂರಿನವರು ವೈನಾಡಿನ ’ಎಡಕ್ಕಲ್ ಕೇವ್ಸ್’ ಮತ್ತು ಸಮೀಪದ ’ಸೂಚಿಪಾರ ಫಾಲ್ಸ್’ ಗೆ ಚಾರಣ/ಪ್ರವಾಸ ಏರ್ಪಡಿಸುವವರೆಂದು ಗೊತ್ತಾಯಿತು. ನನಗೆ ತಕ್ಷಣ ನೆನಪಾದದ್ದು  ’ಎಡಕಲ್ಲು ಗುಡ್ಡದ ಮೇಲೆ’ ಸಿನೆಮಾದಲ್ಲಿ ಬರುವ ಪ್ರಕೃತಿ ವೈಭವ ಹಾಗೂ ವಿರಹಾ...ವಿರಹಾ..ನೂರು ನೂರು ತರಹಾ.. ಹಾಡು. ಸರಿ, ಚಾರಣಕ್ಕೊಂದು ಕಾರಣ ಸಿಕ್ಕಿತು, ಗೆಳತಿ ರೇಖಾ ಹಾಗೂ ನಾನು ಹೆಸರು ನೊಂದಾಯಿಸಿಯೂ ಆಯಿತು.

ಮೈಸೂರಿನಿಂದ ಸುಮಾರು ೫೦ ಜನರನ್ನು ಹೊತ್ತಿದ್ದ ಬಸ್ ಗುಂಡ್ಲುಪೇಟೆ, ಸುಲ್ತಾನ್ ಬತ್ತೇರಿ ಮಾರ್ಗವಾಗಿ ವೈನಾಡ್ ತಲಪಿತು. ಹಚ್ಚ ಹಸಿರು ಕಾಡು, ಕಾಫಿ ತೋಟ, ಚಹಾ ತೋಟಗಳ ಮಧ್ಯೆ ಸಾಗುವ ಈ  ಮಾರ್ಗದಲ್ಲಿ ಪ್ರಯಾಣಿಸುವಾಗ ತುಂಬಾ ಹಿತವೆನಿಸುತ್ತದೆ. ಸಾಮಾನ್ಯವಾಗಿ ಬಸ್ ಪ್ರಯಾಣ ನನಗೆ ಒಗ್ಗುವುದಿಲ್ಲ. ವಾಂತಿ-ತಲೆಸುತ್ತು ಬಾರದಂತೆ ಮುಂಜಾಗರೂಕತೆಯಿಂದ  ಮಾತ್ರೆ ನುಂಗಿ, ಆಮೇಲೆ ಅದರ ಪ್ರಭಾವಕ್ಕೆ ಪ್ರಯಾಣದುದ್ದಕ್ಕೂ ತೂಕಡಿಸುವ ನಾನೇ ಬಿಟ್ಟ ಕಣ್ಣುಗಳಿಂದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದೆ. ಇನ್ನು ಕವಿಪುಂಗವರು, ಸಾಹಿತಿಗಳು  ಕವಿತೆ ಬರೆದರೆ ಆಶ್ಚರ್ಯವೇನು?      

ಹೀಗೆ ಮುಂದುವರಿದ ನಮ್ಮ ಪ್ರಯಾಣ ವೈನಾಡಿನ ’ಅಂಬುಕುಟ್ಟಿಮಲೆ’ವರೆಗೆ ಸಾಗಿತು. ಅಲ್ಲಿಂದ ಸುಮಾರು ೨ ಕಿ.ಮಿ ದೂರವನ್ನು ನಡೆದು ಬೆಟ್ಟ ಏರಬೇಕು. ಈ ಮಾರ್ಗ ಕೆಲವು ಕಡೆ ಎತ್ತರವಾಗಿದೆ, ಇನ್ನು ಕೆಲವೆಡೆ ಇಳಿಜಾರಾಗಿದೆ, ಕೆಲವೆಡೆ ಮೆಟ್ಟಿಲುಗಳಿವೆ, ಒಂದೆರೆಡು ಕಡೆ ಚಪ್ಪಡಿಕಲ್ಲುಗಳಿವೆ. ಕಾಲಿಟ್ಟರೆ ಜಾರುವಂತಿದ್ದುವು. ಒಟ್ಟಿನ ಮೇಲೆ ಬಹಳ ಜಾಗರೂಕತೆಯಿಂದ ಹತ್ತಬೇಕು/ಇಳಿಯಬೇಕು.

ಯಥಾ ಪ್ರಕಾರ ಅರ್ಧ ಬೆಟ್ಟ ಹತ್ತುವಷ್ಟರಲ್ಲಿ ನನಗೆ ಸುಸ್ತು ಶುರುವಾಯಿತು. ಸ್ವಲ್ಪ ನಿಧಾನವಾಗಿ ಗುರಿ ಮುಟ್ಟಿದೆ. ಸಹಚಾರಣಿಗ ರಘುನಾಥ್ ಅವರು ಆಧಾರಕ್ಕಿರಲಿ ಎಂದು ಒಂದು ಕೋನ್ನು  ಹುಡುಕಿ ಕೊಟ್ಟರು. ಊರುಗೋಲು ಉಪಯೋಗಿಸುವ ವಯಸ್ಸು ನನ್ನದಲ್ಲವಾದರೂ ಅದರಿಂದ ಸಹಾಯವಾಯಿತು. ಅಂತೂ ಬೆಟ್ಟ ಹತ್ತಿ ಸುತ್ತ ಮುತ್ತಲಿನ ದೃಶ್ಯಗಳನ್ನು   ನೋಡಿದಾಗ ಶ್ರಮ ಸಾರ್ಥಕ ಎನಿಸಿತು. ಎಲ್ಲೆಡೆಯೂ  ಅದ್ಭುತವಾದ ಪ್ರಕೃತಿ ಸೌಂದರ್ಯ ತುಂಬಿತ್ತು. 
  

ಅಲ್ಲಿಂದ ಕೆಲವು ಮೆಟ್ಟಿಲು ಕೆಳಗೆ ಇಳಿದಾಗ ಮೊದಲ ಗುಹೆ ಸಿಗುತ್ತದೆ. ಗುಹೆಯ ಒಳಗೆ ತುಂಬಾ ತಂಪಿತ್ತು. ಒಂದೆಡೆ ಸ್ವಚ್ಛ ತಿಳಿ ನೀರಿನ ಝರಿಯಿತ್ತು.


ಕೆಲವರು ನೀರನ್ನು ತಮ್ಮ ಬಾಟಲಿಗೆ ತುಂಬಿಸಿಕೊಂಡರು. ಈ ನಿಸರ್ಗದತ್ತ ಸಿಹಿನೀರಿನ ಮುಂದೆ ಬಗೆ ಬಗೆ ಹೆಸರಿನ ನವನವೀನ  ಶುದ್ಧ ನೀರಿನ ಮಾದರಿಗಳನ್ನು ನಿವಾಳಿಸಿ ಒಗೆಯಬಹುದು.  

ಕೆಲವು ಹೆಜ್ಜೆ  ಮುಂದೆ ಇನ್ನೊಂದು ಗುಹೆಯಿತ್ತು.ಎರಡು ಬೃಹದಾಕಾರದ  ಬಂಡೆಗಳ ಮೆಲೆ ಇನ್ನೊಂದು  ದೈತ್ಯಾಕಾರದ ಬಂಡೆ ಕುಳಿತಂತೆ ಕಾಣುತಿತ್ತು. ಅದು ನಮ್ಮ ತಲೆ ಮೇಲೆ ಯಾವುದೆ ಕ್ಷಣದಲ್ಲಿ ಬೀಳಬಹುದು ಎಂಬಂತೆ ಭಾಸವಾಗುತ್ತದೆ. ಇದರಿಂದಾಗಿ ಗುಹೆಗೆ  ಎಡಕ್ಕಲ್ ಎಂಬ ಹೆಸರು ಬಂತು. ಯಾಕೆಂದರೆ  ಮಲಯಾಳ ಭಾಷೆಯಲ್ಲಿ ಎಡಕ್ಕಲ್ ಅಂದರೆ ’ಮಧ್ಯದ ಕಲ್ಲು’ ಎಂದರ್ಥ.


ಆದರೆ ಈ ಗುಹೆಗಳಿಗೆ ಕ್ರಿ.ಪೂ ೫೦೦೦ ಕ್ಕೂ ಹಿಂದಿನ  ಇತಿಹಾಸವಿದೆ. ಗುಹೆಯ ಕಲ್ಲುಗಳಲ್ಲಿ ಕಾಣುವ ಚಿತ್ರ-ರೇಖೆಗಳನ್ನು ಶಿಲಾಯುಗದ  ಮಾನವನ ಬರಹ ಎಂದು ನಂಬಲಾಗಿದೆ. ಕ್ರಿ.ಶ ೧೮೯೦ ರಲ್ಲಿ ಅಂದಿನ ಮಲಬಾರ್ ಪ್ರಾಂತ್ಯದ   ಪೋಲಿಸ್ ಅಧಿಕಾರಿ ’ಫಾರೆಡ್  ಫಾಸೆಟ್’ ಈ ಗುಹೆಗಳ ಅಸ್ತಿತ್ವವನ್ನು ಗುರುತಿಸಿ ಹೊರಜಗತ್ತಿಗೆ ತಿಳಿಯಪಡಿಸಿದನಂತೆ. 

ಸಿನೆಮಾದಲ್ಲಿ ನಾನು ಕಂಡ ಗುಹೆಗೂ ಈ ಗುಹೆಗೂ ಬಹಳ ಅಂತರವಿತ್ತು. ಬಹುಶ: ಬೇರೆಲ್ಲೋ ಚಿತ್ರೀಕರಣ ಮಾಡಿರಬೇಕು ಇಲ್ಲವೇ ಕ್ಯಾಮೆರಾದ ಕೈಚಳಕವಿದ್ದಿರಬೇಕು. ಆದರೆ ಒಟ್ಟಾರೆಯಾಗಿ ಈ ಚಾಣ ಬಹಳ ಉತ್ತಮವಾಗಿತ್ತು.

ಇನ್ನೊಂದು ನಾನು ಗಮನಿಸಿದ ಅಂಶವೇನೆಂದರೆ, ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸುವ ಶಿಸ್ತು. ಬೆಟ್ಟದ ಮೇಲೆ ಯಾವುದೇ ಪ್ಲಾಸ್ಟಿಕ್ ಪದಾರ್ಥವನ್ನು ಎಸೆಯುವಂತಿಲ್ಲ. ಕುಡಿಯುವ ನೀರಿನ ಬಾಟಲಿಯನ್ನು ಒಯ್ಯುವುದಿದ್ದರೂ, ಅದಕ್ಕೆ ೨೦ ರೂ ತೆತ್ತು, ಒಂದು ಗುರುತಿನ ಸ್ಟಾಂಪ್ ಹಚ್ಚಿಸಿಕೊಳ್ಳಬೇಕು. ಹಿಂತಿರುಗಿ ಬರುವಾಗ  ಬಾಟಲಿಯನ್ನು ತೋರಿಸಿ ೨೦ ರೂ. ಪಡೆದುಕೊಳ್ಳಬೇಕು.

ದಾರಿಯುದ್ದಕ್ಕೂ ಸಿಗುವ ಚಿಕ್ಕ-ಪುಟ್ಟ ಅಂಗಡಿಗಳಲ್ಲಿ ಉಪ್ಪಿನಲ್ಲಿ ನೆನೆಸಿದ ನೆಲ್ಲಿಕಾಯಿ, ಮಾವಿನಕಾಯಿ, ಜೇನಿನಲ್ಲಿ ನೆನೆಸಿದ ನೆಲ್ಲಿಕಾಯಿ ಇತ್ಯಾದಿ ಮಾರಾಟಕ್ಕೆ ಲಭ್ಯವಿತ್ತು. ಅವುಗಳನ್ನು ಕಾಫಿ ಗಿಡದ ಎಲೆಯಲ್ಲಿ ಕೊಡುತ್ತಿದ್ದರು. ನಗರದ ಅಂಗಡಿಗಳಲ್ಲಿ ಸರಮಾಲೆಯಂತೆ ಕಾಣಿಸುವ  ವಿವಿಧ ಕುರುಕಲು ತಿಂಡಿಗಳ ಪ್ಯಾಕೆಟ್ ಗಳು ಹಾಗೂ ಅವನ್ನು ತಿಂದು ಅಲ್ಲಿಲ್ಲಿ ಎಸೆದ ಖಾಲಿ ಪ್ಲಾಸ್ಟಿಕ್ ಕವರ್ ಗಳು ಕಾಣಿಸಲಿಲ್ಲ. 

ಎಡಕ್ಕಲ್ ಗುಹೆಗಳನ್ನು ನೋಡಿಯಾದ ಮೇಲೆ ನಮ್ಮ ಮುಂದಿನ ಪಯಣ ’ಸೂಚಿಪಾರ  ಫಾಲ್ಸ್'ಕಡೆಗೆ. ಇದು ವೈನಾಡಿನ ಮೆಪ್ಪಾಡಿ ಎಂಬ ಊರಿನ ಸನಿಹದಲ್ಲಿದೆ. ಸುಮಾರು ಅರ್ಧ ಘಂಟೆ ಕಲ್ಲು ಚಪ್ಪಡಿ ಹಾಕಿದ ರಸ್ತೆಯಲ್ಲಿ ನಡೆದು, ಕೆಲವು ಕಡೆ ಮೆಟ್ಟಿಲುಗಳನ್ನು ಏರಿ, ಇನ್ನು ಕೆಲವೆಡೆ ಮೆಟ್ಟಿಲಿಳಿದಾಗ ಕೊನೆಯಲ್ಲಿ ಸೂಚಿಪಾರ ಫಾಲ್ಸ್ ನ ದರ್ಶನವಾಗುತ್ತದೆ

ಸುಮಾರು ೨೦೦ ಅಡಿ ಎತ್ತರದಿಂದ ಧುಮುಕುವ ಜಲರಾಶಿ ತುಂಬಾ ಸೊಗಸಾಗಿದೆ. ಸೂಚಿ ಎಂದರೆ ಮಲಯಾಳ ಭಾಷೆಯಲ್ಲಿ ಸೂಜಿ. ಬಹುಶ: ಬಂಡೆ ಕಲ್ಲುಗಳ ಮಧ್ಯೆ ನೇರವಾಗಿ ಸೂಜಿಯಂತೆ ಹರಿಯುವ ಕಾರಣ ಈ ಹೆಸರು ಬಂದಿರಬಹುದು.


ಅಷ್ಟರಲ್ಲಿ ಸಂಜೆಯಾಗುತ್ತಿತ್ತು. ಸುಮಾರು  ರಾತ್ರಿ ೧೧ ಗಂಟೆಗೆ  ಮೈಸೂರಿಗೆ ವಾಪಾಸ್ಸಾಗುವಷ್ಟರಲ್ಲಿ  ಸಂಡೇ ಈಸ್ ಓವರ್! ಇನ್ನೊಮ್ಮೆ  ವೈನಾಡ್ ನಲ್ಲಿ ಕನಿಷ್ಟ ಒಂದು ದಿನವಾದರೂ ತಂಗುವ ಕಾರ್ಯಕ್ರಮ ಇರಲಿ ಎಂದು ಆಶಿಸುವೆ.        
           
     
    

1 comment: