Total Pageviews

Sunday, December 11, 2011

ನೀರಿನಿಂದ ಮೇಲೆದ್ದ ವೇಣುಗೋಪಾಲಸ್ವಾಮಿ....

ಮೈಸೂರಿನ ಯಾವುದೇ  ರಸ್ತೆಯಲ್ಲಿ ನಿಂತು ಯಾವುದೇ ಕಡೆಗೆ ಪ್ರಯಾಣ ಮಾಡಿದರೂ ಯಾವುದಾದರೊಂದು ಪ್ರೇಕ್ಷಣೀಯ ಸ್ಠಳ ಅಥವಾ ಚಾರಿತ್ರಿಕ ಸ್ಮಾರಕ ತಲಪುತ್ತೇವೆ. ಇದು ನಮ್ಮ ಮೈಸೂರಿನ ಹಿರಿಮೆ!

ಕಳೆದ ಭಾನುವಾರ ಮೈಸೂರಿನಿಂದ  ಸುಮಾರು ೨೫  ಕಿ.ಮೀ  ದೂರದಲ್ಲಿರುವ ಹೊಸ ಕನ್ನಂಬಾಡಿಗೆ  ಹೋಗಿದ್ದೆವು. ಕೃಷ್ಣರಾಜಸಾಗರ ಅಣೆಕಟ್ಟು  ಕಟ್ಟುವ ಸಂದರ್ಭದಲ್ಲಿ, ಕಾವೇರಿ ನದಿಯ ಹಿನ್ನೀರಿನಲ್ಲಿ ಮುಳುಗಡೆಯಾದ ಹಲವಾರು ಹಳ್ಳಿಗಳಲ್ಲಿ ಕನ್ನಂಬಾಡಿಯೂ ಒಂದು.

ಅಲ್ಲಿದ್ದ, ೧೨ ನೆಯ ಶತಮಾನದಲ್ಲಿ ಕಟ್ಟಿದ್ದ ವೇಣುಗೋಪಾಲಸ್ವಾಮಿಯ ದೇವಸ್ಥಾನವೂ ಮುಳುಗಡೆಯಾಗಿತ್ತು. ೨೦೦೨ರಲ್ಲಿ, ಅಣೆಕಟ್ಟಿಗೆ ನೀರಿನ ಒಳಹರಿವು ತೀರ ಕ್ಷೀಣವಾಗಿದ್ದಾಗ, ಈ ದೇವಸ್ಥಾನವು ಪುನ: ಕಾಣಿಸಿಕೊಂಡು ಆಸಕ್ತರನ್ನು ಸೆಳೆದಿತ್ತು.

ಮೈಸೂರಿನಿಂದ ಕೃಷ್ಣರಾಜಸಾಗರ  ಕಡೆಗೆ ಹೋಗುವ ದಾರಿಯಲ್ಲಿ, ಬೃಂದಾವನ ಗಾರ್ಡನ್ ಟೋಲ್ ಗೇಟ್  ಮೂಲಕ ಸ್ವಲ್ಪ ದೂರ ಸಾಗಿ, ಬಸ್ತಿಹಳ್ಳಿ  ಎಂಬ ಪುಟ್ಟ ಊರು ದಾಟಿ, ಹಚ್ಚ ಹಸುರಿನ ಗದ್ದೆಗಳ ನಡುವೆ ಪ್ರಯಾಣಿಸಿದಾಗ, ಹೊಸ ಕನ್ನಂಬಾಡಿ ಹಳ್ಳಿಯಲ್ಲಿ, ನಿರ್ಮಾಣದ ಹಂತದಲ್ಲಿರುವ ಜಲಾಂತರ್ಗತ  ವೇಣುಗೋಪಾಲಸ್ವಾಮಿಯ ದೇವಸ್ಥಾನ ಗೋಚರಿಸುತ್ತದೆ.

ಮೂರು ಕಡೆಯಲ್ಲೂ ಸುತ್ತುವರಿದ ಹಿನ್ನೀರು, ಒಂದು ಕಡೆಗೆ ರಸ್ತೆ, ಸ್ವಚ್ಛಂದವಾಗಿ ಹಾರುವ  ಹಕ್ಕಿಗಳು, ದೂರದಲ್ಲಿ ಪುಟ್ಟ  ದ್ವೀಪಗಳಂತೆ ಕಾಣಿಸುವ ನಡುಗುಡ್ಡೆಗಳು......ಎಲ್ಲವೂ ಮನಸ್ಸಿಗೆ ಮುದ  ಕೊಡುತ್ತವೆ.  ಸುಮಾರು ೭೦ ವರುಷಗಳಷ್ಟು ಕಾಲ ನೀರಲ್ಲಿ  ಮುಳುಗಿದ್ದ ದೇವಸ್ಥಾನವನ್ನು, ನೀರಿನಿಂದ ಮೇಲೆತ್ತಿ, ಮೂಲರೂಪಕ್ಕೆ ಧಕ್ಕೆ ಬಾರದಂತೆ ಅನುಕ್ರಮವಾಗಿ ಜೋಡಿಸಿ, ಪುನರ್ನಿಮಾಣ ಮಾಡುವ ಕಾರ್ಯ ಈಗ ನಡೆಯುತ್ತಿದೆ. ಉದ್ಯಮಿ  ಶ್ರೀ ಹರಿ ಖೋಡೆಯವರು ಇದರ ರೂವಾರಿ.

ನಿರ್ಮಾಣದ ಹಂತದಲ್ಲಿರುವ ಈ ದೇವಸ್ಥಾನದಲ್ಲಿ ಈಗ ವಿಶಾಲವಾದ ಪ್ರಾಂಗಣ, ಹಳೆಗನ್ನಡದಲ್ಲಿರುವ ಶಾಸನಗಳು, ಗರ್ಭಗುಡಿ, ಇನ್ನೂ ಕೆಲವು ದೇವರುಗಳ ಪುಟ್ಟ ಗುಡಿಗಳು ಇವೆ. ಗರ್ಭಗುಡಿಯಲ್ಲಿ ದೇವರ ಪ್ರತಿಷ್ಠಾಪನೆಯಾಗಿಲ್ಲ, ಒಂದು ನಂದಾದೀಪ ಉರಿಯುತ್ತಿತ್ತು.

ಈಗ ಅಲ್ಲಿ ನಗರದ ಗಲಾಟೆ-ಮಾಲಿನ್ಯ ಇಲ್ಲ. ಅಂಗಡಿ -ಹೋಟೆಲ್ ಗಳು ಇಲ್ಲ. ದೇವರ ಪ್ರತಿಷ್ಠಾಪನೆಯಾದ ನಂತರ ಭಕ್ತರ ಪ್ರವಾಹ ಬರಬಹುದು. ಸದ್ಯಕ್ಕೆ ನಿಸರ್ಗ ಪ್ರಿಯರಿಗೆ ಇಷ್ಟವಾಗಬಹುದಾದ ತಾಣ.  ಭಾನುವಾರದ ಪಿಕ್ನಿಕ್ ಹೋಗಬಯಸುವುದಾದರೆ , ಊಟ-ತಿಂಡಿ-ನೀರಿಗೆ ತಮ್ಮದೇ  ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು.


2 comments:

  1. ಥಾಂಕ್ಸ್.ತಮ್ಮ ಬ್ಲಾಗನ್ನೂ ನೋಡಿದೆ.ವೈಚಾರಿಕ ಬರಹದ ಶೈಲಿ ಇಷ್ಟವಾಯಿತು.

    ReplyDelete