Total Pageviews

Monday, September 3, 2012

ಮಾಲೇಕಲ್ ಬೆಟ್ಟದ ಮ್ಯಾಲೆ..


ಜುಲೈ ೧೫ ರಂದು, ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ ಅರಸೀಕೆರೆಯಲ್ಲಿರುವ 'ಮಾಲೇಕಲ್ ಬೆಟ್ಟಕ್ಕೆ' ಚಾರಣ ಕಾರ್ಯಕ್ರಮವವಿತ್ತು .  ಮಾಲೇಕಲ್ ಬೆಟ್ಟವು   ಮೈಸೂರಿನಿಂದ ೧೧೫ ಕಿ.ಮೀ. ದೂರದಲ್ಲಿದೆ. ಸುಮಾರು ೨೦ ಜನರಿದ್ದ ನಮ್ಮ ತಂಡವು ಬೆಳಗ್ಗೆ ೬ ಗಂಟೆಗೆ ಮೈಸೂರಿನಿಂದ ಒಂದು ಮಿನಿಬಸ್ ನಲ್ಲಿ ಹೊರಟು ಕೆ.ಆರ್ ಪೇಟೆ ಮಾರ್ಗವಾಗಿ ಅರಸೀಕೆರೆ ತಲಪಿತು. ಮಾರ್ಗ ಮಧ್ಯದಲ್ಲಿ ಕೆ.ಆರ್.ಪೇಟೆಯಲ್ಲಿ ಬೆಳಗಿನ ಉಪಾಹಾರ ಮುಗಿಸಿ ಅರಸೀಕೆರೆಯ ಕಡೆಗೆ ಪ್ರಯಾಣ ಬೆಳೆಸಿದೆವು. ದಾರಿಯುದ್ದಕ್ಕೂ ಆಲೂಗಡ್ಡೆ ಬೆಳೆದ ಹೊಲಗಳು ಬಿಳಿ ಹೂ ಬಿಟ್ಟು ಕಂಗೊಳಿಸುತ್ತಿದ್ದುವು. ಇದುವರೆಗೆ ಆಲೂಗಡ್ಡೆಯ ಬಗೆಬಗೆಯ ಊಟ ಸವಿದಿದ್ದ ನನಗೆ, ಆಲೂ ಹೊಲದ ನೋಟವೂ ಎಷ್ಟೊಂದು ಚೆನ್ನ ಅನಿಸಿತು.

ಸುಮಾರು ಹತ್ತು ಗಂಟೆಗೆ ಮಾಲೇಕಲ್ ಬೆಟ್ಟದ ಬುಡ ತಲಿಪಿದೆವು. ಅಲ್ಲಿ ನಮ್ಮನ್ನು ಅರಸೀಕೆರೆಯ ಮಿತ್ರರು ಸ್ವಾಗತಿಸಿದರು.  ಪರಸ್ಪರ ಪರಿಚಯದ ನಂತರ ಬೆಟ್ಟ ಹತ್ತಲು ಆರಂಭಿಸಿದೆವು.    

ಮಾಲೇಕಲ್ ಬೆಟ್ಟದ ಮೇಲೆ ಲಕ್ಷ್ಮೀ ವೆಂಹಟರಮಣ ಸ್ವಾಮಿಯ ದೇಗುಲವಿದೆ.ಬೆಟ್ಟದ ಮೇಲೆ ಹಾಗೂ ಕೆಳಗೆ ಇರುವ ಈ ದೇವಾಲಯಗಳು ತಿರುಮಲೆ-ತಿರುಪತಿಯನ್ನು ಹೋಲುವುದರಿಂದ ಇಲ್ಲಿಗೆ ಚಿಕ್ಕ-ತಿರುಪತಿ ಎಂಬ ಹೆಸರೂ ಇದೆ. ಈ ದೇವಾಲಯವನ್ನು ತಲಪಲು ಸುಮಾರು ೧೩೦೦ ಮೆಟ್ಟಲುಗಳನ್ನು ಹತ್ತಬೇಕು. ಅಲ್ಲಲ್ಲಿ ಬಂಡೆಗಳ ಮೇಲೆ ಹುಟ್ಟಿ ಬೆಳೆದು ಸೃಷ್ಟಿಯ ಸೋಜಿಗ ಮೆರೆದ ಗಿಡಗಳು ಲೆಕ್ಕವಿಲ್ಲದಷ್ಟು.

ಸ್ಥಳ ಪುರಾಣದ ಪ್ರಕಾರ, ಅಂದಿನ ಪಾಳೆಯಗಾರರೊಬ್ಬರಿಗೆ ವೆಂಕಟರಮಣ ಸ್ವಾಮಿಯು ಕನಸಿನಲ್ಲಿ ಕಾಣಿಸಿಕೊಂಡು, ಮೂಲ ತಿರುಪತಿಯು ದೂರವಿದ್ದು ನಿನಗೆ ಬರಲಾಗದ ಕಾರಣ ನಾನೇ ನಿನ್ನ ಬಳಿಗೆ ಬಂದಿದ್ದೇನೆ, ಬೆಟ್ಟದ ಮೇಲೆ ತುಳಸೀಹಾರ ಇರುವಲ್ಲಿ ಗುಡಿ ಕಟ್ಟು ಎಂದು ಆದೇಶಿಸಿದನಂತೆ.   ಹೀಗೆ ತುಳಸಿಮಾಲೆಯಿಂದಾಗಿ ಮಾಲೇಕಲ್ ಎಂಬ ಹೆಸರು ಬಂತು. ದೇವಾಲಯವನ್ನು  ಸುಮಾರು ೮೦೦ ವರುಷಗಳ ಹಿಂದೆ ಕಟ್ಟಲಾಯಿತಂತೆ. ಬೆಟ್ಟದ ಕೆಳಗೆ ಇರುವ ದೇವಸ್ಥಾನದಲ್ಲಿ, ವರುಷಕ್ಕೆ ಒಂದು ಬಾರಿ ರಥೋತ್ಸವವನ್ನು ಭಕ್ತಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸೌತಕಾಯಿ, ಕಿತ್ತಳೆ ಹಣ್ಣುಗಳನ್ನು ತಿನ್ನುತ್ತಾ, ಆಗಾಗ್ಗೆ  ಹಿಂತಿರುಗಿ ನೋಡಿ ದೂರದಲ್ಲಿ ಕಾಣಿಸುವ ಅರಸಿಯ ಕೆರೆಯನ್ನು ಕಣ್ತುಂಬಿಸುತ್ತಾ, ನಿಧಾನವೇ ಪ್ರಧಾನ ಎಂಬಂತೆ ಮೆಟ್ಟಿಲುಗಳನ್ನು ಹತ್ತಿದವರು ಕೆಲವರು. ಉತ್ಸಾಹದಿಂದ ಬೇಗನೆ ಬೆಟ್ಟದ ತುದಿ ತಲಪಿ, ಸಾಹಸಕ್ಕೆ ಇನ್ನೇನಾದರೂ ಅವಕಾಶವಿದೆಯೇ ಎಂದು ಹುಡುಕಿದವರು ಇನ್ನೂ ಕೆಲವರು. ಬೆಟ್ಟದ ಮೇಲೆ ಒಂದು ಬಂಡೆಗೆ ಒಂದೇ ಮೊಳೆ ಮೇಲೆ ಆಧರಿಸಿ ನಿಂತಂತೆ ಭಾಸವಾಗುತ್ತಿದ್ದ ಕಬ್ಬಿಣದ ಏಣಿಯೊಂದಿದೆ. ಧೈರ್ಯಯುಳ್ಳವರು ಅದನ್ನು ಏರಿ ತಮ್ಮ ಸರ್ಕಸ್ ಪ್ರಾವೀಣ್ಯತೆ ಮೆರೆದರು.









ಎಲ್ಲರೂ ಬೆಟ್ಟವೇರಿದ ಮೇಲೆ ಪೂಜೆಮಾಡಿ ಪ್ರಸಾದ ಸ್ವೀಕರಿಸಿದೆವು. ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ  ಶ್ರೀ ವೈದ್ಯನಾಥನ್ ಹಾಗೂ ಶ್ರೀಮತಿ ಗೋಪಮ್ಮನವರು ಸಾಂದರ್ಭಿಕ, ಜಾನಪದ  ಹಾಡುಗಳನ್ನು ಹಾಡಿ ರಂಜಿಸಿದರು. ಆಮೇಲೆ ಬೆಟ್ಟ  ಇಳಿದು, ಲಕ್ಶ್ಮೀವೆಂಕಟರಮಣ ಸ್ವಾಮಿಯ ದರ್ಶನ  ಮಾಡಿದೆವು. ಅರಸೀಕೆರೆಯ ಮಿತ್ರರು ಭೋಜನದ ವ್ಯವಸ್ಥೆಯನ್ನು ಹೊತ್ತಿದ್ದರು. ಬೆಟ್ಟ ಹತ್ತಿ- ಇಳಿದ ಆಯಾಸದ, ಮಧ್ಯಾಹ್ನ ೩ ಗಂಟೆಯೂ ಆಗಿತ್ತು. ಬಾಳೆ ಎಲೆಯಲ್ಲಿ ಕೋಸಂಬರಿ, ಪಲ್ಯ, ಪೊಂಗಲ್, ಪುಳಿಯೋಗರೆ, ಅನ್ನ, ಹುಳಿ,ತಿಳಿಸಾರು, ಬಜ್ಜಿ ಮೇಳೈಸಿದ ರುಚಿಕಟ್ಟಾದ ಊಟ, ಮೇಲಾಗಿ ಅರಸೀಕೆರೆಯ ಮಿತ್ರರ ಆದರದ ಅತಿಥಿ ಸತ್ಕಾರ. ಇನ್ನು ಕೇಳಬೇಕೆ! ಎಲ್ಲರೂ 'ಮಾಯಾ ಬಜಾರ್ 'ನ ಘಟೋತ್ಕಚನಂತೆ ಉಂಡೆವು!


ಆಲ್ಲಿಂದ ಹೊರಟು ಬರುವಾಗ ದಾರಿಯಲ್ಲಿ ಸಿಗುವ ಪುರಾತನ ಚಂದ್ರಮೌಳೇಶ್ವರ ದೇವಸ್ಥಾನಕ್ಕೂ ಭೇಟಿ ಕೊಟ್ಟೆವು. ಪ್ರಸ್ತುತ ಪ್ರಾಚ್ಯ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನ ಚೊಕ್ಕವಾಗಿದೆ. ಹೊಯ್ಸಳರ ಹಾಗೂ ಚೋಳರ ಕಾಲದ ವಾಸ್ತುಶಿಲ್ಪ ಇಲ್ಲಿ ಮೆರೆದಿವೆ. ಕಲ್ಲಿನ ನೃತ್ಯಮಂಟಪ ಈಗಲೂ ಸೊಗಸಾಗಿದೆ. ದೇವಾಲಯದ ಗೋಡೆಯಲ್ಲಿ ಕೆತ್ತಿರುವ ಪುಟ್ಟ-ಪುಟ್ಟ ಮೂರ್ತಿಗಳಲ್ಲಿ ಕೆಲವು ವಿರೂಪಗೊಂಡಿವೆ. ಆವರಣದಲ್ಲಿರುವ ಬಿಲ್ವ, ಬನ್ನಿ, ಅರಳಿ ಮರಗಳ ಕಟ್ಟೆಗಳು ವಿಶಿಷ್ಟ ಶೋಭೆ ನೀಡಿವೆ.


                                                                       
       
ಮುಂದೆ ಮೈಸೂರಿಗೆ ಬರುವಾಗ ಬಹುಶ: ಬೇರೆ ದಾರಿಯಿರಬೇಕು, ಕತ್ತಲೂ ಆಗುತಿತ್ತು, ದಾರಿಯುದ್ದಕ್ಕೂ ಅಲ್ಲಲ್ಲಿ ರಸ್ತೆತಡೆಗಳು ಸಿಗುತ್ತಿದ್ದವು. ಬಸ್ ನಲ್ಲಿ   ಮುಂದೆ ಕುಳಿತಿದ್ದ ವೈದ್ಯನಾಥನ್ ಪ್ರತೀ ರಸ್ತೆತಡೆ ಎದುರಾಗುವಾಗಲೂ  'ಹಂಪಾಸುರ' ಎಂದು ಎಲ್ಲರನ್ನು ಎಚ್ಚರಿಸುತ್ತಿದ್ದರು. ಹಂಪಾಸುರನನ್ನು ನೆನೆಯುತ್ತಾ ಮೈಸೂರು ತಲಪಿದ ನಮೆಗೆಲ್ಲರಿಗೂ ಭಾನುವಾರವನ್ನು ಸಂಪನ್ನಗೊಳಿಸಿದ ಅನುಭವ.




2 comments: