Total Pageviews

Sunday, March 24, 2013

ಮಂಜಾದ ಮಂಜರಾಬಾದ್ಸ್ವರಕ್ಷಣೆಗಾಗಿ ಹಿಂದಿನ ರಾಜರುಗಳು ಕಂಡುಕೊಂಡ ಉಪಾಯಗಳು ಹಲವಾರು. ತಮ್ಮ ವಾಸಸ್ಥಾನ ಸುಲಭವಾಗಿ ಶತ್ರುಗಳ ಕಣ್ಣಿಗೆ ಕಾಣಸಿಗಬಾರದು,  ಹಾಗೂ ಎಲ್ಲಾ ದಿಕ್ಕಿನಿಂದಲೂ  ಮುತ್ತಿಗೆ ಹಾಕಬಹುದಾದ ವೈರಿ ಸೈನ್ಯದ ಸುಳಿವು ಮುಂಚಿತವಾಗಿ ತಮಗೆ ತಿಳಿಯಬೇಕು. ತಾನು ಮತ್ತು ತನ್ನ ಪ್ರಜೆಗಳು ಕ್ಷೇಮವಾಗಿರಬೇಕು. ಇಂತಹ ಉದ್ದೇಶದಿಂದ ಬಹಳ ಚಾಕಚಕ್ಯತೆಯಿಂದ ಕಟ್ಟಲ್ಪಟ್ಟ ಕೋಟೆಗಳು ನೂರಾರು. ಟಿಪ್ಪು ಸುಲ್ತಾನನ ಕಾಲದಲ್ಲಿ, ಕಟ್ಟಲಾದ  ಮಂಜರಾಬಾದ್ಎಂಬ ಹೆಸರಿನ ಕೋಟೆಯೂ ಅವುಗಳಲ್ಲಿ ಒಂದು. ಈ ಕೋಟೆಯು ಈಗಿನ ಸಕಲೇಶಪುರದ ಸಮೀಪದಲ್ಲಿರುವ ದೋಣಿಗಲ್ ಎಂಬಲ್ಲಿದೆ.  

ಮುಖ್ಯರಸ್ತೆಯಿಂದ ನೋಡುವಾಗ ಪಕ್ಕದಲ್ಲಿ ಭವ್ಯವಾದ ಕೋಟೆ ಇರುವುದರ ಸುಳಿವು ಕೂಡ ಸಿಗುವುದಿಲ್ಲ. ಸರಿಯಾದ ನಾಮಫಲಕವೂ ಇಲ್ಲ. ರಸ್ತೆಯಿಂದ ಸುಮಾರು ೩೦೦ ಮೆಟ್ಟಿಲುಗಳನ್ನು ಹತ್ತಿ ಬಂದಾಗ ಕೋಟೆಯ ಮುಖ್ಯದ್ವಾರ ಸಿಗುತ್ತದೆ. ಅಷ್ಟ ಕೋನಾಕಾರದ ಈ ಕೋಟೆಯನ್ನು   ಮೇಲಿನಿಂದ ವೀಕ್ಷಿಸಿದರೆ,ನಕ್ಷತ್ರವೊಂದು ಉರುಳಿ ಬಿದ್ದಂತೆ ಕಾಣಿಸುತ್ತದೆ. ಕೋಟೆಯ ಒಳಗೆ ಅಚ್ಚುಕಟ್ಟಾದ ಮೆಟ್ಟಿಲುಗಳಿರುವ ಕಲ್ಯಾಣಿ ಕೊಳವಿದೆ. ಈಗ ನೀರು ಬತ್ತಿ ಹೋಗಿದೆ. ಬಹುಶ: ಆಗಿನ ಕಾಲದಲ್ಲಿ  ಇದ್ದಿರಬಹುದು. ಕೋಟೆಯಲ್ಲಿ ಎರಡು ಸುರಂಗ ಮಾರ್ಗಗಳಿದ್ದು, ಇವುಗಳಲ್ಲಿ ಒಂದು ಮೈಸೂರಿಗೂ ಇನ್ನೊಂದು ಶ್ರೀರಂಗಪಟ್ಟಣಕ್ಕೂ ತಲಪಿಸುತ್ತದೆಯಂತೆ. ಕೆಲವು ವರ್ಷಗಳ ಹಿಂದೆ ಕುತೂಹಲದಿಂದ ಸುರಂಗಕ್ಕೆ ಇಳಿದವರು ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಈಗ ಸುರಂಗ ಮಾರ್ಗಗಳನ್ನು ಮುಚ್ಚಲಾಗಿದೆ. 

                                                                  
ಕೋಟೆಯಲ್ಲಿ , ಪ್ರತಿ ಅಷ್ಟಕೋನಾಕಾರದ ರಚನೆಯಲ್ಲೂ, ಕಲ್ಲಿನಲ್ಲಿ ಕೆತ್ತಿದ  ಸೈನಿಕರ ಕಾವಲು ಗೋಪುರಗಳಿವೆ. ಈ ಕಾವಲು ಗೊಪರದ ಮೂಲಕ, ದೂರದಲ್ಲಿ ಬರುವ ಜನರನ್ನು ಕಾಣಬಹುದು, ಪಶ್ಚಿಮ ಘಟ್ಟ ಪರ್ವತ ಶ್ರೇಣಿಯೂ ಕಾಣಿಸುತ್ತದೆ. ಕೋಟೆಯಲ್ಲಿ ಕೆಲವು ಕೋಣೆಯ ತರದ ರಚನೆಗಳಿವೆ. ಬಹುಶ: ಇವು ಸೈನಿಕರ ವಾಸ್ಥವ್ಯ ಕೋಣೆ, ಕುದುರೆಲಾಯ, ಶಸ್ತ್ರಾಸ್ತ್ರ ಇಡುತ್ತಿದ್ದ ಕೋಣೆ...ಇತ್ಯಾದಿ ಆಗಿದ್ದಿರಬಹುದೆಂದು ಊಹಿಸಿಕೊಳ್ಳಬಹುದು.  


ಮಂಗಳೂರು, ಬೆಂಗಳೂರು, ಮೈಸೂರು ಕಡೆಯಿಂದ ಬರಬಹುದಾದ ಬ್ರಿಟಿಷರ ಕೈಗೆ ಸಿಕ್ಕದಂತೆ ಹಾಗೂ ದೂರದಿಂದ ಬರುವ ಶತ್ರುಗಳನ್ನು ಎತ್ತರದ ಕೋಟೆಯಿಂದ ಗಮನಿಸುವ ಸಲುವಾಗಿ, ಟಿಪ್ಪು ಸುಲ್ತಾನನು ಕ್ರಿ.ಶ. ೧೭೮೫-೧೭೯೨ ರ ಅವಧಿಯಲ್ಲಿ, ಈ ಕೋಟೆಯನ್ನು ಕಟ್ಟಿಸಿದನಂತೆ. ಅಷ್ಟೊಂದು ಯೋಜನಾಬದ್ಧವಾಗಿ ಕಟ್ಟಿದ್ದ ಸುಭದ್ರ ಕೋಟೆಯು ಟಿಪ್ಪು ಸುಲ್ತಾನನಿಗೆ ತಂಪಾಗಿ, ಮಂಜು ಕವಿದಿದ್ದಂತೆ ಕಾಣಿಸಿತಂತೆ. ಹಾಗಾಗಿ 'ಮಂಜರಾಬಾದ್' ಎಂದು ಹೆಸರಿಟ್ಟನಂತೆ. 

ಆದರೆ, ನನಗೆ ಬೇರೆಯೇ  ಕಾರಣಕ್ಕೆ ಮಂಜಾದ ಮಂಜರಾಬಾದ್ ಅನಿಸಿತು! ಕೋಟೆಯ ಕೆಲವು ಭಾಗಗಳು ಕಾಲನ ಹೊಡೆತಕ್ಕೆ ಅಥವಾ ಬ್ರಿಟಿಷರ ಕೈಗೆ ಸಿಕ್ಕಿ  ಭಗ್ನಗೊಂಡಿವೆ. ಇನ್ನು ಕೆಲವು, ಈಗಿನ 'ಚರಿತ್ರಾಕಾರರ' ವಿಕೃತಿಗೆ ಬಲಿಯಾಗಿವೆ!  ಎಲ್ಲೋ ಓದಿದ ನೆನಪು, "ನಾವು ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿಂದ ನೆನಪುಗಳನ್ನು ಮಾತ್ರ ಒಯ್ಯಬೇಕು, ಅದರೆ ನಾವು ಹೋಗಿದ್ದಕ್ಕೆ ಯಾವುದೇ ಕುರುಹು ಉಳಿಸಬಾರದು". ಈ ಭವ್ಯ ಕೋಟೆಯು ಮೈಸೂರ್‍ಇನ ಹುಲಿ ಟಿಪ್ಪು ಸುಲ್ತಾನ್ ಕಟ್ಟಿಸಿದನೆಂಬುದಕ್ಕೆ ಅಲ್ಲಿ ಯಾವುದೇ ಪುರಾವೆ ಇರಲಿಲ್ಲ. ಆದರೆ ಅಸಂಬದ್ಧ ಬರಹದ ಚಾಳಿಯುಳ್ಳ ಸಹಸ್ರಾರು ಜನರು ಬಂದಿದ್ದರು ಎಂಬುದಕ್ಕೆ ಧಾರಾಳ ಸಾಕ್ಷಿಗಳನ್ನು ನೋಡಿ ಬೇಸರವಾಯಿತು.

ವೈ.ಎಚ್.ಎ.ಐ ಮೈಸೂರು  ಘಟಕದಿಂದ ಅಯೊಜಿಸಲಾಗಿದ್ದ ಈ ಕಾರ್ಯಕ್ರಮ್ದಲ್ಲಿ ಸುಮಾರು ೨೦ ಮಂದಿ ಪಾಲ್ಗೊಂಡಿದ್ದೆವು. 
 .  


3 comments:

  1. ಮೊದಲ ಫೋಟೋ ತುಂಬಾ ಆಕರ್ಷಿಸಿತು. ಹೋಗಬೇಕು.

    ReplyDelete
  2. ಮಂಜರಾಬಾದ್ ಕೋಟೆಯ ಬಗ್ಗೆ ಆ ಭಾಗದ ಗೆಳೆಯರಿಂದ ತಿಳಿದಿದ್ದೇ. ಈಗ ಹೆಚ್ಚಿನ ಮಾಹಿತಿಯು ನಿಮ್ಮ ಬರಹ ಮತ್ತು ಚಿತ್ರಗಳಿಂದ ತಿಳಿಯಿತು.
    http://badari-poems.blogspot.in/

    ReplyDelete