Total Pageviews

Sunday, June 30, 2013

ಕುಂತಿಬೆಟ್ಟವೂ ' ಮದರ್ಸ್ ಡೇ' ಯೂ ..

ಅಮ್ಮಂದಿರಿಗೆ ಶುಭಾಶಯ ಹೇಳಲು ಅಮೇರಿಕಾದಲ್ಲಿ  ೧೯೦೮ರಲ್ಲಿ ಆರಂಭವಾದ 'ಮದರ್ಸ್ ಡೇ' ಎಂಬ ಪರಿಕಲ್ಪನೆ ಈಗ ವಿಶ್ವವ್ಯಾಪಿಯಾಗಿದೆ. ಆದರೆ, ಈ ಪರಿಕಲ್ಪನೆ ಮಹಾಭಾರತದ ಕಾಲದಲ್ಲೂ ಇತ್ತೆ? ಯಾಕೆಂದರೆ, ದಂತಕಥೆಯ ಪ್ರಕಾರ ಪಾಂಡವರು ತಮ್ಮ ಅಜ್ನಾತವಾಸದ ಕೆಲವು ದಿನಗಳನ್ನು  ಪಾಂಡವಪುರದಲ್ಲಿ ಕಳೆದಿದ್ದರಂತೆ. ತಮ್ಮ ತಾಯಿಯ ಮೇಲಿನ ಪ್ರೀತಿಯಿಂದ ಈ ಬೆಟ್ಟಕ್ಕೆ 'ಕುಂತಿಬೆಟ್ಟ' ವೆಂದು ಹೆಸರಿಟ್ಟರಂತೆ. ಹಾಗಾದರೆ ಮಹಾಭಾರತ ಕಾಲದಲ್ಲಿಯೇ 'ಮದರ್ಸ್ ಡೇ' ಆರಂಭಿಸಿದ ಹೆಗ್ಗಳಿಕೆ, ಪಾಂಡವರಿಗೆ ಸಲ್ಲಬೇಕಲ್ಲವೆ? 

ದಂತಕಥೆಯ ಪ್ರಕಾರ ಇದೇ ಊರಲ್ಲಿ, ಭೀಮನು ಬಕಾಸುರನನ್ನು ಸಂಹರಿಸಿದ್ದನಂತೆ. ಬ್ರಿಟಿಷರ ಎದುರು ಹೋರಾಡುತ್ತಿದ್ದ ಟಿಪ್ಪು ಸುಲ್ತಾನ್ ನಿಗೆ  ಸಹಾಯ ಮಾಡುವ ಉದ್ದೇಶದಿಂದ ಫ್ರೆಂಚ್ ಸೈನಿಕರು ಇಲ್ಲಿ ಬೀಡು ಬಿಟ್ಟಿದ್ದ ಕಾರಣ ಬ್ರಿಟಿಷರು ಕುಂತಿಬೆಟ್ಟವನ್ನು 'ಫ್ರೆಂಚ್   ರಾಕ್ಸ್' ಎಂದು ಕರೆದರು.     

ಕುಂತಿಬೆಟ್ಟಕ್ಕೆ ಹೋಗಲೆಂದು ಮೈಸೂರಿನಿಂದ ಸುಮಾರು ೨೫ ಮಂದಿ  ಬೆಳಗ್ಗೆ ಬಸ್ ನಲ್ಲಿ ಹೊರಟು ಪಾಂಡವಪುರ ತಲಪಿದೆವು. ಬಸ್ ನಿಲ್ದಾಣದಿಂದ ೪ ಕಿ.ಮಿ. ದೂರದಲ್ಲಿರುವ ಕುಂತಿಬೆಟ್ಟದ ಪಾದದ ವರೆಗೆ ಕಾಲುದಾರಿಯಲ್ಲಿ ನಡೆದೆವು. ಬೆಟ್ಟದ ಪಾದದಲ್ಲಿ ಸ್ಥಳೀಯ ಶಾಲಾ ಕ್ರೀಡಾಂಗಣ ಇದೆ.ಅಲ್ಲಿ ಬೆಳಗಿನ ಉಪಾಹಾರವಾಗಿ  ಉಪ್ಪಿಟ್ಟು-ಮೈಸೂರು ಪಾಕ್ , ಟೀ ಸೇವಿಸಿದೆವು. ಪರಸ್ಪರ ಪರಿಚಯ ಕಾರ್ಯಕ್ರಮದ ನಂತರ ಸುಮಾರು ೧೦೦ ಮೆಟ್ಟಿಲುಗಳನ್ನೇರಿದೆವು. 

ಅಲ್ಲಿ ಒಂದು ಪುಟ್ಟ ಗುಡಿಯಿದೆ, ಕೊಳವಿದೆ, ಬಂಡೆಯಲ್ಲಿ ಕೆತ್ತಿದ  ಗಣೇಶನ ಮೂರ್ತಿಯಿದೆ. ಆಮೇಲೆ ಸ್ವಲ್ಪ ಕಾಲುದಾರಿಯಲ್ಲಿ, ಹಸಿರಿನ ನಡುವೆ ನಡೆದೆವು. ಮುಂದೆ ಹೋದಂತೆ ಹಲವಾರು ಸಣ್ಣ-ದೊಡ್ಡ-ಬೃಹತ್ ಬಂಡೆಗಳದ್ದೇ ಸಾಮ್ರಾಜ್ಯ. ಎಲ್ಲರೂ ನಿಧಾನವಾಗಿ ಬೆಟ್ಟ ಹತ್ತಿದೆವು,ಕೆಲವು ಕಡೆ ಕಾಲು ಜಾರಿ ಬೀಳುವಂತಾಗುತ್ತಿತ್ತು. ಕೆಲವರು ಸಹಾಯ ಹಸ್ತವನ್ನಿತ್ತರು. ಸುಮಾರು ೧೧.೩೦ ಘಂಟೆಗೆ ಬೆಟ್ಟದ ತುದಿ ತಲಪಿದೆವು. ಇಲ್ಲಿಂದ ಕಾಣುವ ಪ್ರಾಕೃತಿಕ ದೃಶ್ಯ ಮನೋಹರ. ಬೀಸುವ  ತಂಗಾಳಿ ಆಯಾಸ ಪರಿಹರಿಸಿತ್ತು. ಬೆಟ್ಟದ ತುದಿಯಲ್ಲಿ ಒಂದು ಕಲ್ಲಿನ ಕಂಭವಿದೆ. ತಂಡದ ಕೆಲವು ಉತ್ಸಾಹಿಗಳು ಕಂಭವನ್ನೇರಿದರು. 






ಸ್ವಲ್ಪ ಹೊತ್ತು ಅಲ್ಲಿ ವಿರಮಿಸಿ ಬೆಟ್ಟ ಇಳಿಯತೊಡಗಿದೆವು . ಬೆಟ್ಟ ಹತ್ತುವುದಕ್ಕಿಂತ, ಇಳಿಯುವುದು ಸವಾಲಾಗಿತ್ತು. ಕಾರ್ಯಕ್ರಮದ ಆಯೋಜಕರ ನೇತೃತ್ವದಲ್ಲಿ 'ರಾಕ್ ಕ್ಲೈಂಬಿಂಗ್'  ನಡೆಯಿತು. ಅಲ್ಲಲ್ಲಿ ಎದುರಾದ ಸಣ್ಣ-ಪುಟ್ಟ ಬಂಡೆಗಳನ್ನು ನಿರಾಯಾಸವಾಗಿ ಹತ್ತಿ-ಇಳಿದೆವು. ಆದರೆ ಒಂದು ಕಡೆ ಸುಮಾರು ೮ ಅಡಿ ಆಳಕ್ಕೆ ನಾವು ಇಳಿಯಬೇಕಿತ್ತು. ಕೆಲವು ಜಾಣರು  ಹಗ್ಗದ ಸಹಾಯವಿಲ್ಲದೆಯೇ ಇಳಿದರು. ಇನ್ನು ಕೆಲವರು ಹಗ್ಗದ ಸಹಾಯದಿಂದ, ಆಯೋಜಕರ ಪ್ರೋತ್ಸಾಹದಿಂದ 'ಟಾಸ್ಕ್' ಪೂರೈಸಿದರು. ತಂಡದಲ್ಲಿದ್ದ ಕೆಲವು ಮಕ್ಕಳು ಈ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. 






















ಇನ್ನು ಮುಂದೆ ನಡೆದಾಗ ಎದುರಾದದ್ದು ದೊಡ್ಡದಾದ ಸ್ವಾಭಾವಿಕ ಜಾರುಬಂಡೆ. ಬಹಳಷ್ಟು ಜನ ವಯೋಬೇಧ  ಮರೆತು ಜಾರುಬಂಡಯಲ್ಲಿ ಜಾರಿದರು.  ಅಷ್ಟರಲ್ಲಿ ಮಧ್ಯಾಹ್ನವಾಗಿತ್ತು. 






ಸರಳವಾಗಿ ಒಂದು ದಿನದ ಪ್ರಕೃತಿಯ ಒಡನಾಟದಲ್ಲಿ ಕಳೆಯಲು ಕುಂತಿಬೆಟ್ಟ ಉತ್ತಮ ತಾಣ. ಅಲ್ಲಿ ಊಟ -ತಿಂಡಿ-ನೀರು  ಒದಗಿಸುವ ಹೋಟೆಲ್ ಇಲ್ಲದಿರುವುದರಿಂದ ನಮ್ಮದೇ  ಏರ್ಪಾಡು  ಮಾಡಿಕೊಳ್ಳಬೇಕು ಅಥವಾ ಹತ್ತಿರದ ಪಾಂಡವಪುರಕ್ಕೆ ಹೋಗಬೇಕು. ಊಟ ಮುಗಿಸಿ, ಅಂದಿನ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದೆವು. 

3 comments:

  1. ಬದುಕಿನಲ್ಲಿ ಒಮ್ಮೆಯಾದರೂ ನಾನು 'ರಾಕ್ ಕ್ಲೈಂಬಿಂಗ್' ಮಾಡಿಯೇ ತೀರಬೇಕು ಮೇಡಂ!

    http://badari-poems.blogspot.in/

    ReplyDelete