Total Pageviews

Friday, October 25, 2013

ಪ್ರಕೃತಿ ನಡಿಗೆ...ಸಾತ್ವಿಕ ಅಡುಗೆ....

೨೯ ಸೆಪ್ಟೆಂಬರ್ ಭಾನುವಾರದಂದು, ಮೈಸೂರಿನ ಸರಸ್ವತಿಪುರಂ ನಲ್ಲಿರುವ, ಪುಣ್ಯಕೋಟಿ ಮನೆ ಮುಂದೆ, ಯೈ.ಎಹ್.ಎ.ಐ ಘಟಕದ ಸುಮಾರು ೩೦ ಮಂದಿ, ಪ್ರಕೃತಿ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಜಮಾಯಿಸಿದ್ದೆವು. ಅವರಲ್ಲಿ ಎಂಟು ವರುಷದ ಪೋರನಿಂದ ಹಿಡಿದು ೭೦ ದಾಟಿದ ಹಿರಿಯ ಸದಸ್ಯರೂ ಇದ್ದರು. ಸುಮಾರು ೭ ಗಂಟೆಗೆ ನಮ್ಮ ತಂಡ ಹೊರಟಿತು. ದಾರಿಯಲ್ಲಿ ಇನ್ನೂ ಕೆಲವರು ಜತೆಯಾದರು. ಹೋಟೆಲ್ ಅಪೂರ್ವದಲ್ಲಿ ಬೆಳಗಿನ ಉಪಾಹಾರ ಸೇವನೆಯಾಯಿತು.

ಅಲ್ಲಿಂದ ಮುಂದುವರಿದು ಅವಧೂತ ದತ್ತ ಪೀಠ ಬಸ್ ಸ್ಟಾಪ್ ವರೆಗೆ ನಡೆದು, ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿ 'ಕೂಡನಹಳ್ಳಿ' ತಲಪಿದೆವು. ಅಲ್ಲಿ ಬಸ್ ಇಳಿದು ಪುನ: ಸುಮಾರು ೨ ಕಿ.ಮೀ ನಡೆದು, ೧೧ ಗಂಟೆಗೆ  ಶ್ರೀ ಲಕ್ಶ್ಮೀಶ ಅವರ ತೋಟ ತಲಪಿದೆವು.  ಸುತ್ತುಮುತ್ತಲೂ ತೆಂಗು, ಕಂಗು, ಪಪ್ಪಾಯ, ತಾಳೆ - ಫಲಭರಿತ ತೋಟಗಳ ಮಧ್ಯದ ಈ ದಾರಿಯಲ್ಲಿ ನಡಿಗೆ ತುಂಬಾ ಮುದ ಕೊಟ್ಟಿತು. ಅಡಿಕೆ, ತೆಂಗು ಹಾಗೂ ಹಣ್ಣಿನ ಮರಗಳನ್ನು ಹೊಂದಿರುವ ಅಚ್ಚುಕಟ್ಟಾದ ತೋಟ. ಅಲ್ಲಿ ಒಂದು ಅಚ್ಚುಕಟ್ಟಾದ ತೋಟದ ಮನೆ ಇದೆ.

                                                                


ಅಲ್ಲಿಗೆ ತಲಪಿದೊಡನೆ, ಶ್ರೀ ಸೋಮಶೇಖರ್ ಅವರ ನೇತೃತ್ವದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆದುವು. ವಯೋಭೇದ ಮರೆತು, ಎಲ್ಲರೂ ಸ್ಕಿಪ್ಪಿಂಗ್, ಬಕೆಟ್ ನೀರಿನಲ್ಲಿ ಮುಳುಗಿರುವ ಬಳೆಯ ಒಳಗೆ ಬೀಳುವಂತೆ ನಾಣ್ಯ ಹಾಕುವುದು, ಬಕೆಟ್ ಗೆ ಚೆಂಡು ಎಸೆಯುವುದು, ಬಾಯಿಯಲ್ಲಿ ಚಮಚ-ನಿಂಬೆಹಣ್ಣು ಇಟ್ಟು ಗುರಿ ತಲಪುವುದು ಇತ್ಯಾದಿ ಆಡಿದರು. ಒಳಗೆ ಅಡುಗೆಮನೆಯಲ್ಲಿ, ಮಹಿಳೆಯರ ಸಹಕಾರದಿಂದ ಎಲ್ಲರಿಗೂ  ಕಡ್ಲೆಪುರಿ, ಸೌತೆಕಾಯಿ ಹಂಚಲಾಯಿತು. ತೋಟದಿಂದ ಆಗ ತಾನೇ ಕಿತ್ತು ತಂದ ಹೇರಳೆಕಾಯಿಯ ಪಾನಕವನ್ನೂ ಸವಿದೆವು. ತೋಟದಲ್ಲಿ ಒಂದು ಸುತ್ತು ಹಾಕಿದೆವು. ಆಸಕ್ತರು ಮರವೇರಿದರು. ನಮ್ಮ ಅನುಕೂಲಕ್ಕಾಗಿ ತಮ್ಮ ಫಾರಂ ಹೌಸ್ ಅನ್ನು ನಮಗೆ ಬಿಟ್ಟುಕೊಟ್ಟು ಸರ್ವಸ್ವಾತಂತ್ಯ್ರ ಒದಗಿಸಿದ ತೋಟದ ಮಾಲೀಕರಾದ ಶ್ರೀ ಲಕ್ಷ್ಮೀಶ ಅವರಿಗೆ ಲಕ್ಷ ವಂದನೆಗಳು! 

 ಅಲ್ಲಿಂದ  ಸುಮಾರು ೧೨ ಗಂಟೆಗೆ ಹೊರಟೆವು. ಬಿಸಿಲು-ನೆರಳು, ಒಣರಸ್ತೆ-ಹಸಿರು ತೋಟಗಳ ನಡುವೆ,  ಪುಟ್ಟ ಹಳ್ಳಿಗಳನ್ನೂ ಹಾದು  ೪-೫ ಕಿ.ಮೀ  ದೂರ ನಡೆದು ಅಳಕನಹಳ್ಳಿಹುಂಡಿಯ ಸಮೀಪದ 'ಅಕ್ಷಯ ಫಾರಂ' ತಲಪಿದೆವು. ಅಷ್ಟರಲ್ಲಿ ಮಧ್ಯಾಹ್ನ  ೩ ಗಂಟೆ ಆಗಿತ್ತು. ಅಚ್ಚುಕಟ್ಟಾದ ತೆಂಗಿನ ತೋಟವದು. ಕೆಲವು ಹೂವಿನ, ಹಣ್ಣಿನ ಗಿಡಗಳನ್ನೂ  ನೆಟ್ಟಿದ್ದರು. ಅಕ್ಷಯ ಫಾರಂ ನ  ಮಾಲೀಕರಾದ ಶ್ರೀ ಸತ್ಯನಾರಾಯಣ ಹಾಗೂ  ಅವರ ಕುಟುಂಬದವರು ಅಲ್ಲಿ ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಪರಸ್ಪರ ಪರಿಚಯ ಕಾರ್ಯಕ್ರಮ ದ ಬಳಿಕ ಭೂರಿ ಭೋಜನ! ನಮ್ಮ ಊಟದ ವ್ಯವಸ್ಥೆ ಮಾಡಿದ್ದ ಅತಿಥೇಯರು ಮೈಸೂರಿನಿಂದಲೇ ಅನ್ನ, ಹುಳಿ, ಸಾರು, ಸಲಾಡ್, ಸಿಹಿ ಹಾಗೂ  ಮಜ್ಜಿಗೆಯನ್ನು ಒಳಗೊಂಡಿದ್ದ ಅಡಿಗೆಯನ್ನು ತಮ್ಮ ವಾಹನದಲ್ಲಿ ತಂದಿದ್ದರು. ಅವರು ಮತ್ತು ಕುಟುಂಬದ ಸದಸ್ಯರು ಸೇರಿ ನಮಗೆಲ್ಲಾ  ಆದರದಿಂದ ಬಡಿಸಿದರು. ನಾವೆಲ್ಲ ಆಗಲೇ ಬಿಸಿಲಿನಲ್ಲಿ ನಡೆದು ಸಾಕಷ್ಟು ಬಸವಳಿದಿದ್ದೆವು.  ತೋಟದಲ್ಲಿ, ರುಚಿಕಟ್ಟಾದ ಊಟ..ವಾವ್ ವಂಡೆರ್ ಫು ಲ್!

ಊಟದ ನಂತರ ತೋಟದಲ್ಲಿ ಆರಾಮವಾಗಿ ತಿರುಗಾಡಿದವರು  ಕೆಲವರು, ಪ್ರಕೃತಿಯ ಮಡಿಲಲ್ಲಿ ನಿದ್ದೆಗೆ ಶರಣಾದವರು ಇನ್ನು ಕೆಲವರು, ಗಮಕ ಹಾಡಿ ಸಾಹಿತ್ಯ ಸವಿದವರು ಮತ್ತೂ ಕೆಲವರು, ತಮ್ಮ ಎಂದಿನ ಶೈಲಿಯ ಹರಟೆ ಹಾಸ್ಯಗಳಲ್ಲಿ ತೊಡಗಿಸಿದವರು ಇನ್ನಿತರರು.....ಹೀಗಿತ್ತು ನಮ್ಮ ನಡಾವಳಿ. ಬೆಳಗಿನ ಆಟೋಟ ಸ್ಪರ್ಧೆಗಳಲ್ಲಿ ವಿಜೀತರಾದವರಿಗೆ ಶ್ರೀ ಸೋಮಶೇಖರ್  ಅವರು ಬಹುಮಾನ ವಿತರಿಸಿದರು.

ಇದ್ದಕ್ಕಿದ್ದಂತೆ ನಮ್ಮ ಮುಂದೆ 'ಗಾರ್ಡನ್  ಫ್ರೆಶ್ ' ಎಳನೀರಿನ ರಾಶಿ ಕಂಗೊಳಿಸಿದುವು. ಪ್ರತಿಯೊಬ್ಬರಿಗೂ ಧಾರಾಳವಾಗಿ ಸಿಹಿಯಾದ ಎಳನೀರನ್ನು ಕೆತ್ತಿ ಕೊಟ್ಟರು.  ಅನ್ನದಾತ ಸುಖೀಭವ, ಅಕ್ಷಯ ಫಾರಂನ ಸಿರಿ ಅಕ್ಷಯವಾಗಲಿ ಎಂದು ನಮ್ಮೆಲ್ಲರ ಹಾರೈಕೆ!





ಆಗ ಸಂಜೆಯಾಗುತ್ತಲಿದ್ದುದರಿಂದ, ಒಲ್ಲದ ಮನಸ್ಸಿನಿಂದ ಮೈಸೂರಿನ ಕಡೆಗೆ ಹೋಗುವ ಬಸ್ ಏರಿದೆವು. ಹೀಗೆ ಪ್ರಕೃತಿ ನಡಿಗೆಯೂ ಸಾತ್ವಿಕ ಅಡುಗೆಯೂ ಮೇಳೈಸಿ  ನಮ್ಮ ಭಾನುವಾರದ  ಈ ಸರಳ ಸುಂದರ ಕಾರ್ಯಕ್ರಮ ಸಂಪನ್ನಗೊಂಡಿತು. ಈ ಕಾರ್ಯಕ್ರಮವನ್ನು ಬಹಳ ಮುತುವರ್ಜಿಯಿಂದ ಆಯೋಜಿಸಿದ ಶ್ರೀ ಸೋಮಶೇಖರ್ ಹಾಗೂ ಶ್ರೀಮತಿ ಗೋಪಿ ಅವರಿಗೆ ವಂದನೆಗಳು.





2 comments:

  1. ಅನ್ನ, ಹುಳಿ, ಸಾರು, ಸಲಾಡ್, ಸಿಹಿ ಹಾಗೂ ಮಜ್ಜಿಗೆ ಓಕೆ,
    ಆದರೆ ಹೋಟೆಲ್ ಅಪೂರ್ವದಲ್ಲಿ ಬೆಳಗಿನ ಉಪಾಹಾರದ ಮೆನು ಪ್ಲೀಸ್!

    (facebook profile: Badarinath Palavalli)

    ReplyDelete