Total Pageviews

Sunday, December 7, 2014

ದೂರ ತಪ್ಪಿಸುವ ಮೈಲಿಗಲ್ಲು..ಹೀಗೂ ಉಂಟು!

Hema trek Aug2014
ಹೇಮಮಾಲಾ.ಬಿ
ಚಂದಮಾಮದ ಕತೆಗಳಲ್ಲಿ ಬರುವ ರಾಜಕುಮಾರನಿಗೆ, ಕಾಡು ಮೇಡುಗಳಲ್ಲಿ ಅಲೆದಾಡುವ ಸಂದರ್ಭ  ಬರುತ್ತದೆ, ಆಗ ಯಾವುದೋ ದೆವ್ವವೋ, ಮೋಹಿನಿಯೋ ಅವನ ದಾರಿ ತಪ್ಪಿಸುತ್ತದೆ.  ಆದರೆ, ನವೆಂಬರ್ 8, 2014 ರಂದು, ಮೈಸೂರಿನ  ಯೈ.ಎಚ್.ಎ.ಐ ತಂಡದ ಕೆಲವು ಚಾರಣಿಗರನ್ನು, ಹಾಡುಹಗಲೇ, ಆಗುಂಬೆ ಘಾಟಿಯ ಮೈಲಿಗಲ್ಲು ದೂರ/ದಾರಿ ತಪ್ಪಿಸಿದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ….ಹೀಗೂ ಉಂಟು!
ಆ ದಿನ ಬೆಳಗ್ಗೆ ನಿಗದಿತ ಕಾರ್ಯಕ್ರಮದ ಪ್ರಕಾರ ನಮ್ಮ ತಂಡವು, ಕುಂದಾದ್ರಿ ಬೆಟ್ಟವಿಳಿದು, ಆಗುಂಬೆ ತಲಪಿದೆವು. ಅಲ್ಲಿಂದ ಬೆಳಗಿನ ಉಪಾಹಾರಕ್ಕಾಗಿ ಸೋಮೇಶ್ವರಕ್ಕೆ ಹೋಗಿ, ತಿಂಡಿ ತಿಂದು, ಕಾಡುದಾರಿಯ ರಸ್ತೆಮಾರ್ಗದಲ್ಲಿ ನಡೆದು ಆಗುಂಬೆಯ ಸೂರ್ಯಾಸ್ತಮಾನ ವ್ಯೂ ಪಾಯಿಂಟ್ ತಲಪಬೇಕಿತ್ತು. ಅನಂತರ ಬೇರೆಡೆಗೆ ಹೋಗುವುದಿತ್ತು. ಸೋಮೇಶ್ವರದಲ್ಲಿ ಉಪಾಹಾರವಾದ ಮೇಲೆ ರಸ್ತೆಯಲ್ಲಿ ಆಗುಂಬೆ ಕಡೆಗೆ ನಡೆಯತೊಡಗಿದೆವು. ಹಿಂದಿನ ದಿನ ಕುಂದಾದ್ರಿಯಲ್ಲಿ ನಡೆದಿದ್ದ ನಮಗೆ ತಿಂಡಿ ತಿಂದಾದ ಮೇಲೆ ಹೊಟ್ಟೆಯೂ ಭಾರವಾಗಿ,  ಕೆಲವರಿಗೆ ರಸ್ತೆಯಲ್ಲಿ ನಡೆಯುವುದು ‘ಬೇಕಿಲ್ಲ′ ಎಂಬ ಮನೋಭಾವ ಹುಟ್ಟಿತ್ತು. ಇಷ್ಟರೆ  ಮೇಲೆ ಪಕ್ಕದಲ್ಲಿಯೇ ಲಾರಿ-ಬಸ್ಸುಗಳು ಧಾರಾಳವಾಗಿ ಓಡಾಡುತ್ತಿರುವಾಗ, ಕೆಲವರಿಗಾದರೂ   ‘ಈ ಮಾರ್ಗದಲ್ಲಿ ನಡಿಗೆ ಬೇಕಿತ್ತಾ….ಬಸ್ಸೋ ಲಾರಿಯೋ ಹತ್ತಿದರಾಯಿತು’ಎಂಬ ಆಲೋಚನೆ ಬಂದಿದ್ದಂತೂ ನಿಜ. ಸೋಮೇಶ್ವರದಿಂದ ಆಗುಂಬೆಗೆ ಕೇವಲ 6 ಕಿ.ಮೀ ಅಂದಿದ್ದರು ಆಯೋಜಕರು. ಇರಲಿ, ಬಂದಿದ್ದೇ ಚಾರಣಕ್ಕೆ..ನಡೆಯೋಣ ಎಂದು ನಡೆಯಲಾರಂಭಿಸಿದೆವು.
ಸುಮಾರು ಒಂದು ಘಂಟೆ ನಿಧಾನವಾಗಿ ನಡೆದಾಗ ನಮಗೆ ಎದುರಾದುದು ಆಗುಂಬೆ  8 ಕಿ.ಮೀ ಎಂಬ ಮೈಲಿಗಲ್ಲು! ಆಗಲೇ ಮಧ್ಯಾಹ್ನ 1230 ಗಂಟೆ  ಆಗಿತ್ತು. ಆಗುಂಬೆಗೆ ಇನ್ನೂ 8 ಕಿ.ಮೀ ಇದೆಯೇ? ಹಾಗಾದರೆ ನಾವು ಇದುವರೆಗೆ ನಡೆದುದು ಎಷ್ಟಾಗಿರಬಹುದು ? ರಸ್ತೆಯಲ್ಲಿ ನಡೆಯುವುದು ಬೋರು….ಇತ್ಯಾದಿ ಅಸಹನೆಯ ಮಾತುಗಳು, ದಣಿವಿನ ಸಂಕೇತಗಳು ವ್ಯಕ್ತವಾದುವು.
“ಇಲ್ಲ, ಇನ್ನು ಸ್ವಲ್ಪ ಅಷ್ಟೆ….ಒಂದೂವರೆ ಘಂಟೆಗೆ ಆಗುಂಬೆ ತಲಪಿರುತ್ತೇವೆ” ಎಂದು ಹಿರಿಯ ಚಾರಣಿಗರಾದ ಗೋಪಮ್ಮ ಆಶ್ವಾಸನೆ ಕೊಟ್ಟರೂ ಮನಸ್ಸು ಹಿಂಜರಿಯಿತು. ನಮ್ಮ ಅದೃಷ್ಟಕ್ಕೆ ಮುಂದಿನ ಮೈಲಿಗಲ್ಲು ‘ಆಗುಂಬೆ 10  ಕಿ.ಮೀ’ ಎಂದು ತೋರಿಸಬೇಕೆ? ಯಾವ ಲೆಕ್ಕಾಚಾರದಲ್ಲಿಯಾದರೂ ಅದು ಹಿಂದಿನ  ದೂರಕ್ಕಿಂತ ಕಡಿಮೆ ಇರಬೇಕು, ಜಾಸ್ತಿಯಿರಲು ಸಾಧ್ಯವಿಲ್ಲ! ಇನ್ನು 5, 6, 7 ಕಿ.ಮೀ ಮೈಲಿಗಲ್ಲುಗಳು  ಯಾಕೋ ನಮಗೆ  ಕಾಣಿಸಲೇ ಇಲ್ಲ. ಇನ್ನು ನಡೆಯಲು  ಸಾಧ್ಯವಿಲ್ಲ, ಬಹಳಷ್ಟು ದಣಿವಾಗಬಹುದು ಎಂದು ಮುಖ್ಯವಾಗಿ  ನನಗೆ ಅನಿಸಿತು. ತಂಡದ ಇನ್ನಿಬ್ಬರು ಮಹಿಳೆಯರೂ ನನ್ನ ಅಭಿಪ್ರಾಯವನ್ನು ಅನುಮೋದಿಸಿದರು. ಆದರೆ ಗೋಪಮ್ಮ ಮಾತ್ರ, ತಾನು ನಡೆದೇ ಬರುತ್ತೇನೆ ಎಂದು ಘೋಷಿಸಿದರು. ಇನ್ನು ಕೆಲವರು ಹಿಂದಿನಿಂದ ಬರುತ್ತಿದ್ದರು.
agumbe viewpoint
ಸರಿ, ಹಿಂದಿನಿಂದ ಬಂದ ಲಾರಿ, ಬಸ್ಸುಗಳಿಗೆ ಕೈ ತೋರಿಸಲಾರಂಭಿದೆವು. ಒಬ್ಬರು ಲಾರಿಯವರು ನಿಲ್ಲಿಸಿದರು. ಲಾರಿ ಹತ್ತಿ ಕುಳಿತ್ತಿದ್ದಾಯಿತು. ಸ್ವಲ್ಪ ಮುಂದೆ ಹೋದಾಗ ತಂಡದ ಇನ್ನು ಕೆಲವರು ಲಾರಿಯಲ್ಲಿದ್ದ ನಮ್ಮನ್ನು ನೋಡಿ ತಾವೂ ಹತ್ತಿದರು. ಹೀಗೆ 3-4  ಬಾರಿ ಲಾರಿ ನಿಲ್ಲ್ಲಿಸಿ, ತಂಡದ 10-12 ಮಂದಿ ಜತೆಯಾಗಿ,ಹೆಚ್ಚೆಂದರೆ 2  ಕಿ.ಮೀ  ಪ್ರಯಾಣಿಸಿರಬಹುದು. ಆಗುಂಬೆ ಬಂದೇ ಬಿಟ್ಟಿತು! ಲಾರಿಯವರಿಗೆ ಧನ್ಯವಾದ ತಿಳಿಸಿ ಇಳಿದಿದ್ದಾಯಿತು. ನೋಡ ನೋಡುತ್ತಿರುವಷ್ಟರಲ್ಲಿ, ಲಾರಿ ಹತ್ತದ ಧೀರರು, ನಡೆದು ಬಂದೇ ಬಿಟ್ಟರು.
ಕೆಲವರು ನಮ್ಮನ್ನು ಉದ್ದೇಶಿಸಿ “ ಚಾರಣಕ್ಕೆಂದು  ಬಂದ ಮೇಲೆ ಲಾರಿ ಹತ್ತುವುದು ಎಷ್ಟು ಸರಿ……” ಎಂದು ಕಾಲೆಳೆದರು. “ಆ ಮೈಲಿಗಲ್ಲು ತಪ್ಪು ದೂರ ತೋರಿಸುತ್ತಿತ್ತು….ಕೆಲವು ಮೈಲಿಗಲ್ಲುಗಳು ಇರಲೇ ಇಲ್ಲ..ತುಂಬಾ ಲೇಟ್ ಆಗುತ್ತೆ ಅಂದ್ಕೊಂಡ್ವಿ….” ಇತ್ಯಾದಿ ಸಮರ್ಥನೆಗಳನ್ನು ಕೊಟ್ಟುದಾಯಿತು.
Lorry
ಸಾಮಾನ್ಯವಾಗಿ ನಿಧಾನವಾಗಿ ನಡೆಯುವ ‘ಸುಸ್ತಮ್ಮ ಬ್ರ್ಯಾಂಡ್’ ಪಡೆದಿದ್ದ ನನಗೆ ಇದರಿಂದಾಗಿ ಏನೂ ಅವಮಾನವೂ, ತುಂಬಲಾರದ ನಷ್ಟವೂ ಆಗಲಿಲ್ಲ.  ಆದರೆ, ಬಹಳ ಕ್ಲಿಷ್ಟಕರವಾದ ಹಲವಾರು ಚಾರಣಗಳನ್ನು ಪ್ರತಿಕೂಲ ಹವೆಯಲ್ಲಿಯೂ ಯಶಸ್ವಿಯಾಗಿ ಪೂರೈಸಿ, ತಾರಾಮೌಲ್ಯ ಗಿಟ್ಟಿಸಿಕೊಂಡಿದ್ದ  ನಮ್ಮ ತಂಡದ ಕೆಲವು ಹೆಮ್ಮೆಯ  ಕಣ್ಮಣಿಗಳೂ  ಈ  ಗುಂಪಿನಲ್ಲಿ ಗೋವಿಂದ ಎಂಬಂತೆ ಲಾರಿ ಹತ್ತಿದ್ದು ಅವರಿಗೆ ಇರುಸು ಮುರಿಸಾಯಿತು.
ಎಂತೆಂತಹ ಚಾರಣವನ್ನು ಮಾಡಿದ ತಮಗೆ ಈ ಆಗುಂಬೆ ಘಾಟಿಯಲ್ಲಿ, ಅದೂ 2 ಕಿ.ಮೀ ಗೋಸ್ಕರ   ಲಾರಿ ಹತ್ತಿ,  ‘ಅಡಿಕೆಗೆ’  ಹೋದ ಮಾನವನ್ನು ಮರಳಿ ಪಡೆಯಲು ಎಷ್ಟು ‘ಆನೆಗಳನ್ನು’ ತೆರಬೇಕೋ ಎಂದು ಚಿಂತಾಕ್ರಾಂತರಾಗಿ, ದಾರಿ/ದೂರ ತಪ್ಪಿಸಿದ ಮೈಲಿಗಲ್ಲನ್ನೂ, ಸಂಬಂಧಿತ ವ್ಯವಸ್ಥೆಯನ್ನೂ, ಅದರಿಂದಾಗಿ  ಲಾರಿ ಹತ್ತಲು ಕಾರಣರಾದ ನಮ್ಮನ್ನೂ ಮನದಲ್ಲಿಯೇ ಬೈದರು.

-ಹೇಮಮಾಲಾ.ಬಿ

No comments:

Post a Comment