Total Pageviews

Friday, September 10, 2010

ನಾನು ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ!

ಜಾಗತೀಕರಣದ  ಈ ದಿನಗಳಲ್ಲಿ, ಉದ್ಯೋಗಸ್ಥ  ಮಹಿಳೆಯರು ಏಕಾಂಗಿಯಾಗಿ ವಿದೇಶ ಪ್ರಯಾಣ ಮಾಡುವುದು ತೀರಾ  ಸಾಮಾನ್ಯವಾದ  ವಿಷಯ.  ಕೆಲವು ಅಂತರ ರಾಷ್ಟ್ರೀಯ  ವಿಮಾನಗಳು ಬೆಂಗಳೂರಿನಿಂದ ತಡರಾತ್ರಿಯಲ್ಲಿ - ಅಂದರೆ 'ದೆವ್ವಗಳು' ಓಡಾಡುವ ಸಮಯದಲ್ಲಿ  ಆಕಾಶಕ್ಕೆ ಏರುತ್ತವೆ. ಅಂತರ ರಾಷ್ಟ್ರೀಯ ಪ್ರಯಾಣಿಕರು, ವಿಮಾನ ಹೊರಡುವುದಕ್ಕಿಂತ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿ  'ಚೆಕ್-ಇನ್' ಆಗಬೇಕು.

ಚೆಕ್ -ಇನ್ ಆದ ಮೇಲೆ ತಮ್ಮ ಸರದಿ ಬರುವ ವರೆಗೆ, ವಿಮಾನ ನಿಲ್ದಾಣದಲ್ಲಿ  ಕಾಲ ಕಳೆಯಲು ಹಲವಾರು ದಾರಿಗಳಿವೆ. ಅಲ್ಲಿರುವ ಶಾಪಿಂಗ್ ಕೇಂದ್ರಗಳಿಗೆ ನುಗ್ಗಿ ಬರುವುದು, ಪುಸ್ತಕ  ಓದುವುದು ಅಥವಾ ಪರಿಚಯದವರು ಸಿಕ್ಕಿದರೆ ಹರಟೆ ಹೊಡೆಯುವುದು, ಲ್ಯಾಪ್ ಟಾಪ್  ಬಿಡಿಸಿ ಆಫೀಸ್ ಕೆಲಸ ಮಾಡುವುದು -ಇವೆಲ್ಲವೂ  ಬೋರ್ ಆದರೆ ಸುಮ್ಮನೆ ತೂಕಡಿಸುತ್ತಾ ಕೂರುವುದು ....ಇತ್ಯಾದಿ.

ಕೆಲವು ದಿನಗಳ ಹಿಂದೆ ಹೀಗೆ  ನಡುರಾತ್ರಿಯಲ್ಲಿ ಬೆಂಗಳೂರಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೂಕಡಿಸುತ್ತಾ  ಕುಳಿತಿದ್ದೆ. ಮಧ್ಯವಯಸ್ಕ ಸಹ ಪ್ರಯಾಣಿಕರೊಬ್ಬರು ತಮ್ಮ ಪರಿಚಯ ಮಾಡಿಕೊಂಡರು.  ಅವರು  ಜರ್ಮನಿಯ  'ಫ್ರಾಂಕ್ ಫರ್ಟ್' ಗೆ ಹೋಗಿ ಅಲ್ಲಿಂದ 'ಯು.ಎಸ್'ಗೆ ಹೋಗುವವರು. ಅಲ್ಲಿ ಅವರ ಮಗ ಹಾಗು ಮಗಳು ನೆಲೆಸಿದ್ದಾರಂತೆ.

ನಾನು ನಮ್ಮ ಸಂಸ್ಥೆಯ ಮುಖ್ಯ ಆಫೀಸ್  ಇರುವ 'ಮ್ಯುನಿಕ್' ನಗರಕ್ಕೆ ಹೋಗಬೇಕಿತ್ತು.

ನನಗಿಂತ ಹಿರಿಯರಾಗಿದ್ದ ಅವರು ಕೇಳಿದ ಕೆಲವು ಪ್ರಶ್ನೆಗಳು ಹೀಗಿವೆ:

"ನೀನು  ಸಾಫ್ಟ್ ವೇರ್ ಇಂಜಿನಿಯರ್ ಇರಬೇಕಲ್ಲವೇ ?"
"ಅಮೆರಿಕಾಕ್ಕೆ  ಹೋಗಿಲ್ಲವಾ "
"ಮೈಸೂರಿನಲ್ಲಿ ಇನ್ಫೋಸಿಸ್ ನಲ್ಲಿ ಕೆಲಸವೇ"?
"ಆಗಾಗ್ಗೆ ಫಾರಿನ್ ಗೆ ಹೋಗುತ್ತೀಯ" ?

ಒಟ್ಟಿನಲ್ಲಿ ಪರದೇಶ ಎಂದರೆ ಅಮೆರಿಕ ಮಾತ್ರ, ಉದ್ಯೋಗ ಎಂದರೆ ಸಾಫ್ಟ್ ವೇರ್ ಇಂಜಿನಿಯರ್ ಎಂಬಂತಿತ್ತು, ಅವರ ಮಾತು.

ಮೇಲಿನ ಎಲ್ಲಾ ಪ್ರಶ್ನೆಗಳಿಗೆ ನನಗಿರುವುದು ಒಂದೇ ಉತ್ತರ - "ಅಲ್ಲ".

ನಾನು  ಸಾಫ್ಟ್ ವೇರ್ ಇಂಜಿನಿಯರ್ ಖಂಡಿತವಾಗಿಯೂ ಅಲ್ಲ. ನಾನು  ಬಿ.ಎಸ್ಸಿ.ಪದವೀಧರೆ, ಮೇಲೊಂದು ಕಂಪ್ಯೂಟರ್ ಕೋರ್ಸ್ ಮಾಡಿ,  ಇತ್ತೀಚೆಗೆ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಿಂದ  'ಎಂ.ಬಿ.ಎ' ಪದವಿ ಗಳಿಸಿದ್ದೇನೆ. ಕ್ಲೂಬರ್ ಲ್ಯೂಬ್ರಿಕೆಶನ್ ಇಂಡಿಯ  ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ,'ಪ್ರೊಡಕ್ಶನ್ ಮ್ಯಾನೇಜರ್' ಆಗಿದ್ದೇನೆ.
ವೃತ್ತಿಗೆ ಸಂಬಂಧಿಸಿ  ಜರ್ಮನಿ, ಫ್ರಾನ್ಸ್,  ಬೆಲ್ಜಿಯಮ್,  ಸಿಂಗಾಪುರ್, ಥೈಲ್ಯಾಂಡ್, ಶ್ರೀಲಂಕಾ  ದೇಶಗಳಿಗೆ ಹೋಗಿದ್ದೇನೆ, ಆದರೆ ಅಮೆರಿಕಾಕ್ಕೆ ಈವರೆಗೆ ಹೋಗಿಲ್ಲ - ಅಂದು ತುಸು ಅಭಿಮಾನದಿಂದಲೇ ಹೇಳಿದೆ.

ಸುಮಾರು ಮಧ್ಯವಯಸ್ಸಿನವರಾದ  ಆಕೆ ನನ್ನನ್ನು , ' ಇವಳು ಸುಳ್ಳು  ಹೇಳುತ್ತಿರಬೇಕು ಎಂಬಂತೆ... ತುಸು ಅನುಮಾನದಿಂದ  ನೋಡಿದಂತೆ' ನನಗೆ ಭಾಸವಾಯಿತು.  ಬಹುಶ: ಅವರು ಅಂದುಕೊಂಡಿದ್ದ ಯಾವುದೇ ಅರ್ಹತೆಗಳು  ಇಲ್ಲದ ನಾನು  ವಿದೇಶಕ್ಕೆ  ಹೋಗುವ ಕಾರಣವಾದರು ಏನೆಂದು ತಿಳಿಯುವ ಕುತೂಹಲವಿದ್ದಿರಬೇಕು.  

"ಪ್ರಾಜೆಕ್ಟ್ ಮೇಲೆ ಹೋಗುತ್ತೀಯಾ.." ಅಂತ ಪುನಃ ಪ್ರಶ್ನಿಸಿದರು. " ಕಾಂಫೆರೆನ್ಸೆಗೆ " ಎಂದುತ್ತರಿಸಿದೆ.

ಆಕೆ ತಮ್ಮ ಮುಗ್ದತೆಯಿಂದ ಪ್ರಶ್ನಿಸಿದ್ದು ಎಂದು ಭಾವಿಸಬಹುದಾದರೂ ನನಗೆ ಸ್ವಲ್ಪ ಅವಮಾನವಾದಂತಾಯಿತು.

ಕೆಲವು ವರ್ಷಗಳ ಹಿಂದೆ ಕನ್ನಡ ಧಾರವಾಹಿಯೊಂದರ ಹಾಡು ಹೀಗಿತ್ತು:

"ದಂಡಪಿಂಡಗಳು... ಇವರು ದಂಡಪಿಂಡಗಳು..... ಬಿ ಎ,  ಬಿ ಎಸ್ಸಿ , ಬಿ ಕಾಂ  ಮಾಡಿ.. ಕೆಲಸ ಸಿಗದೇ ದಿನ ಅಲೆದಾಡಿ... "  ಯಾಕೋ ಈ ಹಾಡು ನೆನಪಿಗೆ ಬಂತು.

ಕಾರ್ಪೋರೇಟ್  ವಲಯದಲ್ಲಿ ಸುಮಾರು  ಹದಿನಾರು ವರುಷಗಳಿಂದ ದುಡಿಯುತ್ತಿರುವ ನನ್ನ ಅನುಭವದಲ್ಲಿ,   ಉದ್ಯೋಗ  ಮಾರುಕಟ್ಟೆಯಲ್ಲಿ ಯಶಸ್ಸು ಪಡೆಯಲು  ಹಲವಾರು ದಾರಿಗಳಿವೆ.  'ಸಾಫ್ಟ್ ವೇರ್ ಇಂಜಿನಿಯರ್' ಆಗುವುದು , ಅಂತಹ ಒಂದು ದಾರಿ ಅಷ್ಟೇ, ಆದರೆ  'ಅದೊಂದೇ ದಾರಿ' ಅಲ್ಲ. ಯಾರೇ ಆಗಲಿ 'ಸಾಫ್ಟ್ ವೇರ್ ಇಂಜಿನಿಯರ್' ಆಗದಿದ್ದರೆ  ಕೊರಗಬೇಕಾಗಿಲ್ಲ.  ಉತ್ತಮವಾದ ಉದ್ಯೋಗ ಸಾಧನೆಗೆ ಅವಕಾಶಗಳು ಸಾಕಷ್ಟಿವೆ. ಹಾಗಾಗಿ ಯಾವುದೇ ಒಂದು ಕ್ಷೇತ್ರಕ್ಕೆ ವಿಪರೀತ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ .

ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ " ನಾನು ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ"!

2 comments: