Total Pageviews

Tuesday, November 23, 2010

ಪುಸ್ತಕನೋಟ - ಕರ್ವಾಲೋ

ಪೂರ್ಣ ಚಂದ್ರ ತೇಜಸ್ವಿಯವರ ಅದ್ಭುತ ಕತೆಗಾರಿಕೆಯ ಕೃತಿ 'ಕರ್ವಾಲೋ'.

ಅದನ್ನು ಓದುತ್ತಾ ಹೋದಂತೆ ಪಶ್ಚಿಮ ಘಟ್ಟದ ನಿಸರ್ಗ ಸಿರಿ ಅನಾವರಣಗೊಳ್ಳುತ್ತದೆ. ಜೀವ ಜಾಲದ  ವಿಸ್ಮಯಗಳು, ಜೀವ ವೈವಿಧ್ಯಗಳ ಸಂಬಂಧಗಳು, ಜೀವ ವಿಕಾಸದ ಪಥದಲ್ಲಿ ಕಳಚಿ ಹೋದ ಕೊಂಡಿಯನ್ನು  ಹುಡುಕುವ ಪ್ರಯತ್ನ, ಇತ್ಯಾದಿಗಳ  ಮಿಶ್ರಣ ಈ ಕಾದಂಬರಿಯ ಹೂರಣ.

ವಿದ್ಯಾವಂತ ಕೃಷಿಕನಾಗಿದ್ದೂ , ಗ್ರಾಮೀಣ  ಜೀವನದ ಮೇಲೆ ಅಪಾರ ಆಸಕ್ತಿಯಿದ್ದರೂ, ಕೃಷಿಯಲ್ಲಿ ಹೆಚ್ಚಿನ ಯಶಸ್ಸು ಕಾಣದೆ , ತೋಟವನ್ನು ಮಾರಿ ಪಟ್ಟಣಕ್ಕೆ  ಹೋಗಬೇಕೆಂದು, ಕಥಾನಾಯಕ ಹವಣಿಸುತ್ತಾನೆ. ಈ ಸಂದರ್ಭದಲ್ಲಿ, ಆತನಿಗೆ ಮೇಧಾವಿ ಸಂಶೋಧಕ 'ಕರ್ವಾಲೋ ' ಅವರ  ಪರಿಚಯವಾಗುತ್ತದೆ. 

ಆವರೊಂದಿಗೆ ನಿಕಟ ಸಂಪರ್ಕದಲ್ಲಿರುವ ಮಂದಮತಿ ಮಂದಣ್ಣನನ್ನು ಕಂಡು ಕುತೂಹಲಿಯಾಗುತ್ತಾನೆ. ಈತನೊಂದಿಗೆ ಕರ್ವಾಲೋ ರವರ ಸ್ನೇಹಕ್ಕೆ ಕಾರಣವೇನೆಂದು  ಪ್ರಶ್ನಿಸುತ್ತಾನೆ. ಮಂದಣ್ಣನಿಗೆ  ಜೀವ ಪ್ರಭೇದಗಳನ್ನು ಗುರುತಿಸುವ ಪ್ರತಿಭೆಯಿದೆ,ಅದರಿಂದಾಗಿ ತನ್ನ ಸಂಶೋಧನೆಗೆ  ಸಹಾಯವಾಗುತ್ತದೆ,  ಎನ್ನುತ್ತಾರೆ ಕರ್ವಾಲೋ.

ಒಂದು ದಿನ ಕರ್ವಾಲೊ ಅವರು, ಮಂದಣ್ಣನು ಕಾಡಿನಲ್ಲಿ ಒಂದು ವಿಧವಾದ 'ಹಾರುವ ಒತಿಯನ್ನು' ನೋಡಿದ್ದನೆಂದೂ, ಈ ಪ್ರಭೇದವು ಜೀವ ವಿಕಾಸದ ಹಾದಿಯಲ್ಲಿ ಕಳಚಿಹೋದ ಕೊಂಡಿಯೆಂದು ಇದುವರೆಗೆ ನಂಬಲಾಗಿತ್ತೆಂದು ಹೇಳಿದರು. 

ಕಥನಾಯಕನೂ  ಕರ್ವಾಲೋ ಅವರ ತಂಡದೊಂದಿಗೆ ಜತೆಗೂಡಿ, ಕಾಡಿನಲ್ಲಿ 'ಹಾರುವ ಒತಿಯನ್ನು' ಅರಸುತ್ತ ಅಲೆದಾಡುವ ರೋಚಕ ಅನುಭವಗಳು ಹಾಗೂ ವೈಚಾರಿಕ ವಿಶ್ಲೇಷಣೆಗಳು  ಓದುಗರನ್ನು, ಪ್ರಕೃತಿಯ ಬಗ್ಗೆ ಚಿಂತನೆಗೆ ಹಚ್ಚುತ್ತವೆ.

No comments:

Post a Comment