ಎರಡು ದಶಕಗಳ ಹಿಂದೆ, ಮೈಸೂರಿಗೆ ಬಂದ ಹೊಸದರಲ್ಲಿ ವಾಸವಿದ್ದ ಗೋಕುಲಂ ಬಡಾವಣೆಯಲ್ಲಿ ವಾಸವಾಗಿದ್ದೆವು. ಅದುವರೆಗೆ ದೂರದೂರದಲ್ಲಿ ಅಡಿಕೆ ತೋಟಗಳ ಮಧ್ಯೆ ಇರುತ್ತಿದ್ದ ಹೆಂಚಿನ ಒಂಟಿ ಮನೆಗಳನ್ನು ಮಾತ್ರ ನೋಡಿ ಗೊತ್ತಿದ್ದ ನನಗೆ ಬಡಾವಣೆ ಬದುಕು ಹೊಸ ಅನುಭವಗಳನ್ನು ಮೊಗೆಮೊಗೆದು ಕೊಟ್ಟಿತ್ತು.
ಶಾಂತವಾಗಿದ್ದು ಲವಲವಿಕೆಯಿಂದಿದ್ದ ಬಡಾವಣೆಯಲ್ಲಿ ಸಹೃದಯ ನೆರೆಹೊರೆಯವರೂ ಇದ್ದು ಆರಾಮವಾಗಿದ್ದೆವು. ಬೆಳಗಾಗುತ್ತಿದ್ದಂತೆ ಹಿಂದಿನ ಮನೆ ಬೀದಿಯಲ್ಲಿ ಸೈಕಲ್ ಟ್ರಿಣ್ ಗುಟ್ಟಿದರೆ ಹಾಲಿನವನು ಬಂದ ಎಂದು ಅರ್ಥ. ಪಾತ್ರೆ ರೆಡಿ ಮಾಡಿಕೊಳ್ಳುವಷ್ಟರಲ್ಲಿ ಮನೆ ಮುಂದೆ ಆತ ಬರುತ್ತಿದ್ದ. ಇನ್ನು ಸ್ವಲ್ಪ ಹೊತ್ತಿನಲ್ಲಿ ‘ಮೊಲ್ಲೆ …ಮರ್ಲೇ…ಜಾಜಿ ಹೂವೇ…‘ ಎಂದು ಕೂಗುತ್ತಾ ತನ್ನ ತಲೆಯಲ್ಲಿ ಬಿದಿರಿನ ದೊಡ್ಡ ತಟ್ಟೆಯನ್ನು ಇರಿಸಿಕೊಂಡು ಹೂ ಮಾರುವ ಅಜ್ಜಿಯ ಸರದಿ. ಸೈಕಲ್ ನಲ್ಲಿ ಬರುವ ಪೇಪರ್ ಹಾಕುವ ಹುಡುಗನು ಪೇಪರ್ ಅನ್ನು ಸುರುಟಿ ಕೊಳವೆಯಂತೆ ಮಾಡಿ, ಕೆಳಗಡೆಯಿಂದಲೇ ನಮ್ಮ ಬಾಲ್ಕನಿಗೆ ಎಸೆಯುತ್ತಿದ್ದ.

ಆಮೇಲೆ ಬರುವ ತರಕಾರಿಯಣ್ಣ (ಅವರ ಹೆಸರು ನೆನಪಿಲ್ಲ) ವಿವಿಧ ತರಕಾರಿಗಳನ್ನು ಹೇರಿದ ತಳ್ಳುಗಾಡಿಯನ್ನು ರಸ್ತೆಯ ಇಳಿಜಾರಿನಲ್ಲಿ ಜಾರದಂತೆ, ಚಕ್ರಕ್ಕೆ ಕಲ್ಲು ಕೊಟ್ಟು ನಿಲ್ಲಿಸಿ ‘ ಬದನೇಕಾಯ್ . ..ಬೆಂಡೇಕಾಯ್ .. ಹೀರೇಕಾಯ್ .. ಅವರೇಕಾಯ್… ಸೌತೆಕಾಯ್…” ಎನ್ನುವಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಚಿಕ್ಕ ಬುಟ್ಟಿಯನ್ನೋ, ಚೀಲವನ್ನೋ ಕುಕ್ಕರ್ ಪಾತ್ರೆಯನ್ನೋ ಹಿಡಿದು ಗಾಡಿಯ ಸುತ್ತ ಮುತ್ತ ಜಮಾಯಿಸುತ್ತಿದ್ದರು.
“ಏನಣ್ಣ ನಿನ್ನೆ ಬಂದಿಲ್ಲ… ಮೊನ್ನೆ ಕೊಟ್ಟಿದ್ದ ಅವರೇಕಾಯಿ ಬರೀ ಹುಳ…ಮೂಲಂಗಿ ಚೆನ್ನಾಗಿದೆ…ಸೌತೆಕಾಯಿ ಕಹಿ ಇತ್ತಪ್ಪಾ…ಮಗಳ ಸೀಮಂತ ಆಯ್ತಾ… “ಇತ್ಯಾದಿ ಪ್ರಶಂಸೆ, ನಿಂದನೆ, ಕುಶಲೋಪರಿಗಳ ಜತೆಗೆ ವ್ಯಾಪಾರ ನಡೆಯುತ್ತಿತ್ತು. ಬಾಲ್ಕನಿ ಮೇಲೆ ಬಟ್ಟೆ ಹರವುತ್ತಿದ್ದ ನನ್ನನ್ನು ನೋಡಿ ‘ಆಂಟಿ ತರಕಾರಿ ಬೇಡ್ವಾ… ಕಾಫಿ ಆಯ್ತಾ….ಪಾಪು ಉಷಾರಾ…..’ಎಂದು ಮಾತಿಗೆಳೆಯುತಿದ್ದ. ನನಗಿಂತ ವಯಸ್ಸಿನಲ್ಲಿ ಬಹಳಷ್ಟು ದೊಡ್ಡವರಾದರಾದ ಆತನಿಗೆ ನಾನು ಹೇಗೆ ‘ಆಂಟಿ’ ಆಗಬಲ್ಲೆ ಅನಿಸುತಿತ್ತು.

‘ಗಡ್ಡೆ ಕೋಸು ಇದ್ಯಾ’ ಎಂದು ವಿಚಾರಿಸುತ್ತಾರೆ ಇನ್ನೊಬ್ಬರು. ‘ನಿನ್ನೆ ಇತ್ತು ಅಕ್ಕ…….ಈವತ್ತಿಲ್ಲ, ನಾಳೆ ತರ್ತೇನೆ……ಈ ನಡುವೆ ನೀವು ತರಕಾರಿಗೆ ಬರೋದೇ ಇಲ್ಲ್ಲಾ……ಬೀಟ್ ರೂಟ್ ತೊಗೊತೀರಾ…..ಈವತ್ತೇ ಕಿತ್ತಿದ್ದು……ತ್ವಾಟದಿಂದ್ಲೇ ಬಂದೆ……ಹೂಕೋಸು ಹಾಕಿವ್ನಿ…….ಮುಂದಿನ್ವಾರ ತರ್ತೀನಿ..” ಇತ್ಯಾದಿ ಮಾತು ಸಾಗುತ್ತದೆ. ಗಡ್ಡೆ ಕೋಸು ಕೇಳಿದವರು, ಬೀಟ್ ರೂಟ್ ಕೊಂಡು ವಾಪಸ್ಸಾಗುತ್ತಾರೆ. ಅವರು ತಂದಿರೋ ದುಡ್ಡು ಸ್ವಲ್ಪ ಕಡಿಮೆಯಿರುತ್ತದೆ. ‘ಅಯ್ಯೊ ನಾಳೆ ಕೊಡುವಿರಂತೆ……’ ಎಂದು ಇವನೇ ಸಮಜಾಯಿಶಿ ಹೇಳುತ್ತಾನೆ.
ನಮ್ಮ ಮಗ ಚಿಕ್ಕವನಿದ್ದಾಗ ಅವನಿಗೆ ಬೇಯಿಸಿದ ನೇಂದ್ರಬಾಳೆ ಹಣ್ಣನ್ನು ಹೆಚ್ಚಿ ಕೊಟ್ಟರೆ ಇಷ್ಟಪಟ್ಟು ತಿನ್ನುತಿದ್ದ. ಮೈಸೂರಿನಲ್ಲಿ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ ಕೇರಳದ ‘ನೇಂದ್ರ ಬಾಳೆ’ ಹಣ್ಣು ಸಿಗುತ್ತಿರಲಿಲ್ಲವಾದುದರಿಂದ ಬೀದಿಯಲ್ಲಿ ಬಾಳೆ ಹಣ್ಣು ಮಾರುತ್ತಿದ್ದ ಅಜ್ಜ ಒಬ್ಬರನ್ನು ಪರಿಚಯಿಸಿಕೊಂಡು ನಮಗೆ ವಾರಕ್ಕೆ ಒಂದು ಚಿಪ್ಪು ‘ನೇಂದ್ರ ಬಾಳೆ’ ಹಣ್ಣು ತಂದುಕೊಡಬೇಕೆಂದು ಒಪ್ಪಂದ ಮಾಡಿಕೊಂಡಿದ್ದೆವು. ಆ ಅಜ್ಜ ತಪ್ಪದೇ ಹಣ್ಣು ತರುತಿದ್ದರು. ಇವನೂ ತನಗೆ ಅ ತಾತ ಬಹಳ ಪರಿಚಯದವರೇನೋ ಎಂಬಂತೆ ಅವರ ಬಳಿ ನಗುನಗುತ್ತಾ ತೊದಲು ಮಾತನಾಡುತ್ತಿದ್ದ. ಅಷ್ಟರಲ್ಲಿ ನಾನು ಚಹಾ ಕೊಡುತ್ತಿದ್ದೆ. ಅದನ್ನು ಕುಡಿದು ‘ಟೀ ಚನ್ನಾಗೈತೆ…ಮೊಗಾ..’ ಎಂದು ಹೇಳಿ ಅಜ್ಜ ಹೊರಡುತ್ತಿದ್ದರು.
ಮೈಸೂರಿನ ಕೆಲವು ಬಡಾವಣೆಗಳಲ್ಲಿ ಈ ರೀತಿಯ ವ್ಯಾಪಾರ-ಸಂಸ್ಕೃತಿ ಈಗಲೂ ಇದೆ. ಆದರೆ ಮಾಲ್ ಗಳಲ್ಲಿ, ಗ್ರಾಹಕರಾದ ನಾವೇ ‘ಗಾಡಿ’ಯನ್ನು ತಳ್ಳುತ್ತಾ ನಮಗೆ ಬೇಕಾದುದನ್ನು ಗಾಡಿಗೆ ಹಾಕಿಕೊಳ್ಳುತ್ತೇವೆ. ಗೃಹಿಣಿಯರ ಶ್ರಮ ಕಡಿಮೆ ಮಾಡಲು ಕತ್ತರಿಸಿದ ಬೀನ್ಸ್, ಸುಲಿದ ಬೆಳ್ಳುಳ್ಳಿ, ಹೆಚ್ಚಿದ ಕ್ಯಾಬೇಜ್ …ಕೂಡಾ ಸಿಗುತ್ತವೆ. ಬೇಕಿದ್ದನ್ನು ಕೊಂಡು ಮಾತಿಲ್ಲದೆ ನಿಗದಿತ ದುಡ್ಡನ್ನು ಕಾರ್ಡ್ ಸ್ವೈಪ್ ಮಾಡಿ ಅಥವಾ ಕ್ಯಾಷ್ ಕೊಟ್ಟು ಬಂದರೆ ಕೌಂಟರ್ ನಲ್ಲಿ ಕುಳಿತವನು/ಳು ನಿರ್ಭಾವುಕತೆಯಿಂದ ಥ್ಯಾಂಕ್ಸ್ ಅನ್ನುತ್ತಾರೆ. ಅಲ್ಲಿಗೆ ಮುಗಿಯಿತು ಶಾಪಿಂಗ್.
ಹೊಸ ಪದ್ಧತಿಗಳಿಗೆ ಕೆಲವು ಅನುಕೂಲತೆಗಳು ಇವೆ. ಆದರೂ ಮನುಷ್ಯ ಮನುಷ್ಯನೇ, ಯಂತ್ರ ಯಂತ್ರವೇ ಅಲ್ಲವೇ? ಎಲ್ಲಿ ಹೋದುವು ತಳ್ಳು ಗಾಡಿಗಳು , ಅವುಗಳ ಒಡೆಯರು, ಅವರ ಮಾತುಗಳು ಮತ್ತು ಗಾರ್ಡನ್ ಫ್ರೆಷ್ ತರಕಾರಿಗಳು ??
ತಳ್ಳುಗಾಡಿ, ಸೈಕಲ್ ಹೊರೆ ಮತ್ತು ಸಂತೆ ವ್ಯಾಪಾರಗಾರರನ್ನು ಹೊಸ ವ್ಯಾಪಾರ ಪದ್ಧತಿಗಳು ಅಪೋಷಣೆ ತೆಗೆದುಕೊಂಡವು.
ReplyDeleteಕೆಲವೇ ಶ್ರಮ ಜೀವಿಗಳು ಈಗಲೂ ಹೀಗೆಯೇ ಜೀವನ ಸಾಗಿಸುತ್ತಿದ್ದಾರೆ.
ಬರಹದ ನಡೆಯ ಸುಂದರ ಶೈಲಿಗೆ ನಮನಗಳು.